ಸಮಯ ಸಾಧನೆ

ಭಾರತ ; ಲೇಖನಗಳು - 1 Comment
Issue Date : 15.10.2014

(ಮಹಾಭಾರತ ಗ್ರಂಥವು ಜೀವನದ  ಸರ್ವಕ್ಷೇತ್ರದಲ್ಲಿಯೂ ಮಾನವನಿಗೆ  ಮಾರ್ಗದರ್ಶನ ಮಾಡುವ ಅತಿ ಪವಿತ್ರ  ಹಾಗೂ ಅಮೂಲ್ಯ ಜ್ಞಾನಭಂಡಾರವಾಗಿದೆ.  ಭಾರತದ  ಪ್ರಸಿದ್ಧ ಪುರುಷರು, ಐತಿಹಾಸಿಕ ವೀರರು, ಉದ್ಧಾಮ ರಾಜಕಾರಣ ಪಟುಗಳು  ಮಹಾಭಾರತದಿಂದಲೇ ಸ್ಫೂರ್ತಿಯನ್ನು  ಪಡೆದು ಬಿಡಿಸಲಾಗದ  ಸಮಸ್ಯೆಗಳು  ಎದುರಾದ ಸಂಕಟದ  ಕ್ಷಣಗಳಲ್ಲಿ ಪರಿಹಾರದ ಬೆಳಕನ್ನು  ಕಂಡರು.  ರಾಜನೀತಿಯ ಒಂದು ಲಕ್ಷಣವಾದ  ‘ಸಮಯಸಾಧನೆ’ಯನ್ನು  ಕುರಿತು ಶ್ರೇಷ್ಠ ರಾಜಕಾರಣಿ ಭೀಷ್ಮರು ಸಿಂಹಾಸನಾಧಿಷ್ಠ ಧರ್ಮರಾಯನಿಗೆ ಹೇಳಿದ   ಕಥೆಯನ್ನು  ಶ್ರೀ ‘ವಿಶ್ವಾಮಿತ್ರ’ರು ರಸಪೂರ್ಣವಾಗಿ ಉದ್ಧರಿಸಿದ್ದಾರೆ.)

ಭಾರತ ಯುದ್ಧವೆಲ್ಲಾ ಮುಗಿಯಿತು. ಭೀಷ್ಮರು ಶರತಲ್ಪದಲ್ಲಿ ಮಲಗಿದ್ದಾರೆ. ಸಕಲ ರಾಜನೀತಿಪ್ರವೀಣರಾದ ಭೀಷ್ಮರು ತಮ್ಮ ಕೊನೆಯ ದಿನಗಳನ್ನು ಎಣಿಸುತ್ತಿದ್ದಾರೆ.  ರಾಜನೀತಿಯನ್ನು  ಭೀಷ್ಮರ ಮೂಲಕ ಯುಧಿಷ್ಠರನಿಗೆ  ತಿಳಿಹೇಳಬೇಕೆಂದು  ಶ್ರೀಕೃಷ್ಣನ ಆಸೆ. ಈ ಆಸೆಯನ್ನು  ಈಡೇರಿಸಿಕೊಳ್ಳಲು ಭೀಷ್ಮರಿಗೆ  ನವಚೈತನ್ಯ ಕೊಟ್ಟು ಧರ್ಮರಾಜನೊಡನೆ  ತಾನೂ ಕುಳಿತು ಅಮೃತಧಾರೆಯ ಸಮಾನವಾದ  ವಾಣಿಯನ್ನು ಸವಿಯುತ್ತಿದ್ದಾನೆ. ಯುಧಿಷ್ಠಿರನು ಪ್ರಾಂಜಲಿಬದ್ಧನಾಗಿ ಅನೇಕ ಪ್ರಶ್ನೆ ಉಪಪ್ರಶ್ನೆಗಳಿಂದ ತನ್ನ ಅನುಮಾನಗಳನ್ನೆಲ್ಲಾ ಪರಿಹಾರಮಾಡಿಕೊಳ್ಳುತ್ತಿದ್ದಾನೆ. ಅನೇಕ ಶತೃಗಳಿಂದ ಪರಿವೃತನಾಗಿರುವ  ರಾಜನ ಕರ್ತವ್ಯವೇನು? ಎಂದು  ಧರ್ಮನು  ಕೇಳಿದ ಪ್ರಶ್ನೆಗೆ ಭೀಷ್ಮರು ಮಂದಹಾಸದಿಂದ-

