ತುಂಗೆಯ ಜತೆಗೇ ಹರಿದಳು ಸಂಘದ ಗಂಗೆ

ಜಿಲ್ಲೆಗಳು ; ಶಿವಮೊಗ್ಗ - 0 Comment
Issue Date : 04.03.2014

ಕೃ. ಸೂರ್ಯನಾರಾಯಣ ರಾವ್

ಲೆನಾಡಿನ ಮಡಿಲು ತೀರ್ಥಹಳ್ಳಿ ಅಂದಿನ ತೀರ್ಥರಾಜಪುರ. ತುಂಗೆ, ಶರಾವತಿ, ವಾರಾಹಿ, ಮಾಲತಿ,ಕುಶಾವತಿ ಮುಂತಾದ ನದಿಗಳು ನಿತ್ಯ ಜೋಗುಳ ಹಾಡುತ್ತಿದ್ದರೆ ಗಿಳಿ, ಕೋಗಿಲೆ, ಕಾಜಾಣ, ಟುವಟಾರ್, ಪಿಕಳಾರ, ನವಿಲುಗಳು ಕುಣಿದು ಕುಪ್ಪಳಿಸುತ್ತವೆ. ಹಲವು ಹೊಳೆ ಹಳ್ಳ, ಗುಡ್ಡ ಬೆಟ್ಟಗಳು ಸಹ್ಯಾದ್ರಿಯ ಸಾಲಿನಲ್ಲಿ ಗಗನಚುಂಬಿ ಮರಗಳ ಆಶ್ರಯ ತಾಣ. ಜೈನಮುನಿ ಕುಂದಕಂದರ ನೆನಪಿಸುವ ಕುಂದಾದ್ರಿ, ಮಾಂಡವ್ಯರ ನೆನಪಿನ ಮಂಡಗದ್ದೆ, ದೂರ್ವಾಸ ಕಥೆ ಹೇಳುವ ದೂರ್ವಾಸಪುರ, ‘ಭೀಮಬಲ’ದ ನೆನಪು ಮಾಡುವ ಭೀಮನಕಟ್ಟೆ ಯವನರನ್ನು ಸದೆಬಡಿದ ಕವಲೇದುರ್ಗ ಹೀಗೆ ಹಲವು ಕೌತುಕದ ಬೀಡು. ಶೈವ, ಶಾಕ್ತ, ಮಾಧ್ವ, ಜೈನ ಸಂಪ್ರದಾಯದ ಮಠಮಾನ್ಯಗಳು, ಪುರಾಣಕಾಲದ ಖ್ಯಾತಿಯ ಮಂದಿರ ಬಸದಿಗಳು ಮಾತ್ರವಲ್ಲದೆ ಕವಿಕೋಗಿಲೆಗಳ ಬೀಡು. ಯಕ್ಷಗಾನ, ಸಂಗೀತ, ನಾಟಕ, ಗಮಕ, ಕೋಲಾಟ, ಅಂಟಿಗೆಪಿಂಟಿಗೆ ಹೀಗೆ ವಿಶಿಷ್ಟ – ಜಾನಪದ ಕಲೆಗಳ ತವರು. ತೀರ್ಥಹಳ್ಳಿಯ ಕವಿರತ್ನತ್ರಯರೆನಿಸಿದ ಕುವೆಂಪು, ಕಮಕೋಡು ನರಸಿಂಹ ಶಾಸ್ತ್ರಿ, ಎಸ್.ವಿ.ಪರಮೇಶ್ವರ ಭಟ್ಟರು, ಯಕ್ಷಕವಿ ಹಲಸಿನಹಳ್ಳಿ ಶಾಸ್ತ್ರಿ, ಪತ್ರಿಕಾರಂಗದ ಮಿಂಚೆನಿಸಿದ ಟಿ.ಎಸ್.ಆರ್, ಕಾದಂಬರಿಗಾರ್ತಿ ಎಂ.ಕೆ.ಇಂದಿರಾ, ಸಾಹಿತಿ ಯು.ಆರ್. ಅನಂತಮೂರ್ತಿ, ಸ್ವಾತಂತ್ರ್ಯ ಹೋರಾಟಗಾರ ಬಸವಾನಿ ರಾಮಶರ್ಮ, ಅರಗುಡಿಗೆ ನಾರಾಯಣಭಟ್ಟ,ಅಪರೂಪದ ರಾಜಕಾರಣಿ ಕಡಿದಾಳ್ ಮಂಜಪ್ಪ, ಅಂಕಣಕಾರ ಹಾ.ಮಾ. ನಾಯಕ್, ಸಮಾಜವಾದದ ಬೆಳೆ ಬಿತ್ತಿದ ಶಾಂತವೇರಿ ಗೋಪಾಲಗೌಡ, ಸಾಮ್ಯವಾದದ ಸಸಿನೆಟ್ಟ ಅಪ್ಪಣ್ಣ ಹೆಗ್ಗಡೆ, ಹಿರಿಯ ವಕೀಲ ಮಹಿಷಿ ನರಸಿಂಹಮೂರ್ತಿ ಹೀಗೆ ಹಲವು ತೆರನ ಮಹಾಮಹಿಮರನ್ನು ಹಡೆದ ಈ ನೆಲ ಕಲೆ- ಸಂಸ್ಕೃತಿಗಳ ತವರು. ಶಾಂತಿ ಸಹಬ್ವಾಳೆ ಇಲ್ಲಿನ ಉಸಿರು.

ಅಡಿಕೆ, ಭತ್ತ, ತೆಂಗು, ಕಬ್ಬು ಬೆಳೆವ ಈ ನೆಲ ಅಪರೂಪದ ಸಸ್ಯಪ್ರಬೇಧ ಪ್ರಾಣಿಸಂಕುಲಗಳ ನೆಲೆ. ಸೂರ್ಯಾಸ್ತ ಖ್ಯಾತಿಯಲ್ಲದೇ ಅತಿ ಹೆಚ್ಚು ಮಳೆ ಸುರಿವ ಆಗುಂಬೆ, ರಾಷ್ಟ್ರಕವಿ ಕುವೆಂಪು ಅವರ ಕವಿಮನೆ ಕುಪ್ಪಳ್ಳಿ, ಕವಿಶೈಲ, ದೈತ್ಯಗಾತ್ರದ ಮೀನುಗಳಿರುವ ಚಿಬ್ಬಲುಗುಡ್ಡೆ ಹೀಗೆ ಹಲವು ಪ್ರೇಕ್ಷಣೀಯ ತಾಣಗಳ ತೀರ್ಥಹಳ್ಳಿ ತಾಲೂಕು ಸ್ವಾತಂತ್ರ್ಯ ಚಳುವಳಿಯಲ್ಲಿ ಹಿಂದೆ ಬಿದ್ದಿಲ್ಲ. ವಿಜಯನಗರ, ಕವಲೇದುರ್ಗ – ಕೆಳದಿ, ಸಾಂತರು ಮೊದಲಾದ ಅರಸುಮನೆತನಗಳ ಆಳ್ವಿಕೆಯ ಕುರುಹು ( ಹಲವು ಶಾಸನಗಳು, ಕೋಟೆಕೊತ್ತಳಗಳು) ಇಂದಿಗೂ ಇರುವುದು ವಿಶೇಷ.

ನ. ಕೃಷ್ಣಪ್ಪ

ಪಂಡಿತ ಕಮಕೋಡು ನರಸಿಂಹ ಶಾಸ್ತ್ರಿಗಳು ಖಾದಿವ್ರತಧಾರಿ ಕನ್ನಡ ಪಂಡಿತ. ಅವರ ನೇತೃತ್ವದಲ್ಲಿ 1942ರಲ್ಲೇ ತೀರ್ಥಹಳ್ಳಿ ಶಾಲೆಯ ಮಕ್ಕಳು ತಿರಂಗಿ ಬಾವುಟ ಹಿಡಿದು ಪ್ರಭಾತ್‌ಫೇರಿ ನಡೆಸಿದ್ದನ್ನು ಹಿರಿಯ ಕವಿ ಎಂ.ಆರ್ ಶ್ರೀನಿವಾಸಮೂರ್ತಿ ನೆನಪಿಸುತ್ತಾರೆ. ಇಂಥ ನೆಲದಲ್ಲಿ ಸಂಘದ ಬೀಜ ಬಿತ್ತಲು ಬಂದವರೆಂದರೆ ಮಂಡಿವರ್ತಕ ಮನೆತನದ ಅನಂತಕೃಷ್ಣಮೂರ್ತಿ. ದೇಶ ಬಿಡುಗಡೆಗಿಂತ ಒಂದು ವರ್ಷ ಮೊದಲು (1946) ಸಂಘದ ಸಸಿ ತೀರ್ಥಹಳ್ಳಿಯಲ್ಲಿ ಮೊಳೆಯತೊಡಗಿತು. ಹೈಸ್ಕೂಲ್ ವಿದ್ಯಾರ್ಥಿ ಚಕ್ಕೋಡಬೈಲು ಬೆನಕಭಟ್, ಶ್ಯಾಮಣ್ಣ ಉಡುಪ ( ಖ್ಯಾತ ನಗರ ಉಡುಪ ಮನೆತನದ ಕುಡಿ), ದೇವದಾಸ ಬಾಳಿಗ, ಜಯಲಕ್ಷ್ಮೀ ರೈಸ್‌ಮಿಲ್ ಮಾಲಿಕ ಶೀಪತಿರಾಯರ ಮಗ ನಾಗರಾಜ ಇವರೇ ಮೊದಲ ಸ್ವಯಂಸೇವಕರು. ಆಮೇಲೆ ಶಿಕ್ಷಣ ಇಲಾಖೆಯ ಉದ್ಯೋಗಿ ಧರ್ಮರಾವ್ (ಧರ್ಮು ಎಂದೇ ಖ್ಯಾತರು), ಪುರುಷೋತ್ತಮರಾಯರು, ವೈ.ಟಿ.ವಿ.ಜೋಯಿಸ್, ಅನಂತರಾಜ ಮಾಸ್ತರ್ ಮೊದಲಾದವರು ಜೊತೆಗೂಡಿದರು.

