ಪರಮಪೂಜ್ಯ ಡಾ. ಹೆಡ್ಗೇವಾರ್

ವ್ಯಕ್ತಿ ಪರಿಚಯ - 0 Comment
Issue Date : 28.07.2014

ನಿಮ್ಮ ಜೀವನ ಚರಿತ್ರೆಯನ್ನು ನಿಮ್ಮ  ಸಮಕ್ಷಮವೇ ಯಾರಾದರೂ  ಬರೆಯಬೇಕೆಂಬ ವಿಷಯ ನಿಮಗೆಂದಿಗೂ ಇಷ್ಟವಿರಲಿಲ್ಲ. ನಿಮ್ಮ  ಶೀಲದಿಂದಲೇ ನೀವು ಜನಗಳ ಅಂತಃಕರಣದಲ್ಲಿ  ನಿಮ್ಮ ಮೂರ್ತಿಯನ್ನು ಕೊರೆದಿರುವಿರಿ. ಲೇಖನಿಯಿಂದ ನಿಮ್ಮ ವಿಷಯವಾಗಿ ಬರೆಯುವ  ದುರಾದೃಷ್ಟ ನನ್ನ ಪಾಲಿಗೆ ಬರಬಹುದೆಂದು  ಕನಸಿನಲ್ಲಿ  ಕೂಡ ಎಣಿಸಿರಲಿಲ್ಲ. ನಿಮ್ಮ ಜೀವನ ಅತ್ಯಂತ ಉಜ್ವಲವಾದುದು ಮತ್ತು ಅದರ ಪ್ರಭಾವ ನಿಮ್ಮ ಸ್ನೇಹಿತರ ಶೀಲದ ಮೇಲೆ ಖಂಡಿತವಾಗಿಯೂ ಆಗಿದೆ. ಆದರೆ ನಿಮ್ಮ ವಿಷಯವಾಗಿ ಏನಾದರೂ ಬರೆಯಬೇಕೆಂಬ ಪ್ರೇಮದ ಬಲವಂತಕ್ಕೆ ಇಂದು ತಲೆಬಾಗಬೇಕಾಗಿದೆ.

ಪೂಜನೀಯ ಡಾ. ಕೇಶವ ಬಳೀರಾಮ್ ಹೆಡ್ಗೇವಾರ್ ! ನೀವು ಯಾರೆಂಬುದು ಕೊನೆಯವರೆಗೂ ಪ್ರಪಂಚಕ್ಕೆ ಅರ್ಥವಾಗಲಿಲ್ಲ.  ನಿಜ, ಆದರೆ ನಿಮ್ಮ ಅಂತರಂಗದಲ್ಲಿಯ ಪ್ರಖರ ಪ್ರೇರಕಶಕ್ತಿಯು ತನ್ನ ಅಸ್ತಿತ್ವದ ಅರಿವನ್ನು  ಲೋಕಕ್ಕೆಲ್ಲ ಮಾಡಿಕೊಡದೆ ಇರಲಿಲ್ಲ. ಈ ವ್ಯಕ್ತಿಯೊಡನೆ  ನಿಮ್ಮ ಪ್ರತ್ಯಕ್ಷ ಸಂಪರ್ಕವುಂಟಾಗುವ  ಮುಂಚೆಯೇ ನೀವು ಯಾರೆಂಬುದನ್ನು ಅರಿತುಕೊಳ್ಳುವ  ಆತುರತೆ ಈ ವ್ಯಕ್ತಿಯಲ್ಲಿ ಉಂಟಾಗಿತ್ತು.

ಪ್ರಥಮ ಪರಿಚಯ

1920ರ ಜುಲೈ ಆಗಸ್ಟ್ ತಿಂಗಳ ದಿವಸಗಳಾಗಿರಬಹುದು.  ಸಮಯದ ಯಾವ ನಿರ್ಬಂಧವನ್ನೂ ಗಮನಿಸದೆ ನೀವು ನಿಮ್ಮ ಜೀವಶ್ಚ ಕಂಠಶ್ಚ ಸ್ನೇಹಿತರಾಗಿದ್ದ ಶ‍್ರೀ ಬಾವೂಜಿ  ಕಾಪರೆಯವರ ಮನೆಗೆ ನಿತ್ಯವೂ ಬರುತ್ತಿದ್ದಿರಿ. ನಗೆಮೊಗದ 8-10 ಯುವಕರು ನಿಮ್ಮೊಡನೆ ಯಾವಾಗಲೂ  ಇದ್ದೇ ಇರುತ್ತಿದ್ದರು. ಅದರಿಂದ ಸಹಜವಾಗಿಯೇ ನಿಮ್ಮ ಕಡೆಗೆ ಜನಗಳ ಗಮನವು  ಸೆಳೆಯಲ್ಪಡುತ್ತಿತ್ತು. ನಿಮ್ಮೊಡನೆ ಸಮವಯಸ್ಕರಂತೆ ಮಾತನಾಡುವಷ್ಟು ವಯಸ್ಸು ನನಗಾಗಿರಲಿಲ್ಲ. ಆದರೆ ಹುಡುಗಾಟದಲ್ಲೇ ನಿಮ್ಮ ‘ಬೈಠಕ್’ಗಳಲ್ಲಿ ಕೂತುಕೊಳ್ಳುವ ಅವಕಾಶವನ್ನು  ಮಾತ್ರ ನಾನು ಕಳೆದುಕೊಳ್ಳಲಿಲ್ಲ.

ಲೋಕಮಾನ್ಯರು ದಿವಂಗತವಾಗಿದ್ದರು. ಗಾಂಧಿಯುಗದ ಉದಯವಾಗಿತ್ತು.  ಎಲ್ಲೆಲ್ಲಿಯೂ ಚಳುವಳಿ ಮತ್ತು ಗಲಾಟೆ. ಆ ಕಾಲದಲ್ಲಿ  ಡಾಕ್ಟರ್, ನೀವು ಸಹ ಅತ್ಯಂತ ಗಡಿಬಿಡಿಯಲ್ಲಿರುತ್ತಿದ್ದಿರಿ. ಬಹಿರಂಗ ಸಭೆಗಳಲ್ಲಿ ನಿಮ್ಮ ಭಾಷಣಗಳಾಗುತ್ತಿದ್ದವು. ಆದರೆ ನಿಮ್ಮ ಭಾಷಣವನ್ನು ಕೇಳುವ ಸದವಕಾಶ ಮಾತ್ರ ಅನೇಕ ದಿವಸಗಳಾದ ಮೇಲೆ ನನಗೆ ಲಭಿಸಿತು. ಜಾಲಿಯನ್‍ವಾಲಾಬಾಗಿನ ವಿಷಯ ಭಾಷಣಗಳು ನಡೆಯುತ್ತಿದ್ದ ಕಾಲವದು.  ಅಸಹಕಾರದ ಯುಗ. ಗಾಂಧಿ-ಪ್ರೇರಿತ ರಾಜಕೀಯದ ವರ್ಚಸ್ಸೇ ವರ್ಚಸ್ಸು.  ‘9 ತಿಂಗಳೊಳಗಾಗಿ ಸ್ವರಾಜ್ಯ’ದ ಗಡಿಬಿಡಿ ಮತ್ತು ಧಾಂದಲೆ ಸಾರ್ವತ್ರಿಕವಾಗಿತ್ತು. ನೀವು ಗಾಂಧಿ- ತತ್ವಪ್ರಣಾಳಿಗೆ ಹತ್ತಿರವಾಗಿದ್ದಿರೋ, ಅದರಿಂದ  ದೂರವಾಗಿದ್ದಿರೋ ಎಂಬುದನ್ನು  ತಿಳಿಯುವ ತಿಳಿವಳಿಕೆಯಾಗಲಿ ವಯಸ್ಸಾಗಲಿ ಆಗ ನನಗಿರಲಿಲ್ಲ. ಆದರೆ ನಿಮ್ಮ ಚಟುವಟಿಕೆ ಮತ್ತು ಚುರುಕುತನ ಮಾತ್ರ ನನ್ನ ಮನಸ್ಸನ್ನು  ಆಕರ್ಷಿಸದಿರಲಿಲ್ಲ.

