ನಮ್ಮ ಸಂಸ್ಕೃತಿಯ ಹಿರಿಮೆಯ ಗುಟ್ಟು

ಭಾರತ ; ಲೇಖನಗಳು - 0 Comment
Issue Date : 05.05.2015

ಚರಿತ್ರೆ ಓದುವಾಗಲೆಲ್ಲ  ‘ಸ್ವಾಸ್ಥ್ಯಗಳು’ (Colonies)  ಎಂಬ ಪದ ಅಲ್ಲಲ್ಲಿ ಹಣಿಕಿ ಹಾಕುತ್ತದೆ. ಬಲಯುತವಾದ ದೇಶ ಬೇರೊಂದು ದೇಶದ ಮೇಲೆ ಧಾಳಿ ಮಾಡಿ ಸೋಲಿಸಿ ಪದಾಕ್ರಾಂತರನ್ನಾಗಿ ಮಾಡಿ ಆ ದೇಶವನ್ನು ತಮ್ಮ ಅಂಕಿತದಲ್ಲಿಟ್ಟುಕೊಳ್ಳಬಯಸಿದ ದೃಷ್ಟಾಂತಗಳು ಹೇರಳವಾಗಿವೆ.  ನಮ್ಮ ದೇಶವೇ ಈ ರೀತಿಯ ಅಗ್ನಿ ಪರೀಕ್ಷೆಗೊಳಗಾಗಿರಲಿಲ್ಲವೇ? ಯಾವ ಸಮಯದಲ್ಲಾದರೂ ನಮ್ಮ ಭರತ ದೇಶ  ಈ ರೀತಿಯ  ಪ್ರಯತ್ನ ಮಾಡಿದೆಯೆ? ನಮ್ಮ ರಾಷ್ಟ್ರಧ್ವಜವನ್ನು ಬೇರೊಂದು ದೇಶದಲ್ಲಿ ಹಾರಿಸಿ ಮೆರೆಸಿದ್ದೇವೆಯೆ? ಲೋಕ ವಿಖ್ಯಾತರಾದ ಚಕ್ರವರ್ತಿಗಳಿದ್ದಾಗಲಾದರೂ ಈ ಕೆಲಸ ನಡೆದಿದೆಯೇ? ಹಾಗಾದರೆ ಅಶೋಕ, ಚಂದ್ರಗುಪ್ತ, ಸಮುದ್ರಗುಪ್ತ ಇತ್ಯಾದಿ ರಾಜವರೇಣ್ಯರು ಯಶೋವಂತರಾದುದರ ಗುಟ್ಟಾದರೂ ಏನು? ಅನ್ನೊಂದು ದೇಶದ ಮೇಲೆ ಕೈಮಾಡದ ಬುದ್ಧಿ ನಮ್ಮ ಸಹಜಸಿದ್ಧವಾದ ಗುಣವೆಂದುಕೊಳ‍್ಳೋಣವೆ? ಇದು ಆತ್ಮ ದೌರ್ಬಲ್ಯದ ಚಿಹ್ನೆಯೋ? ಆತ್ಮ ಶ‍್ರೀಮಂತಿಕೆಯ ಚಿಹ್ನೆಯೋ?

ಅಳಿಯದ ಸಂಪತ್ತು

ಬರೀ ಬಾಹ್ಯದೃಷ್ಟಿಯಿಂದ ವಿಷಯ ಪರಿಶೀಲಿಸಿದರೆ ಇವುಗಳಿಗೆಲ್ಲಾ ಉತ್ತರ ಹೇಳುವುದು ಕಷ್ಟವಾದೀತು. ಆಳವಾಗಿ ವಿಚಾರ ಮಾಡಿ ನೋಡಿದರೆ ನಾವು ಚಿರನಿರಂತರವೂ, ಚಿರಪ್ರಭಾವಶಾಲಿಯೂ ಆದ ವಿಜಯವನ್ನು ಪಡೆದಿದ್ದೇವೆ. ಧರ್ಮದೂತರನ್ನು ಪ್ರಪಂಚದ ಮೂಲೆ ಮೂಲೆಗೂ ಕಳುಹಿಸಿ, ಜ್ಞಾನಪ್ರಸಾರ ನಡೆಸಿದ ಹೆಮ್ಮೆ ಭಾರತ ದೇಶದ್ದು. ತಡೆಬಡೆಯಿಲ್ಲದ ಏಕಸ್ರೋತದಂತೆ  ಹರಿದುಬರುತ್ತಿರುವ ಚಾರಿತ್ರ್ಯ, ಸಂಸ್ಕೃತಿ ಎಂದಿಗೂ ಸಂವರ್ಧಮಾನವಾಗುತ್ತಿರುವ ಜ್ಞಾನಭಂಡಾರ, ನಮ್ಮ ಕರಗದ ಅಳಿಯದ ಸಂಪತ್ತಾಗಿದೆ.

