ಮಲೆನಾಡ ಮೂಲೆಯಲ್ಲಿ ಸದ್ದುಗದ್ದಲವಿಲ್ಲದ ಕ್ರಾಂತಿ

ಜಿಲ್ಲೆಗಳು ; ಶಿವಮೊಗ್ಗ - 0 Comment
Issue Date : 05.03.2014

ಬೆನಕ ಭಟ್ ತಮ್ಮ ಪತ್ನಿಯೊಂದಿಗೆ

ಕೆಲವರು, ಈ ನಾಡಿನಲ್ಲಿ ಕ್ರಾಂತಿಯಾಗಬೇಕು; ಆಗಲೇ ಎಲ್ಲಾ ಸರಿಹೋದಿತು – ಎಂದು ವೇದಿಕೆಯ ಮೇಲಿಂದ ಬೊಬ್ಬೆ ಹೊಡೆಯುವವರಿದ್ದಾರೆ. ಆದರೆ ಕ್ರಾಂತಿಯಾಗಲು ಸ್ವತಃ ತಾವೇನೂ ಮಾಡುವ ಗೋಜಿಗೆ ಕೈಹಾಕಲಾರರು . ಇನ್ನೂ ಕೆಲವರು ಕ್ರಾಂತಿಯಾಗಬೇಕೆಂದು ಘೋಷಿಸುತ್ತಾ, ಆ ದಿಕ್ಕಿನಲ್ಲಿ ಕೊಂಚ ಯತ್ನ ನಡೆಸಿ, ಶೀಘ್ರಫಲ ದೊರೆಯದಿದ್ದಾಗ ಕೈಚೆಲ್ಲಿ ಕಳಿತು, ‘ಈ ಸಮಾಜವೇ ಸರಿಯಿಲ್ಲ’ ಎಂದು ತಮ್ಮ ವಿಫಲತೆಯನ್ನು ಸಮಾಜದ ಕೊರಳಿಗೆ ಕಟ್ಟುವವರೂ ಇದ್ದಾರೆ. ಮತ್ತೆ ಕೆಲವರು ಕ್ರಾಂತಿಯ ಯಾವ ಅಬ್ಬರದ ಘೋಷಣೆಯನ್ನೂ ಹಾಕದೆ, ಆದರೆ ಕ್ರಾಂತಿಯ ಕನಸು ಹೊತ್ತು ವೌನವಾಗಿ ದುಡಿಯುತ್ತಾ, ಕ್ರಮೇಣ ತಮ್ಮ ಪರಿಸರದಲ್ಲಿ ಆ ಕನಸು ನನಸಾಗುವಂತೆ ಮಾಡುವವರಿದ್ದಾರೆ. ಸಮಾಜದಲ್ಲಿ ಏನಾದರೂ ಕ್ರಾಂತಿಯಾಗುವುದಾದಲ್ಲಿ ಇಂಥವರಿಂದಲೇ.

ಇಲ್ಲಿ ‘ಕ್ರಾಂತಿ’ ಯೆಂದರೆ ಹಸಿರು ಪೇಟಾಗಳ ಅಥವಾ ಕೆಂಪು ಅಂಗಿಗಳ ಕ್ರಾಂತಿಯಲ್ಲ. ಪಂಜಾಬ್, ಅಸ್ಸಾಂ ಮಾದರಿಯ ಕ್ರಾಂತಿಯೂ ಅಲ್ಲ. ಹಿಂದು ಸಮಾಜದಲ್ಲಿ ಶತಮಾನಗಳಿಂದ ಹರಡಿರುವ ಜಾತಿಮತ ವಿಷಮತೆಯ ಭೂತ ತೊಲಗಿಸಲು ಸದ್ದಿಲ್ಲದೇ ಸಾಗಿರುವ ವೌನಕ್ರಾಂತಿ.

