ಪು.ತಿ.ನರಸಿಂಹಾಚಾರ್ ಜನ್ಮದಿನ

ವ್ಯಕ್ತಿ ಪರಿಚಯ - 0 Comment
Issue Date : 17.03.2014

ಪು.ತಿ. ನರಸಿಂಹಾಚಾರ್ – ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ.

ಪು.ತಿ.ನ. ಎಂಬುದು ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಎಂಬ ಪೂರ್ಣ ಹೆಸರು. ಇವರ ತಂದೆ ವೃತ್ತಿಯಿಂದ ವೈದಿಕರಾಗಿದ್ದವರು. ಮೇಲುಕೋಟೆಯಲ್ಲಿ 1905 ಮಾರ್ಚ್ 17 ರಂದು ಜನಿಸಿದ ಇವರ ಮೇಲೆ ಅಲ್ಲಿನ ಆಧ್ಯಾತ್ಮಿಕ ಪರಿಸರ ವೈಯಕ್ತಿಕವಾಗಿ ಹಾಗೂ ಸಾಹಿತ್ಯ ಬದುಕಿನಲ್ಲಿ ಸಾಕಷ್ಟು ಪರಿಣಾಮ ಬೀರಿದೆ. ಪ್ರಕೃತಿ ಮತ್ತು ಪ್ರಕೃತಿಯಲ್ಲಿ ದೈವತ್ವದ ಹುಡುಕಾಟ ಅವರ ಕಾವ್ಯದ ಮೂಲಭೂತ ಅಂಶವಾಗಿದೆ. 

ಕೃತಿಗಳು

ಪು.ತಿ.ನ. ಅವರು ಒಟ್ಟು ಹನ್ನೊಂದು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವುಗಳು ಕ್ರಮವಾಗಿ ಹಣತೆ, ಮಾಂದಳಿರು, ಶಾರದ ಯಾಮಿನಿ, ಗಣೇಶ ದರ್ಶನ, ರಸ ಸರಸ್ವತಿ, ಮಲೆ ದೇಗುಲ, ಹೃದಯ ವಿಹಾರಿ, ಇರುಳು ಮೆರುಗು, ಹಳೆಯ ಬೇರು ಹೊಸ ಚಿಗುರು, ಎಂಬತ್ತರ ನಲುಗು. ಹನ್ನೊಂದನೆಯದು ಕನ್ನಡ ಸಂಘ, ಕ್ರೈಸ್ಟ್ ಕಾಲೇಜ್ ಪ್ರಕಟಿಸಿದ `ಹಣತೆಯ ಹಾಡು’ ಆಗಿದೆ. `ಹಣತೆ’ಯಿಂದ ಆರಂಭವಾದ ಅವರ ಕಾವ್ಯ ಜೀವನ `ಹಣತೆಯ ಹಾಡು’ ಕವನ ಸಂಕಲನದೊಂದಿಗೇ ಕೊನೆಗೊಂಡಿದ್ದು ವಿಪರ್ಯಾಸದ ಸಂಗತಿಯಾಗಿದೆ.

ಪು.ತಿ.ನ. ಅವರು ಕವಿ ಮಾತ್ರವಲ್ಲದೆ ಉತ್ತಮ ಗೀತನಾಟಕಕಾರರೂ ಆಗಿದ್ದಾರೆ. ಅವರ ಒಂಬತ್ತು ಗೀತನಾಟಕಗಳಲ್ಲಿ ಗೀತರೂಪಕಗಳೂ ಸೇರಿವೆ. ಅವುಗಳು ಕ್ರಮವಾಗಿ ಗೋಕುಲ ನಿರ್ಗಮನ, ಶ್ರೀಹರಿಚರಿತೆ, ಅಹಲ್ಯೆ, ಸತ್ಯಾಯನ ಹರಿಶ್ಚಂದ್ರ, ವಿಕಟಕವಿ ವಿಜಯ, ಶಬರಿ, ಹಂಸದಮಯಂತಿ, ಹರಿಣಾಭಿಸರಣ, ದೀಪಲಕ್ಷ್ಮಿ ಆಗಿವೆ.

ಪು.ತಿ.ನ.ರವರು ಒಳ್ಳೆಯ ಗದ್ಯ ಬರಹಗಾರರೂ ಆಗಿದ್ದರು ಎಂಬುದಕ್ಕೆ ಅವರ ಐದು ಪ್ರಬಂಧ ಸಂಕಲನಗಳು ಸಾಕ್ಷಿಯಾಗಿವೆ. ಈಚಲು ಮರದ ಕೆಳಗೆ, ಗೋಕುಲಾಷ್ಟಮಿ, ಭೀತಿ ಮೀಮಾಂಸೆ, ಧೇನುಕೋಪಾಖ್ಯಾನ, ಮಸಾಲೆದೋಸೆಯಂತಹ ಪ್ರಬಂಧಗಳು ಅವರ ಹಾಸ್ಯ ಪ್ರಸನ್ನತೆ, ಮಾತುಗಾರಿಕೆಯಿಂದ ಕೂಡಿವೆ.

