ಪುರಾವೆ ಇಲ್ಲದ ಆರೋಪಗಳು, ರಾಜಕೀಯ ದುರುದ್ದೇಶ

ಯಾದವ್ ರಾವ್ ಜೋಷಿ - 0 Comment
Issue Date : 11.10.2014

ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂದು ದೇಶ ವಿದೇಶಗಳಲ್ಲಿ ಬಹುಚರ್ಚಿತ ಸಂಘಟನೆ. ಅದರ ಸಂಘಟನೆ, ಶಿಸ್ತು ಮತ್ತು ಶಕ್ತಿಯ ಬಗ್ಗೆ ಅನೇಕರು ಪ್ರಶಂಸಿಸುತ್ತಾರೆ. ಕೆಲವರು ಕಾಲಕ್ಕೆ ತಕ್ಕಂತೆ ತಮಗೆ ಅನುಕೂಲ-ಪ್ರತಿಕೂಲವಾದಂತೆ ಪ್ರಶಂಸೆ-ಟೀಕೆ ಮಾಡುವುದೂ ಇತ್ತೀಚೆಗೆ ಕಂಡುಬಂದಿದೆ. ಹಲವರಿಗೆ ಅದರ ಬಗ್ಗೆ ಭಯ-ಅಸೂಯೆ. ಹೀಗೆ ಸಮಾಜದ ಎಲ್ಲ ವರ್ಗಗಳೂ ಇಂದು ಆರೆಸ್ಸಸ್ ಬಗ್ಗೆ ಒಂದಲ್ಲ ಒಂದು ದೃಷ್ಟಿ ಕೋನದಿಂದ ಚಿಂತಿಸಲಾರಂಭಿಸಿವೆ. ಅದರ ವಿರುದ್ಧ ಅಪಪ್ರಚಾರ-ಆರೋಪಗಳು ಇತ್ತೀಚೆಗೆ ನಿತ್ಯದ ಮಾತು. ಆದುದರಿಂದ ಯುಗಾದಿಯ ಈ ವಿಶೇಷಾಂಕದ ಸಂದರ್ಭದಲ್ಲಿ ಸಂಘದ ದಕ್ಷಿಣಾಂಚಲ ಪ್ರಚಾರಕರಾಗಿರುವ ಶ್ರೀಯಾದವರಾವ್ ಜೋಶಿಯವರನ್ನು ಸಂದರ್ಶಿಸುವ ವಿಚಾರ ಮನಸ್ಸಿನಲ್ಲಿ ಮೂಡಿತು. ಅವರ ಬಿಡುವಿಲ್ಲದ ಪ್ರವಾಸದ ನಡುವೆ ಗುಜರಾತಿನಿಂದ ನಗರಕ್ಕೆ ಹಿಂದಿರುಗಿದ ದಿನವೇ (ಮಾರ್ಚ್ 96) ಅವರನ್ನು ಭೇಟಿಮಾಡಲು ಸಾಧ್ಯ ಎಂದು ತಿಳಿಯಿತು. ಅವರೂ ಸಂತೋಷದಿಂದ ಒಪ್ಪಿದರು. ಅಂದು ಸುಮಾರು ಒಂದು ಘಂಟೆ ಕಾಲ ನಡೆದ ಮಾತುಕತೆ, ಮುಕ್ತ ಮನಸ್ಸಿನಿಂದ ಕೇಳಿದ ಪ್ರಶ್ನೆಗಳಿಗೆಲ್ಲ ಸ್ಪಷ್ಟವಾದ ಉತ್ತರ ದೊರೆತಾಗ ಸಂತೋಷವಾಯಿತು. ಅಂದೇ ಅವರು ಪುನಃ ಪ್ರವಾಸವನ್ನು ಮುಂದುವರಿಸಿದರು.

ಸಂಘಸ್ಥಾಪಕ ಡಾ. ಹೆಡಗೆವಾರರ ನಿಕಟವರ್ತಿ ವ್ಯಕ್ತಿ ಶ್ರೀಜೋಶಿ. ಎಂ. ಎ. ಮತ್ತು ಕಾನೂನು ಪದವೀಧರರಾದ ನಂತರ ಕಳೆದ ನಾಲ್ಕು ದಶಕಗಳಿಂದ ಸಂಘದ ಪ್ರಚಾರಕರಾಗಿ ಮೊದಲು ಮಧ್ಯಭಾರತ ಮತ್ತು ಅನಂತರ ಕರ್ನಾಟಕದಲ್ಲಿ ಕಾರ್ಯಮಾಡುತ್ತಾ ಈಗ ಸಂಘಟನೆಯ ಅಖಿಲ ಭಾರತ ಪ್ರಚಾರ ಪ್ರಮುಖರಾಗಿದ್ದಾರೆ.
ಯಾವ ಪ್ರಶ್ನೆಯ ಬಗ್ಗೆಯೂ ಅಡೆ-ಅಳುಕಿಲ್ಲ. ನಿಲುವು – ನುಡಿ ಎರಡೂ ಸ್ಪಷ್ಟ, ನಿಖರ. ತಪ್ಪಿಸಿಕೊಳ್ಳುವ, ಹಾರಿಕೆಯ ಉತ್ತರ ನೀಡುವ ರಾಜಕಾರಣಿಗಳ ಪಟ್ಟು ಎಳ್ಳಷ್ಟೂ ಕಂಡುಬರಲಿಲ್ಲ. ಇದು ನಮ್ಮ ಓದುಗರಿಗೆ ಸಂಘದ ಬಗೆಗಿನ ಸ್ಪಷ್ಟ ತಿಳುವಳಿಕೆ ಹೊಂದಲು ನಿಶ್ಚಿತವಾಗಿಯೂ ಸಹಾಯವಾಗುವುದು.

