ವಿಧಿವಂಚಿತ ವೀರಾಗ್ರಣಿಗಳು

ಕರ್ನಾಟಕ ; ಲೇಖನಗಳು - 0 Comment
Issue Date :

ಭಾರತದಲ್ಲಿ ವಿದೇಶೀ ದುರಾಕ್ರಮಣಗಳ ವಿರುದ್ಧ ದೇಶರಕ್ಷಣೆಗಾಗಿ, ಧರ್ಮರಕ್ಷಣೆಗಾಗಿ ಹೋರಾಡಿ ಅಮರರಾದ ಅನೇಕ ವೀರಾಗ್ರಣಿಗಳು ಇತಿಹಾಸ ಗರ್ಭದಲ್ಲಿ ಮರೆಯಾಗಿದ್ದಾರೆ. ಸೋಲು-ಗೆಲುವುಗಳ ಗೊಡವೆಯಿಲ್ಲದ, ಜೀವ ಭಯ ತೊರೆದು ರಣರಂಗದಲ್ಲಿ ಸೆಣಸಾಡಿ ವಿಜಯದಂಚಿನಲ್ಲಿರುವಾಗ ವಿಧಿವಂಚಿತರಾದ ವೀರಾಗ್ರಣಿಗಳ ದಾರುಣ ಕಥೆಯ ವ್ಯಥೆ ಹೃದಯವಿದ್ರಾವಕವಾಗಿದೆ. ಘಟನಾವಳಿಗಳ ದಾಖಲೆಯಾದ ಇತಿಹಾಸದಲ್ಲಿ, ವಿಧಿ ಆಟ , ಅದೃಷ್ಟದ ಆಟ ಇತ್ಯಾದಿಗಳಿಗೆ ಆಸ್ಪದವಿಲ್ಲದಿದ್ದರೂ, ಓದುಗರ ಮನಕರಗುವ ಸಂಟನೆಗಳು ಇತಿಹಾಸದಲ್ಲಿ ಸಂಭವಿಸಿವೆ. ಇತಿಹಾಸದಲ್ಲಿ ನಡೆದ ಘಟನಾವಳಿಗಳಿಗೆ ವೈಜ್ಞಾನಿಕ ಕಾರಣ ಕಂಡುಕೊಳ್ಳುವುದು ಕಷ್ಟಸಾಧ್ಯ. ಆಗ ಅದೃಷ್ಟದ ಅಥವಾ ಕರ್ಮಸಿದ್ಧಾಂತದ ಪಾತ್ರವನ್ನು ಪರಿಗಣಿಸಿಯೋ ಅಥವಾ ನಿರ್ಲಕ್ಷಿಸಿಯೋ ವಿಷಯ ವಿಶ್ಲೇಷಣೆ ನಡೆಯಬೇಕಾಗುತ್ತದೆ. ಭಾರತದ ಇತಿಹಾಸದಲ್ಲಿ, ಅದೃಷ್ಟ-ವಿಧಿ ಎಂದು ನಂಬಲಾದುದರ ಪಾತ್ರ ಅನೇಕ ಸಂದರ್ಭಗಳಲ್ಲಿ, ಬೇರೆ ಬೇರೆ ಕಾಲದಲ್ಲಿ ಇತಿಹಾಸದ ಗತಿ ಯಾ ಗುರಿಯನ್ನು ಬದಲಾಯಿಸಿದೆ! ಈ ಲೇಖನದಲ್ಲಿ ಅಂತಹ ಒಂದೆರಡು ನಿದರ್ಶನಗಳನ್ನು ಇತಿಹಾಸದ ಆಧಾರದಲ್ಲಿ ಗಮನಿಸಲಾಗಿದೆ.

