ಸಮುದಾಯಗಳ ಸಂಪನ್ಮೂಲಗಳ ರಕ್ಷಣೆ ಸ್ಥಳೀಯರ ಹಕ್ಕು: ಡಾ. ಯಲ್ಲಪ್ಪರೆಡ್ಡಿ

ಜಿಲ್ಲೆಗಳು - 0 Comment
Issue Date : 22.09.2014

ತೀರ್ಥಹಳ್ಳಿ: ಗ್ರಾಮಾಂತರ ಪ್ರದೇಶದಲ್ಲಿರುವ ಸಮುದಾಯಗಳ ಅಥವಾ ರೈತರ ಉಪಯೋಗಕ್ಕಾಗಿ ಮೀಸಲಾದ ಜಮೀನುಗಳ, ಸಂಪನ್ಮೂಲಗಳ ರಕ್ಷಣೆ ಸ್ಥಳೀಯ ರೈತರ, ಗ್ರಾಮವಾಸಿಗಳ ಹಕ್ಕು.ಈ ಜಮೀನುಗಳನ್ನು ಇತರಯಾವುದೇ ಸರಕಾರಿಯಾ ಖಾಸಗೀ ಉದ್ದೇಶಕ್ಕೆ ಬಳಸುವುದಿದ್ದಲ್ಲಿ ಸ್ಥಳೀಯರ ಒಪ್ಪಿಗೆ ಪಡೆಯಬೇಕಾಗಿದ್ದು ಅವಶ್ಯ. ಈ ಹಿನ್ನೆಲೆಯಲ್ಲಿ ಗ್ರಾಮಗಳ ಗೋಮಾಳ, ಹಾಡ್ಯ, ಸೊಪ್ಪಿನ ಬೆಟ್ಟ, ಇತರೆ ಭೂಮಿಗಳನ್ನು ಇನ್ನಿತರ ಉಪಯೋಗಕ್ಕೆ ಬಳಸಿದಲ್ಲಿ ಅದನ್ನು ಪ್ರಶ್ನಿಸುವ ಹಕ್ಕು ಸ್ಥಳೀಯರಿಗೆ ಇದೆ, ಎಂದು ಕರ್ನಾಟಕ ಸರಕಾರದ ಲೋಕ ಅದಾಲತ್‌ನ ಸದಸ್ಯರಾದ ಡಾ. ಯಲ್ಲಪ್ಪರೆಡ್ಡಿಯವರು ತಿಳಿಸಿದರು. ಅರಣ್ಯ ಮತ್ತುಇತರ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯನ್ನು ರೈತರು ತಲೆತಲಾಂತರದಿಂದ ನಡೆಸಿಕೊಂಡು ಬಂದಿದ್ದಾರೆ. ಈ ಸಂಪನ್ಮೂಲಗಳನ್ನು ಉಳಿಸಿ, ಬೆಳೆಸುವುದು ನಮ್ಮ ಹಕ್ಕು ಮತ್ತು ಜವಾಬ್ದಾರಿ. ಇತ್ತೀಚಿನ ವರುಷಗಳಲ್ಲಿ ಈ ಸಂಪನ್ಮೂಲಗಳ ಬಳಕೆಯಲ್ಲಿ ಸ್ಥಳೀಯರ ಅಭಿಪ್ರಾಯವನ್ನುಯಾರೂ ಕೇಳದಿರುವುದು ದುರದೃಷ್ಟಕರ. ಇಂತಹ ಸಂದರ್ದಲ್ಲಿ ಸಂಪನ್ಮೂಲಗಳ ದುರ್ಬಳಕೆ, ಶೋಷಣೆಯ ಬಗ್ಗೆ, ಸ್ಥಳೀಯ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಲೋಕ ಅದಾಲತ್‌ನಲ್ಲಿ ವಿವರಿಸಲು ಸಮಯಾವಕಾಶವನ್ನು ನೀಡುತ್ತೇವೆ, ಎಂದು ತಿಳಿಸಿದರು.

