ವೀರಸಾವರ್ಕರರ ಸೆಲ್ಯುಲರ್ ಜೈಲಿಗೊಂದು ಸಾರ್ಥಕ ಯಾತ್ರೆ

ಪ್ರವಾಸ - 1 Comment
Issue Date :

-ರುಕ್ಮಿಣಿ ನಾಯಕ್

‘ನೋಡಿ, ಇಲ್ಲಿ ಕಳ್ಳಕಾಕರಿಲ್ಲ, ಅಪರಾಧಿಗಳಿಲ್ಲ, ಭಿಕ್ಷುಕರಿಲ್ಲ, ಎಲ್ಲರೂ ಹೊಂದಿಕೊಂಡು ಬದುಕುತ್ತಿದ್ದೇವೆ. ಕೋಮು ಗಲಭೆ, ಇಲ್ಲವೇ ಇಲ್ಲ. ಇದೊಂದು ಪ್ಲಾಸ್ಟಿಕ್ ರಹಿತ ಪ್ರದೇಶ. ಇಲ್ಲಿ ಸ್ವಚ್ಛತೆಗೆ ಆದ್ಯತೆ’.

ಹಿರಿಯ ನಾಗರಿಕರೊಬ್ಬರು ಈ ಮಾತನ್ನು ಹೇಳಿದಾಗ ನಾವೆಲ್ಲ ಕಣ್ಣು ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದೆವು. ಇದೇ ಮಾತನ್ನು ಐ.ಎ.ಎಸ್. ಅಕಾರಿಯೊಬ್ಬರು ಅನುಮೋದಿಸಿದಾಗ ನಾವು ನಂಬಲೇ ಬೇಕಾಯಿತು. ಈ ಅಭಿಪ್ರಾಯ ಯಾವ  ಪ್ರದೇಶದ ಬಗ್ಗೆ ಇರಬಹುದು? ಊಹಿಸಿ. ಭಾರತ ದೇಶಕ್ಕೆ ಸೇರಿದ, ಭಾರತದಿಂದ 1000 ಕಿ. ಮೀ ದೂರದಲ್ಲಿರುವ ಅಂಡಮಾನ್ – ನಿಕೋಬಾರ್ ದ್ವೀಪಗಳೇ – ಇಂತಹ ಸುಂದರ ಭೂಮಿಯ ಮೇಲಿನ ಸ್ವರ್ಗವೆನಿಸುವ ಪ್ರವಾಸೀ ಕೇಂದ್ರವಾಗಿವೆ. ಅಂಡಮಾನ್- ನಿಕೋಬಾರ್ ಪ್ರವಾಸ ನಮಗೆಲ್ಲಾ ತೃಪ್ತಿ ನೀಡಿದ್ದು ವಿಶೇಷವಾಗಿ ಇಂತಹ ವಿಚಾರಗಳಿಂದಲೇ !!

ಆತ್ಮೀಯ ಗೆಳತಿ ವನಿತಾ ಅಂಡಮಾನ್ – ನಿಕೋಬಾರ್ ಪ್ರವಾಸಕ್ಕೆ ಆಹ್ವಾನಿಸಿದಾಗ ತಕ್ಷಣವೇ ಒಪ್ಪಿಗೆ ನೀಡಿದೆ. ನಾವಿಬ್ಬರೂ ಜೊತೆಯಲ್ಲಿ ಪ್ರವಾಸ ಮಾಡಬೇಕೆಂಬುದು ನಮ್ಮ ಕನಸಾಗಿತ್ತು. ವಿಮಾನದ ಪ್ರಯಾಣವು ಪ್ರಥಮ ಅನುಭವವಾಗಿತ್ತು. ‘ದೇಶಾಭಿಮಾನಿಗಳ ಕಾಶಿ’ ಎಂದು ಕರೆಯಬಹುದಾದ  ಪೋರ್ಟ್ ಬ್ಲೇರ್ ನಲ್ಲಿರುವ ಸೆಲ್ಯುಲಾರ್ ಜೈಲಿನ ದರ್ಶನವೂ ಈ ಪ್ರವಾಸದ ಪ್ರಮುಖ ಉದ್ದೇಶವಾಗಿತ್ತು. ನನ್ನ ಜೀವದ ಗೆಳೆಯ ಸಮುದ್ರರಾಜನ ಜೊತೆಗೆ ನಾಲ್ಕಾರು ದಿನ ಇರುವ ಅಪರೂಪದ ಅವಕಾಶ ಇದಾಗಿತ್ತು.

‘ಯೋಗಶ್ರೀ’ಯ 12 ಸಜ್ಜನ ಬಂಧುಗಳ ಜೊತೆ ಕೈಗೊಂಡ ಈ ಪ್ರವಾಸ  ನಿಜಕ್ಕೂ ಹೆಜ್ಜೇನು ಸವಿದಂತೆ ಆಗಿತ್ತು. ಎಲ್ಲರಲ್ಲಿದ್ದ ಪ್ರಕೃತಿ ಪ್ರೇಮ, ಮೃದುಸ್ವಭಾವ, ಸಮಯಪಾಲನೆ, ಹೊಂದಿಕೊಳ್ಳುವ ಮನೋಭಾವ – ಈ ಯಾತ್ರೆಯನ್ನು ಶಾಶ್ವತವಾಗಿ ಸಿಹಿ ನೆನಪನ್ನು ಪ್ರಮೋದಿಸಿತು. ನಮ್ಮ ತಂಡದಲ್ಲಿ ಅತ್ಯಂತ ಹಿರಿಯರಾದ ನಾಗಭೂಷಣ್ ಜೀ ಸಮಾಜ ಸೇವೆಗೆ ತಮ್ಮ ಸಂಪೂರ್ಣ ಜೀವನವನ್ನು ಸಮರ್ಪಿಸಿಕೊಂಡ ಸಾರ್ಥಕ ವ್ಯಕ್ತಿ. ಗೆಳತಿ ವನಿತ ಕೂಡ ಪದವಿ ಶಿಕ್ಷಣ ಮುಗಿಸಿದ ಕೂಡಲೇ ಸಮಾಜ ಸೇವೆಗೆ, ಯೋಗಕ್ಕಾಗಿ ತನ್ನ ಬಾಳನ್ನು ಸಮರ್ಪಿಸಿಕೊಂಡ ಆದರ್ಶ ಮಹಿಳೆ. ಇವರಿಬ್ಬರು ನಮ್ಮ ತಂಡದ ಕಣ್ಣಾಗಿದ್ದರು. ಗಂಭೀರ ಸ್ವಭಾವದ, ಚಿಂತಕರಾದ ಚಂದ್ರಶೇಖರ್ ರವರು ನಮ್ಮ ತಂಡದ ಮೆದುಳಾಗಿದ್ದರು. ಜೀವನದ ಜವಾಬ್ದಾರಿಗಳನ್ನು ಪೂರೈಸಿ ಹರ್ಷಚಿತ್ತರಾಗಿ ಆಗಮಿಸಿದವರು ನಾಗೇಂದ್ರಪ್ಪ, ವನಜಾಕ್ಷಮ್ಮ ಹಾಗೂ ಮಂಜುನಾಥ್ ಹಾಗೂ ಶಾಲಿನಿ ದಂಪತಿಗಳು. ವನಿತಾಅಶೋಕ್ ಹಾಗೂ ವೀಣಾರವರ ನಿರಂತರ ಚಟುವಟಿಕೆ ಹಾಗೂ ನಿರರ್ಗಳ ಮಾತುಗಳು ನಮಗೆ ರಂಜನೆ ಒದಗಿಸುತ್ತಿದ್ದವು. ಮ‘ಸೂ‘ನ್ರವರು ಶಿಲ್ಪಿ ಹಾಗೂ ಕಲಾವಿದರಾಗಿದ್ದು, ನಮಗೆ ಹೆಮ್ಮೆ ಎನಿಸುತ್ತಿತ್ತು. ಸತ್ಯನಾರಾಯಣ್ ರವರ ಹಿತಿಮಿತ ಮಾತು, ಗಂಭೀರ ನಡವಳಿಕೆ ನಮಗೆ ಮೆಚ್ಚುಗೆಯಾಯಿತು. ಇವರೆಲ್ಲರ ಸ್ನೇಹಮಯ ಸಹವಾಸ ನಮ್ಮ ಪ್ರವಾಸವನ್ನು ಹಚ್ಚ ಹಸುರಾಗಿಸಿತು.

ಬೆಂಗಳೂರಿನಿಂದ ಚೆನ್ನೈಗೆ, ಚೆನ್ನೈನಿಂದ ಪೋರ್ಟ್ ಬ್ಲೇರ್ ಜೆಟ್ ಏರ್ವೇಸ್ ನಲ್ಲಿ 1 ಗಂಟೆ ಕಾಲ ಸುಖ ಪ್ರಯಾಣ ಮಾಡಿ, ಪೋರ್ಟ್ ಬ್ಲೇರ್ ವೀರ ಸಾವರ್ಕರ್ ವಿಮಾನ ನಿಲ್ದಾಣ ತಲುಪಿದೆವು. ಕನ್ನಡಿಗರಾದ, ಐಎಎಸ್ ಅಧಿಕಾರಿಯಾಗಿ ಮೀನುಗಾರಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕೃಷ್ಣಮೂರ್ತಿಯವರು ನಮ್ಮನ್ನು ತಮ್ಮ ಕಛೇರಿಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದ್ದರು. ಅವರ ಕಛೇರಿಯಲ್ಲಿ 2 ಗಂಟೆಗಳ ಕಾಲ ಸ್ಥಳೀಯ ಇತಿಹಾಸ, ವಿಶೇಷ ಪ್ರಾಕೃತಿಕ ಸಂಪತ್ತು, ಸಂಸ್ಕೃತಿ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಒಳ್ಳೆಯ ಮಾರ್ಗದರ್ಶಕರನ್ನು ಗೊತ್ತು ಮಾಡಿ ಕೊಟ್ಟು, ನಾವು ನಿರಾತಂಕವಾಗಿ ನಮ್ಮ ಪ್ರವಾಸದ ಆನಂದ ಅನುಭವಿಸಲು ನೆರವಾದರು. ನಮಗೆಲ್ಲಾ ಚೇತೋಹಾರಿಯಾದ ಲೆಮನ್ ಟೀ ನೀಡಿ ಸತ್ಕರಿಸಿದರು.

ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ನಿಕೋಬಾರ್ 572 ದ್ವೀಪಗಳ ಸಮೂಹ. 8250 ಚ. ಕೀ. ವಿಸ್ತೀರ್ಣವುಳ್ಳದ್ದು. ಇಲ್ಲಿಯ ಜನಸಂಖ್ಯೆ 3,80,000. ಶೇ. 93ರಷ್ಟು ಭಾಗ ಕಾಡಿನಿಂದ ಕೂಡಿದೆ. ಈ ಕಾಡುಗಳಲ್ಲಿ ವೈವಿಧಮಯ ಸಸ್ಯ ಹಾಗೂ ಪ್ರಾಣಿ ಸಂಕುಲ ಕಂಡು ಬರುತ್ತದೆ. ಬಂಗಾಳಕೊಲ್ಲಿಯ ನೀರು ಸಟಿಕದಷ್ಟು ಶುಭ್ರವಾಗಿದೆ. ಮರಳ ದಂಡೆಗಳು ನಿರ್ಮಲವಾಗಿವೆ. ಸಮುದ್ರದಲ್ಲಿರುವ ಅಪರೂಪದ ಜಲಚರಗಳೂ, ಕೋರಲ್ಸ್, ಮ್ಯಾಂಗ್ರೂವ್ ವೃಕ್ಷಗಳ ಸಾಲು, ಶುದ್ಧ ಗಾಳಿ, ಸುಂದರ ಪರಿಸರ – ಇವೆಲ್ಲವೂ ಅಂಡಮಾನ್ – ನಿಕೋಬಾರ್ – ದ್ವೀಪಗಳನ್ನು ಭೂಸ್ವರ್ಗವನ್ನಾಗಿಸಿವೆ.

ನಾವು ಇಳಿದುಕೊಂಡ ವಸತಿ ಹಾಗು ಉಪಹಾರಮಂದಿರದ ಹೆಸರು ‘ಡ್ಯೂಗಾಂಗ್’. ಡ್ಯೂಗಾಂಗ್ ಎನ್ನುವುದು ಒಂದು ಜಾತಿಯ ಮೀನಿನ ಹೆಸರು. ಅದು ಕೇವಲ ಜೊಂಡನ್ನು ತಿಂದು ಬದುಕುವುದರಿಂದ ಅದನ್ನು ‘ ಸೀ ಕೌ’ ಸಮುದ್ರದ ಹಸು ಎಂದು ಕರೆಯುತ್ತಾರೆ. ಹೋಟೆಲ್ ನಲ್ಲಿ ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು, ವಿವರಣೆಗಳನ್ನು ತೂಗು ಹಾಕಿದ್ದಾರೆ. ನಾವೇ ಆಯ್ಕೆ ಮಾಡಿಕೊಂಡ ಉಪಹಾರ-ಊಟ ಮಾಡಿಕೊಡುತ್ತಿದ್ದುದರಿಂದ ನಾವೆಲ್ಲಾ ಆರೋಗ್ಯದ ಯಾವ ಸಮಸ್ಯೆಯೂ ಇಲ್ಲದೆ ಪ್ರವಾಸ ಮುಗಿಸಿದೆವು.

ನಮ್ಮ ವಸತಿಯ ಎದುರೇ ಅಕ್ವೇರಿಯಂ ಇತ್ತು. ಸ್ಥಳೀಯವಾಗಿ ಸಮುದ್ರದಲ್ಲಿ ವಾಸಿಸುವ ಚಿತ್ರ ವಿಚಿತ್ರ ಮೀನುಗಳು. ಕಲ್ಲು ಮೀನು(ವಿಷಮಯ), ಗರಗಸಮೀನು, ಒಂದು ಮೀನಿಗಂತೂ ನಾವೇ ವಿಶ್ವ ಸುಂದರಿ ಎಂದು ಹೆಸರಿಟ್ಟೆವು. ಸುಂದರ, ಅತಿಸುಂದರ ಕೋರಲ್ ಗಳ ಸಂಗ್ರಹ ಕಂಡು ಆ ಪರಮಾತ್ಮ ಎಂತಹ ಕಲಾವಿದ ಎಂಬ ಉದ್ಗಾರ ನಮ್ಮಿಂದ ಹೊರಟಿತು. ನಮ್ಮ ವಸತಿಯ ಹಿಂಭಾಗದಲ್ಲಿ ಪ್ರಸಿದ್ಧ ಸೆಲ್ಯೂಲಾರ್ ಜೈಲ್ ಇತ್ತು. ಅಲ್ಲಿ ಪ್ರತಿದಿನ ಸಂಜೆ ಬೆಳಕು – ಸಂಗೀತ ಸಂಯೋಜನೆಯಿಂದ ಇತಿಹಾಸವನ್ನು ನೆನಪಿಸುವ ಪ್ರಯತ್ನ ಶ್ಲಾಘನೀಯವಾಗಿತ್ತು. ಜೈಲು ಆರಂಭಗೊಂಡಂದಿನಿಂದ ಇರುವ ಒಂದು ಅರಳಿ ಮರವನ್ನು ‘ಸಾಕ್ಷಿ’ಯಾಗಿ ಮಾಡಿಕೊಂಡು, ಅದು ನಡೆದ ಘಟನೆಗಳನ್ನು ಹೇಳುತ್ತಿರುವಂತೆ ಕಾರ್ಯಕ್ರಮ ರೂಪಿಸಲಾಗಿದೆ. ಮಧ್ಯೆ ಮಧ್ಯೆ ಖೈದಿಗಳ ಚೀತ್ಕಾರ ಮನ ಕಲಕಿದರೆ, ಮಧುರವಾದ ದೇಶಭಕ್ತಿಗೀತೆ ಸಂದರ್ಭದ ಗಾಂಭೀರ್ಯ ಹೆಚ್ಚಿಸುತ್ತಿತ್ತು.

ಮಾರನೇ ದಿನ ಸೆಲ್ಯುಲಾರ್ ಜೈಲನ್ನು ವೀಕ್ಷಿಸಲು ತೆರಳಿದೆವು. ನಮ್ಮ ಪ್ರವಾಸದ ಮುಖ್ಯ ಉದ್ಧೇಶವೇ ಅದರ ದರ್ಶನವಾದ್ದರಿಂದ ನಾವು ಅದರ ಬಳಿ ಸಮೀಪಿಸಿದಾಗ ಭಾವುಕರಾದೆವು. ಸ್ವಾತಂತ್ರ್ಯ ಹೋರಾಟಗಾರರನ್ನೇ ಕೂಲಿಗಳನ್ನಾಗಿ ಮಾಡಿ ಕಟ್ಟಿದ ಈ ಜೈಲು ಕೇವಲ ಕಲ್ಲುಗಾರೆಗಳ ಕಟ್ಟಡವಾಗಿರದೆ, ನಮ್ಮ ವೀರರ ರಕ್ತ-ಬೆವರು ಮೀರಿ ನಿಂತಿದೆ ಎಂದು ನೆನೆದಾಗ ಮನಸ್ಸು ನೋವಿನ ಗೂಡಾಗಿತ್ತು.

1868ರಲ್ಲಿ 1000 ಜನ ಸ್ವಾತಂತ್ರ್ಯ ಯೋಧರು ಮೊದಲ ಬಾರಿಗೆ ಅಂಡಮಾನ್-ನಿಕೋಬಾರ್ ದ್ವೀಪವನ್ನು ಪ್ರವೇಶಿಸಿದರು. ಅವರಲ್ಲಿ ಬಹಳಷ್ಟು ಜನರಿಗೆ ಕಾಲಿಗೆ ಸರಪಳಿ ಕಟ್ಟಿ , ಮರ ಕಡಿಯುವ ಕೆಲಸಕ್ಕೆ ನಿಯುಮಿಸಿದರು. ಬ್ರಿಟಿಷ್ ಸರ್ಕಾರ ಪೋರ್ಟ್ ನಲ್ಲಿ ಅತ್ಯಕ ರಕ್ಷಣೆಯಿರುವ ಜೈಲು ನಿರ್ಮಿಸುವ ಯೋಜನೆ ಹಾಕಿದರು. ಏಕೆಂದರೆ ಈ ದ್ವೀಪದ ಸುತ್ತಲೂ 1000 ಕಿ.ಮೀ. ಸುತ್ತಳತೆ ಸಮುದ್ರ ಆವರಿಸಿಕೊಂಡಿತ್ತು. 1896ರಲ್ಲಿ 700 ಖೈದಿಗಳನ್ನು ಪ್ರತ್ಯೇಕವಾಗಿ ಕೂಡಿಡಬಹುದಾದ ಜೈಲನ್ನು ಕಟ್ಟುವ ಕೆಲಸ ಆರಂಭಿಸಿದರು. 1906ರಲ್ಲಿ ಇದರ ಕೆಲಸ ಪೂರ್ಣಗೊಂಡಿತು. ಇದು ನಕ್ಷಾತ್ರಾಕಾರದಲ್ಲಿ ಏಳು ದಿಕ್ಕುಗಳಲ್ಲಿ ಚಾಚಿಕೊಂಡಿರುವ ಏಳು ಭಾಗಗಳನ್ನು ಹೊಂದಿದ ಮೂರು ಅಂತಸ್ತಿನ ಕಟ್ಟಡ. ಮಧ್ಯದಲ್ಲಿ ಪರಿವೀಕ್ಷಣಾ ಕೇಂದ್ರದ ಗೋಪುರವಿದೆ. ಒಂದು ಭಾಗದ ಖೈದಿಗಳು ಇನ್ನೊಂದು ಭಾಗದ ಹಿಂಬದಿಯ ಗೋಡೆಯನ್ನೊಂದು  ಕಾಣಬಹುದೇ ಹೊರತು, ಇತರ ಖೈದಿಗಳನ್ನಲ್ಲ. ಹೊಸ ಖೈದಿಗಳು ಪ್ರವೇಶಿಸುವುದೂ ಬಹಳ ರಹಸ್ಯವಾದ ಮಾರ್ಗದಿಂದ. ಪರಿವೀಕ್ಷಣಾ ಗೋಪುರದಿಂದ ಪ್ರತಿಯೊಂದು ಭಾಗದ ಖೈದಿಗಳ ಚಟುವಟಿಕೆಗಳನ್ನು ಕಾಣಬಹುದು. ವಿಪರ್ಯಾಸವೆಂದರೆ ಭಾರತೀಯ ಖೈದಿಗಳು ಕಟ್ಟಿದ ಜೈಲಿನಲ್ಲಿ!  ಭಾರತದ ವಿಮೋಚನೆಗಾಗಿ ಹೋರಾಡಿದ ಭಾರತೀಯರೇ ಶಿಕ್ಷೆ ಅನುಭವಿಸುವಂತಾಯಿತು.