ದಾಹಿರನ ದುರದೃಷ್ಟ
ಭಾರತದ ಮಧ್ಯಯುಗದ ಇತಿಹಾಸದಲ್ಲಿಯ ಒಂದು ಪ್ರಧಾನ ಕಾಲಘಟ್ಟ ಅರಬರ ಸಿಂಧ್ ಆಕ್ರಮಣ. (ಕ್ರಿ.ಶ.712) ಪ್ರಾಚೀನ ಕಾಲದಿಂದಲೂ ಅರೇ ಬಿಯಾ ಮತ್ತು ಭಾರತದೊಡನೆ ವ್ಯಾಪಾರ-ಸಾಂಸ್ಕೃತಿಕ ಸಂಬಂಧವಿತ್ತು. ಕ್ರಿಸ್ತ ಶಕ 7ನೇ ಶತಮಾನದಲ್ಲಿ ಇಸ್ಲಾಂ ಧರ್ಮದ ಉಗಮ ಮತ್ತು ಪ್ರಸರಣದೊಂದಿಗೆ ಅರಬರು ಭಾರತದತ್ತ ಲಗ್ಗೆಯಿಟ್ಟರು. ಇಸ್ಲಾಂ ಧರ್ಮಪ್ರಚಾರ, ಆರ್ಥಿಕ ಕಾರಣ ಮತ್ತು ರಾಜಕೀಯ ಲಾಭಕ್ಕಾಗಿ ಅರಬರು ಸಿಂಧ್ ಆಕ್ರಮಣ ಕೈಗೊಂಡರು. ಖಲೀಫ ವಲೀದನ ಆಜ್ಞೆಯಂತೆ, ಇರಾಕಿನ ರಾಜ್ಯಪಾಲ ಹಜಾಜ್, ಮಹಮ್ಮದ್-ಬಿನ್-ಖಾಸಿಂ ಎಂಬಾತನ ನಾಯಕತ್ವದಲ್ಲಿ ಸಿಂಧ್ ಮೇಲೆ ಧಾಳಿ ಮಾಡಲು ಬಲು ದೊಡ್ಡ ಸೈನ್ಯ ಕಳುಹಿಸಿದ. ಆರು ಸಾವಿರ ಕುದುರೆ, ಅಷ್ಟೇ ಸಂಖ್ಯೆಯ ಒಂಟೆ, ಮೂರುಸಾವಿರ ಸಾಮಾನು ಸಾಗಾಟದ ಒಂಟೆ ಮತ್ತು ಹದಿನೈದು ಸಾವಿರ ಸೈನಿಕರಿಂದೊಡಗೂಡಿದ ಸೈನ್ಯ ಸಿಂಧ್ ಪ್ರದೇಶದ ಮೇಲೆ ಧಾಳಿಮಾಡಿತು. ಆ ಕಾಲದಲ್ಲಿ ಸಿಂಧ್ ಪ್ರದೇಶವನ್ನು ರಾಜ ದಾಹಿರ ಆಳುತ್ತಿದ್ದ. ಕಾಶ್ಮೆರದಿಂದ ಕನೋಜದ ತನಕ ಮತ್ತು ಬಲುಚಿಸ್ಥಾನದಿಂದ ಮೆಕ್ರಾನ್ ಕರಾವಳೀ ತನಕ ಸಿಂಧ್ ರಾಜ್ಯ ಹಬ್ಬಿತ್ತು. ಅಲೋರ ಅದರ ರಾಜಧಾನಿಯಾಗಿತ್ತು ಹಾಗೂ ದೇಬಾಲ್, ನಿರುನ್, ಶಿವಾನ್, ಸಿಸಾಂ, ಮತ್ತು ಬ್ರಾಹ್ಮಣಾಬಾದ್ ಅಲ್ಲಿಯ ಪ್ರಧಾನ ಪಟ್ಟಣಗಳಾಗಿದ್ದವು. ಪ್ರಥಮವಾಗಿ, ಅರಬರು ಸಿಂಧ್‌ನ ರೇವು ಪಟ್ಟಣವಾದ ದೇಬಾಲ್ನ ಮೇಲೆ ಧಾಳಿಮಾಡಿದರು. ಆಮೇಲೆ, ನಿರುನ್, ಶಿವಾನ್, ಸಿಸಾಂ ಪಟ್ಟಣಗಳ ಮೇಲೆ ಯಶಸ್ವೀ ಧಾಳಿಮಾಡಿ, ದೇವಾಲಯಗಳ ನಾಶ, ಮತಾಂತರ, ಸ್ತ್ರೀಯರ ಮೇಲಿನ ದೌರ್ಜನ್ಯ, ಅಮಾಯಕರ ಕಗ್ಗೊಲೆ…….ಇತ್ಯಾದಿಗಳನ್ನು ಕೈಗೊಂಡರು.

