ರಾಷ್ಟ್ರೀಯ ಸ್ವಾಭಿಮಾನ

ಯಾದವ್ ರಾವ್ ಜೋಷಿ - 0 Comment
Issue Date : 13.10.2014

ಒಂದು ರಾಷ್ಟ್ರದ ಸ್ವಾಭಿಮಾನ, ಸಮ್ಮಾನಗಳಿಗೆ ಅದರದೇ ಅಗ್ರನಾಯಕರಿಂದ ಆಗುವ ಅವಮಾನ ಕಲ್ಪನಾತೀತ, ಸಹನಾತೀತ. ತಾಯಿಯೊಬ್ಬಳು ತನ್ನವರೇ ಆದ ಅಪಾತ್ರ ಪುತ್ರರಿಂದ ದೂಷಣೆ, ದುರ್ಲಕ್ಷ್ಯಗಳಿಗೆ ಒಳಗಾದ ಹಾಗೆ ಇದು ಸಹ.
ದುರ್ದೈವದಿಂದ ಇಂದು ನಮ್ಮ ದೇಶದ ಸ್ಥಿತಿಯೂ ಇದೇ ಆಗಿದೆ.
ಅಸಂಖ್ಯ ನಿದರ್ಶನಗಳ ಪೈಕಿ ಒಂದನ್ನು ಮಾತ್ರ ನಾನು ಹೇಳುತ್ತೇನೆ. ತಿಂಗಳೆರಡರ ಹಿಂದೆ ಒಂದು ಪತ್ರಿಕಾ ಸುದ್ದಿ ಇಡೀ ರಾಷ್ಟ್ರಕ್ಕೆ ಧಕ್ಕೆ ತಾಗಿಸಿತು. ಆಗ ಲಢಕ್ ಗಡಿಯ ಗಾಲ್ವನ್ ಕಣಿವೆ ಪ್ರಕರಣದ ಉರಿ ಇನ್ನೂ ಆರಿರಲಿಲ್ಲ; ಬಹು ಪಾಲು ಹೆಚ್ಚಿನ ಶತ್ರು ಸೈನಿಕರ ಮುತ್ತಿಗೆಗೊಳಗಾಗಿ ನಮ್ಮ ಯೋಧರ ಪ್ರಾಣಕ್ಕೆ ಸಂಚಕಾರ ಒದಗಿದ್ದ ಸಂದರ್ಭ ಅದು. ನಮ್ಮ ರಕ್ಷಣಾ ಸಚಿವರಾಗ ಜಿನೀವಾದಲ್ಲಿದ್ದರು. ಒಂದು ಬೆಳಿಗ್ಗೆ ಸುದ್ದಿ ಬಂದಿತು, ಅವರು ಚೀನಾದ ವಿದೇಶಾಂಗ ಸಚಿವ ಮಾರ್ಷಲ್ ಚೆನ್-ಇ ಜೊತೆಗೆ ಉಪಾಹಾರ ಮಾಡಿದರು ಎಂದು. ಮರುದಿನವೇ ಪತ್ರಿಕೆಗಳಲ್ಲಿ ಭಾವಚಿತ್ರ – ನಮ್ಮ ರಕ್ಷಣಾ ಮಂತ್ರಿಯು ಮಾರ್ಷಲ್ ಚೆನ್-ಇ ಆನಂದದಿಂದ ಪಾನೀಯದ ಬಟ್ಟಲಿಗೆ ಬಟ್ಟಲು ತಾಗಿಸುತ್ತಿದ್ದರು! ಅದೇ ಸಮಯಕ್ಕೆ ದಿಲ್ಲಿಯಲ್ಲೂ ಅಂಥದೇ ಮತ್ತೊಂದು ಜಘನ್ಯ ದೃಶ್ಯ; ನಮ್ಮ ಪ್ರಧಾನಿ ಸ್ವತಃ ನಿಂತು, ಹಿಂತೆರಳಲಿದ್ದ ಚೀನಾ ರಾಯಭಾರಿಗೆ ಬೀಳ್ಕೊಡುಗೆಯ ಔತಣದ ವ್ಯವಸ್ಥೆ ಮಾಡಿದ್ದರು. ಈ ಅಪಮಾನದಿಂದ ರಾಷ್ಟ್ರದ ಮೈ ಉರಿಯಿತು. ದೇಶಾದ್ಯಂತ ಖಂಡನೆ, ಪ್ರತಿಭಟನೆಗಳಾದುವು.