ತೀರ್ಥಹಳ್ಳಿ-ಕಮ್ಮರಡಿ ರಸ್ತೆಯಲ್ಲಿರುವ ಹೆಗ್ಗೋಡು ಬಸ್ಸು ತಂಗುದಾಣದಿಂದ ಮೂರು ಕಿಲೋಮೀಟರ್ ನಡೆದರೆ ಸಿಗುವ ಗ್ರಾಮ ಚಕ್ಕೋಡಬೈಲು. ಸುತ್ತಲೆಲ್ಲ ಹಸಿರು ಹೊದ್ದು ಕಾಡು ಗಿಡ ಮರಗಳಿಂದ ಕೂಡಿ, ದೂರ ದೂರಕ್ಕೆ ಹರಡಿಕೊಂಡಿರುವ ನೂರೈವತ್ತು ಮನೆಗಳು. ಚಕ್ಕೋಡಬೈಲಿನಲ್ಲಿ ಆಗಾಗ ನಡೆದುಕೊಂಡು ಬಂದಿರುವ ಭೂತದರ್ಶನ (ಗಣ ಬರುವುದು) ಸುತ್ತಲಿನ ಫಾಸಲೆಗೆಲ್ಲಾ ಗೊತ್ತು. ಆದರೆ ಅಲ್ಲೊಂದು ವೌನ ಕ್ರಾಂತಿ ನಡೆಯುತ್ತಿರುವುದು ಹಲವರಿಗೆ ಗೊತ್ತಿಲ್ಲ.

ಇಲ್ಲಿಯ ಶ್ರೀ ಬೆನಕಭಟ್ಟರು ಆ ಗ್ರಾಮಕ್ಕಷ್ಟೇ ಅಲ್ಲ, ಇಡೀ ತೀರ್ಥಹಳ್ಳಿ ತಾಲೂಕಿಗೇ ಚಿರಪರಿಚಿತ ವ್ಯಕ್ತಿ. ಇಳಿ ವಯಸ್ಸಿಗೆ ಸುರಿಯುತ್ತಿರುವ, ಅಲ್ಲಲ್ಲಿ ಬೆಳ್ಳಿ ರೇಖೆಯಂತೆ ಮಿನುಗುವ ಗುಂಗುರು ತಲೆಕೂದಲು, ಜಡ್ಡಿ ರಲಿ -ಜಾಪತ್ತಿರಲಿ, ನೋವಿರಲಿ – ನಲಿವಿರಲಿ, ಮುಖದ ತುಂಬಾ ಸದಾ ಲಾಸ್ಯವಾಡುವ ಮಂದಹಾಸ. ಎಲ್ಲರೊಡನೆ ವಿನೋದವಾಗಿ ಹರಟೆ ಹೊಡೆದು, ಪ್ರೀತಿಯಿಂದ ಮಾತನಾಡಿ, ನೊಂದವರ ಮನದಲ್ಲಿ ಭರವಸೆಯ ಮೊಗ್ಗು ಅರಳುವಂತೆ ಮಾಡುವುದೇ ಬೆನಕಭಟ್ಟರ ಜಾಯನಾನ.

ಒಕ್ಕಲಿಗರು, ಬ್ರಾಹ್ಮಣರು, ಹರಿಜನರು ಇರುವ ಈ ಗ್ರಾಮದಲ್ಲಿ ಬೆನಕಭಟ್ಟರದು ಒಂದು ಮಧ್ಯಮ ವರ್ಗದ ಬ್ರಾಹ್ಮಣ ಮನೆ.ಅಡಿಕೆ ತೋಟ, ಭತ್ತದ ಗದ್ದೆಗಳಲ್ಲಿ ದುಡಿಯುವ ಜೀವನ. ಎಂ.ಕೆ. ಇಂದಿರಾರವರ ‘ಫಣಿಯಮ್ಮ’ ಕಾದಂಬರಿಯಲ್ಲಿರುವಂಥ ಅಸ್ಪೃಶ್ಯತೆ, ಮಡಿವಂತಿಕೆಗಳ ಅಂಧಕಾರದಲ್ಲಿ ಮುಳುಗಿದ್ದ ಆ ಹಳ್ಳಿಯಲ್ಲಿ ಸಣ್ಣದೊಂದು ಜ್ಯೋತಿ ಬೆಳಗುವ ಕೆಲಸ ಬೆನಕಭಟ್ಟರು ಮಾಡಿದರು. ಉಳಿದ ಬ್ರಾಹ್ಮಣರು ಆಚರಿಸದಿರುವ, ಕನಸಿನಲ್ಲೂ ನೆನೆಸಿಕೊಳ್ಳದ ಕೆಲವು ಪದ್ಧತಿಗಳನ್ನು ಇವರು ಆರಂಭಿಸಿದರು. ಸ್ಪೃಶ್ಯ – ಅಸ್ಪೃಶ್ಯ, ಬ್ರಾಹ್ಮಣ – ಹೊಲೆಯ-ಎಲ್ಲರಿಗೂ ತಮ್ಮ ಮನೆಬಾಗಿಲನ್ನು ಮುಕ್ತವಾಗಿ ತೆರೆದಿಟ್ಟರು.

