ಮೇಲುಕೋಟೆ ವೈರಮುಡಿ ಉತ್ಸವ

ಧಾರ್ಮಿಕ - 0 Comment
Issue Date : 13.03.2014

ವಿಶ್ವವಿಖ್ಯಾತ ಮೇಲುಕೋಟೆಯ ಶ್ರೀ ಚಲುವನಾರಾಯಣ ಸ್ವಾಮಿ  ವೈರಮುಡಿ ಉತ್ಸವ ಇಂದು( ಮಾ.13) ವಿಜೃಂಭಣೆಯಿಂದ ನಡೆಯಲಿದೆ.

ಮೇಲುಕೋಟೆ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿ ಕಸಬೆಯಿಂದ ಉತ್ತರಕ್ಕೆ 29 ಕಿ.ಮೀ ದೂರದಲ್ಲಿರುವ ಪಟ್ಟಣ, ಹೋಬಳಿಕೇಂದ್ರ. ಪ್ರಸಿದ್ಧ ಯಾತ್ರಾಸ್ಥಳ. ದಕ್ಷಿಣ ಭಾರತದ ಶ್ರೀವೈಷ್ಣವ ಕ್ಷೇತ್ರಗಳೆಂದು ಖ್ಯಾತವಾಗಿರುವ ನಾಲ್ಕು ಕ್ಷೇತ್ರಗಳಲ್ಲಿ ಇದೂ ಒಂದು (ಇತರ ಮೂರು- ಕಂಚಿ, ತಿರುಪತಿ, ಮತ್ತು ಶ್ರೀರಂಗಂ). ಇದಕ್ಕೆ ನಾರಾಯಣಾದ್ರಿ, ವೇದಾದ್ರಿ, ಯಾದವಾದ್ರಿ, ಯತಿಶೈಲ ಮುಂತಾದ ಹೆಸರುಗಳುಂಟು. ಶಾಸನಗಳಲ್ಲಿ ವೈಕುಂಠ ವರ್ಧನಕ್ಷೇತ್ರ, ದಕ್ಷಿಣ ಬದರಿಕಾಶ್ರಮ, ಯಾದವಗಿರಿ, ತಿರುನಾರಾಯಣಪುರ, ಮೇಲುಕೋಟೆ ಎಂಬ ಹೆಸರುಗಳ ಉಲ್ಲೇಖವಿದೆ.

ಚೋಳರ ಕಾಲದಲ್ಲಿ ತಮಿಳುನಾಡಿನಲ್ಲಿ ಶ್ರೀವೈಷ್ಣವ ಸಮುದಾಯಕ್ಕೆ ಒದಗಿದ ಸಂದಿಗ್ಧ ಪರಿಸ್ಥಿತಿಯಲ್ಲಿ ಮೇಲುಕೋಟೆ ಶ್ರೀವೈಷ್ಣವ ಪಂಥ, ಮುಖ್ಯ ಕೇಂದ್ರವಾಯಿತು. 12 ವರ್ಷಗಳ ಕಾಲ ರಾಮಾನುಜರು ಮೇಲುಕೋಟೆಯಲ್ಲಿ ಇದ್ದರೆಂದು ಗುರುಪರಂಪರಾ ಪ್ರಭಾವ ಎಂಬ ಗ್ರಂಥ ತಿಳಿಸುತ್ತದೆ. ಹೊಯ್ಸಳರ ಕಾಲದಿಂದ ಪ್ರಸಿದ್ಧಿಗೆ ಬಂದ ಈ ಸ್ಥಳ ಇಂದಿಗೂ ಅದರ ಕೀರ್ತಿ ಪಾವಿತ್ರ್ಯಗಳನ್ನು ಕಾಪಾಡಿಕೊಂಡು ಬಂದಿದೆ.