ಸಂದರ್ಶನದ ವರದಿ ಈಗ ನಿಮ್ಮ ಮುಂದಿದೆ : ಪ್ರಶ್ನೆ : ಸಂಘ ಇಂದು ನಿತ್ಯವೂ ಸುದ್ದಿಯಲ್ಲಿದೆ. ಪ್ರಚಾರಕ್ಕೆ ಅದು ಬೆನ್ನು ತಿರುಗಿಸಿದೆ ಎಂದು ಹೇಳಿದರೂ, ಅದಕ್ಕೆ ಈಗ ಭಾರಿ ಪ್ರಚಾರ ಸಿಗುತ್ತಿದೆ. ಈ ಬಗ್ಗೆ ನಿಮಗೇನು ಅನಿಸುತ್ತಿದೆ ?
ಯಾದವರಾವ್ ಜೋಶಿ : ಸಂಘವು ಪ್ರಸಿದ್ಧಿ ಪರಾಙ್ಮಖವಾಗಿರಬೇಕು ಮತ್ತು ಮಿತ್ರರು ಅದರ ಪ್ರಚಾರದ ಹೊಣೆ ನಿರ್ವಹಿಸಬೇಕೆಂಬ ಯೋಗ ಸಂಘದ ಕುಂಡಲಿಯಲ್ಲೇ ಇದೆ ಅಂತ ಕಾಣುತ್ತದೆ. ಹಿಂದೆ 1948 ರಲ್ಲಿ ಸಂಘದ ಮೇಲೆ ಪ್ರತಿಬಂಧ ಹೇರಲಾಯಿತು. ಆಗ ಸುಮಾರು18 ತಿಂಗಳ ದೀರ್ಘಕಾಲ ಸಂಘದ ಕಾರ್ಯಕರ್ತರೆಲ್ಲರೂ ಜೈಲಿನಲ್ಲಿದ್ದರು. ಪ್ರತ್ಯಕ್ಷ ಸಮಾಜದ ಎದುರಿಗಿದ್ದ ಸಂಘವು ಈ ರೀತಿ ಅದರಿಂದ ದೂರವಾಗಿತ್ತು. ಆಗ ಅದರ ವಿರೋಧಿಗಳೇ ಸಂಘದ ಪ್ರಚಾರವನ್ನು ಜೋರಾಗಿ ಮಾಡಿದರು. ಸಮಾಜವು ಸಂಘವನ್ನು ಮರೆಯದಂತೆ ಸದಾ ಜನರ ಕಿವಿಗಳಲ್ಲಿ ‘ಸಂಘ’ ಬೀಳುವಂತೆ ಮಾಡಿದರು. ಆದುದರಿಂದಲೇ ಪ್ರತಿಬಂಧವು ದೂರವಾಗಿ ತಮ್ಮ ಬಿಡುಗಡೆ ಆದೊಡನೆ ಪರಮ ಪೂಜನೀಯ ಶ್ರೀಗುರೂಜಿಯವರು ಮೊಟ್ಟಮೊದಲು ಮಾಡಿದ ಕೆಲಸವೆಂದರೆ ಸಮಾಜವು ಸಂಘವನ್ನು ಮರೆಯದಂತೆ, ಅದು ನಿರಂತರವಾಗಿ ಜನರ ಮುಂದೆ ಇರುವಂತೆ ಮಾಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದುದು.
ಈ ಸಲವು ತುರ್ತು ಪರಿಸ್ಥಿತಿ ವಿರುದ್ಧ ಸಂಘರ್ಷ ಮುಗಿದ ನಂತರ, ನಾವು ಎಂದಿನಂತೆ ವ್ಯಕ್ತಿ ನಿರ್ಮಾಣ, ರಾಷ್ಟ್ರದ ಭವಿಷ್ಯ ನಿರ್ಮಾಣ ಇತ್ಯಾದಿ ರಾಷ್ಟ್ರ ಕಾರ್ಯಗಳಲ್ಲೇ ಶಾಂತವಾಗಿ ನಿರತರಾಗಲು ಬಯಸಿದ್ದೆವು. ಆದರೆ ನಮ್ಮಷ್ಟಕ್ಕೇ ಬಿಡಲು ಕೆಲವರು ಸಿದ್ಧರಿಲ್ಲವೆಂದು ಕಾಣುತ್ತದೆ. ಅವರು ಸಂಘವು ಜನತಾ ಪಕ್ಷದಲ್ಲಿ ವಿಲೀನವಾಗಬೇಕು ಎಂದು ಹೇಳಲು ಆರಂಭಿಸಿದರು. ಅಲ್ಲಿಂದ ಈ ಪ್ರಚಾರ ಆರಂಭವಾಗಿದೆ. ಇದೇನೂ ಸಂಘಕ್ಕೆ ಹೊಸತಲ್ಲ. ಡಾಕ್ಟರ್ ಜೀ ಇದ್ದಾಗ ಹಿಂದೂ ಮಹಾಸಭೆಯ ಸ್ವಯಂಸೇವಕ ದಳವಾಗಿ ಸಂಘ ಕೆಲಸ ಮಾಡಬೇಕೆಂದು ಆ ರಾಜಕೀಯ ಪಕ್ಷದ ಮುಖಂಡರು ಬಯಸುತ್ತಿದ್ದರು. ಡಾಕ್ಟರ್ ಜೀ ಇದಕ್ಕೆ ಒಪ್ಪಲಿಲ್ಲ. ಆನಂತರ ಪೂಜನೀಯ ಶ್ರೀಗುರೂಜಿಯವರಿದ್ದಾಗಲೂ ಸರ್ದಾರ್ ಪಟೇಲರು ಸಂಘವು ಕಾಂಗ್ರೆಸ್ಸಿನಲ್ಲಿ ಸೇರಬೇಕೆಂದು ಬಯಸಿದ್ದರು. ಇದಕ್ಕೆ ಸಂಘ ಒಪ್ಪದಿದ್ದಾಗ ಅದರ ವಿರುದ್ಧ ಪ್ರಚಾರ ಆರಂಭಿಸಿದರು. ಈಗ ಪುನಃ ಈ ಹಳೇ ರೋಗ ಮರುಕಳಿಸಿದೆಯಷ್ಟೆ. ನಾವಂತೂ ರಾಜಕೀಯದಿಂದ ದೂರವಿದ್ದು ರಾಷ್ಟ್ರ ನಿರ್ಮಾಣದ ನಮ್ಮ ಕಾರ್ಯವನ್ನು ಅವಿರತ ಮುಂದುವರೆಸುತ್ತಾ ಬಂದಿದ್ದೇವೆ.
ಈ ಬಾರಿಯೂ ಸಂಘದ ಮೇಲೆ ನಿಷೇಧ ಹೇರಿದಾಗ ಶ್ರೀಮತಿ ಗಾಂಧಿನಿತ್ಯವೂ ಸಂಘದ ವಿರುದ್ಧ ಹೇಳುತಿದ್ದರು. ಅದರಿಂದಾಗಿ ಸಂಘದ ಹಿರಿ-ಕಿರಿಯ ಸಹಸ್ರಾವಧಿಕಾರ್ಯಕರ್ತರು ಜೈಲಿನೊಳಗೇ ಇದ್ದರೂ ಸಂಘವು ಜನರ ಮುಂದೆ ಇರುವಂತಾಯಿತು.