ಮನೆಗೆ ಬಂದ ಅನ್ಯ ಜಾತಿಯವರಿಗೆ (ಉಳಿದ ಬ್ರಾಹ್ಮಣ ಮನೆಗಳಲ್ಲಿ ಮಾಡುವಂತೆ) ಪ್ರತ್ಯೇಕವಾಗಿ ದೂರದಲ್ಲಿ ಎಲೆ ಹಾಕಿ ಬಡಿಸದೆ, ತಮ್ಮಾಂದಿಗೇ ಕೂಡಿಸಿಕೊಂಡು ಉಣಬಡಿಸತೊಡಗಿದರು. ಈ ‘ಅಪರಾಧ’ಕ್ಕಾಗಿ ದಾಯಾದಿಗಳ ವಿರೋಧ ಎದುರಿಸುವ ಇರುಸುಮುರುಸು ಉಂಟಾದಾಗಲೂ ಜಗ್ಗದ ಮನೋಭಾವ. ‘ಎಲ್ಲರೂ ಸಮಾನರು’ ಎಂಬುದು ಕೇವಲ ವೇದಿಕೆಯ ಮೇಲಿನ ಘೋಷಣೆಯಾಗಿ ಉಳಿಯಬಾರದು. ವ್ಯವಹಾರದಲ್ಲಿ ಮೂಡಿಬರಬೇಕು. ಇದು ಬೆನಕಭಟ್ಟರ ಅಂತರಂಗದಿಂದ ಹೊಮ್ಮಿದ ವಿಚಾರತರಂಗ.

ಮೊದಮೊದಲು ಅನ್ಯಜಾತಿಯವರಿಗೆ ಬೆನಕಭಟ್ಟರ ಈ ವರ್ತನೆ ಕಂಡು ಮನದಲ್ಲಿ ದಿಗಿಲು. ‘ಹೀಗಾದರೆ ಮುಂದೆ ನಮ್ಮ ಗತಿ ಏನಪ್ಪಾ’ ಎಂದು ಕೆಲವರು ಕಂಗಾಲು. ನಾನೊಮ್ಮೆ ಚಕ್ಕೋಡಬೈಲಿಗೆ ಹೋಗಿದ್ದಾಗ ಒಕ್ಕಲಿಗ ಗೆಳೆಯನೊಬ್ಬ ನನ್ನ ಬಳಿ ತನ್ನ ಅನುಭವ ಬಿಚ್ಚಿಕೊಂಡ:

