ರಾಷ್ಟ್ರಧರ್ಮ ಪ್ರತಿಷ್ಠಾಪನೆಗಾಗಿ

ಹೊ.ವೆ.ಶೇಷಾದ್ರಿ - 1 Comment
Issue Date : 29.10.2014

‘ನರನ ರೂಪದಲ್ಲಿ ನ ನಾರಾಯಣನನ್ನು ಪೂಜಿಸು’ ಎಂದರು ಶ್ರೀ ರಾಮಕೃಷ್ಣ ಪರಮಹಂಸರು.
ತಮ್ಮ ಗುರುವಿನ ಅದೇ ಸೂತ್ರವನ್ನು ವಿಸ್ತರಿಸುತ್ತಾ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಘೋಷಿಸಿದರು.

‘ದೇವರನ್ನು ಕಾಣಲು ಎಲ್ಲೆಲ್ಲೋ ಅಲೆಯುವಿರೇಕೆ? ನಿಮ್ಮ ಕಣ್ಣೆದುರಲ್ಲೇ ಓಡಾಡುವ ಕೋಟಿ ಕೋಟಿ ಸಜೀವ ದೇವರುಗಳನ್ನು ಗುರುತಿಸಿ. ನಮ್ಮೀ ಸಾಮಾನ್ಯ ಜನ ಕೋಟಿಯ ಕೊಟ್ಟ ಕೊನೆಯ ಅಲ್ಪನೂ ಸಹ ನಿಮ್ಮ ಆರಾಧ್ಯ ದೇವನಾಗಲಿ… ಬರಲಿರುವ ಹಲವು ದಶಕಗಳವರೆಗೆ ನಿಮ್ಮ ಮಿಕ್ಕೆಲ್ಲ ದೇವ-ದೇವತೆಗಳನ್ನು ಕೊಠಡಿಯಲ್ಲಿ ಭದ್ರವಾಗಿ ಬೀಗ ಹಾಕಿಡಿ. ಇನ್ನು ನಮ್ಮೆಲ್ಲರಿಗೆ ಭಾರತ ಮಾತೆಯೊಬ್ಬಳೇ ಆರಾಧ್ಯದೇವಿಯಾಗಲಿ…!’

ನಮ್ಮ ರಾಷ್ಟ್ರೀಯತೆಯ ಇದೇ ಆಧ್ಯಾತ್ಮಿಕ ಪ್ರೇರಣೆ ಯನ್ನು ತಮ್ಮ ತೇಜಃಪುಂಜ ಶೈಲಿಯಲ್ಲಿ ಮಹಾಯೋಗಿ ಅರವಿಂದರು ಬರೆದನು… ’ಈ ನಮ್ಮ ಭೂಮಿ ಬರೇ ಮಣ್ಣು ಕಲ್ಲುಗಳಲ್ಲ. ಬರೇ ಜಡ ವಸ್ತುವಲ್ಲ. ಸಾಕ್ಷಾತ ಚೈತನ್ಯ ಮಯೀ ಜಗಜ್ಜನನಿಯ ವ್ಯಕ್ತರೂಪ ಈ ಮಾತೃಭೂಮಿ. ನಾವು ಕೈಯ್ಯಾರ ಸೇವಿಸಿ ಪೂಜಿಸಿ ಜೀವನಸಾಫಲ್ಯ ಪಡೆಯಲೆಂದೇ ಈ ರೂಪ ತಾಳಿ ನಿಂತಿದ್ದಾಳೆ ಆ ಶಕ್ತಿ ಮಾತೆ…!’
ಸ್ವಾಮಿ ರಾಮತೀರ್ಥರಾದರೋ ಅದ್ವೈತದ ಸಾರವನ್ನೇ ಈ ಮಾತೃಭೂಮಿಯಲ್ಲಿ ಕಂಡರು.

