ಮಾನವ ಸುಖದ ದರ್ಶನ

ಭಾರತ - 0 Comment
Issue Date : 06.10.2014


ಪಂ. ದೀನದಯಾಳ್ ಉಪಾಧ್ಯಾಯರು ತತ್ವಜ್ಞಾನಿಯೂ ದಾರ್ಶನಿಕರೂ ಆಗಿದ್ದರು. ‘ಏಕಾತ್ಮ ಮಾನವ’ ಇದು ಅವರು ಸಮಾಜಕ್ಕೆ ನೀಡಿದ ದರ್ಶನ. ಈ ದರ್ಶನವು ಸಾರಾಂಶ ರೂಪದಲ್ಲಿದೆ. ಅದನ್ನು ಹೆಚ್ಚು ವಿಸ್ತಾರಗೊಳಿಸಲು ಅವರಿಗೆ ಅಧಿಕ ಆಯುಷ್ಯ ಲಭಿಸಲಿಲ್ಲ. 1968ರಲ್ಲಿ ಅವರ ಹತ್ಯೆಯಾಯಿತು. ಸಾಮಾನ್ಯವಾಗಿ ಒಬ್ಬ ತತ್ವಜ್ಞಾನಿಯ ಹತ್ಯೆಯಾಗುವುದಿಲ್ಲ. ಇದಕ್ಕೆ ಎರಡು ಅಪವಾದಗಳಿದ್ದು, ಒಂದು ಸಾಕ್ರೆಟಿಸ್ ಮತ್ತು ಇನ್ನೊಂದು ದೀನದಯಾಳ್ ಉಪಾಧ್ಯಾಯ. ಅವರನ್ನು ಹತ್ಯೆ ಮಾಡಿದ್ದು ಯಾರೆಂಬುದು ಒಂದು ರಹಸ್ಯ. ಕಮ್ಯುನಿಸಂಗೆ ಅವರು ಒಂದು ಪರ್ಯಾಯವನ್ನು ರೂಢಿಸಿದ್ದರಿಂದ, ರಶ್ಯಾದ ಕೆಜಿಬಿಯೇ ಹತ್ಯೆ ಮಾಡಿಸಿರಬಹುದೆಂಬ ಅನುಮಾನ ನಮ್ಮೆಲ್ಲರ ಮನಸ್ಸಿನಲ್ಲಿದೆ.

ನವಸಮಾಜರಚನೆಯ ದರ್ಶನ

ತತ್ವಜ್ಞಾನಿಯು ಮನುಷ್ಯನ ಬಗ್ಗೆ ಯೋಚಿಸುತ್ತಾನೆ. ತತ್ವಜ್ಞಾನವಿರುವುದು ಮನುಷ್ಯನ ಸಲುವಾಗಿಯೇ ಹೊರತು, ಮನುಷ್ಯ ತತ್ವಜ್ಞಾನದ ಸಲುವಾಗಿಯಲ್ಲ. ಪಂ. ದೀನದಯಾಳ್‌ಜಿ ಹೇಳಿದರು, ‘‘ಪರಮೇಶ್ವರನ ಸರ್ವಶ್ರೇಷ್ಠ ಕೃತಿಯು ಮಾನವ. ಈ ಮಾನವನು ತನ್ನನ್ನು ಕಳೆದುಕೊಳ್ಳುತ್ತ ಹೋಗುತ್ತಿದ್ದಾನೆ. ನಾವು ಈ ಮಾನವನಿಗೆ ಅವನ ಕಳೆದು ಹೋದ ಸ್ಥಾನವನ್ನು ದೊರಕಿಸಿಕೊಡಬೇಕಾಗಿದೆ. ಅವನ ಶಕ್ತಿಯ ಜಾಗೃತಿಯುಂಟುಮಾಡಬೇಕು. ದೇವತ್ವ ಪ್ರಾಪ್ತಿ ಮಾಡಿಕೊಳ್ಳಲು ಅವನನ್ನು ಪುರುಷಾರ್ಥಶೀಲನಾಗಿ ಮಾಡಬೇಕು.’’ ಪಂ. ದೀನದಯಾಳ್‌ಜಿ ಮನುಷ್ಯನ ವಿಚಾರವನ್ನು ಮಂಡಿಸಿದ್ದಾರೆ. ಭಾರತೀಯ ಆಧ್ಯಾತ್ಮಿಕ ತತ್ವಜ್ಞಾನವು ಸ್ವಂತದ ಬಗ್ಗೆ ಕೆಲವು ಪ್ರಶ್ನೆಗಳನ್ನು ಎತ್ತಿದೆ. ನಾನು ಯಾರು? ನಾನು ಎಲ್ಲಿಂದ ಬಂದೆ? ಮೃತ್ಯುವಿನ ಬಳಿಕ ನಾನು ಎಲ್ಲಿಗೆ ಹೋಗುವೆ? ಈ ಸೃಷ್ಟಿಯೊಂದಿಗೆ ನನ್ನ ಸಂಬಂಧವೇನು? ಪಂ. ದೀನದಯಾಳ್‌ಜಿ ಈ ಪ್ರಶ್ನೆಗಳನ್ನು ಎತ್ತಿದ್ದಾರೆ, ಆದರೆ ಅವರದು ಆಧ್ಯಾತ್ಮಿಕ ಸಂದರ್ಭವೇನಲ್ಲ. ಅವರ ಸಂಬಂಧವು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ವರೂಪದ್ದು. ಪಂ. ದೀನದಯಾಳ್‌ಜಿಯವರದು ರಾಜಕೀಯ, ಸಾಮಾಜಿಕ, ಆರ್ಥಿಕ ನವಸಮಾಜರಚನೆಯ ದರ್ಶನ.
ಈ ದರ್ಶನದ ಮೊದಲ ಎದ್ದುಕಾಣುವ ವೈಶಿಷ್ಟ್ಯವೆಂದರೆ, ಇದು ಶುದ್ಧ ಭಾರತೀಯ ದರ್ಶನ. ನಮ್ಮ ಶ್ರೇಷ್ಠ ದರ್ಶನ ಪರಂಪರೆಯ ಹಿನ್ನೆಲೆ ಈ ದರ್ಶನಕ್ಕಿದೆ. ವಿದೇಶೀ ವಿಚಾರಗಳ ಎರವಲು ಮತ್ತು ಬೆರಕೆಯೂ ಇಲ್ಲ. ಈ ದರ್ಶನದಲ್ಲಿ ಧರ್ಮವಿಚಾರಗಳಿವೆ, ಅರ್ಥವಿಚಾರಗಳಿವೆ, ರಾಷ್ಟ್ರವಿಚಾರಗಳಿವೆ ಅಲ್ಲದೆ ಸಮಾಜವಿಚಾರಗಳೂ ಇವೆ. ವಿಚಾರಗಳ ಕೇಂದ್ರಬಿಂದು ಮನುಷ್ಯ. ಪಂ.ದೀನದಯಾಳ್‌ಜಿ ಮನುಷ್ಯನ ಬಗ್ಗೆ ಈತ ಹಿಂದೂ, ಈತ ಮುಸಲ್ಮಾನ, ಈತ ಕ್ರೈಸ್ತ, ಈತ ಪಾರ್ಸಿ ಎಂದು ಯೋಚಿಸುತ್ತಿಲ್ಲ. ಮನುಷ್ಯನು ಮನುಷ್ಯನೇ. ಇದು ಅವರ ದರ್ಶನದ ಹಿನ್ನೆಲೆ. ದೀನದಯಾಳ್‌ಜಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದರು. ಹಿಂದೂ ರಾಷ್ಟ್ರವು ಸಂಘದ ವೈಚಾರಿಕ ನಿಲುವು. ಪಂ. ದೀನದಯಾಳ್‌ಜಿ ಈ ಪರಿಕಲ್ಪನೆಯನ್ನು ಏಕಾತ್ಮ ಮಾನವದರ್ಶನದ ಮೂಲಕ ಹಿಮಾಲಯದೆತ್ತರಕ್ಕೆ ಒಯ್ದಿದ್ದಾರೆ. ನಮ್ಮ ಬುದ್ಧಿಜೀವಿ ದುರಂಧರರಿಗೆ ಇದುವರೆಗೂ ಈ ಔನ್ನತ್ಯವನ್ನು ತಲೆಯೆತ್ತಿ ನೋಡಲೂ ಸಾಧ್ಯವಾಗಿಲ್ಲ. ಈ ಅಲ್ಪತನವು ಕಣ್ಣಿಗೆ ಕಟ್ಟುವಂತಿದೆ.

