ಕೊರಗ ಸಮುದಾಯದ ಬೆಳಕಿನ ಕಿರಣ ಸಬಿತಾ

ಸಾಧನೆ - 0 Comment
Issue Date : 14.01.2014

ಬ್ರಹ್ಮಾವರ ಎಂದ ತಕ್ಷಣ ನೆನಪಾಗುವುದು ಪಾಳು ಬಿದ್ದ ಸಕ್ಕರೆ ಕಾರ್ಖಾನೆ, ರೈತರಿಗೆ ಮಾರ್ಗದರ್ಶನ ನೀಡುವ ಕೃಷಿ ವಿಜ್ಞಾನ ಕೇಂದ್ರ. ಹೆಚ್ಚೆಂದರೆ ಆಕಾಶವಾಣಿಯ ಮರುಪ್ರಸಾರ ಕೇಂದ್ರ! ಈಗ ಬ್ರಹ್ಮಾವರದ ಪರಿಚಯಕ್ಕೆ ಸಬಿತಾ ಎಂಬ ಹೆಣ್ಣು ಮಗಳು ಸೇರ್ಪಡೆಯಾಗಿದ್ದಾಳೆ. ರಾಜ್ಯದಲ್ಲಿ ಅತ್ಯಂತ ದಯನೀಯ ಸ್ಥಿತಿಯಲ್ಲಿರುವ ಆದಿವಾಸಿ ಕೊರಗ ಸಮುದಾಯದಿಂದ ಬ್ರಹ್ಮಾವರದ ಸಬಿತಾ ಬೆಳಕಿನ ಕಿರಣವಾಗಿ ಹೊರಹೊಮ್ಮುತ್ತಿದ್ದಾರೆ.

ಅಂದ ಹಾಗೆ ಸಬಿತಾ ಬ್ರಹ್ಮಾವರದ ಹುಡುಗಿಯಲ್ಲ. ಸಾಸ್ತಾನ  ಪಟ್ಟಣ ಪಂಚಾಯತ್‌  ಸರಹದ್ದಿನ ಗುಂಡ್ಮಿ ಅಂಬಾಗಿಲು ಕೊರಗ ಕಾಲನಿಯ ಹುಡುಗಿ. ಆದರೆ ದೂರದ ಊರುಗಳಿಗೆ ಸಾಸ್ತಾನ ಅಷ್ಟೇನು ಪರಿಚಯದ ಪ್ರದೇಶವಲ್ಲದ ಕಾರಣ ಹತ್ತಿರದ ಪುಟ್ಟ ಪಟ್ಟಣ ಬ್ರಹ್ಮಾವರದಿಂದ ಸಬಿತಾ ಗುರುತಿಸಿಕೊಳ್ಳುತ್ತಿದ್ದಾರೆ.

ಇಂದು ಸಬಿತಾ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ಅಂದರೆ ಅಸಿಸ್ಟೆಂಟ್‌ ಪ್ರೊಫೆಸರ್‌. ಕರ್ನಾಟಕದಲ್ಲಿ ಅತ್ಯಂತ ಪುರಾತನ ಬುಡಕಟ್ಟು ಜನಾಂಗಗಳು ಎರಡು. ಜೇನು ಕುರುಬ ಮತ್ತು ಕರಾವಳಿಯ ಕೊರಗ ಸಮುದಾಯ. ಇಂದಿಗೂ ಅತ್ಯಂತ ದೀನಸ್ಥಿತಿಯಲ್ಲಿರುವ ಕೊರಗರಿಗೆ ಶಿಕ್ಷಣ ಬಲುದೂರ. ಇಂತಹ ಪರಿಸ್ಥಿತಿಯಲ್ಲೂ ಆ ಸಮುದಾಯದ ಶೈಕ್ಷಣಿಕ ಸಾಧನೆಯ ಸರದಿ ಸಬಿತಾರದ್ದು.
ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ದ್ವಿತೀಯ ಸ್ಥಾನದೊಂದಿಗೆ ಪೂರ್ಣಗೊಳಿಸಿದರು. 3ನೇ ಸೆಮಿಸ್ಟರ್‌ನಲ್ಲಿರುವಾಗಲೇ ಮೊದಲ ಪ್ರಯತ್ನದಲ್ಲಿಯೇ ನೆಟ್‌ ಪಾಸು ಮಾಡಿದ ಹೆಗ್ಗಳಿಕೆಗೂ ಪಾತ್ರರಾದರು. ಮುಂದೆ ಸ್ಲೆಟ್‌ ಕೂಡಾ ಉತ್ತೀರ್ಣರಾದರು. 2012-13ನೇ ಸಾಲಿನಲ್ಲಿ ಡಾಕ್ಟರೇಟ್‌ಗೂ ಹೆಸರು ನೋಂದಾಯಿಸಿಕೊಂಡರು. ಇತ್ತೀಚೆಗೆ ಮಂಗಳೂರು ವಿಶ್ವ ವಿದ್ಯಾನಿಲಯದ ಖಾಲಿ ಇರುವ ಬೋಧಕರ ಹುದ್ದೆಗಳಿಗೆ ನೇಮಕಾತಿ ನಡೆಯುವಾಗ ಸಬಿತಾ ಕೂಡಾ ಅರ್ಜಿ ಹಾಕಿದ್ದರು. ಹುದ್ದೆಗೆ ಆಯ್ಕೆಯಾಗಿ ಪಾಠದಲ್ಲಿ ತೊಡಗಿಸಿಕೊಂಡಿದ್ದಾರೆ.