ಪ್ರಶ್ನೆ : ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟದಲ್ಲಿ ಸಂಘದ ಪಾತ್ರ ಸರ್ವವಿಧಿತ. ಹೀಗಿದ್ದರೂ ಜನತಾ ಪಕ್ಷದ ಕೆಲವು ನಾಯಕರು ಸಂಘದ ವಿರುದ್ಧ ಆರೋಪಿಸುತ್ತಿದ್ದಾರಲ್ಲ ?
ಶ್ರೀಜೋಶಿ : ರಾಜಕೀಯದಲ್ಲಿ ಒಂದು ನಿಯಮವಿದೆ ಎಂದು ಹೇಳುತ್ತಾರೆ. ‘ನನ್ನ ಜೊತೆಯಲ್ಲಿರುವವರು ನನ್ನವರು. ನನ್ನ ಜೊತೆಯಲ್ಲಿ ಇಲ್ಲದಿರುವವರು ನನ್ನ ವಿರೋಧಿಗಳು ಮತ್ತು ನನ್ನನ್ನು ವಿರೋಧಿಸುವವರನ್ನು ನಾಶಗೊಳಿಸಬೇಕು’. (Those who are with me, they are mine; those who are not with me, they are against and those who are against, are to be liquidated) ಎಂಬುದೇ ಈ ನಿಯಮ. ಸಂಘವು ಯಾವುದೇ ರಾಜಕೀಯ ಪಕ್ಷವನ್ನು ಸೇರುವುದಿಲ್ಲ. ಇದು ತನ್ನ ಆರಂಭದಿಂದಲೂ ಅದರ ನೀತಿಯಾಗಿದೆ. ಕೆಲವರಿಗೆ ಇದು ಸಹನೆಯಾಗುತ್ತಿಲ್ಲ. ತಮ್ಮ ಜೊತೆಯಲ್ಲಿ ಸೇರದವರು ತಮ್ಮ ವಿರೋಧಿಗಳು ಎಂಬ ನಿಲುವು ಸಂಘದ ವಿರುದ್ಧ ಎಸಗಲಾಗುತ್ತಿರುವ ಆರೋಪಗಳ ಹಿಂದೆ ಇರಬೇಕೆಂದು ಅನಿಸುತ್ತಿದೆ.
ಇದೇನೂ ಹೊಸತಲ್ಲ. ಹಿಂದೆ ದಿವಂಗತ ಪಂ. ನೆಹರೂರವರು ಕೇರಳದಲ್ಲಿ ಕಮ್ಯುನಿಸ್ಟ್ ಮತ್ತು ಮುಸ್ಲಿಂ ಲೀಗುಗಳ ಜೊತೆಯಲ್ಲಿ ಒಪ್ಪಂದ ಮಾಡಿಕೊಂಡರು. ಕಮ್ಯುನಿಷ್ಟರು ಗಾಂಧೀಜಿಯವರನ್ನು ಹೀಗಳೆದವರು, ಸ್ವಾತಂತ್ರ್ಯ ಹೋರಾಟದಲ್ಲಿ ದೇಶಕ್ಕೆ ದ್ರೋಹ ಬಗೆದವರು ಮಾತ್ರವಲ್ಲ, ಸುಭಾಶ್ಚಂದ್ರರಂಥವರನ್ನು ರಾಷ್ಟ್ರ ದ್ರೋಹಿ ಎಂದು ಕರೆದವರು. ಇನ್ನು ಭಾರತದ ವಿಭಜನೆ ಮತ್ತು ಅಂದಿನ ರಕ್ತಪಾತದಲ್ಲಿ ಮುಸ್ಲಿಂ ಲೀಗಿನ ಪಾತ್ರ ಎಲ್ಲರಿಗೂ ಗೊತ್ತಿದೆ. ಆದರೆ ಅಂತಹ ರಾಷ್ಟ್ರ ದ್ರೋಹಿ ಶಕ್ತಿಗಳೊಡನೆಯೇ ನೆಹರೂ ಒಪ್ಪಂದ ಮಾಡಿಕೊಂಡರು. ಈ ಇಬ್ಬರೂ ತಮ್ಮನ್ನು ಬೆಂಬಲಿಸಲು ಒಪ್ಪಿದುದೇ ಈ ನಿಲುವಿಗೆ ಕಾರಣ. ಕಡು ಜಾತೀಯವಾದಿ ಮುಸ್ಲಿಂ ಲೀಗಿನ ಜೊತೆಗೆ ಒಪ್ಪಂದ ಮಾಡಿದ ಬಗ್ಗೆ ನೆಹರೂರವರನ್ನು ಪ್ರಶ್ನಿಸಿದಾಗ ಅವರು, ‘ಇದು ಹಳೆಯ ಮುಸ್ಲಿಂ ಲೀಗ್ ಅಲ್ಲ ಅದು ಸತ್ತಿದೆ. ಇದು ಹೊಸತು ’ ಎಂದರು. ಅದಕ್ಕೆ ಮುಸ್ಲಿಂ ಲೀಗಿನ ಅಧ್ಯಕ್ಷ ಇಸ್ಮಾಯಿಲ್ ಸೇಟರು ತಕ್ಷಣ ಪ್ರತಿಭಟಿಸಿ ‘ಇದು ಹಳೆಯ ಮುಸ್ಲಿಂ ಲೀಗೇ ಆಗಿದೆ. ಅದು ಸತ್ತಿಲ್ಲ’ ಎಂದು ಉತ್ತರ ಕೊಟ್ಟರು. ಹೀಗೆ ತಮ್ಮ ಜೊತೆಗೂಡುವವರು ಎಂಥವರೇ ಆಗಲಿ, ಅವರು ತಮ್ಮವರು, ಅದಕ್ಕೆ ಒಪ್ಪದವರು ತಮ್ಮ ವಿರೋಧಿಗಳು, ಆದುದರಿಂದ ಅವರನ್ನು ನಾಶಮಾಡಬೇಕು ಎಂಬ ಮನೋವೃತ್ತಿ ಇಂದಿಗೂ ನಮ್ಮ ನಾಯಕರಲ್ಲಿರುವುದು ದುರ್ಭಾಗ್ಯದ ಸಂಗತಿ.