ಸರ್ಕಾರಿ ಹೈಸ್ಕೂಲ್ ಮೈದಾನವೇ ಶಾಖೆ ನಡೆಸುವ ಸ್ಥಳ. ಬೆಳಿಗ್ಗೆ ಶಂಖ ಊದಿದರೆ ಸಾಕು ಮೈದಾನ ತುಂಬಿ ತುಳುಕುವಷ್ಟು ತರುಣರು ಒಂದುಗೂಡುವರು. ಸಾಯಂಕಾಲವೂ ಶಾಖೆ ಆರಂಭವಾಯಿತು. ಶಿಸ್ತಿನ ಶಾಖೆಯ ಚಟುವಟಿಕೆ ನೋಡಲು ಬರುವವರೂ ಬಹಳ ಮಂದಿ. ಅವರ ಆಟ, ವ್ಯಾಯಾಮ, ದೇಶಭಕ್ತಿ ಉಕ್ಕಿಸುವ ಹಾಡುಗಳು, ಭರವಸೆ ತುಂಬುವ ಮಾತು ಎಲ್ಲರಲ್ಲೂ ಮಿಂಚಿನ ಸಂಚಾರ ತಂದಿತ್ತು. ಅಷ್ಟರಲ್ಲೇ 1948 ಬಂತು. ಗಾಂಧೀಜಿ ಹಂತಕನ ಗುಂಡಿಗೆ ಬಲಿ ಆದರು. ಸಂಘದ ಬೆಳವಣಿಗೆ ಸಹಿಸದ ಸರಕಾರ ಸಂಘ ನಿಷೇಧ ಮಾಡಿತು. ಭೂಗತ ಸಾಹಿತ್ಯ ಹಂಚುವುದು, ಸತ್ಯಾಗ್ರಹ ಮಾಡುವುದರಿಂದ ಜಾಗೃತಿ ಮಾಡುವುದನ್ನು ಗಮನಿಸಿದ ಸರಕಾರ ಸ್ವಯಂಸೇವಕರನ್ನು ‘ಗಾಂಧಿಕೊಂದವರೆಂದು’ ಹಣೆಪಟ್ಟಿ ಕಟ್ಟಿ ಬಂಧಿಸಿತು. ಸ್ಥಾನೀಯ ಕಾಂಗ್ರೆಸ್‌ನ ಹಿರಿಯರಾದ ಕಾಳಿಂಗೈನ ರಾಘವೇಂದ್ರರಾಯರು ಅವರ ಜತೆಯ ಹುಂಚ ರಂಗರಾಯರಂತಹವರಿಗೆ ‘ಸಂಘದ ಹುಡುಗರು ತಪ್ಪು ಮಾಡಿದವರು ಅಲ್ಲ’ಎಂದು ಖಾತರಿ ಇತ್ತು. ಹಾಗೆಂದೇ ‘ಈ ಹುಡುಗರು ಯಾರದೋ ಮಾತುಕೇಳಿ ತಪ್ಪು ಮಾಡಿದ್ದಾರೆ, ತಪ್ಪೊಪ್ಪಿಗೆ ಬರೆದುಕೊಡುತ್ತಾರೆ ಬಿಡಿ’ ಎಂದು ಪೊಲೀಸರಿಗೆ ಹೇಳಿ ಒಪ್ಪಿಸಿದರೆ ಸಂಘದ ಹುಡುಗರ ತಂಡ (ಬೆನಕ ಭಟ್ ಈ ತಂಡದ ನಾಯಕರು) ಇದಕ್ಕೆ ಜಗ್ಗಲಿಲ್ಲ. ಅವರಿಗೆ ಲಾಠಿ ಏಟು ಜೈಲು ಹೊಸದಲ್ಲವಲ್ಲ, 42ರ ಚಳುವಳಿಯಲ್ಲಿ ಅದರ ರುಚಿ ಸಿಕ್ಕಿತ್ತಲ್ಲ!ದೇಶಭಕ್ತಿಯ ಕಾವು ತಗ್ಗಿರಲಿಲ್ಲ. ಮನೆ ಮನೆ ಸಂಪರ್ಕ, ಸುದ್ದಿಕೊಡುವುದು, ರಾಮನವಮಿ, ಗಣಪತಿ ಹಬ್ಬ,ಶ್ರಾವಣ ಸಮಾರಾಧನೆ, ಕಾರ್ತಿಕದೀಪೋತ್ಸವ ಇವೆಲ್ಲ ಆಗಿನ ಸ್ವಯಂಸೇವಕರಿಗೆ ‘ಸಂಘದ ವಿಚಾರ’ ಬಿತ್ತುವ ಅವಕಾಶಗಳಾದವು. ಮುಂದೆ ನಿಷೇಧದ ಮಂಜು ಕರಗಿತು.

1950ರ ಹೊತ್ತಿಗೆ ಕೃಷ್ಣಸ್ವಾಮಿರಾವ್ ಪ್ರಚಾರಕರಾಗಿ ಬಂದರು. ಚಕ್ಕೋಡಬೈಲಿನಲ್ಲಿ ಶಾಖೆ ಆರಂಭವಾಯಿತು. ಮುಂದೆ ರಮೇಶ ಕಾಮತರು ಪ್ರಚಾರಕರಾಗಿ ಸಂಘಕಾರ್ಯಕ್ಕೆ ಮತ್ತಷ್ಟು ಶಕ್ತಿ ತುಂಬಿದರು. ಈ ವೇಳೆಗೆ ತೀರ್ಥಹಳ್ಳಿಯ ಪ್ರತಿಷ್ಠಿತ ಜವಳಿ ಕುಟುಂಬದ ರಾಮದಾಸ್ ತೀರ್ಥಹಳ್ಳಿಯ ಶಾಖೆಯ ಉತ್ಸಾಹಿ ಸ್ವಯಂಸೇವಕರು.

ನಂಜುಂಡಯ್ಯ

1954ರಲ್ಲಿ ಮೈಸೂರಿನ ನಂಜುಡಯ್ಯ (ನ. ಕೃಷ್ಣಪ್ಪನವರ ಮಾತಿನಲ್ಲೇ ಹೇಳುವುದಾದರೆ ‘ಅಣ್ಣಯ್ಯ’) ಪ್ರಾಥಮಿಕ ಶಾಲಾ ಅಧ್ಯಾಪಕರಾಗಿ ಕೋಣಂದೂರು ಸಮೀಪದ ಕೇಶವಾಪುರಕ್ಕೆ ಬಂದರು. ಈಗಾಗಲೇ ಕೃ. ಸೂರ್ಯನಾರಾಯಣರಾಯರಂತಹ ಉತ್ಸಾಹಿ ತರುಣರು ಬೆಂಗಳೂರಿನಿಂದ ಶಿವಮೊಗ್ಗಗೆ ಬಂದು ‘ಸಂಘದ ಹುಚ್ಚು’ ಹತ್ತಿಸಿದ್ದರ ಪರಿಣಾಮ ತೀರ್ಥಹಳ್ಳಿಯ ತುಂಗೆಯಂಗಳದಲ್ಲೂ ‘ದಕ್ಷ- ಆರಮ’ಗಳ ಸದ್ದು ಕೇಳಿಸುವುದು ಮತ್ತಷ್ಟು ಸ್ಪಷ್ಟವಾಯಿತು.

ಮೈಸೂರಿನ ಅನುಭವಿ ಸ್ವಯಂಸೇವಕ ‘ಅಣ್ಣಯ್ಯ’ ಉತ್ತಮ ಅಧ್ಯಾಪಕ ಮಾತ್ರವಲ್ಲ, ಕುಶಲ ಸಂಘಟಕ. ಊರ ಪ್ರಮುಖ ಬಿ.ಆರ್. ಐತಾಳರ ಮನೆಯೊಂದರಲ್ಲಿ ತಾಯಿಯೊಡನೆ ವಾಸ. ಅದೇತಾನೆ ಆರಂಭವಾದ ಶಾಲೆಯಲ್ಲಿ ಅಚ್ಚುಕಟ್ಟಿನ ಪಾಠ, ಸಂಜೆ ಮನೆ ಮನೆ ಭೇಟಿ – ಮಾತುಕತೆ. ಭಜನೆ,ಸಂಗೀತ, ನಾಟಕ, ಕಥೆಗಳ ಮೂಲಕ ಎಲ್ಲರ ಮನಗೆದ್ದುದರ ಫಲ ಸಾಯಂಕಾಲ ಬಾಲಕರ, ಬೆಳಿಗ್ಗೆ ತರುಣರ ಎರಡು ಶಾಖೆ ಆರಂಭವಾದವು. ತೀರ್ಥಹಳ್ಳಿ ತಾಲೂಕಿನ ಮೂರನೇ ಶಾಖೆ 1954ರಲ್ಲಿ ಕುಗ್ರಾಮ ಕೇಶವಪುರದಲ್ಲಿ ಆರಂಭವಾದುದು ಹೀಗೆ. ನಿಧಾನವಾಗಿ ಅಕಲಾಪುರ, ಬಾವಿಕೈಸರು, ಕೋಣಂದೂರಿನಲ್ಲೂ ಶಾಖೆಯ ಚಟುವಟಿಕೆ, ಪ್ರಚಾರಕರ ಓಡಾಟ ಆರಂಭವಾಯಿತು. ಒಂದೆರಡು ವರ್ಷದಲ್ಲೇ ನಂಜುಂಡಯ್ಯ ತೀರ್ಥಹಳ್ಳಿ ತಾಲೂಕು ಕಾರ್ಯವಾಹರಾದರು. ಇವರ ಕೆಲಸ ಕಾರ್ಯ ಮೆಚ್ಚಿದ ಕಾಂಗ್ರೆಸ್ಸಿಗರೂ ‘ಸಂಘದ ಚಟುವಟಿಕೆ’ ಕಂಡು ಸಿಟ್ಟಾದುದರ ಫಲ ನಂಜುಂಡಯ್ಯನವರಿಗೆ ಗುಡ್ಡೆಕೊಪ್ಪಕ್ಕೆ ವರ್ಗಾವಣೆ. ಶಿಸ್ತಿನ ಸಿಪಾಯಿ ಸೂಚನೆ ಪಾಲನೆ ಮಾಡಿದರು! ಊರವರಿಗೂ ಸಂಕಟ. ಅವರನ್ನೂ ಸಮಾಧಾನ ಪಡಿಸಿದ ನಂಜುಂಡಯ್ಯ ಗುಡ್ಡೆಕೊಪ್ಪದ ಶಾಲೆಯನ್ನು ಹೆಸರುವಾಸಿ ಮಾಡಿದ್ದಲ್ಲದೇ ಅಲ್ಲಿ ಶಾಖೆಯನ್ನು ಆರಂಭಿಸಿದರು. ಅಲ್ಲಿಂದ ಆರಗ, ದರಲಗೋಡುಗಳಲ್ಲಿ ಸಂಘದ ಸಸಿ ನೆಟ್ಟರು. ಆಗತಾನೇ ಆಂಧ್ರದ ಪೆನ್ನಾರ ಪ್ರಾಜೆಕ್ಟ್ ನಲ್ಲಿ ಎಂಜಿನಿಯರ್ ಆಗಿ ಕೆಲಸಮಾಡುತ್ತಿದ್ದ ಸ್ವಾಭಿಮಾನಿ ತಾರಗೊಳ್ಳಿ ನಾಗರಾಜರಾವ್ ತನ್ನ ಸ್ವಾಭಿಮಾನಕ್ಕೆ ಚ್ಯುತಿ ಬಂದಾಗ ಕೈತುಂಬ ಸಂಬಳ ತರುತ್ತಿದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಊರಿಗೆ ಬಂದಿದ್ದರು. ಆರಗದಲ್ಲೂ ಆರಂಭವಾದ ಶಾಖೆ ಗ್ರಾಮಾಭಿವೃದ್ದಿಯ ಕಂಕಣ ತೊಡುವಂತೆ ಅವರನ್ನು ಪ್ರೇರೇಪಿಸಿತು.

 ಹೈಸ್ಕೂಲು ಓದಿಗೇ ಶರಣುಹೊಡೆದು ಊರಲ್ಲೇ ಉಳಿದ ಬೆನಕಭಟ್ ತೋಟ ಗದ್ದೆಯ ಕೆಲಸದೊಡನೆ ಸಂಘಕೃಷಿಯನ್ನು ಕೈಗೊಂಡರೆ, ಬಿ.ಎಸ್ಸಿ ಪದವಿಧರ ಪುರುಷೋತ್ತಮರಾವ್ ವಿದ್ಯಾರ್ಥಿಗಳಿಗೆ ಟ್ಯುಟೋರಿಯಲ್ ನಡೆಸುತ್ತಾ ತರುಣರ ಸಂಪರ್ಕ ಮಾಡತೊಡಗಿದರು.ತಾರಗೊಳ್ಳಿ ನಾಗರಾಜರಾವ್, ಅಧ್ಯಾಪಕ ಅನಂತರಾಜರ ಜತೆ ಮೈಸೂರಿನ ನಂಜುಂಡಯ್ಯ ಈ ‘ಪಂಚಪಾಂಡವರು’ ತಾಲೂಕಿನ ತುಂಬಾ ಓಡಾಟ ನಡೆಸಿ ಸಂಘಕಾರ್ಯ ಬೆಳೆಸತೊಡಗಿದರು. ತಾಲೂಕಿನ ಮೂಲೆ ಮೂಲೆಗಳಲ್ಲೂ ಸಂಪರ್ಕ ಜಾಲ ಹರಡಿದ ಪರಿಣಾಮ ಇಂದು ತಾಲೂಕಿನ 200 ಕೇಂದ್ರಗಳಲ್ಲಿ ಸಂಘದ ಕರೆಗೆ ಓಗೊಡುವವರಿದ್ದಾರೆ.

1955ರಲ್ಲಿ ಜಿಲ್ಲಾ ಪ್ರಚಾರಕರಾಗಿ ಬಂದವರು ಮೈಸೂರಿನ ನ.ಕೃಷ್ಣಪ್ಪ. ಶಿವಮೊಗ್ಗೆಗೆ ಬಂದ ಅವರಿಗೆ ಕೇಶವಾಪುರದಲ್ಲಿ ‘ಅಣ್ಣಯ್ಯ’ ಇರುವುದು(ನಂಜುಂಡಯ್ಯ) ಒಂದು ‘ಬಲ’ ಎನ್ನಿಸಿತ್ತು. ತೀರ್ಥಹಳ್ಳಿಯವರೇ ಆದ ಮಂಡಗದ್ದೆ ವೆಂಕಟಕೃಷ್ಣ ಜೋಯಿಸರು, ರಾಮಜೋಯಿಸರು, ನರಸಿಂಹಮೂರ್ತಿ ಅಯ್ಯಂಗಾರ್ (ಕೋಟೆ ಆಂಜನೇಯ ದೇವಸ್ಥಾನದ ಅರ್ಚಕರು) ಇವರೆಲ್ಲ ಜತೆ ಆದರು.