‘ಸಂಪೂರ್ಣ ಭಾರತವೇ ನನ್ನ ಶರೀರ. ಹಿಮಾಲಯವೇ ನನ್ನ ಮಸ್ತಕ. ಕನ್ಯಾಕುಮಾರಿಯೇ ನನ್ನ ಪಾದ. ವಿಂಧ್ಯಾ ನನ್ನ ಕಟಗೆ ವೀರಭೂಷಣ. ಪೂರ್ವ-ಪಶ್ಚಿಮ ಘಟ್ಟಗಳೇ ನನ್ನೆರಡು ಬಾಹುಗಳು. ನನ್ನೀ ತೆರೆದ ಬಾಹುಗಳಲ್ಲಿ ಇಡೀ ವಿಶ್ವವನ್ನೇ ಆಲಂಗಿಸಿಯೇನು. ಆಹಾ! ನನ್ನೀ ನಿಲುವು ಅದೆಷ್ಟು ಭವ್ಯ! ನಾನು ಅಡಿ ಇಟ್ಟಲ್ಲಿ ಭಾರತವೇ ಅಡಿ ಇಟ್ಟಂತೆ. ನನ್ನ ಉಸಿರಾಟವೇ ಭಾರತದ ಉಸಿರಾಟ. ನಾನೇ ಭಾರತ. ನಾನೇ ಶಂಕರ… ಇದೇ ದೇಶಭಕ್ತಿಯ ಅತ್ಯುಚ್ಚ ಆದರ್ಶ. ಇದುವೇ ವ್ಯಾವಹಾರಿಕ ವೇದಾಂತ!’

ಎಷ್ಟು ಸ್ಪಷ್ಟ. ಎಷ್ಟು ಅಸಂಧಿಗ್ಧ! ಎಷ್ಟು ಸುಂದರ, ಎಷ್ಟು ಸ್ಫೂರ್ತಿಪ್ರದ! ನಮ್ಮ ರಾಷ್ಟ್ರ ಪುರುಷರ ಈ ಅಮೃತ ವಾಣಿ! ನಿಸ್ಸಂಶಯವಾಗಿಯೂ ಇದೇ ಈ ಯುಗದ ನಮ್ಮ ’ರಾಷ್ಟ್ರಧರ್ಮ’ದ ಮಂತ್ರ.
ಆ ನಮ್ಮೆಲ್ಲರ ರಾಷ್ಟ್ರ ಪುರುಷರೂ ನಮ್ಮ ಜನಾಂಗದ ಕಿವಿಯಲ್ಲಿ ಈ ತಾರಕ ಮಂತ್ರವನ್ನು ಸುರಿ ಹೋದರು. ಬರಲಿರುವ ಪೀಳಿಗೆಗಳ ಹೃದಯದಲ್ಲಿ ತಮ್ಮ ಆ ದಿವ್ಯ ಕನಸನ್ನು ಕೊರೆದಿಟ್ಟು ಹೋದರು. ಇನ್ನು ನೀವು ಆ ಕನಸನ್ನು ಪೂರೈಸಿರೆಂದು ಹರಸಿ ಹೋದರು. ಆ ಕನಸನ್ನು ನನಸಾಗಿಸುವ ಗಂಡುಗಲಿಗಳ ಬರವಿಗಾಗಿ ಹಾರೈಸಿ ಹೋದರು.

‘ಅಂಥ ಒಂದು ನೂರು ಗಂಡುಗಲಿಗಳನ್ನು ನನಗೆ ಕೊಡಿ. ಇಡೀ ದೇಶದ ಚಿತ್ರವನ್ನು ಬದಲಾಯಿಸಿಯೇನು?’ ಎಂದು ಗುಡುಗಿದರು ಸ್ವಾಮಿ ವಿವೇಕಾನಂದರು. ಆ ಗಂಡು ಗಲಿಗಳಾದರೂ ಹೇಗಿರಬೇಕು? ಅವರಂದರು, ‘ಕಬ್ಬಿಣದ ಮೈಕಟ್ಟನ, ಉಕ್ಕಿನ ನರಗಳುಳ್ಳ, ಸಿಡಿಲಿನಂತಹ ಮನೋಬಲವುಳ್ಳ ವೀರ ಸನ್ಯಾಸಿಗಳು ಅವರಾಗಬೇಕು.’