ಒಂದು ಕಾಡಿನಲ್ಲಿ ದೊಡ್ಡದೊಂದು ಆಲದ ಮರವಿತ್ತು.  ಅದರ ಅಗಣಿತ  ಶಾಖೆಗಳು  ಸಹಸ್ರಾರು ಪಕ್ಷಿಗಳಿಗೆ  ಆಶ್ರಯ ಕೊಟ್ಟಿದ್ದವು.  ಮರದ  ಬುಡದಲ್ಲಿ ಪಾಲಿಟ ಎಂಬ ಇಲಿಯೊಂದು ವಾಸಿಸುತ್ತಿತ್ತು.  ಇದರ  ರಾಜನೀತಿ ಪಾಂಡಿತ್ಯವು ಅಸಾಧಾರಣವಾಗಿತ್ತು. ಮರದ  ಮೇಲೆ ಲೋಮಶವೆಂಬ ಬೆಕ್ಕು, ಹಕ್ಕಿಗಳನ್ನು  ತಿನ್ನುತ್ತಾ ಸುಖವಾಗಿ ಕಾಲಯಾಪನೆ  ಮಾಡುತ್ತಿತ್ತು.  ಬೇಡರವನೊಬ್ಬ ಆ ಮರದ  ಸಮೀಪದಲ್ಲಿಯೇ ಬಿಡಾರಮಾಡಿಕೊಂಡಿದ್ದನು.  ರಾತ್ರಿಯ ವೇಳೆಯಲ್ಲಿ ಆ ಕಾಡಿನ ನಾನಾ ಭಾಗಗಳಲ್ಲಿ ಬಲೆಯನ್ನು  ಬೀಸಿ ಗುಡಿಸಲಿಗೆ  ಬಂದು ಸುಖವಾಗಿ  ಮಲಗುತ್ತಿದ್ದನು. ಬೆಳಗಿನ ಹೊತ್ತಿಗೆ  ಅನೇಕ  ಪ್ರಾಣಿಗಳು ಬಲೆಯೊಳಗೆ  ಬಿದ್ದು ಬೇಡರವನಿಗೆ  ಸುಖಭೋಜನವಾಗುತ್ತಿತ್ತು.