ಹಿಂದಾದರೂ ವಿಚಾರವಂತರು, ಜ್ಞಾನಿಗಳು ಇಹದ ಸ್ವರ್ಗ ಭಾರತವೆಂದು ಅರಿತಿದ್ದರು. “ಕರ್ಮಪ್ರಧಾನವಾದ ಜೀವನಕ್ಕೆ ಜ್ಞಾನದ ಮುಕ್ತಿ ದೊರಕಬೇಕಾದರೆ ಅದು ಒಂದು ಕಡೆಯಲ್ಲಿ ಮಾತ್ರ; ಅದೆಂದರೆ ಭಾರತ ದೇಶ” ಎಂಬ ಅಭಿಪ್ರಾಯ ಸರ್ವಮಾನ್ಯವಾಗಿತ್ತು. ಸಿರಿತನವಿರಲಿ, ಕಡು ಬಡತನವಿರಲಿ, ದಾಸ್ಯವಿರಲಿ, ಸ್ವಾತಂತ್ರ್ಯವಿರಲಿ, ತನ್ನ ಸಾಂಸ್ಕೃತಿಕ ಸಿರಿಸಂಪತ್ತನ್ನುಳಿಸಿಕೊಂಡು ಬಂದಿರುವ ದೇಶವೆಂದರೆ ನಮ್ಮ ಈ ಭಾರತ ದೇಶ. ಈ ಐದು, ಹತ್ತು ಸಾವಿರದ ವರ್ಷದ ಅವಿಶ್ರಾಂತ ತುಂಬು ಜೀವನ ನಡೆಸಿದ ದೇಶ ಪೃಥ್ವಿಯ ಮೇಲೆಲ್ಲಾ ಭಾರತ ಒಂದೇ.

ಎಷ್ಟೋ ಪ್ರಾಚೀನ ಸಂಸ್ಕೃತಿಗಳು ಇಂದು ಬರೀ ‘ಗತ ವೈಭವ’ ಮಾತ್ರ. ನಮ್ಮ ಸಂಸ್ಕೃತಿ ಒಂದೇ ಪುಣ್ಯಮಯವೂ ಶಾಂತಿಮಯವೂ ಆದ ಕಲ್ಪವೃಕ್ಷವಾಗುಳಿದು, ನಮ್ಮನ್ನೆಲ್ಲಾ ಹರಸಿ, ಬಾಳ ಕೈದೀವಿಗೆಯಾಗಿ, ಮುದಂಡಿಯಿಡಿಸುವ ಚೈತನ್ಯಶಕ್ತಿಯಾಗುಳಿದಿದೆ.  ಬಡತನ  ನಮ್ಮಲ್ಲನೇಕರ ಬಿಡಲಾರದ ನಂಟನಾಗಿರಬಹುದು. ವ್ಯವಹಾರ ಶೂನ್ಯತೆ ದ್ವೇಷಾಸೂಯೆಗಳ ಮಲಿನತೆಯೂ ಅಂಟಿಕೊಂಡಿರಬಹುದು. ಆದರೆ ನಮ್ಮೆಲ್ಲರ ಬಾಳಿನಾಳದಲ್ಲೂ ಈ ಸಂಸ್ಕೃತಿಯ ಜೀವಂತ ಒರತೆ ಇದ್ದು ಸಮಯ ಬಂದಾಗ ಸ್ಫೂರ್ತಿಜಲವಾಗುಕ್ಕಿ ಹರಿದು ನಮ್ಮನ್ನು ಪುಣ್ಯಸ್ನಾತರನ್ನಾಗಿ ಮಾಡುತ್ತಿದೆ. ಸುಮಾರು ಸಾವಿರ ವರ್ಷಗಳ ಮ್ಲೇಂಛ ಸಹವಾಸದಲ್ಲಿದ್ದರೂ ನಮ್ಮ ಸಂಸ್ಕೃತಿ ವಿರೂಪಗೊಳ್ಳಲಿಲ್ಲ. ವಿದೇಶೀ ಸಂಸ್ಕೃತಿಗಳ ಅಘಾತವಾದರೂ ಅವ್ಯಾಹತವಾಗಿತ್ತು ಎಲ್ಲದಕ್ಕೂ ಎದೆಗೊಟ್ಟು, ತನ್ನ ವ್ಯಕ್ತಿತ್ವವನ್ನುಳಿಸಿಕೊಂಡಿದೆ ಭಾರತೀಯ ಸಂಸ್ಕೃತಿ.