ನಂತರ ಈ ಎಲ್ಲವನ್ನೂ ಮೀರಿಸುವ ಸಂಗತಿಯೊಂದು ನಡೆಯಿತು. ನಮ್ಮ ಪ್ರಧಾನಿ ಪತ್ರಿಕಾ ವರದಿಗಾರನೊಬ್ಬನಿಗೆ ಕಲಕತ್ತಾದಲ್ಲಿ ಉತ್ತರಿಸುತ್ತಾ, ಇಡೀ ರಾಷ್ಟ್ರದ ಉಗ್ರ ಪ್ರತಿಭಟನೆ ಹಾಗೂ ಧಿಕ್ಕಾರಗಳನ್ನು ಸುಮ್ಮನೆ ‘ಹುಡುಗಾಟ’ ಎಂದು ತಾತ್ಸಾರವಾಗಿ ತಳ್ಳಿಹಾಕಿದರು!

ಉಪಹಾಸದ ಸಂಗತಿಯೇನು ಅದು?
ಇದಕ್ಕಿಂತಲೂ ವಿಧಿಯ ವ್ಯಂಗ್ಯ ಇನ್ನುಂಟೆ? ಜನತೆಯ ರಾಷ್ಟ್ರಾಭಿಮಾನದ ಶ್ರದ್ಧೆಗೆ ಇದಕ್ಕಿಂತ ತೀವ್ರ ಆಘಾತ ಉಂಟೆ? ಹೆಸರಿಗೆ ಮಾತ್ರವಿರುವ ಅಂತರರಾಷ್ಟ್ರೀಯ ಶಿಷ್ಟಾಚಾರಗಳಿಗೆ ನಲವತ್ತು ಕೋಟಿಗೂ ಹೆಚ್ಚಿನ ಜನಾಂಗದ ಆತ್ಮಗೌರವದ ಜ್ವಲಂತ ಭಾವನೆಗಳಿಗಿಂತ ಹೆಚ್ಚಿನ ಬೆಲೆಯೇ? ಅಧಿಕಾರದ ಹಲವು ಹಂತಗಳಲ್ಲಿ ಕೆಲವೊಂದು ಔಪಚಾರಿಕ ಕ್ರಿಯೆಗಳು ಅನಿವಾರ್ಯ ಎಂಬುದೇನೋ ಸರಿ. ಆದರೆ ಅದಕ್ಕಾಗಿ ರಾಷ್ಟ್ರದ ಹೃದಯ ಸಂಪೂರ್ಣ ಶೂನ್ಯವಾಗಬೇಕೇ? ಜನತೆಯ ಶ್ರದ್ಧೆಗಳ ಮೇಲೆ ಕಾಲಿಟ್ಟು ಮೆಟ್ಟಲು ಪ್ರಧಾನಿಗಳಿಗೇನು ಅಧಿಕಾರ? ಇದಕ್ಕೆ ಬದಲಾಗಿ, ನಮ್ಮ ರಾಷ್ಟ್ರದಲ್ಲಿನ ಜಾಗರೂಕತೆ ಕಂಡು ಅವರಿಗೆ ಆನಂದವೇ ಆಗಬೇಕಿತ್ತಲ್ಲವೇ? ರಾಷ್ಟ್ರದ ಭಾವನೆ ಅಂದರೆ ಅಷ್ಟೊಂದು ಅಗ್ಗವಾಯಿತೇ? ಗಡಿಗಳಲ್ಲಿ ವೈರಿಯ ಆಕ್ರಮಣದ ಬಗ್ಗೆ ರಾಷ್ಟ್ರದ ನರನಾಡಿಗಳಲ್ಲಿ ಅಪಮಾನದ ಭಾವನೆ ಉರಿದೆದ್ದರೆ; ತಲೆ ತಗ್ಗಿಸುವಂಥದೇನಿದೆ ಅದರಲ್ಲಿ? ಅಂತೆಯೇ, ನಮ್ಮ ಯೋಧರ ರಕ್ತದಿಂದ ಯಾರ ಕೈ ಕೆಂಪಾಗಿದೆಯೋ, ಯಾರ ಬೂಟು ಕಾಲು ದುರಹಂಕಾರದಿಂದ ನಮ್ಮ ತಾಯ್ನೆಲದ ಮೈ ತುಳಿಯುತ್ತಿದೆಯೋ ಅಂಥವರ ಜೊತೆಗೆ ನಮ್ಮ ರಕ್ಷಣಾ ಸಚಿವರು ‘ಬಟ್ಟಲು ತಾಗಿಸಿದ ’ ಬಗ್ಗೆ, ನಮ್ಮ ಪ್ರಧಾನರು ಮೋಜಿನ ಮಹೋತ್ಸವ ನಡೆಸಿದ ಬಗ್ಗೆ ಅಸಮಾಧಾನ ಕೆರಳಿದರೆ ಉಪಹಾಸದ ಸಂಗತಿಯೇನು ಅದು?

ರಾಜಸ್ಥಾನದ ಮರಳುಗಾಡಿನಲ್ಲಿ
ಇಂಥ ಪ್ರಶ್ನೆಗಳು ಮುತ್ತಿಕೊಂಡಾಗ, ಉತ್ತರ ಹುಡುಕಲು ಕೆಲವೇ ಶತಮಾನಗಳ ಹಿಂದಕ್ಕೆ ನನ್ನ ಮನಸ್ಸು ಓಡಿತು-ರಾಜಸ್ಥಾನದ ಮರಳುಗಾಡಿಗೆ. ಅಧಿಕಾರ, ಐಶ್ವರ್ಯ ಇದೊಂದೂ ಇರದಿದ್ದ ವ್ಯಕ್ತಿಯೊಬ್ಬನಿದ್ದ; ಆದರೂ, ಆಗಿನ ಅತ್ಯಂತ ಬಲಾಢ್ಯ ಸಮ್ರಾಟ ಅಕ್ಬರನನ್ನು ಏಕಾಕಿಯಾಗಿ ಎದುರಿಸುತ್ತಿದ್ದ ಆತ. ಅದೊಮ್ಮೆ, ಅಕ್ಬರನಿಗೆ ಶರಣಾಗುವಂತೆ ಒಪ್ಪಿಸಲು ಸಾರ್ವಭೌಮನ ಬಲಗೈಯಂತಿದ್ದ ರಾಜಾ ಮಾನಸಿಂಹನು ಅವನಿದ್ದಲ್ಲಿಗೆ ಬಂದ. ಆದರೆ, ಇತಿಹಾಸ ಬರೆದಿಟ್ಟಿದೆ – ಬೆಟ್ಟ ಕಾಡುಗಳಲ್ಲಿ ಶತ್ರುವಿನ ಕಣ್ಣು ತಪ್ಪಿಸಿ ಅಲೆದಾಡುತ್ತ ತಲೆಯೂರಲೂ ತಾವಿಲ್ಲದೆ ತಿರುಗುತ್ತಿದ್ದ ಆತ ಮಾನಸಿಂಹನೊಡನೆ ಭೋಜನ ಅಂತಿರಲಿ, ಆ ದೇಶದ್ರೋಹಿಯನ್ನು ನೋಡಲೂ ಸಹ ನಿರಾಕರಿಸಿದ; ಅಂತೂ ತಾನು ಹಿಂದುವಿದ್ದ ಕಾರಣ ಅತಿಥಿಯ ಊಟಕ್ಕೆ ವ್ಯವಸ್ಥೆ ಮಾಡಿದ. ಆದರೆ ಮಾನಸಿಂಹನು ಹೋದನಂತರ ಅವನು ಕುಳಿತಿದ್ದ ಸ್ಥಳದ ಮಣ್ಣು ಅಗೆಸಿಹಾಕಿ ಅಗ್ನಿ ಹಾಗೂ ಗೋಮಯದಿಂದ ಅದನ್ನು ಶುದ್ಧಿಗೊಳಿಸಿದ. ಆತನ ಹೆಸರು ರಾಣಾ ಪ್ರತಾಪ್!

ಎಲ್ಲ ಗೌರವ ಸಲ್ಲಲಿ ಅದಕ್ಕೆ !