ಒಂದು ರಾತ್ರಿ ಪಾಲಿಟನಿಗೆ  ಲೋಮಶನ ಸುಳಿವು ಕಾಣಲಿಲ್ಲ. ಬೇಡರವನು  ಬಲೆಯಲ್ಲಿ ಪ್ರಾಣಿಗಳ  ಆಕರ್ಷಣೆಗಾಗಿ  ಬಚ್ಚಿಟ್ಟಿದ್ದ ಮಾಂಸದ  ತುಂಡು ಅತ್ತಿತ್ತ  ಆಹಾರಕ್ಕಾಗಿ ನೆಗೆದು ನಲಿದಾಡುತ್ತಿದ್ದ ಪಾಲಿಟನ ದೃಷ್ಟಿಗೆ ಬಿತ್ತು.  ಅಲ್ಲಿಯೇ ಜಾತಿ ಶತೃವಾದ ಲೋಮಶನೂ ಬಲೆಯಲ್ಲಿ  ಸಿಕ್ಕಿಬಿದ್ದು ನರಳುತ್ತಿರುವುದನ್ನು  ನೋಡಿ ಇಬ್ಬಗೆಯ ಸಂತೋಷದಿಂದ  ಮಾಂಸದ  ತುಂಡನ್ನು ತಿನ್ನಲು  ಮೊದಲಿಟ್ಟಿತು.  ಆದರೆ ಈ ಪ್ರಪಂಚದಲ್ಲಿ ಸುಖದುಃಖಗಳು ಕ್ಷಣಿಕವಾದುದಲ್ಲವೇ? ಇಲಿಯ ವಾಸನೆಯನ್ನು  ತಿಳಿದು ಮುಂಗಸಿಯೊಂದು ಬಿಲದಿಂದ ಹೊರಬಂದು ಪಾಲಿಟನನ್ನು ತಿನ್ನಲು  ಸಮಯವನ್ನು ಕಾಯುತ್ತಿತ್ತು.  ಮರದ ಮೇಲೆ  ಒಂದು ರಣಹದ್ದು  ಪಾಲಿಟನನ್ನು ಹಾರಿಸಿಕೊಂಡುಹೋಗಲು  ಹೊಂಚುಹಾಕುತ್ತಿತ್ತು.  ಇವೆರಡರ ಸುಳಿವನ್ನೂ  ತಿಳಿದ ಪಾಲಿಟನಿಗೆ  ಪ್ರಾಣದ ಮೇಲೆ ಆಸೆ ಉಳಿಯಲಿಲ್ಲ. ಆದರೆ ಸಕಲ ನೀತಿವಿಶಾರದನಾದ  ಪಾಲಿಟನು ಧೈರ್ಯಗೆಡದೆ ತನ್ನಲ್ಲಿ ತಾನೇ ಪರ್ಯಾಲೋಚಿಸತೊಡಗಿದನು. “ನೂರಾರು ಆಪತ್ತುಗಳು ಏಕಕಾಲದಲ್ಲಿ ಸಂಭವಿಸಿದರೂ ಧೈರ್ಯಗೆಡದೆ ತಾಳ್ಮೆಯಿಂದ ಆಪತ್ತುಗಳನ್ನೆಲ್ಲಾ ಎದುರಿಸಬೇಕು. ‘ತಾಳಿದವನು ಬಾಳಿಯಾನು’ ಎಂಬಂತೆ  ತಾಳ್ಮೆಯಿದ್ದು ಜಾಗರೂಕನಾಗಿರುವವನಿಗೆ  ಅಪಾಯವೆಂದೂ ಸಂಭವಿಸದು. ನಾನೀಗ ಶತೃಗಳಿಂದ ಪರಿವೃತನಾಗಿದ್ದೇನೆ. ರಣಹದ್ದಿನಿಂದ  ಪಾರಾಗಲು  ಬಲೆಯಿಂದಾಚೆ ಹೊರಟರೆ ಮುಂಗಸಿಯು ಕಾದು ನಿಂತಿದೆ. ಇಲ್ಲಿಯೇ ಇದ್ದರೆ  ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ನಾನು ರಣಹದ್ದಿಗೆ ಆಹಾರವಾಗಬೇಕಾಗುತ್ತದೆ. ಆದರೆ ನನ್ನ ಜಾತಿವೈರಿಯಾದ  ಬೆಕ್ಕು ಮಾತ್ರ ಅಪಾಯಕ್ಕೆ ಸಿಕ್ಕಿಬಿದ್ದಿದೆ. ಅದೂ ಅಲ್ಲದೆ  ಬುದ್ಧಿಹೀನ ಸ್ನೇಹಿತನ ಆಶ್ರಯಕ್ಕಿಂತಲೂ ಚತುರನಾದ  ಶತೃವಿನ ಆಶ್ರಯವೇ ಲೇಸು.  