ನಮ್ಮ ನಿಮ್ಮ ನಡುವೆ

ಹೊ.ವೆ.ಶೇಷಾದ್ರಿ - 0 Comment
Issue Date : 08.08.2014

ಪ್ರ : ಭಾರತ ಸರಕಾರ ಸಾಲ್ಮನ್ ರಷ್ದೀಯ ‘ಸೆಟನಿಕ್ ವರ್ಸಸ್‍’ ಗ್ರಂಥಕ್ಕೆ ಪ್ರತಿಬಂಧ ಹೇರಲು ಕಾರಣವೇನು?

-ಶ್ರೀ ಕೆ. ಎಂ. ಕುಲಕರ್ಣಿ, ಆಳಂದ

ಉ: ತಾನು  ಪ್ರತಿಬಂಧ ಹೇರಲು ಕಾರಣ ಏನೆಂದು ಸರಕಾರ ಈಗಾಗಲೇ ಡಂಗೂರ ಸಾರಿ ಹೇಳಿಕೊಂಡಿದೆ. ಆದರೆ ‘ಮುಸ್ಲಿಮರ ಮತೀಯ  ಭಾವನೆಗಳನ್ನು ನೋಯಿಸಬಾರದೆ’ಂಬ ಅವರ ಘೋಷಿತ  ಕಾರಣಕ್ಕೂ, ನಿಜವಾದ ಕಾರಣಕ್ಕೂ ಅಜಗಜಾಂತರ ಇದೆ. ಯಾವುದೇ ಸಣ್ಣ ಕುಂಟು ನೆಪ ಸಿಕ್ಕರೂ ಸಾಕೆಂದು  (ಉದಾ: ಮಹಮ್ಮದ್ ದಿ ಈಡಿಯಟ್ – ಕತೆ) ಕಾಲು ಕೆರೆದು ಕಾದುಕೊಂಡಿರುವ ಮುಸ್ಲಿಂ ಜಾತ್ಯಂಧರ ಪ್ರತಿಭಟನೆ-ಹಿಂಸೆ-ದಂಗೆಗಳಿಗೆ ಸರಕಾರ ಬೆದರಿದೆ ಎಂಬುದರ ಲಕ್ಷಣ ಅದು. ಈ ಬೆದರಿಕೆಗಿಂತಲೂ ಮಿಗಿಲಾಗಿ ಬರಲಿರುವ ಚುನಾವಣೆಯಲ್ಲಿ  ಮುಸ್ಲಿಂ ಮತ ಎಲ್ಲಿ  ತನ್ನ ವಿರುದ್ಧ ತಿರುಗೀತೋ ಎನ್ನುವ ಬೆದರಿಕೆಯೇ ಇದ್ದಿರಬೇಕು !

ಅದು ಹೇಗಾದರೂ ಇರಲಿ – ಪುಸ್ತಕದ ಉದ್ದೇಶ, ಪ್ರತಿಬಂಧ ಹೇರಿದ್ದರಿಂದಾಗಿ, ನೂರುಪಟ್ಟು ಹೆಚ್ಚು ಯಶಸ್ವಿಯಾಗಿ ಈಡೇರಿದೆ. ಪುಸ್ತಕದಲ್ಲಿನ  ಯಾವ ಭಾಗಗಳು ಆಕ್ಷೇಪಾರ್ಹವೆಂದು ಭಾವಿಸಿ ನಿಷೇಧ ಹೇರಲಾಯಿತೋ ಆ ಭಾಗಗಳಂತೂ ಪತ್ರಿಕೆಗಳಲ್ಲಿ ಪ್ರಸಿದ್ಧಿ ಪಡೆದೇ ಪಡೆದವು. ನಿಷೇಧ ಹೇರದಿದ್ದಲ್ಲಿ  ಬರೇ ಪುಸ್ತಕ ಓದುತ್ತಿದ್ದವರ ಸಂಖ್ಯೆ ಹಿಡಿಯಷ್ಟೂ ಇರುತ್ತಿರಲಿಲ್ಲ. ಈಗ ಈ ಪುಸ್ತಕವನ್ನು ಕದ್ದು ತರಿಸಿ ಓದಿಕೊಳ್ಳುವವರ ಸಂಖ್ಯೆಯೇ ಅದಕ್ಕಿಂತ ಹಲವು ಪಟ್ಟು ಅಧಿಕವಿದ್ದೀತು. ಜತೆಗೆ ಮುಚ್ಚು ಹಾಕಬೇಕೆಂದಿದ್ದ ಭಾಗಗಳಿಗೆ ಪತ್ರಿಕೆಗಳಲ್ಲೇ ಅಸಂಖ್ಯ ಪಾಲು ಹೆಚ್ಚು ಪ್ರಚಾರ ಸಿಕ್ಕಿತು. ನಿಜಕ್ಕೂ, ಪ್ರತಿಬಂಧಕ್ಕಾಗಿ ಒತ್ತಾಯಿಸಿದ ಮುಖಂಡರಾಗಲಿ, ಅವರೆದುರು ಮಣಿದ ಸರಕಾರವಾಗಲಿ ರಷ್ದೀಗೆ ಅನ್ಯಾಯವನ್ನೇನೂ ಮಾಡಿಲ್ಲ, ಉಪಕಾರವನ್ನೇ ಮಾಡಿದ್ದಾರೆ ! ಹಿಡಿಯಷ್ಟು ಇಂಗ್ಲಿಷ್ ವಾಚಕರ ಬದಲಿಗೆ ಈಗ ಲಕ್ಷಾಂತರ ಜನರ ಕಣ್ಣಿಗೆ ಹೊಡೆಯುವಂತೆ ರಷ್ದೀನ ಹೆಸರು ಜಗತ್‍ಪ್ರಸಿದ್ಧಿ ಪಡೆಯುವಂತಾಯಿತು !