ಆ ತನಕ ನಿರ್ಲಿಪ್ತನಾಗಿದ್ದ ದಾಹಿರ, ರಾವಾರ್ ಎಂಬಲ್ಲಿ ತನ್ನ ಸಕಲ ಸೈನ್ಯವನ್ನು ಸಿದ್ಧಗೊಳಿಸಿ ಯುದ್ಧಕ್ಕೆ ಅನುವಾದ. ಕ್ರಿ.ಶ.712, ಜೂನ್ 20ರಂದು ದಾಹಿರನ ನಿರ್ಣಾಯಕ ಯುದ್ಧ ಪ್ರಾರಂಭವಾಯಿತು. ದಾಹಿರನು ತನ್ನ ಪಟ್ಟದಾನೆಯ ಮೇಲೆ ಆಸೀನನಾಗಿ ಯುದ್ಧ ಮಾಡುತ್ತಾ ಮುಂದುವರಿದಾಗ ಅವನ ಮೇಲುಗೈ ಸ್ಪಷ್ಟವಾಗಿತ್ತು. ಆ ಸಂದರ್ಭದಲ್ಲಿ ಅರಬರು ಎಸೆದ ಉರಿಯುತ್ತಿರುವ ಬೆಂಕಿಯ ಚೆಂಡು (Fire Ball) ಆನೆಯ ಮೇಲಿನ ಅಂಬಾರಿಗೆ ತಗಲಿ ಅದು ಉರಿಯತೊಡಗಿತು! ಬೆಂಕಿಯ ಬೇಗೆಗೆ ಆನೆ ಸಮೀಪವಿದ್ದ ನದೀ ಮಧ್ಯಕ್ಕೆ ಹೋಗಿ ಬೆಂಕಿ ಆರಿಸಿಕೊಂಡಿತು. ಆಮೇಲೆ, ರಣರಂಗಕ್ಕೆ ಪುನಃ ನುಗ್ಗಿದ ಮದದಾನೆ ರಣಭಯಂಕರಾಗಿ ಹೋರಾಡುತ್ತಾ ಅರಬರ ಅಶ್ವಗಳ ಮತ್ತು ಪದಾತಿ ಪಾಳಯವನ್ನು ಸದೆ ಬಡಿಯುತ್ತಾ ರುದ್ರ ನರ್ತನ ಮಾಡಿತು. ಅಪಾಯದ ಪರಿವೆಯಿಲ್ಲದ ದಾಹಿರ ಯುದ್ಧರಂಗದ ಮಧ್ಯೆ ಮಿಂಚಿದಾಗ, ಅಕಸ್ಮಾತ್ತಾಗಿ, ದಾಹಿರನ ಹಣೆಗೆ ಒಂದು ಬಾಣ ತಾಗಿತು! ದಾಹಿರ ಕೆಳಗುರುಳಿದ! ಕೂಡಲೇ ಚೇತರಿಸಿಕೊಂಡ ದಾಹಿರ ಒಂದು ಕುದುರನ್ನೇರುವಷ್ಟರಲ್ಲಿ, ಪುನಃ, ಹಠಾತ್ತಾಗಿ ಶತ್ರುಗಳ ಖಡ್ಗದ ಹೊಡೆತಕ್ಕೆ ಬಲಿಯಾದ! ಮುಸ್ಲಿಂ ಇತಿಹಾಸಕಾರ ಅಲ್ಬಿಲಾದುರಿ ಇಂತಹ ೋರ ಸಂಗ್ರಾಮವನ್ನು ಕೇಳಿಯೂ ನಾನರಿಯೆ ಎಂದಿದ್ದಾನೆ. ಇದರೊಂದಿಗೆ, ಅರಬರು ಅಲೋರ, ಬ್ರಾಹ್ಮಣಾಬಾದ್ ಮತ್ತು ಮುಲ್ತಾನ್ (ಕ್ರಿ.ಶ.713)ಗಳನ್ನು ಗೆದ್ದುಕೊಂಡರು. ದಾಹಿರನ ಸೋಲು ವಿಧಿಲೀಲೆಯೋ, ಅದೃಷ್ಟದ ಅಟ್ಟಹಾಸವೋ, ಹಿಂದೂಗಳ ದುರದೃಷ್ಟವೋ ಎಂಬುದಕ್ಕೆ ಇತಿಹಾಸದಲ್ಲಿ ಉತ್ತರವಿಲ್ಲ.