1921ರ ಮೊಕದ್ದಮೆ

 ಇದೇ ರೀತಿ ಕೆಲವು ಕಾಲ  ಕಳೆದ ಮೇಲೆ 1921ರಲ್ಲಿ  18ನೆಯ ಕಲಮಿನನ್ವಯ  ನಿಮ್ಮ ಮೇಲೆ  ಮೊಕದ್ದಮೆ ನಡೆಯಿತು. ‘ಡಿಫೆನ್ಸ್’ ಮಾಡದೇನೇ ಸೆರೆಮನೆಗೆ ಹೋಗುವುದು ಗಾಂಧಿ ನೀತಿಯಾಗಿತ್ತು. ಆದರೆ ನಿಮಗೆ ಅದು ಸಮ್ಮತವಿರಲಿಲ್ಲ.  ಸ್ವತಃ ನೀವೇ ನಿಮ್ಮ ಮೊಕದ್ದಮೆಯ ಕೆಲಸ ನೋಡಿಕೊಳ್ಳುತ್ತಿದ್ದಿರಿ. ಸುಮ್ಮನೆ ಸೆರೆಮನೆಯಲ್ಲಿ ಕೊಳೆಯುವುದು ನಿಮ್ಮ ಕಾರ್ಯಕ್ರಮವಾಗಿರಲಿಲ್ಲ. ಗಾಂಧಿ ನೀತಿಯ ಬಿರುಗಾಳಿಯಲ್ಲಿ ಸಿಲುಕಿದ ನಿಮ್ಮ ಸ್ನೇಹಿತರಿಗೆ ನಿಮ್ಮ ಈ ನೀತಿ ರುಚಿಸಲಿಲ್ಲ. ಆದರೆ ನೀವು ಮಾತ್ರ ನಿಮ್ಮ ನೀತಿಯಿಂದ ಎಂದಿಗೂ ಚ್ಯುತರಾಗಲಿಲ್ಲ.

ನಿಮ್ಮ ಸ್ನೇಹಿತರನ್ನು  ಮಾತ್ರ ನೀವು ಚೆನ್ನಾಗಿಯೇ ಚಕಿತಗೊಳಿಸಿದಿರಿ. ನೀವು ಜೈಲಿಗೆ ಹೋಗದೆ ಜಾಮೀನಿನ  ಮೇಲೆ ಬಿಡುಗಡೆಯಾಗುವಿರೆಂದು ಎಲ್ಲರ ಭಾವನೆ. ತೀರ್ಪು ಕೊಡುವ  ದಿವಸ ನ್ಯಾಯಸ್ಥಾನದಲ್ಲಿ  ಸ್ನೇಹಿತರು ಕಿಕ್ಕಿರಿದು ತುಂಬಿದ್ದರು. ಜಾಮೀನು ಕೊಡಕೂಡದೆಂದು ನೀವು ಮನಸ್ಸಿನಲ್ಲಿ  ನಿರ್ಧಾರ ಮಾಡಿದ್ದಿರಿ; ಆದರೆ ನಿಮ್ಮ ಸ್ನೇಹಿತರಿಗೆ ಈ ವಿಷಯ ಗೊತ್ತಿರಲಿಲ್ಲ. ನೀವು ಜೈಲಿಗೆ ಹೋಗುವ ಮಾರ್ಗವನ್ನು ಸ್ವೀಕರಿಸಿದರೆ ನಿಮ್ಮ ಕೊರಳಲ್ಲಿ ಹಾಕಲೆಂದು ಕೆಲವು ಚತುರ ಸ್ನೇಹಿತರು ಹೂಮಾಲೆಗಳನ್ನು  ತಂದು ಬಚ್ಚಿಟ್ಟಿದ್ದರು. ಜಾಮೀನು ಇಲ್ಲವೆ ಒಂದು ವರ್ಷ ಕಠಿಣ ಸಜ ಎಂದು ತೀರ್ಪು ಆಯಿತು.  ನೀವು ಮಾತ್ರ ಸಜ ಸ್ವೀಕರಿಸಿದಿರಿ, ಜನಗಳ ಅಂದಾಜು ಪೂರ್ತಿ ತಪ್ಪಿತು. ನೀವು ಮನಸ್ಸಿನಲ್ಲಿ ನಿರ್ಧಾರ ಮಾಡಿದ ವಿಷಯವನ್ನು  ಬಹುತರವಾಗಿ ಯಾರಿಗೂ ತಿಳಿಸುತ್ತಿರಲಿಲ್ಲ. ಅದು ನಿಮ್ಮ  ಸ್ವಭಾವದ ವೈಶಿಷ್ಟ್ಯವಾಗಿತ್ತು. 1930ರ ಸತ್ಯಾಗ್ರಹ ಸಮಯದಲ್ಲಿ ಸಹ ನಿಮ್ಮ ಸ್ನೇಹಿತರಿಗೆ ಈ ವಿಷಯದ ಅನುಭವವಾಯಿತು.

 ಮುಸಲ್ಮಾನರ ದೊಂಬಿಗಳು

1922ರಲ್ಲಿ ನಿಮ್ಮ ಬಿಡುಗಡೆಯಾಯಿತು.  ಮತ್ತೆ ನೀವು  ನಿಮ್ಮ ಕಾರ್ಯದಲ್ಲಿ ಮಗ್ನರಾದಿರಿ. ಎಲ್ಲ ಕಡೆಗೂ ಮುಸಲ್ಮಾನರು ದೊಂಬಿಗಳನ್ನು ಮಾಡುತ್ತಿದ್ದರು.  ನಾಗಪೂರವೇನೂ  ಅದಕ್ಕೆ ಅಪವಾದವಾಗಿರಲಿಲ್ಲ. 1927ರ ದೊಂಬಿ ಇಡೀ ಹಿಂದುಸ್ಥಾನದಲ್ಲಿ  ಹೆಸರುವಾಸಿಯಾಯಿತು. ಹಿಂದೂಗಳ ದೃಷ್ಟಿಯಿಂದಂತೂ ಅದು ಚಿರಸ್ಮರಣೀಯವಾಯಿತು. ಆ ಸಂದರ್ಭದಲ್ಲಿ ಹಿಂದೂಗಳ ಜೀವಿತ, ವಿತ್ತ, ಗೌರವ ನಿಮ್ಮಿಂದಲೇ ಸುರಕ್ಷಿತವಾದವು.  ನಾಗಪೂರದ ಹೆಸರು ದಿಗಂತದಲ್ಲಿ ಮೊಳಗಿತು. ವಾದ್ಯ ಪ್ರಕರಣವು  ಒರೆಗೆ ಹತ್ತಿ ಮಸೀದಿಯ ಮುಂದೆ 24 ಗಂಟೆಗಳಲ್ಲಿ ಯಾವಾಗ ಬೇಕಾದರೂ  ವಾದ್ಯ ಬಾರಿಸುವ ಅಧಿಕಾರ ಪ್ರಸ್ಥಾಪಿತವಾಯಿತು.  ಅದರ ಕಾರ್ಯನಿರ್ವಹಣೆಯನ್ನು ಮಾತ್ರ  ನೀವು ಸ್ವಪ್ರಯತ್ನದಿಂದ  ಮಾಡಿದಿರಿ. ಅದರಲ್ಲಿ ನೀವೇ ಪ್ರಮುಖ ಪಾತ್ರವನ್ನು  ವಹಿಸಿದಿರಿ. ನಿಮ್ಮ ನಾಯಕತ್ವದಲ್ಲಿ ತರುಣರ ತಂಡಗಳು ಮಸೀದಿಯ ಮುಂದೆ ನಿಂತು ವಾದ್ಯಗಳನ್ನು  ಬಾರಿಸಿದವು. ಕೆಲವು ಸಂದರ್ಭಗಳಲ್ಲಿ ನೀವೇ ಸ್ವತಃ ಕೊರಳಿಗೆ  ಡೋಲು ಹಾಕಿಕೊಂಡು ಅದನ್ನು ಬಾರಿಸಿದಿರಿ. ಆದರೆ ಅದರಿಂದ ನಿಮಗೆ ತೃಪ್ತಿಯಾಗಲಿಲ್ಲ. ಅಷ್ಟೇ ಕಾರ್ಯಕ್ಷೇತ್ರ ನಿಮಗೆ ಸಾಕಾಗಲಿಲ್ಲ. ಮುಗಿಲು ಮುಟ್ಟುವ  ಮಹತ್ವಕಾಂಕ್ಷೆ  ನಿಮ್ಮದಾಗಿತ್ತು. ಮತ್ತು ಅಂತಹ ಕರ್ತೃತ್ವಶಕ್ತಿಯೂ ನಿಮ್ಮಲ್ಲಿದ್ದಿತು.

