ಸಮಾಜದ ಸೇವೆ ಮಾಡುತ್ತಾ ಅತ್ಮೋನ್ನತಿ ಹೊಂದೋಣ

ಧಾರ್ಮಿಕ - 0 Comment
Issue Date : 06.10.2014

ಆತ್ಮೋನ್ನತಿ ಮಾತು ಬಂದಾಗ ತನ್ನ ಸ್ವಂತ ಪ್ರಯತ್ನದಿಂದಲೇ ಆತ್ಮೋನ್ನತಿಯನ್ನು ಗಳಿಸಿಕೊಳ್ಳಬೇಕೆನ್ನುವುದು ಸಾಮಾನ್ಯ ಅಭಿಪ್ರಾಯ. ಆತ್ಮೋನ್ನತಿಯ ಹೆಸರಲ್ಲಿ ಒಬ್ಬರೇ ಏಕಾಂಗಿಯಾಗಿ ಸಾಧನೆಮಾಡಬೇಕು ಎನ್ನು ವವರೂ ಇದ್ದಾರೆ. ಸಮಾಜದ ಸಂಪರ್ಕವಿಲ್ಲದೆ, ಅದರ ಆಶ್ರಯವಿಲ್ಲದೆ ಯಾವನೇ ಒಬ್ಬ ವ್ಯಕ್ತಿಯು ಬದುಕುವುದಾದರೂ ಹೇಗೆ? ಸಮಾಜವನ್ನು ಆಶ್ರಯಿಸಿಯೇ ಬದುಕಬೇಕಲ್ಲವೇ? ತನ್ನ ಎಲ್ಲಾ ಅಗತ್ಯಗಳಿಗೂ ಸಮಾಜವನ್ನೇ ಆಶ್ರಯಿಸಬೇಕು, ಅಲ್ಲವೇ? ಹೀಗಿದ್ದಾಗ ಸಮಾಜವನ್ನು ಬಿಟ್ಟು ಏಕಾಂಗಿಯಾಗಿ ತಾನು ಸಾಧನೆಮಾಡುತ್ತೇನೆಂದರೆ ಅದು ಒಪ್ಪುವ ವಿಚಾರವೇ? ಸಾಮಾಜಿಕ ಜೀವನವು ವ್ಯಕ್ತಿಯ ಇಹ-ಪರ ಎರಡರ ಏಳಿಗೆಗೂ ನೆರವಾಗುತ್ತದೆ.

ಈ ಬಗ್ಗೆ ಒಂದು ವೇದ ಮಂತ್ರವನ್ನು ಇಂದು ವಿಚಾರಮಾಡೋಣ.
ಹಂಸಾ ಇವ ಶ್ರೇಣಿಶೋ ಯಾತಾನಾಃ ಶುಕ್ರಾ ವಸಾನಾಃ ಸ್ವರವೋ ನ ಆಗುಃ
ಉನ್ನೀಯಮಾನಾಃ ಕವಿಭಿಃ ಪುರಸ್ತಾದ್ದೇವಾ ದೇವಾನಾಮಪಿ ಯಂತಿ ಪಾಥಃ ॥

(ಋಗ್ವೇದ, ಮಂಡಲ-3, ಸೂಕ್ತ-8, ಮಂತ್ರ-9)

ಅನ್ವಯ :

ದೇವಾಃ = ದಿವ್ಯಗುಣಭೂಷಿತರೂ,ಜ್ಞಾನಿಗಳೂ ಆದ ಸಜ್ಜನರು
ಹಂಸಾ ಇವ = ಹಂಸಗಳ ಹಾಗೆ
ಶ್ರೇಣಿಶಃ ಯತಾನಾಃ = ಗುಂಪನ್ನು ರಚಿಸಿಕೊಂಡು
ಯಾತಮಾನಾಃ = ಪ್ರಯತ್ನಶೀಲರಾಗಿ
ಶುಕ್ರಾ ವಸಾನಾಃ = ಶುಭ್ರ್ರವಾದ ಜೀವನವನ್ನು ನಡೆಸುತ್ತಾ
ಸ್ವರವಃ = ಪ್ರೇಮಪೂರ್ವಕವಾಗಿ ಮಾತನಾಡುತ್ತಾ
ನಃ = ನಮ್ಮ ಬಳಿಗೆ
ಆಗುಃ = ಬರುತ್ತಾರೆ
ಕವಿಭಿಃ = ತತ್ವದರ್ಶಿಗಳಿಂದ
ಪುರಸ್ತಾತ್ =ಮುಂದಕ್ಕೆ
ಉನ್ನೀಯಮಾನಾಃ = ನಡೆಯಿಸಲ್ಪಡುವವರಾಗಿ
ದೇವಾನಾಂ – ಪಂಡಿತರ
ಪಾಥಃ = ಮಾರ್ಗವನ್ನು

