‘ಒಬ್ಬರ ಹಿಂದೆ ಒಬ್ಬರು ಮುಂದೆ ಬರುತ್ತಲೇ ಇರುವರು’

ಪಂಡಿತ್.ದೀನದಯಾಳ್ ಲೇಖನಗಳು - 0 Comment
Issue Date : 29.10.2014

 

ಪರಮ ಪೂಜನೀಯ

ಶ್ರೀ ಗುರೂಜಿ

ಮನಸ್ಸಿನಲ್ಲಿ ತುಂಬ ವಿಷಾದ ಕವಿದಿದೆ.  ಏನಾಗಿರಬಹುದು ಮತ್ತು ಈ ಮರ್ಮವೇಧೀ ಘಟನೆ ನಡೆದಿರಬಹುದೆಂಬು ದನ್ನು ಶೋಧಿಸುವವರು ಕಂಡುಹಿಡಿಯಬಹುದು. ಅದರ  ಪರಿಣಾಮವೇನೇ ಆಗಲಿ, ನಮ್ಮ ಸಂಘದ ಏಕನಿಷ್ಠ ಕಾರ್ಯಕರ್ತನೊಬ್ಬನು ಹೋದನೆಂಬುದಂತೂ ನಿಜ. ಮುಂದೆ  ಅನೇಕ ವಿಧಗಳಿಂದ ಕಾರ್ಯ ಮಾಡುವ ಅವರ ಕ್ಷಮತೆ  ಜೀವನದ  ಯೌವನದಲ್ಲಿ ಬೆಳೆಯುತ್ತಲೇ ನಡೆದಿತ್ತು.  ಆದರೆ ಆ ಸಮೃದ್ಧ  ಕ್ಷಮತೆಯ ಲಾಭ ಸಿಗುವ  ಸಂಭವ ಇನ್ನಿಲ್ಲ !

ಎರಡು ಮೂರು ದಿನಗಳ  ಹಿಂದೆಯೇ  ನಾನವರನ್ನು ಕಂಡಿದ್ದೆ.  ಬಹಳ ಆನಂದದಲ್ಲಿ ಪ್ರೇಮದಿಂದ ಮಾತುಕತೆ  ನಡೆದಿತ್ತು. “ನಿಮ್ಮ ಮುಂದಿನ ಕಾರ್ಯಕ್ರಮವೇನು?” ಎಂದು ನಾನು ಕೇಳಿದ್ದೆ. “ನಾನು ಪಾಟ್ನಾಗೆ ಹೊರಟಿದ್ದೇನೆ. ಕೆಲವು ದಿನಗಳ ನಂತರ ಕಾನಪುರದಲ್ಲಿ ಭೇಟಿ ಮಾಡುತ್ತೇನೆ” ಎಂದು ಅವರು ಹೇಳಿದ್ದರು. ಪಾಟ್ನಾ ತಲುಪುವ  ಮೊದಲೇ ಈ ಕಾಂಡ ಆಯಿತು.