ಕೃಷ್ಣಪ್ಪನವರು, ನಂಜುಂಡಯ್ಯ ಇವರೆಲ್ಲರ ಚಿಂತನೆಯಿಂದ ‘ಕೇಶವಾಪುರ ದಕ್ಷತಾವರ್ಗ’ ಆ ಭಾಗದಲ್ಲಿ ಒಂದು ಸಂಚಲನವನ್ನೇ ಮೂಡಿಸಿತ್ತು! ಆಗ ಅಕಲಾಪುರ ಅಪ್ಪಣ್ಣಭಟ್ಟರು, ಶಂಕರ ಜೋಯಿಸರು ಇವರೆಲ್ಲ ಅಣ್ಣಯ್ಯನವರ ಜತೆಗೂಡಿದರು. ಅಣ್ಣಯ್ಯ ಗುಡ್ಡೆಕೊಪ್ಪದಲ್ಲಿದ್ದಾಗಲೇ ಮೇಗರವಳ್ಳಿಯಲ್ಲೂ ಶಾಖೆ ಆರಂಭವಾಯಿತು. ಡಿ. ಎನ್. ಚಂದ್ರಶೇಖರ್, ಮಹಾಬಲ ಅಡಿಗರನ್ನು ಸೇರಿಸಿ ಬೆನಕಭಟ್ಟರು ಯಶಸ್ವಿಯಾಗಿ ಈ ಕೆಲಸ ಮಾಡಿದ್ದಾರೆ. ಅಲ್ಲಿನ ಕಮ್ಯೂನಿಸ್ಟ್ ನಾಯಕ ಅಪ್ಪಣ್ಣಹೆಗ್ಡೆ, ಆರಗ ಕೆ.ಎಂ.ಶ್ರೀನಿವಾಸ ಇವರೆಲ್ಲ ಸಾಮ್ಯವಾದದ ಬೀಜ ಬಿತ್ತಿದರೆ ಕಡಿದಾಳು ಮಂಜಪ್ಪ ಕಾಂಗ್ರೆಸ್ ಮುಂದಾಳು. ಶಾಂತವೇರಿ ಗೋಪಾಲಗೌಡರು, ಕಾಸರವಳ್ಳಿ ರಾಮಕೃಷ್ಣ ರಾಯರು ಲೋಹಿಯಾ ಚಿಂತನೆ ಹರಡುವಲ್ಲಿ ಮುಂದಾದರು. ಇವರೆಲ್ಲರ ನಡುವೆಯೂ ಹಿಂದುತ್ವದ – ರಾಷ್ಟ್ರೀಯತೆಯ ಚಿಂತನೆಯನ್ನು ತರುಣರ ಮನದಲ್ಲಿ ಮೊಳಕೆಯೊಡೆಸುವಲ್ಲಿ ಬೆನಕ – ಪುರುಷ- ರಾಜ(ನಾಗರಾಜರಾವ್) ಅನಂತ ಹಾಗೂ ನಂಜುಂಡ ಎಂಬ ‘ಪಂಚಪಾಂಡವರು’ ಯಶಸ್ವಿ ಆದರು. ಬೆನಕಭಟ್ಟರು ಮುಂದೆ ತಾಲ್ಲೂಕು ಕಾರ್ಯವಾಹರಾಗಿ, ತಾಲ್ಲೂಕು ಸಂಘಚಾಲಕರಾಗಿ ಕೆಲಸಮಾಡಿ ಈಗ ಜಿಲ್ಲಾ ಸಂಘಚಾಲಕರಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.

1960ರ ಹೊತ್ತಿಗೆ ತೀರ್ಥಹಳ್ಳಿ ತಾಲೂಕಿನ ಇನ್ನಷ್ಟು ಸ್ಥಳಗಳಲ್ಲಿ ಭಗವಾಧ್ವಜ ಹಾರಾಡಲಾರಂಭಿಸಿತು. ಆರಗದಲ್ಲಿ ತಾರಗೊಳ್ಳಿ ನಾಗರಾಜರಾಯರ ಚಿಂತನೆಯಿಂದ ‘ ಜನತಾಉದ್ಯಮ’ ತಲೆಯೆತ್ತಿತು. ಆ ಭಾಗದ ನೂರಾರು ಕುಟುಂಬಗಳು ಸ್ವಾಭಿಮಾನಿ – ಸ್ವಾವಲಂಬಿ ಬದುಕು ನಡೆಸಲು ಇದು ನೆರವಾಯಿತು. ತನ್ನ ಸುತ್ತ ’ಹಿಂದು ರಾಷ್ಟ್ರದ ಪರಮವೈಭವ’ ಅರಳಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯೋಗದ ಫಲ ಮುಂದೆ ‘ಉದ್ಯೋಗ ಆರಗ’ ವಾಗಿ ರೂಪುಗೊಂಡಿತು. ಹಲವು ಯುವಕರು ಶಿಕ್ಷಣ, ಉದ್ಯೋಗ ಪಡೆಯುವಲ್ಲಿ ಹಲವು ಮನೆಗಳು ಸ್ವಾವಲಂಬಿ ಸ್ವಾಭಿಮಾನಿ ಮನೆಗಳಾಗಿ ಬೆಳಗುವಲ್ಲಿ ರಾಜಯ್ಯ – ತಾರಗೊಳ್ಳಿ ನಾಗರಾಜರಾಯರ ‘ಸ್ವಯಂಸೇವಕತ್ವ’ ಮೂಲ ಕಾರಣ ಎನಿಸಿದೆ. ಡಾ.ಜೀ ಜನ್ಮಶತಾಬ್ದಿ ನೆನಪಿನಲ್ಲಿ ಆರಂಭಗೊಂಡ ‘ನಾಗರಾಜರಾವ್ ಸ್ಮಾರಕ ಕೇಶವ ಶಿಶುಮಂದಿರ’ ಅವರ ಕನಸುಗಳನ್ನು ನನಸಾಗಿಸುತ್ತಿದೆ.

