TOILET ಒಂದು ಪ್ರೇಮಕಥೆ

ಲೇಖನಗಳು - 0 Comment
Issue Date :

-ಸೌಜನ್ಯ

ಕೇಶವ್ ಸಂಪ್ರದಾಯಸ್ಥ ತಂದೆಯ ಹುಂಬ ಮಗ. ಪಿ.ಯು.ಸಿ. ಮುಗಿಸಿದ್ದೇ ಆತನ ಶೈಕ್ಷಣಿಕ ಸಾಧನೆ.ಅವನಿಗೆ ಲಕ್ಷ ್ಮಣನಂತಹ ಒಬ್ಬ ತಮ್ಮ. ಜಾತಕ ದೋಷದ ಕಾರಣ ಮೂವತ್ತಾರಾದರೂ ಆತನಿಗೆ ಇನ್ನೂ ಮದುವೆಯಾಗಿಲ್ಲ. ಹಾಗೆಂದು ಗರ್ಲ್‌ಫ್ರೆಂಡ್‌ಅನ್ನು ಹಾರಿಸಿಕೊಂಡು ಹೋಗುವ ಇರಾದೆ ಇಲ್ಲ. ಜಾತಕ ದೋಷ ನಿವಾರಣೆಗಾಗಿ ಹಸುವಿನೊಂದಿಗೆ ಆತನ ಮೊದಲ ಮದುವೆಯೂ ಆಗುತ್ತದೆ.

 ಜಯಾ ಉತ್ತರ ಪ್ರದೇಶಕ್ಕೆ ಟಾಪರ್. ಹಳ್ಳಿಯಲ್ಲೇ ಹುಟ್ಟಿ ಬೆಳೆದವಳಾದರೂ ಜಪಾನಿ ಅಗ್ರಿಕಲ್ಚರ್ ಕಲಿತವಳು. ಸುಶಿಕ್ಷಿತ ಧೈರ್ಯವಂತ ಹುಡುಗಿ. ತಂದೆ, ತಾಯಿ, ಕಾಕನ ಮುದ್ದಿನ ಮಗಳು.

 ಇವರಿಬ್ಬರ ನಡುವೆ ಪ್ರೀತಿ ಹುಟ್ಟಲು ಸೈಕಲ್ ದಾರಿ ಮಾಡಿಕೊಡುತ್ತದೆ. ಸೈಕಲ್ ಡೆಲಿವರಿ ಕೊಡಲು ಬಂದವನು ಹೃದಯವನ್ನೂ ಅಲ್ಲಿಯೇ ಬಿಟ್ಟು ಹೋಗುತ್ತಾನೆ. ಸೈಕಲ್ ಜೊತೆಗೆ ಆಕೆ ಆತನನ್ನೂ ಪ್ರೀತಿಸುತ್ತಾಳೆ.

 ಬಲಗೈನಲ್ಲಿ ಆರು ಬೆರಳಿರುವ ಹುಡುಗಿಯೇ ತನ್ನ ಸೊಸೆಯಾಗಿ ಬರಬೇಕೆನ್ನುವುದು ಕೇಶವನ ತಂದೆಯ ಹಠ. ಅಪ್ಪನನ್ನು ಒಪ್ಪಿಸಲು ಆಕೆಗೆ ಇನ್ನೊಂದು ಬೆರಳನ್ನೂ ಜೋಡಿಸಲಾಗುತ್ತದೆ. (ಅದು ಹೇಗೆ, ಏನು ಎಂದು ತಿಳಿಯುವ ಕುತೂಹಲವಿದ್ದರೆ ದಯವಿಟ್ಟು ಸಿನಿಮಾ ನೋಡಿ!)

 ಎಲ್ಲವೂ ಸರಳವಾಗಿ, ಸರಾಗವಾಗಿ ನಡೆಯಿತು ಎನ್ನುತ್ತಿರುವಾಗಲೇ ವಿಲನ್ ಪ್ರವೇಶವಾಗುತ್ತದೆ. ಸಿನಿಮಾ ನಿಜ ಜೀವನಕ್ಕೆ ಹತ್ತಿರವಾಗುವುದು ಇಲ್ಲಿಯೇ.