ಬಾಲ್ಯ ಕಾಲದಲ್ಲೇ, ಅಂದರೆ ವಿದ್ಯಾರ್ಥಿ ಜೀವನದಿಂದಲೇ ಸ್ವಯಂಸೇವಕರಾಗಿ ತಮ್ಮ ಕರ್ತವ್ಯದ ಅರಿವನ್ನು  ಪಡೆದು, ಸಮಗ್ರ ಜೀವನದ ಶಕ್ತಿಯನ್ನು  ಸಂಘಕಾರ್ಯಕ್ಕಾಗಿಯೇ ಸಮರ್ಪಿಸುವ  ಕೆಲವೇ ಜನರಲ್ಲಿ ಅವರ ಸ್ಥಾನ  ದೊಡ್ಡದಾಗಿತ್ತು.  ಸ್ವಯಂಸೇವಕನ ಎಲ್ಲ ಗುಣಗಳನ್ನು  ತನ್ನಲ್ಲಿ ಸ್ಥಿರವಾಗಿ ಉಳಿಸಿಕೊಳ್ಳಬೇಕು, ಸಂಘಟನೆಯ ಬಗ್ಗೆ ಗಮನವಿರಬೇಕು ಮತ್ತು ಅದರ ವಿವಿಧ ಕಾರ್ಯಕ್ರಮಗಳ ಮಹತ್ವವನ್ನು  ಹೃದಯದಲ್ಲಿ ಜಾಗೃತವಾಗಿಟ್ಟು ಅವುಗಳಲ್ಲಿ ಭಾಗವಹಿಸುತ್ತಿರಬೇಕು, ಬೇರೆ ಯಾವುದೇ ಕೆಲಸ ಕೊಟ್ಟರೂ – ಅದು ಯಾವುದೇ ಕ್ಷೇತ್ರದಲ್ಲಾಗಲಿ-ಪರಿಶ್ರಮದಿಂದ ನಿರ್ವಹಿಸಬೇಕು ಎಂದು ಸಂಘದ  ಸ್ವಯಂಸೇವಕನ  ಬಗ್ಗೆ  ಅಪೇಕ್ಷೆ ಇದೆ.  ಅವರಿಗೆ  (ದೀನದಯಾಳಜಿ) ರಾಜಕೀಯ  ಕ್ಷೇತ್ರದಲ್ಲಿ ಕೆಲಸ ಮಾಡಲು ಹೇಳಲಾಯಿತು, ಅವರು ಅದನ್ನು ಮಾಡಿದರು.  ಅದೆಷ್ಟು ಯೋಗ್ಯತೆಯಿಂದ ಅವರು ಆ ಕಾರ್ಯವನ್ನು  ಮಾಡಿದರೆಂಬುದರ  ಕಲ್ಪನೆ ಕೆಲವರಿಗೆ  ಇರಬಹುದು, ಇನ್ನು  ಕೆಲವರಿಗೆ  ಇರಲಿಕ್ಕಿಲ್ಲ. ಈಗ  ಭಾರತೀಯ ಜನಸಂಘ  ಎಂಬ ಹೆಸರಿನಲ್ಲಿ  ದೇಶದಲ್ಲಿ ಹರಡಿರುವ  ರಾಜಕೀಯ ಸಂಘಟನೆ, ಅವರದೇ ಯೋಜನಾಬದ್ಧ ಪರಿಶ್ರಮಶೀಲತೆಯ ಫಲವಾಗಿದೆಯೆಂದು ಹೇಳಿದರೆ  ಅತಿಶಯೋಕ್ತಿಯಾಗದು.

ಆ ಸಂಘಟನೆಯ ತಳಹದಿಯ ಮೊದಲ ಕಲ್ಲನ್ನು ಕಡೆಯುವುದರಿಂದ ಆರಂಭಿಸಿ, ಅದನ್ನು  ಇಷ್ಟು ಎತ್ತರದ ಮಟ್ಟಕ್ಕೆ ಕಟ್ಟಿನಿಲ್ಲಿಸಿದ ಶ್ರೇಯಸ್ಸನ್ನು  ಯಾವುದಾದರೂ ಓರ್ವ ವ್ಯಕ್ತಿಗೆ ಸಲ್ಲಿಸುವುದಾದರೆ  ಅದು ಅವರಿಗೇ ಸಲ್ಲಬೇಕಾದೀತು. ಅವರು ಅದರ ಸರ್ವೋಚ್ಚ ಪದವಿಯನ್ನು  ಪಡೆದರು.  ಅವರು  ಅಧ್ಯಕ್ಷರಾಗಬೇಕೆಂದು ನಾನು ಇಚ್ಛಿಸಿರಲಿಲ್ಲ, ಅವರೂ ಇಚ್ಛಿಸಿರಲಿಲ್ಲ. “ಸ್ವಲ್ಪಕಾಲದವರೆಗೆ, ಕೇವಲ ಒಂದು ವರ್ಷದ ಮಟ್ಟಿಗಾದರೂ ಆಪದ್ಧರ್ಮವಾಗಿ ಅಧ್ಯಕ್ಷಪದವನ್ನು  ಸ್ವೀಕರಿಸಿ” ಎಂದು ನಾನೇ ಅವರಿಗೆ ಹೇಳಬೇಕಾಗಿ ಬಂದಿತ್ತು. ಆದ್ದರಿಂದಲೇ ಅವರು ಈ ಸ್ಥಾನವನ್ನು  ಸ್ವೀಕರಿಸಿದರು; ಅನ್ಯಥಾ ಅವರು ಒಪ್ಪುತ್ತಿರಲಿಲ್ಲ. ಮಾನ, ಮಾನ್ಯತೆ ಅಥವಾ ಪದವಿಗಳ ಇಚ್ಛೆ ಅವರಿಗೆ ಇರಲಿಲ್ಲ ಮತ್ತು ಹಾಗೆಂದೇ ಅಧ್ಯಕ್ಷಪದಕ್ಕೆ ಒಪ್ಪಲು ಅವರ ಮನಸ್ಸು ಎಂದೂ ಇಚ್ಛಿಸಲಿಲ್ಲ. ನಾನೂ ಇಚ್ಛಿಸಿರಲಿಲ್ಲ. ಆದರೆ ಯಾವುದೋ ಪರಿಸ್ಥಿತಿಯ  ಕಾರಣದಿಂದಾಗಿ ನಾನೂ  ಒಂದು ರೀತಿ ಕಟ್ಟುಬಿದ್ದು ಆ ಪದವಿಯನ್ನು  ಸ್ವೀಕರಿಸಲು ಅವರಿಗೆ ಹೇಳಬೇಕಾಯಿತು. ನಾನು ಹೇಳಿದೆನೆಂದು, ಒಬ್ಬ ಸ್ವಯಂಸೇವಕನು  ಯಾವ ರೀತಿ ಆದೇಶ-ನಿರ್ದೇಶಗಳನ್ನು ಪಾಲಿಸುತ್ತಾನೋ, ಅದೇ ನಿಯಮವನ್ನು  ಅನುಸರಿಸಿ ಅವರು ಅದನ್ನು ಪಾಲಿಸಿದರು.  