ಜಯವಂಚಿತ ಜಯಚಂದ
ಪ್ರಾಚೀನ ಕಾಲದಿಂದಲೇ ಕನೋಜ ಉತ್ತರ ಭಾರತದ ಒಂದು ಪ್ರಸಿದ್ಧ ರಾಜ್ಯವಾಗಿತ್ತು. ಪ್ರತಿಹಾರರು ಮತ್ತು ಗಹಡ್ವಾಲರು ಕನೋಜದ ಹೆಸರಾಂತ ರಾಜರಾಗಿದ್ದರು. ಮಹಮ್ಮದ್ ಘೋರಿ ಹಿಂದೂಸ್ಥಾನದ ಮೇಲೆ ಆಕ್ರಮಣ ಕೈಗೊಂಡಾಗ ಉತ್ತರ ಭಾರತದಲ್ಲಿ ಅಜ್ಮೀರ-ದೆಹಲಿ ಮತ್ತು ಕನೋಜ ಎರಡು ಪ್ರಸಿದ್ಧ ರಾಜ್ಯಗಳಾಗಿದ್ದವು. ದೆಹಲಿಯ ರಜಪೂತ ರಾಜ ಪೃಥ್ವೀರಾಜ ಮತ್ತು ಕನೋಜ ರಜಪೂತ ರಾಜ ಜಯಚಂದ್ರ ಅವರೊಳಗೆ ಉತ್ತಮ ಬಾಂಧವ್ಯವಿರಲಿಲ್ಲ. ಅವರೊಳಗಿನ ವಿರಸ ಮಹಮ್ಮದನಿಗೆ ವರವಾಯಿತು. ಮಹಮ್ಮದ್ ಮತ್ತು ಪೃಥ್ವೀರಾಜರೊಳಗೆ 1191-1192ರಲ್ಲಿ ತಾರೈನ್ (Tarain) ಎಂಬಲ್ಲಿ (ದೆಹಲಿಯ ಸಮೀಪ) ಎರಡು ಕದನಗಳಾದವು. ಎರಡನೇ ತಾರೈನ್ ಕದನದಲ್ಲಿ ಪೃಥ್ವೀರಾಜನಿಗೆ ಪರಾಜಯವಾಯಿತು. ಆ ಯುದ್ಧಗಳ ಸಂದರ್ಭದಲ್ಲಿ ಜಯಚಂದ್ರ ತಟಸ್ಥನಾಗಿದ್ದ. ರಜಪೂತರಲ್ಲಿ ಒಗ್ಗಟ್ಟಿಲ್ಲವಾಗಿದ್ದುದು ಮಹಮ್ಮದನಿಗೆ ಅನುಕೂಲವಾಯಿತು. ಜಯಶೀಲನಾಗಿ ಮುಂದುವರಿದ ಮಹಮ್ಮದ ಕನೋಜದ ಮೇಲೆ ದಾಳಿ ಮಾಡಿದ (1194). ರಾಜಾ ಜಯಚಂದ್ರನಡಿಯಲ್ಲಿ ರಜಪೂತರು ಒಂದುಗೂಡಿದರು. ಚಂದಾವರ ಎಂಬಲ್ಲಿ ಮಹಮ್ಮದನಿಗೂ ರಜಪೂತರಿಗೂ ಯುದ್ಧ ನಡೆಯಿತು. ರಾಜಾ ಜಯಚಂದ್ರ ಹೋರಾಟದ ನಾಯಕತ್ವವನ್ನು ವಹಿಸಿ, ಆನೆಯ ಬೆನ್ನೇರಿ, ಸೈನ್ಯದ ಮುಂಭಾಗದಲ್ಲಿದ್ದು, ಸೈನಿಕರಿಗೆ ನಿರ್ದೇಶನ ನೀಡುತ್ತಾ ಪ್ರಬಲವಾದ ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಎಲ್ಲಿಂದಲೋ ಬಂದ ಬಾಣವೊಂದು ಜಯಚಂದ್ರನ ಕಣ್ಣಿಗೆ ನಾಟಿತು ! ಜಯಚಂದ್ರ ನೆಲಕ್ಕುರುಳಿದ ! ಬಿದ್ದ ರಾಜನನ್ನು ಕಂಡ ಸೈನಿಕರು ಚೆಲ್ಲಾಪಿಲ್ಲಿಯಾಗಿ ಓಡಿದರು. ಜಯಚಂದ್ರನನ್ನು ಕೊಲ್ಲಲಾಯಿತು. ಸಾವಿರಾರು ಹಿಂದೂಗಳು ಸಾವನ್ನಪ್ಪಿದರು. ಮಹಮ್ಮದನಿಗಾಯಿತು ಅದೃಷ್ಟ. ಇತಿಹಾಸ ಇದನ್ನು ಕಾಣದೇ?