1924-25ರಲ್ಲಿ ನಿಮ್ಮೊಡನೆ ಆಗಾಗ್ಗೆ ಭೇಟಿಯಾಗಲು ಆರಂಭವಾಯಿತು. ನಮ್ಮ ಚರ್ಚಾಕೂಟದಲ್ಲಿ ನಾವು ನಿಮ್ಮನ್ನು  ಒಮ್ಮೆ ಆಹ್ವಾನಿಸಿದ್ದೆವು. ಅಂದು ಲೋಕಮಾನ್ಯರ ಪುಣ್ಯತಿಥಿಯ ದಿವಸವಾಗಿತ್ತು. ಅನಂತರ ನಮ್ಮ ಪರಸ್ಪರ ನಿಜವಾದ ಪರಿಚಯವಾಯಿತು. ಅರ್ಥಾತ್ ಯಾವ ವಿಷಯದಲ್ಲಿಯೂ ನಿಮ್ಮೊಡನೆ ನನ್ನ ತುಲನೆಯಾಗುವುದು ಸಾಧ್ಯವಿರಲಿಲ್ಲ. ಕರ್ತೃತ್ವ, ವಯಸ್ಸು, ಬುದ್ಧಿಚಾತುರ್ಯ ಎಲ್ಲದರಲ್ಲಿಯೂ  ನೀವು ಅತಿ ಶ್ರೇಷ್ಠವಾಗಿದ್ದಿರಿ. ಆದರೆ ಮಾತುಕತೆಗಳು ಮಾತ್ರ ಬಿಚ್ಚು ಮನಸ್ಸಿನಿಂದ ನಡೆಯುತ್ತಿದ್ದವು. ಅನಂತರ ಮಾತ್ರ ನನ್ನ ಮಹದ್ಭಾಗ್ಯದಿಂದ ನಿಮ್ಮ ಚಿರಂತನ ಸಹವಾಸ ಹಾಗೂ ನಾಯಕತ್ವ ಲಭಿಸಿತು.

ನಿಮ್ಮ ನಿಜವಾದ ಪರಿಚಯ ಅಂದಿನಿಂದ ಆರಂಭವಾಯಿತು. ನಿಮ್ಮ ಸಹವಾಸದಿಂದ  ನೀವು ಅನೇಕ ಯುವಕರ ಜೀವನವನ್ನು  ಉನ್ನತಗೊಳಿಸಿದಿರಿ, ವಿಕಾಸಗೊಳಿಸಿದಿರಿ ಮತ್ತು ಸಾರ್ಥಕಗೊಳಿಸಿದಿರಿ. ಎಲ್ಲವೂ ಇರುತ್ತದೆ, ಆದರೆ ಯೋಜನೆ ಮಾಡುವ ಪುರುಷನಿರುವುದಿಲ್ಲ. ಈ ರಾಷ್ಟ್ರದಲ್ಲಿ  ಯಾವುದಾದರೂ ವಸ್ತುವಿನ ಅಭಾವವಿರುವುದಾರೆ ಯೋಜನಾಕೌಶಲದ ಮತ್ತು ಯೋಜನೆ ಮಾಡುವ ಪುರುಷನ ಅಭಾವವಿದೆ. ನೀವು ಆ ಅಭಾವವನ್ನು ಇಲ್ಲದಂತೆ ಮಾಡಿದಿರಿ. ನಮಗೆ ಒಬ್ಬ ಕರ್ತೃತ್ವಶಾಲಿ, ಸತ್ವಶಾಲಿ, ಯೋಜನಾಕುಶಲ ನಾಯಕನು ಲಭಿಸಿದನೆಂದು ಧನ್ಯತೆ  ಎನಿಸುತ್ತಿತ್ತು. ನಿಜವಾಗಿಯೂ ಡಾಕ್ಟರ್‍ಜಿ, ನೀವು ಧನ್ಯರು.  ನಿಮ್ಮ ಪರಿಚಯವನ್ನು  ಯಾವ ಶಬ್ದಗಳಿಂದ  ಮಾಡಿಕೊಡಲಿ? ಆದರೆ ಬಲವಂತದಿಂದ ಇದನ್ನು ಮಾಡಬೇಕಾಗಿದೆ. ಅದಕ್ಕೋಸ್ಕರ ಮೊದಲು 1920ಕ್ಕೆ ಮುಂಚಿನ ನಿಮ್ಮ ಚರಿತ್ರೆಯನ್ನು  ಸಂಕ್ಷೇಪವಾಗಿ ಬರೆಯಲು ಪ್ರಯತ್ನ ಮಾಡುವೆನು.

ಪೂರ್ವ ಚರಿತ್ರೆ

1889ರಲ್ಲಿ ನಿಮ್ಮ ಸ್ವಂತ ಮನೆಯಲ್ಲಿ, ನಿಮ್ಮ ಮೂಲಕ ಎಲ್ಲರಿಗೂ ಪರಿಚಿತವಾದ ಮನೆಯಲ್ಲಿ ನಿಮ್ಮ ಜನ್ಮವಾಯಿತು.7-8 ವರ್ಷ ಮಾತ್ರ ನಿಮಗೆ ತಂದೆ-ತಾಯಿಗಳ ವಾತ್ಸಲ್ಯದ ಸಹವಾಸ ಲಭಿಸಿತು. ಪ್ಲೇಗ್ ಹಾವಳಿಯಲ್ಲಿ ಒಂದೇ ದಿವಸ ತಾಯಿ-ತಂದೆಗಳಿಬ್ಬರೂ ಪ್ಲೇಗಿಗೆ ಆಹುತಿಯಾದರು. ಅನಂತರ ನಿಮ್ಮ ಅಣ್ಣಂದಿರೇ ನಿಮ್ಮ ಪಾಲನ ಪೋಷಣೆ ಮಾಡಿದರು. ಮುಂದೆ ಅವರು ಸಹ ಪ್ಲೇಗಿಗೆ ಆಹುತಿಯಾದರು. ನಿಮ್ಮ ತಮ್ಮಂದಿರಾದ ಸೀತಾರಾಮಪಂತರು ಆಂಗ್ಲ ವಿದ್ಯೆಯನ್ನು  ಕಲಿಯದೆ ವೈದಿಕ ಮನೆತನಕ್ಕೆ ಅನುರೂಪವಾದ ವಿದ್ಯೆಯನ್ನು  ಅಭ್ಯಾಸ ಮಾಡಿ ಸಂಪ್ರದಾಯದಂತೆ ಭಿಕ್ಷುಕ ವೃತ್ತಿಯನ್ನು  ಅವಲಂಬಿಸಿದರು. ಅವರು ನಿಮಗೆ ಯಾವ ವಿಷಯದ ಅಭಾವವೂ ತೋರದಂತೆ ಮಾಡಿದರು.

ನಿಮ್ಮ ವಿದ್ಯಾಭ್ಯಾಸ ಪುರಾತನ  ಪ್ರಸಿದ್ಧ  ನೀಲ್‍ಸಿಟಿ ಹೈಸ್ಕೂಲ್‍ನಲ್ಲಿ ನಡೆಯಿತು. ನೀವು ಪ್ರಾಥಮಿಕ ಶಾಲೆಯಲ್ಲಿ  ಓದುತ್ತಿರುವಾಗಲೇ ನಿಮ್ಮ ಸ್ವಾಭಿಮಾನಪೂರ್ಣ  ಸ್ವಭಾವ ಎಲ್ಲರ ನಿದರ್ಶನಕ್ಕೆ ಬಂದಿತ್ತು. ಶಿವಾಜಿ ಮಹಾರಾಜರು ನಿಮ್ಮ ಸ್ಫೂರ್ತಿಯ ದಿವ್ಯ ಕೇಂದ್ರವಾಗಿದ್ದರೆಂದು  ನೀವು ಅನೇಕ ಬಾರಿ ಹೇಳುತ್ತಿದ್ದಿರಿ. ಅದೊಂದು ಹುಡುಗಾಟವಾಗಿರಬಹುದು, ಆದರೆ ನೀವು  ಅಫಜುಲ್‍ಖಾನನ ಚಿತ್ರವನ್ನು ಕತ್ತರಿಸಿ ಶಿವಾಜಿ  ಮಹಾರಾಜರ ಚಿತ್ರದ ಕೆಳಗೆ, ಸರಿಯಾಗಿ  ಅವರ ಕಾಲ ಕೆಳಗೆ ಅಂಟಿಸಿ, ಅಫಜುಲ್‍ಖಾನನ ಬಗ್ಗೆ ನಿಮ್ಮ ಮನೋಭಾವನೆಯನ್ನು ಸ್ಪಷ್ಟವಾಗಿ ವ್ಯಕ್ತ ಮಾಡಿದ್ದಿರಿ.