ಆದರೆ ಇವೆಲ್ಲದರಿಂದಾಗಿ ನಿಜಕ್ಕೂ ಹಾನಿಯಾಗಿರುವುದು, ಮುಸಲ್ಮಾನ ಸಮುದಾಯಕ್ಕೇ. ಅವರ ಪೈಕಿ ತೆರೆದ ಮನಸ್ಸಿನವರೂ ಇದ್ದಾರು; ಮತಾಂಧತೆಗೆ ಒಳಗಾಗದೆ ಆಧುನಿಕ ಕಾಲಕ್ಕೆ ತಕ್ಕಂತೆ ಚಿಂತಿಸುವವರೂ ಇದ್ದಾರು ! ತಮ್ಮ ನಂಬಿಕೆಗಳಲ್ಲಿ. ನಡೆನುಡಿಗಳಲ್ಲಿ ಬದಲಾವಣೆಗಳನ್ನು  ತಂದುಕೊಳ್ಳಬೇಕಾದ ಅಗತ್ಯವಿದೆ, ಎಂದು ಮನಃಪೂರ್ವಕವಾಗಿ ಬಯಸುವವರೂ ಇದ್ದಾರು ; ಇಂದಿನ ಮತಾಂಧ ಮತೀಯ-ರಾಜಕೀಯ ಮುಖಂಡರುಗಳ ಕಪಿಮುಷ್ಟಿಯಿಂದ ತಮ್ಮ ಜನ ಪಾರಾಗದೆ ತಮ್ಮ ಉದ್ಧಾರ ಸಾಧ್ಯವಿಲ್ಲ ಎಂದು ಮನವರಿಕೆಯಾದವರೂ ಇದ್ದಾರು. ಅಂತಹವರಿಗೆಲ್ಲ ಸರಕಾರದ ಕ್ರಮ ಭಾರಿ ಆಘಾತವೆಸಗುವುರಲ್ಲಿ ಸಂದೇಹವಿಲ್ಲ. ಹಿಂದೆ ಶಾಬಾನೋ ಪ್ರಕರಣದಲ್ಲಿ ಅಂತಹವರ ಧ್ವನಿ  ಸಾಕಷ್ಟು ಪ್ರಬಲವಾಗಿ ಹೊರಬಿದ್ದಿತ್ತು.  ಆದರೆ ಸರಕಾರವೇ ಮತಾಂಧರಿಗೆ ತಲೆಬಾಗಿ ಕಾನೂನನ್ನೇ ಬದಲಾಯಿಸಿದ್ದರಿಂದಾಗಿ ಅಂತಹವರ ಧ‍್ವನಿ, ಪಾಪ, ಉಡುಗಿಹೋಗುವಂತಾಯಿತು ! ಈಗ ಆಗಿರುವುದೂ ಅಂತಹದೇ ಪ್ರಸಂಗ, ಅಂತಹದೇ ಪರಿಣಾಮ.

ಪ್ರ: ಬರೀ ಹಿಂದುಗಳ ಸಂಘಟನೆಯಿಂದಲೇ ಬಡಜನರ ಏಳಿಗೆ ಸಾಧ್ಯವಾದೀತೇ?