ಪ್ರಾಣಾಪಾಯ ಸಮಯದಲ್ಲಿ ಶತೃಗಳಾದರೂ ಅನ್ಯೋನ್ಯ ಮಿತ್ರರಾಗಿ ಅಪಾಯದಿಂದ  ಪಾರಾಗುವುದು ರಾಜನೀತಿ.  ಈ ಸಮಯದಲ್ಲಿ ನನ್ನ ಮತ್ತು ಲೋಮಶನ ಆಪತ್ತು ಸಮಾನವಾದದ್ದು. ನಮ್ಮಿಬ್ಬರ  ಪರಸ್ಪರ ಸಹಾಯದಿಂದ  ನಾವೀರ್ವರೂ ಅಪಾಯದಿಂದ ಪಾರಾಗಬಹುದು. ಲೋಮಶನು ನನಗೆ ಬಲಿಷ್ಠನಾದ ಶತೃವೆಂಬುದರಲ್ಲಿ ಸಂದೇಹವಿಲ್ಲ. ಆದರೂ ಕಾಲ ದೇಶ ವರ್ತಮಾನಗಳಿಗನುಗುಣವಾಗಿ ಕಾರ್ಯ ಸಾಧಿಸಿ ನಾನೀ ಅಪಾಯದಿಂದ  ಪಾರಾಗಲು ಪ್ರಯತ್ನಿಸುತ್ತೇನೆ.” ಎಂದು ಯೋಚಿಸಿ ಲೋಮಶನ ಕಡೆಗೆ  ನಾಲ್ಕಡಿಯಿಟ್ಟು, “ಲೋಮಶ! ನಾನಿಂದು ನಿನ್ನನ್ನು ಮಿತ್ರನೆಂದು ಸಂಬೋಧಿಸುತ್ತೇನೆ. ಏಕೆಂದರೆ ಸತ್ಪುರುಷರೊಡನೆ ಸ್ನೇಹವು ಕೇವಲ ನಾಲ್ಕು ನಿಮಿಷಗಳ ಸಂಗತಿಯಿಂದ ಪ್ರಾದುರ್ಭವಿಸುತ್ತದೆ. ನಾವಿಬ್ಬರೂ ಒಂದೇ ಮರದ ಆಶ್ರಯದಲ್ಲಿ ಬಹಳ ವರ್ಷಗಳಿಂದಲೂ ಜೀವಿಸುತ್ತಿದ್ದೇವೆ. ಆ ವಿಶ್ವಾಸದಿಂದ ನಾನಿಂದು ನಿನ್ನನ್ನು ಆಪತ್ತಿನಿಂದ ಪಾರು ಮಾಡಲು ಮುಂದೆ ಬಂದಿದ್ದೇನೆ. ಆದರೆ “ಮಿತ್ರಃ ಪ್ರತ್ಯುಪಕಾರಾರ್ಥೀ” ಎಂಬಂತೆ ಸ್ನೇಹಿತನು ಯಾವಾಗಲೂ ತಾನು ಮಾಡಿದ ಉಪಕಾರಕ್ಕೆ ಪ್ರತ್ಯುಪಕಾರವನ್ನು  ಬಯಸುತ್ತಾನೆ. ಇದು ಲೋಕಧರ್ಮ. ಪ್ರಕೃತ ಸನ್ನಿವೇಶದಲ್ಲಿ ನಾನು ಈಗಲೇ ಸರಿಯಾದ ರಕ್ಷಣೆ ಹೊಂದದಿದ್ದರೆ ರಣಹದ್ದು ನನ್ನನ್ನು ಹಾರಿಸಿಬಿಡುತ್ತದೆ. ಬಿಲದೊಳಗೆ  ಸೇರೋಣವೆಂದರೆ  ಮುಂಗಸಿಯು ಬಲೆಯಾಚೆ ಕಾದುಕುಳಿತಿದೆ. ಆದ್ದರಿಂದ ಮೊಟ್ಟಮೊದಲು ನನ್ನ ರಕ್ಷಣೆಯಾಗಬೇಕಾಗಿದೆ. ನನ್ನ ರಕ್ಷಣೆಯಾಗದೆ ನಿನ್ನ ರಕ್ಷಣೆಯಂತೂ ಖಂಡಿತ ಆಗದು. ನಾನು ಹೇಳಿದಂತೆ  ನೀನೂ ಒಪ್ಪುವುದಾದರೆ ನಾವಿಬ್ಬರೂ ಪಾರಾಗಬಹುದು” ಎಂದು ಹೇಳಿ ಸುಮ್ಮನಾದನು.