ನೀಲ್‍ಸಿಟಿ  ಹೈಸ್ಕೂಲ್‍ನಲ್ಲಿ ನಿಮಗೆ  ಅಧ್ಯಾಪಕರಾಗಿದ್ದವರಲ್ಲಿ ಕೆಲವರು ಇಂದಿಗೂ ಬೇರೆ ಬೇರೆ ವ್ಯಯಸಾಯದಲ್ಲಿದ್ದಾರೆ. ಅವರ ಪೈಕಿ ಶ್ರೀ ಬಾವಾಜಿ  ಕೋಲ್ತೆ ಈಗ  ಭಂಡಾರಾ  ಎಂಬಲ್ಲಿ  ಅಡ್ವೋಕೇಟರಾಗಿದ್ದಾರೆ. ನಿಮ್ಮ ಗುರುಶಿಷ್ಯ ಸಂಬಂಧ ಸಂಘದ ಮೂಲಕ ಅತ್ಯಂತ  ಸ್ಫೂರ್ತಿದಾಯಕವಾಗಿತ್ತು.  ಇತ್ತೀಚೆಗೆ ನೀವು  ಅವರಿಗೆ ಗುರುಗಳಾಗಿದ್ದಿರಿ ಮತ್ತು ಅವರು ನಿಮ್ಮ ಶಿಷ್ಯತ್ವವನ್ನು ಅಂಗೀಕರಿಸಿದ್ದರು. ಸರಸಂಘಚಾಲಕ್‍ರಾದ ನಿಮಗೆ ಅವರು ಜಿಲ್ಲಾಸಂಘಚಾಲಕ್‍ರಾಗಿ ಪ್ರಣಾಮ ಮಾಡುವಾಗ  ನಮಗೆ ಬಹಳ ಕೌತುಕವೆನಿಸುತ್ತಿತ್ತು.

ಸರಕಾರದ ವಕ್ರದೃಷ್ಟಿ

1904-5ರ ಕಾಲ ಭಾರತದ ಚರಿತ್ರೆಯಲ್ಲಿ ಅತ್ಯಂತ ಹೃದಯಂಗಮವಾಗಿದೆ. ಲಾರ್ಡ್‍ ಕರ್ಜನ್‍ರ ಆಳ್ವಿಕೆ, ಬಂಗಾಲದ ವಿಭಜನೆ, ಸ್ವದೇಶಿ ಮತ್ತು ಬಹಿಷ್ಕಾರ, ಹಾಗೇನೇ ಜನಜಾಗೃತಿಗಾಗಿ ಲೋಕಮಾನ್ಯ ತಿಲಕರು ನಡೆಸಿದ  ಚಳುವಳಿ  ಇವೆಲ್ಲವನ್ನೂ ನೀವು ತೆರೆದ ಕಣ್ಣುಗಳಿಂದ ನೋಡುತ್ತಿದ್ದಿರಿ. ನಿಮ್ಮದು ಸ್ವಾಭಿಮಾನದ ಸ್ವಭಾವ, ತೇಜಸ್ವಿ ಮನೋಭಾವನೆ, ಮನೆಯ ಅಥವಾ ಶಾಲೆಯ ನಾಲ್ಕು ಗೋಡೆಗಳ ಒಳಗೆ ಮಾತ್ರ ನಿಮ್ಮ ಮನಸ್ಸು  ಸೀಮಿತವಾಗಿರಲು  ಸಾಧ್ಯವಿರಲಿಲ್ಲ. ಅದಾದರೋ ಸರ್ವತ್ರ ಸಂಚಾರಿಯಾಗಿತ್ತು. ಬಹಿರಂಗ ಸಭೆಗಳಲ್ಲಿ ಸಹ ನೀವು ಭಾಷಣ ಮಾಡುತ್ತಿದ್ದಿರಿ. ಆಗ ನಿಮಗೆ ಕೇವಲ 15-16 ವರ್ಷ ವಯಸ್ಸಾಗಿರಬಹುದು. ತನ್ನ ವಿರುದ್ಧ ಒಂದು ಅಕ್ಷರವನ್ನೂ ನುಡಿಯಕೂಡದೆಂದು  ಸರಕಾರದ ಆಗ್ರಹ. ಅಂತಹ ಸನ್ನಿವೇಶದಲ್ಲಿ  ನಿಮ್ಮ ಚಟುವಟಿಕೆಯ ಅಪರಿಹಾರ್ಯ ಪರಿಣಾಮವಾಗಿ  ನೀವು ನೀಲ್‍ಸಿಟಿ ಹೈಸ್ಕೂಲಿನಿಂದ  ಹೊರಗೆ ಬರಬೇಕಾಯಿತು.

ಅನಂತರ ನೀವು ಯವತಮಾಳದ ರಾಷ್ಟ್ರೀಯ ಶಾಲೆಗೆ ಸೇರಿದಿರಿ. ಮ್ಯಾಟ್ರಿಕ್ ಪಾಸು ಮಾಡಿದ ಮೇಲೆ  ಸ್ನೇಹಿತರ ಸಲಹೆಯಂತೆ ಕಲ್ಕತ್ತದ ನ್ಯಾಶನಲ್ ಮೆಡಿಕಲ್ ಕಾಲೇಜಿಗೆ  ಸೇರಿದಿರಿ. ಅಲ್ಲಿ ನೀವು ಅನೇಕ  ಚಳುವಳಿಗಳಲ್ಲಿ  ಪ್ರಮುಖ ಪಾತ್ರ ವಹಿಸಿದಿರಿ. ಅದರಿಂದ ಸರಕಾರದ ವಕ್ರದೃಷ್ಟಿಗೆ ಗುರಿಯಾದಿರಿ. ನೀವು ಕಲ್ಕತ್ತೆಗೆ ಹೋದಾಗ ನಿಮ್ಮ ತಲೆಗೆ ಕೂದಲಿರಲಿಲ್ಲ.  ಜುಟ್ಟು ಇದ್ದಿತು.  ಒಂದು ಮೆರವಣಿಗೆಯೊಡನೆ ನೀವು ಹೋಗುತ್ತಿದ್ದಾಗ ಪೋಲಿಸ್‍ ಇನ್‍ಸ್ಪೆಕ್ಟರೊಬ್ಬನು ನಿಮ್ಮೊಡನೆ ಮರಾಠಿಯಲ್ಲಿ ಮಾತನಾಡಿದನು. ಮಹಾರಾಷ್ಟ್ರೀಯನೆಂದು  ನಿಮ್ಮನ್ನು ಆತನು ಗುರುತಿಸಿದನೆಂದು ತಿಳಿದು  ನೀವು ತಕ್ಷಣ ಜುಟ್ಟನ್ನು  ತೆಗೆದು ಕೂದಲು ಬೆಳೆಸಿದಿರಿ. ಮತ್ತು ಬಂಗಾಲಿ ಪದ್ಧತಿಯ ವೇಷಭೂಷೆಯನ್ನು  ಧರಿಸಿದಿರಿ! ಕಲ್ಕತ್ತದ ಹಿರಿಯ ನಾಯಕರೊಡನೆ ಭೇಟಿ ಮಾಡುವುದು ಮತ್ತು ವಿಚಾರ ವಿನಿಮಯ ಮಾಡುವುದು ಆಗ ನಿಮ್ಮ ಕೆಲಸವಾಗಿತ್ತು.

1910ರಲ್ಲಿ  ಲಾರ್ಡ್‍ ಹಾರ್ಡಿಂಜರು ವಾಯಿಸ್‍ರಾಯರಾಗಿ ಸರ್ವ ಪ್ರಥಮವಾಗಿ ಕಲ್ಕತ್ತಕ್ಕೆ ಬಂದರು. ಆಗ ಅನೇಕ ಯುವಕರನ್ನು  ದಸ್ತಗಿರಿ ಮಾಡಲಾಗಿತ್ತು. ಅದರಲ್ಲಿ ನೀವು ಒಬ್ಬರಾಗಿದ್ದಿರಿ. 8-10 ದಿನಗಳಾದ ಮೇಲೆ ನಿಮ್ಮ ಬಿಡುಗಡೆಯಾಯಿತು. ಮೆಡಿಕಲ್‍ ಕಾಲೇಜಿನ ‘ಡಿಗ್ರಿ’ಗೆ ಸರಕಾರದ ಮನ್ನಣೆ ದೊರೆಯಬೇಕೆಂದು ನೀವು ಬಹಳಷ್ಟು ಪ್ರಯತ್ನ ಮಾಡಿದಿರಿ. ಇದೆಲ್ಲ ಮಾಡುತ್ತಿರುವಾಗ  ನೀವು ಮುಂದೆ ಮಾತ್ರ ಕಾಣುತ್ತಿರಲಿಲ್ಲ. ಅದೇ ನಿಮ್ಮ ಕೌಶಲ.

