‘ಸ್ವದೇಶಿ’ಯ ಪ್ರೇರಣೆ

ಕರ್ನಾಟಕ ; ಲೇಖನಗಳು - 0 Comment
Issue Date : 15.10.2014

(“ಸ್ವದೇಶಿ”ಯು “ಸ್ವದೇಶ ಭಕ್ತಿ”ಯಂತೆ  ಅಂತಃಪ್ರೇರಿತ ಭಾವನೆ. ಕೇವಲ ಈ ಭಾವನೆಯೇ  ಒಂದು ರಾಷ್ಟ್ರವನ್ನು  ಜೀವಂತವಾಗಿಡಬಲ್ಲದು.  ಬ್ರಿಟಿಷರೊಡನೆ  ಹೋರಾಡುವಾಗ  “ಸ್ವದೇಶಿ”ಯನ್ನು  ಕೇವಲ ಬ್ರಿಟಿಷರನ್ನು ವಿರೋಧಿಸುವ ಸಾಧನವಾಗಿ ನಾವು ಉಪಯೋಗಿಸಿದೆವು. ಈಗ ದೇಶದಲ್ಲಿ “ಸ್ವದೇಶಿ”ಯ ಸ್ಥಾನದಲ್ಲಿ ಸ್ವಾರ್ಥಪೂರಿತ “ವಿದೇಶಿ”ಯು ಸ್ಥಿರವಾಗಿದೆ. ಇದನ್ನು ದೂರಮಾಡಿ ನೈಜ ಸ್ವದೇಶಭಕ್ತಿಯುಳ್ಳ “ಸ್ವದೇಶಿ” ಜೀವನ ಧಾರಣೆಯು ಹೇಗೆ ಸಾಧ್ಯ, ಅದರ ಮೂಲವೆಲ್ಲಿ? ಎಂಬುದನ್ನು  ಶ್ರೀ ಅಗ್ನಿಹೋತ್ರಿಯವರು ತಮ್ಮ ವಿಚಾರಪೂರಿತ ಲೇಖನದಲ್ಲಿ ವಿವರಿಸಿದ್ದಾರೆ.)

