ವಿಜಯದ ಸಂಕಲ್ಪದ ದಿವಸ ವಿಜಯದಶಮಿ

ಹಬ್ಬಗಳು - 0 Comment
Issue Date : 25.09.2014

ಭಾರತ ಉತ್ಸವಗಳ ದೇಶ. ಈ ಉತ್ಸವಗಳಿಂದ ಉತ್ಸಾಹ-ಉಲ್ಲಾಸಗಳ ವಾತಾವರಣ ಮೂಡಿ ಬರುತ್ತದೆ. ಕಾಲಕಾಲಕ್ಕೂ ನಡೆಯುವ ಉತ್ಸವಗಳು ಸಮಾಜ ಜೀವನದಲ್ಲಿ ಶ್ರೇಷ್ಠ ಗುಣಗಳ ವಿಕಾಸ ಹಾಗೂ ಸಮತೆ ಮತ್ತು ಸಾಮರಸ್ಯದ ಸಂಸ್ಕಾರಗಳನ್ನು ಮೂಡಿಸುತ್ತವೆ, ಸಮಾಜ ಜೀವನವನ್ನು ಉಲ್ಲಾಸಮಯಗೊಳಿಸುತ್ತವೆ. ಉತ್ಸವಗಳಿಂದ ಮನಸ್ಸು, ಆತ್ಮ ಮತ್ತು ಶರೀರ ಎಲ್ಲವೂ ಉಲ್ಲಾಸಗೊಳ್ಳುತ್ತವೆ. ಉತ್ಸವವನ್ನು ‘ಪರ್ವ‘ ಎಂದೂ ಹೇಳುತ್ತಾರೆ. ‘ಪರ್ವ‘ ಶಬ್ದದ ಅರ್ಥ, ಪೂರ್ಣಗೊಳಿಸುವುದು. ಜೀವನದಲ್ಲಿ ಅಪೂರ್ಣತೆ ಗೋಚರಿಸಿದಲ್ಲಿ ಅದನ್ನು ಪೂರ್ಣಗೊಳಿಸುವುದು ಪರ್ವದ ಉದ್ದೇಶ. ಉತ್ಸವಗಳಲ್ಲಿ ನಮ್ಮ ರಾಷ್ಟ್ರದ ತ್ಯಾಗಿ, ಹುತಾತ್ಮ ಮಹಾಪುರುಷರ ಅನೇಕ ಸಂಸ್ಮರಣೆಗಳು, ಐತಿಹಾಸಿಕ ಮಹತ್ವದ ಪ್ರಸಂಗಗಳು ಸೇರಿಕೊಂಡಿವೆ.

ಶಕ್ತಿಯ ದೇವಿ ದುರ್ಗೆಯು ಮಹಿಷಾಸುರನನ್ನು ವಧಿಸಿ , ವಿಶ್ವವನ್ನು ಅತ್ಯಾಚಾರಗಳಿಂದ ಮುಕ್ತಗೊಳಿಸಿದ್ದಳು. ದುರ್ಗಾದೇವಿಯು ಸಜ್ಜನ ಶಕ್ತಿಯ ಪ್ರತೀಕವಾಗಿದ್ದರೆ ಮಹಿಷಾಸುರನು ದುಷ್ಟಶಕ್ತಿಯ ಪ್ರತೀಕ. ಪ್ರಭು ಶ್ರೀರಾಮನು ದುರ್ಗಾದೇವಿಯನ್ನು ಪೂಜಿಸಿದ ಬಳಿಕ ಮಾತೆಯ ಆಶೀರ್ವಾದ ಪಡೆದು, ಆಶ್ವೀಜ ಶುದ್ಧ ದಶಮಿಯಂದು ರಾವಣನನ್ನು ಜಯಿಸಿದ್ದನು. ಆದ್ದರಿಂದ ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ಇದು ಯಾವನೇ ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ಮೇಲೆ ಅಥವಾ ಒಂದು ದೇಶವು ಇನ್ನೊಂದು ದೇಶದ ಮೇಲೆ ಗಳಿಸಿದ ವಿಜಯವೇನಲ್ಲ. ಆದರೆ ಇದು ಅಧರ್ಮದ ಮೇಲೆ ಧರ್ಮದ, ಅನೀತಿಯ ಮೇಲೆ ನೀತಿಯ, ಆಸುರೀ ಶಕ್ತಿಯ ಮೇಲೆ ದೈವೀ ಶಕ್ತಿಯ, ಅಸತ್ಯದ ಮೇಲೆ ಸತ್ಯದ ಹಾಗೂ ಅನ್ಯಾಯದ ಮೇಲೆ ನ್ಯಾಯದ ವಿಜಯವಾಗಿದೆ. ಮಹಾಬಲಿಷ್ಠ ರಾವಣನ ಸಂಹಾರಕ ಶಕ್ತಿಯಿಂದ ದೇವತೆ ಹಾಗೂ ದೊಡ್ಡ ದೊಡ್ಡ ರಾಜ-ಮಹಾರಾಜರೂ ಭಯಗ್ರಸ್ತರಾಗಿದ್ದರು. ಆದರೆ ಶ್ರೀರಾಮನು ಸಾಮಾನ್ಯ ಸಮಾಜವನ್ನು ಸಂಘಟಿಸಿ ಬಲಿಷ್ಠ ರಾವಣನನ್ನು ಪರಾಭವಗೊಳಿಸಿದನು. ಇಂದಿಗೂ ನಾವು ಸಂಘಟಿತ ಜನಶಕ್ತಿಯ ಬಲದಿಂದ ದೇಶವನ್ನು ಕಾಡುತ್ತಿರುವ ವಿಪತ್ತುಗಳನ್ನು ಮೆಟ್ಟಿ ನಿಲ್ಲಬಹುದು.