ಅವರು ಅಧ್ಯಕ್ಷರಾದಂದಿನಿಂದ ಕೆಲವೇ ದಿನಗಳಲ್ಲಿ ಜನಮನದ ಮೇಲೆ ಒಳ್ಳೆಯ ಪರಿಣಾಮವಾದುದು ಕಂಡುಬಂದಿತು. ಅಂತಿಮವಾಗಿ ದೇಶದ ಸೂತ್ರಚಾಲನೆ ಮಾಡುವ  ರಾಜಕೀಯ ಪಕ್ಷ ಇದೇ ಆಗಿದೆಯೆಂದು ಭಾರಿ ಭಾರಿ ವಿರೋಧಿಗಳು ಕೂಡಾ ಯೋಚಿಸತೊಡಗಿದರು. ಕೆಲವರಂತೂ ಅದರ ಹಿಂದೆ ಇರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಕ್ತಿಯು  ಈ ವ್ಯಕ್ತಿಯ ರೂಪದಲ್ಲಿ  ಮೂರ್ತಿಮಂತವಾಗಿ ನಿಂತಿದೆ ಎಂದೂ ಹೇಳಲಾರಂಭಿಸಿದರು.

ಒಂದು ಅತಿ ಕಠಿಣಸ್ಥಿತಿಯಲ್ಲೇ ಜನಸಂಘದ ನಿರ್ಮಾಣವಾಗಿದೆಯೆಂದು ತೋರುತ್ತದೆ. ಅದರ ಭಾಗ್ಯ ಚೆನ್ನಾಗಿಲ್ಲವೋ ಎಂದು ಅನಿಸುತ್ತಿದೆ.  ಮೊದಲು ಡಾ|| ಶ್ಯಾಮಪ್ರಸಾದ ಮುಖರ್ಜಿಯವರು ಅದರ ಅಧ್ಯಕ್ಷರಾಗಿದ್ದರು.  ಅವರದು, ಒಂದು ರೀತಿಯಲ್ಲಿ  ರಾಜಕೀಯ ಹತ್ಯೆಯಾಯಿತು. ಅನಂತರ ಭಾರೀ ಭಾಗ್ಯದಿಂದೆನ್ನಬೇಕು, ಡಾ. ರಘುವೀರರು ದೊರೆತರು. ಅವರೂ ಶ್ರೇಷ್ಠ, ಯೋಗ್ಯ ಪುರುಷರಾಗಿದ್ದರು. ಅವರಿಂದಾಗಿ ವಿದೇಶಗಳಲ್ಲೂ ಈ ರಾಜಕೀಯ ಕ್ಷೇತ್ರದ ಪ್ರಚಾರವಾಗಬಹುದಿತ್ತು ಮತ್ತು ಅದರ ಪ್ರಭಾವವೂ ಉಂಟಾಗುತ್ತಿತ್ತು. ಆದರೆ ಕೆಲವೇ ದಿನಗಳಲ್ಲಿ ಅವರಿಗೆ  ಅಪಘಾತವಾಯಿತು. ಇದರ  ನಂತರ  ಸರ್ವಾಂಗಪರಿಪೂರ್ಣ ಕಾರ್ಯಮಾಡಬಲ್ಲ ಅಧ್ಯಕ್ಷರು ದೊರೆತರು; ಈಗ ಅವರೂ ಈ ರೀತಿ ಹೊರಟುಹೋದರು.

ನಾನು ಕಾಶಿಗೆ  ಹೋಗಿದ್ದೆ, ಅವರ ಶರೀರವನ್ನು  ನೋಡಲೆಂದು, ವಿಮಾನದಲ್ಲಿ ಆ ಶರೀರವನ್ನು ಬೀಳ್ಕೊಟ್ಟು ಇಲ್ಲಿಗೆ ಬಂದೆ. ಆದರೆ  ನಾನು ಕಣ್ಣೀರು ಸುರಿಸಲಿಲ್ಲ. ಜನರು  ನನ್ನ ಬಗ್ಗೆ ಏನೆಂದು ತಿಳಿದುಕೊಂಡರೋ ಗೊತ್ತಿಲ್ಲ. ಕಾರ್ಯಾರ್ಥಿಯಾಗಿರುವವನು  ಸುಖ-ದುಃಖಗಳೆರಡನ್ನೂ  ತಿರಸ್ಕರಿಸಿ ಕಾರ್ಯಮಾಡುತ್ತಲೇ ಇರುವನೆಂಬ ವಚನವೊಂದು ನಮ್ಮ ಪುರಾತನ ಸುಭಾಷಿತಗಳಲ್ಲಿದೆ- ‘ಮನಸ್ವೀ ಕಾರ್ಯಾರ್ಥೀ ಗಣಯತಿ ನ ದುಃಖಂ ನ ಚ ಸುಖಂ|’ ಭಗವಂತನ ಕೃಪೆಯಿಂದ ನನ್ನ ಮನಸ್ಸಿನ ಸ್ಥಿತಿ ಪ್ರಾಯಶಃ ಹೀಗೇ ಆಗಿದೆ; ಆದುದರಿಂದ ಅದನ್ನು ಜೀರ್ಣಿಸಿಕೊಂಡು ಮುಂದೆ  ನಡೆಯಲು ಹೊರಟಿದ್ದೇನೆ.  ಈಗ ಇನ್ನಾರೂ ಅಷ್ಟು ಯೋಗ್ಯತೆಯಿಂದ ಕಾರ್ಯಭಾರ ವಹಿಸಿಕೊಳ್ಳಲು ಮುಂದೆ ಬರಲಾರರು ಎಂದೇನೂ ಇಲ್ಲ. ಕಾರ್ಯ ದೊಡ್ಡದಿದೆ, ಸಂಘಟನೆಯ ಕೆಲಸ ಇದು, ಒಬ್ಬರ ಹಿಂದೆ ಒಬ್ಬರಾಗಿ,  ಅನೇಕ ಕಾರ್ಯಕರ್ತರ ಪರಂಪರೆ ಇದೆ.  ಮುಂದೆ  ಬರಬಲ್ಲ ಯಾವ ಸ್ಥಾನವೂ ಖಾಲಿ ಇರದು ಮತ್ತು ಇದೇ ರೀತಿ ಆಗುವುದೆಂಬ ಪೂರ್ಣ ವಿಶ್ವಾಸ ನನಗಿದೆ. ಈ ವಿಷಯದಲ್ಲಿ  ಹೆಚ್ಚೇನೂ ಹೇಳುವುದಿಲ್ಲ. ಎಷ್ಟು ಹೇಳಿದರೂ ಕಡಿಮೆಯೇ, ಸಹಿಸಲೇಬೇಕಾಗಿದೆ.

ಇಷ್ಟನ್ನು  ಹೇಳಬೇಕಾದರೂ ಮನಸ್ಸಿನ  ಮೇಲೆ ನಿಯಂತ್ರಣವಿಡಲು ತುಂಬ  ಪರಿಶ್ರಮಿಸಬೇಕಾಯಿತು.  ಈಶ್ವರನ ಕೃಪೆಯಿಂದ  ನಿಯಂತ್ರಿಸಲು  ಸಾಧ್ಯವಾಯಿತು. ಅದು ಶರೀರದ ದಣಿವಿನ ರೂಪದಲ್ಲಿ ತುಂಬ ಪರಿಣಾಮವನ್ನುಂಟುಮಾಡಿತು.  ನಾನು ಪ್ರತ್ಯಕ್ಷ ಆ ಕರುಣ ದೃಶ್ಯವನ್ನು  ಕಣ್ಣಾರೆ ಕಂಡುಬಂದಿದ್ದೇನೆ.  ಆದುದರಿಂದಲೇ ಅದನ್ನು ಎಲ್ಲರ ಮುಂದೆ  ಉಲ್ಲೇಖಿಸುವ  ವಿಚಾರ ಮಾಡಿದೆ.

