ಕನ್ನಡದ ಕವಿ ಪುಂಗವ ಡಿವಿಜಿ ಜನ್ಮದಿನ

ವ್ಯಕ್ತಿ ಪರಿಚಯ - 0 Comment
Issue Date : 17.03.2014

ಇಂದಿನ ಪೀಳಿಗೆಗೆ ಚಲನಚಿತ್ರದ ನಟನಟಿಯರು ಹಾಗೂ ಕ್ರಿಕೆಟ್ ಆಟಗಾರರು, ಅವರ ಹೆಸರು, ಚರಿತ್ರೆ ಇತ್ಯಾದಿ ಕಂಠಪಾಠವಾಗಿರುತ್ತದೆ. ಆದರೆ ಡಿವಿಜಿ ಯಾರು? ಎಂದು ಪ್ರಶ್ನಿಸಿದರೆ ಉತ್ತರ ಸಿಗುವುದು ಅಷ್ಟು ಸುಲಭವಲ್ಲ. ಆದ್ದರಿಂದ ಡಿವಿಜಿ ಯಾರು ಎಂಬ ಅವಲೋಕನದ ಪ್ರಯತ್ನ ಇಲ್ಲಿದೆ.
ಡಿವಿಜಿ ಎಂಬ ಮೂರಕ್ಷರಗಳಿಂದಲೇ ಸುಪ್ರಸಿದ್ಧರಾದ ಡಾ.ಡಿ.ವಿ. ಗುಂಡಪ್ಪನವರು ಕನ್ನಡನಾಡಿನ ಮಹಾ ಪ್ರತಿಭಾವಂತರಲ್ಲಿ , ಪ್ರಭಾವಶಾಲಿಗಳಲ್ಲಿ ಒಬ್ಬರು. ಡಿವಿಜಿ ಅವರು ಆಧುನಿಕ ಭಾರತೀಯ ಸಾಹಿತ್ಯದ ಒಂದು ದೊಡ್ಡ ಅಶ್ವತ್ಥ ವೃಕ್ಷ. ಬಹುಶ್ರುತರಾದ ಗುಂಡಪ್ಪ ಅವರು ಅರುವತ್ತು ವರ್ಷಗಳಿಗೂ ಹೆಚ್ಚು ಕಾಲ ಸಾಹಿತ್ಯ, ಪತ್ರಿಕೋದ್ಯಮ, ಧಾರ್ಮಿಕ, ಅಧ್ಯಾತ್ಮಿಕ ಹೀಗೆ ಅನೇಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ ಅನನ್ಯವಾದದ್ದು. ಪೂರ್ಣ ಪುರುಷನೆನಿಸಿದ್ದ ಗುಂಡಪ್ಪನವರು ವಿದ್ವತ್ತು ಮತ್ತು ರಸಿಕತೆಗಳ ಅಪೂರ್ವ ಸಂಗಮವಾಗಿದ್ದರು. ಅವರ ಸಾಹಿತ್ಯ ಸಂಸ್ಕೃತಿ ಸಂಪನ್ನವಾದದ್ದು. ಅವರ ಸಾಹಿತ್ಯ, ಸಂಸ್ಕೃತಿ, ಆಚಾರವಿಚಾರ ರೀತಿನೀತಿ ಆದರ್ಶವಾದ ಪ್ರಭಾವ ಬಾಳಿಗೊಂದು ನಂಬಿಕೆ, ಭರವಸೆಯನ್ನು ಕೊಡುವಂತಹದು. ವೌಲ್ಯ ಪ್ರಜ್ಞೆಯನ್ನು ಬೆಳೆಸಿ ಕನ್ನಡಿಗರ ಬದುಕಿಗೆ ಒಂದು ಹೊಸ ರುಚಿಯನ್ನು ಕೊಟ್ಟಿದೆ.