ಅಂದಮೇಲೆ, ನಾವೂ ನಮ್ಮ ಪ್ರಧಾನಿಯವರ ಶಬ್ದಗಳಲ್ಲೆ ‘ಎಂಥ ಹುಡುಗಾಟಿಕೆ ರಾಣಾ ಪ್ರತಾಪನದು!’ ಅನ್ನೋಣವೇ? ಆದರೆ ಇತಿಹಾಸದ ತೀರ್ಪೇ ಬೇರೆ. ಇಂಥ ‘ಹುಡುಗುತನ’ವೇ ರಾಷ್ಟ್ರದ ಬಲಿವೇದಿಯ ಮೇಲೆ ಸರ‌್ವಸ್ವವನ್ನೂ ಹೋಮಗೈದು ಹೋರಾಡಿದ ರಾಷ್ಟ್ರಭಕ್ತರ, ವೀರರ ಪರಂಪರೆಗೆ ಜನ್ಮ ಕೊಟ್ಟಿತು. ಹೀಗೆಂದು ಇತಿಹಾಸ ಅಂಕಿತಗೊಳಿಸಿದೆ. ಇಂದಿಗೂ ಅಷ್ಟೇ. ಕೇವಲ ಪ್ರತಾಪನ ಹೆಸರು ಹೇಳಿದರೆ ಸಾಕು, ಇಡೀ ರಾಷ್ಟ್ರದ ಕಣ್ಣಿಗೆ ಕಟ್ಟುವ ಚಿತ್ರ ಯಾವುದು? ಸ್ವಾತಂತ್ರ್ಯ ಸ್ವಾಭಿಮಾನಗಳ ಭಾವನೆಯ ಹಾಗೂ ರಾಜಿ, ಶರಣಾಗತಿಗಳಿಗೆ ಅಪರಿಚಿತವಾದ ದುರ್ದಮ್ಯ ಸಂಕಲ್ಪದ ಸಾಕಾರ ರೂಪ. ‘ಹುಡುಗುತನ’ದ ಚರಿತ್ರೆಯೇ ಹೀಗಿದ್ದ ಮೇಲೆ ಎಲ್ಲ ಗೌರವ, ವೈಭವ ಸಲ್ಲಲಿ ಅದಕ್ಕೆ! ಭಗವಂತನು ಚಿರಂತನವಾಗಿ ನಮ್ಮ ಜನಕ್ಕೆ ಇಂಥ ‘ಹುಡುಗುತನ’ವನ್ನೇ ಕರುಣಿಸಲಿ!

ಸವಾಲಿಗೊಂದು ಉತ್ತರ
ಇತ್ತೀಚೆಗೆ ಸಹ, ಒಂದು ಶತಮಾನದ ಆಂಗ್ಲರ ದಬ್ಬಾಳಿಕೆಯು ನಮ್ಮೆಲ್ಲರನ್ನೂ ಕೇವಲ ರಾಜಕೀಯ ಕ್ಷೇತ್ರದಲ್ಲಷ್ಟೇ ಅಲ್ಲ, ನಮ್ಮ ರಾಷ್ಟ್ರವು ನಿರ್ಮಿಸಿದ್ದ ಸಹಸ್ರಾರು ವರ್ಷಗಳ ಭವ್ಯ ಪರಂಪರೆಯ ಸರ‌್ವ ರಂಗಗಳಲ್ಲೂ ನಿರ್ವೀರ್ಯಗೊಳಿಸಿದ್ದಾಗ, ರಾಷ್ಟ್ರೀಯ ಸ್ವಾಭಿಮಾನದ ಮೃತ್ಯುಂಜಯ ಭಾವನೆಯಿಂದ ರಾಷ್ಟ್ರದ ಆತ್ಮವನ್ನು ಪ್ರೇರಿಸಲು ಈ ಭೂಮಿಯಿಂದ ಮತ್ತೊಬ್ಬ ಪುರುಷನು ಅವತರಿಸಿದ. ಹಿಂದೊಮ್ಮೆ ಅತಿ ಶ್ರೇಷ್ಟ ಸಂದೇಶ ಹಾಗೂ ಮಾರ್ಗದರ್ಶನದಿಂದ ಜಗತ್ತಿನಾದ್ಯಂತ ಮಾನವ ಜನಾಂಗಕ್ಕೆ ದಾರಿ ತೋರಿ ಪ್ರೇರಣೆ ನೀಡಿದ್ದ ನಮ್ಮ ಜನ ಭಿಕಾರಿಗಳಂತೆ ಜೋಳಿಗೆ ಹಿಡಿದು ಸಂಸ್ಕೃತಿ, ಧರ್ಮ, ತತ್ವಶಾಸ್ತ್ರ ಇತ್ಯಾದಿ ಪ್ರತಿಯೊಂದಕ್ಕೂ ಬ್ರಿಟಿಷರ ಕಾಲು ಹಿಡಿದು ಬೇಡುವುದರಲ್ಲೇ ಅಭಿಮಾನ ತಾಳಲಾರಂಭಿಸಿದ್ದ ಸಮಯ ಅದು. ಹಿಂದೆಂದೂ ನಮ್ಮ ರಾಷ್ಟ್ರೀಯ ಸತ್ವಕ್ಕೆ ಅಂಥ ಪೂರ್ಣ ಗ್ರಹಣ ಕವಿದಿರಲಿಲ್ಲ. ಆದರೆ ಆಗ ಮೇಲೆದ್ದಾತ – ಸ್ವಾಮಿ ವಿವೇಕಾನಂದರು-ಈ ಸವಾಲಿಗೆ ತಕ್ಕಂತೆಯೇ ಮೈತಾಳಿದ್ದರು.
ನಮ್ಮ ಜನರ ವ್ಯಾಧಿ ಹಾಗೂ ನಮ್ಮ ದಾಸ್ಯದ ಮೂಲಕಾರಣ ಸರಿಯಾಗಿ ಕಂಡುಕೊಂಡರು ಅವರು; ತಮ್ಮ ಅತಿಮಾನುಷ ವ್ಯಕ್ತಿತ್ವದ ಸಂಪೂರ್ಣ ಶಕ್ತಿ ಸುರಿದು ಅದನ್ನು ಗುಣಪಡಿಸುವ ಕಾರ್ಯಕ್ಕಿಳಿದರು. ಸ್ವತ್ವಶೂನ್ಯ ಗುಲಾಮಿ ಜನತೆಯನ್ನು ವೀರರಾಗಿಸಲು ಅವರು ಮಾಡಿದ ಯೋಜನೆ ಯಾವುದು? ಉದ್ರಿಕ್ತ ಸಾಗರದ ನಡುವೆ ಕನ್ಯಾಕುಮಾರಿಯ ಬಳಿಯ ಬಂಡೆಯ ಮೇಲೆ ಕುಳಿತು ಅವರು ತಮ್ಮ ಜೀವನದ ಯೋಜನೆ ಸಿದ್ಧಗೊಳಿಸಿಕೊಂಡು, ನಂತರ ಅಮೆರಿಕಾಗೆ ಹೊರಟದ್ದು ಸರ್ವವಿದಿತವಾಗಿದೆ. ಅಂಥ ವಿಚಿತ್ರ ಹಾಗೂ ಅಸಾಮಾನ್ಯ ಕ್ರಮವನ್ನೇಕೆ ಕೈಗೊಂಡರು ಅವರು?

ಸ್ವಾಭಿಮಾನದ ವಾದನ!
