ಮಹಾವೀರ ಜಯಂತಿ

ವ್ಯಕ್ತಿ ಪರಿಚಯ - 0 Comment
Issue Date : 13.04.2014

ಜೈನ ಧರ್ಮದ ಹಬ್ಬಗಳಲ್ಲಿ  ಮಹಾವೀರ ಜಯಂತಿ  ಮುಖ್ಯವಾದುದು.  ಕೊನೆಯ ತೀರ್ಥಂಕರನಾದ ಮಹಾವೀರ ಜನಿಸಿದ್ದು ಚೈತ್ರ ಮಾಸದ ಶುಕ್ಲ ತ್ರಯೋದಶಿಯಂದು.  

ಮಹಾವೀರ ಅಥವ ವರ್ಧಮಾನ ಮಹಾವೀರ  ಜೈನ ಧರ್ಮದ 24ನೇ ತೀರ್ಥಂಕರರು  ಹಾಗು ಈ ಧರ್ಮದ ಪ್ರಮುಖ ಸಿದ್ಧಾಂತಗಳ ಸಂಸ್ಥಾಪಕರು.

ಮಹಾವೀರ ಜಯಂತಿಯಂದು ಜೈನ ಬಸದಿಗಳನ್ನು ಬಾವುಟಗಳಿಂದ ಅಲಂಕರಿಸಲಾಗುತ್ತದೆ. ಬೆಳಗಿನ ಸಮಯ ಮಹಾವೀರನ ಪ್ರತಿಮೆಗೆ ಅಭಿಷೇಕ ಮಾಡಲಾಗುತ್ತದೆ. ನಂತರ ಇದನ್ನು ತೊಟ್ಟಿಲಿನಲ್ಲಿಟ್ಟು ಮೆರವಣಿಗೆ ಕರೆದೊಯ್ಯಲಾಗುತ್ತದೆ. ಭಕ್ತಾದಿಗಳು ಅಕ್ಕಿ, ಹಣ್ಣು, ಹಾಲು, ನೀರು ಮೊದಲಾದುವನ್ನು ನೈವೇದ್ಯ ಮಾಡುತ್ತಾರೆ. ಪ್ರವಚನಗಳು, ಪ್ರಾರ್ಥನೆಗಳು ನಡೆಯುತ್ತವೆ. ಗೋರಕ್ಷಣೆಗಾಗಿ ಚಂದಾ ಎತ್ತಲಾಗುತ್ತದೆ.

ಜೈನ ಧರ್ಮ

“ಅಹಿಂಸಾ ಪರಮೋ ಧರ್ಮಃ” – ಅಹಿಂಸೆಯೇ ಮೂಲಮಂತ್ರವಾದ ಜೈನಧರ್ಮ ತ್ಯಾಗಪ್ರಧಾನವಾದ ಧರ್ಮ. ಪ್ರಥಮ ತೀರ್ಥಂಕರರಾದ ಭಗವಾನ್ ಋಷಭದೇವರಿಂದ ಪ್ರಾರಂಭವಾಗಿ ಭಗವಾನ್ ಮಹಾವೀರರವರೆಗೆ, ಭಗವಾನ್ ಮಹಾವೀರರಿಂದ ಹಿಡಿದು ಇಂದಿನ ದಿಗಂಬರ-ಶ್ವೇತಾಂಬರರವರೆಗೆ ಈ ಅತಿ ಪ್ರಾಚೀನಧರ್ಮವು ಸರ್ವದಾ ತ್ಯಾಗ, ವೈರಾಗ್ಯ, ತಪಸ್ಸು – ಇವುಗಳಿಗೆ ಮಹತ್ವ ನೀಡಿದೆ. ಇಂದಿನ ಆಧುನಿಕ ಯುಗದಲ್ಲಿಯೂ ನಿಷ್ಠೆಯಿಂದ ತಪಸ್ಸಿನಲ್ಲಿ ನಿರತರಾದ ಜೈನಮುನಿಗಳನ್ನು, ಶ್ವೇತಾಂಬರರನ್ನು ಕಾಣಬಹುದು.  ಗ್ರಹಸ್ಥರು ಈ ಧರ್ಮದ ಪ್ರಾಣಸ್ವರೂಪ; ಅವರು ನಿರ್ಗ್ರಂಥಿಗಳ (ಎಲ್ಲ ಬಂಧಗಳಿಂದ ಮುಕ್ತ), ಮುನಿಗಳ, ಅರ್ಹಂತರ (ದಾರಿ ತೋರುವ ಸದಾಚಾರಿಗಳ) ಪಾಲನೆ ಪೋಷಣೆ ಮಾಡುತ್ತಾರೆ. ಅಣುವ್ರತಗಳನ್ನು ಪಾಲಿಸುತ್ತಾರೆ ಮತ್ತು ಜೈನ ಮಂದಿರಗಳ ಸೇವೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ.