‘ಸ್ವದೇಶ ಭಕ್ತಿ’ಯಂತೆ ‘ಸ್ವದೇಶಿ’ಯೂ ಒಂದು ಭಾವನೆ. ಭಾವನೆಯ ಸಂಬಂಧವು ಹೃದಯದೊಡನೆ ಇರುವುದು; ಬುದ್ಧಿಯೊಡನಲ್ಲ. ಆದುದರಿಂದಲೇ ಸ್ವದೇಶಿಯ ಅನುಭವವನ್ನು  ನಾವು ಮಾಡಿಕೊಳ್ಳಬಹುದು; ಆದರೆ ಬುದ್ಧಿಪ್ರಯೋಗದಿಂದ  ತಿಳಿಯುವುದಕ್ಕಾಗಲೀ, ತಿಳಿಸುವುದಕ್ಕಾಗಲೀ ಅಸಾಧ್ಯ.  ಯಾರಾದರೂ ನನ್ನೊಡನೆ ‘ತಮ್ಮಾ, ಸ್ವದೇಶಿ ಎಂದರೇನು?’ ಎಂದು ಕೇಳಿದರೆ ‘ಭಾರತಮಾತಾಕಿ ಜೈ, ಎಂದು ಹೇಳು- ಇದೇ ಸ್ವದೇಶಿ’ ಎಂದು ಉತ್ತರ ಕೊಡುವೆನು. ಏಕೆಂದರೆ  ‘ಸ್ವದೇಶ ಭಕ್ತಿ’ ಮತ್ತು ‘ಸ್ವದೇಶಿ’ ಪದಗಳು ಒಂದೇ ಆಚರಣೆಯ  ಎರಡು ಹೆಸರುಗಳು ಮಾತ್ರ. ಅವುಗಳ ಅಂತರವಿಷ್ಟೇ- ಒಂದು ರಾಷ್ಟ್ರಜೀವನರೂಪೀ ಪ್ರವಾಹದ ಪ್ರಚಂಡಶಕ್ತಿಯ ಆಂತರಿಕ ಮೂಲಸ್ರೋತವಾದರೆ, ಇನ್ನೊಂದು ಅದೇ ಪ್ರವಾಹದ ಕಾರಂಜಿಯಂತೆ ಸುಖ, ಸಮೃದ್ಧಿ ಮತ್ತು ಆನಂದವನ್ನು  ಸುರಿಸುವ  ಪ್ರಕಟ ಸ್ವರೂಪ. ಆದುದರಿಂದ ದೇಶಭಕ್ತಿಯು ರಾಷ್ಟ್ರಕ್ಕೆ ಸಂಜೀವಿನಿಯಂತಿದ್ದರೆ ಸ್ವದೇಶಿಯು ಆ ಜೀವಂತ, ಜಾಗೃತ, ಜಯಶಾಲೀ ರಾಷ್ಟ್ರದ ಪ್ರತೀಕವಾಗಿ ದೇಶವಿದೇಶಗಳಲ್ಲಿ ಹಾರಾಡುವ  ವಿಜಯ ಧ‍್ವಜ. ರಾಷ್ಟ್ರವು ಪರಾಧೀನವಾಗಿದ್ದರೂ ಕೇವಲ ಈ ಭಾವನೆಯೊಂದರಿಂದಲೇ ಅದು ಜೀವಂತ ಇರಬಲ್ಲುದು ಮತ್ತು ಮುಕ್ತಿಗಾಗಿ ಸಂಘರ್ಷವನ್ನೂ ನಡೆಸಬಲ್ಲದು. ಇನ್ನೊಂದೆಡೆ ಈ ಭಾವನೆಯ ಅಭಾವದಲ್ಲಿ ಸ್ವಕೀಯ ಶಾಸಿತ ತಂತ್ರ (ಸ್ವತಂತ್ರವಲ್ಲ) ಇದ್ದರೂ ರಾಷ್ಟ್ರವು ಮೃತಪ್ರಾಯ ಸ್ಥಿತಿಯನ್ನು ಹೊಂದಿ, ಮೆಲ್ಲಗೆ ಕಾಲ ಪ್ರವಾಹದ ಆಘಾತಗಳಿಗೀಡಾಗಿ ಕ್ರಮಶಃ ಕ್ಷೀಣ ಹೊಂದುತ್ತ ನಾಶವಾಗುತ್ತದೆ. ಅನಂತರ ವಿಶ್ವದಲ್ಲಿ ಅದರ ಕುರಿತು ಕೇವಲ ಕಥೆಗಳು ಮಾತ್ರ ಶೇಷವಾಗಿ ಉಳಿಯುವುವು.

ಸ್ವದೇಶಿಯ ಈ ಭಾವನೆಯನ್ನು  ಹೃದಯದಲ್ಲಿ ಅನುಭವಿಸಿದ ನಂತರವೇ ರಾಷ್ಟ್ರದ ಘಟಕನು  ಪರಂಪರಾಗತವಾಗಿ ತನ್ನದಾಗಿರುವ ಆ ‘ಸ್ವ’ ಎಂಬುದರ  ಸಾಕ್ಷಾತ್ಕಾರವನ್ನು ಹೊಂದಲು ಸಮರ್ಥನಾಗುವನು.  ಆರ್ಥಿಕ, ಸಾಮಾಜಿಕ, ರಾಜನೈತಿಕ ಮೊದಲಾದ ಎಲ್ಲ ಕ್ಷೇತ್ರಗಳಲ್ಲಿಯೂ ಅವನು ಸ್ವದೇಶಿಯ ಪ್ರತಿಷ್ಠಾಪನೆ ಮತ್ತು ವಿದೇಶಿಯ ಉನ್ಮೂಲನೆಗಾಗಿ ಬಳುಕದೆ, ಅಚಲನಾಗಿ, ನಿರಂತರ, ದೃಢವಾಗಿ ನಿಲ್ಲುವನು. ವಾಸ್ತವಿಕವಾಗಿ ಇದೇ ಸ್ವದೇಶಿಯ ಆಚರಣೆ; ಇದೇ ಜೀವಂತ ರಾಷ್ಟ್ರದ ಲಕ್ಷಣವಾಗಿದೆ.