-ಶ್ರೀ ಎಚ್. ರವಿಕುಮಾರ್, ಅಜ್ಜಿಹಳ್ಳಿ

ಉ: ‘ಸಂಘಟನೆ ಎಂದರೇ ಒಂದೇ ಸಂಸಾರದ ಮಕ್ಕಳಂತೆ, ಅನ್ಯೋನ್ಯವಾಗಿ ಕೂಡಿ ಬಾಳುವುದನ್ನು ಕಲಿಯುವುದು, ನಾವೆಲ್ಲ ಒಂದೇ ದೇಶದ ಮಕ್ಕಳು, ಪರಸ್ಪರರ ಸುಖದಲ್ಲಿ ದುಃಖದಲ್ಲಿ ಪಾಲುಗೊಳ್ಳಬೇಕಾದವರು, ಎನ್ನುವ  ಮನೋಧರ್ಮವನ್ನು  ಮೈಗೂಡಿಸಿಕೊಳ್ಳುವುದು. ಇಂದು ಈ ಅರಿವು ನಮ್ಮ ಜನರಲ್ಲಿ ಮೂಡಿಲ್ಲವೆಂದೇ ಒಂದು ಕಡೆ ಶ್ರೀಮಂತಿಕೆಯ ಅಟ್ಟಹಾಸ ವನ್ನೂ ಕಾಣುತ್ತೇವೆ. ಇನ್ನೊಂದು ಕಡೆ  ಬಡತನದ  ಬೇಗೆಯನ್ನೂ ಕಾಣುವಂತಾಗಿದೆ.

ಸಂಘಟನೆಯಲ್ಲಿ ಸಾಮರ್ಥ್ಯವೂ ಇದೆ.  ಬಡಜನರನ್ನು ಸುಲಿಯುವಂತಹ ರೂಢಿಗಳನ್ನು, ಕಾನೂನುಗಳನ್ನು, ಅಧಿಕಾರಿಗಳನ್ನು , ರಾಜಕಾರಣಿಗಳನ್ನು, ಶ್ರೀಮಂತರನ್ನು ಸರಿದಾರಿಗೆ ತರಬಲ್ಲಂತಹ ಜಾಗೃತ ಜನಶಕ್ತಿ ಮೈತಳೆಯುವುದು ಸಂಘಟನೆಯಿಂದಲೇ.

ಈ ದೇಶದಲ್ಲಿ ಶೇ. 85 ರಷ್ಟು ಜನಸಂಖ್ಯೆ ಹೊಂದಿರುವ  ಹಿಂದುಗಳಲ್ಲಿ ಸಂಘಟನೆಯ ಭಾವ ಪ್ರಖರಗೊಳ್ಳುವುದಕ್ಕಿಂತ  ಮಿಗಿಲಾದ ಶಕ್ತಿ ಇನ್ನಾವುದಿರಬಲ್ಲುದು- ದೇಶದ ದಾರಿದ್ರ್ಯ ಹೊಡೆದೋಡಿಸಲು? ತನ್ನ ಸುತ್ತಮುತ್ತಲ ಗಿಡ-ಹಕ್ಕಿ-ಪ್ರಾಣಿಗಳಿಗೂ ಹಿತ ಬಯಸುವ, ಅನ್ನ ಉಣಿಸುವ, ಹಿಂದುವು ತನ್ನ ನಾಡಿನಲ್ಲಿ ಇರುವ  ಇತರ ಮತಸ್ಥ ಮನುಷ್ಯರನ್ನು ಕಡೆಗಣಿಸಿಯಾನೆಂದು ಹಿಂದುವಾಗಿ ಜನ್ಮತಾಳಿದ ಯಾವನೂ ಯೋಚಿಸಲಾರ.

ಪ್ರ: ನಮ್ಮ ತಾಯಿನಾಡಿನಲ್ಲಿ ಜನಿಸಿ, ಆದರೆ ಹೊರ ದೇಶಕ್ಕೆ ಹೋಗಿ ಆಂಗ್ಲಭಾಷೆ ಕಲಿತವರು ನಮ್ಮ ಸಂಸ್ಕೃತಿಗೆ ಹೇಗೆ ಸ್ಪಂದಿಸಿಯಾರು?