ಅಪಿಯಂತಿ = ಹೊಂದುತ್ತಾರೆ

ಭಾವಾರ್ಥ :

ಎಲ್ಲಾ ವ್ಯಕ್ತಿಗಳೂ ಶುಭ್ರವಾದ ನಡೆನುಡಿಗಳಿಂದ ಸಂಪನ್ನರಾಗಿ, ಹಂಸಗಳಂತೆ ಗುಂಪನ್ನು ರಚಿಸಿಕೊಂಡು ದಿವ್ಯಗುಣಗಳನ್ನು ಹೊಂದಿರುವ ಚಾರಿತ್ರವಂತ ಪಂಡಿತರ ಮಾರ್ಗದರ್ಶನದಲ್ಲಿ ಮುಂದೆ ಸಾಗಬೇಕು.ಅಂದರೆ ಆತ್ಮೋನ್ನತಿಯೆಡೆಗೆ ಸಾಗಬೇಕು.
ಈ ಮಂತ್ರದಲ್ಲಿ ಹಂಸದ ಉದಾಹರಣೆ ತೆಗೆದುಕೊಳ್ಳಲು ಎರಡು ಪ್ರಮುಖ ಕಾರಣವಿದೆ. ಮೊದಲನೆಯದು ಅದರ ಶುಭ್ರತೆ. ಮನುಷ್ಯನು ಎಷ್ಟು ಶುಚಿರ್ಭೂತನಾಗಿರಬೇಕು ಎಂದರೆ ಹಂಸದಂತೆ ಎಂದು ಹೇಳುತ್ತದೆ ಈ ಮಂತ್ರ. ಹಂಸದ ಆ ಬಿಳುಪು ಶುಚಿಯನ್ನು ಸೂಚಿಸುತ್ತದೆ. ಹಲವು ವೇದಮಂತ್ರಗಳಲ್ಲಿ ಶುಚಿಯ ಬಗ್ಗೆ ಕಾಣುತ್ತೇವೆ. ನಮ್ಮ ನಡೆ ನುಡಿ ಶುಚಿಯಾಗಿರಬೇಕು. ಮನಸ್ಸು ಪರಿಶುದ್ಧವಾಗಿರಬೇಕು. ಪವಿತ್ರವಾದ ಜೀವನ ನಡೆಸಬೇಕು. ಆಚಾರ-ವಿಚಾರ-ವ್ಯವಹಾರಗಳಲ್ಲಿ ಶುಚಿ ಇರಬೇಕು. ನಿರ್ಮಲವಾಗಿರಬೇಕು. ಎದುರಾಗುವ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಪವಿತ್ರವೂ, ಪರಿಶುದ್ಧವೂ ಆಗಿರಬೇಕೆನ್ನುತ್ತದೆ ವೇದ.
ಅಬ್ಭಾ! ಇಷ್ಟು ಕಷ್ಟವಾದರೆ ಈ ವೇದದ ಸಹವಾಸವೇ ಬೇಡ ಎನ್ನುವ ಜನರೂ ಇದ್ದಾರೆ. ನಾವು ಸಾಧನೆ ಮಾಡದೆ, ಜೀವನದಲ್ಲಿ ಸನ್ನಡತೆಯನ್ನು ಆಚರಿಸದೆ ನಮಗೆ ನೆಮ್ಮದಿ ಬೇಕು, ಶಾಂತಿ ಬೇಕು,ಆತ್ಮೋನ್ನತಿ ಬೇಕು ಎಂದರೆ ಸಿಗುವುದಾದರೂ ಎಲ್ಲಿ!!
ನಮಗೆ ಜೀವನದಲ್ಲಿ ಶಾಂತಿ,ನೆಮ್ಮದಿ ಸಿಗಬೇಕೆಂದರೆ ನಮಗೆ ಪವಿತ್ರ ಜೀವನವನ್ನು ಅರ್ಥಮಾಡಿಸುವ ಗುರು ಲಭ್ಯವಾಗಬೇಕು. ಆ ಗುರು ಹೇಗಿರಬೇಕು? ಈ ಮೇಲೆ ತಿಳಿಸಿರುವ ಗುಣಗಳಲ್ಲಿ ಅತ್ಯಂತ ಶ್ರೇಷ್ಠ ಸ್ಥಾನದಲ್ಲಿ ಆ ಗುರುವು ಇರಬೇಕು. ಇಂತಹ ಗುರುವಿನೆಡೆಗೆ ಜನರು ಹಂಸಗಳಂತೆ ಗುಂಪಿನಲ್ಲಿ ಹೋಗಬೇಕು. ಆಗ ಆ ಗುರುವು ಆತ್ಮೋನ್ನತಿಯೆಡೆಗೆ ಮಾರ್ಗವನ್ನು ತೋರಿಸಬಲ್ಲ.
