ನೂರರ ಒಂದು ನೋಟು

ಬೋಧ ಕಥೆ - 0 Comment
Issue Date : 13.10.2014

ನಡುರಸ್ತೆಯಲ್ಲಿ ನೂರರ ಒಂದು ನೋಟು ಸಿಕ್ಕಿಬಿಟ್ಟಿದೆ ಸೋಮನಿಗೆ. ಅವನು ತಿರುಗಿಸಿ ಮುರುಗಿಸಿ ನೋಡಿದನು. ನಿಜ ಅದು ನೂರರ ನೋಟು. ಈ ನೋಟು ಯಾರಿಗೆ ಸೇರಿದ್ದೋ, ನಿಜವಾಗಿ ಶ್ರೀಮಂತ ಬೀಳಿಸಿಕೊಂಡು ಹೋಗಿದ್ದರೆ ಪರವಾಗಿಲ್ಲ. ಆದರೆ ಬಡವ ಆಕಸ್ಮಿಕವಾಗಿ ಬೀಳಿಸಿದ್ದರೆ?. ಅವನಿಗೆ ಎಷ್ಟು ಕಷ್ಟವಿದೆಯೋ ಏನು ಕತೆಯೋ! ದೇವರೆ ನನಗೇಕೆ ಸಿಕ್ಕಿತು ಈ ನೋಟು ಎಂದು ಸೋಮ ಚಿಂತಿಸುತ್ತಿದ್ದನು. ಆದರೆ ಅದರ ಒಡೆಯ ಮಾತ್ರ ಪತ್ತೆಯಾಗಲಿಲ್ಲ. ಅದನ್ನು ಖರ್ಚುಮಾಡುವುದಕ್ಕೂ ಸೋಮನಿಗೆ ಮನಸ್ಸಿಲ್ಲ. ಅದನ್ನು ತನ್ನ ಒಳಜೋಬಿನಲ್ಲಿಟ್ಟುಕೊಂಡೇ ಸೋಮ ಸದಾ ತಿರುಗಾಡುತ್ತಿದ್ದನು. ಅವನಿಗೊಂದು ಆಸೆ. ಅದರ ಒಡೆಯ ಯಾವಾಗಲಾರೂ ಒಂದು ದಿನ ಸಿಗಬಹುದು. ಸಿಕ್ಕರೆ ಅವನಿಗೆ ವಾಪಸ್ಸು ಕೊಟ್ಟುಬಿಡೋಣ ಎಂದುಕೊಳ್ಳುತ್ತಿದ್ದನು.

ಒಳ ಜೋಬಿನಲ್ಲಿರುವ ಆ ನೋಟನ್ನು ಆಗಾಗ ಅದು ಭದ್ರವಾಗಿದೆಯೇ ಇಲ್ಲವೇ ಎಂದು ಕಿಸೆಯನ್ನು ಮುಟ್ಟಿ ನೋಡಿಕೊಳ್ಳುತ್ತಿದ್ದನು. ಜೋಬೊಳಗೆ ಇಟ್ಟಿದ್ದ ನೋಟು ಇಟ್ಟಲ್ಲೇ ಇರುತ್ತಿತ್ತು. ರಸ್ತೆಯಲ್ಲಿ ಹೋಗುವಾಗ ಬರುವಾಗೆಲ್ಲಾ ಅವನಿಗೆ ಆ ನೋಟಿನ ವಾರಸುದಾರ ಯಾರಿರಬಹುದು ಎನ್ನುವ ಚಿಂತೆ. ಅದೇಕೋ ಅವನಿಗೆ ಆ ನೋಟು ಸಿಕ್ಕಮೇಲೆ ತಲೆಭಾರ ಹೆಚ್ಚಿದೆ. ತನ್ನದಲ್ಲದ್ದನ್ನು ಕೊಟ್ಟು ಬಿಡಬೇಕು. ಯಾರಿಗೆಂದು ಕೊಡಲಿ, ಅದರ ವಾರಸುದಾರ ಯಾರೆಂದು ಹೇಗೆ ತಿಳಿಯಬೇಕು? ಸೋಮ ಹಪಹಪಿಸುತ್ತಿದ್ದನು.