ಸಬಿತಾ ಇನ್ನೂ ಆರು ವರ್ಷದ ಬಾಲಕಿಯಾಗಿದ್ದಾಗಲೇ ತಂದೆ ಶಿವ ತೀರಿಕೊಂಡರು. ತಾಯಿ ಕಲಾವತಿ ಆಸರೆಯಾದರು. ಆದರೆ ಸಬಿತಾ ಹತ್ತನೇ ತರಗತಿಯಲ್ಲಿರಬೇಕಾದರೆ ವಾಹನ ದುರಂತದಲ್ಲಿ ತಾಯಿ ಅಸು ನೀಗಿದರು. ಅಜ್ಜ, ಅಜ್ಜಿ ಮತ್ತು ದೊಡ್ಡಮ್ಮ-ದೊಡ್ಡಪ್ಪರ ನೆರಳಿನಲ್ಲಿ ಬೆಳೆದುದೇ ಹೆಚ್ಚು. ತಾಯಿ ತೀರಿಕೊಂಡ ಬಳಿಕ ಆಸಕ್ತಿ ಇದ್ದರೂ ಶಿಕ್ಷಣವನ್ನು 2 ವರ್ಷ ಒಲ್ಲದ ಮನಸ್ಸಿನಿಂದ ಮೊಟಕುಗೊಳಿಸಬೇಕಾಯಿತು. ಆ ಎರಡು ವರ್ಷ ಸಬಿತಾ ಕಾಪುವಿನಲ್ಲಿರುವ ಸಮಗ್ರ ಗ್ರಾಮೀಣ ಆಶ್ರಮ ಎಂಬ ಸಮಾಜ ಕಾರ್ಯ ಸಂಸ್ಥೆಯಲ್ಲಿ ಕೆಲಸ ಮಾಡಿದರು. ಆಗ ಅಲ್ಲಿ ಅಶೋಕ ಶೆಟ್ಟಿ ಎಂಬವರಿಂದ ಮಾರ್ಗದರ್ಶನ ದೊರೆಯಿತು. ತಾಯಿಯ ಅಪಘಾತ ವಿಮೆಯ ಮೊತ್ತ ಕೈಗೆ ಬಂದಾಗ ಅದರ ಒಂದು ಭಾಗವನ್ನು ಯಾಕೆ ನೀವು ನಿಮ್ಮ ಶಿಕ್ಷಣ ಮುಂದುವರಿಸಲು ಬಳಸಬಾರದು ಎಂದು ಮತ್ತೆ ಶಿಕ್ಷಣದ ಕಿಚ್ಚು ಹಚ್ಚಿದವರು ಶೆಟ್ಟಿಯವರು ಎಂದು ಸಬಿತಾ ನೆನಪಿಸಿಕೊಳ್ಳುತ್ತಾರೆ.