ಪ್ರಶಸ್ತಿ ಮತ್ತು ಪುರಸ್ಕಾರಗಳು

ಕವಿತೆಯ ಹಾಗೆ ಸರಳ, ಪ್ರಾಮಾಣಿಕ ಮನಸ್ಥಿತಿಯುಳ್ಳ ಹಿರಿಯ ಕವಿ ಪು.ತಿ.ನ.ರವರಿಗೆ ಸಂದ ಪ್ರಶಸ್ತಿಗಳು ಹಲವಾರು. ಇವರ “ಹಂಸ ದಮಯಂತಿ ಮತ್ತು ಇತರ ರೂಪಕಗಳು” ಎಂಬ ಕೃತಿಗೆ 1966ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಹಾಗೆಯೇ ಇವರ “ಗೋಕುಲ ನಿರ್ಗಮನ” ಎಂಬ ಸಂಗೀತ ಪ್ರಧಾನ ನಾಟಕ ಕನ್ನಡದ ಮೇರು ಕೃತಿಗಳ ಸಾಲಿಗೆ ಸೇರುತ್ತದೆ. ಈ ಕಾವ್ಯಮಯ ನಾಟಕದಲ್ಲಿ, ಕೃಷ್ಣನಿಗೆ ಕಂಸನಿಂದ ಆಹ್ವಾನ ಬಂದು ಗೋಕುಲದಿಂದ ದ್ವಾರಕೆಗೆ ಹೋಗಬೇಕಾಗಿ ಬಂದಾಗ, ಗೋಕುಲದ ಜನರ ಅನುರಾಗ, ರಾಧೆಯ ವ್ಯಾಕುಲತೆ ಮುಂತಾದವುಗಳನ್ನು ದಿವ್ಯವಾಗಿ ನಿರೂಪಿಸಿದ್ದಾರೆ. ಪದ್ಮಶ್ರೀ, ಪಂಪಪ್ರಶಸ್ತಿ, ನಾಡೋಜ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಡಿ.ಲಿಟ್,ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಜೊತೆಗೆ ಚಿಕ್ಕಮಗಳೂರಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಅವರಿಗೆ ದೊರೆಯದಿದ್ದ ಪ್ರಶಸ್ತಿ ಎಂದರೆ “ಭಾರತೀಯ ಜ್ಞಾನಪೀಠ ಪ್ರಶಸ್ತಿ” ಮಾತ್ರ! ಇದಕ್ಕಿಂತ ಮಿಗಿಲಾಗಿ ಒಳ್ಳೆಯ ಹಿರಿಯ ಸ್ನೇಹಿತರೂ, ಅಭಿಮಾನಿ ಕಿರಿಯ ಸ್ನೇಹಿತರನ್ನೂ ಹಾಗೂ ಸಹೃದಯಿಗಳ ಮೆಚ್ಚಿಗೆಯನ್ನು ಪಡೆದವರಾಗಿದ್ದಾರೆ. ಅವರು ಗತಿಸಿದಾಗ ಅವರಿಗೆ ತೊಂಬತ್ಮೂರರ ವಯಸ್ಸು.

ಕವಿ ಪುತಿನ ಅವರ ಶತಮಾನದ ಮನೆ

 

ಪುತಿನ ಮನೆ ಈಗ ಸ್ಮಾರಕವಾಗದೆ ಅಂದರೆ, ಪುತಿನ ಬದುಕಿದ್ದ ಕಾಲದಲ್ಲೇ. ಕವಿಯ ಆಶಯವೂ ಅದೇ ಆಗಿತ್ತು; ‘ನಾನು ಬದುಕಿರುವಾಗಲೇ ಬಾಳಿ, ಬದುಕಿದ ನನ್ನ ಮನೆ ಸ್ಮಾರಕವಾಗಬೇಕು. ನಾನು ಬರೆದ ಸಾಹಿತ್ಯ ನಿಂತ ನೀರಾಗದೆ, ನನ್ನ ಸಾವಿನಾಚೆಯೂ ಮುಂದಿನ ಪೀಳಿಗೆಯನ್ನು ತಲುಪುವಂತಾಗಬೇಕು’.  ಶತಮಾನದ ಅಂಚಿನಲ್ಲಿದ್ದ ಮನೆಯ ಹಳೇ ಕಂಬಗಳು, ಮಹಡಿಯ ಮೆಟ್ಟಿಲುಗಳು, ಹೆಂಚುಗಳನ್ನು ಬಳಸಿಕೊಂಡೇ ಮೂಲ ಮನೆಯ ಅಂದ, ಚಂದಕ್ಕೆ ಯಾವುದೇ ಧಕ್ಕೆ ಬಾರದಂತೆ ಕವಿ ಮನೆಯನ್ನು ಸುಂದರ ಸ್ಮಾರಕವಾಗಿಸಲಾಯಿತು. ಈ ಮನೆಯಲ್ಲಿ ಕವಿ ಪುತಿನ ಅವರ ಊರುಗೋಲು, ಬರೆಯಲು ಬಳಸುತ್ತಿದ್ದ ಮಣೆ, ಟೋಪಿ ಸೇರಿದಂತೆ ಮಹಡಿಯಲ್ಲಿ ಕುಳಿತು ಬರೆಯುತ್ತಿದ್ದ ಜಾಗವನ್ನೂ ಸಂರಕ್ಷಿಸಲಾಗಿದೆ. ಅಲ್ಲದೆ, ಕವಿಯ ‘ಮನೆ ದೇಗುಲ’, ‘ರಥ ಸಪ್ತಮಿ’, ‘ಹರಿ ಚರಿತೆ’, ‘ಮಾಂದಳಿರು’, ‘ಜಾನ್ಹವಿಗೆ ಜೋಡಿ ದೀವಿಗೆ’, ‘ಗೋಕುಲ ನಿರ್ಗಮನ’ ಸೇರಿದಂತೆ ಅನೇಕ ಕೃತಿಗಳ ಪ್ರಥಮ ಮುದ್ರಣವೂ ಇಲ್ಲಿ ನೋಡಲು ಸಿಗುತ್ತದೆ.

   

Leave a Reply