ಅನೇಕತ್ವದಲ್ಲಿ ಏಕತ್ವ

ಭಾಷಾವಾರು ಭೇದವಿದೆ, ಅಂತರ್ ಜಾತೀಯ ವೈಷಮ್ಯವಿದೆ,  ಮತಾಭಿಪ್ರಾಯವಿದೆ, ಅಂಧಾನುಕರಣವಿದೆ, ಎಲ್ಲ ಇದ್ದೂ ಭಾರತ ಅಖಂಡವಾಗಿದೆ. ವೈವಿಧ್ಯತೆಯಿದ್ದೂ ಏಕತ್ವವನ್ನು ಪಡೆದಿದೆ. ಎಷ್ಟೇ ಭೌಗೋಳಿಕ ವೈಪರೀತ್ಯವಿದ್ದರೂ, ನಮ್ಮ ದೇಶವೆಂದು ನೆನೆಸಿಕೊಂಡಾಕ್ಷಣವೆ ಆಸೇತು ಹಿಮಾಚಲ ಪರ್ಯಂತದ ದಿವ್ಯ ಭವ್ಯದ ಸಾಕಾರ ರೂಪ ನಮ್ಮ ಕಣ್ಮುಂದೆ ನಿಲ್ಲುತ್ತದೆ. ರಾಜಕೀಯ ವ್ಯವಹಾರಗಳೇನೇ ಜರುಗಲಿ, ನಮ್ಮ ಈ ಭಾವನೆ ಮಸುಕಾಗಿಲ್ಲ ಮುರುಕಾಗಿಲ್ಲ. ಈ ದೇಶದ ಪ್ರತಿಯೊಂದು ಕಣವೂ ನಮ್ಮಗೆ ಪುಣ್ಯಮಯವಾಗಿದೆ. ಇದರೊಡಲಿಂದ ಬಂದು ಇದರೊಡಲಿಗೇ ಹೋಗುವ ನಮ್ಮ ಜನ್ಮ ಸಾರ್ಥಕವೆಂದುಕೊಳ್ಳುತ್ತೇವೆ. ಜನ್ಮಾಂತರ ಇರುವುದು ದಿಟವಾದರೆ, ಈ ಮಣ್ಣಿನಲ್ಲಿ ಪುನಃ ಜನ್ಮ ಧಾರಣ ಮಾಡುವಂತಾಗಲಿ ಎಂದು ಬೇಡಿಕೊಳ‍್ಳುತ್ತೇವೆ.  ಇದೆಲ್ಲ ಮನೋ ವಿಭ್ರಾಂತಿ ಎಂದು ಮೂಗು ಮುರಿಯುವವರಿದ್ದಾರೆ ನಿಜ. ಅವರಲ್ಲಿ ನನ್ನ  ಬಿನ್ನಹವೆಂದರೆ, ಯಾವ ಮನೋವಿಕಾರಕ್ಕೂ ಒಳಗಾಗದೆ, ನಮ್ಮ ದೇಶದ ಕನಸು ಕಾಣಿರಿ. ಹಿಂದಿನ ದೃಶ್ಯಾವಳಿಗಳೆಲ್ಲ ಮುಂದೆ ಕಣ್ಣುಕಟ್ಟಿ ನಿಲ್ಲುವಂತಾಗಲಿ. ಒಳಿತು ಕೆಡುಕು ಎಲ್ಲದರ ಪರಾಮರ್ಶೆಯೂ ಜರುಗಲಿ. ನಂತರ ತೀರ್ಮಾನಕ್ಕೆ ಬನ್ನಿ.