ಈ ಜೈಲಿನ ಸುತ್ತಲಿರುವ ಸಮುದ್ರದ ನೀರು ಬಹಳ ಆಳವಾಗಿದ್ದು ಕಪ್ಪು ಬಣ್ಣದ್ದಾಗಿ ಕಾಣುತ್ತದೆ. ಹಾಗಾಗಿ ಕಾಲಾಪಾನಿ ಎಂದು ಹೆಸರು ಬಂದಿರಬಹುದು. ಜೊತೆಯಲ್ಲಿ ಇಲ್ಲಿನ ಚಿತ್ರ – ವಿಚಿತ್ರ ಅಮಾನವೀಯ ಶಿಕ್ಷೆಯನ್ನು ಅನುಭವಿಸಿದವರು  ಕೊಟ್ಟ ಹೆಸರೂ ಇರಬಹುದು. ಇಲ್ಲಿ ನೀಡಿದ ನರಕ ಸದೃಶ ಶಿಕ್ಷೆ ಹೊರಜಗತ್ತಿಗೆ ಗೊತ್ತಾಗುತ್ತಲೇ ಇರಲಿಲ್ಲ. ಅದೂ ಒಂದು ಕಾರಣದಿಂದ ಕಾಲಾಪಾನೀ ಎಂಬ ಹೆಸರು ಬಂದಿರಬಹುದು.

ಸಣ್ಣ ಪುಟ್ಟ ಕಾರಣಗಳಿಗೂ ಬ್ರಿಟಿಷ್ ಸರ್ಕಾರ ಭಾರತೀಯರಿಗೆ ಕಾಲಾಪಾನೀ ಶಿಕ್ಷೆ ವಿಸುತ್ತಿತ್ತು. ಅಂತಹ ಅಪರಾಧಗಳನ್ನು ಪ್ರಾಣಿಗಿಂತ ಕಡೆಯಾಗಿ ನೋಡುತ್ತಿದ್ದರು. ಹುಳುಗಳಿಂದ ಕೂಡಿದ ಆಹಾರ, ಕುಡಿಯಲು ಕೊಳಕು ನೀರು – ಅದರಲ್ಲೂ ದಿನಕ್ಕೆ ಎರಡು ಲೋಟ ಮಾತ್ರ ನೀಡಲಾಗುತ್ತಿತ್ತು. ಅವರು ಕೊಟ್ಟ ಆಹಾರವಸ್ತು ತಿನ್ನಲೇಬೇಕು. ತಿರಸ್ಕರಿಸಿದರೆ ಕಠಿಣ ಶಿಕ್ಷೆ. ಮಲ-ಮೂತ್ರ ವಿಸರ್ಜನೆಗೂ ಜೈಲರನ ಅನುಮತಿ ಕೇಳಬೇಕಾಗುತ್ತಿತ್ತು.

ಅಲ್ಲಿಯ ವ್ಯವಸ್ಥೆಯನ್ನು ವಿರೋಧೀಸುವ ಖೈದಿಗಳಿಗಂತೂ ಊಹಿಸಲು ಸಾಧ್ಯವಾಗದ ಶಿಕ್ಷೆಗಳು. ಎಣ್ಣೆಯ ಗಾಣಕ್ಕೆ ಖೈದಿಯನ್ನು ಕಟ್ಟಿ, ಪ್ರತಿದಿನ 30 ಪೌಂಡ್ ಎಣ್ಣೆ ತೆಗೆಯಬೇಕೆಂಬ ನಿರ್ಬಂಧ. ಆಯಾಸಗೊಂಡು ನಿಲ್ಲಿಸಿದರೆ ಛಾಟಿ ಏಟು.

ಕೈಕಾಲು ಮಡಚದ ಹಾಗೆ ಕಬ್ಬಿಣದ ಸರಳುಗಳನ್ನು ಹಾಕಿ ವಾರಗಟ್ಟಲೆ ನಿಲ್ಲಿಸುತ್ತಿದ್ದರು. ಈ ಶಿಕ್ಷೆಗಳ ಪ್ರತಿರೂಪಗಳನ್ನು ಮಾಡಿ ನಿಲ್ಲಿಸಿದ್ದರಿಂದ, ನಮಗೆ ಆ ಶಿಕ್ಷೆಯ ತೀವ್ರತೆಯ ಆರಿವಾಯಿತು. ಪ್ರತಿಯೊಬ್ಬ ಖೈದಿಯನ್ನು ಗಲ್ಲಿಗೇರಿಸಿದಾಗಲೂ ಕೇಂದ್ರದಲ್ಲಿನ ಪರಿವೀಕ್ಷಣಾಲಯದ ಗಂಟೆ ಬಾರಿಸುತ್ತಿದ್ದರು. ಖೈದಿಗಳ ಮಾನಸಿಕ ಸ್ಥೈರ್ಯ ಕೆಡಿಸುವ ಹುನ್ನಾರ ಬ್ರಿಟಿಷರದು. ಆದರೆ ಸಾವರ್ಕರರಂತಹ ನಾಯಕರು ಖೈದಿಗಳ ಹೃದಯದಲ್ಲಿ ದೇಶಪ್ರೇಮ, ಆತ್ಮ ವಿಶ್ವಾಸ ತುಂಬುತ್ತಿದ್ದುದರಿಂದ, ಈ ಖೈದಿಗಳು ಅಂತಹ ಸಂದರ್ಭದಲ್ಲಿ ಒಟ್ಟಾಗಿ, ಜೈಲಿನ ಕಟ್ಟಡ ಅದುರುವಂತೆ ಬ್ರಿಟಿಷ್ ಸರ್ಕಾರದ ಅಡಿಪಾಯ ಅಲ್ಲಾಡುವಂತೆ ‘ವಂದೇ ಮಾತರಂ’ ಘೋಷಣೆಯನ್ನು ಕೂಗುತ್ತಿದ್ದರು.

ಇಂತಹ ಘಟನೆ ನಡೆದಾಗಲೆಲ್ಲ ಜೈಲರ್ ಡೇಡ್ ಬ್ಯಾರಿ ಇನ್ನೂ ಕ್ರೋತನಾಗುತ್ತಿದ್ದನು. ಮೊದಲೇ ಕೊಲೆಗಡುಕ, ಕ್ರೂರಿ, ರಾಕ್ಷಸ ಜಾತಿಗೆ ಸೇರಿದವನು. ತನ್ನದೇ ರಾಕ್ಷಸರ ತಂಡ ಕಟ್ಟಿಕೊಂಡು ಖೈದಿಗಳನ್ನು ಶಿಕ್ಷಿಸಿ, ಅವರ ನೋವಿನಲ್ಲೇ ಆನಂದ ಪಡುತ್ತಿದ್ದ ಅಧಮಾಧಮ ಮನುಷ್ಯನೀತ.

ಮೂವರು ಖೈದಿಗಳಿಗೆ ಒಟ್ಟಿಗೆ ಗಲ್ಲಿಗೇರಿಸುವ ವ್ಯವಸ್ಥೆ ಮಾಡಿದ್ದರು. ಅಲ್ಲಿ ನಾವು ಹುತಾತ್ಮರಿಗೆ ಮೌನ ಶ್ರದ್ಧಾಂಜಲಿ ಅರ್ಪಿಸಿದೆವು. ನಮಗೆ ಗೈಡ್ ಆಗಿ ಬಂದ ಹುಡುಗ ನೀಡಿದ ಜೈಲಿನ ವಿವರ ಮನ ಕಲಕುವಂತಿತ್ತು. ಅವನೂ  ಒಬ್ಬ ಸಂಘದ ಸ್ವಯಂಸೇವಕನೆಂದು – ಇದರಿಂದ ಪ್ರಭಾವಿತನಾದನೆಂದು  ನಂತರ ತಿಳಿಯಿತು. ಶೇ.99ರಷ್ಟು ಜನ ಅಕ್ವೇರಿಯಂ, ಸಮುದ್ರದ ಬೀಚ್ ನೋಡಿದ ಹಾಗೆ ಈ ಜೈಲನ್ನು ಸಂದರ್ಶಿಸುತ್ತಾರೆ. ನಿಮ್ಮ ಹಾಗೆ ಇದರ ಬಗ್ಗೆ ಅರಿತು ಭಾವುಕರಾಗಿ ದರ್ಶನ ಪಡೆಯುವವರು ಅಪರೂಪ ಎಂದು ತನ್ನ ಅನುಭವ ಹಂಚಿಕೊಂಡ.