1887 ಮಾರ್ಚ್ 1ರಂದು ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ವೆಂಕಟರಮಣಯ್ಯ ಹಾಗೂ ಅಲಮೇಲಮ್ಮ ದಂಪತಿಗಳ ಮಗನಾಗಿ ಜನಿಸಿದ ಅವರ ಸಂಪೂರ್ಣ ಹೆಸರು ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ. ಇವರು ವೈದಿಕ ಸಂಸ್ಕಾರದವರಾಗಿದ್ದರಿಂದ ಪ್ರಾರಂಭದಿಂದಲೇ ತಂದೆಯವರಿಂದ ಸಂಸ್ಕೃತ ಕಾವ್ಯ ಪಾಠಗಳನ್ನು ಕಲಿತರು. ಪ್ರಾಥಮಿಕ ಶಿಕ್ಷಣ ಸೋದರ ಮಾವ ತಿಮ್ಮಪ್ಪನವರಲ್ಲಾಯಿತು. ಮುಂದೆ ಬೆಂಗಳೂರಿನಲ್ಲಿ ಹಾನಗಲ್ ವಿರೂಪಾಕ್ಷ ಶಾಸ್ತ್ರಿಗಳ ಮುಖಾಂತರ ಅದ್ವೈತ ವೇದಾಂತ, ನ್ಯಾಯಶಾಸ್ತ್ರ, ಉಪನಿಷತ್ತುಗಳು ತತ್ತ್ವ ಕೌಸ್ತುಭ, ವಿವೇಕ ಚೂಡಾಮಣಿ ಮುಂತಾದ ಅನೇಕಾನೇಕ ಗ್ರಂಥಗಳನ್ನು ಅಧ್ಯಯನ ಮಾಡಿದರು. ಇನ್ನೂ ಹೆಚ್ಚಿನ ಅಧ್ಯಯನವನ್ನು ಸ್ವಂತಿಕೆಯಿಂದ, ಗೆಳೆಯರ ಗೆಳೆತನದಿಂದ, ವಿದ್ವಾಂಸರ ಪರಿಚಯದಿಂದ ವೇದಾಂತಿಗಳ ನೆರವಿನಿಂದ ಪುಸ್ತಕ ಹಾಗೂ ಪತ್ರಿಕೆಗಳಿಂದ ಮಾಡಿದರು. ಡಿವಿಜಿ ಅವರ ಆದರ್ಶವಾದದ ಪ್ರಭಾವ ಅವರ ಕುಟುಂಬಕ್ಕೂ , ಸ್ವತಃ ಆರೋಗ್ಯಕ್ಕೂ ತಟ್ಟದಿರಲಿಲ್ಲ. ತೀವ್ರವಾದ ಹಣದ ಮುಗ್ಗಟ್ಟನ್ನೂ ಬಡತನವನ್ನೂ ಕಂಡವರು ಅವರು. ಆದರೆ, ತಮಗಿದ್ದ ಕಷ್ಟಕಾರ್ಪಣ್ಯಗಳನ್ನು ಗೋಪ್ಯವಾಗಿಟ್ಟು ಸಂತೋಷವನ್ನು ಬೇರೆಯವರಿಗೆ ಹಂಚುವುದೇ ಪರಮ ಕರ್ತವ್ಯವೆಂದು ನಂಬಿದವರು ಹಾಗೂ ನಡೆದವರು. ಅವರಿಗೆ ಸಹಿಸಲಾರದಂತಹ ಕಷ್ಟಗಳೊದಗಿದಾಗಲೂ ತೀರ ಸಮೀಪಸ್ಥರಾದ ಬಂಧುಮಿತ್ರರಿಗೂ ಅದರ ಸುಳಿವು ಕೊಡದೆ ಕಾರ್ಯವನ್ನು ನೇರವಾಗಿ ನೆರವೇರಿಸಿದ ಮಹಾನ್ ವ್ಯಕ್ತಿ.
ಡಾ.ಡಿ.ವಿ. ಗುಂಡಪ್ಪನವರು ಸುಮಾರು 50ಕ್ಕೂ ಹೆಚ್ಚು ಗ್ರಂಥಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇವರ ಸಾಹಿತ್ಯ 8,000 ಪುಟ ಮೀರುವಷ್ಟಿದೆ. ಧೀಮಂತ ಸಾಹಿತಿ ದಿ.ಡಾ.ಹಾಮಾ ನಾಯಕರ ನೇತೃತ್ವದಲ್ಲಿ ಅವರ ಸಮಗ್ರ ಸಾಹಿತ್ಯ ಪ್ರಕಟಣೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೈಗೆತ್ತಿಕೊಂಡು 12 ಸಂಪುಟಗಳನ್ನು ಹೊರತಂದಿದೆ.