ಅಂತರ್ಮುಖತೆ

ನಮ್ಮ ಸಂಸ್ಕೃತಿಯ ಹಿರಿಗುಣ ಅಂತರ್ಮುಖತೆ. ಪ್ರಪಂಚದ ನಿಗೂಢ ರಹಸ್ಯವನ್ನು ಬಾಳಿನ ಸಾರ್ಥಕತೆಯ ಕ್ರಮವನ್ನೂ ಶೋಧಿಸಿ, ಗುರುತಿಸುವುದೇ ನಮ್ಮ ಸಂಸ್ಕೃತಿ ಜಗತ್ತಿಗೆ ನೀಡಿರುವ ಕಾಣಿಕೆ. ಭೋಗದ ಸುಪ್ಪತ್ತಿಗೆಯಲ್ಲಿದ್ದೂ ವೈರಾಗ್ಯ ಚಕ್ರವರ್ತಿಯಾಗಿರುವ, ನಿಷ್ಕಾಮ ಕರ್ಮಿಯಾಗಿ ಜೀವನ್ಮುಕ್ತನಾಗಿದ್ದೂ ರಾಜ್ಯ ಕಟ್ಟಿ ಉಳಿಸಿ ಬೆಳೆಸಿದ ವ್ಯಕ್ತಿಗಳಿದ್ದು ಬಾಳಿದ ಈ ಭಾರತ ದೇಶ. ಇಂಥ ಪವಾಡ ಸಾಧಿಸಿ ಮೆರೆಸಿರಬೇಕಾದರೆ, ನಮ್ಮ ಸಂಸ್ಕೃತಿಯ ಹಿರೆಮೆಯಾದರೂ ಎಂಥಹುದು?

ಇಂದು?

ಆದರೆ ಇಂದು?  ಈ ಪ್ರಶ್ನೆ ಬಹುಕಹಿಯಾದ ಪ್ರಶ್ನೆ. ಬೇಡದ ಪ್ರಶ್ನೆ ಬಹುಮಂದಿಗೆ. ಆದರೆ ಮನಸ್ಸನ್ನು ಇರಿದು ಕೊರೆಯುವ ಸಮಸ್ಯೆಯಾಗಿ ಕೂತಿದೆ. ಭಾರತೀಯ ಸಂಸ್ಕೃತಿ ಎಂದು ಕರೆಯುವುದಕ್ಕೇ, ಮನ್ನಿಸುವುದಕ್ಕೇ ಎಷ್ಟೋ ಜನರಿಗೆ ಮನಸ್ಸಿಲ್ಲ. ಯಾವುದು ಅಲಭ್ಯವರವಾಗಿದ್ದೂ, ನಮ್ಮ ನನಸಾಗಿ ಭಾಗ್ಯವಾಗಿ ಉಳಿದಿದೆಯೋ ಅದನ್ನೇ ಅಸಡ್ಡೆಯಿಂದ ಕಾಣುತ್ತಿದ್ದೇವೆ. ಇಂದು ಜೀವನ ‘ಲಘು’ವಾಗುತ್ತದೆ. ಭೋಗದ ಸೀಮಾರೇಖೆ ದಾಟಿ ಮುಂದೆ ದಿಟ್ಟಿಸಿ ನೋಡಲು ಧೈರ್ಯವಿಲ್ಲ, ಉತ್ಸಾಹವಿಲ್ಲ. ಇದರ ಆವರ್ತದೊಳಗೆ ಬಾರದ ಬಹುಮಂದಿಗೆ ಇರುವ ಏಕಮಾತ್ರ ಆಸೆ ಎಂದಿಗೆ ಈ ಭೋಗದ ಸೀಮೆಗೆ ಲಗ್ಗೆ ಇಟ್ಟು ಗೆದ್ದೇನು? ಭೋಗ ಬೇಡವೆಂದಲ್ಲ, ಅಲ್ಲಿಗೆ ಮುಗಿಯಿತೆ ಎಂಬುದೇ ಪ್ರಶ್ನೆ. “ಜೀವನ” ಒಂದು ದೊಡ್ಡ ಪ್ರಶ್ನೆ. ಬಿಡಿಸಿದಷ್ಟೂ ಉಳಿದಿರುತ್ತದೆ. ನಮ್ಮ ಸಂಸ್ಕೃತಿ ನಮಗೆ ವಜ್ರಕವಚವನ್ನಿತ್ತಿದ. ಮಿಕ್ಕವರು ಬಾಳಿನ ಶಾಪವೆಂದು ಜರಿದು ಮೂಗು ಮುರಿಯುವ ಬಡತನ ಅಜ್ನಿನರಲ್ಲಿದ್ದರೂ, ಜೀವನ ದರ್ಶನದ ಮಹಾಭಾಗ್ಯ ಹೊಂದುವ ಉತ್ಕಟೇಚ್ಛ ನಮ್ಮಲ್ಲುಳಿದಿದ್ದರೆ ಅದು ನಮ್ಮ ಮೇಲೆ ಸಂಸ್ಕೃತಿ ಅಚ್ಚೊತ್ತಿರುವ ಮುದ್ರೆ.

