ಸಂಭ್ರಮ ಸಡಗರದ ಸಂಕ್ರಾಂತಿ

ಹಬ್ಬಗಳು - 1 Comment
Issue Date : 14.01.2014

ಕ್ಯಾಲೆಂಡರ್ ಹೊಸ ವರ್ಷದ ಆರಂಭದಲ್ಲಿ ಬರುವ ಸಂಕ್ರಾಂತಿ ಹಿಂದುಗಳಿಗೆಲ್ಲ ಒಂದು ವಿಶಿಷ್ಟವಾದ ಹಬ್ಬ, ಸೂರ್ಯನಿಗೆ ಸಂಬಂಧಪಟ್ಟ ಈ ಹಬ್ಬವು ಸೂರ್ಯನ ಪಥಚಲನೆಯ ಹಾಗೂ ಅವನ ಪರಿವರ್ತನೆಯ ಕಾಲವೂ ಹೌದು.
ಸೂರ್ಯನು ಒಂದೊಂದು ತಿಂಗಳು ಒಂದೊಂದು ರಾಶಿ ಪ್ರವೇಶಿಸುತ್ತಾನೆ. ಹಾಗೇ ಪ್ರವೇಶಿಸುವುದನ್ನೇ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಕರೆಯುವುದು. ಈ ರೀತಿಯಂತೆ ನಮಗೆ ವರ್ಷಕ್ಕೆ 12 ಸಂಕ್ರಾಂತಿಗಳು. ಆದರೆ ಸೂರ್ಯನು ಮಕರ ರಾಶಿಯಲ್ಲಿ ಸೇರ್ಪಡೆಯಾದಾಗ ಬರುವ ‘ಮಕರ ಸಂಕ್ರಾಂತಿ’ ಮಾತ್ರ ಪ್ರತ್ಯೇಕತೆ ಹೊಂದಲು ಆಗಿನಿಂದಲೇ ‘ಉತ್ತರಾಯಣ ಪುಣ್ಯಕಾಲ’ ಆರಂಭವಾಗುವುದು ಮುಖ್ಯ ಕಾರಣವಾಗಿದೆ. ದಕ್ಷಿಣಾಯಣದಲ್ಲಿ ದೇವತೆಗಳು ನಿದ್ರಿಸಿದರೆ, ಉತ್ತರಾಯಣ ಪರ್ವದಲ್ಲಿ ಎಚ್ಚರವಾಗುವರೆಂದು ಶಾಸ್ತ್ರಗಳು ಸಾರಿವೆ. ಆ ಸಮಯದಲ್ಲಿ ಸ್ವರ್ಗ ದ್ವಾರಗಳು ತೆರೆದಿರುತ್ತವೆ. ಆಗ ಮರಣಿಸಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬುದು ಪ್ರತೀತಿ. ಆದ್ದರಿಂದಲೇ ಸಂಕ್ರಾಂತಿಯನ್ನು ದೊಡ್ಡ ಹಬ್ಬ ಎಂದು ಆಚರಿಸುತ್ತಿರುವುದು.
ಇದಲ್ಲದೆ, ಸಪ್ತ ಅಶ್ವದ ರಥಾರೂಢನಾದ ಸೂರ್ಯನಾರಾಯಣ ವೇಗವಾಗಿ ಸಂಚಾರ ಮಾಡುತ್ತಿರುತ್ತಾನೆ. ಒಂದೊಂದು ರಾಶಿಯನ್ನು ದಾಟುತ್ತಾ, ಕರ್ಕಾಟಕದಲ್ಲಿ ಪ್ರವೇಶಿಸಿದರೆ, ಅದು ಕರ್ಕಾಟಕ – ಸಂಕ್ರಮಣ. ದಕ್ಷಿಣಾಯಣ ಆರಂಭ ಆ ಬಳಿಕ ಸಿಂಹ, ಕನ್ಯಾ, ತುಲಾ… ಈ ರೀತಿ ಒಂದೊಂದು ರಾಶಿಯಲ್ಲೂ ಅಧಿಪತ್ಯ ಹೊಂದುತ್ತಾನೆ. ಮಕರ ರಾಶಿಗೆ ಬಂದಾಗ ಅವನ ಉತ್ತರಾಯಣ – ಯಾತ್ರೆ ಆರಂಭ. ದೇವತೆಗಳಿಗೆ ಇದು ಹಗಲಿನ ಸಮಯ. ಈ ಎಲ್ಲಾ ಕಾರಣದಿಂದಲೇ ಮಕರ ಸಂಕ್ರಮಣಕ್ಕೆ ಪ್ರಾಶಸ್ತ್ಯ. ಆ ದಿನದ ಹಬ್ಬದ ಆಚರಣೆ.
‘ದೇವರು ಇದ್ದಾನಾ..?’ ಎಂದು ಕೇಳುವವರು ಇದ್ದಾರೆ. ಆದರೆ ಸೂರ್ಯನಿದ್ದಾನೆಯೇ? ಎಂದು ಯಾರೂ ಕೇಳರು. ಏಕೆಂದರೆ ಸೂರ್ಯನನ್ನು ಪ್ರತಿದಿನವೂ ನಾವು ನೋಡುತ್ತೇವೆ. ಹಗಲು-ರಾತ್ರಿ-ಋತುಗಳು – ವರ್ಷ-ಮಾಸಗಳೆಲ್ಲಾ ಸೂರ್ಯ ಚಲನೆಯ ಅನ್ವಯವೇ ನಡೆಯುವುದು. ಸಮಸ್ತ ಚರಾಚರ ಜಗತ್ತು ಅವನಷ್ಟೇ ಅಲ್ಲ, ವಿಶ್ವದ ಎಲ್ಲಾ ಜನರು, ಅವನಿಗೆ ಶರಣಾಗಿದ್ದಾರೆ. ಸೂರ್ಯದೇವನಿಗೆ ವಿಷ್ಣುವಿನ ಸಮಾನ ಸ್ಥಾನಮಾನವಿದೆ. ಇಂತಹ ಭಾಸ್ಕರನನ್ನು – ಬ್ರಹ್ಮವಿಷ್ಣು, ಮಾಹೇಶ್ವರನೆಂದು ವೇದಗಳು ಸಾರಿವೆ. ಇಂತಹ ಪ್ರತ್ಯಕ್ಷ ನಾರಾಯಣನಿಗೆ, ವಿಶ್ವಮಾನವನು ಕೃತಜ್ಞತೆಯನ್ನು ಸಮರ್ಪಿಸುತ್ತಲೇ ಇದ್ದಾನೆ.
ಉತ್ತರಾಯಣದಲ್ಲಿ ಸೂರ್ಯನು ಮಂದಗಾಮಿಯಾಗಿ ಸಂಚರಿಸುತ್ತಾನೆ. ಈ ಕಾರಣದಿಂದಲೇ ಹಗಲು ಹೆಚ್ಚು. ಕತ್ತಲಿನ ಸಮಯ ಕಡಿಮೆಯಿರುತ್ತದೆ. ಹೀಗೆ ಪ್ರಾಂತ್ಯ ಯಾವುದೇ ಆಗಿರಲಿ ಸೂರ್ಯಾರಾಧನೆಗೆ, ಪ್ರಕೃತಿ – ತತ್ತ್ವವನ್ನು ಪೂಜಿಸುವುದಕ್ಕೆಂದು ಸಂಕ್ರಾಂತಿಯನ್ನು ಆಚರಿಸುತ್ತೇವೆ. ಪ್ರಕೃತಿಯಲ್ಲಿ ದೊರಕುವ ಸಂಪತ್ತು, ವಿಶೇಷಗಳನ್ನು ಉಪಯೋಗಿಸಿಕೊಂಡು, ಬದುಕನ್ನು ಸೂಕ್ತ ರೀತಿಯಲ್ಲಿ ತಿದ್ದಿಟ್ಟುಕೊಳ್ಳುವುದೇ ಹಬ್ಬಗಳ ಪರಮಾರ್ಥ. ಇದರ ಸಾಂಕೇತಿಕವಾಗೇ ‘ಸಂಕ್ರಾಂತಿ ಹಬ್ಬದ’ ಆಚರಣೆ.