ಶೆಟ್ಟಿಯವರ ಪ್ರೇರಣೆಯಂತೆ ಶಿರ್ವದ ಸೈಂಟ್‌ ಮೇರೀಸ್‌ ಪದವಿ ಪೂರ್ವ ಕಾಲೇಜಿಗೆ ಸೇರ್ಪಡೆಯಾಗಿ ಮಂಚಕಲ್ಲಿನ ಆದಿವಾಸಿ ಜೀವನ ಶಿಕ್ಷಣ ಕೇಂದ್ರದಲ್ಲಿ ಇದ್ದುಕೊಂಡು ಪ್ರತಿಶತ 76 ಅಂಕಗಳೊಂದಿಗೆ ಪಿಯುಸಿ ಮುಗಿಸಿದರು. ಪದವಿ ಪಡೆಯಬೇಕೆಂದು ಮಂಗಳೂರಿನ ಬೆಸೆಂಟ್‌ ಕಾಲೇಜಿಗೆ ಸೇರಿಕೊಂಡರು. ಕೊರಗ ಸಮುದಾಯದ ಮುಖಂಡ ಗೋಕುಲ್‌ದಾಸ್‌ ಅವರು ಬೆಂಬಲಕ್ಕೆ ನಿಂತರು. ಕೊಡಿಯಾಲಬೈಲ್‌ನ ಕುದ್ಮುಲ್‌ ರಂಗರಾವ್‌ ವಿದ್ಯಾರ್ಥಿನಿ ನಿಲಯದಲ್ಲಿದ್ದುಕೊಂಡು ಪದವಿಯ ಗುರಿಯನ್ನು ಶೇ.72 ಅಂಕಗಳೊಂದಿಗೆ ಪೂರೈಸಿದರು. ಮುಂದೆ ಮಂಗಳೂರು ವಿಶ್ವವಿದ್ಯಾ ನಿಲಯದಲ್ಲಿ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗಾಗಿ ಸೇರ್ಪಡೆಗೊಂಡು ಅದರಲ್ಲಿ ನಿರೀಕ್ಷೆ ಮೀರಿ ಯಶಪಡೆದು ಹೊರಬಂದರು. ಅಲ್ಲಿ ಬೆಂಬಲಿಸಿದವರು ವಿಭಾಗ ಮುಖ್ಯಸ್ಥರಾದ ಡಾ.ಜೋಗನ್‌ ಶಂಕರ್‌. ಸಬಿತಾ ಹೇಳುವಂತೆ ಅಶೋಕ್‌ ಶೆಟ್ಟಿ, ಗೋಕುಲ್‌ದಾಸ್‌ ಮತ್ತು ಡಾ.ಜೋಗನ್‌ ಶಂಕರ್‌ ಆಕೆಯ ಯಶಸ್ಸಿನ ಹಿಂದೆ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಎಳವೆಯಲ್ಲಿಯೇ ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡ ಸಬಿತಾ ಎಲ್ಲಿ , ಯಾವ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದರೋ ಅಲ್ಲಿಯೇ ಸಹಾಯಕ ಪ್ರಾಧ್ಯಾಪಿಕೆಯಾಗಿ ಬದುಕು ಕಟ್ಟಿಕೊಳ್ಳಲು ಹೊರಟಿದ್ದಾರೆ ಎಂಬುದು ಅತ್ಯಂತ ಮುದ ನೀಡುವ ಸಂಗತಿ. ಅದೇ ಜೋಗನ್‌ ಶಂಕರ್‌ ಮಾರ್ಗದರ್ಶನದಡಿ ಬುಡಕಟ್ಟು ಕಲ್ಯಾಣ ಕಾರ್ಯಕ್ರಮಗಳ ಕುರಿತು ಸಂಶೋಧನೆ ಬೇರೆ!