ಮೇಲುಕೋಟೆಯ ಮುಖ್ಯ ಆಕರ್ಷಣೆ ಚೆಲುವನಾರಾಯಣ ದೇವಸ್ಥಾನ. ಮೂಲ ಗುಡಿಯಲ್ಲಿ ಗರ್ಭಗುಡಿ ಮತ್ತು ಅದರ ಸುತ್ತಲೂ ಕತ್ತಲೆ ಪ್ರದಕ್ಷಿಣೆ ಇದೆ. (ಇದು ವರ್ಷಕೊಂದು ದಿನ ವೈರಮುಡಿ ಉತ್ಸವದ ರಾತ್ರಿ ತೆರೆಯಲ್ಪಡುವುದು) ಗರ್ಭಗುಡಿಯ ಮುಂದೆ ನವರಂಗಕ್ಕೆ ಮೂರು ಕಡೆಯಿಂದ ಪ್ರವೇಶವಿದೆ. ಪಾತಳಾಂಕದಲ್ಲಿರುವ ಅನೇಕ ಸನ್ನಿಧಿಗಳಲ್ಲಿ ರಾಮಾನುಜಾಚಾರ್ಯರ ಸನ್ನಿಧಿ, ಯದುಗಿರಿ ಅಮ್ಮನವರ ಸನ್ನಿಧಿ ಮುಖ್ಯವಾದವು. ರಾಮಾನುಜರು ಮೇಲುಕೋಟೆ ಬಿಟ್ಟು ಶ್ರೀರಂಗಕ್ಕೆ ಹೊರಟಾಗ ಅವರ ಶಿಷ್ಯರುಗಳಿಂದ ವಿಗ್ರಹ ಪ್ರತಿಷ್ಠಾಪಿಸಲ್ಪಟ್ಟಿತೆಂಬುದು ಪ್ರತೀತಿ.

14ನೆಯ ಶತಮಾನದಲ್ಲಿ ಮೇಲುಕೋಟೆ ಮಹಮ್ಮದೀಯರ ದಾಳಿಗೆ ಈಡಾಗಿತ್ತು. ವಿಜಯನಗರದ ಅರಸು ಮಲ್ಲಿಕಾರ್ಜುನ ಮಂತ್ರಿ ತಿಮ್ಮಣ ದಂಡನಾಯಕ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದ (1460). ಚಕ್ರತ್ತಾಳ್ವಾರ್ ಸನ್ನಿಧಿ ಮುಂದೆಯೂ ಶ್ರೀಯದುಗಿರಿ ಅಮ್ಮನವರ ಸನ್ನಿಧಿ ಮುಂದೆಯೂ ಇರುವ ಮಂಟಪ ತಿಮ್ಮಣ ದಂಡನಾಯಕನಿಂದ ಕಟ್ಟಲಾಗಿದೆಯೆಂದು ಅಲ್ಲಿಯೇ ಕಂಬ ಮೇಲಿರುವ ಒಂದು ಶಾಸನ ಹೇಳುತ್ತದೆ. ಇಲ್ಲಿರುವ ಒಂದೊಂದು ಕಂಬದಲ್ಲೂ ರಾಮಾಯಣ ಮತ್ತು ಮಹಾಭಾರತ ಕಥೆಗಳು ಕಣ್ಣಿಗೆ ಕಟ್ಟುವಂತೆ ಕೆತ್ತಲ್ಪಟ್ಟಿವೆ. 1771ರಲ್ಲಿ ಮರಾಠರು ಮೇಲುಕೋಟೆಯನ್ನು ಲೂಟಿ ಮಾಡಿದರು. ಅವರು ಗುರುತು ಕೂಡ ಸಿಕ್ಕದ ಹಾಗೆ ಇಲ್ಲಿಯ ಅನೇಕ ಧರ್ಮಕೇಂದ್ರಗಳನ್ನು ಸುಟ್ಟುಹಾಕಿದರಲ್ಲದೆ ಸಿಕ್ಕಿದ್ದನ್ನೆಲ್ಲ ಕೊಳ್ಳೆಹೊಡೆದು ಇಲ್ಲಿಯ ತೇರುಗಳಿಗೂ ಬೆಂಕಿಯಿಟ್ಟು ಅವುಗಳಲ್ಲಿದ್ದ ಕಬ್ಬಿಣದ ಭಾಗವನ್ನು ಕೂಡ ಸಾಗಿಸಿದರಂತೆ. ಚೆಲುವನಾರಾಯಣಸ್ವಾಮಿ ಮೈಸೂರು ಅರಸರ ಆರಾಧ್ಯ ದೈವ. ಆ ಅರಸರು ದೇವಾಲಯಕ್ಕೆ ಹೇರಳವಾದ ದಾನಧರ್ಮ ಮಾಡಿದ್ದಾರೆ. ರಾಜ ಒಡೆಯರ ಭಕ್ತವಿಗ್ರಹ ದೇವಸ್ಥಾನದ ಚಿನ್ನದ ಬಾಗಿಲಿನೊಳಗಿನ ನವರಂಗದ ಒಂದು ಕಂಬದಲ್ಲಿ ಕೆತ್ತಿದ್ದು ಈಗಲೂ ಅದಕ್ಕೆ ಮರ್ಯಾದೆ ಸಲ್ಲುತ್ತದೆ. ಮೈಸೂರು ಅರಸರು ದೇವಾಲಯಕ್ಕೆ ಕೊಟ್ಟ ರತ್ನಾಭರಣಗಳ ವಸ್ತುಗಳು ಈಗಲೂ ಇವೆ. ರಾಜ ಒಡೆಯರ ರಾಜಮುಡಿ ಮತ್ತು ಕೃಷ್ಣರಾಜರ ಒಡೆಯರ ಕೃಷ್ಣರಾಜ ಮುಡಿ ಬಹಳ ಪ್ರಸಿದ್ಧವಾದವು. ಟಿಪ್ಪು ಈ ದೇವಸ್ಥಾನಕ್ಕೆ ಕೆಲವು ಆನೆ ಮತ್ತು ಆಭರಣಗಳನ್ನು ನೀಡಿರುವುದಾಗಿ ಶಾಸನಗಳಿಂದ ತಿಳಿಯುತ್ತದೆ.