ಅಂಥವರಿಗಾಗಿ ಹಂಬಲಿಸಿ, ಹಂಬಲಿಸಿ ಹೋದರು ಸ್ವಾಮಿಜೀ. ತಮ್ಮ ದಿವ್ಯ ದೃಷ್ಟಿಯಲ್ಲಿ ಅಂಥವರ ಬರುವಿಕೆಯನ್ನು ಕಂಡೂ ಹೋದರು. ಅವರು ಮಹಾ ಸಮಾಧಿ ಸ್ವೀಕರಿಸುವ ಮುನ್ನ ತಮಗೆ ತಾವೇ ಹೇಳಿಕೊಂಡದ್‌ದು ಕೇಳಿಸಿತು… ‘ಇನ್ನು ಈ ವಿವೇಕಾನಂದನ ಕಾರ್ಯ ಆಯಿತು. ಆದರೇನು? ಅದೋ ನೋಡಲ್ಲಿ! ಇಲ್ಲಿ ಹುಟ್ಟ ಬರಲು ಕಾದಿರುವ ಅಸಂಖ್ಯ ವಿವೇಕಾನಂದರು!’
ಅವರ ಶಿಷ್ಯೆ ಮಹಾತೇಜಸ್ವಿನಿ ನಿವೇದಿತಾ ಮತ್ತೊಂದು ಭವಿಷ್ಯದ ಸ್ವಪ್ನ ಕಂಡರು.

‘ಇಲ್ಲಿನ ಲಕ್ಷ-ಲಕ್ಷ , ಕೋಟಿ-ಕೋಟಿ ಹಿಂದೂ ಜನ ದಿನನಿತ್ಯ ಮುಂಜಾನೆ, ಸಂಜೆ ಪ್ರಾರ್ಥನೆ ಮಾಡುವಂತಾಗಲಿ. ಐದು ನಿಮಿಷವೇ ಆದರೂ ಸಾಮೂಹಿಕ ಪ್ರಾರ್ಥನೆ ಮಾಡಲಿ. ಅದರಿಂದ ಹಿಂದೂಜನಾಂಗದಲ್ಲಿ ಮೈತಾಳುವ ಶಕ್ತಿಗೆ ಎದುರಾಗುವ ಬಲ ಈ ಜಗತ್ತಿನಲ್ಲಿಲ್ಲ!’

ಈ ಎಲ್ಲ ದಿವ್ಯ ಹರಕೆ, ಹಾರೈಕೆ, ಕನಸುಗಳ ಗರ್ಭದಿಂದ ಓರ್ವ ‘ಶಿಶು’ವಿನ ಜನನವಾಯಿತು. ರಾಷ್ಟ್ರ ತೇಜವೇ ಮೂರ್ತಿವೆತ್ತಂತೆ ಆ ‘ಶಿಶು’ ಬೆಳೆಯಿತು. ಬಾಲ್ಯದಲ್ಲೇ ರಾಷ್ಟ್ರೀಯ ಸ್ವಾತಂತ್ರ್ಯದ ಯಜ್ಞ ಕುಂಡಕ್ಕೆ ಆ ‘ಶಿಶು’ ಮುಗುಳ್ನಗೆಯಿಂದ ಧುಮುಕಿತು. ಯೌವ್ವನದಲ್ಲಿ ಅದು ಕ್ರಾಂತಿಯ ಜ್ವಾಲಾಮುಖಿಯಾಯಿತು. ಕ್ರಮೇಣ ರಾಷ್ಟ್ರ ಚಿಂತನೆಯಲ್ಲಿ ತಲ್ಲೀನವಾದ ಕಠೋರ ತಪಸ್ವಿಯಾಯಿತು. ಆ ‘ಶಿಶು’. ರಾಷ್ಟ್ರಜೀವನದೊಂದಿಗೆ ಪರಿಪೂರ್ಣ ತಾದಾತ್ಮತೆ ಅದರ ಸಹಜ ಸ್ವಭಾವವಾಯಿತು. ‘ಈ ನಾಡಿನ ಕೋಟಿ ಕೋಟಿ ಸಜೀವ ದೇವರುಗಳನ್ನು ಪೂಜಿಸುವ,’ ‘ಈ ಭೂಮಿಯ ಕಣಕಣದಲ್ಲೂ ಜಗಜ್ಜನನಿಯ ವ್ಯಕ್ತರೂಪ ಕಾಣುವ,’ ‘ನಾನೇ ಭಾರತ’ ಎನ್ನುವಂತಹ ರಾಷ್ಟ್ರರೂಪೀ ವ್ಯಕ್ತಿತ್ವ ಆ ‘ಶಿಶು’ ವಿನದಾಯಿತು. ಈ ಯುಗದ ‘ರಾಷ್ಟ್ರ ಧರ್ಮ’ವನ್ನು ನಮ್ಮ ಜನಜೀವನದಲ್ಲಿ ತರುವಂಥ ರಾಷ್ಟ್ರ ಪುರುಷನೇ ಅದಾಯಿತು. ತಮ್ಮ ನೂತನ ರಾಷ್ಟ್ರಧರ್ಮದ ಸಂದೇಶವನನು ಜನಸಾಮಾನ್ಯರವರೆಗೆ ಒಯ್ದು ಮುಟ್ಟಸಲು ತಮ್ಮ ತಪಸ್ಸು ತೇಜಸ್ಸುಗಳಿಗೆ ಮತ್ತೊಂದು ಶರೀರ ತೊಡಿಸಿ ಕಳುಹಿಸಿಕೊಟ್ಟರೇನೋ ರಾಮಕೃಷ್ಣ ವಿವೇಕಾನಂದರು, ರಾಮತೀರ್ಥ ಅರವಿಂದರು ಎನ್ನುವಂತೆ.

