ಕುರುಡುಮಲೆ

ಪ್ರವಾಸ - 0 Comment
Issue Date : 02.04.2014

ಕುರುಡುಮಲೆ ವಿನಾಯಕ – ಹತ್ತು ಅಡಿ ಎತ್ತರದ ಪ್ರಾಚೀನ ವಿನಾಯಕನ ಮೂರ್ತಿ

ಕೋಲಾರ ಜಿಲ್ಲೆಯ ಮುಳುಬಾಗಿಲಿಗೆ ಸಮಾರು 7 ಕಿ.ಮೀ ದೂರದಲ್ಲಿರುವ ‘ಕುರುಡುಮಲೆ’ ಪುರಾಣಪ್ರಸಿದ್ಧ ಕ್ಷೇತ್ರ. ನಾಲ್ಕು ಯುಗಗಳಲ್ಲಿಯೂ ಕ್ರಮವಾಗಿ ಗಣೇಶಗಿರಿ, ಕೊಟಾಚಲ, ಯಾದವಾಚಲ ಮತ್ತು ಕುರುಡುಮಲೆ ಎಂದು ಹೆಸರು ಪಡೆದ ಸ್ಥಳ. ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರ, ದ್ವಾಪರಯುಗದಲ್ಲಿ ಶ್ರೀಕೃಷ್ಣ ಪರಮಾತ್ಮನು ಪೂಜಿಸಿದ್ದ ಇಲ್ಲಿನ ಗಣಪತಿಯ ಸುಕ್ಷೇತ್ರವನ್ನು ಕೌಂಡಿನ್ಯ ಋಷಿಗಳು ತಮ್ಮ ತಪೋಭೂಮಿಯನ್ನಾಗಿ ಮಾಡಿಕೊಂಡಿದ್ದರಂತೆ. ‘ಆದುದರಿಂದ ಇದು ಕೌಂಡಿನ್ಯ ಗಿರಿ’ ಯೂ ಹೌದು.

ಗರ್ಭಗುಡಿಯಲ್ಲಿ ಸುಮಾರು 10 ಅಡಿ ಎತ್ತರವಾದ ಗಣಪತಿಯನ್ನು ನೋಡಿದೊಡನೆ ದೈವಿಕ ಭಕ್ತಿ ತನಗೆ ತಾನೇ ಮೂಡುತ್ತದೆ.  ಪಾಶ, ಅಕುಂಶಧಾರಿಯಾದ ಗಣಪ ಮೋದಕ ಸವಿಯುತ್ತಿದ್ದಾನೆ. ಈ ಸಾಲಿಗ್ರಾಮ ಶಿಲೆಯ ಗಣಪನ ಮುಂದೆ ಇರುವ ಭವ್ಯವಾದ ಹಸಿರು ಕಲ್ಲಿನ ಇಲಿಯೂ ಒಂದು ಉತ್ತಮ ಕಲಾಕೃತಿ.

ಕೃತಯುಗದಲ್ಲಿ ಲೋಕಕಂಟಕನಾಗಿದ್ದ ತ್ರೀಪುರಾಸುರನನ್ನು ಕೊಲ್ಲಲು ಯಾರಿಂದಲೂ ಸಾಧ್ಯವಾಗಲಿಲ್ಲ. ಆಗ ಬ್ರಹ್ಮ, ವಿಷ್ಣು, ಮಹೇಶ‍್ವರರೇ ಮೊದಲಾದ ಎಲ್ಲ ದೇವತೆಗಳೂ ಒಟ್ಟಾಗಿ ಸೇರಿ ಗಣಪತಿಯನ್ನು ಪ್ರಾರ್ಥಿಸಿದರಂತೆ. ತನ್ನ ಔಪಾಸಕನಾಗಿದ್ದ ಆ ಅಸುರನನ್ನು ನೇರವಾಗಿ ಸಂಹಾರ ಮಾಡಲು ಇಚ್ಛಿಸದೆ ಗಣಪತಿಯು ತನ್ನ ಒಂದು ದಂತವನ್ನು ಕಿತ್ತು ಇಂದ್ರನಿಗೆ ಕೊಟ್ಟು ಅದರ ಸಹಾಯದಿಂದ ರಾಕ್ಷಸನನ್ನು ಸಂಹಾರಮಾಡಲು ತಿಳಿಸಿದನಂತೆ. ಅಂದಿನಿಂದ ಗಣಪತಿಯು ಏಕದಂತನೆಂಬ ಹೆಸರನ್ನು ಸಂಪಾದಿಸಿದ.

ಕುರುಡುಮಲೆ ಮಹಾಗಣಪತಿಯ ದೇವಾಲಯವು ಚೋಳರ ಕಾಲದಲ್ಲಿ ನಿರ್ಮಿತವಾಗಿರಬಹುದೆಂಬುದು ಇಲ್ಲಿ ದೊರೆತ ಹಲವಾರು ಶಿಲಾಶಾಸನ, ಬಂಗಾರದ ನಾಣ್ಯಗಳಿಂದ ತಿಳಿದುಬರುತ್ತದೆ.  ಇದೇ ರೀತಿ ಇಲ್ಲಿನ ಇನ್ನೊಂದು ಪ್ರಸಿದ್ಧ ಸೋಮೇಶ್ವರ ದೇವಾಲಯ ಚೋಳರ ಕಾಲದ್ದೆನ್ನಲಾಗಿದೆ. ಸೋಮೇಶ್ವರ ದೇವಾಲಯದೊಳಗೆ ಕ್ಷಮದಾಂಬಾ, ಗಣಪತಿ, ಚೆನ್ನರಾಯಸ್ವಾಮಿ, ಶ್ರೀದೇವಿ, ಭೂದೇವಿ, ಭೈರವೇಶ್ವರ, ನಗರೇಶ್ವರ, ದಕ್ಷಿಣಾಮೂರ್ತಿಯ ವಿಗ್ರಹಗಳೂ, ಶಂಕರಾಚಾರ್ಯ, ರಾಮಮಾನುಜಾಚಾರ್ಯರ ವಿಗ್ರಹಗಳೂ ಕಂಡುಬರುತ್ತದೆ. ಆಚಾರ್ಯರಿಬ್ಬರ ವಿಗ್ರಹಗಳು ಇಲ್ಲಿ ಇರುವುದರಿಂದ ಪರಸ್ವರ ಮತಸಂಬಂಧ ಉತ್ತಮವಾಗಿದ್ದಿರಬಹುದೆಂದು ಭಾವಿಸಬಹುದಾಗಿದೆ.

ಶೈವಾಗಮ ರೀತಿಯಂತೆ ಶ್ರೀ ಮಹಾಗಣಪತಿ ದಿನವೂ ಪೂಜೆ ನಡೆಯುತ್ತದೆ. ಋಷಿ ಪಂಚಮಿಯಂದು ರಥೋತ್ಸವ ನಡೆಯುತ್ತದೆ. ಗಣಪತಿಗೆ ರಥೋತ್ಸವ, ಕಲ್ಯಾಣೋತ್ಸವಗಳು ನಡೆಯುವಂತಿಲ್ಲ. ಲಕ್ಷ್ಮೀಗಣಪತಿಗೆ ರಥೋತ್ಸವ ನಡೆಯುವುದು ವಾಡಿಕೆ. ಅದರಂತೆ ಇಲ್ಲೂ ಲಕ್ಷ್ಮೀ ಗಣಪತಿ ರಥೋತ್ಸವ ನಡೆಯುತ್ತದೆ. 

   

Leave a Reply