ಪ್ರತಿಕ್ರಿಯಾತ್ಮಕ ಪ್ರಯೋಗದ  ಫಲ

ದುರ್ಭಾಗ್ಯದಿಂದ ಇಂದು  ಕೇವಲ ಸ್ವದೇಶದಲ್ಲಿ  ತಯಾರಾಗುವಂತಹ ವಸ್ತುಗಳ ಉಪಯೋಗ ಮಾತ್ರಕ್ಕೆ ಸ್ವದೇಶಿಯ ಅರ್ಥವನ್ನು  ಅನ್ವಯಿಸುವ  ರೂಢಿಯು ಬಂದಿದೆ. 1920 ರಲ್ಲಿ ಕಾಂಗ್ರೆಸ್ಸು ಆಂದೋಲನ ಹೂಡಿ ಬ್ರಿಟಿಷರಿಂದ  ತಯಾರಾದ ಬಟ್ಟೆಗಳಿಗೆ  ಹಾಕಿದ ಬಹಿಷ್ಕಾರ  ಮತ್ತು ಅದರಿಂದುಂಟಾದ ಪ್ರತಿಕ್ರಿಯೆಯೇ ಇದಕ್ಕೆ ಕಾರಣ.  ಇಂಗ್ಲೀಷರೊಡನೆ ಹೋರಾಡುತ್ತಿರುವ  ಆ ಕಾಲದಲ್ಲಿ ಸ್ವದೇಶಿಯ ಪ್ರಯೋಗವನ್ನು  ಒಂದು ಶಸ್ತ್ರದ  ಅರ್ಥದಲ್ಲಿ ಮಾಡಲಾಯಿತು.  ವಿದೇಶಿವಸ್ತ್ರ ಮತ್ತು ವಸ್ತುಗಳನ್ನು  ಹೋಳಿ ಮಾಡಿ ಸುಡುವ ಮೂಲಕ ಇಂಗ್ಲೀಷರ  ವಿರುದ್ಧ ತಿರಸ್ಕಾರವನ್ನು ನಿರ್ಮಾಣ ಮಾಡುವ ಕಾರ್ಯವು ನಡೆಯಿತು.  ಅದರಲ್ಲಿ ನಾವು ಸಫಲರೂ ಆದೆವು.  ಉತ್ತಮ ಹಾಗೂ ಅಗ್ಗದ ದರದಲ್ಲಿ ಸಿಗುವ  ವಿದೇಶಿ ವಸ್ತುಗಳನ್ನೂ ನಾವು ಬಹಿಷ್ಕರಿಸಿದೆವು. ಇಡೀ ದೇಶವನ್ನೇ  ಬ್ರಿಟಿಷರ ವಿರುದ್ಧ ಎದ್ದುನಿಲ್ಲಿಸುವ  ಈ ಪ್ರತಿಕ್ರಿಯೆಯಲ್ಲಿ ನಾವು ಸಮರ್ಥರಾದರೂ ಸ್ವದೇಶಿಯ ಮೂಲ ಭಾವನೆಯಡೆಗೆ ಜನಸಾಮಾನ್ಯರ ಮನಸ್ಸನ್ನು  ಆಕರ್ಷಿಸುವ ಪ್ರಯತ್ನಕ್ಕಾಗಿ  ನಮಗೆ ಅವಕಾಶವೂ ಸಿಗಲಿಲ್ಲ ಮತ್ತು ಅದರ  ಬಗ್ಗೆ ನಾವು ಚಿಂತಿಸಿಯೂ ಇಲ್ಲ. ಅದಕ್ಕಾಗಿಯೇ ಈ ಸಂಘರ್ಷ ಕಾಲದಲ್ಲಿ ಇಂಗ್ಲಿಷರ ವಿರುದ್ಧ ತಿರಸ್ಕಾರವನ್ನು  ನಿರ್ಮಾಣ ಮಾಡಲು  ಸಮರ್ಥರಾದೆವು.   ಆದರೆ  ಸ್ವದೇಶಿಯ ಬಗ್ಗೆ ದೇಶಭಕ್ತಿಪೂರ್ಣ ಸ್ವಾಭಾವಿಕ ಆತ್ಮೀಯತೆಯನ್ನು  ಪ್ರಸ್ತಾಪಿಸಲು ಅಸಮರ್ಥರಾದೆವು.

