ಸಂಘ ಗಂಗೆಯಲ್ಲಿ ಮಿಂದವರು ಅದೆಷ್ಟೋ…

ಚಿಕ್ಕಮಂಗಳೂರು - 0 Comment
Issue Date : 06.02.2014

ಹಿಂದೂ ಸಮಾಜದಲ್ಲಿ ಜಾಗೃತಿ ಮೂಡಿಸಿ, ನಿತ್ಯ ಸಂಸ್ಕಾರ ನೀಡಿ ವ್ಯಕ್ತಿ ನಿರ್ಮಾಣದ ಮೂಲಕ ಅಖಂಡ ರಾಷ್ಟ್ರ ನಿರ್ಮಾಣದ ಹೊಂಗನಸನ್ನು ಸಾಕಾರಗೊಳಿಸಲು ಡಾ. ಕೇಶವ ಬಲರಾಮ್ ಹೆಡಗೇವಾರ್ 1925ರಲ್ಲಿ ನಾಗಪುರದಲ್ಲಿ ಆರಂಭಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ, ಸುಮಾರು ಎರಡು ದಶಕದ ಬಳಿಕ ಚಿಕ್ಕಮಗಳೂರು ಜಿಲ್ಲೆಯನ್ನು ಪ್ರವೇಶಿಸಿತು. ಬೆರಳೆಣಿಕೆ ಕಾರ್ಯಕರ್ತರಿಂದ ಆರಂಭಗೊಂಡ ಸಂಘ ಕಾರ್ಯ ಹಂತಹಂತವಾಗಿ ಬೆಳೆದು ಇಂದು ಹೆಮ್ಮರವಾಗಿ ಸರ್ವಸ್ಪರ್ಶಿಯಾಗಿ ಪ್ರಭಾವಿಸಿರುವುದಕ್ಕೆ ಇಂದು (ಫೆ.6) ಲೋಕಾರ್ಪಣೆಗೊಳ್ಳುತ್ತಿರುವ ಸಂಘ ಕಾರ್ಯಾಲಯ ‘ಸಮರ್ಪಣಾ’ ಕಟ್ಟಡ ಪ್ರಮುಖ ಸಾಕ್ಷಿ.

ಬೆಂಗಳೂರು, ಮಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಸಂಪರ್ಕದಿಂದಾಗಿ ಸಂಘದ ದೀವಿಗೆ ಚಿಕ್ಕಮಗಳೂರು ಜಿಲ್ಲೆಯ ಯುವಕರ ಬಾಳಿಗೆ ಚೇತನ ತುಂಬಿದೆ. ಅಂದಿನಿಂದ ಸಾವಿರಾರು ಯುವಕರು ಸಂಘ ಗಂಗೆಯಲ್ಲಿ ಮಿಂದು ಪುನೀತರಾಗಿ ಬದುಕು ಕಟ್ಟಿಕೊಳ್ಳುವ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಾ ಸಮಾಜ ನಿರ್ಮಾಣದಲ್ಲಿ ತೊಡಗಿದ್ದಾರೆ.

ಶಾರದೆಯ ನೆಲೆವೀಡು ಶೃಂಗೇರಿ ಸುತ್ತಮುತ್ತ ಮೊದಲು ಸಂಘ ಪರಿಚಯವಾದರೆ ನಂತರ ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಹೆಚ್.ವಿ. ಶಂಕರನಾರಾಯಣ ಸಂಘದ ಶಾಖೆ ಆರಂಭಿಸಿದರೆಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಕೆ.ಆರ್. ಶತುಘ್ನ, ಎಸ್.ಜಿ. ರಾಮಸ್ವಾಮಿ, ಹಿ.ನಾ. ತಿಪ್ಪೇಸ್ವಾಮಿ, ಎಸ್.ಕೆ. ಶಂಕರನಾರಾಯಣರದ್ದು ಪ್ರಾರಂಭಿಕ ಸ್ವಯಂಸೇವಕರ ತಂಡ. ಮಲೆನಾಡು ಭಾಗದಲ್ಲಿ ಕಳಸದ ಸುಬ್ರಾಯಪ್ರಭು, ಶೃಂಗೇರಿಯ ಟಿ.ಎನ್. ಕೃಷ್ಣಭಟ್ಟರು, ಡಾ. ಉಪೇಂದ್ರ ಶೆಣೈ, ಕೊಪ್ಪದ ಶ್ರೀಕಂಠ ಭಟ್ಟರು, ಬಾಳೆಹೊನ್ನೂರಿನ ವಿಠ್ಠಲ್‌ರಾವ್, ಮೂಡಿಗೆರೆಯ ದಯಾನಂದ ನಾಯಕ್, ಎಂ.ಕೆ. ವಾಸುದೇವ್ ಮುನ್ನುಡಿ ಬರೆದವರು. ಮಾಚೀಕೊಪ್ಪದ ದಕ್ಷಿಣಾಮೂರ್ತಿ, ಸೋಮಲಾಪುರದ ವೆಂಕಟೇಶ್‌ಮೂರ್ತಿ, ಭಂಡಿಗಡಿಯ ಶ್ರೀನಿವಾಸ ಮೂರ್ತಿ ಶಕ್ತಿ ತುಂಬಿದವರು.

ಬೇಲೂರು ರಸ್ತೆ ಸಮೀಪ ಟೆಲಿಫೋನ್ ಎಕ್ಸ್‌ಚೇಂಜ್ ಪಕ್ಕದ ತಗ್ಗಿನಲ್ಲಿ ಸಂಘದ ಮೊದಲ ಸಂಘಸ್ಥಾನ. ಆನಂತರ ಬಸವನಹಳ್ಳಿ ಶಾಲಾಮೈದಾನದಲ್ಲಿ ‘ನರೇಂದ್ರ’ ಸಾಯಂಶಾಖೆ, ಹಿರೇಮಗಳೂರಿನಲ್ಲಿ ಶಾಖೆ, ಛತ್ರಪತಿ ಶಿವಾಜಿ ಪ್ರಭಾತ್ ಶಾಖೆಗಳು ಪ್ರಾರಂಭಗೊಂಡವು.