ಪೋಲೀಸರ ಕಾಟವನ್ನು  ನೀವು ಚಾತುರ್ಯದಿಂದ ತಪ್ಪಿಸುತ್ತಿದ್ದಿರಿ. ಅದು ಬೆಂಕಿಯೊಡನೆ ಆಟವಾಗಿತ್ತು.  ಅದೊಂದು ದಿವ್ಯ ತಪಶ್ಚರ್ಯೆಯಾಗಿತ್ತು. 8-10 ವರ್ಷ ಅಂತಹ ಕಷ್ಟಕಾಲವನ್ನು ನೀವು ಧೈರ್ಯದಿಂದ ಕಳೆದಿರಿ. ಆಗಿನ ಅನೇಕ ಘಟನೆಗಳು ಸಂಸ್ಮರಣೀಯವಾಗಿವೆ. ಅವುಗಳನ್ನೆಲ್ಲ ಸೇರಿಸಿದರೆ ಒಂದು ಅಧ್ಯಾಯವೇ ಆಗುವುದು.

1914ರಲ್ಲಿ ನೀವು L.M.&S  ಪರೀಕ್ಷೆ ಪಾಸು ಮಾಡಿದಿರಿ. ಆದರೆ ಅನಂತರ ಸಹ 2 ವರ್ಷ ನೀವು ಬುದ್ಧಿಪೂರ್ವಕವಾಗಿಯೇ  ಕಲ್ಕತ್ತದಲ್ಲಿ ವಾಸವಾಗಿದ್ದಿರಿ.

ಸ್ವಾತಂತ್ರ್ಯದ ಪ್ರಖರ ಜ್ಯೋತಿ

1914ರಲ್ಲಿ  ಮಹಾಯುದ್ಧ ಆರಂಭವಾಯಿತು. ಅದೊಂದು ಸುವರ್ಣ ಸಂಧಿ  ಪ್ರಾಪ್ತವಾಗಿದೆ ಎಂದು  ಯುವಕ  ವರ್ಗದ ಮನೋಭಾವನೆ. ಅನೇಕರು ಪ್ರಾಣವನ್ನು  ಪಣವಾಗಿಟ್ಟು ಕಾರ್ಯ ಮಾಡುವುದಾಗಿ  ಪ್ರತಿಜ್ಞೆಗೈದರು. ಎಲ್ಲೆಲ್ಲಿಯೂ  ಮಹಾನ್‍ ಪ್ರಯತ್ನ  ನಡೆಯಿತು. ನೀವು  ಸ್ವಾತಂತ್ರ್ಯದ ಪುರಸ್ಕರ್ತರಾಗಿದ್ದಿರಿ.

ಇಡೀ ದೇಶ ಜಾಗೃತವಾಗಬೇಕೆಂದು  ನಿಮ್ಮ ಪ್ರಯತ್ನ ನಡೆದಿತ್ತು. ಯಾವುದಕ್ಕೋಸ್ಕರ ಎಲ್ಲವನ್ನೂ ಮಾಡುವುದೋ ಆ ಸ್ವಾತಂತ್ರ್ಯದ ತುತ್ತು ಕೈಗೆ ಬಂದಿದೆ. ಆದರೆ ಅದರ ಅರಿವಿಲ್ಲ, ದೇಶ ನಿದ್ರಿತವಾಗಿದೆ, ನಾಯಕರಿಗೆ ಕಲ್ಪನೆ ಇಲ್ಲ ಎಂಬುದನ್ನು ನೋಡಿ ನಿಮ್ಮ ಜೀವ ತಳಮಳಿಸುತ್ತಿತ್ತು. ಅಂತಃಕರಣದಲ್ಲಿ ಕಳವಳವಾಗುತ್ತಿತ್ತು.  ಆದರೇನು ! ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ.

1916ರಲ್ಲಿ ನೀವು ನಾಗಪೂರಕ್ಕೆ ಬಂದಿರಿ. ನೀವು ರುಗ್ಣಾಲಯವನ್ನು  ತೆರೆಯಬೇಕೆಂದು ಅನೇಕರ ಇಚ್ಛೆಯಾಗಿತ್ತು. ನೀವು ಮಾತ್ರ ಆ ವಿಚಾರವನ್ನು ಬದಿಗಿರಿಸಿದಿರಿ. ಯುದ್ಧ ಕೊನೆಗೊಂಡಿತು. 1919ರಲ್ಲಿ ವಿಜಯದ ಕಾಣಿಕೆಯಾಗಿ ಕೆಲವು ರಾಜ್ಯಾಂಗ ಸುಧಾರಣೆಗಳು ಘೋಷಿತವಾದವು. ಆದರೆ ಆ ತುಣುಕು ರೊಟ್ಟಿಯಿಂದ ಸ್ವಾತಂತ್ರ್ಯವನ್ನೇ ಧ್ಯೇಯವಾಗಿರಿಸಿದ ವ್ಯಕ್ತಿಗೆ ತೃಪ್ತಿಯಾಗುವುದೆಂತು? ನಾಗಪೂರದಲ್ಲಿ ನೀವು ಯುವಕರ ಒಂದು ಯೂನಿಯನ್ ಮಾಡಿದಿರಿ. ಅದರ ಮೂಲಕ ನಿಮ್ಮ ವಿಚಾರಗಳನ್ನು  ಪ್ರಕಟಗೊಳಿಸುತ್ತಿದ್ದಿರಿ. ಯಾವಾಗ ನೋಡಿದರೂ ನೀವು ಕಾರ್ಯಮಗ್ನರಾಗಿರುತ್ತಿದ್ದಿರಿ.

ಸೆಡಿಶನ್ ಕಮಿಟಿ ರಿಪೋರ್ಟ್, ಅನೇಕ ನಿರ್ಬಂಧಗಳು, ಜಾಲಿಯನ್‍ವಾಲಾಬಾಗ್‍ ಮೊದಲಾದ  ಘಟನೆಗಳಿಂದ  ದೇಶವೆಲ್ಲ ಅಲ್ಲೋಲ-ಕಲ್ಲೋಲವಾಯಿತು. 1920ರಲ್ಲಿ ಲೋಕಮಾನ್ಯರು ದಿವಂಗತರಾದರು. ಗಾಂಧಿತತ್ವಜ್ಞಾನದ ಉದಯವಾಯಿತು. ಆ ಪ್ರವಾಹದಲ್ಲಿ ಅನೇಕರು ಹರಿದುಹೋದರು. ನೀವು ಮಾತ್ರ ಇದನ್ನೆಲ್ಲ ಹತ್ತಿರದಿಂದಲೂ  ದೂರದಿಂದಲೂ ನಿರೀಕ್ಷಣೆ ಮಾಡುತ್ತಿದ್ದಿರಿ. ಆ ಕಾಲದ  ವೃತ್ತಾಂತವನ್ನು ಆರಂಭದಲ್ಲಿಯೇ ಬರೆದಾಗಿದೆ. ಅದನ್ನು  ಮತ್ತೆ ಬರೆಯುವುದಿಲ್ಲ.

ಸಂಘಸ್ಥಾಪನೆ

ದೇಶಸ್ವಾತಂತ್ರ್ಯಕ್ಕೊಸ್ಕರ ನಡೆದ ಚಳುವಳಿಯನ್ನೂ ಪ್ರಯತ್ನಗಳನ್ನೂ ನೀವು ಕೇವಲ ದೂರದಿಂದ  ನೋಡುತ್ತಿರಲಿಲ್ಲ. ಆದರೆ ಅದರಲ್ಲಿ ಪ್ರತ್ಯಕ್ಷ ಭಾಗವಹಿಸಿ ಅನುಭವದಿಂದ  ಸ್ವಂತದ ಅಭಿಪ್ರಾಯವನ್ನು ರೂಪಿಸುತ್ತಿದ್ದಿರಿ. ನಿಮ್ಮ ಸ್ವಂತ ಅಭಿಪ್ರಾಯ ನಿಮ್ಮ ಹತ್ತಿರ ಮುಂಚೆಯಿಂದಲೇ ಇದ್ದಿತು. ನಿಮ್ಮ ವಿಚಾರಗಳು ನಿಶ್ಚಿತವಾಗಿದ್ದವು. ಧ್ಯೇಯವನ್ನು  ನೀವು ಮುಂಚೆಯೇ ನಿರ್ಧರಿಸಿದ್ದಿರಿ. ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಜೀವನಮಾರ್ಗವನ್ನು ರೂಪಿಸಿದ್ದಿರಿ.