ಎರಡು ನಿದರ್ಶನಗಳು

ಈಗ ಸ್ವಾತಂತ್ರ್ಯ ಬಂದು ವರ್ಷ ನಾಲ್ಕುರುಳಿದರೂ ನಾವು ಎಚ್ಚೆತ್ತಿಲ್ಲ. ನಮ್ಮ ಮೇಲೆ ಪರಕೀಯರು ಬೀಸಿರುವ’ ಸಮ್ಮೋಹನಾಸ್ತ್ರ’ ಅಂಥಹುದಾಗಿದೆ.  ನಮ್ಮ ಜೀವನದ ರೂಪುರೇಷೆಗಳೆಲ್ಲ ಅಣಕದ ಹಾಸು ಹೊಕ್ಕುಗಳಾಗಿವೆ. ‘ಮೀಕಿವೆಚ್ಚೇಲೇದು, ಮಾಕಿ ಮರೆಚೇಲೇದು’ ಎಂಬಂತಾಗಿದೆ ನಮ್ಮ ಸ್ಥಿತಿ.  ನಮ್ಮ ಸಂಸ್ಕೃತಿಯ ನಿಜ ದರ್ಶನ ಮಾಡಿಕೊಳ್ಳಲಿಲ್ಲ. ಪರಕೀಯ ಸಂಸ್ಕೃತಿಯನ್ನು ಕುರಿತು ಆಳವಾಗಿ ಅಧ್ಯಯನ ಮಾಡಿ ನಮ್ಮದರೊಂದಿಗೆ  ತುಲನ ಮಾಡಿ, ಜ್ವಲತಾಂಶಗಳನ್ನು ನಮ್ಮದನ್ನಾಗಿ ಮಾಡಿಕೊಳ್ಳಲಿಲ್ಲ. ಪರಕೀಯರು ನಮಗೆಷ್ಟೋ ಉಪಕಾರವನ್ನು ಮಾಡಿಹೋಗಿದ್ದಾರೆ ಎನ್ನುತ್ತೇವೆ. ಒಂದೆರಡು ಅಂಶಗಳನ್ನು ನೋಡುವ ತಮ್ಮ ವಿದ್ಯಾಪದ್ಧತಿ ಇಲ್ಲಿ ಹರಡುವಾಗ ಅವರ ಉದ್ದೇಶ ಘನವಾಗಿರುವುದರಲಿ, ಸ್ವಾರ್ಥಪ್ರೇರಿತವಾಗಿತ್ತು. ಉಪನ್ಯಾಸಕ ತನ್ನ ಮುಂದೆ  ಕುಳಿತಿರುವವರನ್ನು ಮೊದ್ದುಗಳೆಂದು ಭಾವಿಸಿ ಹೊರಟರೆ ಜಯಪ್ರದನಾಗುತ್ತಾನಂತೆ. ಹಾಗೆಯೇ ಪರಕೀಯರಾದರೂ ನಮ್ಮಲ್ಲಿ ಅಜ್ಞಾನದ  ನಗ್ನ ನೃತ್ಯವೇ ನಡೆದಿದೆಯೆಂದು ಪ್ರಚಾರ ಮಾಡಿ ನಮಗೆ ಜ್ಞಾನ ಗಂಗೆ ದಾನಮಾಡುವ ಸಾಹಸಿಗರಾದರು. ಅವರ ಇನ್ನೂರು ವರ್ಷದ ಕೃಷಿ ಇಂದಿಗೂ ತನ್ನ ಕಹಿಫಲಗಳನ್ನು ನಮಗೀಯುತ್ತಿದೆ. ನಮ್ಮದೇ ವ್ಯಕ್ತಿತ್ವ ಬೆಳಸಿಕೊಳ್ಳಲು, ನೈಸರ್ಗಿಕ ಬಾಳ್ವೆ ನಡೆಸಲು ಅದು ಎಷ್ಟರ ಮಟ್ಟಿಗೆ ಸಹಾಯಕವಾಗಿದೆ ಎಂಬುದು ಸಂದೇಹಾಸ್ಪದವಾಗಿದೆ.