1948ರಲ್ಲಿ ಮಹಾತ್ಮಾ ಗಾಂಧೀಜಿಯವರ ಹತ್ಯೆಯ ಮಿಥ್ಯಾರೋಪದಿಂದಾಗಿ ಸಂಘ ನಿಷೇಧಕ್ಕೆ ಒಳಗಾದ ಸಂದರ್ಭದಲ್ಲಿ ಇದನ್ನು ಪ್ರತಿಭಟಿಸಿದ ಬೆಳವಾಡಿಯ ತಿಪ್ಪೇಸ್ವಾಮಿ ಅವರನ್ನು ಅಂದಿನ ಸರ್ಕಾರ ಬಂಧಿಸಿತ್ತೆಂದು ಹಿರಿಯರು ಸ್ಮರಿಸುತ್ತಾರೆ.

ಸ್ವಾತಂತ್ರ್ಯಾನಂತರ ಎರಡು ದಶಕಗಳಲ್ಲಿ ಸಂಘ ಪ್ರಭೆ ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಬಹುತೇಕವಾಗಿ ತಲುಪಿತು. ಅಡ್ಡಗದ್ದೆ ಸುಬ್ಬಣ್ಣ, ಕೆ.ವಿ.ಶೇಷಾದ್ರಿ, ಎಂ.ಎನ್. ವಿಠಲಾಚಾರ್, ಶ್ರೀಧರ, ಬಾಳೆಹೊನ್ನೂರಿನ ಗೋಪಾಲಕೃಷ್ಣೇಗೌಡ, ಮೂಡಿಗೆರೆಯ ವಾದಿರಾಜಾಚಾರ್, ಕೂದುವಳ್ಳಿ ಭವಾನಿ ಶಂಕರ್ ಈ ಹಂತದಲ್ಲಿ ವಿಶೇಷವಾಗಿ ಶ್ರಮಿಸಿದರು.

1960ರ ದಶಕದಲ್ಲಿ ಸಂಘದ ಮೊದಲ ಘೋಷ್ ತಂಡ ಶೃಂಗೇರಿಯಲ್ಲಿ ಸುರೇಂದ್ರ ಭಟ್ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂತು. ನಗರದ ಮೊದಲ ಘೋಷ್ ಪ್ರಮುಖ್ ಜಿ.ಎಸ್.ಶ್ರೀಧರ್. ಹಿರಿಯ ಪ್ರಚಾರಕ ಸುಬ್ಬು ಶ್ರೀನಿವಾಸ್ ವಿಶೇಷ ತರಬೇತಿ ನೀಡಿದ್ದು, 1970ರ ದಶಕದಲ್ಲಿ ರಾಜ್ಯಮಟ್ಟದ ಘೋಷ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ಇತಿಹಾಸವಿದೆ.

1968ರಲ್ಲಿ ಸಂಘದ 2ನೇ ಸರಸಂಘಚಾಲಕ್ ಪ.ಪೂ.ಗುರೂಜೀ ಗೋಳ್ವಲ್ಕರ್ ನಗರದಲ್ಲಿ ನಡೆದ ಸಂಘ ಶಿಬಿರದಲ್ಲಿ ಪಾಲ್ಗೊಂಡಿದ್ದು, ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಸ್ವಯಂಸೇವಕರಲ್ಲಿ ಉತ್ಸಾಹಮೂಡಿಸಿತು.

1970ರ ದಶಕ ಸಂಘದ ಕಾರ್ಯದ ಹಿನ್ನಲೆಯಲ್ಲಿ ಸ್ವರ್ಣಯುಗ. ನ. ಕೃಷ್ಣಪ್ಪನವರು ವಿಭಾಗಪ್ರಚಾರಕರಾಗಿ ಜಿಲ್ಲೆಯಲ್ಲಿ ಕಾರ್ಯಾರಂಭಿಸಿದ ಫಲವಾಗಿ ಸಂಘಟನೆ ವ್ಯಾಪಕತೆ ಪಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಪರಿವಾರದ ಸಂಘಟನೆಗಳು ಬಿಳಲುಬಿಟ್ಟಿದ್ದು ಈ ಕಾಲಘಟ್ಟದಲ್ಲೆ. ವಿಶೇಷವಾಗಿ ಮಂಗಳೂರು ಪ್ರದೇಶದಿಂದ ಬಂದ ಬ್ಯಾಂಕ್ ಅಧಿಕಾರಿಗಳ ಪ್ರಯತ್ನ ಉಲ್ಲೇಖನೀಯ. ಸದಾಶಿವ ಭಟ್, ಲಕ್ಷ್ಮಣ ಮಲ್ಯ, ರವೀಂದ್ರ ಕುಡ್ವ ನಗರದಲ್ಲಿ ಸಂಘಕಾರ್ಯ ವಿಸ್ತರಣೆಗೆ ಟೊಂಕಕಟ್ಟಿ ನಿಂತಿದ್ದು ಸಂಘಗಂಗೆ ಬಯಲು ಭಾಗದಲ್ಲೂ ಪ್ರವಹಿಸಿತು.

