ಸಿದ್ಧಿ

ಚಿಂತನ - 0 Comment
Issue Date : 08.10.2014

ಸಾಧನೆಯಿಂದ ಮಾತ್ರವೇ ಸಿದ್ಧಿ. ಸಾಧನೆಗಾಗಿ ಸಾಧಕ ತನ್ನ ಗುರಿಯನ್ನು ತಲುಪಲು ಮಾಡಬೇಕಾದ ಸತ್ಕಾರ್ಯ ಸಾಧನೆ ಎನ್ನಿಸಿಕೊಳ್ಳುತ್ತದೆ. ಯೋಗ್ಯ ಗುರುವಿನ ಮಾರ್ಗದರ್ಶನ ಯೋಗ್ಯ ದಾರಿ ಇವು ಸಿದ್ಧಿಯ ಸಾಧನ.
ಇಹ ಮತ್ತು ಪರವನ್ನು ಜೋಡಿಸುವ ಮಾತ್ರವಲ್ಲ , ಇಹವನ್ನೇ ಪರವನ್ನಾಗಿ ಅರಳಿಸುವ ಸಾಧನ ಯೋಗ. ಯೋಗ ಎಂದರೇ ಜೋಡಿಸುವುದು ಎಂಬ ಅರ್ಥವೂ ಇರುವುದು ಇಲ್ಲಿ ಗಮನಿಸಬೇಕಾದ ಅಂಶ.
ಯೋಗ ಸಾಧಕ ಯೋಗಿ. ಈ ಸಾಧನೆಯಿಂದ (ಹಠಯೋಗ) ಎಂಟು ಸಿದ್ಧಿಗಳು ಉಂಟಾಗುತ್ತವೆ. ಅಣಿಮಾ (ಅಣು ಭಾವ ಪಡೆಯುವುದು) ಮಹಿಮಾ (ಅತಿ ದೊಡ್ಡದಾಗುವುದು) ಲಘಿಮಾ (ಹಗುರವಾಗುವುದು) ಇವು ಯೋಗಿಯ ದೇಹದಲ್ಲಿ ಸಂಭವಿಸುತ್ತವೆ. ಎಲ್ಲಾ ಪ್ರಾಣಿಗಳ ಇಂದ್ರಿಯ ಅಭಿಮಾನಿ ದೇವತೆಗಳೊಡನೆ ಸೇರುವುದು ಪ್ರಾಪ್ತಿ, ಇಹ ಮತ್ತು ಪರ ಲೋಕಗಳ ಭೋಗ ದರ್ಶನ ಸಾಮರ್ಥ್ಯವೇ ಪ್ರಾಕಾಮ್ಯ ಎನ್ನಿಸಿಕೊಳ್ಳುತ್ತದೆ.
ಈಶ್ವರನ ಮಾಯೆ, ಜೀವ ಅವಿದ್ಯಾ ಶಕ್ತಿಗಳನ್ನು ಪ್ರೇರಿಸುವುದು ಈಶ್ವರ, ವಿಷಯ ಭೋಗಗಳಲ್ಲಿ ಅಸಂಗನಾಗಿರುವುದು ವಶಿತ್ವ ಹಾಗೂ ಬಯಸುವ ಎಲ್ಲಾ ಸುಖಗಳ ಪರಾಕಾಷ್ಠೆಯನ್ನು ಪಡೆಯುವುದು ನಿತ್ಯ ಸುಖ ಪ್ರಾಪ್ತಿ ಎನ್ನಿಸಿಕೊಳ್ಳುತ್ತದೆ. ಭಾಗವತವು ನೀಡುವ ಈ ವಿವರವು ತುಂಬಾ ಕುತೂಹಲಕಾರಿ.
ಸಾತ್ತ್ವಿಕ -ರಾಜಸ- ತಾಮಸ ಎಂದು ಯೋಗಶಾಸ್ತ್ರವು ಸಿದ್ಧಿಗಳನ್ನು ವರ್ಗೀಕರಿಸುತ್ತದೆ. ಸಾತ್ತ್ವಿಕ ಸಿದ್ಧಿಗಳು ಸತ್ತ್ವಗುಣ ಪ್ರಧಾನವಾಗಿದ್ದು ಮನ ಮುದಗೊಳಿಸುವುದಲ್ಲದೇ ಜತೆಯಲ್ಲಿದ್ದವರಿಗೂ ಆ ಆನಂದವನ್ನು ಹಂಚುವುದು ವಿಶೇಷ.