ಸಾಮಾಜಿಕ ಜಾಗೃತಿಯನ್ನುಂಟುಮಾಡಿದ ಕೀರ್ತಿಯನ್ನು ಅವರ ಆಳ್ವಿಕೆಗೆ ಗಂಟು ಹಾಕುತ್ತೇವೆ. ಎಲ್ಲ ಅವರ ಮೂಗಿನ ನೇರಕ್ಕೆ ಮಾಡಿದರು. ನಾವು ಸಾರಾ ಸಾರಾ ವಿಚಾರ ಮಾಡದೆ ಹೂಗುಟ್ಟಿ ಈಗ ಅನುಭವಿಸುತ್ತಿದ್ದೇವೆ. ಭಾರತೀಯ ಸ್ತ್ರೀ ಗುಲಾಮಗಿರಿಯ ಸಂಕೇತ.  ಗಂಡನಿಗೆ ದುಡಿದು ಹಾಕಿ ನಾಲ್ಕು ಗೋಡೆ  ಮಧ್ಯೆ ನರಳುತ್ತಿರುವ ಕಾರುಣ್ಯ ಪಾತ್ರ ಪ್ರಾಣಿ ಎಂದು ಬೊಬ್ಬೆ ಎಬ್ಬಿಸಿದರು. ಗಂಡಸಿನ ಸರಿಸಮನಾಗಿ  ಹಕ್ಕಿಗೆ ಹೋರಾಡಬೇಕೆಂಬ ಮನೋವೃತ್ತಿ ಬೆಳೆದು ಪ್ರಬಲವಾಯಿತು.  ನೈಸರ್ಗಿಕ ವ್ಯತ್ಯಾಸದ ದೈವ ವಿಲಾಸವನ್ನು ಮರೆತು ಹುಚ್ಚೆದ್ದು ಕುಣಿಯುತ್ತಿರುವ ನಮ್ಮ ಮುಂದುವರಿದ ಸ್ತ್ರೀಯರನ್ನು ಕುರಿತು ನೋವಿನ ನಗೆ ಬರುತ್ತದೆ. ನಮ್ಮಲ್ಲಿ ಹೆಣ್ಣನ್ನು ಕಾಣುವ ಕಣ್ಣೇ ಬೇರೆ.  ನಮಗೆ ಸ್ವಸ್ತ್ರೀ ಬಿಟ್ಟು ಎಲ್ಲರೂ ತಾಯಿಯ ಸಮಾನರಾದರೆ, ಪಾಶ್ಚಾತ್ಯರಲ್ಲಿ ತಾಯಿಬಿಟ್ಟು ಮಿಕ್ಕೆಲ್ಲರೂ “ಹೆಂಗಸರು” ಅಷ್ಟೆ. ನಮ್ಮಲ್ಲಿ ಕೈ ಹಿಡಿದ ಮುಗ್ಧೆ, ಕ್ರಮೇಣ ಹೃದಯದ ಅಧಿರಾಣಿಯಾಗಿ, ಧರ್ಮದಲ್ಲಿ ಪಾಲ್ಗಾರಳೂ, ಶ್ರೇಯಸ್ಸಿಗೆ ಪ್ರೇರಕಳೂ ಆದರೆ, ಅವರಿಗೆ ವಿಲಾಸದ ವಸ್ತು ಮಾತ್ರ. ನಮ್ಮಲ್ಲಿ ಪಂಚ ಕನೈಯರು ಮತ್ತಿತರ ಪುಣ್ಯ ಮಾತೆಯರ ಸ್ಮರಣೆ ಮಾಡುತ್ತೇವೆ. ಅವರು ಧರ್ಮಪರಾಯಣರಾಗಿ ಬಾಳಿದವರು ಧರ್ಮಕ್ಕೆ ಚ್ಯುತಿ ಬಂದಾಗ ತಮ್ಮ ಜೀವನವನ್ನೇ ಪಣವಾಗಿಟ್ಟವರು ಸ್ತ್ರೀ ಸ್ವಾತಂತ್ರ್ಯ, ಸರಿಸಮಾನತೆ ಇವುಗಳನ್ನು ಅಪಾರ್ಥಮಾಡಿಕೊಂಡು ಅದರಲ್ಲಿ ಬೆಂದು ಬೇಗುದಿ ಪಡುತ್ತಿದ್ದಾರೆ ಪಾಶ್ಚತ್ಯರು. ಇಷ್ಟಾದರೂ ನಮ್ಮ ಜ್ಞಾನದೃಷ್ಟಿ ವಿಹಿತ ಮಾರ್ಗದಲ್ಲಿ ಹರಿದಿಲ್ಲ.