ಮಂಕುತಿಮ್ಮನ ಕಗ್ಗದಲ್ಲಿ 156 ಸಾಲುಗಳುಳ್ಳ ಕಥೆಯೊಡನೆ 945 ಬಿಡಿ ಬಿಡಿ ಪದ್ಯಗಳಿವೆ. ಈ ಮಹಾನ್ ಕೃತಿ 14 ಮರುಮುದ್ರಣಗಳನ್ನು ಕಂಡಿದೆ. 1951ರಲ್ಲಿ ಹೊರಬಂದ 2ನೇ ಕೃತಿಯಲ್ಲಿ ಉಪಮಾನ ದೃಷ್ಟಾಂತಗಳ ಅಕಾರಾದಿಗಳನ್ನು ಪದ್ಯಾರಂಭದ ಅಕಾರಾದಿಗಳನ್ನು ಪಿ.ಜಿ. ರಾಜರತ್ನಂ ಅವರು ಒದಗಿಸಿಕೊಟ್ಟು ಓದುಗರಿಗೆ ನೆರವಾದರು. ಡಿವಿಜಿ ಅವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ವೇದಾಂತದ ಉನ್ನತೋನ್ನತ ವಿಷಯಗಳನ್ನು ಸವಿಸ್ತಾರವಾಗಿ, ಆಳವಾಗಿ ಚರ್ಚಿಸಿ ಸುಲಭವಾಗಿ ವರ್ಣಿಸಿದ್ದಾರೆ. ಮಹರ್ಷಿಗಳು, ವಿಚಾರವಂತರು, ಚಿಂತನಶೀಲರು, ಎಲ್ಲಾ ವಿದ್ವಾಂಸರು, ಈ ವಿಶ್ವದ ಬಗ್ಗೆ ಈ ಜೀವರಾಶಿಗಳ ಬಗ್ಗೆ ಅಗೋಚರವಾದ ಭಗವಂತನ ಬಗ್ಗೆ ಸಾಕಷ್ಟು ವಿಚಾರ ವಿಮರ್ಶೆ ಮಾಡಿದ್ದಾರೆ. ಈ ವಿಶ್ವದ ಉತ್ಪತ್ತಿ ಎಂದು ಯಾವಾಗ? ಈ ಜೀವರಾಶಿಗಳ ಉತ್ಪತ್ತಿ ಎಂದು, ಯಾವಾಗ? ಯಾವ ಉದ್ದೇಶಕ್ಕಾಗಿ, ಪರಮಾತ್ಮವಂಥವನು ಇದ್ದಾನೆಯೆ? ಇರುವುದಾದರೆ-
ದೇವರೆಂಬುದೇನು? ಕಗ್ಗತ್ತಲೆಯ ಗವಿಯೆ?
ನಾವರಿಯಲಾರದೆಲ್ಲದೆಲ್ಲದರ ರೊಟ್ಟು ಹೆಸರೆ?
ಕಾವನೊರ್ವನಿರಲಕ್ಕೆ ಜಗದ ಕಥೆಯೇಕ್ಕಿಂತು
ಸಾವು ಹುಟ್ಟುಗಳೇನು? ಮಂಕುತಿಮ್ಮ
ಡಿವಿಜಿ ಅವರ ಕಲ್ಪನೆಯ ಕೂಸಾಗಿ, ಹೆಮ್ಮರವಾಗಿ ಬೆಳೆದ ಮಂಕುತಿಮ್ಮ ಅವರ ಪಾಲಿಗೆ ಒಬ್ಬ ಮಹಾ ತತ್ತ್ವಜ್ಞಾನಿ, ದಾರ್ಶನಿಕ, ಅಧ್ಯಾತ್ಮ ಲೋಕದ ಮಾಂತ್ರಿಕ ಕೂಡ. ಇದರಲ್ಲಿ ಬರುವ ಪ್ರತಿಯೊಂದು ಶ್ಲೋಕವೂ ಡಿವಿಜಿ ತಮ್ಮ ಜೀವನದಲ್ಲಿ ಅನುಭವಿಸಿದ ಅನುಭವದ ಅಮೃತವೇ. ಮಂಕುತಿಮ್ಮನ ಕಗ್ಗವನ್ನು ಎ.ಆರ್.ಕೃಷ್ಣಶಾಸ್ತ್ರಿಗಳು ಕಗ್ಗವೂ ಅಲ್ಲ. ಹಗ್ಗವೂ ಅಲ್ಲ ಸಗ್ಗವೆಂದು ವರ್ಣಿಸಿದ್ದಾರೆ. ವಿದ್ವಾಂಸರು ಮಹಾಕಾವ್ಯಗಳ ರತ್ನಾವಳಿ ಎಂದಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಕಗ್ಗ ಎಂದರೆ ಗಂಟು ಎಂದರ್ಥ. ಇಂದಿನ ಜೀವನದಲ್ಲಿ ಎದುರಾಗುವಂತಹ ಜನಸಾಮಾನ್ಯರ ಸಮಸ್ಯೆಗಳನ್ನು ಹಾಗೂ ಅವುಗಳ ಗಂಟನ್ನು ಡಿವಿಜಿ ತಮ್ಮ ಉಪದೇಶಗಳ ಮೂಲಕ ಒಂದೊಂದನ್ನೇ ಬಿಡಿಸುತ್ತಾ ಹೋಗಿದ್ದಾರೆ. ಇದರಿಂದ ಜನರ ಮಂಕನ್ನು ಅಳಿಸಿ ಜನರಲ್ಲಿ ಜಾಗೃತಿಯನ್ನುಂಟು ಮಾಡಿದ್ದಾರೆ.