ಆ.ಪ್ರ.ಗೋಪಾಲಕೃಷ್ಣ , ಗಣಪತಿ ಹೆಗ್ಡೆ, ರಾಘವೇಂದ್ರ ರಾವ್, ಮಂಜುನಾಥ ಕಾಮತ್, ಯೋಗೀಶ್ ಪೈ, ಚೂಡಾನಾಥ ಅಯ್ಯರ್, ಕೂದುವಳ್ಳಿಯ ಭವಾನಿಶಂಕರ ಮತ್ತು ಕೃಷ್ಣಸ್ವಾಮಿ, ನ.ರಾ.ಪುರದ ಟಿ.ಎನ್.ಬಾಲಕೃಷ್ಣ ಮತ್ತು ದೇವೇಂದ್ರ, ಸೋಮಲಾಪುರದ ವೆಂಕಟೇಶ್‌ಮೂರ್ತಿ, ತರೀಕೆರೆಯಲ್ಲಿ ಪಂಚಾಕ್ಷರಯ್ಯ, ಓಂಕಾರಪ್ಪ, ಮಂಜುನಾಥ, ಭೋಮರಾಜ್, ರಾಮಚಂದ್ರ, ಬೀರೂರಿನ ಕೆ.ಎಚ್. ವಿಠ್ಠಲ್, ಕಡೂರು ತಾಲ್ಲೂಕಿನ ಯಗಟಿ ನಾಗರಾಜ್, ಬಸಪ್ಪ, ಟಿ.ಎಂ.ಎನ್. ಆರಾಧ್ಯ, ಮೂಡಿಗೆರೆಯಲ್ಲಿ ಎಂ.ಆರ್. ಜಗದೀಶ್, ಜಯಪ್ರಕಾಶ್, ರತೀಶ ಕುಮಾರ್, ರುದ್ರಪಾದ ನರಸಿಂಹಮೂರ್ತಿ, ಹೆಗ್ಗದ್ದೆ ಗುರುಮೂರ್ತಿ, ಕಳಸದ ಕೆ.ಟಿ.ಅನಂತ, ಬಾಲಕೃಷ್ಣ ಕಾಮತ್, ವೆಂಕಟ ಸುಬ್ಬಯ್ಯ, ಭಗಿರಥ ಭಟ್ಟ, ದತ್ತ ಭಟ್ಟ, ಕೊಪ್ಪ ತಾಲ್ಲೂಕಿನ ಶ್ರೀನಿವಾಸಮೂರ್ತಿ, ಜಗದೀಶ್ ಕಾರಂತ, ಶಿವಸ್ವಾಮಿ, ನಾಯಕ್ ಸಹೋದರರು, ಈಶ್ವರಹಳ್ಳಿ ಶ್ರೀರಾಮ, ಬೆಳವಾಡಿ ಶ್ರೀನಿವಾಸಮೂರ್ತಿ, ಎಸ್.ಬಿ.ಎಂ.ನ ಮಂಜುನಾಥ್, ಅಜ್ಜಂಪುರ ಮಂಜುನಾಥ, ಶೃಂಗೇರಿ ವಿದ್ಯಾನಂದಶೆಣೈ, ದು.ಗು.ಲಕ್ಷ್ಮಣ, ಲಕ್ಕವಳ್ಳಿ ರಾಜಗೋಪಾಲಶೆಟ್ಟಿ, ಹಿರೇಮಗಳೂರು ಚಕ್ರವರ್ತಿ ತಿರುಮುಗನ್, ನಗರದ ಬಾಲಕೃಷ್ಣ ಗೋವಿಂದಣ್ಣ, ಪ್ರಭಾಕರ ಹೆಗ್ಡೆ, ಯೋಗೀಶ ಪೈ, ಗಣೇಶ್‌ಕಾಮತ್, ರಮೇಶ್ ಪೈ, ನಟರಾಜ್, ಕಳಸ ಆದಿತ್ಯ, ಆನಂದ ಪ್ರಭಾಕರ್ 70ರ ದಶಕದ ಪೂರ್ವಾರ್ಧದಲ್ಲಿ ವಿಶೇಷವಾಗಿ ತೊಡಗಿಸಿಕೊಂಡಿದ್ದರು.

ನಗರದಲ್ಲಿ 8 ಸಾಯಂಶಾಖೆಗಳು, 3 ಪ್ರಭಾತ್ ಶಾಖೆಗಳು, 1 ರಾತ್ರಿಶಾಖೆ ನಡೆಯುತ್ತಿದ್ದು, ವಾರದ ಸಾಂಘಿಕ್‌ನಲ್ಲಿ ಸಂಖ್ಯೆ 300ರ ಗಡಿದಾಟ್ಟಿದ್ದೂ ಇದೆ. 1974ರಲ್ಲಿ ಮೂರನೇ ಸರಸಂಘಚಾಲಕರಾದ ಬಾಳಾಸಾಹೇಬ್ ದೇವರಸ್ ಅವರು ಆಗಮಿಸಿದ್ದು, ಇಂದಿನ ಎಐಟಿ ಕಾಲೇಜ್ ಆವರಣದಲ್ಲಿ ಬೃಹತ್ ಶಿಬಿರ, ನಗರದಲ್ಲಿ ಗಣವೇಷಧಾರಿಗಳ ಬೃಹತ್ ಪಥಸಂಚಲನ ವಿಶೇಷವಾಗಿ ಗಮನ ಸೆಳೆದಿತ್ತು.

ತುರ್ತುಪರಿಸ್ಥಿತಿ ಘೋಷಿಸಿದ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಸಂಘದ ಮೇಲೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದ ಸಂದರ್ಭದಲ್ಲೂ ಸಂಘಕಾರ್ಯ ಜಿಲ್ಲೆಯಲ್ಲಿ ಅಂತರಗಂಗೆಯಂತೆ ಪ್ರವಹಿಸುತ್ತಲೇ ಇತ್ತು. ನಗರದ ವಿಜಯಪುರದ ಬ್ಯಾಂಕ್ ಸಿಬ್ಬಂದಿಯೊಬ್ಬರ ಮನೆಯಲ್ಲಿ ರಕ್ಷಾಬಂಧನ, ಗುರುಪೂಜಾ, ಹಿಂದೂ ಸಾಮ್ರಾಜ್ಯೋತ್ಸವ ಸೇರಿದಂತೆ ಎಲ್ಲ ವಾರ್ಷಿಕ ಉತ್ಸವಗಳು ನಡೆಯುತ್ತಲೇ ಇತ್ತು. ತುರ್ತುಪರಿಸ್ಥಿತಿ ಪ್ರತಿಭಟಿಸಿ ಸಭೆ ಸತ್ಯಾಗ್ರಹ ನಡೆಸಿ ಜನಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಮುಂದಾದ ದೊಡ್ಡತಂಡವೇ ಸಂಘದ ಕಾರ್ಯಕರ್ತರದ್ದಾಗಿತ್ತು. ಡಿ.ಐ.ಆರ್., ಮೀಸಾದಡಿ ಅನೇಕ ಪ್ರಮುಖರು ಬಂಧಿತರಾದರು. ಸತ್ಯಾಗ್ರಹ ನಡೆಸಿ ತಂಡೋಪತಂಡವಾಗಿ ನೂರಾರು ಸ್ವಯಂಸೇವಕರು ಜೈಲುಸೇರಿದರು. ರಹಸ್ಯಸ್ಥಳದಲ್ಲಿ ‘ಕಹಳೆ’ ಮುದ್ರಣಗೊಂಡು ತುರ್ತುಪರಿಸ್ಥಿತಿಯ ಭೀಕರತೆಯನ್ನು ಜನಮನಕ್ಕೆ ಮುಟ್ಟಿಸುತ್ತಿತ್ತು. ಜನತಾಪಕ್ಷ ರಚನೆಗೊಂಡಾಗ ಬಿ.ಎಸ್. ವಿಠಲ್‌ರಾವ್ ನೇತೃತ್ವದ ಜನಸಂಘದ ತಂಡ ಜಿಲ್ಲೆಯಲ್ಲಿ ಸಕ್ರಿಯವಾಗಿದ್ದು, ರಾಜಕಾರಣ – ಚುನಾವಣೆಯಲ್ಲಿ ತೊಡಗಿತು.