‘9 ತಿಂಗಳಲ್ಲಿ ಸ್ವರಾಜ್ಯ !’ ಎಂಬ ಜಯಘೋಷಕ್ಕೆ ಮನಸೋತು ಇಡಿ ದೇಶವೇ ಪ್ರವಾಹಪತಿತವಾಯಿತು. ಅದು ನಿಮಗೆ ಸಹನವಾಗಲಿಲ್ಲ. ಪ್ರವಾಹದ ಈ ಅಬ್ಬರವನ್ನು ತಡೆಯುವ ಯೋಚನೆ  ನಿಮಗಿದ್ದಿತು. ‘ಅಲ್ಲಾಹೋ ಅಕ್ಬರ್’ ಎಂಬ ಘೋಷಣೆಯು ಸಾರ್ವತ್ರಿಕವಾದಾಗ ನಿಮ್ಮ ಸ್ವಾಭಿಮಾನಪೂರ್ಣ ರಕ್ತವು ಕುದಿಯುತ್ತಿತ್ತು. ಆಗ ಈ ಜಯಕಾರಗಳಲ್ಲಿ  ಭಾಗವಹಿಸಿದ ಸ್ವಾಭಿಮಾನಶೂನ್ಯ ಹಿಂದುಗಳಿಗೆ ಮಾರ್ಗದರ್ಶನ ಮಾಡುವುದಕ್ಕೋಸ್ಕರ ನೀವು ಸಂಘವನ್ನು  ಸ್ಥಾಪಿಸಿ ಅನೇಕ ದಿವಸಗಳಿಂದ ನಿಮ್ಮ ಮನಸ್ಸಿನಲ್ಲಿ  ಮನೆ ಮಾಡಿಕೊಂಡಿದ್ದ ಕಲ್ಪನೆಯನ್ನು ಪ್ರಕಟಗೊಳಿಸಿದಿರಿ. ನಿಮ್ಮ ಧೈರ್ಯ, ಸಾಹಸ, ವಿಶ್ವಾಸ, ದೃಢ ನಿರ್ಧಾರ, ಚಾತುರ್ಯ, ತತ್ವಪ್ರಣಾಳಿ, ಕಲ್ಪನೆ, ಯೋಜನೆ, ನೀತಿ ಎಲ್ಲವನ್ನೂ  ಈ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ದಲ್ಲಿ ಪ್ರಕಟಗೊಳಿಸಿದಿರಿ.

ಅಧಃಪತನದ ಮೂಲ

ಸಾವಿರಾರು ವರುಷಗಳ ಚರಿತ್ರೆಯನ್ನು  ನೀವು ನಿಮ್ಮ ಕಣ್ಣುಗಳ ಮುಂದೆ ಇರಿಸಿದಿರಿ. ಮತ್ತು ಅಧಃಪತನದ ಕಾರಣವನ್ನು ಶೋಧಿಸಿದಿರಿ. ಈ ದೇಶದಲ್ಲಿ ಆಸೇತುಹಿಮಾಚಲ ಒಮ್ಮುಖದ ಪ್ರಬಲ ಸಂಘಟನೆ ಇರಲಿಲ್ಲ. ರಾಷ್ಟ್ರೀಯ ಭಾವನೆ ಇರಲಿಲ್ಲ. ಇದೇ ದೇಶದ ಅಧಃಪತನಕ್ಕೆ ಕಾರಣವೆಂದು  ಕಂಡುಹಿಡಿದಿರಿ. ‘ದೇಶ ಹಿಂದುಗಳದೇ’ ಎಂಬುದಂತೂ ನಿಮ್ಮ ಶ್ರದ್ಧೆಯಾಗಿತ್ತು.  ಹಿಂದುಗಳು ಹೊರಗಿನಿಂದ ಇಲ್ಲಿ ಬಂದವರು ಎಂಬ ವಿಚಾರವೇ  ನಿಮಗೆ ಒಪ್ಪಿಗೆ ಇರಲಿಲ್ಲ. ಮೂಲತಃ ಹಿಂದುಗಳು ಇಲ್ಲಿಯವರೇ. ಅವರೇ ತಮ್ಮ ಕರ್ತೃತ್ವದಿಂದ  ಹಾಗೂ ತ್ಯಾಗದಿಂದ  ಈ ರಾಷ್ಟ್ರವನ್ನು ಕಟ್ಟಿದರು. ಆದ್ದರಿಂದ ಈ ದೇಶ ಅನ್ಯರದಾಗಲು  ಸಾಧ್ಯವೇ ಇಲ್ಲ. ಈ ದೇಶ ಹಿಂದುಗಳಿಗೇ ಸೇರಿದ್ದು. ಅದು ಸ್ವಯಂಸಿದ್ಧ ಸತ್ಯವಾಗಿದೆ. ಆದರೆ ಆ ಸತ್ಯದ ಕೊಲೆಯಾಗುತ್ತಿದ್ದುದು ನಿಮಗೆ ಸಹನವಾಗಲಿಲ್ಲ.

ಸಂಘದ ಸ್ಥಾಪನೆಯಿಂದ ನೀವು ಈ ಸತ್ಯವನ್ನು ಪ್ರಕಾಶಗೊಳಿಸಿದಿರಿ. ಆಗಲೇ ನಿಮ್ಮ ಕರ್ತೃತ್ವ ಹಾಗೂ ಆತ್ಮವಿಶ್ವಾಸ  ನಿದರ್ಶನಕ್ಕೆ ಬಂದಿತು. ಪೂಜನೀಯ ಡಾಕ್ಟರಜಿ, ಯಾರು ಏನೇ ಹೇಳಲಿ, ‘ಹಿಂದೂಸ್ಥಾನ ಹಿಂದುಗಳ ದೇಶ’ ಎಂಬ ಸತ್ಯವನ್ನು ಸರ್ವಪ್ರಥಮವಾಗಿ ಪ್ರಕಾಶಗೊಳಿಸುವ  ಗೌರವ ನಿಮ್ಮದಾಗಿದೆ. ಆಗ ಪ್ರಪಂಚವೆಲ್ಲ ನಿಮಗೆ ಹುಚ್ಚನೆಂದು ಹೆಸರಿಟ್ಟಿತು.  ಅದನ್ನು ಅಂಗೀಕರಿಸಿ  ನೀವು ಧೈರ್ಯದಿಂದ ಮತ್ತು ಕೌಶಲದಿಂದ ಈ ಸತ್ಯವನ್ನು  ಎಲ್ಲರ ಮನಸ್ಸಿನಲ್ಲಿ ಬಿಂಬಿಸಲು  ಯಾವ ರೀತಿ ಪರಿಪರಿಯಿಂದ  ಪ್ರಯತ್ನ ಮಾಡುತ್ತಿದ್ದಿರೆಂಬುದನ್ನು ನೆನದಾಗಲೆಲ್ಲ ಈ ಭಾವನಾಪ್ರಧಾನ  ಹೃದಯವು  ಸ್ವಾಭಿಮಾನದಿಂದ ಉಕ್ಕಿ ಬರುತ್ತದೆ.

ಕಳೆದುಹೋದ ದ್ರವ್ಯ ಅಥವಾ ರಾಜ್ಯವನ್ನು  ತಿರುಗಿ ಸಂಪಾದನೆ ಮಾಡುವುದು ಎಷ್ಟು ಕಠಿಣವಾಗಿದೆಯೋ ಅದಕ್ಕಿಂತಲೂ ಒಂದು ವಿಚಾರಧಾರೆಯ ಪುನರುಜ್ಜೀವನ ಮಾಡುವುದು ಅತ್ಯಂತ  ಕಠಿಣ ಕಾರ್ಯವಾಗಿದೆ. ಸಮಾಧಿಯಲ್ಲಿದ್ದ ಹಿಂದೂರಾಷ್ಟ್ರವನ್ನು  ನೀವು ಮೇಲೆತ್ತಿದಿರಿ, ಒಂದು ವಿಧದಲ್ಲಿ  ನೀವು  ಈ ರಾಷ್ಟ್ರದ ಜೀವನದಾತರಾಗಿರುವಿರಿ. ಈ ವಿಚಾರಧಾರೆಯ ಪಾಲನಪೋಷಣೆಯ ಮತ್ತು ಸಂವರ್ಧನೆಯ  ಜವಾಬ್ದಾರಿಯನ್ನು  ನೀವೇ ವಹಿಸಿಕೊಂಡು, ಕೊನೆಯವರೆಗೆ ಅದನ್ನು ನಿರ್ವಹಿಸಿದಿರಿ.

