ವಿಜಯದಶಮಿ

ಹಬ್ಬಗಳು - 0 Comment
Issue Date : 28.07.2014

 ದಕ್ಷಿಣ ಭಾರತದಲ್ಲಿ  ಹಿಂದೂಗಳು  ಆಚರಿಸುವ  ಹಬ್ಬಗಳಲ್ಲೆಲ್ಲ ದೊಡ್ಡ ಹಬ್ಬ ನವರಾತ್ರಿ. ಇದು ಸಂವತ್ಸರದಲ್ಲೆಲ್ಲ ಬಹು ಪ್ರಶಾಂತವಾದ ಹವೆಯಿಂದ ಕೂಡಿದ ಶರದೃತುವಿನಲ್ಲಿ ಬರುವುದು. ಆ ವೇಳೆಗೆ ಗ್ರೀಷ್ಮ ವರ್ಷಾ ಕಾಲಗಳು  ಕಳೆದು, ಪ್ರಕೃತಿಯು ಆನಂದಮಯವಾಗಿರುವುದು. ವಿಶೇಷವಾದ ಬಿಸಿಲಿನ ಬೇಗೆಯಾಗಲೀ, ಅತಿರೇಕವಾದ ಮಳೆಗಾಳಿಗಳಾಗಲೀ ಇಲ್ಲದೆ  ಹವೆಯು  ತಂಪಾಗಿ ಆಹ್ಲಾದಕರವಾಗಿರುವುದು. ಹೊರಗಿನ ಈ ವಾತಾವರಣದೊಂದಿಗೆ ಸಹ ಮೇಳಗೊಳ್ಳುವಂತೆ ಈ ವೇಳೆಗೆ ಭೂಮಿಯಲ್ಲಿ ಪೈರು ಪಚ್ಚೆಗಳೂ ಬೆಳೆದು ನಿಂತು, ಮನುಷ್ಯನ ಮನಸ್ಸಿಗೂ ಶಾಂತತೆ, ಸಮಾಧಾನ, ಭರವಸೆಗಳನ್ನು  ನೀಡುವಂತಿರುವುದು, ಇಂತಹ ಸುಸಂದರ್ಭದಲ್ಲಿ ಬಂದದೊಗುವ ