ವಸಂತ ವಲ್ಲಭರಾಯಸ್ವಾಮಿ

ಪ್ರವಾಸ - 0 Comment
Issue Date : 04.04.2014

ಬೆಂಗಳೂರಿನಿಂದ ದಕ್ಷಿಣಕ್ಕೆ, ಉತ್ತರಹಳ್ಳಿ ಸಮೀಪ ಇರುವ ವಸಂತಪುರವು ‘ಹರಿ ಹರ ಕ್ಷೇತ್ರ’ವೆಂದೇ ಪ್ರಸಿದ್ಧವಾಗಿದೆ. ವಸಂತ ವಲ್ಲಭರಾಯಸ್ವಾಮಿ, ಭವಾನಿ ಶಂಕರ, ಅಂಜನೇಯ, ಗಣಪತಿ, ಸುಬ್ರಹ್ಮಣ್ಯ, ಕನ್ಯಕಾ ಪರಮೇಶ್ವರಿ, ಪುರಂದರ –ತ್ಯಾಗರಾಜರು ಇಲ್ಲಿ ವಿರಾಜಮಾನರಾಗಿದ್ದು ನಾಡಿನ ಮೂಲೆ ಮೂಲೆಗಳಿಂದ ಭಕ್ತಾದಿಗಳು ಬರುತ್ತಾರೆ. ಇದೊಂದು ಕೇವಲ ಪುಣ್ಯಕ್ಷೇತ್ರವಾಗಿದೆ ಪ್ರವಾಸೀ ಕೇಂದ್ರವೂ ಆಗಿದೆ.

ಸ್ಥಳ ಪುರಾಣ

ಮಾಂಡವ್ಯ ಋಷಿಗಳು ಬದರಿಕಾಶ್ರಮಕ್ಕೆ ತೆರಳಿ ಅಲ್ಲಿ ನರ ನಾರಾಯಣರ ದರ್ಶನ ಪಡೆದು, ದಕ್ಷಿಣದ ಬದರಿ ಎಂದು ಹೆಸರು ಪಡೆದ  ಮೇಲುಕೋಟೆಗೆ ಬಂದು ಚೆಲುವನಾರಾಯಣನನ್ನು  ಪೂಜಿಸುತ್ತಿದ್ದಾಗ, ಅವರಿಗೆ ಸ್ವಪ್ನಾದೇಶವಾಯಿತು, ಕಲ್ಯಾಣನಗರಿಯ (ಬೆಂಗಳೂರಿನ) ದಕ್ಷಿಣಕ್ಕಿರುವ ಪರ್ವತವೊಂದರಲ್ಲಿ ಶ್ರೀ ಹರಿಯು ನೆಲೆಸಿದ್ದಾನೆ. ಅದು ದುರ್ಗಮವಾದ್ದರಿಂದ ಮಾಂಡವ್ಯ ಋಷಿಗಳು ಅಲ್ಲಿಗೆ ಹೋಗಿ, ಭಕ್ತರು ಅಲ್ಲಿಗೆ ಬರಲು ಹಾಗೂ ಸ್ವಾಮಿಯ ಆರಾಧನೆ ಮಾಡಲು ತಕ್ಕ ವ್ಯವಸ್ಥೆ ಮಾಡಬೇಕು ಎಂಬುದೇ ಈ ಆದೇಶ. ಇದರಿಂದ ಪುಳಕಿತಗೊಂಡ ಮಾಂಡವ್ಯರು ಈ ಪುಣ್ಯಸ್ಥಳಕ್ಕೆ ಬಂದು, ಅಲ್ಲಿದ್ದ ಭಗವಂತನನ್ನು ಕಂಡು ಭಕ್ತಿಪರವಶರಾದರು. ಅನಂತರ ಆಗಮ ರೀತ್ಯಾ ದೇವಾಲಯ ನಿರ್ಮಿಸಿ, ಸ್ವಾಮಿಯನ್ನು ‘ವಸಂತ ವಲ್ಲಭರಾಯಸ್ವಾಮಿ’ ಎಂದು ಕರೆದು, ಆತನನ್ನು ಪ್ರತಿಷ್ಠಾಪಿಸಿ, ಪೂಜಾ ಕೈಂಕರ್ಯಗಳ ವ್ಯವಸ್ಥೆ ಮಾಡಿದರು. ಅಂದಿನಿಂದ ಇದು ‘ವಸಂತಪುರ’ ವಾಯಿತೆಂದು ಹೇಳುತ್ತಾರೆ.

ಭವಾನಿ ಶಂಕರ

ಶಿವಾಜಿ ಮಹಾರಾಜರು ಭವಾನಿಯ ಅನನ್ಯ ಭಕ್ತರು ಆಕೆಯ ಆರಾಧನೆಯನ್ನು ನಿತ್ಯವೂ ಮಾಡುತ್ತಿದ್ದರು. ಒಮ್ಮೆ ಮಹಾರಾಜರು ಸೈನ್ಯದೊಂದಿಗೆ ಬಹುದಿನಗಳ ಕಾಲ ಈ ಕಲ್ಯಾಣನಗರಿಯ ಬಳಿ ನೆಲಸಬೇಕಾಯಿತು. ಆಗ ತಮ್ಮ ಆರಾಧ್ಯ ದೇವತೆಯ ಆರಾಧನೆಗಾಗಿ ಸಮರ್ಪಕ ಸ್ಥಳವನ್ನು ಅರಸುತ್ತಿದ್ದಾಗ ಶಿವಾಜಿ ಮಹಾರಾಜರ ಗುರು ಸಮರ್ಥ ರಾಮದಾಸರು ವಸಂತಪುರಕ್ಕೆ ಬಂದು ಶಿಷ್ಯನ ಪೂಜಾದಿಗಳಿಗೆ ಅನುಕೂಲವಾಗುವಂತೆ ಭವಾನಿಯನ್ನು ಪ್ರತಿಷ್ಠಾಪಿಸಿದರಂತೆ. ಅನಂತರ ಶಿವಾಜಿಯು ಪೂಜೆಗೆ ಸಕಲ ಸೌಕರ್ಯಗಳನ್ನು ಒದಗಿಸಿ ಈ ಗ್ರಾಮವನ್ನು ಉಂಬಳಿಯಾಗಿ ನೀಡಿದನಂತೆ. ಮುಂದೆ ಪೇಶ್ವೆ ಮನೆತನದವರು ಕಾಶಿಯಿಂದ ಶಿವಲಿಂಗವೊಂದನ್ನು ತಂದು ಭವಾನಿಯ ಬಳಿಯಲ್ಲೇ ಪ್ರತಿಷ್ಠಾಪಿಸಿ ಭವಾನಿ ಶಂಕರ ದೇವಾಲಯವನ್ನು ನಿರ್ಮಿಸಿದರಂತೆ.

ಹೀಗೆ ಇಲ್ಲಿನ ಭವಾನಿ ಶಂಕರನು ಕಾಶಿ ವಿಶ್ವನಾಥನಷ್ಟು ಮತ್ತು ಶ್ರೀ ವಸಂತ ವಲ್ಲಭರಾಯಬು ತಿರುಪತಿ ತಿಮ್ಮಪ್ಪನಷ್ಟು ಪ್ರಸಿದ್ಧರಾಗಿದ್ದಾರೆ. ಎರಡೂ  ದೇವಾಲಯಗಳಲ್ಲಿ ಆಗಮ ರೀತ್ಯಾ ಪೂಜಾದಿಗಳು ನಡೆಯುತ್ತಿದ್ದು ರಥೋತ್ಸವ, ತೆಪ್ಪೋತ್ಸವಗಳೂ, ಶ್ರಾವಣಮಾಸ, ಕಾರ್ತೀಕ ಮಾಸ, ಧನುರ್ಮಾಸದಲ್ಲಿ ವಿಶೇಷ ಪೂಜಾದಿಗಳೂ ನಡೆಯುತ್ತವೆ.

ಶ್ರೀ ತ್ಯಾಗರಾಜರ ಸನ್ನಿಧಿಯಲ್ಲಿ ಪುಷ್ಯ ಬಹುಳ ಪಂಚಮಿಯಂದು ಆರಾಧನೆಯು ನಡೆಯುತ್ತದೆ. ಭವಾನಿ ಶಂಕರದೇವಾಲಯದ ಅರ್ಚಕರಾಗಿದ್ದ ವೇ|ಬ್ರ|ಶ್ರೀ| ಶೀವಸ್ವಾಮಿಯವರು ವೈದಿಕ ಶಾಸ್ತ್ರದೊಂದಿಗೆ ಸಂಗೀತ, ಕೀರ್ತನ, ಪ್ರವಚನಾದಿಗಳಲ್ಲಿ  ಪಾಂಡಿತ್ಯ ಹೊಂದಿದ್ದು, ಶ್ರೀ ಪುರಂದರ – ತ್ಯಾಗರಾಜರ ಸಂಗೀತ ಸೇವಾ ಮಂಡಲಿಯನ್ನು ಸ್ಥಾಪಿಸಿದ್ದಾರೆ. 

   

Leave a Reply