ಮಾನವೀ ಸುಖ?

ಪಂ. ದೀನದಯಾಳ್ ಉಪಾಧ್ಯಾಯರು ಹೇಳುತ್ತಾರೆ, ಮನುಷ್ಯನಿಗೆ ಮನಸ್ಸಿರುತ್ತದೆ, ಮನಸ್ಸಿನ ಹಸಿವೂ ಇರುತ್ತದೆ. ಮನುಷ್ಯನಿಗೆ ಬುದ್ಧಿಯಿರುತ್ತದೆ, ಬುದ್ಧಿಯ ಹಸಿವೂ ಇರುತ್ತದೆ. ಪಂಡಿತ್‌ಜಿ ಹೇಳುತ್ತಾರೆ, ‘‘ಮನಸ್ಸು ಚಿಂತೆಗೀಡಾಗಿದ್ದರೆ ಶರೀರಕ್ಕೆ ಸುಖದ ಅನುಭವವಾಗದು. ಒಬ್ಬನಿಗೆ ಎಲ್ಲ ಶಾರೀರಿಕ ಸುಖಗಳನ್ನು ಒದಗಿಸಿ ಜೈಲಿನಲ್ಲಿಟ್ಟರೆ ಅವನಿಗೆ ಸುಖವೆನಿಸೀತೇ ?’’ ಮನಸ್ಸು ಅಂತಹ ಕಾರಾಗೃಹದಲ್ಲಿ ರಮಿಸಲಾರದು. ಅದೇ ರೀತಿ ಬುದ್ಧಿಯ ಸುಖವೂ ಒಂದಿದೆ. ಆಹಾರ-ಪಾನೀಯಗಳ ಎಲ್ಲ ಸುಖಗಳಿರಬಹುದು, ಆದರೆ ತಲೆಯಲ್ಲಿ ವಿಚಾರಗಳ ಸುಳಿಯಿದ್ದಲ್ಲಿ ಆ ಆಹಾರ-ಪಾನೀಯಗಳಿಂದ ಏನೂ ಸುಖವೆನಿಸದು. ಪಂ.ದೀನದಯಾಳ್‌ಜಿ ಹುಚ್ಚ ಮನುಷ್ಯನ ಉದಾಹರಣೆ ನೀಡಿ ಹೇಳುತ್ತಾರೆ: ಹುಚ್ಚ ಮನುಷ್ಯನಿಗೆ ಊಟ, ವಸ್ತ್ರ ಎಲ್ಲವೂ ಸಿಗುತ್ತಿದ್ದರೂ ಆತ ಸುಖಿಯಾಗಿರುವುದಿಲ್ಲ.
ಮನುಷ್ಯನನ್ನು ಸುಖಿಯಾಗಿಸಲು ವಿವಿಧ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಬಂಡವಾಳಶಾಹಿಯು ಒಂದು ವ್ಯವಸ್ಥೆ, ಸಮಾಜವಾದವು ಇನ್ನೊಂದು ವ್ಯವಸ್ಥೆ, ಇಂತಹದೇ ರೀತಿಯ ರಾಜಕೀಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಪ್ರಜಾತಾಂತ್ರಿಕ ಆಡಳಿತದ ವಿವಿಧ ವ್ಯವಸ್ಥೆಗಳೂ ಜಗತ್ತಿನೆಲ್ಲೆಡೆ ರೂಢಿಯಲ್ಲಿವೆ. ಎಲ್ಲೋ ಅಧ್ಯಕ್ಷೀಯ ಪ್ರಜಾತಂತ್ರವಿದ್ದರೆ, ಇನ್ನೆಲ್ಲೋ ಸಂಸದೀಯ ಪ್ರಜಾತಂತ್ರವಿದೆ. ಕೆಲವು ದೇಶಗಳಲ್ಲಿ ಹೆಸರಿಗಷ್ಟೇ ಅರಸೊತ್ತಿಗೆಯಿದ್ದರೆ, ಇನ್ನೊಂದು ದೇಶದಲ್ಲಿ ಧರ್ಮಗುರು-ಆಧಾರಿತ ಪ್ರಜಾತಂತ್ರವಿದೆ. ಕೆಲವು ದೇಶಗಳಲ್ಲಿ ತಾನಾಶಾಹಿಯಿದ್ದರೆ, ಕೆಲವು ದೇಶಗಳಲ್ಲಿ ಏಕಪಕ್ಷೀಯ ರಾಜಸತ್ತೆಯಿದೆ. ಪ್ರಜಾತಂತ್ರೀಯ ಆಡಳಿತದಲ್ಲಿ ಜನರಿಗೆ ಮತದಾನದ ಅಧಿಕಾರವಿರುತ್ತದೆ. ಮತದಾನದ ಅಧಿಕಾರ ಲಭಿಸಿದರೆ ಹೊಟ್ಟೆ ತುಂಬೀತೇ? ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ, ಪಂ.ದೀನದಯಾಳ್‌ಜಿ. ಹೊಟ್ಟೆ ತುಂಬಿಸುವ ಪ್ರಶ್ನೆಯೊಂದಿಗೆ ಆರ್ಥಿಕ ಸಮತೆಯ ರಾಜಸತ್ತೆಯನ್ನು ನಿರ್ಮಿಸಲು ಯತ್ನಿಸಲಾಯಿತು. ಆದರೆ ಮನುಷ್ಯ ಎಂದರೆ ಕೇವಲ ಹೊಟ್ಟೆಯಲ್ಲ, ಅಲ್ಲದೆ ಈ ಕಮ್ಯುನಿಸ್ಟ್ ರಾಜಸತ್ತೆಯಲ್ಲಿ ಹೊಟ್ಟೆ ತುಂಬಲಿಲ್ಲ, ಅನೇಕ ರೀತಿಯ ನಿರ್ಬಂಧಗಳು ಬಂದವು, ದೇಶವೇ ಕಾರಾಗೃಹವಾಯಿತು.
ಬಂಡವಾಳಶಾಹಿ ರಾಜಸತ್ತೆಯಲ್ಲಿ ಸಂಪತ್ತು ವೃದ್ಧಿಯಾಗುತ್ತಿರುತ್ತದೆ. ಜನರ ಬಳಿಗೆ ಹಣ ಬರುತ್ತದೆ. ಅವರಿಗೆ ಅನ್ನ ಸಿಗುತ್ತದೆ, ಆ ಪ್ರಜಾತಂತ್ರದಲ್ಲಿ ಮತಗಳೂ ಸಿಗುತ್ತವೆ. ಇವೆರಡೂ ವಸ್ತುಗಳು ಸಿಕ್ಕಿದರೆ ಮನುಷ್ಯನಿಗೆ ಸುಖ ಸಿಗುತ್ತದೆಯೇ? ಸುಖದ ಅತ್ಯುತ್ತಮ ಲಕ್ಷಣವೆಂದರೆ ಒರಗುತ್ತಲೇ ನಿದ್ದೆ ಬರಬೇಕು. ಮನಸ್ಸು ಶಾಂತವಾಗಿದ್ದರೆ, ತಲೆಯಲ್ಲಿ ವಿಚಾರಗಳ ಸುಳಿಯಿಲ್ಲದಿದ್ದರೆ ನೆಮ್ಮದಿಯ ನಿದ್ದೆ ಹತ್ತುತ್ತದೆ. ಮನಸ್ಸಿನಲ್ಲಿ ಗೊಂದಲವಿದ್ದರೆ ನಿದ್ದೆ ಹತ್ತದು, ಬುದ್ಧಿ ಅಸ್ಥಿರವಾಗಿದ್ದರೂ ನಿದ್ದೆ ಹತ್ತದು. ಅನ್ನ ಮತ್ತು ಮತ ಸಿಕ್ಕಿಯೂ ಸಹ ಅಮೆರಿಕದ ಸರ್ವಸಾಮಾನ್ಯ ವ್ಯಕ್ತಿ ಬಹು