ಸಾವರ್ಕರ್ ಸೆಲ್

ವೀರ ಸಾವರ್ಕರ್ ರನ್ನು ಕೂಡಿಟ್ಟ ಸೆಲ್ ಗೆ ಹೋದೆವು. ಉಳಿದ ಸೆಲ್ಗಳಿಗೆ ಒಂದು ಬಾಗಿಲಾದರೆ, ಈ ಸೆಲ್ಗೆ ಎರಡು ಕಬ್ಬಿಣದ ಗಟ್ಟಿಮುಟ್ಟಾದ ಬಾಗಿಲು. ಏಕೆಂದರೆ ಬ್ರಿಟಿಷ್ ಸರ್ಕಾರ ಇವರನ್ನು ಬಂಧಿಸಿ ಭಾರತಕ್ಕೆ ಕರೆತರುವಾಗ, ಶೌಚಾಲಯದ ಗಾಜಿನ ಕಿಟಕಿಯಿಂದ ಸಮುದ್ರಕ್ಕೆ ಹಾರಿ, ಸಾಕಷ್ಟು ದೂರ ಈಜಿಕೊಂಡು ಫ್ರಾನ್ಸ್ ದೇಶದ ನೆಲವನ್ನು ತಲುಪಿದರು. ಅಲ್ಲಿಂದ ಬ್ರಿಟಿಷ್ ಸೈನಿಕರು ಇವರನ್ನು ಬಂಸುವಂತಿರಲಿಲ್ಲ. ಇವರನ್ನು ಕರೆದೊಯ್ಯಲು ಬರಬೇಕಾಗಿದ್ದ ಮೇಡಂ ಕಾಮಾರವರು ಕೆಲವೇ ನಿಮಿಷ ತಡವಾಗಿ ಆಗಮಿಸಿದ್ದು , ದುರಾದೃಷ್ಟಕರ ಸಂಗತಿಯಾಯಿತು. ಫ್ರಾನ್ಸ್ ಸರ್ಕಾರದ ಪೊಲೀಸರನ್ನು ಒಲಿಸಿ, ಬ್ರಿಟಿಷ್ ಸರ್ಕಾರ ಸಾವರ್ಕರ್ರವರನ್ನು ತಮ್ಮ ವಶಕ್ಕೆ ತೆಗೆದುಕೊಂಡು ಸೆಲ್ಯುಲರ್ ಜೈಲಿನಲ್ಲಿ ಕೂಡಿಹಾಕಿದರು. ಅಲ್ಲಿ ಅವರಿಗೆ ಎರಡು ಜೀವಾವ ಕಠಿಣ ಶಿಕ್ಷೆ ಎಂದರೆ 50 ವರ್ಷದ ಅವಗೆ ಶಿಕ್ಷೆ ವಿಧಿಸಿದರು.

ವಿನಾಯಕ ದಾಮೋದರ ಸಾವರರ್ಕರ್ರವರ ಹೆಸರು, ವ್ಯಕ್ತಿತ್ವ ಬಹಳಷ್ಟು ಜನರಿಗೆ ತಿಳಿದಿಲ್ಲ. ಕಾರಣ ಸ್ವಾತಂತ್ರ್ಯಾನಂತರದ ಶಿಕ್ಷಣ ಪದ್ಧತಿ. ಸಾವರ್ಕರ್ ಹುಟ್ಟು ಹೋರಾಟಗಾರ. ಅವರ ಸಹೋದರ ಗಣೇಶ ದಾಮೋದರ ಸಾವರ್ಕರ್ ಸಹ ಕರಿನೀರಿನ ಶಿಕ್ಷೆಗೆ ಗುರಿಯಾದವರು. ಕ್ರಾಂತಿಕಾರಿಗಳಿಗೆ ಪ್ರೇರಣೆ ನೀಡಿ, ಅವರಲ್ಲಿ ಬ್ರಿಟಿಷರ ವಿರುದ್ಧ ಹೋರಾಡುವ ಛಲ ಮೂಡಿಸಿ, ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ‘ರತದಲ್ಲಿ ಕೊನೆ ಹಾಡಲು ಪ್ರಮುಖ ಕಾರಣೀ‘ತರಲ್ಲಿ ಸಾವರ್ಕರರು ಒಬ್ಬರು.

ಸೆಲ್ಯುಲರ್ ಜೈಲಿನ ಯಾವ ಶಿಕ್ಷೆಯೂ ಅವರನ್ನು ಕಂಗೆಡಿಸಲಿಲ್ಲ. ಬದಲಿಗೆ ಬೂದಿ ತೆಗೆದ ಕೆಂಡದಂತೆ ಅವರ ಆತ್ಮ ಬಲ ಪ್ರಜ್ವಲಿಸಿತು. ತನ್ನ ಒಂದು ಕೈಗೆ ಕೋಳ ಹಾಕಿದ್ದರೂ ಸಹ ಕೈಗೆ ದೊರಕಿದ ಮೊಳೆಯಿಂದ ಸೆಲ್ ನ ಗೋಡೆ ಮೇಲೆ 1000 ಸಾಲುಗಳ ಕಮಲ ಎಂಬ ಕಾವ್ಯವನ್ನು ಕೆತ್ತಿದ ಮಹಾನ್ ಕವಿ ಈತ. ಸಾವರ್ಕರ್ ರಿಂದಲೇ ಮರಾಠಿ ಕಲಿತ ಸ್ನೇಹಿತರೊಬ್ಬರು, ಸಾವರ್ಕರ್ ರವರನ್ನು ಭಾರತಕ್ಕೆ ಕಳುಹಿಸಿದ ನಂತರ ಅದೇ ಕೊಠಡಿಗೆ ಖೈದಿಯಾಗಿ ಸೇರಿಕೊಂಡರು, ಈ ಪತ್ರಿಕೋದ್ಯಮಿ ಸ್ನೇಹಿತ ಗೋಡೆಯ ಮೇಲಿದ್ದ ಕಮಲ ಕಾವ್ಯದ 1000 ಸಾಲುಗಳನ್ನು ಕಂಠಪಾಠ ಮಾಡಿ, ಬಿಡುಗಡೆಯಾದ ನಂತರ ಅದನ್ನು ಬರೆದು ಸಾವರ್ಕರ್ ರಿಗೆ ಕಳುಹಿಸಿದರು. ಡೇವಿಡ್ಬ್ಯಾರಿಯ ದೈತ್ಯ ಶಕ್ತಿಗೆ ಸವಾಲಾಗಿ ನಿಂತ ಆಧ್ಯಾತ್ಮಿಕ ಶಕ್ತಿ ವೀರ ಸಾವರ್ಕರ್ ರವರು. ತಮ್ಮ ಅತ್ತಿಗೆಗೆ ಬರೆದ ಒಂದು ಪತ್ರದಲ್ಲಿ ಅವರು ಹೇಳುತ್ತಾರೆ – ಸರೋವರದಲ್ಲಿ ನೂರಾರು ಕಮಲಗಳು ಅರಳುತ್ತವೆ. ಬಾಡುತ್ತವೆ. ಆದರೆ ಗಜೇಂದ್ರನಿಂದ ವಿಷ್ಣುವಿಗೆ ಅರ್ಪಿಸಲ್ಪಟ್ಟ ಕಮಲದ ಬದುಕು ಸಾರ್ಥಕವಲ್ಲವೇ? ದೇಶಕ್ಕಾಗಿ ಮುಡುಪಾಗಿಟ್ಟ ನಮ್ಮ ಕುಟುಂಬದ ಸದಸ್ಯರ ಬಾಳೂ ಹಾಗೆಯೇ ಅಲ್ಲವೇ? ಎಂತಹ ಭಾವಪೂರ್ಣ ಮಾತಲ್ಲವೇ?

ಇಂತಹ ಮಹಾನ್ ಚೇತನವನ್ನು ಬಂಸಿದ ಜೈಲಿನ ಕೊಠಡಿ ಹೊಕ್ಕಾಗ ನಾವು ಭಾವಪೂರ್ಣರಾಗಿ ಮೂಕರಾಗಿದ್ದೆವು. ಕೊಠಡಿಯಲ್ಲಿ ಸ್ವಚ್ಛತೆಯಿತ್ತು. ಗೋಡೆಯ ಮೇಲೆ ಹಾರ ಹಾಕಿದ ಸಾವರ್ಕರ್ ರವರ ಭಾವಚಿತ್ರವಿತ್ತು. ಅದರ ಮುಂದೆ ಕುಳಿತು ನಾವು ‘ಓ ಎನ್ನ ದೇಶ ಬಾಂಧವರೇ, ಕಂಬನಿಗಳ ನೋಡಾ ಚೆಲ್ಲಿ , ಪ್ರಾಣಾಹುತಿ ನೀಡಿದ ಅವರ ಸಂಸ್ಮರಿಸಿ ಆ ಬಲಿದಾನ’ ಎಂಬ ಗೀತೆಯನ್ನು ಒಟ್ಟಾಗಿ ಹಾಡಿದೆವು. ಈ ಸಾಲುಗಳು ಮುಗಿದಾಗ ನಮ್ಮೆಲ್ಲರ ಕಣ್ಣು ಮಂಜಾಗಿತ್ತು.

ಏಳು ಭಾಗದಲ್ಲಿ ಎರಡು ಭಾಗಗಳನ್ನು ಜಪಾನೀಯರು ಕೆಡವಿ ಹಾಕಿದ್ದರು. ಇನ್ನೆರಡನ್ನು ಸ್ವಾತಂತ್ರ್ಯಾನಂತರ ಕೆಡವಲಾಯಿತು. ಭಾರತದ ಜನ ಇದನ್ನು ವಿರೋಸಿದ್ದರಿಂದ ಕೆಡಹುವ ಕೆಲಸ ನಿಲ್ಲಿಸಿದರು. ಈಗ ಇರುವ ಮೂರು ಭಾಗಗಳ ಕಟ್ಟಡ, ಕೇಂದ್ರ ಪರಿವೀಕ್ಷಣಾಲಯಗಳು ಉಳಿದಿವೆ. 1979ರಲ್ಲಿ ಈ ಜೈಲನ್ನು ರಾಷ್ಟ್ರೀಯ ಸ್ಮಾರಕವೆಂದು ಭಾರತ ಸರ್ಕಾರ ಘೋಷಿಸಿತು. ಬಿದ್ದುಹೋದ ಭಾಗಗಳ ಜಾಗದಲ್ಲಿ ಮಹದೇವ ಗೋವಿಂದರಾನಡೆಯವರ ಹೆಸರಿನಲ್ಲಿ ಉಚಿತ ಆಸ್ಪತ್ರೆ ಸ್ಥಾಪಿಸಲಾಗಿದೆ.