ಪ್ರಶ್ನೆ : ಸಂಘವು ಕೇವಲ ಹಿಂದುಗಳನ್ನಷ್ಟೇ ಸಂಘಟಿಸುತ್ತಿರುವುದರಿಂದ ಅದು ಜಾತೀಯವಾಗಿದೆ ಎಂಬ ಆರೋಪವಿದೆ. ಅದಲ್ಲದೆ ಅದೊಂದು ಅರೆ ಸೈನಿಕ (Para-military) ಮತ್ತು ಹಿಂಸಾವಾದಿ ಸಂಘಟನೆ ಎಂದೂ ಆರೋಪಿಸಲಾಗುತ್ತಿದೆ. ಈ ಬಗ್ಗೆ ನೀವು ಏನು ಹೇಳುತ್ತೀರಿ ?
ಶ್ರೀಜೋಶಿ : ಸಂಘದ ಪ್ರಖರ ರಾಷ್ಟ್ರಭಕ್ತಿಯ ಬಗ್ಗೆ ಹೊಸ ಪುರಾವೆ ಕೊಡುವ ಅಗತ್ಯವಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಸಂಘದ ಸಾವಿರಾರು ಸ್ವಯಂಸೇವಕರು ಮಾಡಿದ ಕೆಲಸ, ಅದರ ದೇಶಭಕ್ತಿ, ಅವರ ನಿಲುವು ಇತ್ಯಾದಿ ಕೇವಲ ಈ ದೇಶದ ಜನರ ಮಾತ್ರವಲ್ಲ ಇಡೀ ಜಗತ್ತಿನ ಜನರ ಗಮನವನ್ನು ಸೆಳೆದಿದೆ.
ಈ ಸಂಘರ್ಷದಲ್ಲಿ ಸಂಘದ ಸ್ವಯಂಸೇವಕರ ಜೊತೆಯಲ್ಲಿ ಬೇರೆ ಬೇರೆ ರೀತಿ ಉಪಾಸನೆ ಮಾಡುವ ಕ್ರೈಸ್ತರು, ಮುಸಲ್ಮಾನರು ಇತ್ಯಾದಿ ಇದ್ದರು. ಎಲ್ಲರೂ 21 ತಿಂಗಳಷ್ಟು ದೀರ್ಘಕಾಲ ಒಟ್ಟಿಗೇ ಇದ್ದರು. ಅಲ್ಲದೆ ಜೈಲಿನಲ್ಲಿ ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಈ ದೀರ್ಘ ಅವಧಿಯಲ್ಲಿ ದೇಶದಾದ್ಯಂತ ನೂರಾರು ಜೈಲುಗಳಲ್ಲಿ ಸಾವಿರಾರು ಸಂಘದ ಕಾರ್ಯಕರ್ತರು ಇವರ ಜೊತೆಯಲ್ಲಿದ್ದರು. ಆದರೆ ಮುಸಲ್ಮಾನರ ಜೊತೆಯಲ್ಲಾಗಲಿ, ಕ್ರೈಸ್ತರ ಜೊತೆಯಲ್ಲಾಗಲಿ ತಿಕ್ಕಾಟದ ಒಂದಾದರೂ ಪ್ರಸಂಗ ಇಡೀ ದೇಶದಲ್ಲಿ ನಡೆದಿಲ್ಲ.
ಆದರೆ ಇದಕ್ಕೆ ವಿರುದ್ಧವಾಗಿ ಇದುವರೆಗೆ ಸಂಘದ ಬಗ್ಗೆ ಇದ್ದ ತಮ್ಮ ತಪ್ಪು ತಿಳುವಳಿಕೆಗಳಿಗೆ ಕಾಂಗ್ರೆಸ್ಸಿನ ಪ್ರಚಾರವೇ ಕಾರಣ. ಈಗ ಅದು ದೂರವಾಗಿದೆ ಎಂದೇ ಅವರೆಲ್ಲ ಹೇಳಿದ್ದಾರೆ. ನಾವು ಒಟ್ಟಿಗೇ ಇದ್ದರೂ ಎಲ್ಲರೂ ಒಂದೇ ರೀತಿ ಇರಬೇಕು ಎಂದು ನಾವೆಂದೂ ಪ್ರಯತ್ನಿಸಲಿಲ್ಲ. ಅವರು ಅವರದೇ ಕಾರ್ಯಕ್ರಮಗಳನ್ನು, ಪ್ರಾರ್ಥನೆ ಇತ್ಯಾದಿಗಳನ್ನು ಮಾಡುತ್ತಿದ್ದರು. ಆದರೂ ನಮ್ಮಲ್ಲಿ ಏಕತೆ ಇತ್ತು. ಕ್ರಿಸ್ಮಸ್, ಈದ್ ಇತ್ಯಾದಿ ಹಬ್ಬಗಳಿಗೆ ಅವರು ನಮ್ಮನ್ನು ಕರೆಯುತ್ತಿದ್ದರು. ನಾವು ಹೋಗುತ್ತಿದ್ದೆವು. ದೀಪಾವಳಿ, ಸಂಕ್ರಾಂತಿ, ಯುಗಾದಿ ಇತ್ಯಾದಿ ಹಬ್ಬಗಳಲ್ಲಿ ಅವರೂ ನಮ್ಮ ಜೊತೆ ಪಾಲ್ಗೊಳ್ಳುತ್ತಿದ್ದರು. ಒಟ್ಟಿಗೇ ಊಟಮಾಡುತ್ತಿದ್ದೆವು. ಹಲವು ಕಾರ್ಯಕ್ರಮಗಳೂ ಒಟ್ಟಿಗೇ ನಡೆಯುತ್ತಿದ್ದವು. ‘ವಿವಿಧತೆಯಲ್ಲಿ ಏಕತೆ ’ಗೆ (Unity in diversity) ಇದು ಜೀವಂತ ಉದಾಹರಣೆಯಾಗಿದೆ. ಹೊರಗೆ ಬಂದ ನಂತರ ಈ ಅನುಭವದ ಪರಿಣಾಮವಾಗಿ ಅವರೇ ‘ಸಂಘವು ಜಾತೀಯವಾದಿ ಅಲ್ಲ, ಉದಾರವಾದಿ’ ಎಂದು ಹೇಳಲು ಆರಂಭಿಸಿದುದು ಎಲ್ಲರಿಗೂ ಗೊತ್ತಿದೆ.
‘ವಿಭಜಿತ ನಿಷ್ಠೆ ’ಯ ಕೂಗು ಅರ್ಥಹೀನ
‘ಹಿಂದು’ ಎಂಬುದು ರಾಷ್ಟ್ರವಾಚಕ ಶಬ್ದ. ಉಪಾಸನಾ ಪದ್ಧತಿ ಭಿನ್ನವಾಗಿದ್ದರೂ ನಾವೆಲ್ಲ ಹಿಂದುಗಳೇ ಆಗಿದ್ದೇವೆ. ಶೈವ, ವೈಷ್ಣವರಂತೆ ಮಹಮ್ಮದ ಮತ್ತು ಏಸು ಪಂಥೀಯರೂ ರಾಷ್ಟ್ರೀಯತೆಯ ದೃಷ್ಟಿಯಿಂದ ಹಿಂದುಗಳೇ ಆಗಿದ್ದಾರೆ ಎಂದೇ ಸಂಘದ ನಿಲುವು. ಮೆಲ್ಲಗೆ ಆದರೂ ಈಗಿನ ಮುಸಲ್ಮಾನರು, ಕ್ರೈಸ್ತರು ಈ ನಿಲುವನ್ನು ಒಪ್ಪುತ್ತಿದ್ದಾರೆ. ಉದಾಹರಣೆಗೆ ಶ್ರೀಎಂ. ಸಿ. ಛಾಗ್ಲಾರವರು, ‘ತರ್ಕ ಮತ್ತು ನಿಖರತೆ’ಗೆ ಹೆಸರಾಗಿರುವ ಫ್ರೆಂಚರು ಎಲ್ಲ ಭಾರತೀಯರನ್ನು ್ಫಅವರ ಮತಧರ್ಮ ಯಾವುದೇ ಇರಲಿ – ಒಟ್ಟಾಗಿ ‘ಹಿಂದು’ಗಳು ಎಂದೇ ಕರೆಯುತ್ತಾರೆ. ಈ ನೆಲದಲ್ಲಿ ನೆಲಸಿ, ಇದು ತನ್ನ ಮನೆಯೆಂದು ಭಾವಿಸುವ ಎಲ್ಲರನ್ನೂ ಗುರುತಿಸಲು ಅದೇ ಸರಿಯಾದ ಪದ. ಬೇರೆ ಬೇರೆ ಮತಧರ್ಮಗಳನ್ನು ಆಚರಿಸುತ್ತಿದದರೂ ವಾಸ್ತವವಾಗಿ ನಾವೆಲ್ಲರೂ ಹಿಂದುಗಳೇ. ನಾನೊಬ್ಬ ಹಿಂದು. ಏಕೆಂದರೆ ನನ್ನ ಪೂರ್ವಜರು ಆರ್ಯರು. ಅವರು ಮುಂದಿನ ಪೀಳಿಗೆಗಳಿಗೆ ಒಪ್ಪಿಸಿ ಹೋದ ತತ್ವದರ್ಶನ ಮತ್ತು ಸಂಸ್ಕೃತಿಗಳನ್ನೇ, ನಾನು ಅಭಿಮಾನದಿಂದ ಕಾಣುತ್ತಾ ಬಂದಿದ್ದೇನೆ.
‘ಈ ಸಲಹೆಯನ್ನು ಒಪ್ಪಿ, ನಾವೆಲ್ಲರೂ ಹಿಂದೂ ಜನಾಂಗಕ್ಕೇ ಸೇರಿದವರು ಎಂದು ಕರೆದುಕೊಂಡರೆ, ಜಾತ್ಯಾತೀತ ಸಮಾಜ ನಿರ್ಮಾಣಕ್ಕೆ ಅದೊಂದು ಪ್ರಚಂಡ ಗೆಲುವಾದೀತು. ಹಿಂದು-ಹಿಂದುಗಳಲ್ಲದವರು ಎಂಬ ಭೇದ ಭಾವನೆಯೇ ನಮ್ಮ ತಾಯಿನಾಡಿನ ವಿಭಜನೆಗೆ ಕೂಡ ಕಾರಣವಾಯಿತು’ ಎಂದು ಹೇಳಿದ್ದಾರೆ.
ಅದೇ ರೀತಿ ಕೇರಳದ ಎರ್ನಾಕುಲಂ ಆರ್ಚಬಿಷಷ್ ಡಾ॥
‘ಕ್ರೈಸ್ತ, ಹಿಂದು ಅಥವಾ ಮುಸ್ಲಿಂ ಇವರಲ್ಲಿ ಯಾರೇ ಆಗಲಿ, ಭಾರತೀಯನಾಗಿ ರಾಷ್ಟ್ರೀಯ ಸಂಸ್ಕೃತಿಯನ್ನು ಹೀರಿಕೊಂಡು ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತನ್ನ ಪಾತ್ರ ವಹಿಸಬೇಕಾದುದು ಅವನ ಧರ್ಮ’ ಎಂದಿದ್ದಾರೆ.
ಇನ್ನು ಕೇವಲ ತಮ್ಮ ಶಿಸ್ತನ್ನು ಬೆಳೆಸಲು ಸಂಚಲನ ಮಾಡುವುದಾಗಲಿ, ವ್ಯಾಯಾಮ ಮಾಡುವುದಾಗಲಿ, ಸೈನಿಕ – ಅರೆಸೈನಿಕ ಅನ್ನುವುದು ಸೈನ್ಯದ ಕುರಿತು ಅವರ ಅಜ್ಞಾವನ್ನೇ ಪ್ರದರ್ಶಿಸುತ್ತದೆ.
ಕಳೆದ 53 ವರ್ಷಗಳಿಂದಲೂ ಸಂಘ ಕಾರ್ಯ ಮಾಡುತ್ತಿದೆ, ಆದರೆ ಹಿಂಸೆಯ ಆರೋಪದ ಬಗ್ಗೆ ಹೇಳುವವರು, ಇಂಥಹ ಒಂದಾದರೂ ಆರೋಪವನ್ನು ರುಜುವಾತು ಪಡಿಸಲಾಗಲಿ, ಪುರಾವೆ ತೋರಿಸಲಾಗಲಿ ಮುಂದೆ ಬಂದಿಲ್ಲ. ಅವರಿಗೆ ಅದು ಸಾಧ್ಯವಾಗಲಿಲ್ಲ. ಪೂಜ್ಯ ಗುರೂಜಿಯವರಿದ್ದಾಗಲೂ ಈ ಆರೋಪ ಇತ್ತು. ‘ಅದನ್ನು ರುಜುವಾತು ಪಡಿಸಲು ಒಂದಾದರೂ ಪುರಾವೆ ತೋರಿಸಿ’ ಎಂದು ಸವಾಲು ಹಾಕಿದಾಗ ಯಾರೂ ಮುಂದೆ ಬರಲಿಲ್ಲ. ಶ್ರೀಮತಿ ಗಾಂಧೀ ಪ್ರಧಾನಿಯಾಗಿದ್ದಾಗ ಗೃಹ ಸಚಿವ ಶ್ರೀಬ್ರಹ್ಮಾನಂದ ರೆಡ್ಡಿಯವರು ಲೋಕಸಭೆಯಲ್ಲಿ ‘ಹಿಂಸಾಚಾರ ನಡೆಸಿದ ಬಗ್ಗೆ ಸಂಘದ ವಿರುದ್ಧ ಒಂದಾದರೂ ಪುರಾವೆ ಇಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದರು. ಇಷ್ಟಾದರೂ ಕೆಲವರು ಸಂಘದ ಮೇಲೆ ಈ ಆರೋಪವನ್ನು ಆಗಾಗ ಉಚ್ಚರಿಸುತ್ತಿದ್ದಾರೆ. ಕೇವಲ ರಾಜಕೀಯ ದುರುದ್ದೇಶದಿಂದಲೇ ಹೀಗೆ ಮಾಡುತ್ತಿದ್ದಾರೆಂಬುದು ಸ್ವಯಂ ಸ್ಪಷ್ಟ.
ಆದರೆ ‘ಮಹಾತ್ಮಾಜೀಕಿ ಜೈ’ ಎಂದು ಘೋಷಿಸುವ, ಅಹಿಂಸೆಯ ಆರಾಧಕರು ತಾವು ಎಂದು ಕರೆಸಿಕೊಳ್ಳುವ ಈ ಜನರೇ ಆಗಾಗ ಸಂಘದ ಸ್ವಯಂಸೇವಕರ ಮೇಲೆ ದೌರ್ಜನ್ಯ ನಡೆಸಿ ಅವರ ಮನೆ-ಮಠಗಳನ್ನು ಸುಟ್ಟ ಸಾವಿರಾರು ಪ್ರಕರಣಗಳು ಎಲ್ಲರಿಗೂ ಗೊತ್ತು. ಆದರೂ ಈ ಆರೋಪಗಳನ್ನು ಈಗ ನಂಬುವುದಿಲ್ಲ.