ಅಶಾಂತಿಯಿಂದಿದ್ದಾನೆ. ಪ್ರತಿವರ್ಷ ಅಮೆರಿಕದ ಶಾಲೆಗಳಲ್ಲಿ ಗೋಳಿಬಾರು ನಡೆಯುತ್ತದೆ. ಗೋಳಿಬಾರು ಮಾಡುವವರೂ ಮಕ್ಕಳೇ, ಅದರಿಂದ ಸಾಯುವವರೂ ಮಕ್ಕಳೇ. ಆತ್ಮಹತ್ಯೆಯ ಪ್ರಮಾಣವು ಅಮೆರಿಕದಲ್ಲಿ ಅತ್ಯಧಿಕವಾಗಿದೆ. ಎಲ್ಲ ರೀತಿಯ ಶ್ರೀಮಂತಿಕೆಯಲ್ಲಿ ಮೆರೆಯುತ್ತಿದ್ದ ಮರ್ಲಿನ್ ಮನ್ರೋ ಆತ್ಮಹತ್ಯೆ ಮಾಡಿಕೊಂಡಳು. ದೀನದಯಾಳ್‌ಜಿ ಹೇಳುತ್ತಾರೆ, ‘‘ಅಮೆರಿಕದಲ್ಲಿ ಜನ ನಿದ್ದೆ ಗುಳಿಗೆ ನುಂಗಿ ನಿದ್ದೆ ಮಾಡಲು ಯತ್ನಿಸುತ್ತಾರೆ. ಜನ ಪ್ರಶ್ನಿಸುತ್ತಾರೆ, ನಮಗೆ ಅನ್ನ ಸಿಕ್ಕಿತು, ರಾಜ್ಯ ಸಿಕ್ಕಿತು, ಆದರೆ ನಿದ್ದೆ ಹೋಯಿತು’’. ಬೇರೆ ಮಾತಿನಲ್ಲಾದರೆ ಮನುಷ್ಯನಿಗೆ ಸುಖ ಸಿಗಲಿಲ್ಲ, ಏಕೆಂದರೆ ಮನುಷ್ಯನು ಸುಖದ ಶೋಧನೆಯನ್ನು ತಪ್ಪು ದಿಶೆಯಲ್ಲಿ ಮಾಡುತ್ತಿದ್ದಾನೆ.
ಪಂ. ದೀನದಯಾಳ್‌ಜಿ ಹೇಳುತ್ತಾರೆ, ‘‘ಮನುಷ್ಯ ಸುಖ ಅನುಭವಿಸಬೇಕಾದರೆ ಶರೀರ, ಮನಸ್ಸು, ಬುದ್ಧಿ ಮತ್ತು ಆತ್ಮ ಈ ನಾಲ್ಕರ ಬಗ್ಗೆ ಸಮಗ್ರವಾಗಿ ಆಲೋಚಿಸಬೇಕು. ಪಶ್ಚಿಮದ ಆಲೋಚನೆಯಲ್ಲಿ ಅಂತಹ ವಿಚಾರವಿಲ್ಲ. ನಮ್ಮಲ್ಲಿ ಈ ವಿಚಾರಗಳ ಒಂದು ಪರಂಪರೆಯಿದೆ. ಪಂ. ದೀನದಯಾಳ್‌ಜಿ ಈ ಪರಂಪರೆಯನ್ನು ಜ್ಞಾಪಿಸುತ್ತಾರೆ. ಭಾರತೀಯ ಸಂಸ್ಕೃತಿಯು ಆತ್ಮದ ಬಗ್ಗೆ ಯೋಚಿಸುತ್ತದೆ. ಕೆಲವರು ಆತ್ಮ ಎಂಬ ಶಬ್ದವನ್ನೇ ಆಕ್ಷೇಪಿಸುತ್ತಾರೆ. ಅವರು ಹೇಳುತ್ತಾರೆ, ಆತ್ಮ ಎಂಬ ಹೆಸರಿನ ಯಾವ ಸಂಗತಿಯೂ ಜಗತ್ತಿನಲ್ಲಿಲ್ಲ. ಯಾರಾದರೂ ಆ ಆತ್ಮವನ್ನು ನೋಡಿದ್ದಾರೆಯೇ? ನಾವು ನೋಡಲು ಸಾಧ್ಯವಾಗದಿದ್ದುದರ ಅಸ್ತಿತ್ವವನ್ನು ಒಪ್ಪುವುದೆಂತು? ಅವರು ತಮ್ಮನ್ನು ಅನಾತ್ಮವಾದಿಯೆಂದು ಹೇಳಿಕೊಳ್ಳುತ್ತಾರೆ. ಈ ಪ್ರಶ್ನೆ ಇಂದೇ ಎದ್ದಿದ್ದಲ್ಲ. ಈ ಪ್ರಶ್ನೆಯು ಬಹು ಪ್ರಾಚೀನ ಕಾಲದಿಂದಲೂ ಇದೆ.
ಛಾಂದೋಗ್ಯೋಪನಿಷತ್ತಿನಲ್ಲಿ ಶ್ವೇತಕೇತುವಿನ ಕಥೆಯಿದೆ. ಶ್ವೇತಕೇತು ಗುರುಗೃಹದಲ್ಲಿದ್ದು ಮರಳಿ ತನ್ನ ತಂದೆಯ ಬಳಿಗೆ ಹೋದ. ತಂದೆ ಅವನಿಗೆ ಪ್ರಶ್ನೆ ಕೇಳುತ್ತಾರೆ, ಯಾವುದನ್ನು ತಿಳಿದರೆ ಎಲ್ಲವನ್ನೂ ತಿಳಿದಂತಾಗುವುದೋ ಅಂತಹದ್ದು ಯಾವುದಿದೆ? ಶ್ವೇತಕೇತುವಿಗೆ ಪ್ರಶ್ನೆಯ ಅರ್ಥ ತಿಳಿಯಲಿಲ್ಲ, ಅದೇನೆಂದು ತಂದೆಗೆ ಕೇಳಿದ. ಅವರು ಅವನಿಗೆ ಹೇಳಿದರು, ಎದುರಿನ ನ್ಯಗ್ರೋಧ (ಆಲದ) ವೃಕ್ಷದ ಹಣ್ಣು ತೆಗೆದುಕೊಂಡು ಬಾ. ಶ್ವೇತಕೇತು ಹಣ್ಣು ತೆಗೆದುಕೊಂಡು ಬರುತ್ತಾನೆ. ತಂದೆ ಅವನಿಗೆ ಹೇಳುತ್ತಾರೆ, ಈ ಹಣ್ಣನ್ನು ಕತ್ತರಿಸು. ಶ್ವೇತಕೇತು ಹಣ್ಣನ್ನು ಕತ್ತರಿಸುತ್ತಾನೆ. ಒಳಗಡೆ ನಿನಗೇನು ಕಾಣುತ್ತಿದೆ? ತಂದೆ ಕೇಳುತ್ತಾರೆ. ಶ್ವೇತಕೇತು ಹೇಳುತ್ತಾನೆ, ನನಗೆ ಕೆಲವು ಬೀಜಗಳು ಕಾಣುತ್ತವೆ. ತಂದೆ ಹೇಳುತ್ತಾರೆ, ಒಂದು ಬೀಜವನ್ನು ಕತ್ತರಿಸು. ಶ್ವೇತಕೇತು ಬೀಜವನ್ನು ಕತ್ತರಿಸುತ್ತಾನೆ. ಈಗ ನಿನಗೇನು ಕಾಣಿಸುತ್ತಿದೆ? ಶ್ವೇತಕೇತು ಹೇಳುತ್ತಾನೆ, ನನಗೇನೂ ಕಾಣಿಸುತ್ತಿಲ್ಲ. ತಂದೆ ಹೇಳುತ್ತಾರೆ, ನಿನಗೆ ಕಾಣದಿರುವ ವಸ್ತುವಿನಲ್ಲಿ ಈ ಪ್ರಚಂಡ ವೃಕ್ಷ ಅಡಗಿದೆ. ಕಾಣದಿರುವ ಆ ಮೂಲತತ್ವದಲ್ಲಿ ಸಮಗ್ರ ವಿಶ್ವಅಡಗಿದ್ದು, ಶ್ವೇತಕೇತು ಅದೇ ನೀನು. ಇಂತಹ ಚರ್ಚೆಗಳು ನಮ್ಮ ಮೂಲಭೂತ ವಾಙ್ಮಯದಲ್ಲಿ ಹೇರಳವಾಗಿವೆ.