ಪ್ರಾಣದ ಆಸೆಯನ್ನೇ ಸಂಪೂರ್ಣವಾಗಿ ತೊರೆದು ನರಳುತ್ತಿದ್ದ ಲೋಮಶನಿಗೆ  ನವಚೇತನ ಬಂದಂತಾಯಿತು. ಬಹಳ ಉತ್ಸುಕತೆಯಿಂದ – “ಪಾಲಿಟ, ನೀನು ನನ್ನನ್ನು ಪಾರುಮಾಡಲು ಸಮರ್ಥನಿರುವೆ. ಆದರೆ  ನಾನು ನಿನಗೆ ಮಾಡಬೇಕಾದ  ಪ್ರತ್ಯುಪಕಾರವೇನು? ಬೇಗ ಹೇಳು.” ನಾನು ಮತ್ತು ನನ್ನ ಕುಟುಂಬದವರೂ ಎಂದೆಂದೂ ನಿನ್ನ ದಾಸಾನುದಾಸರಾಗಿರುವೆವು. ಬೇಗ ಹೇಳು ಪಾಲಿಟ.”

ಪಾಲಿಟ- “ನೀನು ನನ್ನ ದಾಸನಾಗಿರಬೇಕಾಗಿಲ್ಲ ಲೋಮಶ! ಈ ನನ್ನ ಎರಡು ಶತೃಗಳೂ ನಿರಾಶೆಯಿಂದ ಬಂದ ದಾರಿಯನ್ನು ಹಿಡಿಯುವವರೆಗೂ ನನ್ನನ್ನು  ನಿನ್ನ ಎದೆಯಲ್ಲಿಟ್ಟು ರಕ್ಷಿಸಬೇಕು.  ಅಷ್ಟು ಮಾಡಿದರೆ  ನಿಮಿಷ ಮಾತ್ರದಲ್ಲಿ ನಾನು ನಿನ್ನನ್ನು ಬಂಧಮುಕ್ತನನ್ನಾಗಿ ಮಾಡಿಬಿಡುತ್ತೇನೆ.”

ಇಲಿಯ  ಈ ಮಾತಿಗೆ ಬೆಕ್ಕು ತನ್ನ ಒಪ್ಪಿಗೆ ಇತ್ತಿತು. ಅದರಂತೆ ಇಲಿಯನ್ನು  ತನ್ನ ಎದೆಯಲ್ಲಿ ಮುಚ್ಚಿಕೊಂಡಿತು. ಎಂದೂ ಕಂಡು ಕೇಳದ ಈ ಆಶ್ಚರ್ಯಕರವಾದ ದೃಶ್ಯವನ್ನು ಕಂಡು ರಣಹದ್ದು ಮತ್ತು ಮುಂಗಸಿಗಳು ನಿರಾಶೆಯಿಂದ ಹೊರಟುಹೋದವು.  ಇದರಿಂದ ಬೆಕ್ಕಿನ ಪಾಲಿನ ಕೆಲಸವು ಮುಗಿದು ಇಲಿಯ ರಕ್ಷಣೆಯಾಯಿತು.  ಇನ್ನು ಇಲಿಯ ಕೆಲಸ ಉಳಿದಿದೆ.  ಪಾಲಿಟನು ಸಾವಧಾನವಾಗಿ ತನ್ನ ಕೆಲಸವನ್ನು  ಆರಂಭಿಸಿದನು. ಬಲೆಯ ದಾರಗಳನ್ನೆಲ್ಲಾ ಒಂದೊಂದಾಗಿ ಕತ್ತರಿಸತೊಡಗಿದನು.  ಬಲೆಯೊಳಗೆ ಸಿಕ್ಕಿ ಯಾತನೆಯನ್ನನುಭವಿಸುತ್ತಿರುವ  ಬೆಕ್ಕಿಗೆ ಇಲಿಯ ಸಾವಧಾನತೆಯು  ಸೈರಿಸದಾಯಿತು. ಇಲಿಯನ್ನು  ಕುರಿತು ‘ಪಾಲಿಟ ! ನೀನು ವೃಥಾ ಸಾವಕಾಶವೇಕೆ ಮಾಡುವೆ? ಶೀಘ್ರವಾಗಿ ನನ್ನ ಬಂಧನವನ್ನು ಬಿಡಿಸು. ನಾನು ಹಿಂದೆ  ನಿನಗೆ ಮಾಡಿರುವ ಅಪಕಾರವನ್ನು ಸ್ಮರಿಸಿ ನನ್ನನ್ನು ಸಾವಿಗೀಡುಮಾಡಬೇಡ. ಯಾವ ದ್ವೇಷವಿದ್ದರೂ ಮರೆತು ತಾತ್ಕಾಲಿಕವಾಗಿ ಮಾಡಿಕೊಂಡಿರುವ  ಕರಾರಿನಂತೆ ನಡೆಯುವುದು ಸತ್ಪುರುಷರ ಕರ್ತವ್ಯ. ನನ್ನ ಪ್ರಾಣವು ನಿನ್ನ ಕೈಯ್ಯಲ್ಲಿದೆ. ಮಿತ್ರದ್ರೋಹವು ಮಹಾಪಾತಕ. ಕಾಲಯಾಪನೆ ಮಾಡದೆ ನನ್ನ ಬಂಧನವನ್ನು ಬಿಡಿಸು ಪಾಲಿಟ.”