ತೀರ ಸರಳವಿತ್ತು, ಈ ಎಲ್ಲ ಯೋಜನೆ; ತಾನಾಗಿ ಪೌರುಷವು ಪ್ರಕಟಗೊಳ್ಳುವಂತೆ, ರಾಷ್ಟ್ರೀಯ ನಿಜಸ್ವರೂಪದ ತೀವ್ರ ಅರಿವು ಮೂಡುವಂತೆ ಮಾಡಲು ಜನತೆಯಲ್ಲಿ ಸುಪ್ತವಾಗಿ ಅಡಗಿದ್ದ ರಾಷ್ಟ್ರೀಯ ಸ್ವಾಭಿಮಾನದ ತಂತಿ ಮೀಟುವುದಾಗಿತ್ತು ಅದು. ಅದಕ್ಕಾಗಿ, ಅಮೆರಿಕಾಕ್ಕಿಂತ ಉತ್ತಮ ವೇದಿಕೆ, ಚಿಕಾಗೋದಲ್ಲಿದ್ದ ಸರ್ವಧರ್ಮ ಸಮ್ಮೇಳನಕ್ಕಿಂತ ಮಹತ್ವದ ಸಂದರ್ಭ ಇನ್ನೊಂದು ಇರಲಿಲ್ಲ. ಭೌತಿಕವಾಗಿ ಜಗತ್ತಿನಲ್ಲೆಲ್ಲ ಅತ್ಯಂತ ಸಂಪದ್ಭರಿತ ಹಾಗೂ ಪ್ರಬಲವಾದ ‘ದೇಶಾಭಿಮಾನದಿಂದ, ವಂಶಾಭಿಮಾನದಿಂದ ತುಂಬಿದ, ತಾನು ಜನ್ಮತಳೆದ ರಾಜಭೂಮಿಯ ಘನತೆಯನ್ನು ಮರೆಯದ’ ಆ ವ್ಯಕ್ತಿಯನ್ನು ಮತ್ತೆ ಮತ್ತೆ ಚಿತ್ರಿಸಿಕೊಳ್ಳಿ ಮನಸ್ಸಿನಲ್ಲಿ.
ಆಗ ಪಶ್ಚಿಮಾರ್ಧಗೋಳದಲ್ಲಿ ವಿಜಯಯಾತ್ರೆ ಪೂರೈಸಿ ಹುಟ್ಟುನಾಡಿಗೆ ಅವರು ಹಿಂದಿರುಗಿದಾಗ ಕೊಲಂಬೋದಿಂದ ಲಾಹೋರಿನವರೆಗೆ ನಮ್ಮ ಇಡೀ ರಾಷ್ಟ್ರ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಒಮ್ಮುಖದಿಂದ ವೀರೋಚಿತ ಸ್ವಾಗತಕ್ಕೆ ಎದ್ದು ನಿಂತುದೇಕೆಂಬ ಪ್ರಶ್ನೆಗೆ ಉತ್ತರ ಸಿಕ್ಕೀತು.

ಅಂತಿಮ ಸ್ವಪ್ನ ಸಾಕಾರಗೊಳಿಸಲು ಸಂಘ
ಪುನಃಪುನಃ ನಮ್ಮ ರಾಷ್ಟ್ರವು ಹೊಸ ಹೊಸ ಕೀರ್ತಿ ಶಿಖರಗಳಿಗೇರುವಂತೆ ಮಾಡಿದ ನಮ್ಮ ರಾಷ್ಟ್ರೀಯ ವೀರರ ಪರಂಪರೆ ಇದು. ನಮ್ಮ ರಾಷ್ಟ್ರ ಉಳಿದು ತನ್ನ ಪೂರ್ಣಾಕಾರ ಪುನಃ ತಾಳಬೇಕಾದರೆ, ಇಂಥ ವೀರರು ಬೆಳಗಿದ ಜ್ವಲಂತ ರಾಷ್ಟ್ರಾಭಿಮಾನದಿಂದ ಪ್ರಜ್ವಲಿಸುವ ಪರಂಪರಾನುಗತ ಸೊಡರನ್ನು ಏನೇ ಆಗಲಿ ಜಾಜ್ವಲ್ಯಗೊಳಿಸಲೇಬೇಕು. ಅದಕ್ಕಾಗಿ ಜನಸಾಮಾನ್ಯರಲ್ಲೂ ಜೀವನ ಸಮರ್ಪಣೆಯ ಭಾವನೆಯನ್ನು ಬೆಳೆಸಲು ಕಟಬದ್ಧರಾದ ನಿತ್ಯವರ್ಧಿಷ್ಣು ಪ್ರಸಾರಕರ ತಂಡ ಅಗತ್ಯ.
ಇಂದಿನ ಪರಿಸ್ಥಿತಿಯಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಶೂರ ಹುಟ್ಟಿದರೆ ಸಾಲದು. ಅಂಥ ಕಲಿ ಹೃದಯಗಳದೇ ಒಂದು ಜನಾಂಗ-ವಾಸ್ತವವಾಗಿ, ಇಡೀ ಜನತೆಯನ್ನು, ಪೀಳಿಗೆ ಪೀಳಿಗೆಗಳನ್ನು ಸಂಸ್ಕಾರಗೊಳಿಸುವ ಒಂದು ಪರಂಪರೆ-ಬೇಕು.