ರತ್ನಖಚಿತ ವೈರಮುಡಿ ಎಂಬ ಕಿರೀಟ ಚೆಲುವ ನಾರಾಯಣಸ್ವಾಮಿ ಗುಡಿಯ ಅಮೂಲ್ಯ ವಸ್ತುಗಳಲ್ಲಿ ಒಂದು. ಪ್ರತಿ ವರ್ಷ ಈ ಕಿರೀಟವನ್ನು ಉತ್ಸವ ಮೂರ್ತಿಗೆ ಧರಿಸಿ ವೈಭವಯುತವಾಗಿ ವೈರಮುಡಿ ಉತ್ಸವವನ್ನು ನಡೆಸಲಾಗುತ್ತದೆ. ಇದು ಸಾವಿರಾರು ಜನರನ್ನು ಆಕರ್ಷಿಸುತ್ತದೆ. ಇಲ್ಲಿಯ ಅಷ್ಟತೀರ್ಥಗಳಲ್ಲಿ ಕಲ್ಯಾಣಿ ಅಗ್ರಗಣ್ಯವಾದುದು. ಇದು ರಾಮಾನುಜರ ಕಾಲಕ್ಕೆ ಮುಂಚೆಯೇ ಇತ್ತೆಂದು ಹೇಳಲಾಗಿದೆ. ಇದರ ಸುತ್ತ ಅನೇಕ ಮಂಟಪಗಳಿವೆ. ರಾಮಾನುಜ ಸಿದ್ಧಾಂತದ ಅನುಯಾಯಿಗಳ ಯತಿರಾಜಮಠ, ಪರಕಾಲ ಮಠ, ವಾನಮಾಲೈಮಠ ಮುಂತಾದವೂ ಇಲ್ಲಿವೆ. ಆಧುನಿಕ ಕನ್ನಡ ಸಾಹಿತ್ಯದ ಹಿರಿಯ ಕವಿ ಪು.ತಿ.ನ ಅವರ ಜನ್ಮಸ್ಥಳವಿದು.

 

 

   

Leave a Reply