ಮನುಷ್ಯ ಎಂದರೇನು?

 ಪಂ. ದೀನದಯಾಳ್‌ಜಿ ಮನುಷ್ಯನ ಬಗ್ಗೆ ಯೋಚಿಸುತ್ತಿದ್ದುದು ಹೇಗೆ? ಮನುಷ್ಯ ಎಂದರೇನು? ಈ ಪ್ರಶ್ನೆಗೆ ವಿವಿಧ ರೀತಿಯಲ್ಲಿ ಉತ್ತರಿಸಲಾಗುತ್ತದೆ. ‘ಮನುಷ್ಯನು ಸಾಮಾಜಿಕ ಪ್ರಾಣಿ, ಮನುಷ್ಯನು ಆರ್ಥಿಕ ಪ್ರಾಣಿ, ಮನುಷ್ಯನು ಧಾರ್ಮಿಕ ಪ್ರಾಣಿ’ ಎಂದು ನಾನಾ ರೀತಿಗಳಲ್ಲಿ ಈ ಪ್ರಶ್ನೆಗಳಿಗೆ ಉತ್ತರಿಸಲು ಯತ್ನಿಸಿದ್ದಾರೆ. ಮನುಷ್ಯನು ಪ್ರಾಣಿಯೆಂಬುದು ಅದರಲ್ಲಿನ ಸಮಾನ ವಿಷಯವಾಯಿತು. ಪಂ. ದೀನದಯಾಳ್‌ಜಿ ಮನುಷ್ಯನನ್ನು ಕೇವಲ ಪ್ರಾಣಿಯೆಂದು ಭಾವಿಸುತ್ತಿಲ್ಲ. ಮನುಷ್ಯನು ದೈವೀ ಚೈತನ್ಯದ ಸರ್ವಶ್ರೇಷ್ಠ ಆವಿಷ್ಕಾರವಾಗಿದ್ದಾನೆ. ಶರೀರ, ಮನಸ್ಸು, ಬುದ್ಧಿ ಮತ್ತು ಆತ್ಮವು ಮನುಷ್ಯನ ನಾಲ್ಕು ಅಂಗಗಳು. ಈ ನಾಲ್ಕು ಅಂಗಗಳಿಂದ ಮನುಷ್ಯ ತಯಾರಾಗುತ್ತಾನೆ. ಮನುಷ್ಯನ ರೂಪದಲ್ಲಿ ಈ ನಾಲ್ಕೂ ಅಂಗಗಳ ಉತ್ತಮ ವಿಕಾಸವಾಗಿದೆ.

ಮನುಷ್ಯನ ಜೀವನದ ಗುರಿ ಯಾವುದು? ಪ್ರತಿಯೊಬ್ಬನ ಗುರಿಯು ಹೆಚ್ಚೆ ಚ್ಚು ಸುಖ ಗಳಿಸುವುದಾಗಿದೆ. ದುಃಖ ಯಾರಿಗೂ ಬೇಡ. ಈಗ ಪ್ರಶ್ನೆಯೇಳುತ್ತದೆ, ಸುಖ ಯಾವುದರಲ್ಲಿದೆ? ನಮ್ಮಂತಹ ಸಾಮಾನ್ಯ ಜನ ಇಂದ್ರಿಯ ಸುಖವನ್ನು ಸುಖವೆಂದು ಭಾವಿಸುತ್ತಾರೆ. ಚೆನ್ನಾಗಿ ತಿನ್ನಲು ಸಿಗಬೇಕು , ಉತ್ತಮ ವಸ್ತ್ರಗಳು ಸಿಗಬೇಕು, ಅಲಂಕಾರವಸ್ತುಗಳು ಸಿಗಬೇಕು, ಕಣ್ಣಿಗೆ ಆನಂದ ನೀಡುವಂಥವು ನೋಡಲು ಸಿಗಬೇಕು, ಕಿವಿಗೆ ಇಂಪಾದದ್ದು ಕೇಳಲು ಸಿಗಬೇಕು ಎಂಬ ಅಭಿಲಾಷೆಯು ಎಲ್ಲರಿಗೂ ಇರುತ್ತದೆ. ಆಹಾರ, ನಿದ್ರೆ, ಭಯ ಮತ್ತು ಕಾಮವಾಸನೆ ಇವು ಪ್ರತಿಯೊಂದು ಪ್ರಾಣಿಗೂ ಇರುತ್ತವೆ. ಮನುಷ್ಯನನ್ನು ಬಿಟ್ಟು ಇತರ ಪ್ರಾಣಿಗಳು ಈ ನಾಲ್ಕು ವಿಷಯದಿಂದಾಚೆ ಹೋಗುತ್ತಿಲ್ಲ, ಆದರೆ ಮನುಷ್ಯ ಹಾಗಲ್ಲ.

ಆತ್ಮತತ್ವದ ಸಾಕ್ಷಾತ್ಕಾರ

ಈ ಆತ್ಮಸಾಕ್ಷಾತ್ಕಾರಕ್ಕೆ ಶರೀರ ಬೇಕಾಗುತ್ತದೆ. ಅದು ನಿರೋಗಿಯಾಗಿರಬೇಕು. ದುರ್ಬಲ ವ್ಯಕ್ತಿಯು ಈ ಆತ್ಮತತ್ವದ ಸಾಕ್ಷಾತ್ಕಾರ ಮಾಡಲಾರ. ಎಂದೇ ಶರೀರದ ಬಗ್ಗೆ ಯೋಚಿಸಬೇಕಾಗುತ್ತದೆ. ಶರೀರದ ಭೌತಿಕ ಅವಶ್ಯಕತೆಗಳನ್ನು ಪೂರೈಸಬೇಕು. ಈ ಭೌತಿಕ ಅವಶ್ಯಕತೆಗಳನ್ನು ಪೂರೈಸಲು ವಿವಿಧ ರಚನೆಗಳನ್ನು ನಿರ್ಮಿಸಬೇಕು. ಈ ರಚನೆಗಳು ಮನುಷ್ಯನ ಶರೀರ, ಮನಸ್ಸು, ಬುದ್ಧಿ ಮತ್ತು ಆತ್ಮದ ಅವಶ್ಯಕತೆಗಳನ್ನು ಪೂರೈಸುವಂತಿರಬೇಕು.
ಪಂ. ದೀನದಯಾಳ್‌ಜಿ ಹೇಳುತ್ತಾರೆ, ಮನುಷ್ಯ ಏಕಾಂಗಿ ಪ್ರಾಣಿಯಲ್ಲ. ಮನುಷ್ಯ ಬಹುಅಂಗಿ. ಆತ ಬಹುಅಂಗಿ ಹೇಗೆಂಬುದನ್ನು ಅವರು ಹೀಗೆ ಹೇಳುತ್ತಾರೆ. ಮನುಷ್ಯನು ಕುಟುಂಬದ ಘಟಕನಾಗಿದ್ದು, ವಿವಿಧ ಸಂಬಂಧಗಳಿಂದ ಬೆಸೆದುಕೊಂಡಿದ್ದಾನೆ. ಏಕಕಾಲದಲ್ಲೇ ಆತ ಮಗ, ಸೋದರ, ತಂದೆ, ಪತಿ, ಚಿಕ್ಕಪ್ಪ, ಮಾವನಾಗಿರುತ್ತಾನೆ. ಈ ಸಮಯದಲ್ಲೇ ಸಮಾಜದಲ್ಲಿ ವ್ಯವಹರಿಸುವಾಗ ಆತ ವಿವಿಧ ಸಂಸ್ಥೆಗಳೊಂದಿಗೆ ಸೇರಿಕೊಳ್ಳುತ್ತಾನೆ. ಆತ ಆ ಸಂಸ್ಥೆಗಳ ಅಂಗವಾಗಿರುತ್ತಾನೆ. ಇಷ್ಟೊಂದು ವಿವಿಧ ಅಂಗಗಳಿದ್ದರೂ ಪ್ರತಿಯೊಬ್ಬ ವ್ಯಕ್ತಿಯೂ ಪರಸ್ಪರ ಸಹಕಾರ, ಸಮನ್ವಯ, ಪೂರಕತೆ ಮತ್ತು ಏಕಾತ್ಮತೆಯ ಆಧಾರದ ಮೇಲೆಯೇ ಜೀವನದಲ್ಲಿ ಮುನ್ನಡೆಯಬೇಕು.
ಪರಸ್ಪರ ಸಹಕಾರ, ಸಮನ್ವಯ, ಪೂರಕತೆ ಮತ್ತು ಏಕಾತ್ಮತೆಯನ್ನು ಸಾಧಿಸುವ ಬಗೆ ಹೇಗೆಂಬ ಒಂದು ನಿಯಮಾವಳಿ ಸಿದ್ಧವಾಗಿತ್ತು. ಈ ನಿಯಮಾವಳಿಯನ್ನು ನಮ್ಮಲ್ಲಿ ಕರ್ತವ್ಯ ಎಂದು ಹೇಳಲಾಗಿದೆ. ಪ್ರತಿಯೊಂದು ಸಂಬಂಧದ ಕರ್ತವ್ಯವನ್ನು ವ್ಯಕ್ತಿಯು ಪಾಲಿಸಬೇಕು. ಈ ಕರ್ತವ್ಯಪಾಲನೆಯಲ್ಲಿ ದೋಷವುಂಟಾದರೆ ಅಥವಾ ಏನೋ ಗೊಂದಲವುಂಟಾದರೆ ಆಗ ಪರಸ್ಪರ ಸಹಕಾರ, ಸಮನ್ವಯ, ಪೂರಕತೆ ಮತ್ತು ಏಕಾತ್ಮತೆಗೆ ಧಕ್ಕೆಯಾಗುತ್ತದೆ. ಕರ್ತವ್ಯಪಾಲನೆಯಲ್ಲಿ ತಪ್ಪಿ ನಡೆದಲ್ಲಿ ಕುಟುಂಬದಲ್ಲೂ,ಸಮಾಜದಲ್ಲೂ ಸಂಘರ್ಷವುಂಟಾಗುತ್ತದೆ. ನಾವು ವಿವಿಧ ರೀತಿಗಳಲ್ಲಿ ಇದನ್ನು ಅನುಭವಿಸುತ್ತಿದ್ದೇವೆ. ಇಂತಹ ವಾತಾವರಣದಲ್ಲಿ ವ್ಯಕ್ತಿಸುಖ ಬಲಿಯಾಗುತ್ತದೆ.