‘‘ಬೆನಕಭಟ್ಟರ ಮನೆಗೆ ಮೊದಲ ಸಲ ನಾನು ಹೋಗಿದ್ದಾಗ ಅವರು ಜೊತೆಗೇ ಊಟಮಾಡುವಂತೆ ಒತ್ತಾಯಿಸಿದರು. ಅದುವರೆಗೆ ನಮ್ಮ ಜಾತಿ ಬಿಟ್ಟು ಬೇರೆ ಜಾತಿಯವರ ಮನೆಯಲ್ಲಿ ನಾನು ಊಟ ಮಾಡಿದವನಲ್ಲ. ಹಾಗಾಗಿ ನನಗೆ ಏನೋ ಒಂದು ಥರಾ ಮುಜುಗರ. ಭಟ್ಟರ ಒತ್ತಾಯಕ್ಕೆ ಬಗ್ಗಿ ಅವರ ಜೊತೆ ಕುಳಿತು ತಲೆ ತಗ್ಗಿಸಿ ಊಟ ಮಾಡಿದೆ. ಉಂಡ ಬಳಿಕ ನನ್ನ ಎಂಜಲೆಲೆ ಎತ್ತಲು ಹೋದೆ. ಬೆನಕಭಟ್ಟರು ತಡೆದರು. ಎಂಜಲೆಲೆ ತೆಗೆಯಲು ಬಿಡಲಿಲ್ಲ. ನಂತರ ಮನೆಗೆ ಹೋಗಿ ಹೆದರುತ್ತಲೇ ನನ್ನ ತಾಯಿಗೆ ನಡೆದ ವಿಷಯ ತಿಳಿಸಿದೆ. ಅವರು ಗಾಬರಿಯಿಂದ ಬೆಂಕಿಕೆಂಡವಾದರು. ‘ಬ್ರಾಹ್ಮಣರ ಮನೆಯಾಗೆ ಅವ್ರ ಜತೇಲಿ ಕೂತು ಊಟ ಮಾಡಿದ್ದಲ್ದೆ ಎಂಜಲೆಲೇನೂ ಅವರ ಕೈಯಿಂದಲೇ ತೆಗೆಸಿ ಬಂದ್ಯಲ್ಲೋ ಬಿಕನಾಸಿ!, ನಮ್ಮನ್ನು ದೇವ್ರ ಸುಮ್ನೆ ಬುಟ್ಟಾರ! ಯಾವ ಪಾಪಕ್ಕೆ ಹೋಗ್ತೀಯೋ’ ಎಂದು ಊರೆಲ್ಲ ಕೇಳುವಂತೆ ಬೈಗುಳದ ಸುರಿಮಳೆಗರೆದರು. ನನಗೂ ಒಂದು ರೀತಿಯ ಭಯವಾಯ್ತು. ಏನು ಗ್ರಹಚಾರ ಮುಂದೆ ಬರುತ್ತಪ್ಪಾ ಅಂತ ಚಿಂತಿಸಿದೆ. ಆದರೆ ಮತ್ತೆ ಮತ್ತೆ ಬೆನಕ ಭಟ್ಟರ ಮನೆಗೆ ಹೋದಾಗ ಅವರ ಆತ್ಮೀಯ ನೋಟ, ಸ್ನೇಹದ ಮಾತುಕತೆ ಇವನ್ನೆಲ್ಲ ಕಂಡು ‘ನಾನೇನೂ ತಪ್ಪು ಮಾಡಿಲ್ಲ’ ಎನಿಸಿತು. ಮನದಲ್ಲಿದ್ದ ಜಾತಿಭಾವನೆಗಳು ಕ್ರಮೇಣ ದೂರವಾದವು. ಸಂಕೋಚದ ತೆರೆ ಸರಿಯಿತು.’’

ಗಂಡಸರಲ್ಲಿ ಜಾತಿಮತಗಳ ಸಂಕುಚಿತ ಭಾವನೆ ತೆಗೆದುಹಾಕುವುದು ಸುಲಭ. ಆದರೆ ಹೆಂಗಸರಲ್ಲಿ? ಹೆಂಗಸರ ಅಂತರಂಗ ಅರ್ಥಮಾಡಿಕೊಂಡಷ್ಟೇ ಅದು ಕಷ್ಟ! ಬೆನಕಭಟ್ಟರು ಇನ್ನೂ ಒಂದು ಹೆಜ್ಜೆ ಮುಂದಿಟ್ಟರು. ಹೊಸದೊಂದು ಉಪಾಯ ಹುಡುಕಿದರು. ಆ ಊರಿನಲ್ಲಿ ಆ ವರ್ಷ ಮದುವೆಯಾದ ‘ಹೊಸ ಜೋಡಿ’ಗಳನ್ನು ಒಂದು ದಿನ ತಮ್ಮ ಮನೆಗೆ ಆಮಂತ್ರಿಸಿದರು. ಆ ಎಲ್ಲ ದಂಪತಿಗಳ ಕೈಯಿಂದ ಸತ್ಯನಾರಾಯಣ ಪೂಜೆ ಮಾಡಿಸಿದರು. ನಂತರ ಎಲ್ಲರಿಗೂ ಆತ್ಮೀಯ ವಾತಾವರಣದಲ್ಲಿ ಸಾಮೂಹಿಕ ಭೋಜನ. ಊಟವಾದ ಬಳಿಕ ಮುಕ್ತ ವಾತಾವರಣದಲ್ಲಿ ಪರಿಚಯ ಮಾಡಿಕೊಳ್ಳುವ ಅನೌಪಚಾರಿಕ ಮಿಲನ. ಅಲ್ಲಿಗೆ ಬಂದಿದ್ದ ದಂಪತಿಗಳೆಲ್ಲರೂ ತಮ್ಮ ಹೆಸರು, ವೃತ್ತಿಗಳ ಪರಿಚಯ ಮಾಡಿಕೊಟ್ಟರು. ಆಗಲೇ ಗೊತ್ತು ಅಲ್ಲಿಗೆ ಬ್ರಾಹ್ಮಣ- ಒಕ್ಕಲಿಗ- ಹರಿಜನ ಮುಂತಾದ ಹಲವು ಜಾತಿಗಳ ಬಂಧುಗಳು ಸೇರಿದ್ದಾರೆಂಬುದು.ಈ ಮಿಲನದಿಂದ ಅಲ್ಲಿಗೆ ಬಂದವರಿಗೊಂದು ರೋಮಾಂಚಕಾರಿ ಅನುಭವ. ಜಾತಿಯ ವಿಷವರ್ತುಲದಲ್ಲೇ ಸುತ್ತುತ್ತ, ಮನದಾಳವನ್ನು ಮುಚ್ಚಿಕೊಂಡಿದ್ದವರಿಗೆ, ಮುಕ್ತ ಬದುಕಿನ ಬಣ್ಣಿಸಲಾಗದ ಆನಂದ!

