ಶ್ರದ್ಧಾಂಜಲಿ

ಪಂಡಿತ್.ದೀನದಯಾಳ್ ಲೇಖನಗಳು - 0 Comment
Issue Date : 17.10.2014

ನನ್ನ ಸಹಯೋಗಿಯೇ,

ಶ್ರದ್ಧಾಂಜಲಿಯನ್ನು ಸ್ವೀಕರಿಸು. ನೀನು ಬದುಕಿದ್ದಾಗ ಒಂದೆರಡು ಪ್ರಶಂಸೆಯ ಶಬ್ದಗಳನ್ನು ಬರೆಯುವುದಂತಿರಲಿ, ಮುಖದಿಂದ ಆಡಲೂ ಇಲ್ಲ. ಕಲ್ಲಿಕೋಟೆ ಅಧಿವೇಶನದಲ್ಲಿ ನೀನು ಜನಸಂಘದ ಅಧ್ಯಕ್ಷನಾದಾಗ, ಆ ಗೌರವ ಸಿಕ್ಕಿದುದಕ್ಕಾಗಿ ನಿನ್ನ ಮಿತ್ರ ಮತ್ತು ನಿಕಟ ಸಹವರ್ತಿಯಾಗಿದ್ದುದರಿಂದ ಪ್ರಶಂಸೆಯ ಒಂದೆರಡು ಶಬ್ದಗಳನ್ನು  ಬರೆಯೋಣವೆಂದೆನ್ನಿಸಿತು. ಆದರೆ  ಇದು ನಮ್ಮ ನಡುವೆ ಔಪಚಾರಿಕತೆಯ ವಿಷಯವಾಗಿ ತೋರಿ ನಿನಗೆ  ಹಿಡಿಸುವುದಿಲ್ಲವೆಂದು ತಕ್ಷಣ ಅನ್ನಿಸಿತು. ಬರೆಯುವ ವಿಚಾರ ಬಿಟ್ಟುಬಿಟ್ಟೆ. ಆದರೆ ಈಗ  ನನ್ನ ಮಾತುಗಳನ್ನು  ಕೇಳಲು ನೀನಿಲ್ಲ. ಇದನ್ನು  ನೀನು ಓದಲಾರೆ. ಆದ್ದರಿಂದ ಅಶ್ರುಪೂರ್ಣ ನಯನಗಳಿಂದ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇನೆ.  ಯಾರ  ಸ್ನೇಹಪೂರ್ಣ ಮಾರ್ಗದರ್ಶನದಲ್ಲಿ ನಾನು ಕಾರ್ಯ ಮಾಡುತ್ತಿದ್ದೆನೋ ಆ ಭಯ್ಯಾಜಿ ದಾಣಿ ಎರಡೂವರೆ  ವರ್ಷಗಳ ಹಿಂದೆ ಹೊರಟುಹೋದರು. ಈಗ  ಕ್ರೂರ  ಕಾಲಪುರುಷನು ಸಂಘಕಾರ್ಯದಲ್ಲಿ  ನನ್ನ ಅತಿನಿಕಟ ಜೊತೆಗಾರ  ಸಹಯೋಗಿಯನ್ನೂ ಕಸಿದುಕೊಂಡಿದ್ದಾನೆ.