ಪ್ರಶ್ನೆ : ಜನತಾ ಪಕ್ಷದ ಮೇಲೆ ಸಂಘದ ನಿಯಂತ್ರಣವಿದೆ ಎಂದು ಶ್ರೀಮತಿ ಗಾಂಧಿಹೇಳಿದ್ದಾರೆ. ಇದು ಎಷ್ಟರ ಮಟ್ಟಿಗೆ ನಿಜ ?
ಸರ್ಕಾರಿ ಕೃಪೆಯಿಂದ ಎಂದೂ ಸಂಘ ಬೆಳೆದಿಲ್ಲ
ಶ್ರೀಜೋಶಿ : ಜನತಾ ಪಕ್ಷದ ನೇತೃತ್ವವು ಸಾಮಾನ್ಯವಾಗಿ ಸರ್ವಶ್ರಿ ಮೊರಾರ್ಜಿ,
ಚರಣಸಿಂಗ್ ಮತ್ತು ಜಗಜೀವನರಾಂ ಈ ತ್ರಿಮೂರ್ತಿಗಳ ಕೈಯಲ್ಲಿದೆ ಎಂಬುದು ಎಲ್ಲರಿಗೂಗೊತ್ತಿರುವ ವಿಷಯವೇ. ಈ ಮೂವರೂ ಸಂಘದ ನಿಯಂತ್ರಣ ಮಾನ್ಯಮಾಡುವರೆಂಬ ಕಲ್ಪನೆಯೇ ಹಾಸ್ಯಾಸ್ಪದ.