ಬಾಳ್ವೆಯಲ್ಲಿ ನೂರೆಂಟು ಕೊಡಕು ತಿಣಕುಗಳುಂಟು
ಕೇಳ್ಕೆಮಾಣ್ಕೆಗಳಿಗವು ಜಗ್ಗವೊಂದಿನಿಸುಂ
ಗೋಳ್ಕರೆದರೇನು ಫಲ? ಗುದ್ದಾಡಲೇನು ಫಲ
ಪಲ್ಕಿರಿದು ತಾಳಿಕೊಳೊ – ಮಂಕುತಿಮ್ಮ
ಈ ರೀತಿಯ ಜಾಗೃತಿಯನ್ನು ನೋಡಿದಂಥ ಮಾಸ್ತಿ ಅವರು ಗುಂಡಪ್ಪನವರೇ ಮಾನವತೆಯ ಒಂದು ಸುಂದರ ಮಹಾಕಾವ್ಯ ಎಂದರು.
ಮಂಕುತಿಮ್ಮನ ಕಗ್ಗ ಭಾರತೀಯ ಜ್ಞಾನಪೀಠದ ಮೊದಲನೆಯ ವರ್ಷ ಪ್ರಶಸ್ತಿಯನ್ನು ಪಡೆಯಬೇಕಾಗಿತ್ತು. ಆದರೆ ಕನ್ನಡಿಗರ ದೌರ್ಭಾಗ್ಯ. ಅದು ಬೇರೊಂದು ಭಾಷೆಗೆ ಹೋಯಿತು. ಮಂಕುತಿಮ್ಮನ ಕಗ್ಗ ಒಂದು ನೀತಿ ಕಾವ್ಯ. ಡಿವಿಜಿ ಶಾಸ್ತ್ರಾದಿಗಳನ್ನು ಗುರುವಿನ ಮುಖಾಂತರ ಕಲಿತರು. ಪ್ರಸ್ಥಾನ ತ್ರಯಗಳಾದ ಬ್ರಹ್ಮಸೂತ್ರ, ಉಪನಿಷತ್ತು, ಭಗವದ್ಗೀತೆ ಇವುಗಳಿಗೆ ಭಾಷ್ಯಗಳನ್ನು ಶಂಕರಾಚಾರ್ಯರು ಬರೆದಿದ್ದಾರೆ. ಈ ಭಾಷೆಗಳಲ್ಲಿ ಹೇಳಿರುವ ವಾಕ್ಯೋಕ್ತಿಗಳ ಕನ್ನಡಾನುವಾದವೇ ಈ ಮಂಕುತಿಮ್ಮನ ಕಗ್ಗ. ಇದರಲ್ಲಿ ಸಂಪೂರ್ಣ ವೇದಾಂತ ಸಾರವೇ ಅಡಕವಾಗಿದೆ. ಇದು ಕನ್ನಡ ಭಗವದ್ಗೀತೆಯೆಂದೇ ಲೋಕ ಪ್ರಸಿದ್ಧವಾಗಿದೆ. ತಮಿಳಿನ ತಿರುವಲ್ಲವರ್, ತೆಲುಗಿನ ವೇಮನ, ಕನ್ನಡ ಸರ್ವಜ್ಞ – ಈ ಮಹನೀಯರ ಸಾಲಿನಲ್ಲಿ ನಿಲ್ಲಬಲ್ಲರಲ್ಲದೇ ಇನ್ನೂ ಹೆಚ್ಚಿನ ಹೆಜ್ಜೆಯನ್ನು ಹಾಕಿದವರೆಂದು ಹೇಳಿದರೆ ತಪ್ಪಾಗಲಾರದು.