ಕೇಂದ್ರದಲ್ಲಿ ಜನತಾ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಬಸವನಹಳ್ಳಿ ಶಾಲಾ ಮೈದಾನದಲ್ಲಿ ನರೇಂದ್ರ ಸಾಯಂಶಾಖೆ ಮತ್ತು ಛತ್ರಪತಿ ಪ್ರಭಾತ್ ಶಾಖೆಯೊಂದಿಗೆ ಸಂಘಕಾರ್ಯ ಬಹಿರಂಗವಾಗಿ ಪುನರಾರಂಭಗೊಂಡಿತು. ತುರ್ತುಪರಿಸ್ಥಿತಿಯ ಭೀಕರತೆಗೆ ಸಿಕ್ಕು ಹಲವರು ಜರ್ಜರಿತರಾಗಿದ್ದರು. ಕೌಟುಂಬಿಕ ತೊಂದರೆ, ವರ್ಗಾವಣೆ, ಸ್ಥಳಾಂತರದಿಂದ ಶಾಖೆಗಳ ಸಂಖ್ಯೆ ಸೀಮಿತಗೊಂಡಿತು. 2-3 ವರ್ಷಗಳಲ್ಲೆ ಮರುಹುಟ್ಟು ಪಡೆದು ಶಂಕರಪುರದಂತಹ ನಿರ್ಲಕ್ಷಿತ ಪ್ರದೇಶದಲ್ಲೂ ಚಿಗುರೊಡೆಯಿತು. ಎಂ.ಕೆ.ವಾಸುದೇವ, ಅಚ್ಯುತ ಪೈ, ಗುರುನಾಥ ರಾವ್, ತ್ರಿವಿಕ್ರಮ ಪ್ರಭು, ಉಮೇಶ್ ರಾವ್, ಪ್ರಭುಲಿಂಗ ಶಾಸ್ತ್ರಿ, ನರಸಿಂಹಪೈ, ರಾಮಚಂದ್ರ, ರಮಾನಾಥ ರಾವ್, ದಾಮೋದರ, ನಾರಾಯಣಾಚಾರ್, ಸ.ರಾಜು, ಸ.ಕುಮಾರ ಮತ್ತಿತರರು ಮುಂಚೂಣಿ ಸ್ವಯಂಸೇವಕರು.

ಕಳಸಾಪುರದಲ್ಲಿ ವೈದ್ಯರಾಗಿದ್ದ ಡಾ. ಕೃಷ್ಣಮೂರ್ತಿ, ಈಶ್ವರಹಳ್ಳಿ ಶ್ರೀರಾಮ, ಬೆಳವಾಡಿ ತಿಪ್ಪೇಸ್ವಾಮಿ, ತರೀಕೆರೆಯಲ್ಲಿ ಓಂಕಾರಪ್ಪ, ಭವರಲಾಲ್ ನಾಹರ್, ಕಡೂರಿನಲ್ಲಿ ಅನಂತಪದ್ಮನಾಭ, ಲಕ್ಷ್ಮೀನಾರಾಯಣ, ಬಿ.ಎಲ್. ಶ್ರೀನಿವಾಸ್, ಶೃಂಗೇರಿಯಲ್ಲಿ ವಿದ್ಯಾನಂದ ಶೆಣೈ, ಶಿವಗುರುಪ್ರಸಾದ್, ಕೊಪ್ಪದಲ್ಲಿ ಪಿ.ಎ.ಬಾಲಕೃಷ್ಣ ಮತ್ತು ಸುಬ್ಬರಾವ್, ಕಳಸದಲ್ಲಿ ಸತ್ಯನಾರಾಯಣ, ದತ್ತ ಭಟ್, ಗಜೇಂದ್ರಗೊರಸು ಕೊಡುಗೆ, ಬಾಳೆಹೊನ್ನೂರಿನಲ್ಲಿ ವಿಠ್ಠಲ್ ರಾವ್, ಶ್ರೀನಿವಾಸ ಭಂಡಾರಿ, ವಿದ್ಯಾನಂದ ಭಟ್ಟ, ಮೂಡಿಗೆರೆಯಲ್ಲಿ ದಯಾನಂದ ನಾಯಕ್, ಎಂ.ಆರ್.ಜಗದೀಶ್, ವಾದಿರಾಜಾಚಾರ್, ಆಲ್ದೂರಿನಲ್ಲಿ ಪಿ.ಎ.ಕುಟ್ಟಪ್ಪ, ಕೆ.ಎನ್.ನಂಜರಾಜ್, ಡಾ. ರಾಜಾರಾಂ ಶೆಟ್ಟಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

90ರ ದಶಕದಲ್ಲಿ ವೆಂಕಟೇಶ್ ಸಾಗರ, ಕ.ರಾ.ಶಿವಸ್ವಾಮಿ, ರಾಮಚಂದ್ರ, ಪ್ರೇಮಕುಮಾರ್, ಎಚ್.ಗೋಪಿನಾಥ, ಉಮೇಶ್, ಅನಂತ, ಶಾಮ, ಲಕ್ಷ್ಮೀನರಸಿಂಹಯಾಜಿ, ರಾಜಾಶಂಕರ, ಪ್ರಶಾಂತ ಅವರನ್ನೊಳಗೊಂಡ ತಂಡ ಸಂಘಕಾರ್ಯದಲ್ಲಿ ಪ್ರಮುಖಪಾತ್ರವಹಿಸಿದ್ದರೆ, 2000ದ ನಂತರ ವಿಜಯಕುಮಾರ್, ಓಂಕಾರಪ್ಪ, ಲಕ್ಷ್ಮೀನಾರಾಯಣ ರಾವ್, ಮಲ್ಲಿಕಾರ್ಜುನರಾವ್, ಕೇಶವ ಮೂರ್ತಿ, ಕನಕರಾಜ ಅರಸ್, ದೀಪಕ್ ದೊಡ್ಡಯ್ಯ, ಎಚ್.ಎಸ್.ಪುಟ್ಟೇಗೌಡ ಮತ್ತಿತರರು ಕ್ರಿಯಾಶೀಲರಾಗಿ ಮುನ್ನಡೆಸುತ್ತಿದ್ದಾರೆ.