  1937ರ ಜುಲೈನಲ್ಲಿ ಸಂಘಕಾರ್ಯ ಮತ್ತು ಓದಿಗಾಗಿ ನಾನು ಲಖ್ನೋಗೆ ಬಂದೆ. ಆ ವರ್ಷದ ಕೊನೆಯಲ್ಲೆ ಕಾನ್ಪುರದಲ್ಲಿ ನಮ್ಮಿಬ್ಬರ ಪ್ರಥಮ ಭೇಟಿಯಾಯಿತು. ಮಕರ ಸಂಕ್ರಮಣದಂದು ಕಾನ್ಪುರ ಶಾಖೆ ಪ್ರಾರಂಭವಾದಾಗ ನೀನು ಆ ಶಾಖೆಯ ಪ್ರಥಮ ಸ್ವಯಂಸೇವಕನಾದೆ.  ಅಂದಿನಿಂದ ನಿರಂತರವಾಗಿ  ನಮ್ಮ ಸ್ನೇಹ  ಬೆಳೆಯುತ್ತ ಹೋಯಿತು. ನೀನು  1939ರಲ್ಲಿ ಕಾನ್ಪುರದಲ್ಲಿ  ಓದು ಮುಗಿಸಿ ಎಂ. ಎ. ಓದಲು ಆಗ್ರಾಗೆ   ಹೋದೆ.  ನನ್ನ ಓದು ಮುಗಿದಿತ್ತು.  ನಾನೂ ನಿನ್ನ ಹಿಂದೆ  ಆಗ್ರಾಗೆ ಬಂದೆ. ಆಗ್ರಾದಲ್ಲಿ ಸಂಘ  ಪ್ರಾರಂಭಿಸುವ  ಯತ್ನ ನಿನ್ನದೇ ಆಗಿತ್ತು.  ನೀನು  ಆಗ್ರಾದಿಂದ  ಪ್ರಯಾಗಕ್ಕೆ ಬಂದು ಎಲ್. ಟಿ. ಓದತೊಡಗಿದೆ. ನಮ್ಮ ಸಂಬಂಧ ಬೆಳೆಯುತ್ತಲೇ ಹೋಯಿತು. ಓದು ಮುಗಿದ  ಕೂಡಲೇ ನೀನು  ಏನೂ ಮಾತನಾಡದೆ  ಸಂಘದ  ಪ್ರಚಾರಕನಾಗಿ  ಹೊರಟುಬಂದೆ. ಪರಮಾತ್ಮ ಈ ಉದ್ದೇಶಕ್ಕಾಗಿಯೇ ನಿನಗೆ  ಜನ್ಮ ಕೊಟ್ಟಿದ್ದ.

ಆ ಪ್ರಾರಂಭದ ದಿನಗಳಲ್ಲಿ ಸಂಘಕಾರ್ಯದ  ಮಾರ್ಗ ಅತ್ಯಂತ  ‘ಕಂಟಕಾಕೀರ್ಣ’ವಾಗಿದ್ದಾಗ ನೀನು  ಆ ಕಾರ್ಯಕ್ಕಾಗಿ ಮುಂದೆ ಬಂದೆ. ಆಗ ಉತ್ತರ ಪ್ರದೇಶದಲ್ಲಿ  ಜನರಿಗೆ ಸಂಘದ  ಬಗ್ಗೆ ಏನೂ  ಗೊತ್ತಿರಲಿಲ್ಲ. ಸ್ವಯಂಸೇವಕನಾದ ನೀನು  ಈ ಭಾರವನ್ನು ನಿನ್ನ ಹೆಗಲಮೇಲೆ ಹೊತ್ತುಕೊಂಡೆ. ಉತ್ತರಪ್ರದೇಶದಲ್ಲಿ  ಸಂಘಕಾರ್ಯದ ಆಧಾರಶಿಲೆ ನೀನೇ ಆಗಿದ್ದೆ.  ಅಲ್ಲಿ ಸಂಘದ  ಇಂದಿನ  ರೂಪ ನಿನ್ನದೇ ಪರಿಶ್ರಮ  ಮತ್ತು ಕರ್ತೃತ್ವದ ಫಲವಾಗಿದೆ.  ಅನೇಕ ಕಾರ್ಯಕರ್ತರು ನಿನ್ನ ಜೀವನದಿಂದ  ಪ್ರೇರಣೆ  ಪಡೆದು ಈ ಮಾರ್ಗದಲ್ಲಿ ಮುಂದುವರೆಯುತ್ತಿದ್ದಾರೆ. ನೀನು ಬದುಕಿದ್ದಾಗ ಈ ಮಾರ್ಗದಲ್ಲಿ  ಮುಂದುವರೆಯಲು ಅನೇಕರಿಗೆ  ಪ್ರೋತ್ಸಾಹ ನೀಡುತ್ತಿದ್ದೆ.  ಇಂದು ನಿಧನ ಹೊಂದಿದ ಮೇಲೂ ಈ ಕರ್ತವ್ಯಪಥದಲ್ಲಿ ಮುನ್ನಡೆಯಲು  ಕೋಟ್ಯಾಂತರ ದೇಶವಾಸಿಗಳಿಗೆ  ಪ್ರೇರಣೆ  ನೀಡುತ್ತಿರುವೆ. ‘ರಾಷ್ಟ್ರಸೇವೆಯ ಮಾರ್ಗ ಮಾನಸಮ್ಮಾನದ ಮಾರ್ಗವಲ್ಲ, ಕಂಟಕಾಕೀರ್ಣವಾದುದು. ಈ ಮಾರ್ಗದಲ್ಲೆ ನಾವು  ನಿರಂತರವಾಗಿ  ಮುಂದುವರೆಯಬೇಕು’ ಎಂದು ನಿನ್ನ ‘ಬಲಿದಾನ’ ನಿತ್ಯವೂ ನೆನಪು ಮಾಡುತ್ತಿರುತ್ತದೆ.

