ಸಮಾಜ ಪರಿವರ್ತನೆಯ ಕೇಂದ್ರವಾಗಿ ಶಾಖೆ

ಚಿಕ್ಕಮಂಗಳೂರು - 0 Comment
Issue Date : 06.02.2014

ಚಿಕ್ಕಮಗಳೂರು ಜಿಲ್ಲೆ ಕಾಫಿಯ ತವರೂರು. ಚಂದ್ರದ್ರೋಣ ಪರ್ವತ ತಪ್ಪಲಿನ ಸ್ಥಳ. ಸಂಘ ಏಳು ದಶಕಗಳಿಂದ ಇಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಸಂಘದ ಶಾಖೆಗಳು ಸಾಮಾಜಿಕ ಪರಿವರ್ತನೆ ತರುವಲ್ಲಿ ಶ್ರಮಿಸುತ್ತಿವೆ. ಕೆಲವು ನಿದರ್ಶನಗಳು…
ತರೀಕೆರೆ ತಾಲ್ಲೂಕಿನ ಕೊರಟಿಕೆರೆಯಲ್ಲಿ ಶಾಖೆ ನಡೆಯುತ್ತಿದೆ. ಆ ಊರಿನಲ್ಲಿ ಸಂಕ್ರಾಂತಿ ಕೇವಲ ಮನೆಯ ಹಬ್ಬವಾಗಿರದೆ ಊರಿನ ಹಬ್ಬವಾಗಿದೆ. ಇದಕ್ಕೆ ಕಾರಣ ಸಂಘದ ಶಾಖೆ. ಗ್ರಾಮದ ಚಟುವಟಿಕೆಯಲ್ಲಿ ಸ್ವಯಂಸೇವಕರು ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಶ್ರೀರಂಗನಾಥ ದೇಗುಲದ ಜಾತ್ರಾ ಮಹೋತ್ಸವದಲ್ಲಿ ಸಹಭೋಜನದ ಮೂಲಕ ಸಾಮಾಜಿಕ ಸಾಮರಸ್ಯದ ವಾತಾವರಣ ನಿರ್ಮಾಣವಾಗಿದೆ. ಮಳೆ ಕೊಯ್ಲು ಮೂಲಕ ಜಲ ಸಾಕ್ಷರತೆ ಅರಿವು ಮೂಡಿಸುವ ಕೆಲಸ ಸಾಗಿದೆ.
ಆಲ್ದೂರು ತಾಲ್ಲೂಕಿನ ಗಾಳಿಗಂಡಿ ಒಂದು ಪುಟ್ಟ ಊರು. ಆ ಊರಿನ ಸ್ವಯಂಸೇವಕರು ‘ವಿನಾಯಕ ಗಣಪತಿ ಪೆಂಡಾಲ್’ ನಿರ್ಮಿಸಿ ಸಾಮರಸ್ಯದ ಕೆಲಸ ಮಾಡಿದ್ದಾರೆ. ವಾರಕ್ಕೊಮ್ಮೆ ಭಜನೆ ಮೂಲಕ ಸಂಸ್ಕಾರ ನೀಡುವ ಪ್ರಯತ್ನ ಸಾಗಿದೆ. ಆರ್ಥಿಕ ಕಷ್ಟದಲ್ಲಿರುವ ಕುಟುಂಬಗಳಿಗೆ ಆರ್ಥಿಕ ಬೆಂಬಲವನ್ನೂ ನೀಡುತ್ತಿದ್ದಾರೆ.
ಚಿಕ್ಕಮಗಳೂರು ನಗರದ ಉಪ್ಪಳ್ಳಿ ಒಂದು ಸೇವಾ ಬಸ್ತಿ (ದಲಿತರ ಕೇರಿ). ಕೂಲಿ ಕಾರ್ಮಿಕರೇ ಅಲ್ಲಿ ಹೆಚ್ಚಾಗಿದ್ದಾರೆ. ಶಾಖೆಯ ಪರಿಣಾಮವಾಗಿ ಶಿಥಿಲಾವಸ್ಥೆಯಲ್ಲಿದ್ದ ಅಲ್ಲಿನ ದೇವಾಲಯ ಈಗ ಜೀರ್ಣೋದ್ಧಾರವಾಗಿದೆ. ಸಾಮಾಜಿಕ ಚಟುವಟಿಕೆಯ ಕೇಂದ್ರವಾಗಿ ಅದು ರೂಪುಗೊಂಡಿದೆ.
ಶಾಖೆ ವ್ಯಕ್ತಿಯನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ. ಇದಕ್ಕೆ ಉದಾಹರಣೆ ಹಿರೇಮಗಳೂರು ಕಣ್ಣನ್. ಒಬ್ಬ ವ್ಯಕ್ತಿ ಸಮಾಜಕ್ಕೆ ಹೇಗೆ ಕೊಡುಗೆ ನೀಡಬಹುದು ಎಂಬುದಕ್ಕೆ ಕಣ್ಣನ್ ದಿವ್ಯ ಸಾಕ್ಷಿ. ದೇಶ-ವಿದೇಶಗಳ ಭಕ್ತರನ್ನು ಆಕರ್ಷಿಸುವ, ಅಲ್ಲಿಗೆ ಬರುವ ಭಕ್ತರಿಗೆ ಚೈತನ್ಯ ಹಾಗೂ ಸಾಮಾಜಿಕ ದೃಷ್ಟಿಕೋನ ಮೂಡಿಸುವ ಕೇಂದ್ರವಾಗಿ ಹಿರೇಮಗಳೂರು ದೇವಸ್ಥಾನ ಎಲ್ಲರ ಗಮನ ಸೆಳೆದಿದೆ. ಮೇಲು-ಕೀಳು ತಾರತಮ್ಯ ನಿವಾರಿಸಿ ಇಡೀ ಸಮಾಜ ಒಂದಾಗುವಂತೆ ಬೆಸೆದ ಕಣ್ಣನ್ ಅವರ ಮೋಡಿ ನಿಜಕ್ಕೂ ಬೆರಗು ಹುಟ್ಟಿಸುವಂತಹದು.

   

Leave a Reply