ಒಂದು ದಿನ ಒಂದು ಮುದಿ ಭಿಕ್ಷುಕಿ ಅವನ ಮುಂದೆ ಹಾದು ಹೋಯಿತು. ಈ ಮುದುಕಿಯದ್ದಿರಬಹುದೇ ಈ ನೂರರ ಒಂದು ನೋಟು ಎಂದು ಯೋಚಿಸಿದನು. ಕೇಳಿನೋಡೋಣವೇ ಎಂದು ಎರಡು ಹೆಜ್ಜೆ ಮುಂದೆ ಹೋದನು. ಮನಸ್ಸು ತಕ್ಷಣ ಎಚ್ಚರಿಕೆ ಕೊಟ್ಟಿತು. ಕೇಳಬೇಡ, ಮೊದಲೇ ಆ ಮುದುಕಿ ಭಿಕ್ಷುಕಿ, ತನ್ನದ್ದಲ್ಲದಿದ್ದರೂ ತನ್ನದೇ ಎಂದು ಹೇಳಬಹುದು. ಹಾಗೆ ಮುದುಕಿ ಹೇಳಿತು ಎಂದಿಟ್ಟುಕೋ, ನೀನು ಆ ಹಣವನ್ನು ಅದರ ಕೈಗೆ ಕೊಟ್ಟುಬಿಡಬೇಕಾಗುತ್ತದೆ. ಅದರದಲ್ಲದ ಹಣ ಅದರ ಕೈ ಸೇರುತ್ತದೆ. ಇಷ್ಟು ದಿನ ಜೋಪಾನ ಮಾಡಿದ ಹಣವನ್ನು ಯಾರ ಕೈಗೋ ಕೊಟ್ಟು ಕೈತೊಳೆದುಕೊಂಡು ಬಿಡಬೇಡ ಎಂದು ಮನಸ್ಸು ಎಚ್ಚರಿಸಿತು. ಸೋಮ ಜೋಬಿಗೆ ಇಳಿಸಿದ ಕೈಯನ್ನು ಮೇಲಕ್ಕೆತ್ತಿಕೊಂಡನು. ಮತ್ತೆ ಹೊಲಕ್ಕೆ ನಡೆದು ಕಬ್ಬಿನ ಜಲ್ಲೆಗಳನ್ನು ಕೀಳಲು ತೊಡಗಿದನು. ನಾಳೆ ಇದನ್ನೆಲ್ಲಾ ಲಾರಿಗೆ ತುಂಬಿ ಕಾರ್ಖಾನೆಗೆ ಕಳುಹಿಸಿಕೊಡಬೇಕು. ಲಾರಿಯ ಬಾಡಿಗೆ ನೂರು ರೂಪಾಯಿ ಆಗುತ್ತದೆ. ಈ ನೂರು ರೂಪಾಯಿಯನ್ನು ಕೊಟ್ಟು ಕೈತೊಳೆದುಕೊಂಡು ಬಿಟ್ಟರೆ ಹೇಗೆ ಎಂದುಕೊಂಡನು. ಜೋಬಿನಲ್ಲಿದ್ದ ಹಣ ಬಿಟ್ಟಿ ಸಿಕ್ಕಿದ್ದೆಂದು ಬೇಕಾಬಿಟ್ಟಿ ಖರ್ಚುಮಾಡಬೇಡ. ಅದು ಯಾರದ್ದೋ ದುಡಿಮೆಯ ಫಲ; ಅದನ್ನು ನೀನು ಅನುಭವಿಸುವಂತಿಲ್ಲ ಎಂದಿತು ಮತ್ತೆ ಮನಸ್ಸು. ಸೋಮ ಮತ್ತೆ ಆ ವಿಚಾರವನ್ನು ಕೈ ಬಿಟ್ಟನು. ಕಬ್ಬಿನ ಜಲ್ಲೆಗಳನ್ನು ಒಂದೆಡೆ ಪೇರಿಸಿಟ್ಟು ಮನೆಗೆ ಬಂದನು.