ತೀರ್ಥಂಕರರು

ಬಹುಪ್ರಾಚೀನ ಜೈನ ಧರ್ಮದ ಉಗಮ ಪ್ರಥಮ ತೀರ್ಥಂಕರರಾದ ಭಗವಾನ್ ಋಷಭದೇವರ ಆವಿರ್ಭಾವದೊಂದಿಗೆ ಉಂಟಾಯಿತು.  24ನೆಯ ತೀರ್ಥಂಕರರಾದ ಭಗವಾನ್ ಮಹಾವೀರರನ್ನೇ ಈ ಧರ್ಮದ ಪ್ರತಿಷ್ಠಾಪಕರೆಂದು  ಗೌರವ ನೀಡಲಾಗಿದೆ. ‘ತೀರ್ಥಂಕರ’ ಶಬ್ದದ ಅರ್ಥ ‘ತೀರ್ಥಂ ಕರೋತಿ ಇತಿ’ – ಯಾರ ಚರಣ ಸ್ಪರ್ಶದಿಂದ ಅತಿ ಸಾಮಾನ್ಯ ಸ್ಥಳವೂ ಮಹಾನ್ ತೀರ್ಥಕ್ಷೇತ್ರವಾಗಿ ಪರಿಣಮಿಸುವುದೋ ಅವರು. ಹೋಲಿಕೆ ಸಾಧಾರಣವಾಗಿ ಸರಿಯಲ್ಲದೇ ಹೋದರೂ, ಹಿಂದೂಧರ್ಮದ ಅವತಾರಗಳೊಂದಿಗೆ ಈ ತೀರ್ಥಂಕರರನ್ನು ಹೋಲಿಸಬಹುದು. ತೀರ್ಥಂಕರರ ಜನ್ಮ-ಕರ್ಮಗಳು ದಿವ್ಯ, ಅಭೂತಪೂರ್ವ. ಅವರ ಸಾಧನೆಗಳು ಸಾಧಾರಣ ಮಾನವನ ಕಲ್ಪನೆಯನ್ನೂ ಮೀರಿದವು.

ಮಹಾಭಾರತದ ಯುದ್ಧ ನಡೆಯುತ್ತಿದ್ದ ಸಮಯದಲ್ಲಿ 22ನೆಯ ತೀರ್ಥಂಕರರಾದ ಭಗವಾನ್ ನೇಮಿನಾಥರು ಧರ್ಮಪ್ರಚಾರ ಮಾಡುತ್ತಿದ್ದರು. ಶ್ರೀಮದ್ಭಾಗವತದಲ್ಲಿ ಮೊದಲ ತೀರ್ಥಂಕರರ ಹೆಸರಿದೆ. ಪ್ರಥಮ ತೀರ್ಥಂಕರರು ಬಹಳ ಪುರಾತನರು ಎಂದು ಜೈನ ಧರ್ಮದಲ್ಲಿ ಹೇಳಲಾಗಿದೆ.

ಮಹಾವೀರರು

ಮಹಾವೀರರು ತ್ಯಾಗಮೂಲವಾದ ಪರಂಪರಾಗತ ಸಂಪ್ರದಾಯವೊಂದಕ್ಕೆ ಒಂದು ಸುಸ್ಪಷ್ಟ.  ಮಹಾವೀರರು ‘ಅರ್ಧಮಾಗಧೀ’ ಭಾಷೆಯಲ್ಲಿ ಉಪದೇಶಿಸಿದರು. ತಮ್ಮ ಜೀವನದ ಪ್ರಥಮಭಾಗವನ್ನು ಅತ್ಯಂತ ಕಠೋರ ತಪಸ್ಸಿನಲ್ಲಿ ಕಳೆದು, ಕಡೆಯ ಮೂವತ್ತು ವರ್ಷಗಳನ್ನು ಜೀವಿಗಳ ಉದ್ಧಾರಕ್ಕಾಗಿ ಮುಡಿಪಿಟ್ಟರು. ಶ್ರದ್ಧಾಸಂಪನ್ನರೂ ಸಾಧನಾಪ್ರಿಯರೂ ಆದ ಅನೇಕ ಶಿಷ್ಯರ ಜೀವನಗಳನ್ನು ಕಮಲದ ಹೂವಿನಂತೆ ಅರಳಿಸಿದರು. ಈ ಶಿಷ್ಯರುಗಳಿಗೆ ‘ಗಣಧರ’ರೆಂದು ಹೆಸರು. ಮಹಾವೀರರ ಉಪದೇಶಗಳು ಮತ್ತೆಲ್ಲಾ ಪ್ರವಾದಿಗಳ ಉಪದೇಶಗಳಂತೆಯೇ ಸಹಜಗಮ್ಯ, ಸರಳ ಮತ್ತು ಪರಿಪೂರ್ಣ.

   

Leave a Reply