‘ಸ್ವದೇಶಿ’ಯ ಅದೃಶ್ಯ- ‘ವಿದೇಶಿ’ಯ ಸ್ಥಿರತೆ

ಇಂಗ್ಲಿಷರು ಹೊರಟುಹೋದೊಡನೆ ಅವರ  ವಿರುದ್ಧ ನಿರ್ಮಾಣವಾದ ತಿರಸ್ಕಾರವೂ ಅದೃಶ್ಯವಾಯಿತು.  ಯಾವ ಶತ್ರುವನ್ನು ಓಡಿಸಲು ಸ್ವದೇಶಿಯನ್ನು ಪ್ರಯೋಗಿಸಲಾಯಿತೋ ಆ ಶತ್ರುವೇ ಅದೃಶ್ಯನಾದೊಡನೆ, ‘ಇನ್ನು ಸ್ವದೇಶಿಯ ಅವಶ್ಯಕತೆಯಾದರೂ ಏನು?’ ಎಂಬ ಪ್ರಶ್ನೆಯು ಉತ್ಪನ್ನವಾಯಿತು. ಫಲತಃ ಸ್ವದೇಶಿ ಭಾವನೆಯೇ ಲೋಪವಾಯಿತು.  ಅನುಕೂಲತೆ ಮತ್ತು  ಅವಶ್ಯಕತೆಗಳ ಹೆಸರಿನಲ್ಲಿ ಬಹಿಷ್ಕೃತ ವಿದೇಶಿಯನ್ನೇ ನಾನು ನಮ್ಮ ಸಿಂಹಾಸನದಲ್ಲಿ ಮಂಡಿಸಿದೆವು! ವಿದೇಶಿಯರೇನೋ ಹೋದರು. ಆದರೆ ವಿದೇಶಿ ತತ್ವವು ಸ್ಥಿರವಾಗಿ ಉಳಿಯಿತು. ಇಂಗ್ಲಿಷರು ಹೋದರು. ಆಂಗ್ಲೇಯತೆಯು ಸ್ಥಿರವಾಯಿತು. ನಮ್ಮ ‘ಸ್ವ’ದ್ದೇನೂ ತೋಚಲೇ ಇಲ್ಲ; ಏಕೆಂದರೆ  ನಾವು ಅದರ  ಬಗ್ಗೆ ಎಂದೂ ಚಿಂತಿಸಿಲ್ಲ ಮತ್ತು  ಇದರಿಂದಾಗಿ ಅವಶ್ಯಕತೆಗನುಗುಣವಾಗಿ  ಸ್ವದೇಶಿ ಮತ್ತು ವಿದೇಶಿಯ ಬಗ್ಗೆ ಎಚ್ಚರತಪ್ಪಿ ಏನು ಸಿಕ್ಕಿತೋ ಅದನ್ನು ಹಚ್ಚಿಕೊಂಡೆವು. ಈ ಪ್ರಕಾರ ಆಶ್ಚರ್ಯವೆನಿಸುವ ಅತಿ ಭಯಂಕರ ಸ್ಥಿತಿಯಲ್ಲಿ ಬಂದು ನಾವು ಸಿಲುಕಿಕೊಂಡೆವು! ನಮ್ಮ ಸಂವಿಧಾನವೂ ಆಯಿತು- ಅದು ಬ್ರಿಟನ್ ಮತ್ತು ಅಮೆರಿಕದ ನಕಲನ್ನು ತೆಗೆದು. ನಮ್ಮ ಸಾಮಾಜಿಕ, ಆರ್ಥಿಕ, ರಾಜನೈತಿಕ ಮತ್ತು ಧಾರ್ಮಿಕ ಮನ್ನಣೆಗಳನ್ನು ಘೋಷಿಸಿದೆವು-ಅವು ವಿದೇಶಿ ಪುರಸ್ಕೃತ ವಿಚಾರಧಾರೆಯ ಆಧಾರದ ಮೇಲೆ ! ಪ್ರಗತಿ ತಥಾ ವಿಕಾಸ ಯೋಜನೆಗಳನ್ನು ರಚಿಸಿದೆವು-ಅವೆಲ್ಲವೂ ವಿದೇಶಿ ತಜ್ಞರು  ಮತ್ತು ವಿದೇಶಿ ಅನುಭವದ ಮೇಲೆ ಹೊಂದಿಕೊಂಡು, ಎಷ್ಟರವರೆಗೆಂದರೆ   ರೀತಿನೀತಿ, ವ್ಯವಹಾರ, ವ್ಯವಸ್ಥೆ, ತಿಂಡಿ-ತೀರ್ಥ, ಆಚಾರ-ವಿಚಾರ, ಮಾತುಕತೆ, ಇತ್ಯಾದಿ ಸರ್ವಕ್ಷೇತ್ರಗಳಲ್ಲಿಯೂ ವಿದೇಶಿ ಮಾನದಂಡವೇ  ಸ್ಥಿರವಾಗಿ ನಿಂತಿರುವುದು. ನಮ್ಮ ಮನೆ, ಮಂದಿರ, ಶರೀರ, ಶಹರುಗಳೆಲ್ಲವೂ ವಿದೇಶಿ ವಸ್ತುಗಳಿಂದ ತುಂಬಿತುಳುಕುತ್ತಿವೆ.