ಪಾಲಿಟ- “ಮಾಡಿದ ಉಪಕಾರಕ್ಕೆ ಅಪಕಾರ ಮಾಡುವಷ್ಟು ನಾನು ಕೃತಘ್ನನಲ್ಲ. ನೀನು ನಿಶ್ಚಯವಾಗಿಯೂ ಬಂಧಮುಕ್ತವಾಗುವೆ. ನನ್ನ ವಿಷಯದಲ್ಲಿ  ಸಂಶಯಪಡಬೇಡ. ಆದರೆ ಯಾವ ಕಾರ್ಯವನ್ನೂ  ಅಕಾಲದಲ್ಲಿ ಮುಗಿಸಬಾರದು. ಇದರಿಂದ ಅಪಾಯವುಂಟು ಪರಸ್ಪರ ಪ್ರಯೋಜನವನ್ನುದ್ದೇಶಿಸಿ ಮಿತ್ರತ್ವವು ಬೆಳೆಯುವುದು. ಅದಾದನಂತರ ಮಿತ್ರತ್ವದ ಸ್ಮರಣೆ ಯಾರಿಗೂ ಇರದು. ಮಾಡಿದ ಉಪಕಾರವನ್ನು ಮರೆತು ಅವರವರ ಸ್ವಾಭಾವಿಕ ವೃತ್ತಿಗನುಗುಣವಾಗಿ ನಡೆಯುವರು. ಇದು ಪ್ರಕೃತಿ ನಿಯಮ. ಪ್ರಕೃತ ಸಂದರ್ಭದಲ್ಲಿ  ನಾವಿಬ್ಬರೂ ಜಾತಿವೈರಿಗಳು. ಬ್ರಹ್ಮ ಸೃಷ್ಟಿಯಲ್ಲಿಯೇ ನಾನು ನಿನಗೆ ಆಹಾರರೂಪವಾಗಿ ಸೃಷ್ಟಿಯಾಗಿದ್ದೇನೆ. ಹೀಗಿರುವಾಗ ನಮ್ಮಿಬ್ಬರ ಮೈತ್ರಿಯು ತಾತ್ಕಾಲಿಕವಾದದ್ದು. ಬಂಧಮುಕ್ತಿಯಾದ ನಂತರ ಬಲಿಷ್ಠನಾದ ಮತ್ತು ಹಸಿವಿನಿಂದ ಕಂಗೆಟ್ಟಿರುವ ನೀನು ನನ್ನನ್ನು ತಿನ್ನದೇ ಇರಲಾರೆ. ಆದರೆ  ನನ್ನ ಅಪಾಯವನ್ನು ಯೋಚಿಸಿ ಉಪಕಾರವನ್ನೆಸಗಿರುವ  ನಿನಗೆ ಪ್ರತ್ಯುಪಕಾರ ಮಾಡದಿದ್ದರೆ ನಾನು ಈ ದ್ರೋಹದ ಫಲವಾಗಿ ಸಹಸ್ರಾರು ವರ್ಷಗಳವರೆಗೆ ಘೋರ ನರಕದಲ್ಲಿ ನರಳಬೇಕಾಗುವುದು. ಆದ್ದರಿಂದ ನಾನು ಬೇಡರವನು ಬರುವ ವೇಳೆಗೆ ಸರಿಯಾಗಿ ಬಂಧನದಿಂದ ಬಿಡಿಸುತ್ತೇನೆ. ಆಗ ನಿನಗೆ  ಓಡಿಹೋಗಿ ಪ್ರಾಣ ಉಳಿಸಿಕೊಳ್ಳುವ  ಯೋಚನೆಯೊಂದು ವಿನಾ ಮತ್ತಾವ ಯೋಚನೆಯೂ ಬರಲಾರದು. ಇದರಿಂದ ನಾನೂ ಸುಖವಾಗಿ ಬಿಲವನ್ನು ಸೇರುವೆ.”

