ಕಾಲಗರ್ಭದಲ್ಲಿ ಸೇರಿಹೋದ ಕಾಳಿಂಗರಾವ್

ಭಾರತ - 0 Comment
Issue Date : 09.10.2014

ಹಸಿರುವಾಣಿ ಚಪ್ಪರ, ಕಾಲೇಜಿನ ಕರ್ನಾಟಕ ಸಂಘದ ವಾರ್ಷಿಕೋತ್ಸವ. ನವಯುವಕ ಯುವತಿಯರ ಉತ್ಸಾಹ. ವೇದಿಕೆಯನ್ನು ಸಿದ್ಧಗೊಳಿಸುತ್ತಿರುವ ಕಾಲೇಜು ವಿದ್ಯಾರ್ಥಿಗಳು, ಅಂದದ ಉಡುಗೆ ತೊಡುಗೆಗಳಲ್ಲಿ ಕಂಗೊಳಿಸುತ್ತಿರುವ ಹೆಂಗಳೆಯರು, ಅವರನ್ನು ಚುಡಾಯಿಸುತ್ತಿರುವ ಯುವಕರು, ಗತ್ತಿನಿಂದ ಠೀವಿಯಿಂದ ಓಡಾಡುತ್ತಿರುವ ಅಧ್ಯಾಪಕರು, ಮುಖ್ಯ ಸೂಚನೆಗಳನ್ನು ನೀಡುತ್ತಿರುವ ಪ್ರಿನ್ಸಿಪಾಲರು, ಅಂತೂ ಕಾಲೇಜು ಸಭಾಂಗಣ ಸಡಗರ, ಸಂಭ್ರಮದಲ್ಲಿ ಓಲಾಡುತ್ತಿರುವಾಗ ಲೌಡ್‌ಸ್ಪೀಕರ್‌ನಲ್ಲಿ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು…….ಹಾಡು ಆರಂಭವಾಗುತ್ತಿದ್ದಂತೆಯೇ ಕಾಲೇಜಿನ ಸಮಾರಂಭಕ್ಕೆ ಹೊಸರಂಗೇರಿತು, ಆ ಹಾಡು ನವಚೈತನ್ಯವನ್ನು ತುಂಬಿತ್ತು. ಹಾಡಿನ ಹುರುಪಿನಿಂದ ಸಭಾಂಗಣದ ಸೊಬಗು ಇಮ್ಮಡಿಯಾಯಿತು.