 ಓಹ್ ! ವಿಲನ್ ಯಾರು ಅಂತ ಕೇಳುತ್ತಿದ್ದೀರಾ?… ಅದೇ toilet.

 ಪ್ರೇಮ ಕತೆಯ ಮಧ್ಯೆ toilet ಏಕೆ ಬಂತು ಎನ್ನುವಿರಾ …..?

 ಕೇಶವನ ಹಳ್ಳಿಯಲ್ಲಿ ಶೌಚಾಲಯ ಕಟ್ಟುವ ಪದ್ಧತಿಯೇ ಇಲ್ಲ. ಹೆಂಗಸರು, ಮಕ್ಕಳಿಂದ ಹಿಡಿದು ಎಲ್ಲರೂ ಮುಂಜಾನೆಯೆದ್ದು, ಚೊಂಬು ಹಿಡಿದು ಗದ್ದೆ ಸಾಲಿಗೆ ಹೋಗುವವರೇ.

 ಜಯಾಳಿಗೆ ಇದನ್ನು ಸಹಿಸಲಸಾಧ್ಯ. ಹುಟ್ಟಿದಂದಿನಿಂದ ಶೌಚಾಲಯ ಉಪಯೋಗಿಸಿದವಳು ಅವಳು. ಹೀಗೆ ಬಯಲಿನಲ್ಲಿ,ಹೆದರಿಕೊಂಡು, ಮುಂಜಾನೆದ್ದು , ಪ್ರತಿದಿನ ಹೋಗುವುದು ನರಕ ಅವಳಿಗೆ. ಹೆಂಡತಿಯ ಸಮಸ್ಯೆಯನ್ನು ನಿಧಾನವಾಗಿ ಅರ್ಥ ಮಾಡಿಕೊಳ್ಳುವ ಗಂಡ, ಸಮಸ್ಯೆಯ ನಿವಾರಣೆಗೆ ಹಲವು ತಾತ್ಕಾಲಿಕ ಉಪಾಯಗಳನ್ನು ಹುಡುಕುತ್ತಾನೆ. ಇತ್ತ ಮನೆಯಲ್ಲೇ ಶೌಚಾಲಯ ಕಟ್ಟಿಸಲು ತಂದೆಯನ್ನು ಒಪ್ಪಿಸುವ ಪ್ರಯತ್ನವನ್ನೂ ಮಾಡುತ್ತಾನೆ. ಆದರೆ ಎರಡೂ ಫಲ ಕೊಡುವುದಿಲ್ಲ. ದಂಪತಿಗಳ ಮಧ್ಯೆ ಬೆಟ್ಟದಷ್ಟು ಪ್ರೀತಿಯಿದ್ದರೂ, ಪ್ರತಿದಿನದ ಪ್ರಹಸನ ಆಕೆಗೆ ಸಾಕಾಗಿದೆ. ನಿಧಾನವಾಗಿ ಕೇಶವನಿಗೆ ಹೆಂಡತಿಯದ್ದು ಕೇವಲ ಸ್ವಂತ ಸಮಸ್ಯೆ ಅಲ್ಲ, ಇದೊಂದು ಸಾಮಾಜಿಕ ಸಮಸ್ಯೆ ಎಂಬುದು ಅರಿವಾಗುತ್ತದೆ. ಇಬ್ಬರೂ ದೂರವಾಗುತ್ತಾರೆ.