ಅವರು ತೀರ್ಥಹಳ್ಳಿಯ ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನದಲ್ಲಿ ಸೆ.13ರಂದು ನಡೆದ ಅರಣ್ಯ ಕಾಯಿದೆ ಮತ್ತು ಕೃಷಿಕ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಬೆಂಗಳೂರಿನ ರಾಷ್ಟ್ರೀಯ ಕಾನೂನು ಕಾಲೇಜಿನ ಪ್ರಾಧ್ಯಾಪಕರಾಗಿರುವ ಡಾ. ಎಂ.ಕೆ.ರಮೇಶ್ ಅವರು ಮಾತನಾಡಿ, ನಮ್ಮ ದೇಶದ ಅರಣ್ಯ ಕಾಯಿದೆ ಕೃಷಿಕರ ಪಾಲುದಾರಿಕೆ ಬಗ್ಗೆ ಏನೂ ಹೇಳದಿರುವುದು ದುರದೃಷ್ಟ. ಅರಣ್ಯರಕ್ಷಣೆಯಲ್ಲಿ ಪಾರಂಪರಿಕವಾಗಿ ರೈತರು ತೊಡಗಿಸಿಕೊಂಡಿದ್ದನ್ನು ಗಮನಿಸದೆ ಜಂಟಿ ಅರಣ್ಯ ಸಮಿತಿ, ಸಾಮಾಜಿಕ ಅರಣ್ಯ ಎಂದು ವಿವಿಧ ಹೆಸರಿನಲ್ಲಿ ಬೇರೆ ಬೇರೆ ಯೋಜನೆಗಳನ್ನು ತೆಗೆದುಕೊಂಡು ಸಾವಿರಾರು ರೂಪಾಯಿ ಹಣವನ್ನು ಕಳೆದುಕೊಂಡಿದ್ದೇವೆ. ಅರಣ್ಯ ಸಾರ್ವಜನಿಕ ಆಸ್ತಿಯಾಗಿ ಉಳಿಯದೆ ಸರಕಾರದ ಆಸ್ತಿಯಾಗಿದೆ. ಇದರಿಂದಾಗಿ ಅರಣ್ಯ ರಕ್ಷಣೆ ಸರಕಾರದ ಕೆಲಸವೆಂದಾಗಿದೆ, ಎಂದು ತಿಳಿಸಿದರು.
ಪರಿಸರದ ಕಾರ್ಯಕರ್ತರಾದ ಗಜೇಂದ್ರಗೊರಸುಕೊಡಿಗೆ, ಗರ್ತಿಕೆರೆರಾಘವೇಂದ್ರ, ಬೆಳ್ಳೂರು ತಿಮ್ಮಪ್ಪ, ಶಿವಕುಮಾರ್ ವಾಲೆಮನೆ, ತೀರ್ಥಹಳ್ಳಿಯ ವಕೀಲರಾದ ನಾಗೇಶ್ ಸಂವಾದದಲ್ಲಿ ಪಾಲ್ಗೊಂಡು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕೃಷಿ ಪ್ರಯೋಗ ಪರಿವಾರ ಮತ್ತು ಪುರುಷೋತ್ತಮ ಸಾವಯವ ಕೃಷಿ ಪರಿವಾರ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರುಷೋತ್ತಮ ಸಾವಯವ ಕೃಷಿ ಪರಿವಾರದ ಅಧ್ಯಕ್ಷರಾದ ಮರಗಳಲೆ ನರಸಿಂಹಮೂರ್ತಿವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರೊ. ಪಿ.ವಿ.ಕೃಷ್ಣ ಭಟ್, ಕೃಷಿ ಪ್ರಯೋಗ ಪರಿವಾರದ ನಿರ್ವಾಹಕ ವಿಶ್ವಸ್ತರಾದ ನಾಗೇಂದ್ರರಾವ್, ಪುರುಷೋತ್ತಮ ಪ್ರತಿಷ್ಠಾನದ ಅಧ್ಯಕ್ಷರಾದ ಸುಬ್ಬರಾವ್ ಉಪಸ್ಥಿತರಿದ್ದರು. ಕೃಷಿ ಪ್ರಯೋಗ ಪರಿವಾರದ ನಿರ್ದೇಶಕರಾದ ಅರುಣಕುಮಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಪುರುಷೋತ್ತಮ ಪರಿವಾರದ ಕಾರ್ಯದರ್ಶಿ ಶ್ರೀದತ್ತ ಸ್ವಾಗತಿಸಿದರು. ಸಾವಯವ ಕೃಷಿ ಪರಿವಾರದ ಶ್ರೀವತ್ಸ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

   

Leave a Reply