ಹಂಸದ ಮತ್ತೊಂದು ಗುಣವೇ ಗುಂಪಿನಲ್ಲಿರುವುದು. ಗುಂಪಿನಲ್ಲಿರು ವುದು ಎಂದರೆ ಸಮಾಜದಲ್ಲಿರುವುದೆಂದೇ ಅರ್ಥ. ಸಮಾಜದ ಮಧ್ಯೆ ಇದ್ದು ಸಾಧನೆಮಾಡಬೇಕು ಯಾಕೆ? ಇದು ಅಗತ್ಯವಾಗಿ ಚಿಂತನೆ ಮಾಡಬೇಕಾದ ವಿಚಾರ ಅಲ್ಲವೇ?
ಯಾವುದೇ ವ್ಯಕ್ತಿ ತಾನು ಆತ್ಮೋನ್ನತಿಗಾಗಿ ಸಾಧನೆ ಮಾಡುತ್ತೀನೆಂದರೆ ಮೊದಲು ತಾನು ಭೌತಿಕವಾಗಿ ಬದುಕಲು ಆಶ್ರಯಕೊಟ್ಟಿರುವ ಸಮಾಜವನ್ನು ನೆನಪುಮಾಡಿಕೊಳ್ಳಬೇಕಲ್ಲವೇ? ತಾನು ಇಲ್ಲಿ ಬದುಕಲು ಆಹಾರ, ಇರಲು ಮನೆ, ತೊಡಲು ಬಟ್ಟೆ ಹಾಗೂ ಇಲ್ಲಿಯವರೆಗೆ ಪಡೆದಿರುವ ಮತ್ತು ಮುಂದೆಯೂ ಪಡೆಯಲಿರುವ ಜ್ಞಾನಕ್ಕೆ ಕಾರಣಕರ್ತರು ಈ ಸಮಾಜದಲ್ಲಿರುವವರೇ ಅಲ್ಲವೇ? ಅಬ್ಭಾ! ಒಮ್ಮೆ ಯೋಚಿಸಿ ನೋಡಿದರೆ ನಮ್ಮ ನಿತ್ಯ ಬದುಕಿನಲ್ಲಿ ಅದೆಷ್ಟು ಜನರ ಋಣದಲ್ಲಿ ನಾವು ಬದುಕುತ್ತಿದ್ದೇವೆಂದು ಅರಿವಾಗದೇ ಇರದು. ಈ ಸಮಾಜದಲ್ಲಿ ಬದುಕುತ್ತಿರುವ ನಾವು ಇತರ ಮನುಷ್ಯರಿಂದ ಅಷ್ಟೇ ಅಲ್ಲ ಪ್ರಾಣಿ ಪಕ್ಷಿಗಳಿಂದಲೂ, ಗಿಡ ಮರಗಳಿಂದಲೂ, ಕೆರೆ ಕಟ್ಟೆ ಮುಂತಾದುವುಗಳಿಂದಲೂ ನಿತ್ಯವೂ ಉಪಕೃತರಾಗುತ್ತಲೇ ಇದ್ದೇವೆ. ನಾವು ಆತ್ಮೋನ್ನತಿಗಾಗಿ ಸಾಧನೆ ಮಾಡುವಾಗಲೂ ಈ ಸಮಾಜದ ಋಣವಿಲ್ಲದೆ, ಪ್ರಕೃತಿಯ ರಕ್ಷಣೆ ಇಲ್ಲದೆ ಯಾವ ಉನ್ನತಿಯೂ ಸಾಧ್ಯವಿಲ್ಲ.