-ಶ್ರೀ ಶಂಕರ ಜಡಲ್ , ನಿಡಗುಂದಾ

ಉ: ಎಲ್ಲಿ ಜನಿಸಿದರು, ಯಾವ ಭಾಷೆ ಕಲಿತರು, ಎಂಬುದಕ್ಕಿಂತ ಮುಖ್ಯವಾಗಿ , ಅವರ ಸಂಸ್ಕಾರ ಹೇಗಿದೆ, ಎಂಬುದೇ  ಮುಖ್ಯ.  ತಮ್ಮ  ತಾಯಿನೆಲ, ತಾಯಿನುಡಿಗಳಲ್ಲಿ ಅಭಿಮಾನ ತಾಳಿದವರು, ಅದರ ಸುಗಂಧ, ಸಂಸ್ಕೃತಿಗಳನ್ನು ತಮ್ಮಲ್ಲಿ ರೂಢಿಸಿಕೊಂಡವರು,  ಭಾರತದ ವರಪುತ್ರರೇ ಎನಿಸಿಯಾರು. ಆದರೆ ಹೊರನಾಡುಗಳಿಗೆ ಹೋಗಿ, ಅಲ್ಲೇ ನೆಲಸಿದಾಗ, ಅಲ್ಲಿನ ನಡೆನುಡಿಗಳಲ್ಲಿ ಮಾರುಹೋದವರೇ ಬಹುಮಂದಿ. ಆದರೆ ಅಂತಹವರ ಎದೆಯಲ್ಲೂ ಎಲ್ಲೋ ಮೂಲೆಯಲ್ಲಿ ಭಾರತದ ಒಳದನಿ ಅವರಲ್ಲಿನ ಹಿಂದು ರಕ್ತವನ್ನು ಎಚ್ಚರಿಸುತ್ತಲೇ ಇರುತ್ತದೆ. ಹಣದ ಮದದಲ್ಲಿ, ಭೋಗವಿಲಾಸಗಳ ಗುಂಗಿನಲ್ಲಿ ಒಂದಷ್ಟು ಕಾಲದವರೆಗೆ ಮೈಮರೆಯುತ್ತಾರೆ; ಆ ಒಳದನಿಗೆ ಕಿವುಡರಾಗಿರುತ್ತಾರೆ, ಎಂಬುದೂ ನಿಜ.

ಪ್ರ: ಭಾರತದಲ್ಲಿ ಮತ್ತೊಮ್ಮೆ  ಧರ್ಮಸಾಮ್ರಾಜ್ಯ ಸ್ಥಾಪನೆಯ ಕನಸು ನನಸಾಗಬಹುದೇ?

-ಶ್ರೀ ವಿ. ನಾರಾಯಣ, ವಂಡ್ಸೆ

ಉ: ರಾಜಕೀಯ ಸಾಮ್ರಾಜ್ಯಗಳ ಕೇಂದ್ರ ದೆಹಲಿ ಇದ್ದೀತು. ಆದರೆ ಧರ್ಮಸಾಮ್ರಾಜ್ಯದ ಕೇಂದ್ರ ನಮ್ಮ-ನಿಮ್ಮಂತಹರ ಹೃದಯ ! ನಮ್ಮ ಬದುಕಿನಲ್ಲಿ, ನಮ್ಮ ನಿತ್ಯದ ಆಚರಣೆಯಲ್ಲಿ, ಸ್ವಧರ್ಮನಿಷ್ಠೆ ಬೆಳಗುವಂತಾದರೆ, ಆಗ ಒಟ್ಟು ದೇಶದಲ್ಲಿಯೂ ಧರ್ಮ ಬೆಳಗೀತು. ಆದ್ದರಿಂದ ಸುಮ್ಮನೆ ಕನಸು  ಕಾಣುವುದನ್ನು ಬಿಟ್ಟು, ಕೊನೇ ಪಕ್ಷ ನಮ್ಮ ಬದುಕಿನ  ಮಟ್ಟಿಗಾದರೂ ಸ್ವಧರ್ಮ ಪರಿಪಾಲನೆಯನ್ನು  ನನಸಾಗಿ ಮಾಡುವುದರತ್ತ ಗಮನಹರಿಸುವುದು ಒಳಿತಲ್ಲವೇ?

ಸ್ವಧರ್ಮ ಎಂದರೆ ಮಡಿ-ಮೈಲಿಗೆ, ಪೂಜೆ-ಪುನಸ್ಕಾರ ಇವುಗಳೇ ಅಲ್ಲ, ಅವುಗಳಿಗಿಂತ ಬಹುಪಾಲು ಮುಖ್ಯವಾದ ಸ್ವಧರ್ಮವೂ ಒಂದಿದೆ. ‘ಸ್ವರಾಷ್ಟ್ರ’ದ ಕುರಿತಾಗಿ ಸಲ್ಲಿಸಬೇಕಾದ ನಮ್ಮ ಕರ್ತವ್ಯಧರ್ಮ ಅದು. ನಮ್ಮ ಸ್ವಂತಕ್ಕೆ, ಸ್ವಂತ ಸಂಸಾರಕ್ಕೆ ನಿತ್ಯ ನಾವು ಸಲ್ಲಿಸುವ  ಸೇವೆಯಂತೆಯೇ ನಮ್ಮ ಸಮಾಜಕ್ಕೂ ನಿತ್ಯ ಸಲ್ಲಿಸಬೇಕಾದ ಸೇವೆ ಅದು. ಹೊರಗಿನ ಧರ್ಮಸ್ಥಾಪನೆಯ ಕನಸು ನನಸಾಗುವ ಕಾರ್ಯದ ಅಂಕುರ ಆಗಬೇಕಾದುದು ಹೀಗೆ !

ಹೊ.ವೆ.ಶೇಷಾದ್ರಿ                                                                                                                                                                                                            ಮುಂದುವರೆಯುವುದು

   

Leave a Reply