ವಿಶ್ವವಿದ್ಯಾನಿಲಯದಲ್ಲಿ ಮಟ್ಟದಲ್ಲಿ ಬೋಧನಾ ವೃತ್ತಿಗೇರಿದ ಕೊರಗ ಸಮದಾಯದ ಮೊದಲ ವ್ಯಕ್ತಿ ನೀವು. ನಿಮಗೆ ಏನನಿಸುತ್ತದೆ ಎಂದು ಕೇಳಿದರೆ ‘ಇಲ್ಲಿ ಪಾಠ ಮಾಡಲು ನಾನು ಆಯ್ಕೆಯಾಗಿದ್ದೇನೆ ಎಂಬುದೇ ಅತ್ಯಂತ ಹೆಚ್ಚು ಖುಷಿಯ ವಿಷಯ’ ಎನ್ನುತ್ತಾರೆ ಸಬಿತಾ. ಯಾಕೆ ನೀವು ಒಂದು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ಗೆ ಸೀಮಿತ ಆಗಬೇಕು? ಸ್ಪರ್ಧಾತ್ಮಕ ಪರೀಕ್ಷೆ ಬರೆದು ಎಲ್ಲಾದರೂ ಅಧಿಕಾರಿಯಾಗಿ ಕೆಲಸ ಮಾಡಬಾರದೇ ಎಂದು ಕೇಳಿದರೆ ಈ ಯುವತಿಯ ಉತ್ತರ ಬಹಳ ಸ್ಪಷ್ಟ:
‘ನಾನು ಎರಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಿರುವುದು ಬೋಧನೆಗೆ ಸಂಬಂಧ ಪಟ್ಟದ್ದು. ನಾನು ಬಯಸುವ ಪ್ರೀತಿಯ ವೃತ್ತಿ ಕೂಡಾ ಬೋಧನೆಯೇ ಆಗಿದೆ. ಶೈಕ್ಷಣಿಕವಾಗಿಯೇ ಸಾಧನೆ ಮಾಡುವುದು ನನ್ನ ಉದ್ದೇಶವಾಗಿದೆ. ಆ ಕಾರಣಕ್ಕಾಗಿಯೇ ಸಂಶೋಧನೆಗೂ ಮುಂದಾಗಿದ್ದೇನೆ. ಜತೆಗೆ ನನ್ನ ಸಮುದಾಯಕ್ಕೂ ನಾನು ತೋರಬೇಕಾದ ಜವಾಬ್ದಾರಿ ಇದೆ. ಸಮಯ, ಸಂದರ್ಭಗಳಿಗೆ ಅನುಸಾರವಾಗಿ ಅದನ್ನು ಕೂಡಾ ನಿರ್ವಹಿಸುವ ಯೋಚನೆ ನನ್ನದು’ ಎನ್ನುತ್ತಾರೆ ಸಬಿತಾ.
‘ಕರ್ನಾಟಕದ ಪ್ರಾಚೀನ ಬುಡುಕಟ್ಟು ಹುಡುಗಿ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ. ಕೊರಗ ಸಮುದಾಯಕ್ಕೆ ಇದರಿಂದ ಒಂದು ಹೊಸ ಸಂದೇಶ ತಲುಪುತ್ತದೆ. ಆ ಸಮುದಾಯದ ಸ್ವಾಭಿಮಾನವನ್ನು ಇವರ ಸಾಧನೆ ಹೆಚ್ಚಿಸುತ್ತದೆ ಎಂದು ಭಾವಿಸುತ್ತೇನೆ’ – ಇದು ಡಾ.ಜೋಗನ್‌ ಶಂಕರ್‌ ಅನಿಸಿಕೆ.
ಆಕೆಗೆ ಅರ್ಹತೆ ಇತ್ತು. ರ್ಯಾಂಕ್  ಸ್ಟೂಡೆಂಟ್‌; ನೆಟ್‌, ಸ್ಲೆಟ್‌ ಪಾಸು ಮಾಡಿರುವುದು ಅವರ ನೇಮಕಕ್ಕೆ ಸಹಾಯ ಮಾಡಿದೆ. ಅರ್ಹತೆಯಿಂದ ಸಹಾಯಕ ಪ್ರಾಧ್ಯಾಪಿಕೆಯಾಗಿ ನೇಮಕಗೊಂಡಿದ್ದಾರೆ ಎನ್ನುತ್ತಾರೆ ಕುಲಪತಿ ಡಾ.ಟಿ.ಸಿ.ಶಿವಶಂಕರ ಮೂರ್ತಿ.
ಬೆಳಕು ಎಲ್ಲಿಂದ ಬಂದರೂ ಅದು ಬೆಳಕು ತಾನೆ? ಕೊರಗ ಸಮುದಾಯದಿಂದ ಇನ್ನಷ್ಟು ಬೆಳಕಿನ ಕಿರಣಗಳು ಮೂಡಿ ಬರಲಿ ಎಂದು ಹಾರೈಸೋಣ.

  • ಬಾಳೇಪುಣಿ
   

Leave a Reply