ಈ ಸಂಕ್ರಾಂತಿಯ ದೊಡ್ಡ ವೈಶಿಷ್ಟ್ಯವೆಂದರೆ ‘ಎಳ್ಳು-ಬೆಲ್ಲ’ ಎಳ್ಳಿನ ದಾನಕ್ಕೆ ಮಹತ್ತಾದ ವಿಶೇಷತೆ ಇದೆ. ಎಳ್ಳುದಾನ ಮಾಡುವುದರಿಂದ ಪಾಪ ಕಳೆಯುತ್ತದೆ. ಕಷ್ಟ ಪರಿಹಾರವಾಗುತ್ತದೆ ಎಂಬುದು ಮೂಲ ಉದ್ದೇಶ. ‘ಎಳ್ಳು ತಿಂದು ಒಳ್ಳೆಯ ಮಾತನಾಡು’ ಎನ್ನುವ ಸ್ನೇಹ-ಪ್ರೀತಿಯ ಸಂಕೇತವಿದೆ. ಇದನ್ನು ಕೊಡುವ ಸಲುವಾಗೇ ನೆಂಟರಿಷ್ಟರು, ಪ್ರೀತಿ ಪಾತ್ರರ, ಸ್ನೇಹಿತರ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿ, ಎಳ್ಳು ನೀಡುತ್ತಾರೆ. ಇದಲ್ಲದೆ ಕೊಡಬೇಕಾದ ಎಳ್ಳು-ಬೆಲ್ಲವನ್ನು ತಿಂಗಳಾನುಗಟ್ಟಲೆ ರಕ್ಷಿಸಿಟ್ಟು, ನೆಂಟರಿಷ್ಟರ ಮನೆಗೆ ತಲುಪಿಸುವುದುಂಟು. ‘ಕೊರಿಯರ್’ ಮೂಲಕ ಕಳುಹಿಸುವ ಕಾಳಜಿಯೂ ಇತ್ತೀಚೆಗೆ ಹೆಚ್ಚುತ್ತಿದೆ.
ಎಳ್ಳು – ಬೆಲ್ಲ ಕೊಡು – ತೆಗೆದುಕೊಳ್ಳುವ ಆಚರಣೆ ಸಂಪ್ರದಾಯ ಬದ್ಧವಾಗಿದ್ದರೂ, ಅದರ ಹಿಂದೆ ಒಂದು ವೈಜಾನಿಕ ದೃಷ್ಟಿಕೋನವೇ ಇದೆ. ಈ ಸಂಪ್ರದಾಯ ವ್ಯಕ್ತಿಯ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಎಳ್ಳು – ಬೆಲ್ಲ – ಕಡಲೆ – ಕೊಬ್ಬರಿಗಳಲ್ಲಿ ಹೆಚ್ಚೆಚ್ಚು ಪೌಷ್ಟಿಕಾಂಶವಿರುತ್ತದೆ. ಇದನ್ನೆಲ್ಲ ನಿರ್ದಿಷ್ಟ ಪ್ರಮಾಣದಲ್ಲಿ ಸೇವಿಸುವುದರಿಂದ ಮಹತ್ತರ ಪಾತ್ರ ವಹಿಸುತ್ತದೆ. ಎಳ್ಳಿನ ಜತೆ ಬೆಲ್ಲದ ಸೇವನೆ ರಕ್ತ ವರ್ಧಕ ಮತ್ತು ಪುಷ್ಟಿಕರವೆಂದು ಆಯುರ್ವೇದ ವೈದ್ಯರು ಹೇಳುತ್ತಾರೆ. ಇದಕ್ಕೆ ಸೇರಿಸುವ ಕಡಲೆ ಬೀಜ ಸಹ ಅತ್ಯುತ್ತಮ ಪೌಷ್ಟಿಕ ಆಹಾರ. ದೇಹಕ್ಕೆ ಶಕ್ತಿ ಸಂಚಯವನ್ನುಂಟು ಮಾಡುತ್ತದೆ.