ಕಾರ್ಯಾಲಯ: 50ರ ದಶಕದಲ್ಲಿ ಸಂಘಕಾರ್ಯಾಲಯ ನಗರ ಮಧ್ಯಭಾಗದ ಷರೀಫ್‌ಗಲ್ಲಿಯ ಚಿಕ್ಕ ಕೊಠಡಿಯಲ್ಲಿ ಕಾರ್ಯಾಂಭಿಸಿದ್ದು, ಕೆ.ಆರ್.ಶತ್ರುಘ್ನ ಅವರ ಪ್ರಯತ್ನದ ಫಲವಾಗಿ ಬಸ್‌ನಿಲ್ದಾಣ ಸಮೀಪದ ವೈಶ್ಯ ಹಾಸ್ಟೆಲ್ ಕಟ್ಟಡದ ಕೊಠಡಿಯೊಂದಕ್ಕೆ ಸ್ಥಳಾಂತರಗೊಂಡಿತು. ಒಂದೂವರೆ ದಶಕ ಇಲ್ಲಿಂದಲೇ ಕಾರ್ಯನಿರ್ವಹಣೆಯಾಗುತ್ತಿದ್ದು, ಕೆಲಕಾಲ ಕ್ರಿಶ್ಚಿಯನ್ ಕಾಲೋನಿಯ ಕೆನರಾ ಹೊಟೇಲ್‌ನ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಬಸವನಹಳ್ಳಿಯ ರಾಯರಮಠದ ಮುಂಭಾಗ ಆನಂದ ರಾವ್ ಕಟ್ಟಡಕ್ಕೆ ಸಂಘಕಾರ್ಯಾಲಯ ವರ್ಗಾವಣೆಗೊಂಡಿದ್ದು, ತುರ್ತುಪರಿಸ್ಥಿತಿಯಲ್ಲೂ ಇಲ್ಲಿಂದ ಸೂಚನೆಗಳು ಬರುತ್ತಿದ್ದವು. ಸಂಘ ಚಟುವಟಿಕೆಗೆ ಸ್ವಂತ ಕಟ್ಟಡದ ಅಗತ್ಯತೆ ಮನಗಂಡ ವಿಭಾಗ ಪ್ರಮುಖರು ಪ್ರಯತ್ನ ಆರಂಭಿಸಿದಾಗ ಅಂದಿನ ಸಂಘಚಾಲಕ ಕೆ.ಆರ್. ಶತ್ರುಘ್ನ ಮುಂದೆ ಬಂದು ಸ್ವಯಂಸೇವಕರೆಲ್ಲಾ ಸೇರಿ ನಿವೇಶನವೊಂದನ್ನು ಖರೀದಿಸಿದರೆ ತಾವು ಕಟ್ಟಡ ಕಟ್ಟಿಸಿಕೊಡುವ ಭರವಸೆಯಿತ್ತರು. ಆದರೆ ಸಂಘದ ಪ್ರಮುಖರು ಇದಕ್ಕೊಪ್ಪದೆ ಸ್ವಯಂಸೇವಕರೆಲ್ಲರ ಪರಿಶ್ರಮದಿಂದಲೇ ಕಟ್ಟಡ ನಿರ್ಮಾಣವಾಗಬೇಕು. ನಿವೇಶನ ದಾನ ನೀಡಬಹುದೆಂದು ಸೂಚಿಸಿದರು. ತಾಲ್ಲೂಕು ಪ್ರಚಾರಕರಾಗಿದ್ದ ಶಿವಮೊಗ್ಗದ ಶ್ರೀಪಾದ್ ಶಂಕರಪುರದಲ್ಲಿ ಸಂಸ್ಕಾರ ಕೇಂದ್ರ ನಡೆಸುತ್ತಿದ್ದು, ಅಲ್ಲಿ ಕ್ರೈಸ್ತ ಮತಾಂತರ ತಡೆಗಟ್ಟುವ ನಿಟ್ಟಿನಲ್ಲಿ ಅದೇ ಪ್ರದೇಶದಲ್ಲಿ ಜಿಲ್ಲಾ ಕಾರ್ಯಾಲಯ ಇರಬೇಕೆಂದು ಅವರು ಬಯಸಿದರು. ಹಿರಿಯ ಕಾರ್ಯಕರ್ತ ರಂಗಣ್ಣನವರ ಮನೆಪಕ್ಕ ‘ವೆಂಕಟೇಶ್ ಕೃಪ’ ಕಟ್ಟಡವನ್ನೇ ಖರೀದಿಸಿ ಸ್ವಂತ ಕಾರ್ಯಾಲಯ ಕಟ್ಟಡದ ಕನಸನ್ನು ನನಸು ಮಾಡಿಕೊಡಲಾಯಿತು. ಇಲ್ಲಿ ಮಹಡಿಯಲ್ಲಿ ಅನೇಕ ವಿದ್ಯಾರ್ಥಿ ವಿಸ್ತಾರಕರು ವಾಸ್ತವ್ಯ ಹೂಡಿದ್ದರಿಂದ ಜೊತೆಗೆ ಪರಿವಾರ ಸಂಘಟನೆಗಳ ಪೂರ್ಣಾವಧಿ ಕಾರ್ಯಕರ್ತರು ಇರುತ್ತಿದ್ದು, ನಿಜಾರ್ಥದ ನಿತ್ಯ ಕಾರ್ಯಾಲಯ ಇದಾಯಿತು. 2010ರ ದಶಕದಲ್ಲಿ ಸಂಘಕಾರ್ಯದ ಅಗಾಧತೆಗೆ ಅನುಗುಣವಾಗಿ ಸುಸಜ್ಜಿತವಾದ ಆಧುನಿಕತೆಯ ಸ್ಪರ್ಶದ ವಿಶಾಲ ಕಾರ್ಯಾಲಯ ಕಟ್ಟಡ ನಿರ್ಮಿಸುವ ಉದ್ದೇಶದಿಂದ ಸಮರ್ಪಣಾ ಟ್ರಸ್ಟ್ ಅಸ್ಥಿತ್ವಕ್ಕೆ ಬಂತು. ನಗರದಲ್ಲೆ ವ್ಯವಸ್ಥಿತ ಬಡಾವಣೆ ಎನಿಸಿಕೊಂಡ ಶ್ರೀಸಾಯಿ ಮಧುವನದಲ್ಲಿ ಸಂಘದ ಅನೇಕ ಪ್ರಮುಖ ಪ್ರಭಾವಿ ಕಾರ್ಯಕರ್ತರು ಮನೆ ಹೊಂದಿದ್ದು, ಇದೇ ಆಯಕಟ್ಟಿನ ವಿಶಾಲ ನಿವೇಶನವನ್ನು ಆಯ್ಕೆಮಾಡಿ ಆರಂಭಿಸಿದ ಕಟ್ಟಡ ಸುಂದರವಾಗಿ ಮೂಡಿಬಂದಿದೆ. ಸಮರ್ಪಣಾ ಭವನ ಸಮಾಜಾರ್ಪಣೆಗೊಳ್ಳುತ್ತಿದೆ. ಸ್ವಯಂಸೇವಕರು, ಹಿತೈಷಿಗಳು ದೊಡ್ಡ ಪ್ರಮಾಣದಲ್ಲಿ ನೆರವು ನೀಡಿದ್ದಾರೆ.