ಆದರ್ಶ ಸ್ವಯಂಸೇವಕನೇ,

ಆದರ್ಶ ಸ್ವಯಂಸೇವಕನ ಗುಣಗಳ ಬಗ್ಗೆ ಸಂಘಸ್ಥಾಪಕರ ಮುಖದಿಂದ  ಭಾಷಣಗಳನ್ನು  ಕೇಳಿದ್ದೆ.  ನೀನು  ಆ ಗುಣಗಳ ಮೂರ್ತ ಪ್ರತೀಕವಾಗಿದ್ದೆ. ಪ್ರಖರ ಬುದ್ಧಿಶಕ್ತಿ, ಅಸಾಮಾನ್ಯ ಕರ್ತೃತ್ವವಿದ್ದರೂ ನಿರಹಂಕಾರ, ನಮ್ರತೆಯ ಆದರ್ಶ. ಉಜ್ವಲ ವಿಚಾರಗಳು  ಮತ್ತು ಗಂಭೀರ ಚಿಂತನೆಯ ಜೊತೆಗೆ ಸಾದಾ ಸರಳ ಜೀವನ ಮತ್ತು ಸಂಘದ  ಸ್ವಯಂಸೇವಕರು ಜೀವನದ  ಸತತ ಸಾಧನೆಯ  ವಿಷಯಗಳೆಂದು  ತಿಳಿಯುವ ಇತರ ಎಲ್ಲ ವಿಷಯಗಳ  ಮನೋಹರ ಸಂಗಮವನ್ನು ನಿನ್ನಲ್ಲಿ ಕಂಡು  ಆಶ್ಚರ್ಯವಾಗುತ್ತಿತ್ತು. ನಿನ್ನಲ್ಲಿ ಅಸಾಮಾನ್ಯ ವಕ್ತೃತ್ವ ಕಲೆಯಿತ್ತು.  ಆದರೆ ಭಾಷಣ ಬಿಗಿಯುವುದರ ಬಗ್ಗೆ ಜಂಭ ಅಥವ ಅಭಿಮಾನ ನಿನ್ನ ಹತ್ತಿರವೂ ಸುಳಿದಿರಲಿಲ್ಲ. ನೀನು ಉಚ್ಚಕೋಟಿಯ ಲೇಖಕನಾಗಿದ್ದೆ. ಆದರೆ ಸ್ವಂತದ ಡೋಲು ಬಾರಿಸುವುದರಿಂದ ದೂರ, ಬಹಳ ದೂರ. ರಾಜಕೀಯ ಕ್ಷೇತ್ರದಲ್ಲಿ ಪ್ರವೇಶ ಮಾಡಿ ನಾಯಕನಾದೆ, ಹಾರಗಳನ್ನು  ಧರಿಸಿದೆ, ಸ್ವಂತದ ಜಯಜಯಕಾರ  ಕೇಳಿದೆ, ಪತ್ರಿಕೆಗಳಲ್ಲಿ ನಿನ್ನ ಫೋಟೋ ನೋಡಿದೆ, ಇಡೀ ದೇಶದಲ್ಲಿ ಖ್ಯಾತಿ ಗಳಿಸಿದೆ, ಆದರೆ ಸದಾ ‘ಆದರ್ಶ ಸ್ವಯಂಸೇವಕ’ನಾಗಿಯೇ  ಉಳಿದ್ದಿದೆ. ರಾಜಕೀಯವು ನಿನ್ನೊಳಗೆ  ಎಂದೂ ಪ್ರವೇಶಿಸಿರಲಿಲ್ಲ. ನಿರ್ಮಲ  ಪಾವಿತ್ರ್ಯದ ಕಾರಣ ರಾಜನೀತಿಯ ವಾರಾಂಗನೆಯು  ನಿನ್ನನ್ನು  ಮುಟ್ಟುವ ಸಾಹಸವನ್ನೂ ಮಾಡಲಾಗಲಿಲ್ಲ. ರಾಜಕೀಯದ ಅಮಲಂತೂ ದೂರವೇ ಉಳಿಯಿತು.