ಪ್ರಶ್ನೆ : ಈ ಸಂಬಂಧದಲ್ಲೇ ‘ವಿಭಜಿತ ನಿಷ್ಠೆ’ ಯ ಕೂಗೂ ಎದ್ದಿದೆಯಲ್ಲ ?
ಶ್ರೀಜೋಶಿ : ನಿಷ್ಠೆಯ ವಿಭಜನೆ ಎರಡು ರಾಜಕೀಯ ಪಕ್ಷಗಳ ನಡುವೆ ಮಾತ್ರ ಸಾಧ್ಯ. ಸಂಘದಲ್ಲಿ ಓರ್ವನು ಬಂದನೆಂದರೆ, ಅವನು ಜೀವನವಿಡೀ ಸ್ವಯಂಸೇವಕನಾಗಿರುತ್ತಾನೆ. ಇಲ್ಲಿ ದೇಶಭಕ್ತಿ, ರಾಷ್ಟ್ರ ನಿಷ್ಠೆ ಇತ್ಯಾದಿ ಗುಣಗಳ ಸಂವರ್ಧನೆ ಆಗುತ್ತದೆ. ಆದುದರಿಂದ ಸಂಘದ ಸ್ಥಾನ ‘ಗುರು’ ಸ್ಥಾನವಾಗಿದೆ. ಅದು ವ್ಯಕ್ತಿಯ ಜೀವನಕ್ಕೆ ಯೋಗ್ಯ ದಿಕ್ಕನ್ನು ನೀಡುತ್ತದೆ. ಆದರೆ ರಾಜಕೀಯ ಪಕ್ಷಗಳ ಸದಸ್ಯತ್ವದ ಅವಧಿಸೀಮಿತವಾಗಿರುತ್ತದೆ. ಪ್ರತಿವರ್ಷವೂ ಅದನ್ನು ಮುಂದುವರಿಸಬೇಕು, ನವೀಕರಿಸಬೇಕು.
‘ರಾಜಕೀಯ ಸ್ಪರ್ಧೆ’ಯಲ್ಲಿ ಸಂಘ ಇಲ್ಲ. ಆದುದರಿಂದ ಇಂತಹ ಆರೋಪಕ್ಕೆ ಅರ್ಥವೇ ಇಲ್ಲ.ತಮ್ಮನ್ನು ಕೆಲವರು ಬೆಂಬಲಿಸುತ್ತಿಲ್ಲ ಎಂದೇ ನಾನು ಈ ಮೊದಲು ಹೇಳಿದ ಸಿದ್ಧಾಂತಕ್ಕನುಗುಣವಾಗಿ ಈ ಕೂಗು ಎದ್ದಿದೆ. ಇಬ್ಬರು ಹೆಂಡಿರ ಬಗ್ಗೆ ವಿಭಜಿತ ನಿಷ್ಠೆಯ ಸಂದೇಹ ಇರಲು ಅವಕಾಶವಿದೆ ಆದರೆ ಒಡಹುಟ್ಟಿದ ಸೋದರಿಯ ಬಗ್ಗೆ ಇಂಥಹ ಸಂದೇಹಕ್ಕೆ ಎಳ್ಳಷ್ಟೂ ಅವಕಾಶವಿಲ್ಲ. ಆ ಸ್ಥಾನವೇ ಬೇರೆ.