 ಹೃದಯದಿಂದ ಸ್ವಾರ್ಥದ  ತಕ್ಕಡಿಗೆ

ಎಂದಾದರೂ ಅಪ್ಪಿತಪ್ಪಿ ಒಬ್ಬನ  ಲಕ್ಷ್ಯವು ಸ್ವದೇಶಿಯ ಕಡೆಗೆ  ಹೊರಳಿದರೆ ಅದು ‘ಮೇಡ್ ಇನ್‍ ಇಂಡಿಯಾ’ದ ಆರ್ಥಿಕ ಅಧಿಷ್ಠಾನದ ಮೇಲೆಯೇ.  ಉತ್ತಮ ವಿಚಾರಶೀಲ  ವ್ಯಕ್ತಿಗಳೂ ‘ಎಲ್ಲಿಯವರೆಗೆ ನಮ್ಮ ಔದ್ಯೋಗಿಕ ಪ್ರಗತಿಯಾಗಿ ದರ ಮತ್ತು ಗುಣದಲ್ಲಿ ವಿದೇಶಿ ಮಾರುಕಟ್ಟೆಗಳೊಡನೆ  ಭಾರತೀಯ  ವಸ್ತುಗಳು ಸ್ಪರ್ಧೆಯನ್ನು  ನಡೆಸಲಾರೆವೋ ಅಲ್ಲಿಯವರೆಗೆ ‘ಸ್ವದೇಶಿ’ಯ ಕೂಗು ಕೇವಲ ಮೂರ್ಖತನ’ವೆಂದು ಹೇಳುತ್ತಿದ್ದಾರೆ.

ನಾವು ನಮ್ಮ ಹೃದಯದಲ್ಲಿ ಅಳವಡಿಸಿಕೊಂಡಿದ್ದ ‘ಸ್ವದೇಶಿ’ ಭಾವನೆಯನ್ನು  ಕಳೆದು ತಕ್ಕಡಿಯ ತಟ್ಟೆಯಲ್ಲಿ ತೂಕಮಾಡಿಕೊಂಡು  ಅದನ್ನು ತಿರಸ್ಕರಿಸುವುದರಲ್ಲಿಯೇ ನಮ್ಮ ಪ್ರಗತಿ ಇದೆ ಎಂದೂ ವಾದಿಸತೊಡಗಿದೆವು. ಒಂದೆಡೆ ಸ್ವದೇಶಭಕ್ತಿಯ ಸ್ಥಾನವನ್ನು   ಬೆಲೆಗೆ  ಕೊಂಡುಕೊಂಡ ಕೆಲವು ಗಜ ಖಾದಿ ಬಟ್ಟೆಯು  ಆಕ್ರಮಿಸಿದೆಯಾದರೆ ಇನ್ನೊಂದೆಡೆ ಸ್ವದೇಶಿಯ ಬೆಲೆಯನ್ನು, ಮಹತ್ವವನ್ನು ನಮ್ಮ ಸ್ವಾರ್ಥದ ಚೌಕಟ್ಟಿನಲ್ಲಿ ನಿರ್ಣಯಿಸಲು ತೊಡಗಿದೆವು.

