ಪೋರ್ಟ್‌ಲ್ಯಾಂಡ್‌ನಲ್ಲಿ ರಕ್ಷಾಬಂಧನ

ಸುದ್ದಿಗಳು - 0 Comment
Issue Date : 11.08.2014

ಪೋರ್ಟ್‌ಲ್ಯಾಂಡ್ (ಅಮೆರಿಕ): ಆಗಸ್ಟ್ 2, ಶನಿವಾರ ಸಂಜೆ 6.30. ಆದರೂ ಬಾನಿನಂಗಳದಲ್ಲಿ ನಡುಮಧ್ಯಾಹ್ನದ ಪ್ರಖರತೆಯೊಂದಿಗೆ ಸೂರ್ಯ ಮಿಂಚುತ್ತಿದ್ದ. ಅಮೆರಿಕಾದ ಪಶ್ಚಿಮೋತ್ತರ ಭಾಗದ ಪ್ರಾಂತ ಒರೆಗನ್‌ನ ಪೋರ್ಟ್‌ಲ್ಯಾಂಡ್ ನಗರದ ಸೊಮೆರ್ ಸೆಟ್‌ಪಾರ್ಕ್‌ನಲ್ಲಿ, ಮರಗಳ ನೆರಳಿನಲ್ಲಿ ಹಾರಾಡುತ್ತಿದ್ದ ಭಗವಾಧ್ವಜಕ್ಕೆ ನಮಿಸಿದ ಬಾಲಗೋಕುಲ ಶಾಖೆಯ 106 ಜನರೇ ಧನ್ಯರು. ಭಾರತದ ವಿವಿಧ ಪ್ರಾಂತಗಳಿಂದ ಬಂದಿದ್ದ ನಾವು ರಕ್ಷಾಬಂಧನ ಕಾರ್ಯಕ್ರಮಕ್ಕಾಗಿ ಸೇರಿದ್ದೆವು.

ಮಧ್ಯಾಹ್ನ 3.30ಕ್ಕೆ ಎಲ್ಲರೂ ಪಾರ್ಕ್‌ನಲ್ಲಿ ಸೇರಲು ಪ್ರಾರಂಭ. 3.30ರಿಂದ 4 ಗಂಟೆಯವರೆಗೆ ಔಪಚಾರಿಕವಾಗಿ ಪರಸ್ಪರ ಪರಿಚಯ ಕಾರ್ಯಕ್ರಮ. ಇದನ್ನು ಇಲ್ಲಿ ಐಸ್‌ಬ್ರೇಕಿಂಗ್ ಎಂದು ಕರೆಯುತ್ತಾರೆ. ಅದೊಂದು ತರದ ಆಟ. ಈ ಆಟದಲ್ಲಿ ಗುಂಪುಗಳನ್ನಾಗಿ ವಿಂಗಡಿಸಿ, ಆಟದ ಮೂಲಕ ಪರಿಚಯ ಮಾಡಿಕೊಳ್ಳುವುದು. 4 ಗಂಟೆಯಿಂದ ಸಂಜೆ 5.30ರವರೆಗೆ ಖೋ – ಖೋ ಸೇರಿ ಮಕ್ಕಳಿಗೆ, ಯುವತಿಯರಿಗೆ, ತರುಣರಿಗೆ ಗುಂಪುಗಳಲ್ಲಿ ವಿವಿಧ ಬಗೆಯ ಆಟಗಳನ್ನು ಖೇಲ್ ಶಿಕ್ಷಕರು ಆಡಿಸಿದರು. ವಯೋವೃದ್ದರೂ ಕೂಡ ಮಕ್ಕಳಾಗಿದ್ದೇ ವಿಶೇಷವಾಗಿತ್ತು.

ಆಟದ ನಂತರ ಪಾನೀಯಕ್ಕಾಗಿ 15 ನಿಮಿಷ ಬ್ರೇಕ್. ಸೇಬು, ಅನಾನಾಸ್ ಹಾಗೂ ಜ್ಯೂಸ್ ಸೇವನೆ. ಬಾಲಕರಿಗಂತೂ ಖುಷಿಯೋ ಖುಷಿ.

5.45 ರಕ್ಷಬಂಧನ್ ಉತ್ಸವ ಪ್ರಾರಂಭ. ಧ್ವಜಾರೋಹಣ, ಧ್ವಜಕ್ಕೆ ರಕ್ಷಾ ಧಾರಣ , ವೈಯುಕ್ತಿಕ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಯುವ ಸೇವಕಿ ಕುಮಾರಿ ವಂದನ, ಅಮೃತ ವಚನ ವಾಚಿಸಿದಳು ನಂತರ 8 ಪುಟ್ಟ ಪುಟ್ಟ ಮಕ್ಕಳಿಂದ (ವಯಸ್ಸು 4ರಿಂದ 6) ವಿವಿಧ ಶ್ಲೋಕಗಳ ಪಠಣವಾಯಿತು. ಬೆಂಗಳೂರಿನಿಂದ ಬಂದಿರುವ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪೋಷಕರಾದ ಹೆಚ್. ನಾಗಭೂಷಣ್ ಅವರ ಬೌದ್ಧಿಕ್ ಇತ್ತು. ರಕ್ಷಾಬಂಧನದ ಅರ್ಥವನ್ನು ಮಕ್ಕಳಿಗೆ ತಿಳಿಯುವಂತೆ ಹೇಳಿದರು. ಭಾರತದ ವಿವಿದ ಪ್ರಾಂತಗಳಲ್ಲಿ ನಾಗರ ಪಂಚಮಿ, ರಕ್ಷಾಬಂಧನ ಇತ್ಯಾದಿ ಹೆಸರುಗಳಲ್ಲಿ ಆಚರಿಸುತ್ತಾರೆ. ದ್ವಾಪರ, ತ್ರೇತಾಯುಗಗಳಲ್ಲೂ ಇದರ ಆಚರಣೆ ಇತ್ತು ಎನ್ನುವುದನ್ನು ಕೆಲವು ಕಥೆಗಳ ಮೂಲಕ ತಿಳಿಸಿದರು.