ಸಂಘರ್ಷ- ಸಾಮಾಜಿಕ ವಿಕೃತಿ

ವ್ಯಕ್ತಿಗಳು ಸೇರಿ ಸಮಾಜವಾಗುತ್ತದೆ. ವ್ಯಕ್ತಿಯ ಅಸ್ತಿತ್ವವು ಸ್ವಯಂಭೂ ಸತ್ಯವಾಗಿರುವಂತೆ, ಸಮಾಜದ ಅಸ್ತಿತ್ವವೂ ಸ್ವಯಂಭೂ ಆಗಿದೆ. ಸಮಾಜದ ನಿರ್ಮಾಣವು ಸಾಮಾಜಿಕ ಒಪ್ಪಂದಗಳನ್ನು ಮಾಡಿ ಆಗುವಂತಹದ್ದಲ್ಲ, ಅದು ತಾನಾಗಿಯೇ ಆಗುತ್ತದೆ. ನಮ್ಮಲ್ಲಿ ವಿದೇಶಗಳಿಂದ ಬಂದ ವಿಚಾರಗಳ ಬಹಳ ಪ್ರಭಾವವಿದೆ. ವ್ಯಕ್ತಿಯೇ ಅಂತಿಮ ಮೌಲ್ಯವೆಂದು, ವಿದೇಶಿ ವಿಚಾರಗಳು ನಮಗೆ ಕಲಿಸುತ್ತವೆ. ಅದಕ್ಕಾಗಿ ವ್ಯಕ್ತಿಯನ್ನು ಎಲ್ಲ ರೀತಿಯ ಬಂಧನಗಳಿಂದ ಮುಕ್ತವಾಗಿಡಬೇಕು. ಈ ವಿಚಾರದಿಂದಲೇ ಹೊರಬಿದ್ದ ಇನ್ನೊಂದು ವಿಚಾರವೆಂದರೆ, ಕುಟುಂಬ, ವಿವಾಹಗಳ ಬಂಧನವನ್ನು ಪಾಲಿಸುವುದೇಕೆ? ವ್ಯಕ್ತಿ ಮತ್ತು ಸಮಾಜಗಳ ಸಂಘರ್ಷದಿಂದ ವಾತಾವರಣ ಸೃಷ್ಟಿಯಾಗುತ್ತದೆ. ವ್ಯಕ್ತಿ ಮತ್ತು ರಾಜ್ಯಸಂಸ್ಥೆ ಇವುಗಳಲ್ಲಿ ಸಂಘರ್ಷವಿರುತ್ತದೆ. ಪಂಡಿತ್‌ಜಿ ಹೇಳುತ್ತಾರೆ, ಇದು ವಿಚಾರವಲ್ಲ, ವಿಕೃತಿಯಾಗಿದೆ. ನಮ್ಮಲ್ಲಿ ಈ ರೀತಿ ಯೋಚಿಸುವುದಿಲ್ಲ. ನಾವೆಲ್ಲ ಒಬ್ಬನೇ ವಿರಾಟ್‌ಪುರುಷನ ಅಂಗಗಳು, ಎಂಬ ವಿಚಾರವನ್ನು ಮಂಡಿಸಲಾಗಿದೆ. ಶರೀರದ ವಿವಿಧ ಅವಯವಗಳಿರುವಂತೆಯೇ, ನಾವೂ ಸಮಾಜದ ವಿವಿಧ ಅವಯವಗಳು. ಶರೀರದ ಅವಯವಗಳ ನಡುವೆ ಸಂಘರ್ಷವಾಗುವುದಿಲ್ಲ, ಹಾಗೆಯೇ ಸಮಾಜದ ವಿವಿಧ ಅಂಗಗಳ ನಡುವೆಯೂ ಸಂಘರ್ಷವಾಗುವುದಿಲ್ಲ.
ಪುರುಷಸೂಕ್ತಕ್ಕೆ ಅನೇಕರು ವಿಕೃತ ರೀತಿಯಲ್ಲಿ ವಿವರಣೆ ನೀಡಿದ್ದಾರೆ. ಪಂಡಿತ್‌ಜಿಗೆ ಅವು ಮಾನ್ಯವಿಲ್ಲ, ಅವರು ಹೇಳುತ್ತಾರೆ, ‘‘ವಿರಾಟ್ ಪುರುಷನ ಮಸ್ತಕ, ಭುಜಗಳು, ಮಂಡಿಗಳು ಮತ್ತು ಕಾಲುಗಳಿಂದ ಅನುಕ್ರಮವಾಗಿ ಬ್ರಾಹ್ಮಣ, ಕ್ಷತ್ರಿಯ ,ವೈಶ್ಯ ಮತ್ತು ಶೂದ್ರರು ಜನಿಸಿದರು. ಈ ರೀತಿ ಯೋಚಿಸಿದರೆ ತಲೆ, ಕೈ, ಮಂಡಿ, ಕಾಲುಗಳಲ್ಲಿ ಯಾವುದೇ ಸಂಘರ್ಷವಿರುತ್ತದೆಯೇ? ಅಂತಹ ಸಂಘರ್ಷವಿದೆಯೆಂದು ಮಾನ್ಯಮಾಡಿದರೆ ಶರೀರವೇ ಚಲಿಸಲಾರದು. ಸಂಘರ್ಷವಿಲ್ಲದೆ ಎಲ್ಲರಲ್ಲೂ ಏಕಾತ್ಮತೆಯಿದೆ, ಅವರಲ್ಲಿ ಪೂರಕತೆಯಿದೆ, ಆತ್ಮೀಯತೆಯಿದೆ.’’ ಜಾತಿ-ಪಂಥಗಳ ಆಧಾರದ ಮೇಲೆ ಉಚ್ಚ-ನೀಚತೆ ಮತ್ತು ಅದರ ಆಧಾರದ ಮೇಲೆ ಸಂಘರ್ಷ ಇದು ನಮ್ಮ ರಾಜಕೀಯ ಮತ್ತು ಸಾಮಾಜಿಕ ಜೀವನದ ಒಂದು ಭಾಗವಾಗಿದೆ. ಸಂಘರ್ಷದ ಈ ಸ್ಥಿತಿಯು ಒಂದು ಸಾಮಾಜಿಕ ವಿಕೃತಿ, ಎನ್ನುತ್ತಾರೆ ಪಂ. ದೀನದಯಾಳ್ ಉಪಾಧ್ಯಾಯರು. ಏಕಾತ್ಮತೆ ಮತ್ತು ಆತ್ಮೀಯತೆಯು ನಮ್ಮ ಸ್ಥಾಯೀಭಾವವಾಗಿದೆ.