ನಂಜುಂಡಯ್ಯನವರು ಹಲವು ಮುಖಂಡರ ಅವಕೃಪೆಗೆ ಒಳಗಾಗಬೇಕಾಯಿತು. ಅವರು ಶಾಲೆಯಲ್ಲೇನೋ ಒಳ್ಳೆಯ ಮೇಷ್ಟರು; ಅವರು ಕಲಿಸುವ ಪಾಠ – ಹಾಡು ನಾಟಕ ಎಲ್ಲವೂ ಚೆಂದವೇ… ಅವೆಲ್ಲ ಬದುಕಿಗೆ ಬೇಕಾದ್ದೇ ಆದರೆ ಆರೆಸ್ಸೆಸ್ ಶಾಖೆಗೆ ಹುಡುಗರನ್ನು ಸೇರಿಸುವುದು ಮಾತ್ರ ಆ ಮುಖಂಡರಿಗೆ ಸೇರದ ಸಂಗತಿ. ಹೀಗಾಗಿಯೇ ‘ಅಣ್ಣಯ್ಯ ಮಾಸ್ಟ್ರಿಗೆ’ ವರ್ಗಾವಣೆ ಶಿಕ್ಷೆ! ಗುಡ್ಡೆಕೊಪ್ಪದಿಂದ ಹಾರೋಗುಳಿಗೆ, ಅಲ್ಲಿಂದ ಬಸವಾನಿ ಹೀಗೆ ಸಾಗಿತು ಪಯಣ. ಮುಂದೆ ಶಿಕಾರಿಪು ತಾಲೂಕಿನ ಈಸೂರಿನಿಂದ ಮತ್ತೆ ಬಸವಾನಿಗೆ. ಆಗ ಬಂದದ್ದು ಬಸವಾನಿ ಹೈಸ್ಕೂಲಿನ ಕನ್ನಡ ಪಂಡಿತರಾಗಿ. ಪ್ರಾಥಮಿಕ ಶಾಲಾ ಅಧ್ಯಾಪಕರಾಗಿಯೇ ಶಾಲೆ – ಸಂಘ ಯಾವುದನ್ನೂ ಬಿಡದೇ ಚೆನ್ನಾಗಿಯೇ ಕೆಲಸ ಮಾಡುತ್ತಾ ಕನ್ನಡ ಪಂಡಿತ ಹಾಗೂ ಬಿ.ಇಡಿ ಪದವಿಗಳಿಸಿದರು. ಹೋದಲ್ಲೆಲ್ಲಾ ಅವರು ಒಳ್ಳೆ ಮೇಷ್ಟ್ರು ಮಾತ್ರವಲ್ಲ, ಕುಶಲ ಸಂಘಟಕ. ಹೀಗಾಗಿ ಹಲವರ ಬದುಕಿನ ‘ದಾರಿದೀಪ’ ಅವರು. ಹೋದಲ್ಲೆಲ್ಲಾ ಶಾಖೆಗಳು ತಲೆಯೆತ್ತಿದವು. ನೂರಾರು ಸ್ವಯಂಸೇವಕರು ತಯಾರಾದರು. ಹಲವು ಕಾಲ ತೀರ್ಥಹಳ್ಳಿ ತಾಲೂಕು ಕಾರ್ಯವಾಹರಾಗಿ, ಮುಂದೆ ಶಿವಮೊಗ್ಗ ಜಿಲ್ಲಾ ಸಹಕಾರ್ಯವಾಹರಾಗಿ, ಜಿಲ್ಲಾ ಬೌದ್ಧಿಕ ಪ್ರಮುಖರಾಗಿ ಯಶಸ್ವಿ ಕಾರ್ಯ ಮಾಡಿದರು. ಅವರ ಮಾತು, ಹಾಡು, ಹರಟೆ ಎಲ್ಲರ ಮನೆಮಾತು, ಅವರ ಯಕ್ಷಗಾನ ಭಾಗವತಿಕೆಯ ಕಾರಣಕ್ಕೆ ಶಿವಮೊಗ್ಗ ಜಿಲ್ಲಾ ಬೈಠಕ್ ಯಕ್ಷಗಾನ ತಾಳಮದ್ದಳೆಯ ಕಲಾಮೇಳ ಆಗುತ್ತಿತ್ತು ಎಂದೂ ನ.ಕೃಷ್ಣಪ್ಪನವರು ನೆನಪಿಸಿಕೊಳ್ಳ್ಳುತ್ತಾರೆ.

ಪುರುಷೋತ್ತಮ ರಾವ್

ಪುರುಷೋತ್ತಮರಾಯರು 1960 ರಲ್ಲಿ ಪುರಸಭಾ ಸದಸ್ಯರಾದರಲ್ಲದೇ 1972- 78 ರಲ್ಲಿ ಪುರಸಭಾ ಅಧ್ಯಕ್ಷರೂ ಆದರು. ಅವರ ಆಡಳಿತ ಇಂದಿಗೂ ನೆನಪಿನಲ್ಲಿದೆ. ಕೃಷಿಯಲ್ಲಿ ನಡೆಸಿದ ಹಲವು ಪ್ರಯೋಗಗಳ ಫಲವೇ ಸಾವಯವಕೃಷಿ ಪದ್ಧತಿ ರೂಪುಗೊಂಡಿತು. ಅವರ ತೋಟವೇ ಪ್ರಯೋಗ ಶಾಲೆ ಆಯಿತು. ಅವರು ರೂಪಿಸಿದ ಸಾವಯವ ಕೃಷಿಪದ್ಧತಿ ಇಂದು ವಿಶ್ವಮಾನ್ಯ. ಅವರ ತೋಟ ಕೃಷಿವಿಶ್ವವಿದ್ಯಾಲಯದಂತೆ ಬೆಳೆದುನಿಂತಿದೆ. ಹಾಗೆಂದೇ ಅವರನ್ನು ಕೃಷಿಕ್ಷೇತ್ರ ‘ಕೃಷಿ ಋಷಿ’ ಎಂದೇ ಗುರುತಿಸಿ ಗೌರವಿಸಿತು.

ಈ ನಡುವೆ ಕೋಣಂದೂರಿನಲ್ಲೂ ಸಂಘದ ಚಟುವಟಿಕೆ ಆರಂಭವಾಯಿತು. ಅಲ್ಲಿನ ಸುಬ್ಬರಾಯರ ಬಟ್ಟೆ ಅಂಗಡಿ ನಂಜುಂಡಯ್ಯನವರ ಸಹವಾಸದಿಂದ ಮಿತ್ರರೆಲ್ಲ ಸೇರಿ ಹರಟಬಲ್ಲ ಕೇಂದ್ರ ಆಯಿತು. ಅದರ ಫಲವೇ ಮುಂದೆ ಯಾದವರಾವ್‌ಜೋಶಿಯವರೂ ಕೋಣಂದೂರಿಗೆ ಸಂಘಕಾರ್ಯ ನಿಮಿತ್ತ ಬರುವಂತಾಯಿತು. ಹುಲ್ಲತ್ತಿ ಗಂಗಯ್ಯ ಗೌಡರು ಕೋಣಂದೂರಿನ ಮುಖ್ಯ ಬಟ್ಟೆ ವ್ಯಾಪಾರಿ. ಅವರ ಮನೆಯಲ್ಲೇ ಬೈಠಕ್. ಅವರು ಅಲ್ಲಿನ ಶ್ರೀನಿವಾಸರಾಯರೊಡನೆ ಕಾಂಗ್ರೆಸ್ ಮುಂದಾಳು. ಅವರ ಮನೆಯಲ್ಲು ಸಂಘದ ಬೈಠಕ್ – ಇದು ನಂಜುಂಡಯ್ಯನವರ ಸಂಪರ್ಕದ ಫಲ ಎಂದು ನ.ಕೃಷ್ಣಪ್ಪನವರು ನೆನಪಿಸುತ್ತಾರೆ. 1964ರಲ್ಲಿ ಕೋಣಂದೂರಿನಿಂದ ಶಿವಮೊಗ್ಗಕ್ಕೆ ಪೂ. ಗುರೂಜಿ ಕಾರ್ಯಕ್ರಮಕ್ಕೆ ಸೈಕಲ್‌ನಲ್ಲಿ ಹೋದ ಸ್ವಯಂಸೇವಕರು ಇಂದೂ ಸಾಹಸದ ನೆನಪು ಮಾಡುತ್ತಾರೆ. 1968-69ರಲ್ಲೇ ಚಕ್ಕೋಡಬೈಲು ನಾರಾಯಣರಾಯರು ಸಂಘಚಾಲಕರಾದರು. ‘ವಾನಪ್ರಸ್ಥಾಶ್ರಮ’ಇದೆಂದು ಮಾರ್ಮಿಕವಾಗಿ ಅವರು ಹೇಳುತ್ತಿದ್ದರು.

1968ರಲ್ಲಿ ತೀರ್ಥಹಳ್ಳಿಯಲ್ಲಿ ಘೋಷ್‌ಪಥಕ ಆರಂಭವಾಯಿತು.

ಈ ಮೊದಲೇ ರೆವಿನ್ಯೂ ತಾಲೂಕನ್ನು ಹೋಬಳಿ ಆಧಾರದಲ್ಲಿ ‘ಮಂಡಲ’ ಎಂದು ಕಾರ್ಯ ಬೆಳೆಸಲು ವಿಭಾಗಿಸಲಾಗಿತ್ತು. ಒಂದೊಂದು ಮಂಡಲವೆಂದರೆ 4-5 ಪಂಚಾಯತ್‌ಗಳ ಸಮೂಹ. ಈಗಂತೂ ಪಂಚಾಯತ್‌ಗಳನ್ನೇ ‘ಮಂಡಲ’ಗಳೆಂದು ಪರಿಗಣಿಸಿದೆ. 1965ರ ಹೊತ್ತಿಗೇ ಕಾರ್ಯವಿಸ್ತಾರದ ದೃಷ್ಟಿಯಿಂದ ‘ವಿಸ್ತಾರಕ’ರಾಗಿ ಕಾರ್ಯಕರ್ತರು ಹೊರಡುವ ಪದ್ಧತಿ ಬೆಳೆದಿತ್ತು. ಆಗಿನ ತಾಲೂಕು ಕಾರ್ಯವಾಹರಾದಿಯಾಗಿ ( ಚ. ಬೆನಕಭಟ್ಟರು) ಒಂದೊಂದು ಊರಿನಲ್ಲಿ ವಾರಗಟ್ಟಲೆ ಉಳಿದು ಸಂಪರ್ಕ – ಶಾಖೆ – ದಕ್ಷತಾವರ್ಗ ನಡೆಸುವ ಮುಂದೆ ಕಾರ್ಯ ಬಲಗೊಳಿಸಲು ‘ಪ್ರವಾಸ’ ಮಾಡುವ ಪದ್ಧತಿ ರೂಢಿಸಿದ್ದರು. ಹೀಗಾಗಿ ನೊಣಬೂರು, ಅರಳಸುರುಳಿ (ಬಂಧ್ಯಾ ಕಮ್ಮರಡಿ, ಆಗುಂಬೆ, ಕಟ್ಟೆಹಕ್ಕಲು, ಬೆಜ್ಜವಳ್ಳಿ ಭಾರತೀಪುರ ಮುಂತಾದೆಡೆ ಕಾರ್ಯ ಆರಂಭವಾಯಿತು.ಅರಳಸುರುಳಿಯ ಅತ್ತಿಗಾರು ಸತ್ಯನಾರಾಯಣ ಉಡುಪ, ಹೊಸ್ಕೆರೆ ಅ.ಪ.ಸು.ಭಟ್ಟರು, ಅಂ.ಸು.ಅ.ಉಡುಪ ಅರಳಸುರುಳಿ ಕೃಷ್ಣರಾವ್, ಚಕ್ಕೋಡಬೈಲು ಶಾಖಾ ಸಂಘಚಾಲಕರಾಗಿದ್ದ ನಾರಾಯಣರಾಯರು, ತಾರಗೊಳ್ಳಿ ರಾಜಯ್ಯ, ಅನಂತರಾಜ ಮಾಸ್ತರು ಹೀಗೆ ಹಲವಾರು ಸ್ವಯಂಸೇವಕರು ವಿಸ್ತಾರಕರಾಗಿ ಕಾರ್ಯ ಬೆಳೆಸಿದರು.