ಪ್ರಶ್ನೆ : ಕೇರಳ ಮತ್ತು ಉತ್ತರ ಪ್ರದೇಶದಲ್ಲಿ ಸಂಘದ ಕೆಲವು ಚಟುವಟಿಕೆಗಳ ಮೇಲೆ ನಿರ್ಬಂಧಗಳನ್ನು ಹೇರಲಾಗಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಅಲ್ಲಿ ಸಂಘದ ಮೇಲೆ ಇವುಗಳ ಪರಿಣಾಮವೇನು ?
ಶ್ರೀಜೋಶಿ : ಇಂಥಹ ನಿರ್ಬಂಧಗಳಿಂದ ಸಂಘದ ಮೇಲೆ ಯಾವುದೇ ದುಷ್ಪರಿಣಾಮಗಳು ಆಗುವುದಿಲ್ಲ. ಅದರ ಬದಲು ಸಂಘ ಬೆಳೆಯುತ್ತಲೇ ಇದೆ. ಕೇರಳದಲ್ಲಿ ಸಿಪಿಐ (ಕಮ್ಯುನಿಷ್ಟ್ ಪಕ್ಷ) ಮತ್ತು ಸಿಪಿಎಂ (ಮಾರ್ಕ್ಸ್‌ವಾದಿ ಕಮ್ಯುನಿಷ್ಟ್ ಪಕ್ಷ) ಎರಡೂ ಪಕ್ಷಗಳು ಸಂಘದ ವಿರುದ್ಧ ಬಹಳ ಪ್ರಚಾರ ಮಾಡಿದುವು. ಸಿಪಿಎಂ ಅಂತೂ ‘ಸಂಘವಿರೋಧಿಪಕ್ಷ’ವನ್ನೇ ಆಚರಿಸಿತು. ಸಿಪಿಐ ಕೂಡ ಹಲವು ನಿರ್ಣಯಗಳನ್ನು ಮಾಡಿ ವಿರೋಧಿಸಿತು. ಇಷ್ಟಾದ ಮೇಲೂ ಕೇರಳದ ಮುಖ್ಯಮಂತ್ರಿ (ಅವರು ಸಿಪಿಐ) ವಾಸುದೇವನ್ ನಾಯರರು ಇತ್ತೀಚೆಗೆ ಪತ್ರಿಕಾ ಪರಿಷತ್ತೊಂದರಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ‘‘ಕಳೆದ ವರ್ಷ ಕೇರಳದಲ್ಲಿ ಸಂಘದ ತರುಣ ಸ್ವಯಂಸೇವಕರ ಸಂಖ್ಯೆ 22 ಸಾವಿರ ಇದ್ದು ಈಗ 45 ಸಾವಿರಕ್ಕೆ ಏರಿದೆ. ಹಿಂದೆ ಸಂಘದಲ್ಲಿ ಮೇಲ್ಜಾತಿಗಳ ಜನರು ಹೆಚ್ಚಾಗಿ ಹೋಗುತ್ತಿದ್ದರು. ಈಗ ಹರಿಜನರು, ಬುಡಕಟ್ಟಿನವರು (ಮೀನುಗಾರರು ಇತ್ಯಾದಿ) ಮತ್ತಿತರರ ಹಿಂದುಳಿದ ವರ್ಗಗಳ ಜನರೂ ಭಾರಿ ಸಂಖ್ಯೆಯಲ್ಲಿ ಸೇರಿದ್ದಾರೆ. ಇದು ತುಂಬಾ ಚಿಂತೆಯ ಸಂಗತಿ’’ ಎಂದು ಹೇಳುವಂತಾಯಿತು.
ಇತ್ತೀಚೆಗೆ ಆಳ್ವಾಯಿ ಮತ್ತು ತಲಚೇರಿಗಳಲ್ಲಿ ಸರ ಸಂಘಚಾಲಕರ ಪ್ರವಾಸ ನಡೆಯಿತು. ಈ ವಿರೋಧಿಪ್ರಚಾರದಿಂದ ಎಲ್ಲ ಕಡೆಗಳಲ್ಲೂ ಜನರಲ್ಲಿ ಸಂಘದ ಬಗ್ಗೆ ಕುತೂಹಲ, ತಿಳಿದುಕೊಳ್ಳಲು ತೀವ್ರ ಉತ್ಸುಕತೆ ಉಂಟಾಗಿತ್ತು. ಎರಡೂ ಕಡೆ ಸಾವಿರಾರು ಗಣವೇಷಧಾರಿ ಸ್ವಯಂಸೇವಕರ ಪಥಸಂಚಲನ ನಡೆಯಿತು. ಎರಡೂ ಕಡೆ ಸಾರ್ವಜನಿಕ ಸಭೆಗಳಲ್ಲಿ ಅಪಾರ ಜನಸಾಗರ ಸೇರಿತ್ತು. ಈ ದೃಶ್ಯವನ್ನು ಎಲ್ಲರೂ ನೋಡಿದರು. ಜವಹರಲಾಲರು ಸಂಘವನ್ನು ವಿರೋಧಿಸಿದಾಗ ಅದು ತೀವ್ರವಾಗಿ ಬೆಳೆಯಿತು. ಇಂದಿರಾಗಾಂಧಿಯವರೂ ಅದರ ಮೇಲೆ ನಿಷೇಧ ಹೇರಿದರು. ಆಗ ಜನರು ಗಂಟುಮೂಟೆ ಸಹಿತ ಅವರನ್ನೇ ಉಚ್ಚಾಟಿಸಿದರು. ಆದರೆ ಸಂಘ ಮಾತ್ರ ಬೆಳೆಯುತ್ತಲೇ ಇದೆ. ಉತ್ತರ ಪ್ರದೇಶದಲ್ಲಿ ಶ್ರೀರಾಮನರೇಶ ಯಾದವರು ಈ ಕೆಲವು ನಿರ್ಬಂಧಗಳನ್ನು ಹೇರಿದರು. ಪರಿಣಾಮವಾಗಿ ಅವರೇ ಜನತಾ ಪಕ್ಷದ ವಿಧಾನ ಮಂಡಲದ ನಾಯಕತ್ವ ಮತ್ತು ಮುಖ್ಯಮಂತ್ರಿ ಪದವಿಯನ್ನು ಕಳೆದುಕೊಂಡರು !
ಆದುದರಿಂದ ಸಂಘದ ಮೇಲೆ ನಿರ್ಬಂಧ ಹೇರುವವರು ತಮ್ಮ ಗತಿ ಏನಾದೀತು ಎಂಬ ಬಗ್ಗೆ ಯೋಚಿಸಬೇಕೇ ಹೊರತು, ಸಂಘದ ಮೇಲೆ ಅದರ ಎಳ್ಳಷ್ಟೂ ಪರಿಣಾಮ ಆಗದು.
ಸಂಘವು ಡ್ರಿಲ್, ದಂಡ, ರೂಟ್‌ಮಾರ್ಚ್ ಇತ್ಯಾದಿಗಳಲ್ಲಿ ಇಲ್ಲ. ಅದು ಸ್ವಯಂಸೇವಕರ ಉಜ್ವಲ ರಾಷ್ಟ್ರ ನಿಷ್ಠೆಯ ಜ್ವಲಂತ ಅಂತಃಕರಣಗಳಲಿದ್ದು, ಅವರ ತ್ಯಾಗ-ತಪಸ್ಸುಗಳ ಆಧಾರದ ಮೇಲೆಯೇ ನಿಂತಿದೆ, ಬೆಳೆದಿದೆ.
ನಾಹಂ ವಸಾಮಿ ವೈಕುಂಠೇ
ಯೋಗೀನಾಂ ಹೃದಯೇಷ್ಟಪಿ

ಮದ್ಭಕ್ತಾ ಯತ್ರ ಗಾಯಂತೇ ತತ್ರ ತಿಷ್ಠಾಮಿ ನಾರದ ॥

ಎಂದು ಶ್ರೀವಿಷ್ಣು ನಾರದ ಮುನಿಗಳಿಗೆ ಹೇಳಿದಂತೆ ಸಂಘವು ‘ನಾಹಂ ವಸಾಮಿ ದಂಡೇ ಚ, ನಾಹಂ ವಸಾಮಿ ರೂಟ್ ಮಾರ್ಚೇ’ ಎಂದು ಹೇಳುತ್ತಿದೆ. ಅದು ಸ್ವಯಂಸೇವಕರ ಹೃದಯದಲ್ಲಿದೆ. ಇದನ್ನು ಸಂಘದ ವಿರೋಧಿರಾಜಕಾರಣಿಗಳು ಅರ್ಥಮಾಡಿಕೊಳ್ಳುವುದು ಒಳ್ಳೆಯದು.