 ಅಲ್ಲಿಂದ ಆತನ ಸಂಘರ್ಷ ಪ್ರಾರಂಭವಾಗುತ್ತದೆ. ಹಳ್ಳಿಯ ಪಂಚಾಯತಿ ಕಟ್ಟೆಯಲ್ಲಿ ಮೊದಲ ಬಾರಿ ಶೌಚಾಲಯಕ್ಕಾಗಿ ಧ್ವನಿ ಎತ್ತುತ್ತಾನೆ. ಜನರ ಅಪಹಾಸ್ಯಕ್ಕೆ ಗುರಿಯಾಗುತ್ತಾನೆ. ವಿಚಲಿತನಾಗದ ಕೇಶವ ಜಿಲ್ಲಾಧಿಕಾರಿಗಳವರೆಗೂ ತನ್ನ ಅಹವಾಲನ್ನು ಕೊಂಡೊಯ್ಯುತ್ತಾನೆ. ಒಂದು ಶೌಚಾಲಯಕ್ಕಾಗಿ ಪ್ರಾರಂಭವಾದ ಹೋರಾಟ, ಶೌಚದೊಂದಿಗೆ ಬೆಸೆದುಕೊಂಡ ಹಲವು ಹಗರಣಗಳನ್ನೂ ಬಯಲಿಗೆಳೆಯುತ್ತದೆ. ಮಂತ್ರಿಮಾನ್ಯರುಗಳು ಎಚ್ಚತ್ತುಕೊಳ್ಳುವಂತೆ ಮಾಡುತ್ತದೆ. ಜಯಾ, ಕೇಶವನಿಗೆ ಸಹಕಾರಿಯಾಗುವಂಥ ಹಲವು ದಾಖಲೆಗಳನ್ನೂ ಒದಗಿಸುತ್ತಾಳೆ. ಮಾಧ್ಯಮದವರ ಗಮನ ಸೆಳೆಯುತ್ತಾಳೆ. ಇಬ್ಬರೂ ತಮ್ಮೊಡಲ ಪ್ರೇಮವನ್ನು ಬಚ್ಚಿಟ್ಟುಕೊಂಡು, ತಮಗೆ ಸರಿ ಎನಿಸಿದ ಉದ್ದೇಶಕ್ಕಾಗಿ ಬೇರೆಯಾಗಲೂ ಸಿದ್ಧರಾಗುತ್ತಾರೆ.

 ಅತ್ಯಂತ ಸುಖೀ ದಂಪತಿಗಳಾಗಿ ಬಾಳು ಕಟ್ಟಿಕೊಳ್ಳಬೇಕಾಗಿದ್ದವರು ವಿಚ್ಛೇದನಕ್ಕಾಗಿ ಕೋರ್ಟ್‌ಮೆಟ್ಟಿಲು ಹತ್ತುತ್ತಾರೆ. ಜನಜಾಗೃತಿ ಸುಲಭದ ಕೆಲಸವಲ್ಲ ಎನ್ನುವುದಕ್ಕೆ , ಇವರಿಬ್ಬರ ಈ ಹೋರಾಟ ಸಾಕ್ಷಿಯಾಗಿ ನಿಲ್ಲುತ್ತದೆ.

 ಜೀನ್ಸ್ ಪ್ಯಾಂಟ್, ಸ್ಮಾರ್ಟ್ ಫೋನು, ಇಂಟರ್‌ನೆಟ್, ಡಿಶ್ ಟಿ ವಿ ಎಲ್ಲವೂ ತಲುಪಿರುವ ಹಳ್ಳಿಗಳಲ್ಲಿಯೂ ಶೌಚಾಲಯಕ್ಕಾಗಿ ಹೋರಾಡುವ ಪರಿಸ್ಥಿತಿ ಇರುವುದು ನಮ್ಮೆಲ್ಲರ ದುರದೃಷ್ಟವೇ ಸರಿ. ಅರ್ಧಂಬರ್ಧ ಸಂಸ್ಕೃತ ಕಲಿತು, ತಪ್ಪು ತಪ್ಪಾಗಿ ಶ್ಲೋಕ, ಮಂತ್ರ, ಸೂತ್ರಗಳನ್ನು ಅರ್ಥೈಸುತ್ತಾ, ತಾವೇ ಸರಿ ಎಂದು ಪ್ರಲಾಪ ಮಾಡುವವರು ಒಂದು ಕಡೆಯಾದರೆ, ಒಂದು ಶೌಚಾಲಯಕ್ಕಾಗಿ ಗಂಡನನ್ನೇ ತೊರೆದವಳು ಎಂದು ಹಂಗಿಸುವ ಹೆಂಗಸರು ಜಯಾಳಿಗೆ ಎದುರಾಗುತ್ತಾರೆ. ವಿಪರ್ಯಾಸವೆಂದರೆ ಆಕೆ ಯಾವ ಹಳ್ಳಿ ಹೆಂಗಸರ ಪರವಾಗಿ ಶೌಚಾಲಯ ಬೇಕೆಂದು ಹೋರಾಡುತ್ತಿರುವಳೋ, ಅವರಿಗೇ ಅದರ ಅರಿವಿಲ್ಲದಿರುವುದು. ಸಾಮಾಜಿಕ ಜಾಗೃತಿಯೆಂಬುದು ಜಾಹಿರಾತುಗಳಿಂದ ಆಗುವುದಲ್ಲ ಎನ್ನುವುದಕ್ಕೆ ಈ ಹಳ್ಳಿಯ ಹೆಂಗಸರು ಉದಾಹರಣೆಯಾಗಿ ನಿಲ್ಲುತ್ತಾರೆ. ತಮ್ಮ ಉದ್ದೇಶದಿಂದ ಹಿಂದೆಗೆಯಲು ಇಚ್ಛಿಸದ ಜಯಾ, ಕೇಶವರು ವಿಚ್ಛೇದನ ಪಡೆಯಲು ಮುಂದಾಗುತ್ತಾರೆ. ಮುಂದೆ ಏನಾಗುತ್ತದೆ, ಇಬ್ಬರೂ ಬೇರೆಯಾಗುತ್ತಾರೆಯೇ ಅಥವಾ ಶೌಚಾಲಯ ಕಟ್ಟಿಸುವಲ್ಲಿ ಸಫಲರಾಗುತ್ತಾರೆಯೇ ತಿಳಿಯುವ ಕುತೂಹಲವಿದ್ದರೆ ಸಿನಿಮಾವನ್ನೇ ನೋಡುವುದು ಒಳ್ಳೆಯದು.