ವ್ಯಾಖ್ಯೆಗಳೂ ಬದಲಾದವು

 ಈ ಪ್ರಕಾರ ಸ್ವದೇಶಿಯ ಮೂಲ ಭಾವನೆಯು ಕುಂಠಿತವಾಯಿತು.  ಸ್ವದೇಶಿ ಭಾವನೆಯ ಲೋಪವಾದೊಡನೆ ಸ್ವದೇಶದ ಸಂಸ್ಕೃತಿ, ಸಭ್ಯತೆ , ಧರ್ಮ, ಶಿಕ್ಷಣ, ಸಮಾಜ ವ್ಯವಸ್ಥೆಯಿಂದ ಹಿಡಿದು ಕೊನೆಗೆ ಸ್ವದೇಶದ  ಭಾಷೆಯನ್ನಾಡುವವರಿಗೂ ಸಾಂಪ್ರದಾಯಿಕ, ಪ್ರತಿಕ್ರಿಯಾತ್ಮಕ, ಪ್ರತಿಗಾಮಿ ಮೊದಲಾದ  ನಾಮವಿಶೇಷಗಳಿಂದ  ವಿಭೂಷಿತಗೊಳಿಸತೊಡಗಿದರು. ವಿದೇಶಿ ಬಣ್ಣದ ಗಾಜಿನೊಳಗಿನಿಂದ ನೋಡುವವರಿಗೆ, ಸೃಷ್ಟಿಯ ಆದಿಯಿಂದಲೂ ‘ಸರ್ವಾನ್ ಲೋಕಾನ್ ತೃಪ್ಯಾತು’ ಎಂದು ವಿಶ್ವದ ಮಾನವ ಸಮಾಜ ಮಾತ್ರದ ಸುಖದ ಇಚ್ಛೆಯನ್ನು ಮಾಡುತ್ತ ಮಂತ್ರೋಚ್ಛಾರಣೆ ಮಾಡುವ ಭಾರತೀಯ ಸಮಾಜವು ಸಾಂಪ್ರದಾಯಿಕವಾಗಿ ಕಂಡುಬಂದಿತು. ಇಷ್ಟಾದ ಮೇಲೆ ಎಲ್ಲಾ ವ್ಯಾಖ್ಯೆಗಳೂ ಬದಲಾದವು !

ಯುಗದ ಕರೆ- ‘ಸ್ವದೇಶಿ ಅಂತಃಕರಣ’

ಇಂದು ವಿದೇಶಿ ಮತ್ತು ಸ್ವದೇಶಿಯ ಈ ಗೊಂದಲ, ಜಗಳಗಳು ಒಂದು ಭಯಾನಕ ಪರಿಸ್ಥಿತಿಗೆ ನಾವು ಇಳಿಯುವಷ್ಟು ಮುಂದುವರಿದಿವೆ. ಸೃಷ್ಟಿಯ ಪ್ರೇರಣೆ, ರಕ್ಷಣೆಯ ಧರ್ಮ ಮತ್ತು ಧ್ವಂಸಗೊಳಿಸಬಲ್ಲ ಆವೇಶದಿಂದೊಡಗೂಡಿದ  ತ್ರಿಮೂರ್ತಿ ಸಾಕ್ಷಾತ್ಕಾರ  (ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ) ಪಡೆದ ಈ ಸಮಾಜವೇ ‘ಸ್ವ’ವನ್ನು  ಮರೆತರೆ, ಇನ್ನು ವಿಶ್ವದ ಕಲ್ಯಾಣವನ್ನು ಮಾಡುವವರಾದರೂ ಯಾರು? ಅದಕ್ಕಾಗಿಯೇ ಸ್ವದೇಶಿ ಭಾವನೆ-ದೇಶಭಕ್ತಿಪೂರ್ಣ ಅಂತಃಕರಣಗಳ ನಿರ್ಮಾಣವೇ ಈ ಯುಗದ ಕರೆಯಾಗಿದೆ.