ಅವರಂತೆ  ಸರ್ವಾಂಗಪರಿಪೂರ್ಣ ಯೋಗ್ಯತೆ ತನ್ನಲ್ಲಿಯೂ ಬರಲಿ  ಎಂಬ ನಮ್ಮಲ್ಲಿ ಪ್ರತಿಯೊಬ್ಬರಿಗೂ ಅನಿಸಲಿ.  ಅವರಂತೆಯೇ ಹೊಣೆಯನ್ನು ನಿರ್ವಹಿಸುವ ಯೋಗ್ಯತೆಯನ್ನು  ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಎಲ್ಲರೂ ರಾಜಕೀಯ ಕ್ಷೇತ್ರದೆಡೆಗೆ ವಾಲಬೇಕೆಂದು  ನಾನು ಹೇಳುತ್ತಿದ್ದೇನೆಂದು  ಯಾರೂ ಅರ್ಥಮಾಡಿಕೊಳ್ಳಬಾರದು. ವಾಸ್ತವಿಕವಾಗಿ ಆ ರೀತಿ ಒಲವು ಇರಲೇಬಾರದು. ಯಾವ ವ್ಯಕ್ತಿಯ  ಬಗ್ಗೆ ನಾನೀಗ ಉಲ್ಲೇಖ ಮಾಡಿದೆನೋ  ಅವರಿಗೆ ರಾಜಕೀಯ ಕ್ಷೇತ್ರದ ಬಗ್ಗೆ ಒಂದಿಷ್ಟೂ ಒಲವಿರಲಿಲ್ಲ. ಕಳೆದ ಹಲವು ವರ್ಷಗಳಲ್ಲಿ ಅದೆಷ್ಟೋ ಬಾರಿ ಅವರು ನನ್ನೊಡನೆ “ಎಂತಹ ಗೊಂದಲದಲ್ಲಿ ನನ್ನನ್ನು ಹಾಕಿದಿರಿ? ನನಗೆ ಪುನಃ ನಮ್ಮ ಪ್ರಚಾರಕರ ಕೆಲಸವನ್ನೇ ಕೊಡಿ” ಎಂದು ಹೇಳಿದ್ದರು. ಆಗ “ನಿಮ್ಮ ಹೊರತು ಈ ಗೊಂದಲಕ್ಕೆ ಇನ್ನಾರನ್ನು ಹಾಕಲಪ್ಪಾ?” ಎಂದು ನಾನು ಹೇಳಿದೆ. ಸಂಘಟನೆಯ ಕಾರ್ಯದ ಬಗ್ಗೆ ಯಾರ   ಮನಸ್ಸಿನಲ್ಲಿ  ಇಷ್ಟು ಅವಿಚಲ  ಶ್ರದ್ಧೆ ಮತ್ತು ದೃಢವಾದ ನಿಷ್ಠೆ ಇದೆಯೋ  ಅವರೇ ಆ ಗೊಂದಲದಲ್ಲಿದ್ದು, ಕೊಳಚೆಯಲ್ಲೂ ಕೊಳಚೆಯಿಂದ  ಅಸ್ಪೃಶ್ಯರಾಗಿ ಉಳಿದುಕೊಂಡು, ಯೋಗ್ಯ ರೀತಿ ಅಲ್ಲಿಯ ಶುದ್ಧಿ ಕಾರ್ಯವನ್ನು ಮಾಡಬಲ್ಲರೇ ಹೊರತು, ಇನ್ನಾರಿಂದಲೂ ಅದು ಸಾಧ್ಯವಾಗದು. ಆದುದರಿಂದಲೇ ಆ ಕಡೆ (ರಾಜಕೀಯ ಕ್ಷೇತ್ರ) ಒಲವು ತೋರಲು ನಾನು ಯಾರಿಗೂ ಹೇಳುತ್ತಿಲ್ಲ.

(ಜೋನ್‍ಪುರದಲ್ಲಿ ಪ್ರಕಟಿಸಿದ ಶೋಕೋದ್ಗಾರ)

   

Leave a Reply