ಇದು ಸುಮಾರು 1950ರ ದಶಕದ, ಕಾಲೇಜು ಅಥವಾ ಇತರ ಸಾಂಸ್ಕೃತಿಕ ಸಮಾರಂಭಗಳ ಆರಂಭದ ಚಿತ್ರಣ. ಪಿ.ಕಾಳಿಂಗರಾಯರ ಹಾಡಿನ ಧ್ವನಿಸುರುಳಿ ಇಲ್ಲದೆ ಸಭೆಗಳು ಆರಂಭವೇ ಆಗುತ್ತಿರಲಿಲ್ಲ. ಕೆಲವು ಆಹ್ವಾನಿತ ಸಭೆಗಳಲ್ಲಿ ಅವರೇ ಖುದ್ದಾಗಿ ಬಂದು ಹಾಡಿದ ಸಂದರ್ಭಗಳೂ ಇದ್ದವು.
ಸಂಗೀತ ಶಾಸ್ತ್ರದ ಮತ್ತೊಂದು ಮುಖವಾದ ಸುಗಮ ಸಂಗೀತದ ಪ್ರಖ್ಯಾತ ಪ್ರವರ್ತಕರೂ ಆದ ಪಾಂಡೇಶ್ವರ ಕಾಳಿಂಗರಾಯರು ಸ್ವರಮಾಧುರ್ಯದೊಡನೆ ರಾಗ ಸಂಯೋಜಿಸಿ ಭಾವಗೀತೆಗಳು, ಜನಪದ, ಲಾವಣಿ, ಶಾಸ್ತ್ರೀಯ ಸಂಗೀತ, ಲಘು ಗೀತೆಗಳನ್ನು ಹಾಡಿ ಜನಮನವನ್ನು ರಂಜಿಸಿದರು. ರಾಗದಿಂದ ರಾಗಕ್ಕೆ ಯಾನ ಮಾಡಿ ಸುಗಮ ಸಂಗೀತಕ್ಕೆ ಹೊಸ ಆಯಾಮ ಕೊಟ್ಟ ಕಾಳಿಂಗರಾಯರಿಗೆ ಮೂಲಧಾತು ದೊರಕಿದ್ದು ಪುರಂದರರ ಪುಣ್ಯಗೀತೆಗಳಿಂದ, ಶಿವಶರಣರ ವಚನಗಳಿಂದ, ನವ್ಯಕವಿಗಳಾದ ಗೋಪಾಲಕೃಷ್ಣ ಅಡಿಗ, ದ.ರಾ.ಬೇಂದ್ರೆ, ಕುವೆಂಪು, ರಾಜರತ್ನಂರವರ ಆಧುನಿಕ ಗೀತೆಗಳಿಂದ ಮತ್ತು ಜಾನಪದ ಮಟ್ಟುಗಳಿಂದ.
ಬಾರಯ್ಯ ಬೆಳದಿಂಗಳೇ…..ಹಾಡುತ್ತಾ ಕೇಳುಗರನ್ನು ಹಾಲಿನ ಬೆಳಕಿನಲ್ಲಿ ಮಿಂದೇಳಿಸಿದ್ದಾರೆ. ಬೇಂದ್ರೆಯವರ ಇಳಿದು ಬಾ ತಾಯೆ ಇಳಿದು ಬಾ ಎನ್ನುತ್ತಾ ಜಲಧಾರೆಯನ್ನು ಧರೆಗಿಳಿಸಿದ್ದಾರೆ. ಮೂಡಲ್ ಕುಣಿಗಲ್ ಕೆರೆಯನ್ನು ನೋಡಲು ಶಿವನೇ ಪ್ರತ್ಯಕ್ಷವಾದುದನ್ನು ಬಣ್ಣಿಸಿದ್ದಾರೆ. ಯಾಕಳುವೆ ಎಲೆ ಕಂದ ಬೇಕಾದ್ದು ನಿನಗೀವೆ ಎನ್ನುತ್ತಾ ತಾಯಿಯ ಸರಿಸಮನಾಗಿ ಜೋಗುಳ ಹಾಡಿದ್ದಾರೆ. ‘‘ಆಕಾಶದಿಂದ ಭೂಮಿಯವರೆಗೂ ಮುತ್ತಿನ ಚಪ್ಪರಹಾಕಿ ಮಾಡ್ಯಾರೆ ಸಿರಿಗೌರಿ ಮದುವೆಯಾ’’ ಎಂದು ಹೇಳುತ್ತಾ ಗೌರಿಮದುವೆಯನ್ನೂ ಮಾಡಿಸಿದ್ದಾರೆ. ಎಲ್ಲಾದರು ಇರು ಎಂತಾದರು ಇರು ನೀ ಕನ್ನಡವಾಗಿರು, ಕನ್ನಡಕೆ ಹೋರಾಡು ಕನ್ನಡದ ಕಂದ ಎನ್ನುತ್ತಾ ಕನ್ನಡ ಪ್ರೇಮವನ್ನು ಜನರಲ್ಲಿ ಉಕ್ಕಿಸಿದ್ದಾರೆ. ಪುರಂದರದಾಸರ ಹಾಡುಗಳಾದ ಯಾರು ಹಿತವರು ನಿನಗೆ ಈ ಮೂವರೊಳಗೆ, ವೈರಾಗ್ಯ ಭಾವವನ್ನು, ನಗೆಯು ಬರುತಿದೆ-ಯೊಳಗಿನ ವಿಡಂಬನೆಯನ್ನು ಎತ್ತಿ ತೋರಿಸಿದ್ದಾರೆ. ಬ್ರಮ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ ಕೈನ-ರಾಜರತ್ನಂರವರ ಗೀತೆಯನ್ನು ಮಾದಕ ಶೈಲಿಯಲ್ಲೇ ಹಾಡಿ ಶ್ರೋತೃಗಳ ಮೈಮರೆಸುತ್ತಿದ್ದರು. ಬರೆಯುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ವೈರಾಗ್ಯ, ಭಕ್ತಿ, ದೇಶಾಭಿಮಾನ, ಕರ್ತವ್ಯ, ಒಲುಮೆ, ಪ್ರಣಯಪ್ರಸಂಗ, ಲಾಲಿ, ಕೋಲಾಟ ಇವುಗಳನ್ನು ವಿವಿಧ ರಾಗ, ಶೈಲಿ, ಮಟ್ಟು, ಏರಿಳಿತಗಳಲ್ಲಿ ಹಾಡಿ ‘ಸಾವಿರ ಹಾಡಿನ ಸರದಾರ’ ಎನಿಸಿಕೊಂಡಿದ್ದಾರೆ. ಯಾವ ಹಾಡಿನಲ್ಲೂ ಏಕತಾನತೆ ಎಂಬುದೇ ಇಲ್ಲ ಎಂಬುದು ಕಾಳಿಂಗರಾಯರ ಹೆಗ್ಗಳಿಕೆ. ಕೆಲವು ಗೀತೆಗಳಿಗೆ ಪಾಶ್ಚಾತ್ಯ ವಾದ್ಯಗಳ ಸ್ವರವನ್ನೂ ಮೇಳೈಸಿ ಅದರ ವಿಶೇಷತೆಯನ್ನು ಇನ್ನಷ್ಟು ಮಧುರಗೊಳಿಸಿ ಕೇಳುಗರಿಗೆ ರಸದೌತಣ ಉಣಬಡಿಸಿದ್ದಾರೆ. ಸುಗಮ ಸಂಗೀತಕ್ಕೆ ಹೀಗೆ ಭದ್ರ ಬುನಾದಿ ಹಾಕಿ ಸುಗಮಸಂಗೀತದ ಪಿತಾಮಹನೆನಿಸಿಕೊಂಡಿದ್ದಾರೆ.
ಸೋಹನಕುಮಾರಿ, ಮೋಹನಕುಮಾರಿ ಎನ್ನುವ ಸಹೋದರಿಯವರ ಹಿಮ್ಮೇಳ, ಮುಮ್ಮೇಳದ ಜೇನುದನಿಯಲ್ಲಿ ಕಾಳಿಂಗರಾಯರ ಸಂಗೀತ ಸಾಮ್ರಾಜ್ಯ ವಿಜೃಂಭಿಸಿತು. ಸಂಗೊಳ್ಳಿರಾಯಣ್ಣ, ತುಂಬಿದ ಕೊಡ, ಮೊದಲಾದ ಚಲನಚಿತ್ರಗಳಲ್ಲೂ ಹಾಡಿದ್ದಾರೆ. ಕಾಲೇಜು, ಮತ್ತು ಇತರ ಸಭೆ ಸಮಾರಂಭಗಳಲ್ಲಿ ಕಾಳಿಂಗರಾಯರು, ದೇಶಭಕ್ತಿ, ಪ್ರಕೃತಿ ಪ್ರೇಮ, ಪ್ರಣಯ ಈ ಗೀತೆಗಳ ಕಾರ್ಯಕ್ರಮವಿಲ್ಲದಿದ್ದರೆ ಸಮಾರಂಭ ಅಪೂರ್ಣ ಎನಿಸುವಷ್ಟು ಜನಗಳನ್ನು ಆವರಿಸಿದ್ದರು. ಅವರ ಗಾಯನದಲ್ಲಿ ಅಂಗಚೇಷ್ಟೆಯಾಗಲೀ, ಅಶ್ಲೀಲತೆಯಾಗಲೀ ಇರದೆ, ಗಂಭೀರ, ಶುದ್ಧರಸಿಕತೆಯಿಂದ ತುಂಬಿದ್ದಿತು. ಸದಭಿರುಚಿಯ ಸನ್ನಿವೇಶ ವಾತಾವರಣ ಉದಯಿಸುತ್ತಿತ್ತು.
ಕವಿಗಳ ಕವಿತೆಗಳಿಗೆ ಭಾವ, ಜೀವ, ತುಂಬಿದ ಇನಿದನಿಯ ಬನಿಯಾಗಿದ್ದ ಕಾಳಿಂಗರಾಯರು ಇಂದು ನಮ್ಮೊಡನಿದ್ದರೆ ನೂರು ವರುಷಗಳಾಗುತ್ತಿತ್ತು. ನೂರರ ನೆನಪಿಗೆ ಈ ಲೇಖನ.
ಸೊಲ್ಲು ಸವಿಯಿದ್ದವನು, ಎಲ್ಲೆಲ್ಲು ಇರುವವನು
ಎಲ್ಲವನು ಇರುವವನು, ಬಲ್ಲಿದನು ಎಂದೆನ್ನಲು
ಅಲ್ಲ ತಾನೆನ್ನುವನು.
ಹೀಗೆಂದು ಕವಿಯೊಬ್ಬನು ಹಾಡಿರುವುದು ಕಾಳಿಂಗರಾಯರಿಗೆ ಅರ್ಥಪೂರ್ಣ
ವಾಗಿ ಅನ್ವಯಿಸುವುದು. ಪ್ರಶಸ್ತಿ, ಸನ್ಮಾನ, ಪದಕ, ಶಾಲುಗಳಿಂದ ಬಹುಮಾನ
ಗಳಿಂದ ಬಹುದೂರವಿದ್ದರು.
ಮೊನ್ನೆ ನಡೆದ ಅವರ ಜನ್ಮ ಶತಾಬ್ದಿಯ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಪಿ.ಕಾಳಿಂಗರಾಯರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಬೇಕೆಂಬ ನಿರ್ಣಯವನ್ನು ಕೈಗೊಂಡಿರುವುದು ಸ್ತುತ್ಯರ್ಹ. ಇವರ ಜನ್ಮಶತಾಬ್ದಿಯ ದಿನ ಕಾಳಿಂಗರಾಯರ ಪತ್ನಿ ಮೀನಾಕ್ಷಮ್ಮನವರನ್ನು ಸನ್ಮಾನಿಸಿರುವುದು ಮತ್ತೊಂದು ವಿಶೇಷ.
ಮಿಶ್ರ ಮಾಧುರ್ಯದ ಕನ್ನಡ ಸುಗಮ ಸಂಗೀತದ ರಥದಲ್ಲಿ ಸರಸ್ವತಿಯನ್ನು ಸ್ಥಾಪಿಸಿ ಜನಮನದ ಮುಂದೆ ತಂದು ನಿಲ್ಲಿಸಿದ್ದಾರೆ. ಅದನ್ನು ನಾವು ಶ್ರೋತೃಗಳಾಗಿ ಆರಾಧಿಸೋಣ.
ನೂರರ ನೆನಪಿಗೆ ನೂರೊಂದು ನಮನ

ಶಾರದಾ ಶಾಮಣ್ಣ

   

Leave a Reply