ಕೇವಲ ಸಂತೆಯಲ್ಲಿ ವಸ್ತುಗಳನ್ನು  ಕೊಂಡುಕೊಳ್ಳುವಾಗ ಮಾತ್ರವಲ್ಲ, ನಮ್ಮ ಆರ್ಥಿಕ, ರಾಜನೈತಿಕ, ಸಾಮಾಜಿಕ  ಮೊದಲಾದ ಜೀವನದ  ಎಲ್ಲಾ ಕ್ಷೇತ್ರಗಳಲ್ಲೂ ವ್ಯವಹಾರ  ನಡೆಸುವಾಗ ನಮಗೆ  ನಮ್ಮ ‘ಸ್ವ’ದ ಪ್ರೇರಣೆಯನ್ನು ಆಗ್ರಹಪೂರ್ವಕ ಪ್ರತಿಷ್ಠಾಪಿಸಲೇಬೇಕಾಗಿದೆ. ಸ್ವದೇಶಿಯ ಒರೆಗಲ್ಲಿಗೆ  ಹಚ್ಚಿ ಯೋಗ್ಯವೆಂದು ಕಂಡುಬಂದ  ವಿಚಾರ, ರೀತಿ, ನೀತಿ, ವ್ಯವಸ್ಥೆ, ವಸ್ತು ಇತ್ಯಾದಿ ಎಲ್ಲವುಗಳನ್ನು  ಮಾತ್ರವೇ ಸ್ವೀಕಾರಮಾಡುವೆವು. ಇತರವುಗಳು ಎಷ್ಟೇ ಮೋಹಕ, ಆಕರ್ಷಕ, ದೃಷ್ಟಿಗೆ  ಕಲ್ಯಾಣಕಾರಿ ಎಂದು ಕಂಡುಬಂದರೂ, ಎಷ್ಟೇ ಕಡಿಮೆ ಬೆಲೆಗೆ ಸಿಕ್ಕಿದರೂ ಅದು ಸ್ವದೇಶಿಯ  ಒರೆಗಲ್ಲಿಗೆ  ಹಚ್ಚಿ ತಕ್ಕುದಾಗಿದ್ದರೆ ಮಾತ್ರ ಸ್ವೀಕರಿಸುವೆವು. ಇಲ್ಲದಿದ್ದರೆ  ಕೂಡಲೇ ಬಹಿಷ್ಕರಿಸುವೆವು; ವಿಷದಂತೆ ತ್ಯಜಿಸುವೆವು. ಉಚ್ಚಿಷ್ಟ, ಭ್ರಷ್ಟ ಪದಾರ್ಥಗಳಂತೆ  ಧಿಕ್ಕರಿಸುವೆವು.

ಈ ಪ್ರೇರಣೆಯೇ ಸ್ವದೇಶಿಯ ಮೂಲಭಾವನೆ.  ಇದೇ ಅದರ ಆಚರಣೆ. ನಮ್ಮ ದೈನಿಕ ವ್ಯವಹಾರದಲ್ಲಿ  ಬರುವ ಚಿಕ್ಕ ಸಾಬೂನಿನ ತುಂಡಿನಿಂದ ಹಿಡಿದು ಅತಿ ಹೆಚ್ಚಿನ ಅವಶ್ಯಕತೆಯವರೆಗೆ ಮತ್ತು ಅತೀ ಚಿಕ್ಕ ವಿಚಾರದಿಂದ  ಅತೀ ಗಹನ ಸಿದ್ಧಾಂತಗಳವರೆಗೆ ಎಲ್ಲವನ್ನೂ  ಕೇವಲ ಸ್ವದೇಶಿಯ ತತ್ವಕ್ಕನುಗುಣವಾಗಿಯೇ, ಸ್ವದೇಶಿ ಒರೆಗಲ್ಲಿಗೆ  ಹಚ್ಚಿಯೇ ಸ್ವೀಕಾರ ಮಾಡುವ ನಿಶ್ಚಯಪೂರ್ಣ ಆಗ್ರಹವನ್ನು  ನಾವು ಕೈಗೊಳ್ಳಬೇಕಾಗಿದೆ.

 

  • ಶ್ರೀ ರಾಮಶಂಕರ ಅಗ್ನಿಹೋತ್ರಿ

 

 

   

Leave a Reply