ಈ ಐತಿಹಾಸಿಕ ಕಾರ್ಯವನ್ನು ಪೂರೈಸಲೆಂದೇ ಪರಮ ಪೂಜನೀಯ ಡಾ. ಕೇಶವರಾವ್ ಹೆಡಗೇವರರ ಅಪೂರ್ವ ಹಾಗೂ ಪೂರ‌್ಣ ಪ್ರತಿಭೆಯಿಂದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಉದಿಸಿತು. ಅವರ ಜೀವನವಿಡೀ ರಾಷ್ಟ್ರೀಯ ಸ್ವಾಭಿಮಾನದ ಜ್ವಲಂತ ಸಂಕೇತ ಹಾಗೂ ರಾಷ್ಟ್ರದ ಬಲಿವೇದಿಗೊಂದು ಪರಿಶುದ್ಧ ನೈವೇದ್ಯವಾಗಿತ್ತು. ನಮ್ಮ ಜನತೆಯಲ್ಲಿ ರಾಷ್ಟ್ರೀಯ ಸ್ವಾಭಿಮಾನದ ಜ್ವಲಂತ ಭಾವನೆಯನ್ನು ಉಜ್ವಲವಾಗಿಟ್ಟು, ಪ್ರತಾಪ-ವಿವೇಕಾನಂದರ ಪರಾಕ್ರಮದ ಸಂಸ್ಕಾರ ನೀಡಲು ನಮ್ಮ ದೇಶದಲ್ಲಿ ಹಿಂದೆ ಆಗಿಹೋದ ಎಲ್ಲ ಪುರುಷ ಪುಂಗವರ ಪ್ರಯತ್ನಗಳ ಫಲವಾಗಿ ಸಂಘ ಬೆಳೆದಿದೆ.
ಮಹಾಸಮಾಧಿಯ ದಿನದಂದು ಅಂತಿಮ ಪ್ರಸ್ಥಾನಕ್ಕೆ ಸಿದ್ಧರಾದ ಸ್ವಾಮಿ ವಿವೇಕಾನಂದರ ಬಾಯಿಂದ –
‘ಇನ್ನೂ ಅದೆಷ್ಟು ವಿವೇಕಾನಂದರು ಬರಲಿಹರೋ!’ ಎಂಬ ಉದ್ಗಾರ ಹೊರಬಿತ್ತು. ಭವ್ಯ ರಾಷ್ಟ್ರೀಯ ಪ್ರಮಾಣದಲ್ಲಿ ಅವರ ಅಂತಿಮ ಸ್ವಪ್ನದ ಸಾಕಾರವೇ ಸಂಘ.
ನಮ್ಮ ರಾಷ್ಟ್ರೀಯ ಪ್ರತಿಭೆಯ ಪ್ರತೀಕರಾದ ಸ್ವಾಭಿಮಾನಿ ಗೈರಿಕಧಾರಿ ಸ್ವಾಮಿವಿವೇಕಾನಂದರ ಜನ್ಮಶತಾಬ್ದಿಯು ಮುಂದೆ ಬರಲಿದ್ದು, ಅವರು ಬಿಟ್ಟುಹೋದ ಹೆಮ್ಮೆಯ ಆದರ್ಶಕ್ಕನುಗುಣವಾಗಿ ಬಾಳುವಂತೆ ಹಾಗೂ ಅವರು ಅಂತಿಮ ಅನುಗ್ರಹವಾಗಿ ನೀಡಿದ ಪ್ರವಾದೀ ಸ್ವಪ್ನವನ್ನು ಸಾಕ್ಷಾತ್ಕರಿಸಲು ನಮ್ಮೆಲ್ಲರಲ್ಲೂ ಅವರ ದುರ್ದಮ್ಯ ಸಂಕಲ್ಪದ ಒಂದೊಂದು ಕಿಡಿ ಹೊತ್ತಲಿ.

1962

   

Leave a Reply