ನೂತನ ದಂಪತಿಗಳ ಮಿಲನದ ಈ ಕಾರ್ಯಕ್ರಮ ಈಗ ಚಕ್ಕೋಡಬೈಲಿನಲ್ಲಿ ಹಲವು ವರ್ಷಗಳಿಂದ ನಡೆಯುತ್ತಾ ಬಂದಿದೆ. ಈಗ ಆ ಊರಿನವರು ಮಾತ್ರವಲ್ಲ, ದೂರದ ಶಿವಮೊಗ್ಗ, ತೀರ್ಥಹಳ್ಳಿಗಳಿಂದಲೂ ಎಲ್ಲ ಜಾತಿಗಳ ಹಿಂದೂ ನವದಂಪತಿಗಳು ಆಗಮಿಸಿ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಳಕಗೊಂಡಿದ್ದಾರೆ. ಕಳೆದ ವರ್ಷ ಜೂನ್ 12 ರಂದು ನಡೆದ ಇಂತಹದೊಂದು ಕಾರ್ಯಕ್ರಮದಲ್ಲಿ ಹದಿಮೂರು ಜೊತೆ ನವವಿವಾಹಿತರು ಭಾಗವಹಿಸಿದ್ದರು. ಮುಸ್ಲಿಂ ಮತದಿಂದ ಪರಾವರ್ತನಗೊಂಡು ಹಿಂದುವಾಗಿ, ನಂತರ ವಿವಾಹವಾದ ಕಟ್ಟೇಹಕ್ಕಲಿನ ಮಹಿಳೆಯೂ ಪಾಲ್ಗೊಂಡಿದ್ದುದು ಆ ಬಾರಿಯ ವೈಶಿಷ್ಟ್ಯ.

ಜಾತಿಮತದ ಭೂತವನ್ನು ತಲೆಯಿಂದ ತೆಗೆದುಹಾಕಿ, ಎಲ್ಲರೊಡನೆ ಬೆರೆತು, ‘ನಾವೆಲ್ಲ ಹಿಂದು ನಾವೆಲ್ಲ ಒಂದು’ ಎಂಬ ಭಾವ ಧರಿಸಿ, ಪ್ರೀತಿಯ ಉಡುಗೊರೆಯಾಗಿತ್ತ ಕುಂಕುಮದ ಭರಣಿ ಹಿಡಿದು ಬೆನಕಭಟ್ಟರ ಮನೆಯಂಗಳ ದಾಟುವಾಗ, ಆ ನವವಿವಾಹಿತ ಯುವತಿಯರ ನಡಿಗೆಯಲ್ಲಿ ಅದೇನೋ ಸಂತಸದ ವೈಯಾರ. ಜೀವನದಲ್ಲಿ ಹಿಂದೆಂದೂ ಕಾಣದ ಸಂತೃಪ್ತಿಯ ಭಾವ ಅವರ ಕುಲುಕುಲು ನಗುವಿನಲ್ಲಿ.

ಬೆನಕಭಟ್ಟರ ಮನೆಯಲ್ಲಿ ನಡೆಯುತ್ತಾ ಬಂದಿರುವ ಈ ವೌನಕ್ರಾಂತಿ ಯಶಸ್ವಿಯಾಗಲು ಮನೆಮಂದಿಯದೆಲ್ಲ ಮುಕ್ತ ಸಹಕಾರ. ತಾಯಿ ( ಎಲ್ಲರೂ ಅವರನ್ನು ‘ದೊಡ್ಡಮ್ಮ ಎಂದೇ ಕರೆಯುತ್ತಾರೆ. ಹೃದಯವಂತಿಕೆಯಲ್ಲಿ , ಎಲ್ಲರ ಬಗೆಗಿರುವ ನಿಷ್ಪಕ್ಷಪಾತ ಕಳಕಳಿಯಲ್ಲಿ ನಿಜಕ್ಕೂ ಅವರು ‘ದೊಡ್ಡಮ್ಮ’), ಪತ್ನಿ ವಿಶಾಲಮ್ಮ ಹಾಗೂ ಮಕ್ಕಳು ಬೆನಕಭಟ್ಟರ ಮನದಿಂಗಿತ ಅರ್ಥಮಾಡಿಕೊಂಡು ಅದರಂತೆ ನಡೆಯುವ ಸಹೃದಯರು.

