ಸಾಮಾಜಿಕ ವಿರಸಕ್ಕೊಂದು ಪರಿಹಾರ

ವಿಶ್ವ ಹಿಂದೂ ಪರಿಷತ್ - 0 Comment
Issue Date : 13.10.2014

ಕರ್ನಾಟಕದ ಸುವಿಖ್ಯಾತ ತೀರ್ಥಕ್ಷೇತ್ರ ಉಡುಪಿಯಲ್ಲಿ 2004ರಲ್ಲಿ ಕೆಲವು ಆಸಕ್ತ ವ್ಯಕ್ತಿಗಳು ಸಾಮಾಜಿಕ ವಿರಸ ಹುಟ್ಟುಹಾಕುವ ದುರುದ್ಧೇಶದಿಂದಲೇ ಒಂದು ಅನಗತ್ಯದ ವಿವಾದವನ್ನು ಸೃಷ್ಟಿಸಿದರು. ಹಿಂದು ಸಮಾಜದ ಮೇಲ್ಜಾತಿಯವರೆನ್ನಲಾಗುವವರ ವಿರುದ್ಧ ಕೆಳಜಾತಿಯೆನ್ನಲಾಗುವವರನ್ನು ಎತ್ತಿ ಕಟ್ಟಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಅವರ ಹುನ್ನಾರವಾಗಿತ್ತು. ಆ ಹಗರಣವಿದ್ದುದು ಹೀಗೆ:
ಅಲ್ಲಿನ ಯಾತ್ರಾಕೇಂದ್ರ ಶ್ರೀಕೃಷ್ಣಮಂದಿರದಲ್ಲಿ ಭಗವಂತನ ದರ್ಶನಕ್ಕಾಗಿ ‘ಕನಕನ ಕಿಂಡಿ’ ಒಂದಿರುವುದು ಸರ್ವವಿದಿತ. ಸುಮಾರು ನೂರು ವರ್ಷಗಳ ಹಿಂದೆ 1908ರಲ್ಲಿ ಅಂದಿನ ಪರ್ಯಾಯ ಪೀಠಾಧೀಶರು ಭಗವಂತನ ದರ್ಶನದ ಸಂದರ್ಭದಲ್ಲಿ ಯಾತ್ರಾರ್ಥಿಗಳಿಗೆ ಮಳೆ ಬಿಸಿಲು ಇತ್ಯಾದಿಗಳಿಂದ ರಕ್ಷಣೆ ಒದಗಿಸುವ ಸಲುವಾಗಿ ಆ ಕಿಂಡಿಯ ಸಮೀಪ ಸುಮಾರು ಹದಿನೈದು ಅಡಿಗಳ ಎತ್ತರದ ಒಂದು ಸಣ್ಣ ಗೋಪುರದಂತಹ ಕಟ್ಟಡವನ್ನು ಕಟ್ಟಿಸಿದ್ದರು. ತೀರಾ ಹಳೆಯದಾಗಿ ಶಿಥಿಲವಾಗಿದ್ದ ಅದನ್ನು ಉರುಳಿಸಿ, ಇನ್ನೂ ಭವ್ಯವಾದ 75 ಅಡಿಗಳ ಎತ್ತರದ ಒಂದು ಗೋಪುರವನ್ನು ಕಟ್ಟಿಸಲು 2004-2006ರ ಕಾಲಾವಧಿಯ ಪರ್ಯಾಯ ಪೀಠಾಧಿಪತಿಗಳಾದ ಫಲಿಮಾರು ಮಠಾಧೀಶರು ನಿರ್ಧರಿಸಿದರು. ಅದಕ್ಕಾಗಿ ಜೀರ್ಣಾವಸ್ಥೆಯಲ್ಲಿದ್ದ ಗೋಪುರವನ್ನು ಉರುಳಿಸಿ ಹೊಸ ಗೋಪುರಕ್ಕಾಗಿ ಕೇಂದ್ರ ಸರ್ಕಾರದಲ್ಲಿನ ಕರ್ನಾಟಕದವರೇ ಆದ ಓರ್ವ ಮಂತ್ರಿ-ಸ್ವತಃ ದಲಿತರಾಗಿದ್ದವರು-ಅವರ ಕೈಗಳಲ್ಲಿ ಅಸ್ತಿಭಾರ ಶಿಲೆ ಸ್ಥಾಪಿಸಿದರು.