ಕೇಂದ್ರ ವೀಕ್ಷಣಾಲಯದಲ್ಲಿ ಬಂತರಾದ ಕೈದಿಗಳ ಹೆಸರುಗಳ, ರಾಜ್ಯವಾರು ಪಟ್ಟಿಯನ್ನು ಹಾಕಿದ್ದಾರೆ. ಪಂಜಾಬ್, ಬಂಗಾಲ ಅತ್ಯಧಿಕ ಸಂಖ್ಯೆಯ ಹೋರಾಟಗಾರರನ್ನು ಕಳುಹಿಸಿವೆ. ಕರ್ಣಾಟಕದವರ ಒಂದೇ ಒಂದು ಹೆಸರು ಅಲ್ಲಿ ಕಂಡು ಬರಲಿಲ್ಲ. ಪುಣ್ಯಕೋಟಿಯ ನಾಡಿನವರಲ್ಲವೇ? ಮುಂದೆ ಬಂದರೆ ಹಾಯಲ್ಲ. ಹಿಂದೆ ಬಂದರೆ ಒದೆಯಲ್ಲ – ಶತ್ರುವನ್ನು!!

ಜೈಲಿನ ಮುಂಭಾಗದಲ್ಲಿ ವೀರಸಾವರ್ಕರರ ಸ್ಮಾರಕ ಉದ್ಯಾನವನವಿದೆ. ಅಲ್ಲಿ ಸಾವರ್ಕರ್ ಪ್ರತಿಮೆಯೊಂದಿಗೆ ಇನ್ನೂ ಆರು ಮಂದಿ ಹುತಾತ್ಮರ ಪ್ರತಿಮೆಗಳನ್ನು ನಿಲ್ಲಿಸಿದ್ದಾರೆ. ಅವರ ಜೀವನದ ಸಂಕ್ಷಿಪ್ತ ವಿವರವನ್ನು ಕೆತ್ತಿದ್ದಾರೆ. ಅವರಲ್ಲಿ ಮೂವರನ್ನು ಆಹಾರ ಕೊಡದೇ ಸಾಯಿಸಿದ್ದಾರೆ. ಮೂವರನ್ನು ಆಹಾರ ತುರುಕಿ ತುರುಕಿ ಉಸಿರಾಟವಾಡದಂತೆ ಮಾಡಿ ಕೊಂದಿದ್ದಾರೆ. ಇಂತಹ ದೃಶ್ಯಗಳನ್ನೆಲ್ಲಾ ಕಂಡು ಮನಸ್ಸು ಅಂದಿನ ದಿನಗಳಿಗೇ ಸರಿದಿತ್ತು. ಶಿವರಾಮುರವರು ಬರೆದ ‘ಆತ್ಮಾಹುತಿ’ ಗ್ರಂಥ ನನ್ನ ಜೀವನದಲ್ಲಿ ಒಂದು ಪ್ರಮುಖ ತಿರುವನ್ನು ನೀಡಿತು. ಅದನ್ನು ಓದಿದಾಗ ಮನಸ್ಸಿನಲ್ಲಿ ಆಗ ನಡೆದುದೆಲ್ಲ ಒಡಮೂಡಿತ್ತು. ನಾಲ್ಕು ದಶಕಗಳ ನಂತರ ಈ ಜೈಲಿಗೆ ನೀಡಿದ ಭೇಟಿ ಅದನ್ನು ಸಾಕಾರಗೊಳಿಸಿತ್ತು! ಸಾವಿರಾರು ಹುತಾತ್ಮರ ಬಲಿದಾನಕ್ಕೆ ಭಾರತೀಯರು ನ್ಯಾಯ ಸಲ್ಲಿಸಿದ್ದೇವೆಯೇ? ಇನ್ನು ಮುಂದೆ ನಮ್ಮ ಗುರಿ ಏನು? ದೇಶದ ಭವಿಷ್ಯಕ್ಕೆ ನಮ್ಮ ಕೊಡುಗೆ ಏನು? ಈ ಎಲ್ಲಾ ಪ್ರಶ್ನೆಗಳೂ ಮನದಲ್ಲಿ ಮೂಡಿ ಚಿಂತನೆಗೆ ಹಚ್ಚಿತು.

ಪ್ರತಿಯೊಬ್ಬ ದೇಶಪ್ರೇಮಿ ಭಾರತೀಯನೂ ಒಂದಲ್ಲ ಒಂದು ಸಲ ಈ ಸೆಲ್ಯುಲರ್ ಜೈಲಿಗೆ ‘ಟಿಕೊಟ್ಟು ಶ್ರದ್ಧಾಂಜಲಿ ಅರ್ಪಿಸಲೇಬೇಕು.  ಇದು ಒಂದು ಕನಿಷ್ಟ ಕರ್ತವ್ಯ. ಇಲ್ಲಿಗೆ  ಬರುವ ಮೊದಲು ಶಿವರಾಮುರವರ ‘ಆತ್ಮಾಹುತಿ’ ಗ್ರಂಥವನ್ನು ಓದಬೇಕು. ಆಗ ಮಾತ್ರ ಈ ಪ್ರವಾಸಕ್ಕೆ ಅರ್ಥ ಬಂದೀತು.

ಚತಂ ಸಾಮಿಲ್

ಪ್ರವಾಸದ ಒಂದು ಭಾಗ ಸೆಲ್ಯುಲರ್ ಜೈಲಿನ ವೀಕ್ಷಣೆಯಾದರೆ, ಇನ್ನೊಂದು ಭಾಗ ಸುಂದರ ಪ್ರಕೃತಿಯ ವೀಕ್ಷಣೆ. ಮೊದಲಿಗೆ ನಮ್ಮನ್ನು ‘ಚತಂ ಸಾಮಿಲ್’ ನೋಡಲು ಕರೆದೊಯ್ದರು. ಇದೇನಪ್ಪಾ  ಸಾಮಿಲ್ ಯಾಕೆ ತೋರಿಸ್ತಿದಾರೆ ಅಂತ ನಮಗೆ ಆಶ್ಚರ್ಯ. ದಟ್ಟ ಕಾಡಿನಲ್ಲಿ ಬೆಳೆದ ಉತ್ತಮ ಜಾತಿಯ ಮರದ ದಿಮ್ಮಿಗಳನ್ನು ಸಂಗ್ರಹಿಸಿರುವ ಸ್ಥಳ. ಈ ಉದ್ಯಮ ಸರ್ಕಾರಕ್ಕೆ ಒಳ್ಳೆಯ ಆದಾಯದ ಆಕರವಾಗಿದೆ. 100 ವರ್ಷಗಳ ಇತಿಹಾಸವಿರುವ ಈ ಸಾಮಿಲ್ ಬ್ರಿಟಿಷರಿಂದ ನಿರ್ಮಿತವಾದುದು. ಸುನಾಮಿಯ ಹೊಡೆತಕ್ಕೂ ಜಗ್ಗಿಲ್ಲ. ಇಲ್ಲಿಂದ ವಿದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ಮರದ ದಿಮ್ಮಿಗಳು ರವಾನೆಯಾಗುತ್ತವೆ. ದೀರ್ಘಕಾಲ ಬಾಳಿಕೆ ಬರುವ ಕಾರಣ ಇವಕ್ಕೆ ಬಹಳ ಬೇಡಿಕೆಯಿದೆ. ಇಲ್ಲಿ  ಚಿತ್ರ ವಿಚಿತ್ರವಾದ ಗರಗಸಗಳು ಬೃಹದಾಕಾರದ ದಿಮ್ಮಿಗಳನ್ನು ಬೇಕಾದ ಆಕಾರಕ್ಕೆ, ಬೇಕಾದ ಅಳತೆಗೆ ಕತ್ತರಿಸಿ ಹಾಕುತ್ತವೆ. ಕೃಷ್ಣನ ಚಕ್ರದ ಹಾಗಿರುವ ಸುದರ್ಶನ ಗರಗಸವನ್ನು ನೋಡಿದೆವು. ಚತಂ ಸಾಮಿಲ್ ನಲ್ಲಿ ಮರದ ಕೆತ್ತನೆಯ ಸುಂದರವಾದ ವಸ್ತುಗಳ ಸಂಗ್ರಹಾಲಯ ನೋಡಿ ಆನಂದಿಸಿದೆವು. ಇಲ್ಲಿ ಮಾರಾಟದ ವ್ಯವಸ್ಥೆ ಇರಲಿಲ್ಲ.

ಡ್ಯುಗಾಂಗ್ ವಸತಿಯಿಂದ ಕಾಣುತ್ತಿದ್ದ ‘ರಾಸ್’ ಐಲ್ಯಾಂಡನ್ನು ನೋಡಲು ದೋಣಿಯಲ್ಲಿ ಹೊರಟು 20 ನಿಮಿಷಗಳ ಪ್ರಯಾಣದ ನಂತರ ಅಲ್ಲಿಗೆ ತಲುಪಿದೆವು. ಬ್ರಿಟಿಷರು ಅಂಡಮಾನ್ – ನಿಕೋಬಾರ್ ದ್ವೀಪಕ್ಕೆ ಪ್ರವೇಶಿಸಿದಾಗ, ಈ ದ್ವೀಪವನ್ನು ವಸತಿಗಾಗಿ ಆಯ್ದುಕೊಂಡರು. ತಮಗೆ ಬೇಕಾದ ಎಲ್ಲ ಅನುಕೂಲಗಳನ್ನು ಮಾಡಿಕೊಂಡು ಸುಖ ಹಾಗೂ ನೆಮ್ಮದಿಯ ಜೀವನ ನಡೆಸಿದರು. ‘ರಾಸ್’ ಎಂಬ ಬ್ರಿಟಿಷ್ ಅಕಾರಿಯ ಹೆಸರಿನಲ್ಲಿ ಈ ದ್ವೀಪವನ್ನು ‘ರಾಸ್ ಐಲ್ಯಾಂಡ್’ ಎಂದು ಕರೆದಿದ್ದಾರೆ. ಸುಂದರ – ಸ್ವಚ್ಛ ದ್ವೀಪ. ಆಕಾಶವನ್ನು ಮುಟ್ಟುತ್ತಿದೆಯೋ ಎನಿಸುವ ಸಾವಿರಾರು ತೆಂಗಿನ ಮರಗಳು ಇದಕ್ಕೆ ಶೋ‘ ನೀಡಿವೆ. ಹಿಂದೆ ಬ್ರಿಟಿಷರು ಕಟ್ಟಿಸಿದ ಚರ್ಚ್ ಕಟ್ಟಡ, ವಿದ್ಯುಚ್ಛಕ್ತಿ ಉತ್ಪಾದನಾ ಘಟಕ, ಅಧಿಕಾರಿಗಳ ಕ್ಲಬ್ ಕಟ್ಟಡ ಇತ್ಯಾದಿಗಳು ಹಳೇ ಪಳೆಯುಳಿಕೆಗಳಾಗಿ ಉಳಿದಿವೆ. ಹಂಪಿಯನ್ನು ನೆನಪಿಸುತ್ತವೆ. ಮುರಿದು ಬಿದ್ದ ಕಟ್ಟಡಗಳ ಗೋಡೆಗಳನ್ನು ಯಾವುದೋ ಜಾತಿಯ ಬಳ್ಳಿಯ ಬೇರುಗಳು ಆಕ್ರಮಿಸಿ, ತಮ್ಮದೇ ಆದ ವಿಸ್ಮಯ ಕಲಾತ್ಮಕ ಲೋಕವನ್ನು ಸೃಷ್ಟಿಸಿದೆ. ರಾಸ್ ಐ ಲ್ಯಾಂಡ್ನಲ್ಲಿ ನೌಕಾಸೇನೆಯ ತರಬೇತಿ ಕೇಂದ್ರವಿದೆ.