 ಅಂದಹಾಗೆ, ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಈ ಚಿತ್ರ ತಯಾರಾಗಿದೆ. ಸತ್ಯ ಘಟನೆಯನ್ನು ಆಧರಿಸಿ ಅಕ್ಷಯ್ ಕುಮಾರ್ ತಮ್ಮದೇ ನಿರ್ಮಾಣ ಸಂಸ್ಥೆಯಡಿಯಲ್ಲಿ ನಿರ್ಮಿಸಿದ್ದಾರೆ. ಅನಿತಾ ಬಾಯಿ ನರ‌್ರೆ ಎಂಬ ಹೆಣ್ಣು ಮಗಳು ಈ ಕತೆಗೆ ಸ್ಫೂರ್ತಿ.

 ಅನಿತಾ ಬಾಯಿ ನರ‌್ರೆ ಮಧ್ಯ ಪ್ರದೇಶದ ಬೇತುಲಾ ಜಿಲ್ಲೆಯ ಹೆಣ್ಣುಮಗಳು. ಈಕೆಯ ವಿವಾಹ ಚಿತೋಲಿ ಎಂಬ ಹಳ್ಳಿಯ ಶಿವರಾಂ ಎಂಬ ಯುವಕನೊಂದಿಗೆ ಆಗುತ್ತದೆ. ಆದರೆ ಮದುವೆಯ ಸಂಭ್ರಮ ಮರುದಿನ ಬೆಳಗಾಗುವುದರಲ್ಲಿ ಸೂರ್ಯನ ಕಿರಣಗಳೊಂದಿಗೆ ಕರಗುತ್ತದೆ. ಆ ಹಳ್ಳಿಯಲ್ಲಿ ಶೌಚಾಲಯಗಳೇ ಇರುವುದಿಲ್ಲ. ಅನಿತಾ ಶೌಚಾಲಯಗಳ ಅಗತ್ಯತೆಯನ್ನು ಮನೆಯವರಿಗೆ ಹಾಗೂ ಹಳ್ಳಿಗರಿಗೆ ತಿಳಿಸುವ ಪ್ರಯತ್ನ ಮಾಡುತ್ತಾಳೆ. ಆದರೆ ಅದರಲ್ಲಿ ವಿಫಲಳಾಗುತ್ತಾಳೆ. ಮದುವೆಯಾದ ಕೆಲವೇ ದಿನಗಳಲ್ಲಿ ಗಂಡನ ಮನೆಯನ್ನು ತೊರೆಯುವ ಪರಿಸ್ಥಿತಿ ಬರುತ್ತದೆ. ಮುಂದೆ ಆಕೆಯ ಕಥೆ ಹಲವು ಮಾಧ್ಯಮಗಳ ಮೂಲಕ ಬಿತ್ತರಿಸಲ್ಪಡುತ್ತದೆ.

 ಆಕೆಯ ಧೈರ್ಯವನ್ನು ಮೆಚ್ಚಿ ಸುಲಭ್ ಇಂಟರ್ನ್ಯಾಷನಲ್ ವತಿಯಿಂದ ಐದು ಲಕ್ಷ ನಗದಿನೊಂದಿಗೆ ಪುರಸ್ಕರಿಸಲಾಗುತ್ತದೆ. ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ಅಂದಿನ ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ್ರವರು ಅನಿತಾಳಿಗೆ ನೀಡಿ ಗೌರವಿಸುತ್ತಾರೆ. ಅಲ್ಲಿಂದ ಆಕೆಯ ಕತೆ ಚಲನಚಿತ್ರ ಕತೆಗಳನ್ನು ಬರೆಯುವ ಗರಿಮಾ ಹಾಗೂ ಸಿದ್ಧಾರ್ಥರನ್ನು ತಲುಪುತ್ತದೆ.

 ಶೌಚಾಲಯದ ಅಗತ್ಯತೆಯನ್ನು ನೋಡುಗರ ಮನಮುಟ್ಟುವಂತೆ, ಹಾಸ್ಯದ ಲೇಪನದೊಂದಿಗೆ ಗರಿಮಾ ಹಾಗೂ ಸಿದ್ದಾರ್ಥ್, ಚಿತ್ರಕತೆಯನ್ನು ಅದ್ಭುತವಾಗಿ ಬರೆದಿದ್ದಾರೆ. ನಾರಾಯಣ ಸಿಂಗರ ನಿರ್ದೇಶನವೂ ಎಲ್ಲಿಯೂ ಬಿಗಿ ಕಳೆದುಕೊಂಡಿಲ್ಲ. ಸಾಕ್ಷ ್ಯಚಿತ್ರವಾಗಬಹುದಾಗಿದ್ದ ಕತೆಯನ್ನು ಚಲನಚಿತ್ರವಾಗಿಸುವಲ್ಲಿ ಗೆದ್ದಿದ್ದಾರೆ. ಅಕ್ಷಯ್ ಕುಮಾರ್ ಹಾಗೂ ಭೂಮಿ ಪೆಡ್ನೀಕರ್ ಪ್ರೇಮಿಗಳಾಗಿ, ದಂಪತಿಗಳಾಗಿ, ಹೋರಾಟಗಾರರಾಗಿ ಸೊಗಸಾಗಿ ನಟಿಸಿದ್ದಾರೆ. ಇನ್ನು ಅನುಪಮ್ ಖೇರ್, ದಿವ್ಯೇಂದು ಶರ್ಮ ಮತ್ತು

ಸುಧೀರ್ ಪಾಂಡೆ ಸಿನಿಮಾವನ್ನು ನೋಡಿಸಿಕೊಂಡು ಹೋಗುವಂತೆ ಮಾಡುವಲ್ಲಿ ಗೆದ್ದಿದ್ದಾರೆ.

ಸಂಗೀತಗಾರರಾಗಿ ವಿಕ್ಕಿ ಪಾಂಡೆ , ಮನಸ ಶಿಖರ್, ಸಚೇತ್ ಪರಂಪರಾ ಜನರನ್ನು ಚಿತ್ರಮಂದಿರಗಳಿಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸೋನು ನಿಗಮ್ ಹಾಗೂ ಶ್ರೇಯಾ ಘೋಷಾಲ್ ಹಾಡಿರುವ ‘ಹಸ್ ಮತ್ ಪಗಲಿ ಪ್ಯಾರ್ ಹೋಜಾಯೇಗಾ…..’ ಎಷ್ಟು ಬಾರಿ ಕೇಳಿದರೂ, ಇನ್ನೊಮ್ಮೆ ಕೇಳೋಣ ಎನಿಸುವಂತಿದೆ.

 

   

Leave a Reply