ಚಿತಿ?
ಮನುಷ್ಯರು ಸೇರಿ ಸಮಾಜವಾಗುತ್ತದೆ ಹಾಗೂ ಮನುಷ್ಯನ ಮನಸ್ಸು, ಬುದ್ಧಿ, ಆತ್ಮಗಳಿರುವಂತೆಯೇ ಸಮಾಜದ ಮನಸ್ಸು, ಬುದ್ಧಿ ಮತ್ತು ಆತ್ಮಗಳೂ ಇರುತ್ತವೆ. ಪಂ. ದೀನದಯಾಳ್‌ಜಿ ಹೇಳುತ್ತಾರೆ, ವ್ಯಕ್ತಿಯು ಯೋಚಿಸುವ ಪದ್ಧತಿ ಹಾಗೂ ಸಮಾಜವು ಯೋಚಿಸುವ ಪದ್ಧತಿ ಬೇರೆ ಬೇರೆಯೇ ಆಗಿರುತ್ತವೆ. ಅವರು ಒಂದು ಉದಾಹರಣೆ ನೀಡಿದ್ದಾರೆ. ಸರ್ವಸಾಮಾನ್ಯ ವಿದ್ಯಾರ್ಥಿ ಶಾಂತವಾಗಿರುತ್ತಾನೆ. ಆತ ವಿಧ್ವಂಸಕ್ಕೆ ಕೈಹಾಕುವುದಿಲ್ಲ, ಆದರೆ ಎಲ್ಲ ವಿದ್ಯಾರ್ಥಿಗಳು ಚಳವಳಿ ಹೂಡಿದರೆಂದರೆ ಏನು ಮಾಡುವರೆಂದು ಯಾರೂ ಹೇಳಲಾರರು. ಅವರು ಬಹಳ ವಿಧ್ವಂಸಕೃತ್ಯ ಮಾಡುವರು.
ಒಂದು ಭೂಭಾಗದಲ್ಲಿ ವಾಸಿಸುವ ಸಮಾಜವು ಒಂದು ಸಂಸ್ಕೃತಿಯಿಂದಾಗಿ ರಾಷ್ಟ್ರವಾಗುತ್ತದೆ. ಪಂ. ದೀನದಯಾಳ್‌ಜಿ ಹೇಳುತ್ತಾರೆ, ‘‘ಒಂದು ಮಾನವ ಸಮುದಾಯದಲ್ಲಿ ಒಂದು ವ್ರತ, ಒಂದು ವಿಚಾರ, ಸಮಾನ ಆದರ್ಶಗಳು ಹಾಗೂ ಭೂಮಿ ಬಗೆಗೆ ಮಾತೃತ್ವದ ಭಾವನೆ ಮೂಡಿ ಬಂದಾಗ ಆ ಸಮಾಜವು ರಾಷ್ಟ್ರವಾಗುತ್ತದೆ. ಇವುಗಳಲ್ಲಿ ಒಂದು ಸಂಗತಿ ಇಲ್ಲದಿದ್ದರೂ ರಾಷ್ಟ್ರವಾಗದು. ಶರೀರದಲ್ಲಿ ಎಲ್ಲಿಯವರೆಗೆ ಆತ್ಮವಿರುವುದೋ, ಅಲ್ಲಿ
ಯವರೆಗೆ ಶರೀರ ಸಚೇತನವಾಗಿರುತ್ತದೆ. ಆತ್ಮ ಹೋಯಿತೆಂದರೆ ಶರೀರ ಮೃತಪಡುತ್ತದೆ.’’ ಪಂ. ದೀನದಯಾಳ್‌ಜಿ ರಾಷ್ಟ್ರದ ಆತ್ಮವನ್ನು ‘ಚಿತಿ’ ಎನ್ನುತ್ತಾರೆ. ಚಿತಿಯು ಆ ಸಮಾಜದ ಮೂಲಪ್ರವೃತ್ತಿಯಾಗಿದೆ.
ಈ ಚಿತಿಯಿಂದಾಗಿ ರಾಷ್ಟ್ರ ಜೀವಂತವಾಗಿರುತ್ತದೆ. ಅದೇ ರಾಷ್ಟದ ಸಂಸ್ಕೃತಿಯ ದಿಶೆಯನ್ನು ನಿರ್ಧರಿಸುತ್ತದೆ. ಈ ಚಿತಿಯಿಂದಾಗಿಯೇ ನಮ್ಮ ಧರ್ಮ ಯಾವುದು ಮತ್ತು ಅಧರ್ಮ ಯಾವುದು ಎಂಬ ಜ್ಞಾನವುಂಟಾಗುತ್ತದೆ. ಮಹಾಭಾರತದ ಯುದ್ಧವು ನಮಗೆ ರಾಜ್ಯಕ್ಕಾಗಿ ನಡೆದ ಯುದ್ಧವೆಂದು ಅನಿಸದೆ, ಧರ್ಮಯುದ್ಧವೆಂದು ಅನಿಸುತ್ತದೆ. ರಾಮ-ರಾವಣ ಯುದ್ಧವು ಭೂಮಿಗಳಿಕೆಗೆ ನಡೆದ ಯುದ್ಧವೆನಿಸದೆ, ಈ ಯುದ್ಧವೂ ಧರ್ಮಯುದ್ಧವೆಂದು ನಾವು ಭಾವಿಸುತ್ತೇವೆ. ಈ ಚಿತಿಯಿಂದಾಗಿ 1947ರಲ್ಲಿ ನಡೆದ ಭಾರತದ ವಿಭಜನೆಯು ನಮಗೆ ಅಧಾರ್ಮಿಕವೆನಿಸುತ್ತದೆ. ಅಲ್ಲದೆ ಅದರಿಂದ ಮಾತೃಭೂಮಿಯ ವಿಭಜನೆಯಾಯಿತೆಂಬ ಭಾವನೆ ನಮ್ಮಲ್ಲಿದೆ. ಭಾರತದ ಸಾಮಾಜಿಕ ದೋಷಗಳನ್ನು ದೂರಗೊಳಿಸಿದ ಸಂತ ಮತ್ತು ಸಮಾಜಸುಧಾರಕರು ಈ ಚಿತಿಯಿಂದಾಗಿಯೇ ನಮಗೆ ಪರಕೀಯರೆಂದು ಅನಿಸುತ್ತಿಲ್ಲ. ಅವರ ಭಾಷೆ ಕಟುವಾಗಿದ್ದರೂ ನಾವು ಅವರನ್ನು ಗೌರವಿಸುತ್ತೇವೆ.