ಪರತಂತ್ರ ದೇಶಗಳಲ್ಲಿ ಸದಾಕಾಲ ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಕಾವಲಿರುವವರ ಸಮಕ್ಷಮವೇ ಸಂಘಟನೆಯನ್ನು ಮಾಡುವುದು ಎಷ್ಟೊಂದು ಕಠಿಣ ಮತ್ತು ಕೌಶಲಕೆಲಸವಾಗಿದೆ ಎಂಬುದು ನಿಮ್ಮ ನಡತೆ ಮತ್ತು ನೀತಿಯಿಂದಲೇ ಗೊತ್ತಾಗುವುದು. 15 ವರ್ಷದ ಸಂಘದ ಚರಿತ್ರೆಯಲ್ಲಿ  ಯಾರಿಗೂ ಇದರಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ದೊರೆಯಲಿಲ್ಲ. ನಿಮ್ಮ ಜಾಗರೂಕತೆ ಅಷ್ಟು ಪರಿಪೂರ್ಣವಾಗಿತ್ತು. 1920ರಲ್ಲಿ ನಾಗಪೂರದಲ್ಲಿ ದಂಗೆಯಾದಾಗ ನೀವು ನಾಗಪೂರದಲ್ಲಿರಲಿಲ್ಲ. ಆದರೆ ದಂಗೆಯಲ್ಲಿ ಗಾಯಗೊಂಡ ಮುಸಲ್ಮಾನನೊಬ್ಬನು “ಮೇರೇ ಕೋ ಡಾ. ಹೆಡ್ಗೇವಾರನೇ ಮಾರಾ” ಎಂದು ಜವಾಬು ಕೊಟ್ಟನು.  ಮತ್ತು ಆಮೇಲೆ ಅವನು ಮರಣ ಹೊಂದಿದನು. ಅಹಿಂದೂ ಸಮಾಜದ  ಗೃಧ್ರದೃಷ್ಟಿ ನಿಮ್ಮ ಮೇಲೆ ಇದ್ದಿತ್ತೆಂಬುದು ಇದರಿಂದ ಗೊತ್ತಾಗುವುದು. ನಿಮಗೂ ಸಹ ಈ ವಿಷಯ ತಿಳಿದಿತ್ತು.  1920ರ ಪೂರ್ವದಲ್ಲಿ ಮತ್ತು ಅನಂತರ ಅನೇಕ ಬೆದರಿಕೆಯ ಪತ್ರಗಳು ಬಂದವು. ಆದರೆ ಅವುಗಳನ್ನು  ವಿಶೇಷ ಗಮನಿಸಿದೇನೇ ನೀವು ಕಾರ್ಯಮಗ್ನರಾಗುತ್ತಿದ್ದಿರಿ. 1920ರ ಪೂರ್ವದ ನಿಮ್ಮ ಚರಿತ್ರೆ ಸರ್ಕಾರಕ್ಕೆ ಗೊತ್ತಿತ್ತು ಮತ್ತು ನಿಮ್ಮ ಬಗ್ಗೆ ಸರಕಾರಕ್ಕೆ ಸಂದೇಹವೂ ಇದ್ದಿತು.  ಆದರೆ ಆ ಸಂದೇಹವನ್ನು ನೀವು ಹೋಗಲಾಡಿಸಿದಿರಿ.  ಸಂಘವು ಒಂದು ಪ್ರತ್ಯೇಕ ಕಾರ್ಯವಾಗಿದೆ.  ಸಂಘಟನೆಯಲ್ಲದೆ ಬೇರಾವ ಕೆಲಸವೂ ಸಂಘಕ್ಕೆ ಸಂಬಂಧಪಟ್ಟಿಲ್ಲ. ಅದು ಪಕ್ಷಭೇದಾತೀತವಾಗಿದೆ. ಹಿಂದೂಗಳನ್ನೆಲ್ಲ ಶಕ್ತಿಶಾಲಿಗಳನ್ನಾಗಿ ಮಾಡುವುದಿಷ್ಟೇ ಸಂಘದ ಕಾರ್ಯವಾಗಿದೆ. ಈ ನಿಮ್ಮ ವಿಚಾರಗಳು ಅತ್ಯಂತ ಮಾರ್ಮಿಕ ಹಾಗೂ ಸುಸ್ಪಷ್ಟವಾಗಿದ್ದವು. ಆದರೆ ಇದಕ್ಕೋಸ್ಕರ ನೀವು ಆಪ್ತಬಂಧುಗಳ ಹಾಗೂ ಸ್ವಕೀಯರ ಟೀಕೆಯನ್ನೂ ಖಂಡನೆಯನ್ನೂ ಸಹಿಸಬೇಕಾಯಿತು. ಆದರೆ ನೀವು ಮಾತ್ರ ಒಂದು ಶಬ್ದದಿಂದ ಸಹ ಟೀಕಾಕಾರರ ಮನಸ್ಸನ್ನು ನೋಯಿಸಲಿಲ್ಲ. ಉತ್ತರ-ಪ್ರತ್ಯುತ್ತರವೆಂದು ವಾಗ್ಯುದ್ಧವನ್ನು ನೀವು ಎಂದಿಗೂ ಮಾಡಲಿಲ್ಲ. ಇಂದಿಲ್ಲ ನಾಳೆ ಟೀಕಾಕಾರರು ಸಹ ನಮಗೆ ಬಂದು ಕೂಡಿಕೊಳ್ಳಬಹುದು, ಆದ್ದರಿಂದ ಯಾರ ಅಂತಃಕರಣಕ್ಕೂ ನೋವಾಗುವಂತೆ ವರ್ತಿಸಕೂಡದೆಂಬುದು ನಿಮ್ಮ ನೀತಿಯಾಗಿತ್ತು.

ಕಾರ್ಯ ಮಾಡುವ  ನಿಮ್ಮ ಪದ್ಧತಿ ಅಲೌಕಿಕವಾಗಿತ್ತು.  ಅದು ಸಂಪೂರ್ಣ ನಿಮ್ಮದೇ ಆಗಿತ್ತು. ಗಂಟೆಗಟ್ಲೆ ನಿಮ್ಮ ಬೈಠಕ್‍ನಲ್ಲಿ  ಕೂಡುವ ಭಾಗ್ಯ ದೊರೆತವರು ಸಹ ಅದರ ಸವಿಯನ್ನು ಶಬ್ದಗಳಿಂದ ವರ್ಣಿಸಲಾರರು. ತತ್ವಜ್ಞಾನದ ಗಂಭೀರ ‘ಡೋಜು’ ಕೊಡದೆ, ಸಹಜ ನಗೆಯಾಡುತ್ತ ಹಾಸ್ಯವಿನೋದದಿಂದಲೇ ಹತ್ತಿರ ಬಂದವರನ್ನು  ಆತ್ಮಸಾತ್‍ ಮಾಡಿಕೊಳ್ಳುವ  ಕಾರ್ಯದಲ್ಲಿ ನಿಮ್ಮದು ಎತ್ತಿದ್ದ ಕೈ. ಬರಿ ಹಾಸ್ಯವಿನೋದ ನಡೆಯುತ್ತಿದ್ದರೂ ಬೈಠಕ್‍ನಲ್ಲಿ ಬಂ­ದವರ ವಿಚಾರಗಳಿಗೂ ಭಾವನೆಗಳಿಗೂ ಅಲ್ಲಿ ಖಂಡಿತವಾಗಿಯೂ ಪ್ರಚೋದನೆ ದೊರೆಯುತ್ತಿತ್ತು. ನಿಮ್ಮ ಪ್ರಭಾವದಿಂದ ಸಾವಿರಾರು ಜನರು  ನಿಮ್ಮ ಅನುಯಾಯಿಗಳಾದರು. ಅವರೆಲ್ಲರಿಗೂ ನಿಮ್ಮಲ್ಲಿ ಅತ್ಯಂತಿಕ ಆದರ ಹಾಗೂ ಸ್ನೇಹವಿದ್ದಿತು. ನಿಮ್ಮ ಮಾತಿನಂತೆ ನಡೆಯಲು  ಅನೇಕರು  ಸಿದ್ಧರಾದುದು ಈ ಸ್ವಾರಸ್ಯಪೂರ್ಣ ಬೈಠಕ್‍ಗಳ ಮೂಲಕ.