ಮಂಕುತಿಮ್ಮ ಅನನ್ಯ ಜ್ಞಾನಿ. ಅವನಿಗೆ ಗೊತ್ತಿಲ್ಲದ ವಿಷಯವೇ ಇಲ್ಲ. ಅವನು ಅಳಿಯ ಸೋಮಿಗೆ ಬಿಟ್ಟು ಹೋದ ಆಸ್ತಿ. ಈ ಕಗ್ಗದ ಕಡತ ಅಸ್ತಿತ್ವದ ಆಧಾರದ ಮೇಲೆಯೇ ರಚಿತವಾಗಿದೆ.
ಇಂದಿನ ಸಮಾಜದಲ್ಲಿ ನಾವು ಹುಟ್ಟಿದಂದಿನಿಂದ ಮರಣದವರೆಗಿನ ಜೀವನವನ್ನು ಹೇಗೆ ನಡೆಸಬೇಕು? ಹೇಗೆ ಜೀವಿಸಬೇಕು? ಎಂಬುದನ್ನು ಎಷ್ಟೊಂದು ಹೃದಯಂಗಮವಾಗಿ ಮಂಕುತಿಮ್ಮ ನಮಗೆ ತಿಳಿಯಪಡಿಸಿದ್ದಾನೆ.
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ವಿಧಿ ಮಳೆಯ ಸುರಿಯೇ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು – ಮಂಕುತಿಮ್ಮ
ಸಂಸಾರ ಜೀವನದಲ್ಲಿ ಮುಂದಿನ ಭವಿಷ್ಯದ ಬಗೆಗೆ ಚಿಂತಿಸಬೇಡ. ಇಂದಿನ ಬದುಕನ್ನು ಸಾಗಿಸುವ ಕಷ್ಟಸುಖಗಳು ಒಂದರ ಹಿಂದೆ ಒಂದು ಬರುತ್ತದೆ. ಕಷ್ಟಕ್ಕೆ ಕುಗ್ಗದೆ, ಸುಖಕ್ಕೆ ಹಿಗ್ಗದೆ ಸಮಚಿತ್ತದಲ್ಲಿರು. ಸಹನೆ ಎಂಬ ಕವಚವನ್ನು ಧರಿಸುವ ಮೂಲಕ ಕಷ್ಟಸುಖಗಳನ್ನು ಸಹನೆಯಿಂದ ಎದುರಿಸು ಎನ್ನುತ್ತಾನೆ. ಮಹಾಜ್ಞಾನಿಯಾದ ಮಂಕುತಿಮ್ಮ.
ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ
ವಿಹಿತವಾಗಿಹುದದರ ಗತಿ ಸೃಷ್ಟಿವಿಧಿಯೆಂ
ಸಹಿಸಿದಲ್ಲದೆ ಮುಗಿಯದಾವದಶೆ ಬಂದೊಡೆ
ಸಹನೆ ವಜ್ರದ ಕವಚ ಮಂಕುತಿಮ್ಮ
ಡಿವಿಜಿ ಬಹಳ ವಿನಯದಿಂದ ನಮ್ರತೆಯಿಂದ ಮುಂದುವರೆದು ಹೇಳುತ್ತಾರೆ. ಈ ರಚನೆಯಲ್ಲಿ ಸಂದೇಹವೇ ಇಲ್ಲವೆಂದಲ್ಲ. ಈ ದಿನ ನಂಬಿರುವುದೇ ಮುಂದೆ ಯಾವತ್ತಿಗೂ ಸರಿಯೆಂದು ಹೇಳಲಾಗದು. ಕುಂದುಕೊರತೆಗಳು ಇದ್ದಲ್ಲಿ ಸರಿಪಡಿಸುವ ಮನಸ್ಸಿದೆ. ಈ ದಿನಕ್ಕೆ ಈ ವಿಚಾರ ಸರಿ ಮತ್ತು ಯುಕ್ತವಾದದ್ದೆಂದು ನನ್ನ ಅನಿಸಿಕೆ. ಈ ಅನಿಸಿಕೆಯನ್ನು ಮಂಕುತಿಮ್ಮ ಈ ರೀತಿ ಹೇಳಿದ್ದಾನೆ.