ಈ ರೀತಿ ಮೈತಾಳಿ ಬಂದ ರಾಷ್ಟ್ರಪುರುಷನು ನೇರವಾಗಿ ತನ್ನ ಕಾರ್ಯರಂಗಕ್ಕಿಳಿದ. ರಾಷ್ಟ್ರದ ಸಾಂಸ್ಕೃತಿಕ ಆಧ್ಯಾತ್ಮಿಕ ವ್ಯಾಖ್ಯೆಗಳನ್ನು ಕೊಡುವ ಕೆಲಸಕ್ಕೆ ಆತ ಕೈ ಹಾಕಲಿಲ್ಲ. ‘ರಾಷ್ಟ್ರ ಧರ್ಮ’ದ ಉಪದೇಶಕ್ಕೆ, ಪ್ರಚಾರಕ್ಕೆ ಆತ ತೊಡಗಲಿಲ್ಲ. ಆ ಕೆಲಸವಾಗಲೇ ಮುಗಿದಿತ್ತು. ಆ ಚಿತ್ರವನ್ನು ಜನಜೀವನದಲ್ಲಿ ಸಾಕಾರಗೊಳಿಸುವ ಅತಿಮಾನವೀ ಸಾಹಸದ ಕಾರ್ಯ ಆತನಿಗಾಗಿ ಕಾದಿತ್ತು.