ರಾಸ್ ಐಲ್ಯಾಂಡ್

ರಾಸ್ ಐಲ್ಯಾಂಡಿನಲ್ಲಿ ಜಿಂಕೆಗಳ ಹಿಂಡು, ನವಿಲುಗಳ ದಂಡು ಕಣ್ಣಿಗೆ ಬಿದ್ವು. ಮೋಡದ ವಾತಾವರಣವಿದ್ದು, ಎರಡು ಹನಿಮಳೆ ಬಿದ್ದ ತಕ್ಷಣ ನವಿಲುಗಳು ಆನಂದದಿಂದ ನರ್ತಿಸತೊಡಗಿದವು. ಅವು ನರ್ತನದ ಮೂಲಕ ನಮಗೆ ಸ್ವಾಗತ ನೀಡಿದವೆಂದು ನಮಗೆ ಆನಂದವಾಯಿತು. ಆ ಸುಂದರ ಕಲಾತ್ಮಕ ನೃತ್ಯವನ್ನು ವೀಡಿಯೋ ಮಾಡಿದ್ದೇ ಮಾಡಿದ್ದು. ಮರಳಿನಲ್ಲಿ ದೊರಕಿದ ವಿವಿಧ ಆಕಾರದ ಕಲ್ಲುಗಳನ್ನು ಕಪ್ಪೆ ಚಿಪ್ಪುಗಳನ್ನು ಮೊಮ್ಮಗಳಿಗಾಗಿ ಆರಿಸಿ ತಂದೆ. ಅವರಿಗೆ ಅವುಗಳನ್ನು ನೋಡಿ ಎಷ್ಟು ಸೋಜಿಗವಾಗಿ ಖುಷಿಪಟ್ಟರೋ ಅದನ್ನು ನೋಡಿ ನನಗೂ ತಂದದ್ದು ಸಾರ್ಥಕವೆನಿಸಿತು.

ಪ್ರವಾಸದ ಮೂರನೇ ದಿನ ಬೆಳಿಗ್ಗೆ 2.45ಕ್ಕೆ ಸಿದ್ಧರಾಗಬೇಕೆಂದು ಮಾರ್ಗದರ್ಶಿ ಹೇಳಿದಾಗ, ನಮಗೆ ಆಶ್ಚರ್ಯವಾಯಿತು. ಬೆಳಗಿನ ಜಾವದ ಮೂರು ಗಂಟೆಗಳ ಕಾಡಿನೊಳಗಿನ ಪ್ರಯಾಣ ಅವಿಸ್ಮರಣೀಯವಾಗಿತ್ತು. 5.30ಕ್ಕೆ ನಾವು ಒಂದು ಮುಚ್ಚಿದ ಗೇಟಿನ ಮುಂದೆ ನಿಂತಿದ್ದೆವು. ನಮಗಿಂತ ಮೊದಲು 2 ವಾಹನಗಳು ಬಂದಿದ್ದವು. 6.30ಕ್ಕೆ ಗೇಟ್ ತೆಗೆಯುವ ವೇಳೆಗೆ ಅಕ್ಷರಶಃ ನೂರಾರು ವಾಹನಗಳು ಸಾಲಾಗಿ ನಿಂತಿದ್ದವು. ನಮ್ಮ ವಾಹನ ಲಾಂಚ್ ಬಳಿ ನಿಂತಾಗ, ಲಾಂಚ್ ಹತ್ತಲು ಎಲ್ಲರೂ ರನ್ನಿಂಗ್ ರೇಸ್ ಮಾಡಿದ್ದೇ ಮಾಡಿದ್ದು. ಲಾಂಚ್ ಮೇಲ್ಭಾಗಕ್ಕೆ ಹೋಗಿ ನಿಂತೆವು. ದಡಗಳಲ್ಲಿ ಹಸಿರು ತುಂಬಿದ ಮರಗಳ ಸಾಲು, ಅದೇ ಬಣ್ಣದ ಸಮುದ್ರದ ನೀರು, ಶುಭ್ರ ಆಕಾಶ – ಎಲ್ಲವೂ ನಮ್ಮನ್ನು ಸ್ವರ್ಗ ಲೋಕದಲ್ಲಿದ್ದೇವೆಂಬ ಭ್ರಮೆ ಮೂಡಿಸಿತ್ತು. ನಮ್ಮ ಅದೃಷ್ಷಕ್ಕೆ ನಾವಿದ್ದ ನಾಲ್ಕೂ ದಿನವೂ ಮೋಡ ಕವಿದ ವಾತಾವರಣವಿದ್ದು, ಬಿಸಿಲು ಬೇಗೆ ಕಾಡಲಿಲ್ಲ.

ಬಾರಾಟಾಂಗ್

ಲಾಂಚಿನಿಂದ ಇಳಿದ ಮೇಲೆ ಪುಟಾಣಿ ದೋಣಿಗಳಲ್ಲಿ ಪಯಣ. ಮಾಂಗ್ರೂವ್ ವೃಕ್ಷಗಳ ಬೇರುಗಳು ಆಕ್ರಮಿಸಿಕೊಂಡ ಜಾಗವನ್ನು ಬಹಳ ಕಷ್ಟಪಟ್ಟು ಕತ್ತರಿಸಿ ಇಕ್ಕಟ್ಟಾದ ಮಾರ್ಗ ನಿರ್ಮಿಸಿದ್ದಾರೆ. ಅಲ್ಲಿ ಸಾಗುವಾಗ ಈ ಸಸ್ಯ ಜಾತಿಯ ವಿಶೇಷತೆಯ ಅರಿವಾಗುತ್ತದೆ. ಇಲ್ಲಿ ನಾವು ತಲುಪಿದ್ದು ಬಾರಾಟಾಂಗ್ ನ ಸುಣ್ಣದ ಕಲ್ಲಿನ ಗುಹೆಗಳನ್ನು. ಅದು ನಿರ್ಮಿಸಿದ ಕುಸುರಿ ಕೆಲಸದ ಚಿತ್ರ ವಿಚಿತ್ರ ಆಕಾರಗಳನ್ನು ನೋಡುತ್ತ ಸಾಗಿದೆವು. ಗುಹೆಯ ಒಳಭಾಗ ಕತ್ತಲಾಗಿದ್ದು, ನಮ್ಮ ಮಾರ್ಗದರ್ಶಿ ತೋರಿಸಿದ ದೀಪದ ಬೆಳಕಿನಲ್ಲಿ ನಾವು ಕಮಲದ ಮೊಗ್ಗು ಇಳಿಬಿದ್ದಂತೆ, ಹುತ್ತಗಳು, ಧ್ಯಾನಮಗ್ನ ಋಷಿಗಳು, ತೂಗುದೀಪಗಳು, ಅಜಂತ – ಎಲ್ಲೋರಾ ಗುಹೆಗಳು, ಶಿಲಾ ಬಾಲಿಕೆಯರು – ಹೀಗೆ ನೂರಾರು ಸುಂದರ ಆಕೃತಿಗಳನ್ನು ಕಂಡೆವು. ನಮ್ಮದೇ ಆದ ದೀಪದ ವ್ಯವಸ್ಥೆ ಮಾಡಿಕೊಂಡಿದ್ದರೆ, ಚರ್ಚ್ ಇದ್ದಿದ್ದರೆ ಇನ್ನೂ ಹೆಚ್ಚು ವಿವರವಾಗಿ ನೋಡಬಹುದಿತ್ತು.

ಬಾರಾಟಾಂಗ್ ನಲ್ಲಿ ನಾವು ನೋಡಿದ ಇನ್ನೊಂದು ಅಪರೂಪದ ದೃಶ್ಯ  ‘ಮಣ್ಣಿನ ವಾಲ್ಕೆನೋ’ (ಮಡ್ ವಲ್ಕೆನೋ). ಗುಡ್ಡ ಪ್ರದೇಶವೊಂದರಲ್ಲಿ 8-10 ಕಡೆ ಸಣ್ಣ ಸಣ್ಣ ರಂಧ್ರಗಳಿಂದ ನಿರಂತರವಾಗಿ ಮಣ್ಣಿನ ನೀರು ಉಕ್ಕಿ ಬರುತ್ತಿತ್ತು. ಹೊರಬಂದ ನೀರಿನ ಮಣ್ಣು ಬಿಸಿಲಿಗೆ ಒಣಗುತ್ತಿತ್ತು. ಕೆಲವು ಬಾರಿ ದೊಡ್ಡ ಪ್ರಮಾಣದಲ್ಲಿ ಉಕ್ಕಿ ಹರಿಯುತ್ತದೆ. ಆಗ ಇದು ಅಗ್ನಿ ಪರ್ವತದಷ್ಷೇ ಅಪಾಯಕಾರಿಯಾಗಿರುತ್ತದೆ. ಎತ್ತರವಾದ ಗುಡ್ಡ ಪ್ರದೇಶವಾದ ಇದು ನಿರ್ಮಾಣವಾಗಿರುವುದು ಈ ಮಡ್ – ವಲ್ಕೆನೋದಿಂದಲೇ  ಎಂದು ತಿಳಿಸಿದರು.

