ಮಗುವಿಗೆ ಆರೈಕೆ

ಆರೋಗ್ಯ - 0 Comment
Issue Date :

– ಡಾ. ಶ್ರೀವತ್ಸ ಭಾರದ್ವಾಜ್, ದತ್ತಂ ಆಯುರ್ಧಾಮ, ಮಂಗಳೂರು

ಏನಮ್ಮಾ ಮಗು ಹೇಗಿದೆ? ‘ಅಯ್ಯೋ! ಏನು ಹೇಳಲಿ ಡಾಕ್ಟ್ರೇ ನನ್ನ ಮಗುವಿನ ಅವಸ್ಥೆ ಕೇಳಿದರೆ, ದಿನವಿಡೀ ಹಠ, ತರಟೆ, ಉಪದ್ರ ಮಾಡುತ್ತಾನೆ, ಒಂದು ಕಡೆ ಕೂರೋದಿಲ್ಲ, ರಾತ್ರಿಯೂ ಸರಿಯಾಗಿ ನಿದ್ರೆ ಮಾಡಲ್ಲ, ಸರಿಯಾಗಿ ತಿನ್ನಲ್ಲ, ಬರೇ ಟೀವಿ ನೋಡುತ್ತಾನೆ, ಓದೋದ್ರಲ್ಲಿ ಆಸಕ್ತಿಯೇ ಇಲ್ಲ, ತರಕಾರಿ ಕಂಡ್ರೆ ಆಗೋದಿಲ್ಲ, ಬರೇ ಕರಿದ ತಿಂಡಿ, ಚಾಕಲೇಟು ತಿಂದುಕೊಂಡು ದಿನವನ್ನು ಕಳೆಯುತ್ತಾನೆ, ದೇಹದಲ್ಲಿ ಶಕ್ತಿಯೇ ಇಲ್ಲ, ಆಗಾಗ ಶೀತ, ಕೆಮ್ಮು, ಜ್ವರ, ಹೊಟ್ಟೆನೋವು, ಆಗಾಗ ಆಸ್ಪತ್ರೆಗೆ ಕರ್ಕೊಂಡು ಹೋಗೊದೇ ನನ್ನ ಕೆಲಸವಾಗಿದೆ’. ಇಂತಹ ಸಮಸ್ಯೆಗಳು ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲಾ ಹೆತ್ತವರನ್ನು ಕಾಡುತ್ತಿರುತ್ತವೆ.
ನಮ್ಮ ಮಕ್ಕಳನ್ನು ಚೆನ್ನಾಗಿ, ಆರೋಗ್ಯವಂತರಾಗಿ ಬೆಳೆಸಬೇಕೆಂಬ ಆಸೆ ಪ್ರತಿಯೊಬ್ಬ ಹೆತ್ತವರದ್ದಾಗಿರುತ್ತದೆ. ಮಗು ಬೆಳೆಯುವಾಗ ಅತ್ಯಂತ ಉತ್ಕೃಷ್ಟ ಗುಣಮಟ್ಟದಲ್ಲಿರುವ ಆಹಾರವನ್ನು ಹುಡುಕಿ ತಂದುಕೊಡುತ್ತೇವೆ. ಬೆಳೆಯುವ ಮಗುವಿಗೆ ಸರಿಯಾದ ಪೋಷಣೆ ಸಿಗಲೆಂದು, ಅದರ ಆರೋಗ್ಯ ಚೆನ್ನಾಗಿರಲೆಂದು, ಸರಿಯಾಗಿ ಬೆಳವಣಿಗೆಯಾಗಲೆಂದು ನಾವು ಏನೆಲ್ಲಾ ಸಾಹಸವನ್ನು ಮಾಡುತ್ತೇವೆ. ನಮಗೆ ಸಿಗದ ಸೌಲತ್ತು, ಖುಶಿ, ಆನಂದವನ್ನು ಆ ಮಗುವಿಗೆ ಕೊಡಲೆಂದು ಸರ್ವಪ್ರಯತ್ನ ಮಾಡುತ್ತೇವೆ. ಈ ಪ್ರಯತ್ನದಲ್ಲಿ ಹಲವಾರು ಬಾರಿ ನಾವು ದಾರಿತಪ್ಪಿ, ಮಗುವಿನ ಮಾನಸಿಕ ಹಾಗೂ ಶಾರೀರಿಕ ಆರೋಗ್ಯವನ್ನು ತಪ್ಪಿಸುತ್ತೇವೆ.