ಆತನ ರಾಷ್ಟ್ರೈಕ್ಯಭಾವ ಸಿದ್ಧಿ, ಪ್ರಚಂಡ ಮೇಧಾಶಕ್ತಿ ಹಾಗೂ ಪರಿಪಕ್ವ ಅನುಭವಗಳ ಅಮೃತಫಲವಾಗಿ ‘ರಾಷ್ಟ್ರಧರ್ಮ’ದ ಅತ್ಯಂತ ಸರಳ ಮಾರ್ಗವೊಂದನ್ನು ಆತ ಸೃಷ್ಠಿಸಿದ. ಸಮಾಜದ ಸರ್ವಸಾಮಾನ್ಯ ವ್ಯಕ್ತಿ ಸಹ ವಿಶ್ವಾಸದಿಂದ ನಡೆಯಬಲ್ಲಂತಹ ವ್ಯಾವಹಾರಿಕ ಮಾರ್ಗ ಅದಾಗಿತ್ತು. ನಡೆ ನಡೆಯುತ್ತಾ ಅತಿ ಅಲ್ಪನಲ್ಲೂ ಅವನ ಅಂತಸ್ಸತ್ವ ಎಚ್ಚರಗೊಳಿಸುವ ಹಾದಿ ಅದಾಗಿತ್ತು. ನಿತ್ಯದ ಇಪ್ಪತ್ನಾಲು ತಾಸಿನಲ್ಲಿ ಒಂದು ತಾಸು ರಾಷ್ಟ್ರಧರ್ಮದ ಉಪಾಸನೆಗಾಗಿ ಮೀಸಲಾಗಿರಿಸುವ ಸಂಸ್ಕಾರ ಪೂರ್ಣ ಪದ್ಧತಿ ಅದಾಗಿತ್ತು. ಎಳೆ ಶಿಶುಗಳಿಂದ ಮುದುಕರವರೆಗೆ ಎಲ್ಲರೂ ತಮ್ಮ ತಮ್ಮ ಶಕ್ತಿಗೆ, ರುಚಿಗೆ ತಕ್ಕಂತೆ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾದಂತಹ ಸರ್ವ ಸಂಗ್ರಾಹಕ ಸಾಧನೆ ಅದಾಗಿತ್ತು. ಅಂದರೆ, ಪ್ರತಿಯೊಬ್ಬ ವ್ಯಕ್ತಿಯ ಶರೀರ ಮನಸ್ಸು ಬುದ್ಧಿಗಳನ್ನು ರಾಷ್ಟ್ರಧರ್ಮದ ಆಚರಣೆಗೆ ಸಿದ್ಧಗೊಳಿಸುವ ಸಾಧನೆ ಅದಾಗಿತ್ತು. ಅಲ್ಲದೇ, ಸಮಷ್ಟಿ ಸಾಧನೆಯೂ ಅದಾಗಿತ್ತು. ಸಮಾಜದ ಎಲ್ಲ ಮಕ್ಕಳೂ ಏಕ ಮಾತೃಭಕ್ತಿಯ ಭಾವದಿಂದ ಕೂಡುವ, ಪರಸ್ಪರ ಸ್ನೇಹಭಾವದಿಂದ ಕಲೆಯುವ, ಒಂದು ಅನುಶಾಸನದಲ್ಲಿ ಬಂದು ಜತೆಗೂಡಿ ನಡೆಯುವ ಸಾಧನೆಯೂ ಅದಾಗಿತ್ತು. ತಾನೇ ಒಂದು ಪ್ರತ್ಯೇಕ ಗುಂಪಾಗಿ ಉಳಿಯದಂತೆ, ಸಕಲ ಪಂಥ ಪಂಗಡಗಳನ್ನೂ ಸಮನ್ವಯಗೊಳಿಸುವಂತಹ ಸಮಗ್ರ ರಾಷ್ಟ್ರಜೀವನದ ಪ್ರತೀಕ ಭಗವಧ್ವಜವನ್ನು ಗುರುವಾಗಿಟ್ಟು ಸಾಧನೆ ಆರಂಭವಾಯಿತು.

ಓರ್ವ ವ್ಯಕ್ತಿ ಮಾತ್ರನ ಸ್ಫೂರ್ತಿ ಆದರ್ಶಗಳಷ್ಟಕ್ಕೇ ಮುಗಿಯದಂತೆ ಅಂದರೆ ವ್ಯಕ್ತಿ ಪೂಜಕವಾಗದಂತೆ ಸಾಧನೆ ಮುಂದುವರೆಯಿತು. ಐವ್ವತ್ತು ವರುಷಗಳ ಅಖಂಡ ಜೀವನಯಜ್ಞದ ನಂತರ ಆ ರಾಷ್ಟ್ರಪುರುಷನ ಪರಮ ಪೂಜನೀಯ ಡಾ॥ಹೆಡಗೆವಾರರ ಶರೀರವು ಅದೇ ಕಾರ್ಯದ ಯಜ್ಞ ಕುಂಡದಲ್ಲೇ ಪೂರ್ಣಾಹುತಿಯಾಯಿತು. ಆದರೆ, ಅನಂತರವೂ ಆತನು ನಡೆದುಹೋದ ಹಾದಿಯಲ್ಲಿ ಹೆಚ್ಚು ಹೆಚ್ಚು ಜನ ನಡೆಯುತ್ತಲೇ ಹೊರಟರು. ಕಾರ್ಯವು ಮತ್ತಷ್ಟು ವೇಗದಿಂದ ಮತ್ತಷ್ಟು ವಿಶಾಲವಾಗಿ ಮುಂದುವರಿಯಿತು. ಇಂದಿಗೂ ಅದೇ ರೀತಿ ಮುನ್ನಡೆದಿದೆ.