ಹೆಂಡತಿ ರಾಗಿ ಮುದ್ದೆ ಸೊಪ್ಪಿನ ಹುಳಿ ಮಾಡಿದ್ದಳು. ಗಡದ್ದಾಗಿ ಊಟಮಾಡಿ ಜಗಲಿಯಲ್ಲಿ ಮಲಗಿದನು. ನೋಟು ಜೋಬೊಳಗೆ ಇತ್ತು. ಅವನು ನೋಟು ಸಿಕ್ಕಿರುವ ಸುದ್ದಿಯನ್ನು ಹೆಂಡತಿಗೆ ಹೇಳಿರಲಿಲ್ಲ.
ಅಯ್ಯೊ! ಅದು ಜುಜಿಬಿ ಹಣ, ಅದಕ್ಕ್ಯಾಕೆ ತಲೆ ಕೆಡಿಸಿಕೊಳ್ತೀರ. ನಮಗೆ ಒಂದು ದಿನದ ಊಟದ ಖರ್ಚು. ಗಡದ್ದಾಗಿ ಊಟ ಮಾಡೋಣ ಬಿಡಿ ಎಂದು ಹೇಳುತ್ತಾಳೆ. ಮತ್ತೆ ಹಾಗೆ ಮಾಡದೆ ಹೋದರೆ ಮುನಿಸಿಕೊಳ್ಳುತ್ತಾಳೆ. ಯಾರದೋ ಹಣ ನಾವು ಯಾಕೆ ಬಳಸಬೇಕು ಎಂದು ಅವಳು ಹೇಳುವಂತಿದ್ದರೆ ಸೋಮ ಅವಳ ಹತ್ತಿರ ನೋಟು ಸಿಕ್ಕ ಬಗ್ಗೆ ಹೇಳದೆ ಇರುತ್ತಿರಲಿಲ್ಲ. ನಿದ್ದೆ ಬಂದುದರಿಂದ ಸೋಮನಿಗೆ ನೋಟಿನ ವಿಷಯ ಮರೆತು ಹೋಯಿತು.

ಮರುದಿನ ಅದೇ ರಸ್ತೆಯಲ್ಲಿ ಗದ್ದೆಯ ಕೆಲಸಕ್ಕಾಗಿ ಹೊರಟನು ಸೋಮ. ನಿನ್ನೆ ಕಂಡ ಭಿಕ್ಷುಕಿ ಅದೇ ದಾರಿಯಲ್ಲಿ ಅವನನ್ನು ಹಾದು ಮುಂದೆ ಹೋದಳು. ಒಂದು ಮನಸ್ಸು ಹೇಳುತ್ತಿತ್ತು. ಆ ನೋಟನ್ನು ಮುದುಕಿಗೆ ಕೊಟ್ಟು ಬಿಡೋಣ ಎಂದು. ಆದರೆ ಮತ್ತೊಂದು ಮನಸ್ಸು ಸುತರಾಂ ಒಪ್ಪಿಗೆ ಕೊಡುತ್ತಿರಲಿಲ್ಲ. ಅವನು ಮತ್ತೆ ಯೋಚಿಸದೆ ಮುಂದೆ ಹೆಜ್ಜೆ ಹಾಕಿದನು. ನಿನ್ನೆ ದಿನ ಕೊಯ್ದ ಕಬ್ಬಿನ ಜಲ್ಲೆಗಳು ಗದ್ದೆಯಲ್ಲಿದ್ದುವು. ಲಾರಿಯವನಿಗೆ ಹೇಳಿ ಬಂದನು. ಒಂದು ಲೋಡ್ ಲಾರಿಗೆ ಕೊಡಬೇಕಾದ ಬಾಕಿ ನೂರು ರೂಪಾಯಿ. ಕೈ ಜೋಬೊಳಗೆ ಹೋಯಿತು. ನೂರು ರೂಪಾಯಿ ಹೊರತೆಗೆದನು. ಆದರೆ ಕಬ್ಬಿನ ಜಲ್ಲೆಯನ್ನು ಕಾರ್ಖಾನೆಗೆ ಹಾಕುತ್ತಿದ್ದೀಯ. ಸಾವಿರ ಸಾವಿರ ಎಣಿಸುತ್ತೀಯ. ಈ ಜುಜುಬಿ ನೂರು ರೂಪಾಯಿ ನಿನಗೆ ಯಾವ ಲೆಕ್ಕಕ್ಕೆ ಎಂದಿತು ಮನಸ್ಸು. ಕೂಡಲೇ ಹೊರತೆಗೆದ ನೋಟನ್ನು ಜೋಬೊಳಗೆ ತೂರಿಸಿದನು. ಲಾರಿಯವನಿಗೆ ಪರ್ಸಿನಿಂದ ಹಣ ತೆಗೆದುಕೊಟ್ಟನು. ಕಬ್ಬಿನ ಜಲ್ಲೆ ತುಂಬಿದ ಲಾರಿ ಬರ‌್ರೋ ಎಂದು ಧೂಳೆಬ್ಬಿಸುತ್ತಾ ಸಿಟಿ ಕಡೆಗೆ ಹೋಯಿತು. ಮತ್ತೆ ಸೋಮ ಅದೇ ದಾರಿಯಲ್ಲಿ ಮನೆಗೆ ವಾಪಸ್ಸು ಬಂದನು. ಭಿಕ್ಷುಕಿ ಮತ್ತೆ ಅವನನ್ನು ಹಾದು ಹೋಯಿತು. ಆದರೆ ಈಗ ಅದು ತನ್ನ ಬಾಗಿದ್ದ ಬೆನ್ನನ್ನು ಇನ್ನಷ್ಟು ಬಾಗಿಸಿ ಏನನ್ನೋ ಹುಡುಕುತ್ತಿರುವಂತೆ ಕಂಡಿತು,