ಅಮೇರಿಕಾದಲ್ಲಿ ಮದರ್ಸ್ ಡೇ , ಫಾದರ್ಸ್ ಡೇ, ಫ್ರೆಂಡ್‌ಶಿಪ್ ಡೇ ಇತ್ಯಾದಿ ದಿನಗಳನ್ನು ಆಚರಿಸುತ್ತಾರೆ. ಆದರೆ ಸೋದರ-ಸೋದರಿಯರನ್ನು ಭಾವ ಬಂಧದಿಂದ ಬೆಸೆಯುವ brotherhood ಹಾಗೂ sisterhood ದಿನಗಳನ್ನು ಆಚರಿಸುವವರು ಭಾರತೀಯರು ಮಾತ್ರ. ಅದೇ ನಮ್ಮ ವಿಶೇಷತೆ. ಜಾತಿ, ಮತ, ಪಂಥಗಳನ್ನು ಮೀರಿದ ಈ ಸಹೋದರ ಸಹೋದರಿಯರ ಬಂಧನ ವಿಶ್ವದ ಎಲ್ಲ ಜನರನ್ನು ಪರಸ್ಪರ ಗೌರವಿಸುವ, ರಕ್ಷಿಸುವ ಸೇತು ಬಂಧವಾಗಿ ವಿಶ್ವವ್ಯಾಪಿಯಾಗಲಿ ಎಂಬುದೇ ಭಾರತೀಯರ ಆಸೆ. ಈ ಅಮೆರಿಕಾದಲ್ಲಿ ಇರುವ ತಾವೆಲ್ಲ ರಕ್ಷಾಬಂಧನ ಹಬ್ಬವನ್ನು ಪ್ರತಿವರ್ಷ ಆಚರಿಸಿ ಎಂದರು . ನಿಮ್ಮ ರಕ್ಷಣೆಗೆ ಸಹಕಾರಿಗಳಾಗಿರುವ ಪೊಲೀಸ್ ಹಾಗೂ ಪೋಸ್ಟಲ್ ಡಿಪಾರ್ಟ್‌ಮೆಂಟ್, ಅಗ್ನಿ ಶಾಮಕದಳದ, ಅಧಿಕಾರಿಗಳಿಗೂ ಮುಂದಿನ ವರುಷದಿಂದ ರಕ್ಷಾಬಂಧನದ ಸಂಕೇತವಾದ ಈ ರಾಖಿಯನ್ನು ಕಟ್ಟಿರಿ ಎಂದು ಸೂಚಿಸಿದರು.

ಅಧ್ಯಕ್ಷರಾಗಿ ಆಗಮಿಸಿದ್ದ ಬೆಂಗಳೂರಿನ ವಿಶ್ವನಾಥ ಶೆಟ್ಟಿಯವರಿಂದ ನಗು, ಅದರ ಅವಶ್ಯಕತೆಯ ವಿವರಣೆ ಮತ್ತು ದೈಹಿಕ ವ್ಯಾಯಾಮ ಇವುಗಳಿಂದ ಎಲ್ಲರ ಮನಸ್ಸು ಪ್ರಫುಲ್ಲಗೊಂಡಿತು. ಬಾಲಗೊಕುಲದ ಇಬ್ಬರು ಪೋಷಕರಿಂದ ತಮ್ಮ ಮಕ್ಕಳ ಮೇಲಾಗಿರುವ ಸಂಸ್ಕಾರದ ಬಗ್ಗೆ ಸದಭಿಪ್ರಾಯ ವ್ಯಕ್ತವಾಯಿತು ಕಾರ್ಯಕ್ರಮದ ಮುಖ್ಯಶಿಕ್ಷಕರಾಗಿದ್ದ ರಮೇಶ್ ಅನಂತಯ್ಯರವರಿಂದ ವಂದನಾರ್ಪಣೆ. ಹಿಂದೂ ಸ್ವಯಂಸೇವಕ ಸಂಘದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಗಿಯಿತು.

ಕಾರ್ಯಕ್ರಮದಲ್ಲಿ 30 ಯುವಕರು, 30 ಯುವತಿಯರು ಹಾಗೂ 15 ಹಿರಿಯ ನಾಗರಿಕರು, ಉಳಿದವರು 31 ಮಕ್ಕಳು – ಒಟ್ಟು 106 ಜನ ಉಪಸ್ಥಿತರಿದ್ದರು. ಇದರಲ್ಲಿ ಸಂಘದ ಪರಿಚಯವೇ ಇಲ್ಲದ 10 ಹೊಸ ಪರಿವಾರ ಗಳು ಭಾಗವಹಿಸಿದ್ದುದು ವಿಶೇಷ.

 

  • ವರದಿ: ಆರ್.ಸೀತಾಲಕ್ಷ್ಮಿ
   

Leave a Reply