ಇಂದಿನ ಪರಿಸ್ಥಿತಿಯ ಬಗ್ಗೆ ಯೋಚಿಸಿದರೆ ನಾವು ಅನೇಕ ಸಾಮಾಜಿಕ ಮತ್ತು ರಾಷ್ಟ್ರೀಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಭ್ರಷ್ಟಾಚಾರ, ಭಯೋತ್ಪಾದನೆ, ನಕ್ಸಲ್‌ವಾದ, ಮಾವೊವಾದ, ಪ್ರತ್ಯೇಕತೆ, ಸ್ಪೃಶ್ಯಾಸ್ಪೃಶ್ಯತೆ, ತುಷ್ಟೀಕರಣ, ಕನ್ಯಾ ಭ್ರೂಣಹತ್ಯೆ ಇತ್ಯಾದಿ ಇಂತಹ ಅನೇಕ ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳಿದ್ದು, ಅವುಗಳ ಮೇಲೆ ಸಮಾಜ ವಿಜಯ ಗಳಿಸಬೇಕಾಗಿದೆ. ಸಮಾಜವು ಈ ಸಮಸ್ಯೆಗಳ ಮೇಲೆ ವಿಜಯ ಗಳಿಸಲು ವ್ಯಕ್ತಿಗತ ಮತ್ತು ಸಾಮೂಹಿಕ ರೀತಿಯಲ್ಲಿ ಪ್ರಯತ್ನಿಸಬೇಕು. ವ್ಯಕ್ತಿಗತ ದೌರ್ಬಲ್ಯಗಳು ಮತ್ತು ಹೇಡಿತನ, ಮೇಲು-ಕೀಳು ಭಾವನೆ, ಸ್ವಾಭಿಮಾನಶೂನ್ಯತೆಯ ಮೇಲೆ ವಿಜಯ ಗಳಿಸಲು ಸಂಕಲ್ಪ ಮಾಡಬೇಕು. ಆಗಲೇ ನಾವು ಜಗತ್ತಿನ ಶ್ರೇಷ್ಠ ಮತ್ತು ಶಕ್ತಿಶಾಲಿ ರಾಷ್ಟ್ರದ ರೂಪದಲ್ಲಿ ನಿಲ್ಲಬಲ್ಲೆವು.

ಈ ದಿವಸ ಶಕ್ತಿಪೂಜೆಯ ಪರಂಪರೆಯೂ ಇದೆ. ಹನ್ನೆರಡು ವರ್ಷಗಳ ವನವಾಸ ಹಾಗೂ ಒಂದು ವರ್ಷದ ಅಜ್ಞಾತವಾಸದ ಬಳಿಕ ಪಾಂಡವರು ಇದೇ ದಿನ ತಮ್ಮ ಶಸ್ತ್ರಗಳನ್ನು ಪೂಜಿಸಿ, ಪುನಃ ಶಸ್ತ್ರಧಾರಣ ಮಾಡಿದ್ದರು. ಕಠಿಣ ಪರಿಸ್ಥಿತಿಯಲ್ಲೂ ಸ್ವಾಭಿಮಾನದಿಂದ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರು ಈ ದಿನವೇ ಸೀಮೋಲ್ಲಂಘನದ ಪರಂಪರೆಯನ್ನು ಆರಂಭಿಸಿದ್ದರು.