ಸ್ಫೂರ್ತಿಯ ಸೆಲೆ: ಜಿಲ್ಲೆಯಲ್ಲಿ ಸಂಘಕಾರ್ಯಕ್ಕೆ ಒತ್ತಾಸೆಯಾದವರು ನೂರಾರುಮಂದಿ. ಮಾನನೀಯ ನ.ಕಷ್ಣಪ್ಪ ಅವರ ನೇರಪ್ರಭಾವ ಅಧಿಕ. ಸರ್ವಶ್ರೀ ಕೃ. ಸೂರ್ಯನಾರಾಯಣ ರಾವ್, ಹೊ.ವೆ.ಶೇಷಾದ್ರಿ, ಸು.ರಾಮಣ್ಣ, ಸುಬ್ಬು ಶ್ರೀನಿವಾಸ್, ನಂ.ವೆಂಕೋಬರಾವ್, ಶ್ವೇತಾದ್ರಿ, ಪಿ.ವಿ.ಕೃಷ್ಣಭಟ್ಟ, ಪುರುಷೋತ್ತಮರಾವ್, ಕೃ.ನರಹರಿ ಸ್ಫೂರ್ತಿಯ ಸೆಲೆಯಾದವರು. ಸೀತಾರಾಮ ಕೆದಿಲಾಯ, ಶ್ರೀಧರ ಸಾಗರ್, ರಘುಪತಿ ಶಾಸ್ತ್ರಿ, ಕೇಶವ ಮೂರ್ತಿ, ನಾಗೇಂದ್ರ, ಶ್ರೀಪಾದರಾವ್, ನಾಗರಾಜ್, ಶ್ರೀಪಾದ, ಲಕ್ಷ್ಮೀನಾರಾಯಣ, ಕೃಷ್ಣಮೂರ್ತಿ, ಬಾಲಕೃಷ್ಣ ಪ್ರಚಾರಕರುಗಳಾಗಿ ಜಿಲ್ಲೆಗೆ ಮಾರ್ಗದರ್ಶನ ನೀಡಿದ್ದಾರೆ.

ಅರಳಿದ ಪುಷ್ಪಗಳು: ಸಮಾಜಸೇವೆಗೆ ಇಲ್ಲಿಂದ ಅರಳಿದ ಪುಷ್ಪಗಳು ಅಸಂಖ್ಯಾತ. ಒಂದೇಮನೆಯಿಂದ ಪ್ರಚಾರಕರಾಗಿ ಹೊರಟ ಶೃಂಗೇರಿಯ ಡಾ. ಉಪೇಂದ್ರ ಶೆಣೈ ಮತ್ತು ವಿದ್ಯಾನಂದ ಶೆಣೈ, ಪ್ರಕಾಶ್ ಕಾಮತ್ (ಈಗ ವನವಾಸಿ ಕಲ್ಯಾಣಾಶ್ರಮದ ಜಾರ್ಖಂಡ್ ಸಂಚಾಲಕರು), ದು.ಗು.ಲಕ್ಷ್ಮಣ, ಭಂಡಿಗಡಿಯ ಜಗದೀಶ್ ಕಾರಂತ ಮತ್ತು ಮಂಜುನಾಥ ಸ್ವಾಮಿ, ಕಳಸದ ದಿನೇಶ್ ಕಾಮತ್, ಹಿರೇಮಗಳೂರಿನ ಚಕ್ರವರ್ತಿ ತಿರುಮುಗನ್, ಪ್ರಬೋಧಿನಿಯ ಉಮೇಶ್ ರಾವ್ ಹೊಮ್ಮಿಸುತ್ತಿರುವ ಸುಗಂಧ ರಾಜ್ಯ – ರಾಷ್ಟ್ರವ್ಯಾಪಿಯಾಗಿ ಪಸರಿಸಿರುವುದು ಹೆಮ್ಮೆಯ ಸಂಗತಿ.

ಪರಿವಾರ ಸಂಘಟನೆಗಳು: ಸಂಘ ಕಾರ್ಯಕ್ಕೆ ಪೂರಕವಾಗಿ ರಾಷ್ಟ್ರೀಯ ಚಿಂತನೆಯೊಂದಿಗೆ ಸಮಾಜದ ವಿವಿಧಕ್ಷೇತ್ರಗಳ ಸಂಘಟನೆಗಳು ಜಿಲ್ಲಾದ್ಯಂತ ತನ್ನದೇ ಪ್ರಭಾವವನ್ನು ಧಾರೆಯೆರೆದಿವೆ.

ವಿಶ್ವಹಿಂದೂಪರಿಷತ್ ಕಾರ್ಯವನ್ನು ಸಂಘಟಿಸುವಲ್ಲಿ ಕೇಶವ ಹೆಗಡೆ, ದಯಾನಂದ ನಾಯಕ್, ವಿಠಲ್‌ರಾವ್, ಅಣ್ಣಪ್ಪ ಶೆಟ್ಟಿ, ತಿಪ್ಪೇ ಸ್ವಾಮಿ, ಚಿಕ್ಕೊಳಲೆ ಸದಾಶಿವ ಶಾಸ್ತ್ರಿ, ಬೊಗಸೆ ಶಿವಶಂಕರ, ಶ್ರೀಕಾಂತ ಪೈ, ಮಹಾವೀರ ತಂಡದ ಸೇವೆ ಸ್ಮರಣೀಯ.