ಮಕ್ಕಳು ಹಠ ಮಾಡುತ್ತಾರೆಂದು ಕೇಳಿದ್ದೆಲ್ಲಾ ತಿನ್ನಿಸಿ ಸಮಾಧಾನ ಪಡಿಸುತ್ತೇವೆ. ಆದರೆ ನಾವು ಕೊಡುವ ಈ ಆಹಾರ ಮಗುವಿನ ಬೆಳವಣಿಗೆಗೆ ಮಾರಕವಾಗುತ್ತದೆ.
ಮಕ್ಕಳ ಬೆಳವಣಿಗೆಗೆ ಪೋಷಕಾಂಶಗಳು ತುಂಬಾ ಅಗತ್ಯ. ನಮ್ಮ ಅಂಗಾಂಗಗಳ ಬೆಳವಣಿಗೆಗೆ, ಧಾತುಗಳ ಪುಷ್ಟಿಗೆ ಸತ್ವಯುತ ಆಹಾರವೇ ಪ್ರಧಾನ. ಇಂತಹ ಸಮಯದಲ್ಲಿ ತಿಂದಂತಹ ಆಹಾರದಲ್ಲಿ ಸತ್ವ ಇಲ್ಲದಿದ್ದರೆ ನಮ್ಮ ಮಕ್ಕಳ ಬೆಳವಣಿಗೆ ಹೇಗೆ ಸಾಧ್ಯ? ಉದಾಹರಣೆಗೆ, ಸಾಕಷ್ಟು ಮಕ್ಕಳು ನೀರು ಕುಡಿಯಲು ಹಿಂಜರಿಯುತ್ತಾರೆ ಏಕೆಂದು ಪ್ರಶ್ನಿಸಿದರೆ ನೀರು ಕುಡಿದರೆ ಆಗಾಗ ಮೂತ್ರಬರುತ್ತದೆ, ಮೂತ್ರಬಂದರೆ ಮಾಡಲು ಶಾಲೆಯಲ್ಲಿ ಟೀಚರ್ ಬಿಡುವುದಿಲ್ಲ ಎನ್ನುವ ಉತ್ತರ. ನೀರು ಕುಡಿಯುವುದು ಕಮ್ಮಿಯಾದಲ್ಲಿ ರಕ್ತ ಸಂಚಾರವು ದೇಹದಲ್ಲಿ ಸರಿಯಾಗಿ ಆಗುವುದಿಲ್ಲ. ಇದಲ್ಲದೇ ದೇಹದ ಅಂಗಾಂಗಗಳ ಬೆಳವಣಿಗೆಗೂ ನೀರು ಅತ್ಯಗತ್ಯ. ಮಕ್ಕಳಲ್ಲಿ ನೀರು ಕುಡಿಯುವುದು ಕಮ್ಮಿಯಾದಲ್ಲಿ ಕಣ್ಣಿನ ತೊಂದರೆ, ನರ ದುರ್ಬಲತೆ, ಏಕಾಗ್ರತೆಯ ಕೊರತೆ ಕಾಣುತ್ತದೆ. ನೀರು ಕುಡಿಯದೇ ದೇಹದ ಕಶ್ಮಲಗಳ ನಿವಾರಣೆಯಾಗದು. ಇದರಿಂದ ರೋಗಗಳು ಬರುವುದು ಸಹಜ. ನೀರು ಕುಡಿದರೆ ಕಶ್ಮಲಗಳನ್ನು ಹೊರಹಾಕಲು ಟೀಚರ್ ಬಿಡುವುದಿಲ್ಲ. ನೋಡಿ ಏನು ವಿಪರ್ಯಾಸ! ಶಿಕ್ಷಣವು ಮಗುವಿನ ಸರ್ವತೋಮುಖ ಅಭಿವೃದ್ಧಿಗೊಳಿಸಬೇಕು, ಕೇವಲ ಮಾರ್ಕ್‌ಗಳನ್ನು ತೆಗೆಯುವ ಯಂತ್ರಗಳನ್ನಾಗಿ ಮಾಡಬಾರದು.