ಗೀತೆಯಲ್ಲಿ ನಾನು ಸಾತ್ವಿಕ ಗುಣಗಳ ವರ್ಣನೆ ಕೇಳಿದ್ದೇನೆ, ದೈವೀ ಸಂಪತ್ತಿನ  ಮಾತು ಕೇಳಿದ್ದೇನೆ. ಅನಾಸಕ್ತ  ನಿಷ್ಕಾಮ ಕರ್ಮಯೋಗಿ ಮುಂತಾದ ಶಬ್ದಗಳೂ ಕಿವಿಯ ಮೇಲೆ ಬೀಳುತ್ತಿದ್ದವು. ಆದರೆ ಅವುಗಳನ್ನು  ಪ್ರತ್ಯಕ್ಷ ಆಚರಣೆಯಲ್ಲಿ ತಂದು ನೀನು ಚರಿತಾರ್ಥಗೊಳಿಸಿದೆ. ಶುದ್ಧ ಚಾರಿತ್ರ್ಯ, ಪ್ರಖರ ದೇಶಭಕ್ತಿ, ಲೋಕಸಂಗ್ರಹಿ, ಸಮಾಜದ  ಸುಖದುಃಖಗಳೊಡನೆ ಏಕರೂಪವಾಗುವ  ವಿಶಾಲ ಹೃದಯ ! ನಿಜವಾಗಿಯೂ ನಿನ್ನ ಸಮಾನ ನೀನೇ !

ಸಂಘದ  ಪೂಜನೀಯ ಆದ್ಯ ಸರಸಂಘಚಾಲಕರ ನೆನಪು ಬರುತ್ತದೆ. ಕೆಲವು ವಿಷಯಗಳಲ್ಲಿ ಎಷ್ಟೊಂದು  ವಿಲಕ್ಷಣ ಹೋಲಿಕೆ ಕಂಡುಬರುತ್ತದೆ ! ಅವರಂತೆಯೇ ತಂದೆತಾಯಿಗಳು ನಿನ್ನನ್ನು  ಬಾಲ್ಯಕಾಲದಲ್ಲೇ ಬಿಟ್ಟಗಲಿದರು. ಅವರು  ದಾರಿದ್ರ್ಯದಲ್ಲಿ ಜನಿಸಿದರು, ನೀನೂ ಅಷ್ಟೇ. ಆದರೆ ಅವರಂತೆಯೇ ನೀನೂ ಸ್ವಾವಲಂಬನೆಯಿಂದ  ಶ್ರೇಷ್ಠ ಶಿಕ್ಷಣ ಗಳಿಸಿದೆ. ವಿದ್ಯಾರ್ಥಿ ಜೀವನದಲ್ಲೇ ರಾಷ್ಟ್ರಸೇವೆಯ ವ್ರತ ಸ್ವೀಕರಿಸಿ ಧನ, ಸುಖ, ಪರಿವಾರ ಮುಂತಾದ ಎಲ್ಲ ರೀತಿಯ ಮೋಹಮಾಯೆಗಳನ್ನು  ತ್ಯಜಿಸಿ ರಾಷ್ಟ್ರದೇವನ ಚರಣಗಳಲ್ಲಿ ನಿನ್ನನ್ನು  ನೀನು ಅರ್ಪಿಸಿಕೊಂಡೆ. ಸಂಘಸ್ಥಾಪಕ ಪೂಜನೀಯ ಡಾಕ್ಟರಜಿಯವರು ಅಹೋರಾತ್ರಿ 15 ವರ್ಷಗಳು  ಸಂಘಕಾರ್ಯ ಮಾಡುತ್ತ, ಆ ಪರಿಶ್ರಮದಲ್ಲೇ ತಮ್ಮ ಜೀವನವನ್ನು  ಸವೆಸಿ ಹೊರಟುಹೋದರು. ನೀನು ರಾಜಕೀಯ ಕ್ಷೇತ್ರದಲ್ಲಿ ಜನಸಂಘಕ್ಕಾಗಿ 15 ವರ್ಷ ಕಾಲ ಶರೀರದ  ಕಣಕಣವನ್ನೂ ಉರಿಸಿ ಆತ್ಮಾಹುತಿ ಮಾಡಿಕೊಂಡೆ.  ಪೂಜನೀಯ ಡಾಕ್ಟರಜಿ 51 ವರ್ಷ ವಯಸ್ಸಿನಲ್ಲಿ      ನಮ್ಮನ್ನಗಲಿದರು.  ಅದೇ  ವಯಸ್ಸಿನಲ್ಲಿ ಇಹಲೋಕ  ತ್ಯಜಿಸಿದ ನೀನು ಅವರ ನಿಜವಾದ ಅನುಯಾಯಿ  ಆದೆ. ರಾಷ್ಟ್ರಸಮರ್ಪಿತ ಜೀವನದ ಉಪಲಬ್ಧಿಯ ಉಚ್ಚ ಬಿಂದುವಿನಿಂದ  ನಿನ್ನನ್ನು  ಈಗ ಯಾರೂ ತೆಗೆದುಹಾಕುವಂತಿಲ್ಲ. ನಿನ್ನ ಬಲಿದಾನ  ಅಲ್ಲಿಂದ ಅನೇಕ ಅಂತಃಕರಣಗಳನ್ನು ಬೆಳಗುತ್ತಿರುತ್ತದೆ. ಇಂದು ನಿನ್ನ ಶ್ರೇಷ್ಠತೆಯನ್ನು  ಸಮಾಜ ಎಷ್ಟೆಂದು ಗುರುತಿಸಬಲ್ಲದು? ಆದರೆ ಭವಿಷ್ಯದ ಇತಿಹಾಸವು ನಿನ್ನ ವಿಚಾರ  ಮತ್ತು ಕಾರ್ಯವನ್ನು  ಈ ದೇಶದಲ್ಲಿ ತೇಜಸ್ವೀ, ಶಕ್ತಿಶಾಲಿ ರೂಪದಲ್ಲಿ ನೋಡುವುದು ನಿಶ್ಚಿತ.  ಮಹಾಪುರುಷರ ಶ‍್ರೇಣಿಯಲ್ಲಿ ನಿನ್ನ ಪರಿಗಣನೆಯಾಗಲಿದೆ. ಸ್ವಾಮಿ ದಯಾನಂದ, ಶ‍್ರದ್ಧಾನಂದ, ಮಹಾತ್ಮಾಗಾಂಧಿ ಮುಂತಾದ  ಹುತಾತ್ಮರ ಮಾಲಿಕೆಯಲ್ಲಿ ನೀನು ಪೋಣಿಸಲ್ಪಡುವೆ. ದೇಶವು ನಿನ್ನನ್ನು  ಸದಾ ಗೌರವಿಸುವುದು.