ದತ್ತಪೀಠ ಮುಕ್ತಿ ಆಂದೋಲನ ಹಿಂದೂಪರ ಅಲೆಯನ್ನು ರಾಜ್ಯಾದ್ಯಂತ ಸೃಷ್ಟಿಸುವಲ್ಲಿ ಪ್ರಮುಖಪಾತ್ರ ವಹಿಸಿದೆ. ಪಶ್ಚಿಮಘಟ್ಟ ಸಾಲಿನ ಶ್ರೀಗುರು ದತ್ತಾತ್ರೇಯ ಪೀಠದಲ್ಲಿ ದತ್ತ ಜಯಂತಿಯನ್ನು 70ರ ದಶಕದಿಂದಲೇ ಕಾಶೀರಾವ್, ಶಂಕರನಾರಾಯಣ, ಡಾ. ಐ.ಕೆ.ನಾರಾಯಣ, ಸದಾಶಿವ ಶಾಸ್ತ್ರಿಗಳು, ಕಳಸಾಪುರ ರಾಮ ಸ್ವಾಮಿ, ಟೈಪಿಸ್ಟ್ ಕೃಷ್ಣಮೂರ್ತಿ ತಂಡ ನಿರಂತರವಾಗಿ ನಡೆಸಿಕೊಂಡು ಬರುತ್ತಿತ್ತು. ದಕ್ಷಿಣ ಅಯೋಧ್ಯೆ ಎಂದು ಪರಿಗಣಿತವಾದ ನಂತರ ಕೇಶವಹೆಗ್ಡೆ, ಪ್ರಮೋದ್ ಮುತಾಲಿಕ್, ಸುನೀಲ ಕುಮಾರ್, ಸಿ.ಟಿ.ರವಿ ನೇತೃತ್ವದಲ್ಲಿ ಈ ಆಂದೋಲನ ಕಾವು ಪಡೆಯಿತು.

70ರ ದಶಕದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಪಿ.ವಿ. ಕೃಷ್ಣಭಟ್ ಮತ್ತು ಪಿ.ಜಿ.ಆರ್. ಸಿಂಧ್ಯಾ ಅವರ ಪ್ರಯತ್ನದಿಂದ ಜಿಲ್ಲೆಯಲ್ಲಿ ಆರಂಭಗೊಂಡಿದ್ದು, ಟಿ.ಎನ್. ಬಾಲಕೃಷ್ಣ ಮೊದಲ ಕಾರ್ಯದರ್ಶಿ. 80ರಲ್ಲಿ ಪ್ರಾಂತ್ಯ ಅಭ್ಯಾಸ ವರ್ಗ ಇಲ್ಲಿ ನಡೆದಿದ್ದು ದಾಸೇಗೌಡ ಪೂರ್ಣಾವಧಿ ಕಾರ್ಯಕರ್ತರಾಗಿ ಹೊರಟರು. ಗುರುಮೂರ್ತಿ ನಂತರ ಪ್ರಭುಲಿಂಗಶಾಸ್ತ್ರಿ – ಪ್ರೇಮಕುಮಾರ್ – ಸೀತಾರಾಮಭರಣ್ಯ ನೇತೃತ್ವದಲ್ಲಿ ನಿಜಾರ್ಥದ ಸರ್ವಸ್ಪರ್ಶಿ ಪ್ರಭಾವಿ ಸಂಘಟನೆ ಎನಿಸಿಕೊಂಡಿತು.

80ರ ದಶಕದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯನ್ನು ಡಿ.ಸುಧಾಮಣಿ ನಗರದಲ್ಲಿ ಪ್ರಾರಂಭಿಸಿದರು. ಗಿರಿಜಾ ರಾಮಸ್ವಾಮಿ, ಪ್ರತಿಭಾ ಹೆಗ್ಡೆ, ಕಸ್ತೂರಕ್ಕ, ವೀಣಾ ಶೆಣೈ, ಸರೋಜಿನಿ ಕಿಣಿ, ಶ್ಯಾಮಲಾಪಾಣಿ, ರೇಖಾ, ಮೋಹಿನಿ ಸಿದ್ದೇಗೌಡ, ಸೌಭಾಗ್ಯ ಶೇಷಾದ್ರಿ, ವಿಜಯಲಕ್ಷ್ಮೀರಾಜು ಕೈಜೋಡಿಸಿದ್ದಾರೆ.

ಹಿಂದೂಸೇವಾ ಪ್ರತಿಷ್ಠಾನದ ಮಹಿಳಾ ಸೇವಾವೃತಿಗಳ ಶಿಬಿರ 80ರ ದಶಕದ ಮಧ್ಯಭಾಗದಲ್ಲಿ ನಗರದಲ್ಲಿ ನಡೆದಿದ್ದು, ಅನೇಕ ಸೇವಾ ಚಟುವಟಿಕೆಗಳಿಗೆ ಪ್ರೇರಣೆ ಒದಗಿಸಿತು. ವಿಶೇಷವಾಗಿ ಸೇವಾವೃತಿ ವಿಜಯಾಯಾಜಿ ಸಂಸ್ಕೃತ ಸಂಭಾಷಣಾ ಶಿಬಿರಗಳಿಗೆ ಮೇಲ್ಪಂಕ್ತಿ ಹಾಕಿದರು.

ಎಂ. ಪುರುಷೋತ್ತಮ ರಾಯರ ಪರಿಶ್ರಮದಿಂದ ಭಾರತೀಯ ಕಿಸಾನ್ ಸಂಘ ಜಿಲ್ಲೆ ಪ್ರವೇಶಿಸಿದ್ದು, ಕಳಸದ ಸುಬ್ಬರಾಯ ಪ್ರಭುಗಳು ಅಂದೇ ರಾಜ್ಯಾಧ್ಯಕ್ಷರಾಗಿದ್ದರು. ಇಂದಿನ ಅಧ್ಯಕ್ಷರು ಇಲ್ಲಿಯ ಐ.ಎಂ. ಬಸವೇ ಗೌಡ. ಮಾಧ್ಯಮಿಕ ಶಿಕ್ಷಕ ಸಂಘದ ಸಂಘಟನೆಗೆ ಬೀರೂರಿನ ಮಾಲತೇಶ್, ಆಲ್ದೂರಿನ ವಾಸುದೇವ್, ನಗರದ ಲಕ್ಷ್ಮೀನಾರಾಯಣ, ಸೂರ್ಯನಾರಾಯಣ ಭಟ್ಟ, ಚಂದ್ರಶೇಖರ್ ಅವರ ಸೇವೆ ಅನನ್ಯ.