ಹೀಗೆ ನಮ್ಮ ಹಿರೀಕರು ಆರೋಗ್ಯವನ್ನು ಕಾಪಾಡಲು ಋತುಮಾನಕ್ಕನುಗುಣವಾಗಿ ಬರುವ ಹಬ್ಬಗಳಲ್ಲಿ ಆಯಾಯ ಋತುವಿಗೆ ಹೊಂದುವ ವಸ್ತುಗಳಿಗೆ ಧಾರ್ಮಿಕ ಕಟ್ಟುಪಾಡು ಕೊಟ್ಟು, ಬಳಸುವಂತೆ ಮಾಡಿರುವುದು ಅವರ ಸಾಮಾಜಿಕ ಕಳಕಳಿಗೆ, ಪೀಳಿಗೆಗಳ ಸಂರಕ್ಷಣೆಗೆ ಉತ್ತಮ ನಿದರ್ಶನಗಳಾಗಿವೆ. ಅವರಿಗೆ ನಮ್ಮ ನಮನ.
ಹಬ್ಬದ ಆಚರಣೆಯ ಹಿಂದಿನ ಆಶಯ, ಅವುಗಳ ಮೂಲ ಉದ್ದೇಶ ಏನೇ ಇರಲಿ. ಹಬ್ಬಗಳು ನಮ್ಮ ದುಡಿಮೆಯ ಶ್ರಮವನ್ನು, ಬಾಳಿನ ಬೇಸರವನ್ನು ನೀಗಿಸಿ, ಮನಸ್ಸಿಗೆ ಮುದ ನೀಡುವ ವೌಲ್ಯಗಳಾಗಿವೆ. ಸಂತೋಷ, ನೆಮ್ಮದಿ ಸಿಗುತ್ತದೆ. ಆಪ್ತರು, ನೆಂಟರಿಷ್ಟರು, ಸ್ನೇಹಿತರ ಜೊತೆ ಸೇರಿ ಸಂತೋಷಪಡಲು ಇರುವ ಒಂದು ಶುಭ ಸಂದರ್ಭವೂ ಹೌದು.
ಬರುತ್ತಿರುವ ‘ಶುಭ ಸಂಕ್ರಾಂತಿ ಎಲ್ಲರ ಪಾಲಿಗೂ ಸಂತೋಷಕರವಾಗಿರಲಿ. ದೇಶಕ್ಕೆ ಅನ್ನ ನೀಡುತ್ತಿರುವ ಅನ್ನದಾತ ನೆಮ್ಮದಿಯಿಂದಿರಲಿ. ಮಳೆ – ಬೆಳೆ ಚೆನ್ನಾಗಿ ಆಗಿ ದೇಶ ಸುಭಿಕ್ಷವಾಗಿರಲಿ ಎಂದು ಸೂರ್ಯನಾರಾಯಣನನ್ನು ಪ್ರಾರ್ಥಿಸೋಣ. ಸರ್ವರಿಗೂ ಸಂಕ್ರಾಂತಿ ಶುಭವನ್ನು ಹಾರೈಸೋಣ.

  • ಪದ್ಮಾಮೂರ್ತಿ, ಅರಸೀಕೆರೆ
   

1 Response to ಸಂಭ್ರಮ ಸಡಗರದ ಸಂಕ್ರಾಂತಿ

  1. pavan Kumar

    Very nice help full information for younger generation who don’t about actual facts about festivals

Leave a Reply