ನಾಲ್ಕು ಹೆಣ್ಣು ಹಾಗೂ ಮೂರು ಗಂಡು ಮಕ್ಕಳ ತಂದೆಯಾಗಿರುವ ಬೆನಕಭಟ್ಟರದು ತುಂಬು ಸಂಸಾರ. ತುಂಬಿದ ಸಂಸಾರದಲ್ಲಿ ಸದಾ ಹಾಲು – ಜೇನಿನಂತೆ ಹರಿವ ಸಾಮರಸ್ಯ, ನಗು ವಿನೋದ. ನೊಂದವರಿಗೆ, ಪತಿತರಿಗೆ ಆ ಮನೆ ಆಸರೆಯ ತಂಪುತಾಣ. ಆ ಮನೆಯ ಬಂಧುಗಳೊಡನೆ ಎರಡು ದಿನ ಕಳೆದರೆ ನೊಂದ ಜೀವಕ್ಕೆ ನಿಧಿದೊರೆತ ಅನುಭವ.

ಬೆನಕಭಟ್ಟರು ಚಿಕ್ಕದಿಂನಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಿಂದ ಆಕರ್ಷಿತರಾದವರು. ಸಂಘದ ವಿಚಾರಕ್ಕೆ ತಕ್ಕಂತೆ ತಮ್ಮ ಇಡೀ ಜೀವನದಲ್ಲಿ ಮಾರ್ಪಾಡು ತಂದುಕೊಂಡರು. ಸಂಘದ ಅನೇಕ ಜವಾಬ್ದಾರಿಗಳನ್ನು ಸುಸೂತ್ರವಾಗಿ ನಿರ್ವಹಿಸಿದ ಅವರು ಈಗ ತೀರ್ಥಹಳ್ಳಿ ತಾಲ್ಲೂಕು ಸಂಘಚಾಲಕರು. ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಕ್ರಿಯಾಶೀಲ ವ್ಯಕ್ತಿ. ತೀರ್ಥಹಳ್ಳಿಯಲ್ಲಿ ಮಾದರಿ ಶಾಲೆಗಳನ್ನು ನಡೆಸಿ, ಜನಮೆಚ್ಚುಗೆ ಗಳಿಸಿರುವ ಸೇವಾಭಾರತಿ ಟ್ರಸ್ಟ್ (ರಿ) ನ ಅಧ್ಯಕ್ಷರು. ರಾಮಕೃಷ್ಣಾಪುರ ಸೇವಾ ಸಹಕಾರ ಸಂಘದ ಅಧ್ಯಕ್ಷರು. ತಾಲೂಕಿನ ಇತರ ಹಲವು ಶಾಲೆಗಳ ಕಮಿಟಿಗಳಿಗೆ ಮಾರ್ಗದರ್ಶಕರು.

ತಮ್ಮ ವಿಶಿಷ್ಟ ಕಾರ್ಯಶೈಲಿ, ಸ್ವಭಾವದಿಂದಾಗಿ ಎಲ್ಲರ ಹೃದಯ ಗೆದ್ದಿರುವ ಅವರು ಸಂಘಕ್ಕೆ ಮಾತ್ರವಲ್ಲ, ಸುತ್ತಮುತ್ತ ನಡೆಯುವ ಎಲ್ಲ ಉತ್ತಮ ಚಟುವಟಿಕೆಗಳಿಗೂ ಚಾಲನೆ ಕೊಡುವ ಪ್ರೇರಕ ಶಕ್ತಿ.

– ದು.ಗು.ಲಕ್ಷ್ಮಣ
(1986 ಮಾರ್ಚ್ 30ರ ‘ವಿಕ್ರಮ’ದಲ್ಲಿ ಪ್ರಕಟವಾದ ಲೇಖನ)

   

Leave a Reply