ವಿವಾದ ಸೃಷ್ಟಿಸಬೇಕೆಂದಿದ್ದವರಿಗೆ ಅದೊಂದೆ ನೆಪ ಸಾಕಾಯ್ತು. ಹದಿನಾರನೇ ಶತಮಾನದಲ್ಲಿ ಸಂತಶ್ರೇಷ್ಠ ಕನಕದಾಸರಿಗೆ ಮಂದಿರ ಪ್ರವೇಶ ನಿರಾಕರಿಸಿ ಅವಮಾನಿಸಿದ ಮೇಲ್ಜಾತಿಯವರೇ ಈಗ ಅವರ ಹೆಸರಿನ ಗೋಪುರ ಉರುಳಿಸಿ ಇನ್ನೊಮ್ಮೆ ಅಪಮಾನಿಸಿದ್ದಾರೆಂದು ಅವರು ಹುಯಿಲೆಬ್ಬಿಸಿದರು. ಈ ಹೆಸರಿನಲ್ಲಿ ರಾಜ್ಯದಾದ್ಯಂತ ಜಾತಿವೈಷಮ್ಯದ ಕಿಚ್ಚು ಹಚ್ಚುವ ಧೂರ್ತ ಮಾನಸಿಕತೆ ಅವರಿಗಿದ್ದುದು ಸುಸ್ಪಷ್ಟ. ರಾಜ್ಯದ ಊರೂರುಗಳಿಂದ ದಲಿತ ಸಮುದಾಯವನ್ನು ಕರೆ ತಂದು ಪ್ರದರ್ಶನ, ಪ್ರತಿಭಟನೆ ಇತ್ಯಾದಿ ನಡೆಸಲು ಅವರು ಆರಂಭಿಸಿದರು.
ಇದು ತಿಳಿದಂತೆಯೇ ಆಗ ಮುಂಬಯಿಯಲ್ಲಿ ಪ್ರವಾಸದಲ್ಲಿದ್ದ ಪೇಜಾವರ ಶ್ರೀಗಳವರು ಉಡುಪಿಗೆ ಧಾವಿಸಿಬಂದು ಹಿಂದು ಸಮಾಜದ ಎಲ್ಲಾ ಜಾತಿ ಸಮುದಾಯಗಳ ನಾಯಕರ ಸಭೆ ಸೇರಿಸಿದರು. ವಾಸ್ತವಿಕವಾಗಿ ಅಲ್ಲಿದ್ದುದು ಕೇವಲ ‘ಕನಕನ ಕಿಂಡಿ’ ಮಾತ್ರವಲ್ಲದೆ, ನಾಲ್ಕು ಕಂಬಗಳ ಮೇಲೆ ನಿಂತ ಗೋಪುರದಂತಹ ಆ ಸರಳ ಕಟ್ಟಡಕ್ಕೆ ‘ಕನಕ ಗೋಪುರ’ವೆಂಬ ಹೆಸರು ಎಂದೂ ಇರಲಿಲ್ಲವೆಂಬುದು ಸಹ ಈ ಸಭೆಯಲ್ಲಿ ಬೆಳಕಿಗೆ ಬಂತು. ಇನ್ನೂ ಹೇಳುವುದೇ ಆದಲ್ಲಿ ಮುಂದೆ ಆಗಲಿರುವ ಭವ್ಯ ಶಿಲ್ಪವನ್ನು ‘ಕನಕ ಗೋಪುರ’ವೆಂದು ಹೆಸರಿಸಲು ಈ ಸಭೆ ಸರ್ವಾನುಮತಿಯಿಂದ ನಿರ್ಧರಿಸಿತು.