ಲೋಮಶನಿಗೆ  ಮುಂದೇನು ಹೇಳಲೂ ತೋಚದಾಯಿತು. ಬೆಳಗಾಗುತ್ತಾ ಬಂತು. ಬೇಡರವನು ನಾಯಿಯ ಸಮೇತನಾಗಿ ಬಲೆಯ ಸಮೀಪಕ್ಕೆ ಬರುತ್ತಿದ್ದಾನೆ. ಬೆಕ್ಕಿನ ಭಯವು ಇಮ್ಮಡಿಯಾಯಿತು. ಭಯದಿಂದ ನಡುಗುತ್ತಿರುವ ಧ್ವನಿಯಲ್ಲಿ ಪಾಲಿಟನನ್ನು  ಕುರಿತು- “ಮುಂದೇನು ಮಾಡುವೆ? ಬೇಡರವನು ಬರುತ್ತಿದ್ದಾನೆ. ದಯೆಯಿಟ್ಟು ನನ್ನ ಪ್ರಾಣ ಉಳಿಸು ಪಾಲಿಟ !”

ಪಾಲಿಟನಿಗೆ  ತನ್ನ ಕರ್ತವ್ಯವನ್ನು ಮುಗಿಸುವ  ಕಾಲ ಒದಗಿತೆಂಬ ಅರಿವಾಯಿತು. ಬಲೆಯಲ್ಲಿ ಉಳಿದಿದ್ದ ಕಡೆಯ ದಾರವನ್ನು  ಕಡಿದು ಲೋಮಶನ ಬಂಧಮುಕ್ತಿ ಮಾಡಿ ಬಿಲವನ್ನು ಸೇರಿದನು. ಲೋಮಶನೂ ಬೇಟೆಗಾರನ ನಾಯಿಯಿಂದ ಪಾರಾಗಲು ಮರವನ್ನೇರಿದನು.

ಬೇಟೆಗಾರನು ಅಂದು ತನ್ನ ಬಲೆಗಾಗಿದ್ದ ಅವಸ್ಥೆಯನ್ನು ನೋಡಿ ವಿಸ್ಮಯಪಡುತ್ತಾ ಹೊರಟುಹೋದನು. “ಧರ್ಮಜ ! ನೀನು ಕೇಳಿದ ಪ್ರಶ್ನೆಗೆ ಈ ಕಥೆಯು ಉತ್ತರ ಕೊಡಬಹುದಲ್ಲವೇ? ಶತೃಸಮೂಹದಲ್ಲಿರುವ ದುರ್ಬಲ ರಾಜನು  ತನ್ನ ಸಂಪೂರ್ಣ ಬುದ್ಧಿಶಕ್ತಿಯನ್ನುಪಯೋಗಿಸಿ ಪಾಲಿಟನಂತೆ ಪಾರಾಗಬೇಕು” ಎಂದು ಹೇಳಿ ಭೀಷ್ಮರು ಮೌನ ತಾಳಿದರು. ಕಥೆಯ ನೀತಿಯರಿತು ತಲೆದೂಗುತ್ತಾ ಧರ್ಮಾದಿಗಳು ಕೃಷ್ಣ ಸಮೇತರಾಗಿ ಸಾಯಂಕಾಲದ ಕರ್ಮಾನುಷ್ಠಾನಕ್ಕೆ ತಮ್ಮ ಮನೆಗಳಿಗೆ  ತೆರಳಿದರು.

 

  • ವಿಶ್ವಾಮಿತ್ರ
   

1 Response to ಸಮಯ ಸಾಧನೆ

  1. Jayanth Kashyap

    Amazing political science strategy explained in this illustration. Great! Thank you _/\__/\__/\_

Leave a Reply