ಭಾರತೀಯ ಮಜ್ದೂರ್ ಸಂಘ ಎಸ್.ಬಿ. ಶ್ವೇತಾದ್ರಿಯವರ ಪ್ರಯತ್ನದಿಂದ ಜಿಲ್ಲೆಯಲ್ಲಿ ಅಸ್ತಿತ್ವ ಕಂಡುಕೊಂಡಿತು. ಆಯನೂರು ಮಂಜುನಾಥ ಅಧ್ಯಕ್ಷತೆಯಲ್ಲಿ ಕೊಪ್ಪ ಶಂಕರ ಸಾರಿಗೆ ನೌಕರರ ಸಂಘಟನೆ, ಭದ್ರಾವತಿ ಬಾಲಕೃಷ್ಣ, ತರೀಕೆರೆಯ ಷಡಕ್ಷರಿ ಮತ್ತು ಕುಮಾರ್ ನೇತೃತ್ವದ ವಿಜ್ಞಾನ ಇಂಡಸ್ಟ್ರಿಸ್ ನೌಕರರ ಸಂಘ ಬಲಿಷ್ಠವಾಗಿತ್ತು. ಮೋಹನ ಕುಮಾರ್ ರಂಜೋಳಕರ್ ತೋಟ ಕಾರ್ಮಿಕರ ಸಂಘಟನೆಯಲ್ಲಿ ತೊಡಗಿದ್ದರು. ರತ್ನಾಕರರಾವ್ ಮತ್ತು ಘನಶ್ಯಾಮ್ ಆಳ್ವ ನೇತತ್ವದಲ್ಲಿ ಚಿ.ಕೊ. ಗ್ರಾಮೀಣ ಬ್ಯಾಂಕ್ ನೌಕರರ ಸಂಘ, ದಿವಾಕರ ಭಟ್ ಮತ್ತು ಗೋವಿಂದ ಮುಂದಾಳತ್ವದಲ್ಲಿ ಪಿ ಆ್ಯಂಡ್ ಟಿ ನೌಕರರ ಸಂಘಟನೆ, ಅಚ್ಯುತಪೈ ಅಧ್ಯಕ್ಷತೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಸಂಘಟನೆ ರಾಷ್ಟ್ರೀಯ ವಿಚಾರಕ್ಕೆ ಪೂರಕವಾಗಿ ಅರಳಿದ್ದವು.

80ರ ದಶಕದಲ್ಲಿ ವಿದ್ಯಾನಂದ ಶೆಣೈಯವರಿಂದ ರಾಷ್ಟ್ರೋತ್ಥಾನ ಬಳಗಗಳು, ಅನಂತರ ಚಕ್ರವರ್ತಿ ಪ್ರಯತ್ನದಿಂದ ಸಂಸ್ಕಾರ ಭಾರತಿ ಜಿಲ್ಲೆಯನ್ನು ಪ್ರವೇಶಿಸಿತು. ಕೆ.ಆರ್.ಶಿವಸ್ವಾಮಿ, ಗೋಪಿನಾಥ ಪೈ ಬಳಗ ಕಟ್ಟುವಲ್ಲಿ ಪ್ರಮುಖವಾಗಿ ಶ್ರಮಿಸಿದರು.

ಭಾರತೀಯ ಜನಸಂಘ ಆರಂಭಿಕ ವರ್ಷದಲ್ಲೆ ಜಿಲ್ಲೆಯಲ್ಲಿ ಟಿಸಿಲೊಡೆದಿತ್ತು. ಬಿ.ಎಸ್.ವಿಠಲರಾವ್, ಶ್ರೀಕಂಠ ಭಟ್, ಕೃಷ್ಣಭಟ್, ತಿಪ್ಪೇಸ್ವಾಮಿ, ವಿಠಲಾಚಾರ್ಯ, ಎಂ.ಎನ್. ಪ್ರಭು, ರತ್ನಾಕರ ಪ್ರಭು, ರತೀಶ ಕುಮಾರ್ ಪ್ರಮುಖವಾಗಿ ಕಾರ್ಯನಿರ್ವಹಿಸಿದ್ದರು. ಮಹಾಮೈತ್ರಿಯಲ್ಲಿ ತೀರ್ಥಹಳ್ಳಿಯ ಬಿ.ವಿ.ಚಂದ್ರಶೇಖರ್ ಲೋಕಸಭೆಗೆ ಸ್ಪರ್ಧಿಸುವ ಮೂಲಕ ಬೆಳಕುಕೊಡುವ ದೀಪವನ್ನು ಜಿಲ್ಲೆಗೆ ಪರಿಚಯಿಸಿದರು.

1980ರ ಬಿ.ಜೆ.ಪಿ. ರಚನೆಯ ನಂತರ ಡಿ.ಸಿ.ಶ್ರೀಕಂಠಪ್ಪ, ವಿಠಲರಾವ್, ತರೀಕೆರೆ ಗಂಗಾಧರಪ್ಪ, ಎನ್.ಮಂಜುನಾಥ, ಕಡೂರಿನ ಬಿ.ಎಲ್.ಶ್ರೀನಿವಾಸ್, ಬಸಪ್ಪ, ಜಿ.ಎಂ.ಎನ್.ಆರಾಧ್ಯ, ಮೂಡಿಗೆರೆಯ ಜಯಪ್ರಕಾಶ್, ವಾದಿರಾಜಾಚಾರ್, ಶೃಂಕೋನದ ಶ್ರೀಕಂಠ ಭಟ್ಟ – ಕೃಷ್ಣ ಭಟ್ – ಬಾಲಕೃಷ್ಣ ಭಟ್ಟ, ನಗರದ ಮಂಜುನಾಥ ಕಾಮತ್ ಮುಂಚೂಣಿಯಲ್ಲಿ ಕಾಣಿಸಿಕೊಂಡರು. 90ರ ದಶಕದಲ್ಲಿ ಶ್ರೀದೇವಿ, ದೇವಾನಂದ, ಹೊಸಳ್ಳಿ ಗಿರೀಶ್, ಡಿ.ಎನ್.ಜೀವರಾಜ್, ಸಿ.ಟಿ.ರವಿ, ಪ್ರಾಣೇಶ್, 2000ರ ನಂತರ ಅತ್ತಿಕಟ್ಟೆ ಜಗನ್ನಾಥ್, ಎಂ.ಪಿ.ಕುಮಾರಸ್ವಾಮಿ, ಪೃಥ್ವೀ, ಡಿ.ಎಸ್.ಸುರೇಶ್, ಡಾ. ವಿಶ್ವನಾಥ್ ಮತ್ತಿತರರು ಮುನ್ನಡೆಸುತ್ತಿದ್ದಾರೆ.

ಚಿ.ಸ.ಪ್ರಭುಲಿಂಗಶಾಸ್ತ್ರಿ

   

Leave a Reply