ಮಾನವ ದರ್ಶನ

ವ್ಯಕ್ತಿಯ ಸುಖವಿರುವುದು ಸಮಾಜದ ಸುಸ್ಥಿತಿಯಲ್ಲಿ, ಸಮಾಜವು ಸೇರಿ ನಿರ್ಮಾಣಗೊಳ್ಳುವ ರಾಷ್ಟ್ರದ ಸುಸ್ಥಿತಿಯಲ್ಲಿ. ರಾಷ್ಟ್ರವು ಸುಸ್ಥಿತಿಯಲ್ಲಿರಲು ಅದರ ಸಂಸ್ಥಾಜೀವನ ಉತ್ತಮವಾಗಿರಬೇಕು. ಅದು ರಾಷ್ಟ್ರದ ಚಿತಿಗೆ ಅನುಕೂಲವಾಗಿರಬೇಕು. ರಾಷ್ಟ್ರದ ಸಂಸ್ಥಾಜೀವನವು ಸಮಾಜವ್ಯವಸ್ಥೆ ಹಾಗೂ ರಾಷ್ಟ್ರದ ಧರ್ಮಸಂಸ್ಥಾ ಜೀವನವ್ಯವಸ್ಥೆಯಾಗಿದೆ. ಪಂಡಿತ್‌ಜಿ ಪರಸ್ಪರ ಪೂರಕತೆ, ಪರಸ್ಪರಾವಲಂಬನೆ ಮತ್ತು ಪರಸ್ಪರಾನುಕೂಲ ಹೀಗೆ ಮೂರು ಶಬ್ದಗಳನ್ನು ಬಳಸಿದ್ದಾರೆ. ನಮ್ಮೆಲ್ಲರ ಜೀವನವು ಪರಸ್ಪರ ಅಖಂಡವಾಗಿ ಬೆಸೆದುಕೊಂಡಿದೆ. ಉದಾಹರಣೆಗೆ, ಒಂದು ಬಿಂದುವಿನಿಂದ ವರ್ತುಲ ಶುರುವಾಗುತ್ತದೆ ಹಾಗೂ ಆ ಬಿಂದುವಿನ ಸುತ್ತಲೂ ಅಖಂಡ ಮಂಡಲಾಕಾರ ರಚನೆ ತಯಾರಾಗುತ್ತದೆ. ಆ ಬಿಂದು ಎಂದರೆ ವ್ಯಕ್ತಿ ಹಾಗೂ ವ್ಯಕ್ತಿಯ ಸುತ್ತಲೂ ನಿರ್ಮಾಣಗೊಳ್ಳುವ ರಚನೆಯೆಂದರೆ ಕುಟುಂಬ, ಸಮಾಜ, ರಾಜ್ಯ, ರಾಷ್ಟ್ರ, ವಿಶ್ವ ಮತ್ತು ಬ್ರಹ್ಮಾಂಡ. ಇವೆಲ್ಲದರಲ್ಲಿ ಪರಸ್ಪರ ಪೂರಕತೆ, ಪರಸ್ಪರಾವಲಂಬನೆ ಮತ್ತು ಪರಸ್ಪರಾನುಕೂಲತೆಯಿರುತ್ತದೆ. ಅದಿಲ್ಲದೆ ಸೃಷ್ಟಿಯ ವ್ಯವಸ್ಥೆ ಸಾಧ್ಯವಿಲ್ಲ. ಈ ಪರಸ್ಪರ ಪೂರಕತೆ, ಪರಾವಲಂಬನೆ ಮತ್ತು ಪರಸ್ಪರಾನುಕೂಲತೆ ಹೇಗಿರುತ್ತವೆ? ಮಧ್ಯಪೂರ್ವದಲ್ಲಿ ಯುದ್ಧ ಶುರುವಾಯಿತೆಂದರೆ ತೈಲದ ಬೆಲೆ ಏರುತ್ತದೆ. ತೈಲದ ಬೆಲೆ ಏರಿತೆಂದರೆ ಬೆಲೆಏರಿಕೆ ವೃದ್ಧಿಯಾಗುತ್ತದೆ, ಬೆಲೆಏರಿಕೆ ವೃದ್ಧಿಸಿತೆಂದರೆ ನಮ್ಮ ಕಿಸೆ ಖಾಲಿಯಾಗುತ್ತದೆ. ವಾತಾವರಣದಲ್ಲಿ ಕಾರ್ಬನ್ ಪ್ರಮಾಣ ಏರಿತೆಂದರೆ, ತಾಪಮಾನ ಏರುತ್ತದೆ. ದಕ್ಷಿಣ ಮತ್ತು ಉತ್ತರ ಧ್ರುವ ಪ್ರದೇಶಗಳಲ್ಲಿ ಹಿಮ ಕರಗುತ್ತದೆ. ನೀರಿನ ಮಟ್ಟ ಏರುತ್ತದೆ, ಇದರಿಂದ ಕರಾವಳಿಗೆ ಅಪಾಯವಾಗುತ್ತದೆ. ಜೀವಸೃಷ್ಟಿಯ ಪ್ರಾಣಿಗಳು ನಾಶವಾದಲ್ಲಿ , ಮನುಷ್ಯಜೀವನಕ್ಕೆ ಘಾತಕವಾದ ರೋಗಾಣುಗಳು ವೃದ್ಧಿಸುತ್ತವೆ. ಮಧ್ಯಪೂರ್ವದಲ್ಲಿ ಜಿಹಾದ್ ಶುರುವಾಯಿತೆಂದರೆ ಇಡೀ ಜಗತ್ತಿಗೆ ಅದರ ಬಿಸಿ ತಟ್ಟುತ್ತದೆ.
ತತ್ವಜ್ಞಾನದ ವಿಷಯವು ಮನುಷ್ಯನನ್ನು ಸುಖಿಯಾಗಿಸುವಂತಹದ್ದು ಹಾಗೂ ಮನುಷ್ಯರ ಸುಖವು ಪರಸ್ಪರ ಅವಲಂಬಿಸಿದೆ. ಅದು ಕೇವಲ ಮನುಷ್ಯರ ಸಂಬಂಧಗಳನ್ನು ಅವಲಂಬಿಸದೆ ಮನುಷ್ಯ ಮತ್ತು ಪ್ರಾಣಿಜಗತ್ತು, ಮನುಷ್ಯ ಮತ್ತು ನಿಸರ್ಗ, ಮನುಷ್ಯ ಮತ್ತು ವಿಶ್ವ ಇವೆಲ್ಲವನ್ನು ಅವಲಂಬಿಸಿದೆ. ಎಂದೇ ದೀನದಯಾಳ್‌ಜಿ ಯಾವುದೇ ಸಂಘರ್ಷವನ್ನು ವಿಕೃತಿಯೆಂದು ಭಾವಿಸುತ್ತಾರೆ, ಸಮನ್ವಯಕ್ಕೆ ಒತ್ತು ನೀಡುತ್ತಾರೆ. ಸಮನ್ವಯವು ಸೃಷ್ಟಿಯ ಮೂಲಾಧಾರವಾಗಿದೆ. ಸೃಷ್ಟಿಚಕ್ರದಲ್ಲಿ ಮನುಷ್ಯನು ಒಮ್ಮೊಮ್ಮೆ ಲೋಭದಿಂದಾಗಿ, ಕೆಲವೊಮ್ಮೆ ತಪ್ಪು ವಿಚಾರಗಳಿಂದಾಗಿ, ಹಾಗೂ ಅಜ್ಞಾನದಿಂದಾಗಿ ವಿಘ್ನವುಂಟುಮಾಡುತ್ತಾನೆ. ಅದರ ಪರಿಣಾಮವನ್ನು ಸಮಸ್ತ ಮಾನವಜನಾಂಗ ಅನುಭವಿಸಬೇಕಾಗುತ್ತದೆ. ಮನುಷ್ಯಜೀವನವನ್ನು ಸುಖಿಯಾಗಿಸಲು ನಮ್ಮೆಲ್ಲ ಸಂಸ್ಥಾಜೀವನವು ಅರ್ಥವ್ಯವಹಾರ, ಸೃಷ್ಟಿನಿಯಮಗಳೊಂದಿಗೆ ಸಮನ್ವಯ ಸಾಧಿಸುವಂತಿರಬೇಕು. ಪಂ. ದೀನದಯಾಳ್ ಉಪಾಧ್ಯಾಯರು ಏಕಾತ್ಮ ಮಾನವದರ್ಶನದ ಸಹಾಯದಿಂದ ಈ ಸಮನ್ವಯ ಸಾಧಿಸುವ ಬಗೆ ಹೇಗೆಂದು ನಮಗೆ ತಿಳಿಸಿಹೇಳುತ್ತಾರೆ. ಅಂತೆಯೇ ಪಂ. ದೀನದಯಾಳ್‌ಜಿಯವರ ಏಕಾತ್ಮ ಮಾನವ ದರ್ಶನವು ಮಾನವ ಸುಖದ ದರ್ಶನವಾಗಿದೆ.

  • ರಮೇಶ ಪತಂಗೆ
   

Leave a Reply