ನನ್ನ ಸಮವಯಸ್ಕ ಸ್ನೇಹಿತನೇ!

ರಾಜಕೀಯ ಕ್ಷೇತ್ರದಲ್ಲಿ ವ್ಯಕ್ತಿ ಮತ್ತು ನೀತಿಯ ಸಂಬಂಧದಲ್ಲಿ ನಿನ್ನಂತೆ ಕಠೋರತೆಯಿಂದ ಸ್ಪಷ್ಟ ಟೀಕೆಯನ್ನು  ಕೇಳುವವರು ಬೇರೆ ಯಾರಿದ್ದಾರು?: ಅಂತಹ ಮಿತ್ರ ಈಗಿಲ್ಲ. ನಿನ್ನಂತೆ ಎಲ್ಲವನ್ನೂ ಸಹಿಸುವ  ಶಕ್ತಿ ಕಾಣಸಿಗುವುದು ಅತ್ಯಂತ ವಿರಳ.  ಸಂಘ ಕ್ಷೇತ್ರದಲ್ಲಿನ ಸಮಸ್ಯೆಗಳ ವಿಶ್ಲೇಷಣೆ ಮತ್ತು ಪರಿಹಾರಕ್ಕಾಗಿ ನಿನ್ನಂಥ ಸಹಯೋಗಿ ಸ್ನೇಹಿತನನ್ನು ಎಲ್ಲಿ ಹುಡುಕಲಿ? ಈಗ  ಎಲ್ಲವೂ ಮೌನವಾಗಿದೆ. ಮೌನವಾಗಿಯೇ ಕರ್ತವ್ಯಪಥದಲ್ಲಿ ನಡೆಯಬೇಕು, ಮುಂದೆ ಸಾಗಬೇಕು.