ಆದ್ದರಿಂದ ನಮ್ಮ ಮೇಲೆ ಇರುವ ಋಣವನ್ನು ನಾವು ನಮ್ಮ ಕೈಲಾದ ಮಟ್ಟಿಗೆ ತೀರಿಸುವುದು ನಮ್ಮ ಹೊಣೆಯಲ್ಲವೇ? ಹಾಗಿಲ್ಲದೆ ನಾನು ಕಾಡಿಗೆ ಹೋಗಿ ಏಕಾಂಗಿಯಾಗಿ ಕುಳಿತು ತಪಸ್ಸು ಮಾಡುತ್ತೇನೆಂದರೆ, ನಾಡಿನಲ್ಲಿ ನಮ್ಮ ಕರ್ತವ್ಯವನ್ನು ಮಾಡಿ ಋಣಮುಕ್ತರಾಗಿದ್ದೇವೆಯೇ? ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು, ಇಲ್ಲವಾದರೆ ಆತ್ಮೋನ್ನತಿಯಾಗುವುದಾದರೂ ಹೇಗೆ?
ಭಗವದ್ಗೀತೆಯಲ್ಲಿ ಸಂನ್ಯಾಸಿ ಮತ್ತು ಯೋಗಿಯ ವಿಚಾರದಲ್ಲಿ ಹೇಳುವಾಗಲೂ ಕೂಡ ಶ್ರೀ ಕೃಷ್ಣ ಪರಮಾತ್ಮನು ಈ ಸಮಾಜಕ್ಕೆ ಏನೂ ಮಾಡದಿರುವವನು ಯೋಗಿಯೂ ಅಲ್ಲ, ಸಂನ್ಯಾಸಿಯೂ ಅಲ್ಲವೆಂದು ಹೇಳಿದ್ದಾನೆ
ಅನಾಶ್ರಿತಃ ಕರ್ಮಫಲಂ ಕಾರ್ಯಂ ಕರ್ಮ ಕರೋತಿ ಯಃ
ಸಃ ಸಂನ್ಯಾಸೀ ಚ ಯೋಗೀ ಚ ನ ನಿರಗ್ನಿರ್ನಚಾಕ್ರಿಯಃ ॥
(ಭಗವದ್ಗೀತೆ, ಅಧ್ಯಾಯ-6 ಶ್ಲೋಕ-1)
ಸಂನ್ಯಾಸೀ ಅಂದರೆ ಯಾರು? ಯಜ್ಞಯಾಗಾದಿಗಳನ್ನು ಮತ್ತು ಕರ್ಮಗಳನ್ನು ಬಿಡುವವನೇ? ಇದಕ್ಕೆ ಉತ್ತರವಾಗಿ ಶ್ರೀಕೃಷ್ಣನು ಹೇಳುತ್ತಾನೆ, ‘ಅಲ್ಲ’. ಯಾರು ಯಜ್ಞಯಾಗಾದಿಗಳನ್ನು ಮತ್ತು ಕರ್ಮಗಳನ್ನು ತನ್ನ ಸ್ವಂತ ಮೋಕ್ಷಕ್ಕಾಗಿ ಮಾಡದೆ ಸಮಾಜಕ್ಕಾಗಿ ಮಾಡುತ್ತಾನೋ ಅವನು ಸಂನ್ಯಾಸಿ.
ಸಾಮಾನ್ಯವಾಗಿ ಸಂನ್ಯಾಸಿ ಎಂದರೆ ಅವರು ಎಲ್ಲವನ್ನೂ ತ್ಯಜಿಸಿದವರು, ಅವರಿಗೆ ಯಾವುದೇ ಕರ್ಮಬಂಧನವಿಲ್ಲ-ಎಂಬುದು ಸಾಮಾನ್ಯ ಜನರ ಅಭಿಪ್ರಾಯ. ಆದರೆ ಶ್ರೀ ಕೃಷ್ಣನು ಹೇಳುತ್ತಾನೆ, ಯಾರು ಕರ್ಮಫಲವನ್ನು ಅಪೇಕ್ಷಿಸದೆ ಯೋಗ್ಯವಾದ ಕರ್ಮವನ್ನು ಮಾಡುತ್ತಾನೆ ಅವನು ಸಂನ್ಯಾಸಿ. ನಿರಗ್ನಿ ಎಂದರೆ ಅಗ್ನಿಯನ್ನು ತ್ಯಾಗಮಾಡಿದವನು ಸಂನ್ಯಾಸಿ ಎಂದು ಭಾವಿಸಿ ಸಂನ್ಯಾಸಿಯು ಯಾವ ಯಜ್ಞ ಯಾಗಾದಿಗಳನ್ನೂ ಮಾಡಬೇಕಾಗಿಲ್ಲ ಎಂದು ಅರ್ಥಮಾಡಿಕೊಳ್ಳಬೇಕಾಗಿಲ್ಲ. ಸಂನ್ಯಾಸಿಗೂ ಕರ್ತವ್ಯವಿದೆ. ಅವನೂ ಯೋಗ್ಯವಾದ ಕರ್ಮಗಳನ್ನು ಮಾಡಬೇಕು.ಆದರೆ ತನ್ನ ಮೋಕ್ಷ ಸಾಧನೆಗಾಗಿ ಅಲ್ಲ, ಬದಲಿಗೆ ಸಮಾಜದ ಶ್ರೇಯಸ್ಸಿಗಾಗಿ ಅವನಿಗೂ ಕರ್ತವ್ಯವಿದೆ.
ಸಾಮಾನ್ಯವಾಗಿ ಸಾಮಾಜಿಕ ಚಿಂತನೆಯಲ್ಲಿ ತೊಡಗಿ ಸಮಾಜಕ್ಕೆ ಪೂರಕವಾದ ಒಂದಿಷ್ಟು ಚಟುವಟಿಕೆಗಳನ್ನು, ಸೇವಾಕಾರ್ಯಗಳನ್ನು ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತರಿಗೆ ನಿನ್ನನ್ನು ನೀನು ಮೊದಲು ಉದ್ಧಾರ ಮಾಡಿಕೊ, ಆನಂತರ ಸಮಾಜದ ಬಗ್ಗೆ ತಲೆ ಕೆಡಿಸಿಕೊಳ್ಳುವಿಯಂತೆ ಎಂಬುದಾಗಿ ಕೆಲವರು ಲಘುವಾಗಿ ಹೇಳುವುದುಂಟು.ಆದರೆ ಸಮಾಜದ ಕೆಲಸ ಮಾಡುತ್ತಾ ಮಾಡುತ್ತಾ ಆತ್ಮೋನ್ನತಿಯತ್ತ ಮುನ್ನಡೆಯಬಹುದೆಂಬುದು ಬಹುಜನರಿಗೆ ಅರ್ಥವಾಗುವುದಿಲ್ಲ. ಸ್ವಾಮಿ ವಿವೇಕಾನಂದರ ಒಂದು ಮಾತನ್ನು ನೆನಪು ಮಾಡಿಕೊಳ್ಳಬೇಕು ‘‘ನಮ್ಮ ದೇಶದಲ್ಲಿ ಎಲ್ಲಿಯವರೆಗೆ ಕಟ್ಟ ಕಡೆಯ ಬಡಪಾಯಿಗೆ ತುತ್ತು ಅನ್ನ ಸಿಗುವುದಿಲ್ಲವೋ ಅಲ್ಲಿಯವರೆಗೂ ನನಗೆ ಮೋಕ್ಷವೇ ಬೇಡ. ಸಮಾಜದಲ್ಲಿನ ಇಂತಹ ದಾರಿದ್ರ್ಯ ನಾಶವಾಗುವ ತನಕ ಭಗವಂತನು ನನಗೆ ನೂರು ಬಾರಿ ಬೇಕಾದರೂ ಇಲ್ಲಿಯೇ ಜನ್ಮ ಕೊಡಲಿ’’.
ಸ್ವಾಮಿ ವಿವೇಕಾನಂದರ ಮಾತುಗಳಲ್ಲಿ ಎಲ್ಲರಿಗೂ ನಮ್ಮ ನಮ್ಮ ಸಾಮಾಜಿಕ ಹೊಣೆಯು ಅರ್ಥವಾಗಬೇಕಲ್ಲವೇ? ಸಮಾಜದಲ್ಲಿದ್ದುಕೊಂಡು, ಸಾಮಾಜಿಕ ಕೆಲಸಗಳನ್ನು ಈಶ್ವರಾರ್ಪಣ ಬುದ್ಧಿಯಿಂದ ಮಾಡುತ್ತಾ ಜೊತೆಜೊತೆಯಲ್ಲೇ ಆತ್ಮೋನ್ನತಿ ಹೊಂದಬೇಕೆಂಬುದು ವೇದದ ಆಶಯವೂ ಆಗಿದೆ.

  • ಹರಿಪುರ ಶ್ರೀಧರ್
   

Leave a Reply