ಸಂಘದ ವೇದಿಕೆಯ  ಮೇಲೆ  ನಿಂತು ನೀವು  ಮಾಡುತ್ತಿದ್ದ ಭಾಷಣಗಳೆಲ್ಲ ಸರಳ ಹಾಗೂ ಸುಲಭವಾಗಿರುತ್ತಿದ್ದವು.   ಹತ್ತು ವರ್ಷದ ಮಗುವಿಗೂ ಅವುಗಳ ಅರ್ಥವಾಗುತ್ತಿತ್ತು.  ಸ್ವಂತ ಜೀವನದಲ್ಲಿಯ ನಿದರ್ಶನಗಳ ಉಲ್ಲೇಖವೇ ನಿಮ್ಮ ಭಾಷಣದಲ್ಲಿರುತ್ತಿತ್ತು.  ಬೇರೆ ಬೇರೆ ಗ್ರಂಥಕಾರರ ಪುಸ್ತಕಗಳಲ್ಲಿಯ ನಿದರ್ಶನಗಳನ್ನೂ ಅವತರಣಿಕೆಗಳನ್ನೂ ಎತ್ತಿ ಹೇಳುವ ಮೋಹ ನಿಮಗೆ ಇರಲಿಲ್ಲ. ನೀವು ಗ್ರಂಥಗಳನ್ನೇನೋ ಬರೆಯಲಿಲ್ಲ. ಆದರೆ ಗ್ರಂಥಕಾರರ ಪ್ರತಿಭೆ ನಿಮ್ಮಲ್ಲಿ ಸ್ವಯಂಸಿದ್ಧವಾಗಿಯೇ ಇದ್ದಿತು. ಲೇಖಕರಾದರೂ ಮಾನವರೇ ಅಲ್ಲವೆ? ಅವರು ತಮ್ಮ ವಿಚಾರಗಳನ್ನು ಬರೆದಿಡುತ್ತಾರೆ. ನಾನು  ಬರೆಯುವುದಿಲ್ಲ; ಎಂದು ನೀವು ಸಹಜವಾಗಿ ಹೇಳುತ್ತಿದ್ದಿರಿ.  ನಿಮ್ಮ ಭಾಷಣ ಯಾವಾಗಲೂ ಪರಿಣಾಮಕಾರಿಯಾಗಿರುತ್ತಿತ್ತು.  ನಿಮ್ಮ ಪ್ರತಿಯೊಂದು  ಶಬ್ದವು ವಿಚಾರಪೂರ್ವಕ ಉಚ್ಚರಿಸಿದ್ದೂ, ಭಾವನೆ ಮತ್ತು ವಿಚಾರಗಳಿಂದ  ಪರಿಪೂರ್ಣವೂ ಆಗಿರುತ್ತಿತ್ತು.

ಸಂಘದಲ್ಲಿ ನೀವು ಉಂಟು ಮಾಡಿದ ವಿಚಾರ ಮತ್ತು ವಾತಾವರಣದ ಪರಿಣಾಮ ಬಾಹ್ಯ ಸಮಾಜದ ಮೇಲೆ ಆಗದಿರಲಿಲ್ಲ. ಸಂಘದ ಸಂಘಟನೆಯಿಂದ ನೀವು ನವಚೈತನ್ಯವನ್ನುಂಟುಮಾಡಿದಿರಿ. ತಾತ್ಪೂರ್ತಿಕ ದೇಶಭಕ್ತಿಯ ಕಲ್ಪನೆಯು ಅಳಿಯುವಂತೆ ಮಾಡಿದಿರಿ. ಸಾಮುದಾಯಿಕ ಜೀವನದ ಸರಿಯಾದ ಕಲ್ಪನೆಯನ್ನು ಮೂರ್ತಿಮುಂತಾಗಿ ಇರಿಸಿದಿರಿ. ಸ್ವಂತ ಚಾರಿತ್ರ್ಯದಿಂದ ಮತ್ತು ಸಂಘದ ಮೂಲಕ ದೇಶಕಾರ್ಯಕ್ಕೆ ಆವಶ್ಯಕವಿರುವ  ತ್ಯಾಗದ ಹಾಗೂ ಚಾರಿತ್ರ್ಯದ ಅರಿವನ್ನುಂಟುಮಾಡಿದಿರಿ. ‘ನನಗಾಗಿ ಸಮಾಜವಿಲ್ಲ, ನಾನು ಸಮಾಜಕ್ಕಾಗಿ ಇದ್ದೇನೆ’ ಎಂಬ ಭಾವನೆಯನ್ನು  ನೀವೇ ಪ್ರಾಮುಖ್ಯವಾಗಿ ನಿರ್ಮಾಣ ಮಾಡಿದಿರಿ.

ಈ ರಾಷ್ಟ್ರದಲ್ಲಿ ಅನೇಕ ಜನನಾಯಕರು ಜನಿಸಿದರು. ಇನ್ನುಮುಂದೆಯೂ ಜನಿಸುವರು. ಅವರೆಲ್ಲರೂ ಶ್ರೇಷ್ಠವಾಗಿದ್ದಾರೆ. ಅವರೆಲ್ಲರಿಗೆ ವಂದನೆಗಳನ್ನರ್ಪಿಸಿ ಅವರ ಅನುಮತಿಯಿಂದ ನಾನು ಹೇಳಬಯಸುವುದೇನೆಂದರೆ ಅನೇಕ ಶತಮಾನಗಳಲ್ಲಿ ಈ ರಾಷ್ಟ್ರಕ್ಕೆ ಇಂತಹ ನಾಯಕನು ಲಭಸಲಿಲ್ಲ ಡಾಕ್ಟರಜಿ ಎಂದರೆ ತಮ್ಮ ಆಪ್ತ ಬಂಧು, ಗುರು, ನಾಯಕ, ಹೃದಯದಲ್ಲಿನ ಪ್ರಾಣ  ಎಂದು ಎಲ್ಲರಿಗೂ ಅನಿಸುತ್ತಿತ್ತು. ನೀವಲ್ಲದೆ ಬೇರೆ ಯಾವ ನಾಯಕರೂ ಜನಮನದಲ್ಲಿ ಇಷ್ಟೊಂದು ಆತ್ಮೀಯ ಭಾವವನ್ನುಂಟುಮಾಡಲಿಲ್ಲ. ಅಂತೆಯೇ ನೀವು ಸಾವಿರಾರು ಯುವಕರ ಸ್ಫೂರ್ತಿಕೇಂದ್ರವಾದಿರಿ ಮತ್ತು ನಿಮಗೆ  ಇಷ್ಟೊಂದು ಯಶ ದೊರೆಯಿತು.

‘ಹಿಂದೂಸ್ಥಾನವು ಹಿಂದೂಗಳ ದೇಶ’ ಎನ್ನುವುದು ನಮ್ಮೆಲ್ಲರ ವೇದಮಂತ್ರ. ವಿಚಾರ, ಉಚ್ಚಾರ, ಆಚಾರದಲ್ಲಿ ನಾವು ಅದನ್ನು ಎಂದಿಗೂ ಮರೆಯಲಾರೆವು. ಹಿಂದೂರಾಷ್ಟ್ರದ ಪುನರುಜ್ಜೀವನದೊಡನೆಯೇ  ನೀವು ಭಗವಾಧ‍್ವಜವನ್ನು ಎತ್ತಿಹಿಡಿದಿರಿ. ನೀವು ಗುರು ಎಂದು ಪೂಜಿಸಿದ ನಿಮ್ಮ ಧ್ಯೇಯ ವಿಚಾರ ಪ್ರಣಾಳಿ ಮತ್ತು ಸಾತ್ವಿಕ ಭಾವನೆಗಳ ಏಕಮಾತ್ರ ಪ್ರತೀಕವಾದ ಈ ಧ್ವಜವನ್ನು ನಾವು ಚಿರಂತನವಾಗಿ ಗೌರವದಿಂದ ಆಕಾಶಕ್ಕೇರಿಸಿ ಹಾರಿಸುವೆವು.

ಪೂಜ್ಯ ಡಾಕ್ಟರಜಿ, ನಿಮಗೆ ವಂದನೆಗಳು

 –    ಶ್ರೀ ದಾದಾರಾವ್ ಪರಮಾರ್ಥ

   

Leave a Reply