ರಥಬೀದಿಯ ಸೋದೆಮಠದ ಕೋಣೆಯಲ್ಲಿದ್ದ ಕಾರ್ಯಾಲಯ (1969 ರ ಸುಮಾರಿಗೆ) ಮುಂದೆ ಜವಳಿ ಬಂಧುಗಳ ಕಟ್ಟಡ ಮಹಡಿಯಲ್ಲಿ ಕೆಲಕಾಲವಿದ್ದು ಆಮೇಲೆ ರಾಮೇಶ್ವರ ದೇವಸ್ಥಾನ ಸಮೀಪ ಮನೆಯೊಂದರಲ್ಲಿ ನಡೆಯತೊಡಗಿತು. ಮುಂದೆ 1992ರಲ್ಲಿ ಕೊಪ್ಪರಸ್ತೆಯಲ್ಲಿ ಸ್ವಂತ ಕಟ್ಟಡ ‘ಪ್ರೇರಣಾ’ ತಲೆಯೆತ್ತಿತು. 

ಈಗ ತಾಲೂಕಿನಲ್ಲಿ ಕಾರ್ಯವನ್ನು ಇನ್ನಷ್ಟು ಬಲಗೊಳಿಸಲು ಕಂದಾಯ ತಾಲೂಕನ್ನು ತೀರ್ಥಹಳ್ಳಿ, ಕಮ್ಮರಡಿ, ಕೋಣಂದೂರು ಎಂದು ಮೂರು ತಾಲೂಕುಗಳಾಗಿ ವಿಂಗಡಿಸಿದೆ. ಪ್ರಾಯೋಗಿಕವಾಗಿ ನಡೆಸಲಾಗಿದೆ.

ಬೆನಕ ಭಟ್

1995ರಲ್ಲಿ ಮೊದಲ ಬಾರಿಗೆ ತಾಲೂಕಿನಲ್ಲಿ ನಡೆದ ಬೃಹತ್ ಪಥಸಂಚಲನದಲ್ಲಿ ಸಾವಿರಕ್ಕೂ ಹೆಚ್ಚು ಗಣವೇಷಧಾರಿ ಸ್ವಯಂಸೇವಕರು ಭಾಗವಹಿಸಿದ್ದು ಒಂದು ದಾಖಲೆ. ಡಾಕ್ಟರಜೀ ಜನ್ಮಶತಾಬ್ದಿ ಹಾಗೂ ಗುರೂಜಿ ಜನ್ಮಶತಾಬ್ದಿ ಸಂದರ್ಭದಲ್ಲಿ ಎಲ್ಲಾ ಗ್ರಾಮಗಳ ಸಂಪರ್ಕ, ಪ್ರತಿ ವರ್ಷ ತಾಲೂಕಿನ ಎಲ್ಲಾ ಗ್ರಾಮಗಳನ್ನು ಒಳಗೊಂಡ 200ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ರಕ್ಷಾ ಬಂಧನ ಉತ್ಸವ ನಡೆಸುವುದು, ತೀರ್ಥಹಳ್ಳಿ ನಗರದಲ್ಲಿ ನಗರ ಪ್ರಮುಖರು – ಹಿತೈಷಿಗಳಿಗಾಗಿಯೇ ನಡೆಯುವ ಗುರುಪೂಜಾ ಉತ್ಸವ ಇಲ್ಲಿನ ಕಾರ್ಯಕರ್ತರ ಕ್ಷಮತೆಗೆ ಸಾಕ್ಷಿ.

ಸಂಘಕಾರ್ಯಾಲಯ ‘ಪ್ರೇರಣಾ’ ವಿದ್ಯಾರ್ಥಿಗಳ, ವಿದ್ಯಾರ್ಥಿ ಕಾರ್ಯಕರ್ತರ ಶಿಕ್ಷಣ-ವಸತಿ-ಸಂಸ್ಕಾರ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದು ಹಲವು ವಿದ್ಯಾರ್ಥಿಗಳಿಗೆ ಬದುಕಿನ ನೆಲೆಯನ್ನು ಕಲ್ಪಿಸುವಲ್ಲಿ ಯಶಸ್ವಿ ಆಗಿದೆ. 

1979ರಲ್ಲಿ ಅಜಿತ ಕುಮಾರರ ಪ್ರೇರಣೆಯಿಂದ ಆರಂಭವಾದ ಸೇವಾಭಾರತಿ ಟ್ರಸ್ಟ್ ಹಲವು ಸಮಾಜಮುಖಿ ಚಟುವಟಿಕೆಗಳೊಡನೆ ಶಿಶುಮಂದಿರ, ಸೇವಾಭಾರತಿ ಶಾಲೆ ನಡೆಸುತ್ತಿದೆ. ಪುರುಷೋತ್ತಮರಾಯರ ಕನಸಿನಂತೆ ಪ್ರಜ್ಞಾಭಾರತಿ ಶಾಲೆ ಚಿಟ್ಟೆಬೈಲಿನಲ್ಲಿ (ಪ್ರೌಢಶಾಲೆ) ನಡೆಯುತ್ತಿದೆ. ಶಿಕ್ಷಣ, ಸಂಸ್ಕಾರ, ಕೃಷಿ, ಸಮಾಜ ಸಂರಕ್ಷಣಾ ಕ್ಷೇತ್ರದಲ್ಲಿ (ವಿಶ್ವ ಹಿಂದೂ ಪರಿಷತ್, ಭಜರಂಗದಳ) ಸ್ವಯಂಸೇವಕರು ಸೇವಾ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಶೈಕ್ಷಣಿಕ – ಸಾಮಾಜಿಕ – ಧಾರ್ಮಿಕ -ಕೃಷಿ ಮುಂತಾದ ಕ್ಷೇತ್ರದಲ್ಲಿ ಇಂದು ಹೊಸ ಬೆಳಕು ಮೂಡಿದೆ. ‘ರೂಢಿಯ ಜಡತೆಯ ಬಂಧನ ಕಳಚುತ ನವ ಸೂರ್ಯೋದಯವಾಗುತಿದೆ.’ ‘ಭರವಸೆಯ ನಾಳೆಗಳು ನಮ್ಮದಾಗಿವೆ’ ಎಂದು ಜನರಲ್ಲಿ ವಿಶ್ವಾಸ ಮೂಡುತ್ತಿದೆ.

   

Leave a Reply