ನಾವು ಎಂದಿಗೂ ಮಕ್ಕಳು ಏನು ತಿನ್ನುತ್ತಿದ್ದಾರೆ? ಅವರ ಆಹಾರ ಕ್ರಮ ಸರಿಯೇ? ಯಾವ ವಯಸ್ಸಿಗೆ ಏನು ತಿನ್ನಬೇಕು? ಎಂಬುವುದರ ಬಗ್ಗೆ ಯೋಚಿಸುವುದಿಲ್ಲ.
ಮಕ್ಕಳ ಆಹಾರ ಸತ್ವಯುತ, ನಾರುಯುಕ್ತ, ನೀರು ಯುಕ್ತ, ಸುಲಭ ಜೀರ್ಣವಾಗುವಂತ ಆಹಾರವಾಗಿರಬೇಕು.
ಸಣ್ಣ ವಯಸ್ಸಿನಿಂದಲೇ ತರಕಾರಿ ತಿನ್ನುವ ಅಭ್ಯಾಸ ಮಾಡಿಸಿರಿ.
ಋತುಮಾನಕ್ಕನುಗುಣವಾಗಿ ಬೇರೆ ಬೇರೆ ತರಕಾರಿ, ಹಣ್ಣುಗಳನ್ನು ತಿನ್ನಿಸಿರಿ.
ಸಕ್ಕರೆಯ ಅಭ್ಯಾಸ ಕನಿಷ್ಠ ಪಕ್ಷ ಐದು ವರ್ಷದವರೆಗೆ ಮಾಡದಿರಿ.
ಕರಿದ ಆಹಾರಕ್ಕಿಂತ ಬೇಯಿಸಿದ ಆಹಾರವನ್ನೇ ತಿನ್ನಿಸಿರಿ.
ಮಕ್ಕಳಿಗೆ ಕಹಿ ಮತ್ತು ಚೊಗರು ರುಚಿಯ ಅಭ್ಯಾಸ ಮಾಡಿಸಿರಿ.
ಮಕ್ಕಳ ಬೆಳವಣಿಗೆಗೆ ದ್ರವಾಹಾರ ಬಹು ಮುಖ್ಯವಾದದ್ದು. ನೀರು, ಹಾಲು, ಮಜ್ಜಿಗೆ, ಹಣ್ಣಿನ ರಸ, ಎಳನೀರು ದಿನನಿತ್ಯ ಸೇವಿಸಬೇಕು.
ಹುಳಿ, ಉಪ್ಪು, ಖಾರ ರುಚಿಗಳಿರುವ ಆಹಾರ ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ.
ಸಂಸ್ಕರಿಸಿದ ಆಹಾರ ಮಕ್ಕಳಲ್ಲಿ ಜೀರ್ಣವಾಗದ ಕಾರಣ ದೂರವಿಡುವುದು ಒಳ್ಳೆಯದು.
ಮಕ್ಕಳಿಗೆ ದಿನನಿತ್ಯ ದೇಸಿ ದನದ ತುಪ್ಪ ತಿನ್ನಿಸುವುದು ಉತ್ತಮ.
ಮಕ್ಕಳಿಗೆ ತಾಜಾ, ಬಿಸಿ ಆಹಾರವನ್ನು ನೀಡಿರಿ.
ನೆನಪಿರಲಿ, ನಮ್ಮ ಮಕ್ಕಳ ಆರೋಗ್ಯ ನಮ್ಮ ಕೈಯಲ್ಲಿದೆ.

   

Leave a Reply