ನಮ್ಮದನ್ನು ಅರಿಯಬೇಕು

ಉದಾಹರಣೆಗಾಗಿ ಎರಡು ಅಂಶಗಳನ್ನು ತೆಗೆದುಕೊಂಡೆ. ಹೀಗೆ ನಮ್ಮ ಜನಜೀವನ ಪರಿಶುದ್ಧವಾಗಬೇಕಾದರೆ ನಾವು ‘ನಮ್ಮದನ್ನು’ ಅರಿಯಬೇಕು. ನಮ್ಮತನ ಬೆಳೆಸಿಕೊಳ್ಳಬೇಕು. ಹೊರಗಿನಿಂದ ಬಂದ ವಿಚಾರಧಾರೆಗಳಲ್ಲಿ ಯೋಗ್ಯವಾದದ್ದನ್ನು ಗ್ರಹಿಸಬೇಕು. ಬೆಳಕು ಎಲ್ಲಿಂದ ಬಂದರೂ ಸ್ವಾಗತವಿತ್ತು ನಮ್ಮದನ್ನಾಗಿ ಮಾಡಿಕೊಳ್ಳುವ ಒಂದು ವೈಶಾಲ್ಯತೆ ನಮ್ಮ ಸಂಸ್ಕೃತಿಯ ಗುಟ್ಟು. ಯಾವಾಗ ನಮ್ಮ ಬಾಳು ಈ ಸ್ವಕ್ಷೇತ್ರಕ್ಕೆ, ಇದರ ಚಾರಿತ್ರ್ಯಕ್ಕೆ, ಹಿರಿಮೆಗೆ, ಆದರ್ಶಗಳಿಗನುಗುಣವಾಗಿ ರೂಪಿತವಾಗತ್ತದೋ ಅಂದು ನಾವು ಧನ್ಯರಾದಂತೆ. ನಮ್ಮ ಬಾಳಿನಲ್ಲಿ ಎಡವಿದ ಹೆಜ್ಜೆ ಸರಿಪಡಿಸಿದಂತಾಗುತ್ತದೆ. ಮತ್ತು ನಮ್ಮ ಸಾಂಸ್ಕೃತಿಕ ವಿಜಯ ದಿಗ್ವ್ಯಾಪಿಯೂ ಚಿರಸ್ಥಾಯಿಯೂ ಆಗಿ ಮೆರೆಯುತ್ತದೆ.

   

Leave a Reply