ಹ್ಯಾವ್ಲಾಕ್ ಐಲ್ಯಾಂಡ್

ನಾಲ್ಕನೇ ದಿನದ ಪ್ರಯಾಣ ಹ್ಯಾವ್ಲಾಕ್ ಐಲ್ಯಾಂಡ್ ಗೆ. ಒಂದು ದೊಡ್ಡ ಮ್ಯಾಕ್ರೂಜ್ ಖಾಸಗಿ ಲಾಂಚ್ನಲ್ಲಿ ಪ್ರಯಾಣಿಸಿದೆವು. ಸರ್ಕಾರದ ಲಾಂಚಿನಲ್ಲಿ ಪಯಣಿಸಿದರೆ ಒಬ್ಬರಿಗೆ 70/- ರೂ. ಶುಲ್ಕ. ಖಾಸಗಿ ಲಾಂಚ್ನಲ್ಲಿ ಪಯಣಿಸಿದರೆ 700/-ರೂ ಶುಲ್ಕ. ಸರ್ಕಾರಿ ಲಾಂಚ್ ನಲ್ಲಿ ಟಿಕೆಟ್ ಸಿಗಲಿಲ್ಲ. ಖಾಸಗಿ ಲಾಂಚ್ ನಲ್ಲಿ ಪ್ರಯಾಣದ  ಅನುಭಾವ ಹಿತಕರವಾಗಿತ್ತು. ಲಾಂಚ್ ನಿಂದ ಇಳಿದು ಪುನಃ ಪುಟಾಣಿ ದೋಣಿಗಳಲ್ಲಿ ಹ್ಯಾವ್ಲಾಕ್ ಐಲ್ಯಾಂಡ್ ತಲುಪಿದೆವು. ಸಮುದ್ರದ ನೀರಿನ ಶುಭ್ರತೆ, ಹಸಿರು-ನೀಲಿ ಬಣ್ಣ ನಮ್ಮ ಕಣ್ಮನ ತುಂಬುತ್ತಿತ್ತು. ಪ್ರವಾಸ ಮುಗಿದ ಮೇಲೂ ಕಣ್ಣು ಮುಚ್ಚಿದರೆ ಸಮುದ್ರದ  ಚಿತ್ರವೇ ಮೂಡಿ ಬರುತ್ತಿತ್ತು.

ಹ್ಯಾವ್ಲಾಕ್ ಐಲ್ಯಾಂಡ್ ನಲ್ಲಿ ತಳದಲ್ಲಿ ಗಾಜು ಅಳವಡಿಸಿದ ದೋಣಿಯಲ್ಲಿ ಕುಳ್ಳಿರಿಸಿ ಸಮುದ್ರದಲ್ಲಿ ಸ್ವಲ್ಪದೂರ ಕರೆದೊಯ್ದರು. ಗಾಜಿನ ತಳಭಾಗದಲ್ಲಿ ನಮಗೆ ಸುಮಾರು 20 ಅಡಿ ಆಳದಲ್ಲಿದ್ದ ಕೋರಲ್ಸ್ ಗಳ ಸುಂದರ ಪ್ರಪಂಚ ತೆರೆದುಕೊಳ್ಳುತ್ತದೆ. ನಂತರ ನಮ್ಮ ಮುಖಕ್ಕೆ ಕವಚಹಾಕಿ ಸಮುದ್ರದಲ್ಲಿ ಈಜುವಂತೆ ಹೇಳುತ್ತಾರೆ. ಅದರ ಮೂಲಕ ನಾವು ಇನ್ನೂ ಸ್ಪಷ್ಟವಾಗಿ ಕೋರಲ್ಸ್ ಗಳನ್ನು  ಕಾಣಬಹುದು. ಆದರೆ ಅಲ್ಲಿಯ ಜನರ ವ್ಯವಹಾರ ಜಾಣತನದಿಂದಾಗಿ ನಾವು ನಿರಾಶೆ ಅನುಭವಿಸಬೇಕಾಯಿತು. ಇದರಿಂದ ಪಾಠ ಕಲಿತ ನಾವು ಮೂರನೆಯ ದಿನ ನಮ್ಮ ಕೋರಲ್ಸ್ ವೀಕ್ಷಣೆಯ ಆಸೆಯನ್ನು ಬೇರೊಂದು ಮಾರ್ಗದಿಂದ ಪೂರ್ಣಗೊಳಿಸಿಕೊಂಡೆವು.

ಹ್ಯಾವ್ಲಾಕ್ ನಿಂದ ಹೊರಟ ನಾವು ರಾಧಾನಗರ ಬೀಚ್ ಗೆ ಬಂದೆವು. ಅದೊಂದು ಸುಂದರ, ನಿರ್ಮಲ, ಅಪಾಯ ರಹಿತ ಬೀಚ್. ಸ್ನಾನದ ಆನಂದ ಅನುಭವಿಸಲು ಹೇಳಿ ಮಾಡಿಸಿದಂತಹ ಜಾಗ. ಅಲ್ಲಿ ನಮ್ಮ ವಯಸ್ಸನ್ನು ಮರೆತೆವು. ಮಕ್ಕಳ ಲೋಕಕ್ಕೆ ಮರಳಿದ್ದೆವು. ಪುಟಾಣಿ ಅಲೆಯೊಂದು ಬಂದು ವನಜಾಕ್ಷಮ್ಮ, ವನಿತಕ್ಕರನ್ನು ಬೀಳಿಸಿ, ಕಂಗೆಡಿಸಿದಾಗ ಅವರಿಗೆ ಗಾಬರಿ, ನೋಡುವವರಿಗೆ ತಮಾಷೆ. ಸ್ವಲ್ಪ ಸುಧಾರಿಸಿಕೊಂಡ ನಂತರ ಅವರು ಪುನಃ ನಮ್ಮೊಡನೆ ಸ್ನಾನದ ಗದ್ದಲದಲ್ಲಿ ಪಾಲುಗೊಂಡರು. ಒಟ್ಟಿನಲ್ಲಿ ಸಮುದ್ರಸ್ನಾನ ನಮ್ಮ ಜಡತೆಯನ್ನೆಲ್ಲಾ ದೂರಮಾಡಿ, ಚೈತನ್ಯವನ್ನು ತುಂಬಿತು.

ಕೊನೆಯ ದಿನ ಜಾಲಿಬಾಯ್ ಐಲ್ಯಾಂಡಿಗೆ ಪ್ರಯಾಣ. ಎರಡು ಗಂಟೆ ಪಯಣದ ನಂತರ ಜಾಲಿಬಾಯ್ ಐಲ್ಯಾಂಡ್ ತಲುಪಿದೆವು. ಅಲ್ಲ್ಲಿಯೂ ಕೋರಲ್ಸ್ ವೀಕ್ಷಣೆಗೆ ಅವಕಾಶವಿದ್ದಿತು. ಈ ಬಾರಿ ನಾವು ಪ್ರತಿಯೊಬ್ಬರಿಗೂ ರೂ.100/- ಹೆಚ್ಚಿನ ಹಣವನ್ನು ದೋಣಿಯವನಿಗೆ ಕೊಟ್ಟು 15-20 ನಿಮಿಷ ವಿವರವಾಗಿ ನೋಡಿದೆವು. ಒಬ್ಬ ಮನುಷ್ಯ ಸಮುದ್ರದಲ್ಲಿ ಮುಳುಗಿ, ಕೆಂಪು-ನೀಲಿ ಬಣ್ಣದ ಸೌತೆ ಮೀನು, ನಕ್ಷತ್ರ ಮೀನು, ಚಿತ್ರ ವಿಚಿತ್ರ ಜಲಚರಗಳನ್ನು ತಂದು ಗಾಜಿನ ತಳದ ಮೇಲೆ ಇಡುತ್ತಿದ್ದು, ನಾವು ಅವುಗಳನ್ನು ಮುಟ್ಟಿ ನೋಡಿ ಆನಂದಿಸಿದೆವು. ಒಂದಂತೂ ಸುವರ್ಣ ಗಡ್ಡೆಯ ಹಾಗೆ ಇತ್ತು.

ಜಪಾನೀಯರ ಕೃತ್ಯ

ಬೀಚಿನಲ್ಲೂ ಸಾಕಷ್ಟು ಹೊತ್ತು ಸ್ನಾನ ಮಾಡಿ ಹೊರಟೆವು. ಹಿಂದಿರುಗುವಾಗ ನೋಡಿದ ಸೂರ್ಯಾಸ್ತ, ಅದರಿಂದ ಸಮುದ್ರದ ನೀರು ಸುವರ್ಣಮಯವಾಗಿದ್ದು ಎಂದೂ ಮರೆಯಲಾಗದ ದೃಶ್ಯವಾಗಿತ್ತು. ಎಲ್ಲವನ್ನೂ ಡಿಜಿಟಲ್ ಕ್ಯಾಮರಾದ ಮೂಲಕ ಫೋಟೋ ಹಾಗೂ ವೀಡಿಯೋ ತೆಗೆದುಕೊಂಡಿದ್ದು ಒಂದು ರೀತಿ ಸಮಾಧಾನ ನೀಡಿತ್ತು. ಪುನಃ ಪುನಃ ಸಿ. ಡಿ. ನೋಡಿ ಸವಿಯಬಹುದೆಂಬ ಭರವಸೆ ನಮಗಿತ್ತು.