ಅಷ್ಟಾದರೂ ಅತೃಪ್ತ ರಾಜಕಾರಣಿಗಳು ಮತ್ತು ದುರುದ್ದೇಶಿತ ಬುದ್ಧಿಜೀವಿಗಳೆನ್ನಿ ಸಿಕೊಳ್ಳುವವರು ತಮ್ಮ ಹೀನ ಮಾನಸಿಕತೆಯ ಅಪಪ್ರಚಾರವನ್ನು ನಿಲ್ಲಿಸಲಿಲ್ಲ. ರಾಜ್ಯದಲ್ಲಿ ಮೇಲ್ಜಾತಿ ಮತ್ತು ಕೆಳಜಾತಿ ಹೆಸರಲ್ಲಿ ಉಭಯ ಸಮುದಾ ಯದ ನಡುವೆ ಪರಸ್ಪರ ಕತ್ತಿಮಸೆತ ಸತತವಾಗಿ ಜೀವಂತವಿರಿಸಬಹುದಾದ ಸರಕು ತಮ್ಮ ಬಳಿಯಿರುವುದಾಗಿ ಅವರು ಭಾವಿಸಿದ್ದರು. ಇಂತಹ ವಿಷಮ ಸನ್ನಿವೇಶದಲ್ಲಿ ಹಿಂದು ಸಮಾಜದಲ್ಲಿ ಒಡಕು ಮೂಡದಿರಲೆಂಬ ಸಲುವಾಗಿ ‘ಕರ್ನಾಟಕ ಸಾಮರಸ್ಯ ವೇದಿಕೆ’ ಚುರುಕಾಗಿ ಒಂದು ‘ಸತ್ಯಶೋಧಕ ಸಮಿತಿ’ಯನ್ನು ಹುಟ್ಟು ಹಾಕಿತು. ವಿವಾದಕ್ಕೆ ಸಂಬಂಧಿಸಿದ ಸರ್ವವಿಧ-ಪರ ಮತ್ತು ವಿರೋಧ-ಮಾಹಿತಿಗಳನ್ನು ಕಲೆ ಹಾಕಿ ನಿಷ್ಪಕ್ಷ ಭೂಮಿಕೆಯಿಂದ ಸಾರ್ವಜನಿಕರಿಗೆ ಯಥಾರ್ಥವಾದುದನ್ನು ತಿಳಿಸಬೇಕೆಂದು ಈ ಸಮಿತಿಗೆ ವೇದಿಕೆಯು ಸೂಚಿಸಿತು. ಜಮ್ಮು-ಕಾಶ್ಮೀರದ ಉಚ್ಚನ್ಯಾಯಾಲಯದ ಪೂರ್ವ ಮುಖ್ಯ ನ್ಯಾಯಾಧೀಶ ಎಂ. ರಾಮಕೃಷ್ಣ, ಅಧ್ಯಕ್ಷರು, ಪೂರ್ವ ನ್ಯಾಯಾಧೀಶ ಮತ್ತು ಶಾಸಕಾಂಗದ ಕಾರ್ಯದರ್ಶಿ ಹಾಗೂ ಕರ್ನಾಟಕದ ಎರಡನೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೂ ಆಗಿದ್ದ ಟಿ. ವೆಂಕಟಸ್ವಾಮಿ, ಉಪಾಧ್ಯಕ್ಷರು, ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ, ಗೌರವಾನ್ವಿತ ವಿದ್ವಾಂಸ ಮತ್ತು ಖ್ಯಾತ ಸಂಶೋಧಕರೂ ಆದ ಡಾ. ಎಂ. ಚಿದಾನಂದಮೂರ್ತಿ, ಕಾರ್ಯದರ್ಶಿ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪೂರ್ವ ಉಪಕುಲಪತಿ ಡಾ. ದ್ವಾರಕನಾಥ, ಪೂರ್ವ ಜಿಲ್ಲಾ ನ್ಯಾಯಾಧೀಶ ಎಂ. ಚಂದ್ರಶೇಖರ, ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಮೈಕ್ರೋಬಯಾಲಜಿ ವಿಭಾಗದ ಪೂರ್ವ ಪ್ರಾಧ್ಯಾಪಕ ಡಾ. ಮೋಹನ ಕೋಟ್ಯಾನ್ ಹಾಗೂ ಸಾಮರಸ್ಯ ವೇದಿಕೆಯ ರಾಜ್ಯ ಸಂಯೋಜಕ ವೆಂಕಟರಾಮ ಅವರುಗಳು ಸದಸ್ಯರಾಗಿದ್ದ ಸಮಿತಿ ಅದು. ಸಾಂದರ್ಭಿಕವಾಗಿ ಉಲ್ಲೇಖಿಸಬೇಕಾದ ಸಂಗತಿಯೆಂದರೆ, ಈ ಸಮಿತಿಯಲ್ಲಿದ್ದವರು ಯಾರೂ ‘ಮೇಲ್ಜಾತಿ’ಯವರು ಎನ್ನಿಸಿಕೊಳ್ಳುವವರಾಗಿರಲೇ ಇಲ್ಲ. ತನಗೊಪ್ಪಿಸಲಾದ ಕೆಲಸವನ್ನು ಈ ಸಮಿತಿಯು ಗಂಭೀರವಾಗಿಯೇ ಕೈಗೆತ್ತಿಕೊಂಡಿತು. ವಿವಾದಕ್ಕೆ ಸಂಬಂಧಿಸಿದ ಎಲ್ಲ ಐತಿಹಾಸಿಕ ಮಾಹಿತಿಗಳನ್ನೂ ಅದು ಸಂಗ್ರಹಿಸಿತು. ಸಾರ್ವಜನಿಕರಿಗೆ ತಮ್ಮ ಬಳಿ ಇರುವಂತಹ ಯಾವುದೇ ರೀತಿಯ ದಾಖಲೆಗಳನ್ನು ಹಾಜರುಪಡಿಸಲು ಮಾಧ್ಯಮದ ಮೂಲಕ ವಿನಂತಿಸಿತು. ಒಮ್ಮೆ ಉಡುಪಿಗೆ ಭೇಟಿ ನೀಡಿ ಅಲ್ಲಿನ ಸ್ವಾಮೀಜಿಗಳು, ಅರ್ಚಕರು, ವಿಚಾರವಂತ ಪ್ರಬುದ್ಧರು ಮತ್ತು ಜನಸಾಮಾನ್ಯರು ಇತ್ಯಾದಿ ನೂರಾರು ಮಂದಿಯ ಭೇಟಿ ಮಾಡಿ ಎಲ್ಲರ ವಿಚಾರಗಳನ್ನು ದಾಖಲಿಸಿತು. ಈ ಪ್ರಕ್ರಿಯೆಯನ್ನು ಬೆಂಗಳೂರಲ್ಲೂ ನಡೆಸಿತು. ಅಂತಿಮವಾಗಿ ಎಲ್ಲ ವ್ಯಕ್ತಿಗಳು, ಸಂಸ್ಥೆಗಳು, ಸಂಘಟನೆಗಳು ನೀಡಿದ್ದ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಒಂದು ಪತ್ರಿಕಾ ಪರಿಷತ್ತಿನಲ್ಲಿ ತನ್ನ ವರದಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ಬಿಡುಗಡೆಗೊಳಿಸಿತು. ಮಾಧ್ಯಮದಲ್ಲಿ ಈ ವರದಿಗೆ ವ್ಯಾಪಕವಾದ ಪ್ರಚಾರ ದೊರಕಿತು.
ಚಾರಿತ್ರಿಕ ದಾಖಲೆಗಳನ್ನು ಮತ್ತು ಲಾಗಾಯ್ತಿನಿಂದ ಜನರಾಡಿಕೊಳ್ಳುತ್ತ ಬಂದಿರುವುದನ್ನೇ ಆಧರಿಸಿ ಸಲ್ಲಿಸಲಾಗಿದ್ದ ಈ ವರದಿಯಲ್ಲಿ ಉರುಳಿಸಲಾಗಿದ್ದ ವಿವಾದಿತ ಗೋಪುರವು ಕನಕದಾಸರ ಹೆಸರಲ್ಲಿ ಎಂದೂ ಇರಲೇ ಇಲ್ಲವಾದುದರಿಂದ ಆ ಸಂತಶ್ರೇಷ್ಠನನ್ನು ಅವಮಾನಿಸಲಾಗಿದೆ ಎಂಬುದರಲ್ಲಿ ಯಾವುದೇ ಹುರುಳಿಲ್ಲ ವೆಂದು ತಿಳಿಸಲಾಗಿತ್ತು. ಆ ವಿಚಾರದಲ್ಲಿ ಇನ್ನೂ ಭಿನ್ನಾಭಿಪ್ರಾಯ ಹೊಂದಿದ್ದವರಿಗೂ ತಮ್ಮ ಬಳಿಯಿರುವ ಎಲ್ಲಾ ದಾಖಲೆಗಳೊಂದಿಗೆ ಬಂದು ಅವನ್ನು ಪ್ರಸ್ತುತಪಡಿಸಲು ಸಮಿತಿಯು ವಿನಂತಿಸಿತು. ಆದರೆ ಜಾತೀಯ ವಿರಸ ಹುಟ್ಟು ಹಾಕಲು ಸಂಚು ಹೂಡಿದ್ದ ಅವರಾರೂ ಮುಂದೆ ಬರಲೇ ಇಲ್ಲ. ಪರಿಣಾಮವಾಗಿ ಅನಗತ್ಯವಾಗಿ ಎಬ್ಬಿಸಲಾದ ವಿವಾದವು ತಾನಾಗಿಯೇ ಅವಸಾನ ಕಂಡಿತು. ಸಾಮರಸ್ಯ ವೇದಿಕೆಯು ಸಕಾಲದಲ್ಲಿ ಕೈಗೊಂಡ ಕ್ರಮದಿಂದಾಗಿ ಕರ್ನಾಟಕದ ರಾಜಕೀಯ ವಾತಾವರಣದಲ್ಲಿ ಸುಂಟರಗಾಳಿಯಾಗಬಹುದಾದ ಒಂದು ಪ್ರಸಂಗ ಬರಿಯ ಟುಸ್ಸಾಗಿ ಕೊನೆಗೊಂಡಿತು.

   

Leave a Reply