ಎಲ್ಲರೂ ಬದುಕಿ ಬಾಳುವ ಅವಕಾಶ ಕಲ್ಪಿಸುವುದರಿಂದ ಸುಖ ಸಾಧಿಸಲು ಸಾಧ್ಯ. ಜಗವೆಲ್ಲ ಅಳುತ್ತಿರುವಾಗ ನಾನೊಬ್ಬ ನಗುವುದು ನಗುವಿನ ಅರ್ಥ ಕಳೆಯುವುದು ಎಂಬ ಅರಿವು ಮೂಡಿದರೆ ಸಾರ್ಥಕವೆನಿಸೀತು. ಆದರೆ ಜಗದ ತುಂಬೆಲ್ಲಾ ನಗು ತಂಬಿದ್ದರೆ ದುಃಖದಲ್ಲಿರುವವನನ್ನು ಅದು ಎತ್ತಿ ಸಂತೈಸುವುದು ಸತ್ಯ.
ಸಾಧನೆಯ ದಾರಿಯಲ್ಲಿ ಸಾಗುತ್ತಿರುವಾಗ ನಡುನಡುವೆ ಕ್ಷುದ್ರ ಸಿದ್ಧಿಗಳು (ಅವು ಕೇವಲ ತಾತ್ಕಾಲಿಕ ನೆಮ್ಮದಿ ನೀಡುವುವು!) ತಮ್ಮ ಇರವನ್ನು ಪ್ರಕಟಿಸುವುದುಂಟು. ಅವು, ಅಧಮ ಹಾಗೂ ಅಧಮಾಧಮ ಎಂದು ತಿಳಿಸುವ ಜ್ಞಾನ ಸಿಂಧು ತನ್ನೊಂದಿಗಿನ ಜಗಕೆ ಪ್ರತಿಕೂಲವೆನಿಸುವ ಇವು ಶಾಶ್ವತ ಸುಖಕ್ಕೆ ಮಾರಕ ಎಂದಿದೆ. ಹಕ್ಕಿಯಂತೆ ಹಾರುವ, ಮೀನಿನಂತೆ ತೇಲುವ ಸಿದ್ಧಿ ಸಂಪಾದಿಸಿದರೆ ವಿಶೇಷವೇನಿಲ್ಲ. ಏಕೆಂದರೆ ಹಕ್ಕಿ – ಮೀನುಗಳ ಸಹಜ ಕ್ರಿಯೆ ಇದು. ಇಂಥ ಸಿದ್ಧಿಗಳ ಸಂಪಾದನೆಗೆ ದೇವರು ನಮಗೆ ದಯಪಾಲಿಸಿದ ಅಮೂಲ್ಯ ಆಯಸ್ಸನ್ನು ವ್ಯಯಮಾಡುವುದು ಸಲ್ಲದು.
ನಮ್ಮೊಳಗೆ – ಹೊರಗೆ, ಚರಾಚರ ಸೃಷ್ಟಿಯಲ್ಲಿ ತುಂಬಿರುವ ಪರಮಶಕ್ತಿಯ ಅರಿವು ಪಡೆಯುವುದೇ ನಿಜವಾದ ಸಿದ್ಧಿ. ತನಗೆ ಸುಖ ನೀಡುದುದನ್ನು ಹೆರವರ ಕುರಿತೂ ಆಚರಿಸದಿರುವ ಮನೋಧರ್ಮ ಸಾಧಿಸಿದರೆ ಸಾಕು ಎಲ್ಲಾ ತೆರನ ಸುಖಸಂಪದಗಳು ನಮ್ಮ ಕಾಲಬುಡಕ್ಕೆ ಬಂದು ಬೀಳುತ್ತವೆ. ಉಪನಿಷತ್ತಿನ ಮಾತಿನಲ್ಲಿ ಹೇಳುವುದಾದರೆ ‘ಬ್ರಹ್ಮಜ್ಞಾನ ಪಡೆಯುವುದೇ ನಿಜವಾದ ಸಿದ್ಧಿ’ (ಭೌತಿಕ ಸುಖ ಸಂಪದವೀವ ಸಿದ್ಧಿಗಳು ಕ್ಷಣಿಕ.)

  • ಶ್ರೀನಿಧಿ
   

Leave a Reply