ಹತಭಾಗ್ಯ ಹೇಮೂ
ಭಾರತದ ಇತಿಹಾಸದ ಮುಖ್ಯವಾಹಿನಿಯಲ್ಲಿ ಮರೆಯಾದ ಓರ್ವ ಮಹಾಪರಾಕ್ರಮಿ ಹೇಮೂ. ಹೇಮೂವಿನ ಉದಯ ಮತ್ತು ಅಸ್ತಮಾನ ಮಿಂಚಿನಂತೆ ಪ್ರಕಾಶಿಸಿ ಮಾಯವಾಯಿತು. ಹೇಮೂ ಶೀವಾರೀಂು ವೈಶ್ಯರ ದುಸರ್ ಭಾರ್ಗವ ಪಂಗಡದಲ್ಲಿ ಅತೀ ಬಡತನದ ಮಧ್ಯೆ ಜನಿಸಿದ. ತನ್ನ ಜೀವನವನ್ನು ರಸ್ತೆಯಲ್ಲಿ ಉಪ್ಪುಮಾರುವವನಾಗಿ ಪ್ರಾರಂಭಿಸಿದ ಹೇಮೂ, ಆಮೇಲೆ ಸಾಮಾನು ತೂಗುವವನಾಗಿ, ಮಾರುಕಟ್ಟೆಯ ಅಧಿಕಾರಿಯಾಗಿ, ಗುಪ್ತದಳದ ಮುಖ್ಯಸ್ಥನಾಗಿ ಪ್ರಭಾವಶಾಲಿ ವ್ಯಕ್ತಿಯಾದ. ಹೇಮೂ ಬಂಗಾಳದಲ್ಲಿ ಮಹಮ್ಮದ್ ಅದಿಲ್ ಷಹಾನ (1553-57)ಸೇವೆಗೆ ಸೇರಿ ತನ್ನ ಪ್ರಾಮಾಣಿಕತೆಯನ್ನೂ, ಪರಾಕ್ರಮವನ್ನೂ ವ್ಯಕ್ತಪಡಿಸಿದ. ಮಹಮ್ಮದ್ ಅದಿಲ್ ವಿರುದ್ಧದ ರಾಜಕೀಯ ಒಳಸಂಚನ್ನೂ, ದಂಗೆಗಳನ್ನೂ, ವಿರೋಧವನ್ನೂ ಹೇಮೂ ಹತ್ತಿಕ್ಕಿದ. ದೇಶಭ್ರಷ್ಟನಾಗಿದ್ದ ಮೊಗಲ್ (ಮುಲ್) ಸಾಮ್ರಾಟ ಹುಮಾಯೂನ 1555ರಲ್ಲಿ ದೆಹಲಿಯಲ್ಲಿ ಮೊಗಲ್ ರಾಜ್ಯ ಮರುಸ್ಥಾಪನೆಮಾಡಿದ. ಮಹಮ್ಮದ್ ಆದಿಲ್ ಷಹ ತನ್ನ ಆಪ್ತನಾದ ಅಪ್ರತಿಮ ವೀರನಾದ ಹೇಮೂವನ್ನು ಮೊಗಲರ ವಿರುದ್ಧ ಕಳುಹಿಸಿದ. ಆ ಮೊದಲೇ ತನ್ನ ಒಡೆಯನಿಗಾಗಿ ಇಪ್ಪತ್ತೊಂದು ಯುದ್ಧಗಳನ್ನು ಗೆದ್ದ ಹೇಮೂ ದೆಹಲಿಯತ್ತ ಧಾವಿಸಿದ. ಹೇಮೂ ಗ್ವಾಲಿಯರ್ ಗೆದ್ದು, ಆಗ್ರಾವನ್ನು ಆಕ್ರಮಿಸಿ, ದೆಹಲಿಯ ಮೇಲೆ ಧಾಳಿಮಾಡಿದ! ದೆಹಲಿಯಲ್ಲಿ ಮೊಗಲರು ಚೆಲ್ಲಾಪಿಲ್ಲಿಯಾದರು ಹಾಗೂ ಪ್ರಾಂತ್ಯಾಧಿಕಾರಿ ಟಾರ್ಡೀ ಬೆಗ್ ಯುದ್ಧ ಬಿಟ್ಟೋಡಿದ! ಹೇಮೂ ದೆಹಲಿಯಲ್ಲಿ ರಾಜಾ ವಿಕ್ರಮಾದಿತ್ಯ ಎಂದು ಬಿರುದಾಂಕಿತನಾಗಿ, ನಾಣ್ಯಗಳನ್ನೂ ಟಂಕಿಸಿ, ರಾಜ್ಯಾಧಿಕಾರಿಗಳನ್ನು ನೇಮಿಸಿ ಹಿಂದೂ ಅಧಿಪತ್ಯವನ್ನು ಸ್ಥಾಪಿಸಿದ! ಮಧ್ಯಯುಗದ ಭಾರತದ ಇತಿಹಾಸದಲ್ಲಿ ದೆಹಲಿಯ ಏಕಮಾತ್ರ ಹಿಂದೂರಾಜ ಎಂಬ ಕೀರ್ತಿಗೆ ಪಾತ್ರನಾದ ಹೇಮೂ ಹೇಮಚಂದ್ರನಾಗಿ ಮೆರೆದ!

ಜೀವನದುದ್ದಕ್ಕೂ ಎಡವಿದ ಹುಮಾಯೂನ ಎಡವಿ ಬಿದ್ದೇ ಜೀವ ತೆತ್ತ (ಜನವರಿ 1556). ಆಗ ಪಂಜಾಬಿನಲ್ಲಿದ ಅಕ್ಬರ್ ಹುಮಾಯೂನನ ಉತ್ತರಾಧಿಕಾರಿಯಾಗಿ ಮೊಗಲ್ ಸಾಮ್ರಾಟನಾದ. ಆದರೆ, ದೆಹಲಿ ಮೊಗಲರ ಕೈತಪ್ಪಿ ಹೇಮೂವಿನ ವಶವಾಗಿತ್ತು. ಹಾಗಾಗಿ ಅಕ್ಬರನ ಮೊದಲನೇ ಕರ್ತವ್ಯವೇ ದೆಹಲಿಯನ್ನು ಮರುಪಡೆಯುವುದಾಗಿತ್ತು. ಅದಕ್ಕಾಗಿ ಹೇಮೂವಿನೊಡನೆ ಯುದ್ಧ ಅನಿವಾರ್ಯವಾಯಿತು. ಚಾರಿತ್ರಿಕ ರಣಾಂಗಣವಾದ ಪಾಣಿಪತ್‌ನಲ್ಲಿ ಮೊಗಲರು ಮತ್ತು ಹೇಮೂ ಎದುರಾದರು (ನವಂಬರ 5, 1556). ಹೇಮೂ ಸಂಪ್ರದಾಯೀ ರಣತಂತ್ರದಂತೆ ಮುಂಚೂಣಿಯಲ್ಲಿ ಗಜಪಡೆ ನಿಲ್ಲಿಸಿ ಹೋರಾಡಿದ. ಹೇಮೂವಿನ ಗಜಸೈನ್ಯ ವೈರಿ ಪಾಳಯಕ್ಕೆ ನುಗ್ಗಿ ಸಾಕಷ್ಟು ಹಾನಿಮಾಡಿತು. ಹೇಮು, ಅವನ ಬೃಹದಾಕಾರದ ಆನೆಯನ್ನೇರಿ (ಹವಾಯೀ) ಈಟಿ (Spear) ಹಾಗೂ ಖಡ್ಗಗಳನ್ನು ಚಾಕಚಕ್ಯತೆಯಿಂದ ಸಲೀಸಾಗಿ ಬಳಸುತ್ತಾ ವೈರಿ ಮೋಹರದ ಮಧ್ಯೆ ವಿಜೃಂಭಿಸಿದ. ಅಕ್ಬರನಾದರೋ ಕಾದಾಟದಲ್ಲಿ ಭಾಗಿಯಾಗದೆ, ರಣರಂಗದಲ್ಲಿ ಹಿಂಬದಿಯಲ್ಲಿ, ಅತೀ ಸುರಕ್ಷಿತ ಸ್ಥಳದಲ್ಲಿ ರಕ್ಷಣೆ ಪಡೆದಿದ್ದ! ಮೊಗಲರ ಫಿರಂಗಿಗಳ, ಸಿಡಿಮದ್ದುಗಳ ಆರ್ಭಟವನ್ನು ಲೆಕ್ಕಿಸದೆ ಅರಿಭಯಂಕರನಾಗಿ ಹೇಮೂ ಹೋರಾಡುತ್ತಾ ವಿಜಯದಂಚಿನಲ್ಲಿದ್ದಾಗ……ಘಟಿಸಿತು, ಅಟಿತ ಟನೆ! ಬಾಣವೊಂದು ತೂರಿ ಬಂದು ಹೇಮೂವಿನ ಮುಖಕ್ಕೆ ಅಪ್ಪಳಿಸಿತು! ಅಂಬಾರಿಯಲ್ಲೇ ಕುಸಿದು ಬಿದ್ದ ಹೇಮೂವನ್ನು ರಕ್ಷಿಸಲು ಮಾಹುತ ಮಾತ್ರವಲ್ಲದೆ ಆನೆಯೂ ಮುಂದಾದುದು ವಿಶೇಷವಾಗಿತ್ತು! ಕೆಲವೇ ಕ್ಷಣಗಳಲ್ಲಿ ಚೇತರಿಸಿಕೊಂಡ ಹೇಮೂ ಹೋರಾಟ ಮುಂದುವರಿಸಿದ. ಆದರೆ ಅತಿಯಾದ ರಕ್ತಸ್ರಾವ ಮತ್ತು ಅಸಾಧ್ಯ ನೋವಿನಿಂದ ಬಳಲಿ ಬೆಂಡಾದ ಹೇಮೂ ಮೂರ್ಛಿತನಾದ. ಹೇಮೂ ಬೆಂಬಲಿಗರು ದಿಕ್ಕಾಪಾಲಾದರು. ಸುತ್ತುವರಿದ ಮೊಗಲರು ಹೇಮೂವನ್ನು ಸೆರೆಹಿಡಿದರು. ಸೆರೆಸಿಕ್ಕಿದ ಪ್ರಜ್ಞಾಹೀನನಾದ ಹೇಮೂವನ್ನು ಅಕ್ಬರನ ಮುಂದೆ ತಂದಾಗ ಅವನ ಶಿರಚ್ಛೇದನ ಮಾಡಲಾಯಿತು! ಇದು ಮೊಗಲ್ ಮಹಾಶಯನೆಂದು ಕರೆಯಲ್ಪಟ್ಟ ಅಕ್ಬರನ ಮಹಾಸಾಧನೆಯೇ? ರಾಜಾ ವಿಕ್ರಮಾದಿತ್ಯನ ಹಿಂದೂ ಸಾಮ್ರಾಜ್ಯ ಮಹಾಸ್ಥಾಪನೆ ಮಾಡುವ ಹೇಮೂವಿನ ಮಹದುದ್ದೇಶ ಕನಸಾಗಿಯೇ ಉಳಿಯಿತು. ಹೇಮೂವಿನ ಹೋರಾಟ ನಿಷ್ಪಲವಾದರೂ ಇತಿಹಾಸದಲ್ಲಿ ಅವನ ಸ್ಥಾನ ನಿಶ್ಚಲವಾಯಿತು.

ವಿಧಿ ಲೀಲೆ ಬಲ್ಲವರಾರು? ಇತಿಹಾಸದಲ್ಲಿ ವಿಧಿ ವಿಚೇಷ್ಟೆಗೆ ಪ್ರಾಧಾನ್ಯವಿಲ್ಲವಾದರೂ, ವಿಧಿವಂಚಿತ ವೀರಾಗ್ರಣಿಗಳ ವೀರಗಾಥೆ ಚಿರಸ್ಮರಣೀಯ.

  •  ಸಿ.ಎಸ್. ಶಾಸ್ತ್ರಿ
   

Leave a Reply