ಇಂದಿನ ದಿವಸ ನಾವೆಲ್ಲ ಹಿಂದೂಗಳು ಹಳೆಯ ಕಾಲಬಾಹ್ಯ ರೂಢಿಗಳನ್ನು ಕೊನೆಗೊಳಿಸಲು ಮಾನಸಿಕ ಸೀಮೋಲ್ಲಂಘನ ಮಾಡುವ ದೃಢನಿಶ್ಚಯ ಮಾಡಬೇಕು. ಹಿಂದೂ ಸಮಾಜವು ಒಂದು ಸಭ್ಯ, ಉದಾರ, ನಿರ್ಭಯಿ, ಪರಾಕ್ರಮಿ ಮತ್ತು ಸಂಘಟಿತ ಸಮಾಜವಾಗಿದ್ದು,ಇದೇ ಚಿತ್ರಣವು ಎಲ್ಲೆಡೆ ಜನಮಾನಸದಲ್ಲಿ ಮೂಡಿ ಬರಬೇಕು. ಉದಾರತೆ, ನಿರ್ಭಯತೆ, ಪರಾಕ್ರಮ ಹಾಗೂ ಸಂಘಟನೆ ಇತ್ಯಾದಿ ಗುಣಗಳಿಂದ ಕೂಡಿದ ಹಿಂದೂ ಸಮಾಜವೇ ಹಿಂದುತ್ವದ ಮಾನವ ಕಲ್ಯಾಣಕಾರಿ ತತ್ವವಿಚಾರಗಳನ್ನು ಕಾರ್ಯರೂಪಕ್ಕೆ ತಂದೀತು. ಮಾನವನ ಸುಖ, ಹಿತ ಮತ್ತು ಉನ್ನತಿಯ ಕುರಿತು ಯೋಚಿಸಬೇಕು. ಹಿಂದುತ್ವವೇ ಇದರ ಬಗ್ಗೆ ಯೋಚಿಸುತ್ತದೆ. ಇದೇ ವಿಚಾರವೇ ಸಮಗ್ರ ಜಗತ್ತಿನಲ್ಲಿ ಸಾಮಂಜಸ್ಯ ಮತ್ತು ಶಾಂತಿ ಸ್ಥಾಪಿಸಬಲ್ಲದು. ಈ ವಿಚಾರವೇ ಮನುಷ್ಯನನ್ನು ಸ್ವಾರ್ಥಿ ಮತ್ತು ರಾಕ್ಷಸನಾಗುವುದರಿಂದ ಉಳಿಸಬಲ್ಲದು. ಇಂತಹ ಸಮಾಜವೇ ಸಜ್ಜನರಲ್ಲಿ ನಿರ್ಭಯ ಭಾವನೆ ಮತ್ತು ದುರ್ಜನರಲ್ಲಿ ಭಯ ಮೂಡಿಸಬಲ್ಲದು.ಇಂತಹ ಸಮಾಜದ ನಿರ್ಮಾಣದ ಗುರಿ ಸಾಧಿಸಲೆಂದೇ 1925ರಲ್ಲಿ ವಿಜಯದಶಮಿಯ ದಿವಸ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನೆಯಾಯಿತು.

ಬನ್ನಿ, ನಾವೆಲ್ಲ ಜೊತೆಗೂಡಿ ಸಂಘಟಿತ, ಅನುಶಾಸಿತ, ಸಕ್ರಿಯ, ನಿರ್ದೋಷ ಸಮಾಜದ ನಿರ್ಮಾಣಕ್ಕೆ ಹೆಜ್ಜೆಯಿಡೋಣ. ಭೇದಭಾವರಹಿತ, ಶೋಷಣಮುಕ್ತ, ಸಮತಾಯುಕ್ತ, ಸಾಮರಸ್ಯದ, ಸಾಮರ್ಥ್ಯಶಾಲಿ, ಶಕ್ತಿಶಾಲಿ ಸಮಾಜ ಮತ್ತು ದೇಶದ ನಿರ್ಮಾಣಕ್ಕೆ ಈ ಸಂದರ್ಭದಲ್ಲಿ ಸಂಕಲ್ಪ ಮಾಡೋಣ.

  • ನರೇಂದ್ರ ಕುಮಾ
  • ಉತ್ತರ ಕ್ಷೇತ್ರ ಪ್ರಚಾರ ಪ್ರಮುಖ್, ದಿಲ್ಲಿ
   

Leave a Reply