ಸಂದೇಹವೀ ಕೃತಿಯೊಳೆನ್ನಿಲ್ಲವೆಂದಲ್ಲ
ಇಂದು ನಂಬಿಹುದೆ ಮುಂದೆಂದುಮೆಂದಲ್ಲ
ಕುಂದು ತೋರ್ದದದನು ತಿದ್ದಿಕೊಳೆ ಮನಸುಂಟು
ಇಂದಿಗೀ ಮತವುಚಿತ – ಮಂಕುತಿಮ್ಮ
ಹೀಗೆ ಪ್ರತಿಯೊಂದು ಸಂದರ್ಭಗಳನ್ನು ಅನುಸರಿಸಿ ಮಂಕುತಿಮ್ಮನ ಮೂಲಕ 945 ಶ್ಲೋಕಗಳ ತತ್ತ್ವ ಉಪದೇಶವನ್ನು ಮಾಡಿರುವುದಲ್ಲದೇ ಗ್ರಂಥದ ಅಂತ್ಯದಲ್ಲಿ ಇದನ್ನು ರಚಿಸಿದ ಉದ್ದೇಶವನ್ನು ಹೇಳಿದ್ದಾರೆ.
ವಿಶದಮಾದೊಂದು ಜೀವನ ಧರ್ಮದರ್ಶನವ
ನುಸುರಿಕೊಳೆ ತನ್ನ ಮನಸಿಗೆ ತಾನೆ ಬಗೆದು
ನಿಸದವಂ ಗ್ರಂಥಾನುಭವಗಳಿಂದಾರಿಸುತ
ಹೊಸೆದನೀ ಕಗ್ಗವನು – ಮಂಕುತಿಮ್ಮ
ಈ ಗ್ರಂಥ ಭಗವದ್ಗೀತೆಯಲ್ಲದೆ ಮತ್ತೇನು? ಡಿವಿಜಿ ಅವರು ಏನನ್ನೂ ಬಯಸದೆ, ಜೀವನದಲ್ಲಿ ಹೇಳಲು ಅಸದಳವಾದಷ್ಟು ವಿಶ್ವಾಸ ಹೊಂದಿದ್ದರು.
ತುಂಬು ಜೀವನವನ್ನು ನಡೆಸಿದ ಮಂಕುತಿಮ್ಮನ ಕಗ್ಗದ ಡಿವಿಜಿ 1975 ಅಕ್ಟೋಬರ್ 7ರಂದು ಪರಬ್ರಹ್ಮನಲ್ಲಿ ಸೇರಿದರು. ಈ ಕವಿ ಪುಂಗವ ಹೇಳಿದ ತತ್ತ್ವಗಳನ್ನು ಅಳವಡಿಸಿಕೊಂಡು ಇತರರಿಗೂ ತಿಳಿಸುತ್ತಾ ಹೋಗುವುದು ನಮ್ಮ ಕರ್ತವ್ಯವಲ್ಲವೇ?
ಈ ಕೃತಿಯನ್ನು ಒಂದೇ ಸಲ ಓದಬೇಕೆಂದೇನೂ ಇಲ್ಲ. ಸಮಗ್ರವಾಗಿ ಓದಬೇಕೆಂದೂ ಇಲ್ಲ. ಈ ಗ್ರಂಥವನ್ನು ಜೇಬಿನಲ್ಲಿ ಇಟ್ಟುಕೊಂಡು ಸಮಯ ದೊರೆತಾಗೆಲ್ಲ ಆದಷ್ಟು ಶ್ಲೋಕಗಳನ್ನು ಓದಿ ಕಂಠಪಾಠ ಮಾಡಿ ಚಿಂತಿಸಬಹುದಲ್ಲದೇ ಮೆಲುಕು ಹಾಕಬಹುದಾಗಿದೆ.
ಕುವೆಂಪು ಅವರ ಮಾತಿನಲ್ಲಿ ಮಂಕುತಿಮ್ಮ
ಹಸ್ತಕ್ಕೆ ಬರೆ ನಕ್ಕೆ, ಓದುತ್ತ ಓದುತ್ತ
ಮಸ್ತಕಕ್ಕಿಟ್ಟು ಗಂಭೀರನಾದೆ
ವಿಸ್ತೃತದ ದರ್ಶನಕ್ಕೆ ತುತ್ತ ತುದಿಯಲ್ಲಿ ನಿನ್ನ
ಪುಸ್ತಕಕ್ಕೆ ಕೈ ಮುಗಿದೆ – ಮಂಕುತಿಮ್ಮ

ಎನ್.ಪಿ.ರಾಘವೇಂದ್ರ ರಾವ್

   

Leave a Reply