ನಾಗಪುರದಲ್ಲಿ 1925ರ ’ವಿಜಯದಶಮಿ’ಯಂದು ಮೊಳಕೆಯೊಡೆದ ರಾಷ್ಟ್ರಧರ್ಮದ ಆ ಸಾಧನಾನಸಿಯು ಇಂದು ದೇಶದಾದ್ಯಂತ ಹಬ್ಬಿ ಸಹಸ್ರಾವಧಿ ಶಾಖೋಪಶಾಖೆಗಳಾಗಿ ಬೆಳೆದು ನಿಂತಿದೆ. ಆ ರಾಷ್ಟ್ರ ಪುರುಷನಿಂದ ದೀಕ್ಷೆ ಪಡೆದ ಗಂಡುಗಲಿಗಳು ಇಂದು ದೇಶದ ಮೂಲೆ ಮೂಲೆಯನ್ನು ಆವರಿಸಿ ನಿಂತಿದ್ದಾರೆ. ರಾಷ್ಟ್ರದ ತಾದಾತ್ಮತೆಯ ದಿವ್ಯ ಉರಿ ಹೊತ್ತ ಅಸಂಖ್ಯ ಹೃದಯಗಳು ಧಗಧಗಿಸಿ ಮೇಲೇಳುತ್ತಿವೆ. ‘ರಾಷ್ಟ್ರ ದೇವೋಭವ’ದ ಮಂತ್ರದಿಂದ ಫುಲಕಿತಗೊಂಡ ಅನಂತ ಅಂತಃಕರಣಗಳು ಮೇಲೇಳುತ್ತಿವೆ. ‘ನಮಸ್ತೇ ಸದಾ ವತ್ಸಲೇ ಮಾತೃಭೂಮೇ’ ಎನ್ನುವ ಪ್ರಾರ್ಥನೆ ಲಕ್ಷ ಲಕ್ಷ ಕಂಠಗಳಿಂದ ಏಕಕಾಲದಲ್ಲಿ ಹೊರ ಹೊಮ್ಮುತ್ತಿದೆ. ವೀರರ ಸಂಚಲನದ ಕಾಲು ಸಪ್ಪಳದೊಂದಿಗೆ ಅಸಂಖ್ಯ ಹೃದಯಗಳೂ ಏಕಕಾಲದಲ್ಲಿ ಮೀಡಿಯತೊಡಗಿವೆ. ‘ಕಬ್ಬಡ್ಡಿ’ ‘ದಂಡ’ಗಳ ಮೋಡಿಯಿಂದ ‘ಕಬ್ಬಿಣದ ಮೈಕಟ್ಟನ, ಉಕ್ಕಿನ ನರಗಳ, ಸಿಡಿಲಿನ ಮನೋಬಲ’ದ ಲಕ್ಷ ಲಕ್ಷ ವೀರರು ತಯಾರಾಗುತ್ತಿದ್ದಾರೆ.

ನಾಡಿನ ಮೂಲೆ ಮೂಲೆಯಿಂದಲೂ ತಮ್ಮ ಮನೆ ಮಠ ತೊರೆದ ತರುಣ ಸನ್ಯಾಸಿಗಳು ಹೊರ ಬೀಳುತ್ತಿದ್ದಾರೆ. ತಾಯಿ ಭಾರತೀಯ ಪುಣ್ಯ ಪ್ರಸವವಿಂದು ವಿವೇಕಾನಂದರ ಇನ್ನು ಅದೆನಿತು ವಿವೇಕಾನಂದರು ಬರಲಿಹರೋ!’ ಎಂಬ ಭವಿಷ್ಯವನ್ನು ನಿಜಗೊಳಿಸುತ್ತಾ ನಡೆದಿದೆ. ಆ ಎಲ್ಲ ರಾಷ್ಟ್ರಪುರುಷರ ಕನಸನ್ನು ನನಸಾಗಿಸುತ್ತಾ ನಡೆದಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರ ಧರ್ಮ ಪ್ರತಿಷ್ಠಾಪನೆಯ ಕಾರ್ಯ.

– ಶ್ರೀ ಹೊ.ವೆ. ಶೇಷಾದ್ರಿ

   

1 Response to ರಾಷ್ಟ್ರಧರ್ಮ ಪ್ರತಿಷ್ಠಾಪನೆಗಾಗಿ

  1. Pradeep

    Thank you, Sir..

Leave a Reply