ನಾಗಪುರದ ಸಂಘ ಬೈಠಕ್‍ಗಳಲ್ಲಿ ಇನ್ನುಮುಂದೆ ನಿನ್ನ ಭೇಟಿಯಾಗುವುದಿಲ್ಲ. ಅವ್ಯವಸ್ಥಿತ, ಅಸ್ತವ್ಯಸ್ತವಾಗಿ ಬಿದ್ದಿದ್ದ ಸಾಮಾನು, ರಾತ್ರಿ ಬಹಳ ಹೊತ್ತಿನವರೆಗೆ ಜಾಗರಣೆಯಿಂದಿರುವ  ಮತ್ತು ಹಾಗೆಂದೇ ಬೆಳಿಗ್ಗೆ ತಡವಾಗಿ ಏಳುವ  ‘ಹತ್ತಿರ’ದ ಆ ಸ್ಥಾನ ಈಗ ಖಾಲಿಯಾಗಿರುತ್ತದೆ.  ‘ಪಂಡಿತ್‍ಜೀ, ಚಹ ತಯಾರಾಗಿದೆ, ಏಳಿ’ ಎಂದು ಕೂಗುತ್ತಿದ್ದ ನಾನು ಇನ್ನು ಮುಂದೆ  ಸದಾ ಕಾಲಕ್ಕೂ ಮೌನವಾಗಿರುತ್ತೇನೆ. ಊಟದ ಸಮಯದಲ್ಲಿ ನೀನು ಕಾಣಿಸದಿದ್ದುದನ್ನು ನೋಡಿ ‘ಅರೇ, ಪಂಡಿತ್‍ಜಿಯವರನ್ನು  ಬಚ್ಚಲು ಮನೆಯಲ್ಲಿ ಹುಡುಕಿ’ ಎಂದು ಹೇಳುವ  ನನ್ನ ವಿನೋದದ ಮಾತುಗಳು ಈಗ  ಸಮಾಪ್ತಗೊಂಡಿವೆ.  ಕೇಂದ್ರೀಯ ಬೈಠಕ್‍ಗಳಲ್ಲಿ ಎಲ್ಲ ಪ್ರಶ್ನೆಗಳ ಪಕ್ಷ-ಪ್ರತಿಪಕ್ಷಗಳೆರಡರ ವಿಚಾರ ಮಾಡುವ  ನಿನ್ನ ಪದ್ಧತಿ ಮತ್ತು ನಿನ್ನ ಆ ‘ಖೈರ್’ ಶಬ್ದಪ್ರಯೋಗದ ಬಗ್ಗೆ ನಮ್ಮೆಲ್ಲರ  ಹಾಸ್ಯವಿನೋದ, ಆ ಮಧುರ ಗಳಿಗೆಗಳೆಲ್ಲ ಈಗ ಕೇವಲ ಸ್ಮೃತಿಕಣಗಳಾಗಿ ಉಳಿದಿವೆ. ಜೊತೆಗೆ ಲಖ್ನೋದಲ್ಲಿ ಅಕಸ್ಮಾತ್ ಭೇಟಿಯಾದಾಗ
ಸಹಜವಾಗಿ ನಡೆಯುತ್ತಿದ್ದ ಆಮೋದ-ಪ್ರಮೋದ ಕಾರ್ಯಕ್ರಮಗಳ ಜೊತೆಗಾರ ಇನ್ನಿಲ್ಲ.

ನಿನ್ನ ಲೇಖನ, ವಾಣಿ, ಮಾತುಕತೆ ಎಲ್ಲವೂ ಎಂದೆಂದಿಗೂ ನಿಂತುಹೋಗಿವೆ. ಹೇ ಸಹಯೋಗಿ ಹುತಾತ್ಮ ! ನನ್ನ  ಪ್ರಣಾಮಗಳನ್ನು  ಸ್ವೀಕರಿಸು ಮತ್ತು ಕರ್ತವ್ಯಪಥದಲ್ಲಿ ಮುನ್ನಡೆಯಲು  ಸತತ ಪ್ರೇರಣೆಯ ಶಕ್ತಿ ಕೊಡುತ್ತಿರು. ಇದೇ ನಮ್ರ ಪ್ರಾರ್ಥನೆ. 

  • ಶ್ರೀ ಭಾವೂರಾವ್ ದೇವರಸ್
   

Leave a Reply