ನಾಗರ ಪಂಚಮಿ

ಹಬ್ಬಗಳು - 0 Comment
Issue Date : 01.08.2014

ನಾಗರ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು  ಶ‍್ರಾವಣ  ಮಾಸದ ಶುಕ್ಲಪಕ್ಷದ  ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು, ನಾಗದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ  ದೇವಸ್ಥಾನ  ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ ಮತ್ತು ಈ ಹಬ್ಬವು ಅಣ್ಣ -ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ ಇದೆ.

ನಾಗ ಪಂಚಮಿ ಕಥೆ

ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬಳು ತಂಗಿ ಮತ್ತು ಅವಳಿಗೆ ನಾಲ್ಕು ಜನ ಅಣ್ಣಂದಿರು ಇದ್ದರು. ಮನೆಯವರೆಲ್ಲಾ ಸೇರಿ ಒಟ್ಟಿಗೆ ನಾಗರ ಪಂಚಮಿಯಂದು ಪೂಜಾ ಕಾರ್ಯಕ್ರಮದಲ್ಲಿ ತೊಡಗಿದ್ದರು. ತದ ನಂತರ ನಾಗರಹಾವು ರಭಸದಿಂದ ಬಂದು ನಾಲ್ಕು ಜನ ಅಣ್ಣಂದಿರನ್ನು ಬಲಿ ತೆಗೆದುಕೊಂಡಿತು. ನಂತರ ಆ ತಂಗಿಯು ಅಣ್ಣಂದಿರನ್ನು ಕಳೆದುಕೊಂಡ ನೋವನ್ನು ತಡೆಯಲಾರದೆ ಆ ನಾಗರಹಾವಿಗೆ ಹೇಳಿದಳು, ನನ್ನ ನಾಲ್ಕು ಜನ ಅಣ್ಣಂದಿರಲ್ಲಿ ಒಬ್ಬರನ್ನಾದರೂ ಬದುಕಿಸಿಕೊಡು, ನಾನು ಯಾರನ್ನು ಅಣ್ಣ ಎಂದು ಕರೆಯಲೀ ಎಂದು ಕಣ್ಣೀರಿಟ್ಟಳು. ತದ ನಂತರ ಆ ನಾಗರ ಹಾವು ಆಕೆಯ ಮಾತಿಗೆ ಕಿವಿಗೊಟ್ಟು ಅಣ್ಣಂದಿರ ಬಳಿ ಬಂದು ಒಬ್ಬ ಅಣ್ಣನನ್ನು ಪ್ರಾಣಾಪಾಯದಿಂದ ಕಾಪಾಡಿತು. ನಂತರ ಅಣ್ಣ – ತಂಗಿ ಇಬ್ಬರು ಸೇರಿ ನಾಗರ ಪಂಚಮಿ ಹಬ್ಬವನ್ನು ಆಚರಿಸಿದರು.

ಪುರಾಣ

ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಂಡನು. ಜನಮೇಜಯ ರಾಜನು ‘ವರವನ್ನು ಕೇಳು’ ಎಂದು ಹೇಳಿದಾಗ, ಆಸ್ತಿಕನು ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಂಡನು. ಜನಮೇಜಯನು ಸರ್ಪಯಜ್ಞವನ್ನು ನಿಲ್ಲಿಸಿದ ದಿನವು ಪಂಚಮಿಯಾಗಿತ್ತು.

ಉಪವಾಸದ ಮಹತ್ವ

ನಾಗರಪಂಚಮಿಯಂದು ಮಾಡಿದ ಉಪವಾಸದ ಮಹತ್ವವೆಂದರೆ ೫ ಯುಗಗಳ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ದೇವಿಯಿದ್ದಳು. ಸತ್ಯೇಶ್ವರನು ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತ್ಯು ಹೊಂದಿದನು. ಆಗ ಸಹೋದರನ ಮೃತ್ಯುವಿನ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ಸ್ವೀಕರಿಸಲಿಲ್ಲ. ಆದುದರಿಂದ ಆ ದಿನ ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ‘ಸಹೋದರನಿಗೆ ಅಖಂಡ ಆಯುಷ್ಯವು ದೊರಕಲಿ, ಅನೇಕ ಆಯುಧಗಳು ಪ್ರಾಪ್ತವಾಗಲಿ ಮತ್ತು ಅವನು ಪ್ರತಿಯೊಂದು ದುಃಖ ಮತ್ತು ಸಂಕಟ ಗಳಿಂದ ಪಾರಾಗಲಿ’ ಎನ್ನುವುದು ಸಹ ಈ ಉಪವಾಸದ ಹಿಂದಿನ ಕಾರಣವಾಗಿದೆ.

ನಾಗರಪಂಚಮಿಯ ಹಿಂದಿನ ದಿನ ಪ್ರತಿಯೊಬ್ಬ ಸಹೋದರಿಯು ದೇವರಲ್ಲಿ ಮೊರೆ ಇಡುವುದರಿಂದ ಅವಳ ಸಹೋದರನಿಗೆ ಲಾಭವಾಗುತ್ತದೆ ಮತ್ತು ಅವನ ರಕ್ಷಣೆಯಾಗುತ್ತದೆ. ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಭಾವಿಸಿದಳು. ಆಗ ನಾಗದೇವನು, ನನ್ನನ್ನು ಸಹೋದರನೆಂದು ಭಾವಿಸಿ ಪೂಜೆ ಮಾಡಿದ ಸಹೋದರಿಯ ರಕ್ಷಣೆಯನ್ನು ನಾನು ಮಾಡುವೆನು ಎಂದು ಅವಳಿಗೆ ವಚನ ನೀಡಿದನು. ಆದುದರಿಂದಲೇ ಆ ದಿನ ಪ್ರತಿಯೊಬ್ಬ ಸ್ತ್ರೀಯು ನಾಗನ ಪೂಜೆ ಮಾಡಿ ನಾಗರಪಂಚಮಿಯನ್ನು ಆಚರಿಸುತ್ತಾಳೆ.

ಪೂಜೆ

ನಾಗರಪಂಚಮಿಯ ದಿನ ಅರಿಶಿನ ಅಥವಾ ರಕ್ತಚಂದನದಿಂದ ಮಣೆಯ ಮೇಲೆ ನವನಾಗಗಳ ಆಕೃತಿಗಳನ್ನು ಬಿಡಿಸಿ ಅವುಗಳ ಪೂಜೆಯನ್ನು ಮಾಡಿ ಹಾಲು ಮತ್ತು ಅರಳಿನ ನೈವೇದ್ಯವನ್ನು ಅರ್ಪಿಸಬೇಕು. ನವನಾಗಗಳು ಪವಿತ್ರಕಗಳ ಒಂಬತ್ತು ಪ್ರಮುಖ ಗುಂಪುಗಳಾಗಿವೆ. ಪವಿತ್ರಕಗಳೆಂದರೆ ಸೂಕ್ಷ್ಮಾತಿಸೂಕ್ಷ್ಮ ದೈವೀಕಣಗಳು (ಚೈತನ್ಯ ಕಣಗಳು).

ನಿಷೇಧ: ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಕರಿಯಬಾರದು, ಒಲೆಯ ಮೇಲೆ ತವೆಯನ್ನು ಇಡಬಾರದು ಮುಂತಾದ ನಿಯಮಗಳನ್ನು ಪಾಲಿಸಬೇಕು. ಈ ದಿನ ಭೂಮಿಯನ್ನು ಅಗೆಯಬಾರದು.

 

   

Leave a Reply