1942ರಲ್ಲಿ ಬ್ರಿಟಿಷರನ್ನು ಓಡಿಸಿ, ಇಲ್ಲಿಗೆ ಬಂದು ನೆಲಸಿದ ಜಪಾನೀಯರು, ಹಿಂಸೆ ನೀಡುವಲ್ಲಿ ಬ್ರಿಟಿಷರನ್ನೂ ಮೀರಿಸಿದರು. ಬ್ರಿಟಿಷ್ ಸರ್ಕಾರದಿಂದ ನೇಮಕಗೋಡ 42 ಭಾರತೀಯ ಅಧಿಕಾರಿಗಳನ್ನು, ಬೇಹುಗಾರಿಕೆ ಮಾಡುತ್ತಿದ್ದಾರೆಂದು ಆರೋಪಿಸಿ ಜಪಾನ್ ಸರ್ಕಾರ ಬಂಧಿಸಿತು. ಅವರನ್ನು ಕಾಡಿಗೆ ಕರೆದೊಯ್ದು ಅವರಿಂದಲೇ 40  ಅಡಿ ಅಗಲ 40 ಅಡಿ ಉದ್ದದ ಗುಂಡಿ ತೋಡಿಸಿ, ಅವರನ್ನು ಅಲ್ಲಿಯೇ ಗುಂಡು ಹಾರಿಸಿ ಕೊಂದರು. ಹಂಫ್ರೀಗಂಜ್ ಎಂಬ ಈ ಸ್ಥಳದಲ್ಲಿ ‘ಬಲಿದಾನ ವೇದಿ’ ನಿರ್ಮಿಸಲಾಗಿದೆ. ಇಲ್ಲಿಯೂ ಮೌನ ಶ್ರದ್ಧಾಂಜಲಿ ಅರ್ಪಿಸಿ ಹೊರಟೆವು.

ಇವೆಲ್ಲದರ ಜೊತೆಗೆ ವನವಾಸಿ ಮಕ್ಕಳಿಗಾಗಿ ನಡೆಯುತ್ತಿರುವ ವಿದ್ಯಾರ್ಥಿ ನಿಲಯ, ವಿದ್ಯಾಭಾರತಿಯ ಸರಸ್ವತಿ ಮಂದಿರ ಶಾಲೆ, ಸಂಸ್ಕಾರ ಭಾರತಿಯ ಕಾರ್ಯಾಲಯಗಳನ್ನು ಭೇಟಿ ಮಾಡಿದೆವು. ಅಲ್ಲಿಯ ಹಿರಿಯರಿಂದ ಅಂಡಮಾನ್ – ನಿಕೋಬಾರ್ ದ್ವೀಪಗಳಲ್ಲಿ ವಾಸಿಸುತ್ತಿರುವ ಮೂಲ ನಿವಾಸಿಗಳ ಬಗ್ಗೆ ಮಾಹಿತಿ ಪಡೆದೆವು. ಅವರ ಪ್ರಕಾರ, ಅಲ್ಲಿಯ ಮೂಲನಿವಾಸಿಗಳನ್ನು ಅವರಂತೆಯೇ ಬದುಕಲು ಬಿಡಬೇಕು. ಅವರನ್ನು ನಾಗರೀಕರನ್ನಾಗಿ ಮಾಡಲು ನಡೆಸಿದ ಪ್ರಯತ್ನಗಳಿಂದ ಅವರಿಗೆ ತೊಂದರೆಯೇ ಹೆಚ್ಚಾಗಿದೆ. ಅನಾರೋಗ್ಯದಿಂದ ಪೀಡಿತರಾಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿ ಅವರ ಸಂತತಿ ಕ್ಷೀಣಿಸುತ್ತಿದೆ. ಇದು ಬಹಳ ಅಪಾಯಕಾರಿ ಬೆಳವಣಿಗೆ. ವನವಾಸಿಗಳು ತಾವಾಗಿಯೇ ಬಯಸಿದರೆ ಅವರ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ, ಉದ್ಯೋಗ ನೀಡುವ ವ್ಯವಸ್ಥೆ ನಾವು ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಪ್ರವಾಸದ ಕೊನೆಯ ರಾತ್ರಿ ನಾವು ಕೃಷ್ಣಮೂರ್ತಿ ದಂಪತಿಗಳನ್ನು ಆಹ್ವಾನಿಸಿ ಸಹಭೋಜನ ಮಾಡಿದೆವು. ಅವರ ಪತ್ನಿ ಗೀತಾ ಕೃಷ್ಣಮೂರ್ತಿ ಅಲ್ಲಿಯ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆಂದು ತಿಳಿದು ಸಂತೋಷವಾಯಿತು. ನಮ್ಮ ಸಹ ಪ್ರವಾಸಿ ಕಲಾವಿದ ಮಧುಸೂಧನರವರು ಕೃಷ್ಣಮೂರ್ತಿಯವರ ಸುಂದರ ಭಾವಚಿತ್ರ ಬರೆದು ಫ್ರೇಮ್ ಹಾಕಿ ಕಾಣಿಕೆಯಾಗಿ ನೀಡಿದರು. ಅದನ್ನು ನೋಡಿದ ಆ ದಂಪತಿಗಳ ಮುಖದಲ್ಲಿ ಹೂನಗೆ ಅರಳಿತು. ಆ ನಗು ಶಾಶ್ವತವಾಗಿರಲೆಂದು ಹಾರೈಸುತ್ತಾ ಅವರನ್ನು ಬೀಳ್ಕೊಂಡೆವು.

ಮಧ್ಯಾಹ್ನ 12 ಗಂಟೆಗೆ ವಿಮಾನದಲ್ಲಿ ಚೆನ್ನೈಗೆ ತೆರಳಬೇಕಾಗಿತ್ತು. ಬೆಳಿಗ್ಗೆ ಬೇಗ ಲಗೇಜನ್ನು ಸಿದ್ಧಗೊಳಿಸಿ, ಶಾಪಿಂಗ್ಗೆ ಹೊರಟೆವು. ಅಲ್ಲಿಯ ಸರ್ಕಾರದಿಂದ  ನಡೆಸಲ್ಪಡುವ ‘ಸಾಗರಿಕಾ’ಗೆ ಭೇಟಿ ನೀಡಿದೆವು. ಅದು ಕೇವಲ ಮಾರಾಟದ ಮಳಿಗೆಯಾಗಿರದೆ ಕಲಾಭವನದಂತಿತ್ತು. ಕಲಾತ್ಮಕವಾದ ಜೊತೆಗೆ ಗಟ್ಟಿಮುಟ್ಟಾದ ನೂರಾರು ವಸ್ತುಗಳು ಮನ ಮೋಹಕವಾಗಿದ್ದವು. ಅವರವರ ಪರ್ಸಿನ ಸಾಮರ್ಥ್ಯಕ್ಕೆ ತಕ್ಕಂತೆ ಖರೀದಿ ಮಾಡಿದೆವು.

ವೀರ ಸಾವರ್ಕರ್ ವಿಮಾನ ನಿಲ್ದಾಣದಿಂದ ಹೊರಡುವಾಗ ಮನಸ್ಸು ಭಾರವಾಗಿತ್ತು. ಪ್ರಕೃತಿ ಸೌಂದರ್ಯದಿಂದ ದೂರ ಸರಿಯುತ್ತಿರುವ, ಯಾಂತ್ರಿಕ ಜೀವನಕ್ಕೆ ಮರಳುತ್ತಿರುವ ಭಾವ. ಸ್ವಾತಂತ್ರ್ಯಯೋಧರ ಬಲಿದಾನ ವ್ಯರ್ಥವಾಗಿ ಇಂದು ದೇಶಾದ್ಯಂತ ರಾರಾಜಿಸುತ್ತಿರುವ ದೇಶದ್ರೋಹಿಗಳ ಕುಕೃತ್ಯ, ಭಯೋತ್ಪಾದಕರ ಅಟ್ಟಹಾಸ, ಭ್ರಷ್ಟಾಚಾರಿಗಳ ‘ಭಂಡತನ, ಭಾರತ ಮಾತೆಯ ಸ್ವಾತಂತ್ರ್ಯ ಪುನಃ ಹರಣವಾಗುವುದೋ ಎಂಬ ಶಂಕೆ ಕಾಡತೊಡಗಿತು. ವಿನಾಯಕ ದಾಮೋದರ ಸಾವರ್ಕರರ ಸಹೋದರ ಗಣೇಶ ದಾಮೋದರ ಸಾವರ್ಕರ ಹೃದಯಾಂತರಾಳದಿಂದ ಹೊರಟ ಈ ಮಾತು ನಮ್ಮ ಗಮನ ಸೆಳೆಯಿತು.

“ಈ ಸೆಲ್ಯುಲರ್ ಜೈಲ್ ಪುಣ್ಯ ಕ್ಷೇತ್ರಗಳಲ್ಲಿ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ. ಇದನ್ನು ಕಾಲಾ ಪಾನಿ ಎಂದು ಕರೆಯಬೇಡಿ. ಇಲ್ಲಿಯ ಮಣ್ಣಿನ ಕಣಕಣವೂ ಸಾರುತ್ತಿದೆ ಬಲಿದಾನದ ಕಥೆಯನ್ನು!!”

ಇಂತಹ ದೇಶಭಕ್ತಿ ಕುಟುಂಬದ ಸಂಖ್ಯೆ ವೃದ್ಧಿಸಲಿ. ಸಾವರ್ಕರ್ ಪುನಃ ಜನಿಸಿ ಬರಲಿ. ಭಾರತ ಮಾತೆಯ ಕೀರ್ತಿ ಪತಾಕೆಯನ್ನು ಎತ್ತರೆತ್ತರಕ್ಕೆ ಹಾರಿಸಲಿ ಎಂದು ಹಾರೈಸುತ್ತಾ ನಮ್ಮ ನಮ್ಮ ಸ್ಥಳಕ್ಕೆ ತೆರಳಿದೆವು.

ಜೈ ಭಾರತಮಾತಾ!! ವಂದೇ ಮಾತರಂ.

   

1 Response to ವೀರಸಾವರ್ಕರರ ಸೆಲ್ಯುಲರ್ ಜೈಲಿಗೊಂದು ಸಾರ್ಥಕ ಯಾತ್ರೆ

  1. H. Nagabhushana Rao

    Nijavaagi Andaman na pravasa maadisiddeeri .Danyavadagalu.Lekhanadalli pravasigaru madikollabekaada Tayaari baggeyoo vivaragalu iddiddare channittu.Idannoo hagoo kelavu photogalannu mundina sanchkeyalli prakatisuva krupe maadiri

Leave a Reply