ಪ್ರಶ್ನೆ : ಇತ್ತೀಚೆಗೆ ಸಂಘವು ಧಿಡೀರನೆ ಬೆಳೆದಿದೆ ಎನ್ನಲಾಗುತ್ತಿದೆ. ಜನತಾ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವುದು ಇದಕ್ಕೆ ಕಾರಣವೆನ್ನಬಹುದೇ ?
ಶ್ರೀಜೋಶಿ : ತುರ್ತುಪರಿಸ್ಥಿತಿ ರದ್ದಾದ ನಂತರ ಮೊದಲಿಗಿಂತ ಸುಮಾರು ಶೇ. 25 ರಷ್ಟು ಸಂಘದ ಶಾಖೆಗಳು ಮತ್ತು ಸ್ವಯಂಸೇವಕರ ಸಂಖ್ಯೆ ಬೆಳೆದಿದೆ. 21 ತಿಂಗಳ ದೀರ್ಘಕಾಲ ನಮ್ಮ ಸ್ವಯಂಸೇಕರು ತುರ್ತುಪರಿಸ್ಥಿತಿ ವಿರುದ್ಧ ಹೋರಾಟದಲ್ಲಿ ನಿರತರಾಗಿದ್ದುದರಿಂದ ಆಗ ಸಂಘಟನೆಯ ಕಾರ್ಯಕ್ಕೆ ಅವಕಾಶವಾಗಲಿಲ್ಲ. ಆನಂತರ ಅದು ದೊರೆತಿದ್ದು ಎಲ್ಲರೂ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ.
ತುರ್ತುಪರಿಸ್ಥಿತಿಯಲ್ಲಿ ಸಂಘದ ಸ್ವಯಂಸೇವಕರು ನಿರ್ವಹಿಸಿದ ಪಾತ್ರದಿಂದ ಜನಮನದಲ್ಲಿ ಅದರ ಬಗ್ಗೆ ಅಪಾರ ಆದರ, ಪ್ರೇಮ ಉಂಟಾಗಿದೆ. ಹೀಗೆ ಸ್ವಯಂಸೇವಕರ ನಿಷ್ಠೆ, ಜನರ ಬೆಂಬಲ ಮತ್ತು ಭಗವಂತನ ಕೃಪೆಯಿಂದಲೇ ಅದು ಬೆಳೆಯುತ್ತಿದೆ.
ಶಾಸನ ಅನುಕೂಲವಾಗಿದೆ ಎಂದೇನೂ ಅದು ಬೆಳೆಯುತ್ತಿಲ್ಲ. ಉದಾಹರಣೆಗೆ ಕೇರಳದಲ್ಲಿ ಸರ್ಕಾರವು ಬಹಿರಂಗವಾಗಿ ಸಂಘವನ್ನು ವಿರೋಧಿಸಿಯೂ, ಇತರೆಲ್ಲ ರಾಜ್ಯಗಳಿಗಿಂತ ಅಲ್ಲಿಯೇ ಹೆಚ್ಚು ಬೆಳೆದಿರುವುದನ್ನು ಇಲ್ಲಿ ಗಮನಿಸಬೇಕು. ಇಂದಿರಾ ಕಾಂಗ್ರೇಸ್ ಸರ್ಕಾರ ಇರುವ ಕರ್ನಾಟಕ ಮತ್ತು ಆಂಧ್ರಗಳಲ್ಲೂ ಸಂಘದ ಬೆಳವಣಿಗೆ ಆಗಿದೆ.
ಆರಂಭದಿಂದಲೇ ಬ್ರಿಟಿಷರು ಸಂಘವನ್ನು ವಿರೋಧಿಸಿದರು. ಸ್ವಾತಂತ್ರ್ಯಾ ನಂತರವೂ ನಮ್ಮದೇ ಸರ್ಕಾರ ಅದನ್ನು ವಿರೋಧಿಸಿತು. ಆದರೆ ಅದು ಸರ್ಕಾರಿ ಕೃಪೆಯಿಂದ ಎಂದೂ ಬೆಳೆದಿಲ್ಲ. ಸರ್ಕಾರಿ ಆಶೀರ್ವಾದವನ್ನು ಎಂದೂ ಅದು ಬಯಸಿಲ್ಲ.

ಪ್ರಶ್ನೆ : ಇಷ್ಟು ದೊಡ್ಡ ಸಂಘಟಿತ ಶಕ್ತಿಯನ್ನು ಕೇವಲ ಕವಾಯತಿನಲ್ಲೇ ಉಪಯೋಗಿಸದೇ, ದೇಶದ ಉನ್ನತ ಕಾರ್ಯಗಳಲ್ಲಿ ತೊಡಗಿಸಬಾರದೇಕೆ ?
ಶ್ರೀಜೋಶಿ : ಸಾಕಷ್ಟು ದೊಡ್ಡ ಪ್ರಮಾಣದಲ್ಲೇ ರಚನಾತ್ಮಕ ಕಾರ್ಯದಲ್ಲಿ ಸಂಘವು ತನ್ನ ಶಕ್ತಿಯನ್ನು ತೊಡಗಿಸಿದೆ. ಉದಾಹರಣೆಗೆ ಮಧ್ಯಪ್ರದೇಶ, ಅಸ್ಸಾಂ, ಪೂರ್ವಾಂಚಲ, ಒರಿಸ್ಸಾ, ಮಹಾರಾಷ್ಟ್ರ, ಬಿಹಾರ ಇತ್ಯಾದಿಗಳಲ್ಲಿ ದುರ್ಗಮ ವನವಾಸೀ ಕ್ಷೇತ್ರಗಳಲ್ಲಿ ಸಂಘದ ಸುಮಾರು 300 ಪೂರ್ಣಕಾಲದ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ನಮ್ಮ ಸ್ವಯಂಸೇವಕರು ಸಾವಿರಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ವಿಶೇಷವಾಗಿ ವನವಾಸೀ ಮತ್ತು ಗ್ರಾಮೀಣ ಹರಿಜನ ಮತ್ತು ಹಿಂದುಳಿದ ವರ್ಗಗಳ ಜನರ ನಡುವೆಯೇ ಇದನ್ನು ನಡೆಸುತ್ತಿದ್ದಾರೆ. ದಿಲ್ಲಿಯ ನೆರೆಹಾವಳಿ, ಬಿಹಾರ-ಬಂಗಾಳ-ಕರ್ನಾಟಕಗಳಲ್ಲಿ ಭೀಕರ ಕ್ಷಾಮ ಉಂಟಾದಾಗ, ಆಂಧ್ರದಲ್ಲಿ ಪ್ರಚಂಡ ಚಂಡಮಾರುತದಿಂದ ಒದಗಿದ ಆಪತ್ತಿನಂಥಹ ನಿಸರ್ಗ ಪ್ರಕೋಪಗಳ ಸಂದರ್ಭಗಳಲ್ಲಿ, ಅದಕ್ಕೂ ಮುಂಚೆ ವಿಭಜನೆಯಾದಾಗ ಪಂಜಾಬ್, ಸಿಂಧ್ ಮತ್ತು ಬಂಗಾಳದ ಬಂಧುಗಳ ಸುರಕ್ಷಿತ ರವಾನೆ (ಈಗಿನ ಭಾರತದ ಭಾಗಕ್ಕೆ) ಮತ್ತು ಅವರ ಪುನರ್ವಸತಿಯ ಮಹತ್ಕಾರ್ಯದಲ್ಲಿ ಸ್ವಯಂಸೇವಕರು ಮಾಡಿದ ಸೇವೆ ಸರ್ವವಿಧಿತ.
ನಿತ್ಯ ಶಾಖೆಗಳಲ್ಲಿ ಸಮಾಜದ ಬಗ್ಗೆ ಪ್ರೇಮ, ರಾಷ್ಟ್ರದ ಬಗ್ಗೆ ನಿಷ್ಠೆ, ಶಿಸ್ತು, ಸೇವಾಭಾವ ಇತ್ಯಾದಿ ಗುಣಗಳ ಸಂಸ್ಕಾರವಾಗುತ್ತದೆ. ಜೀವನದ ಎಲ್ಲ ಕ್ಷೇತ್ರಗಳಲ್ಲೂ ಸ್ವಯಂಸೇವಕರು ಸಮಾಜದ ಪ್ರಗತಿ, ಆನಂದ ಮತ್ತು ಸಮುನ್ನತಿಗಾಗಿ ದುಡಿಯುವುದರಲ್ಲಿ ಅದು ಪ್ರಕಟವಾಗುತ್ತದೆ.

ಯಾದವರಾವ್ ಜೋಶಿಯವರೊಡನೆ ವಿಶೇಷ ಸಂದರ್ಶನ.
1979

   

Leave a Reply