 ‘ಏನವ್ವ ಏನು ಹುಡುಕುತ್ತಿದ್ದೀಯ’ ಎಂದು ಸೋಮನು ಕೇಳಿದನು.
‘ನೂರರ ಒಂದು ನೋಟು ಕಳೆದುಹೋಗಿದೆ. ನೋಡು ಇದರೊಳಗೆ ಇಟ್ಟಿದ್ದೆ. ಎಲೆ ಅಡಿಕೆ ತೆಗೆಯುವಾಗ ಅದನ್ನೆಲ್ಲೋ ಬೀಳಿಸಿದ್ದೇನೆ’ ಅಂತು ಮುದುಕಿ. ಕೊಳಕಾಗಿದ್ದ ಎಲೆ ಅಡಿಕೆ ಚೀಲವನ್ನು ತೆಗೆದು ತೋರಿಸಿತು.
‘ಎಷ್ಟು ದಿನ ಆಯ್ತು ಕಳೆದು ಹೋಗಿ’
‘ಯಪ್ಪೋ ವಾರದ ಮೇಲಾಗಿದೆ. ಅವತ್ತಿಂದ ಹುಡುಕುತ್ತಿದ್ದೇನೆ. ಸಿಕ್ಕಿಲ್ಲ’ ಎಂದು ಹೇಳಿತು ಭಿಕ್ಷುಕಿ.
ಆ ನೋಟು ಹೊಸದೋ ಹಳೆಯದೋ ಎಂದು ಸೋಮ ಕೇಳಿದನು.

 ‘ಹೊಸ ನೋಟು ಕಣ್ಲ, ಯಾವೋನೋ ಪುಣ್ಯಾತ್ಮ ದಾರಿ ತೋರಿಸಿದ್ದಕ್ಕೆ ಕಾರಿಂದಿಳಿದು ಆ ನೋಟನ್ನು ಕೊಟ್ಟು ಹೋದನು. ಒಳ್ಳೆ ಮನಸ್ಸಿಂದ ಕೊಡ್ಲಿಲ್ಲ ಬಿಡ್ಲ ಮಗ, ಕೊಟ್ಟದಿನವೇ ಕಳದೋಯ್ತು’ ಅಂತು ಭಿಕ್ಷುಕಿ. ಮುದುಕಿ ಸುಳ್ಳು ಹೇಳುತ್ತಿಲ್ಲ ಎನ್ನುವುದು ಸೋಮನಿಗೆ ಗೊತ್ತಾಯಿತು. ಅವನು ತನ್ನ ಜೋಬೊಳಗಿಂದ ನೂರರ ಆ ಒಂದು ನೋಟನ್ನು ಹೊರತೆಗೆದನು,

‘ಇಕೊ ಅಜ್ಜಿ ನಿನ್ನ ನೋಟು ಹೊಸದಾಗೆ ಇದೆ. ಇದು ನನಗೆ ಇದೇ ದಾರಿಯಲ್ಲಿ ಸಿಕ್ಕಿತ್ತು. ಆ ಪುಣ್ಯಾತ್ಮ ಒಳ್ಳೆಮನಸ್ಸಿನಿಂದಲೇ ಕೊಟ್ಟಿದ್ದಾನೆ. ಕಳೆದು ಹೋದ ನೋಟು ಮತ್ತೆ ನಿನ್ನ ಕೈ ಸೇರಿತಲ್ಲ’ ಎಂದು ಸೋಮ ಮುದುಕಿಯ ಕೈಗೆ ನೂರರ ಒಂದು ನೋಟನ್ನು ಕೊಟ್ಟನು. ಭಿಕ್ಷುಕಿ ಬಾಯಿತುಂಬಾ ಸೋಮನನ್ನು ಹರಸಿತು.

ಸೋಮ ಮನೆಗೆ ಬಂದು ಎಲ್ಲಾ ವಿಷಯವನ್ನು ಹೆಂಡತಿಗೆ ಹೇಳಿದನು. ಅವಳಿಗೂ ವಿಷಯ ತಿಳಿದು ಸಂತೋಷವಾಯಿತು.

   

Leave a Reply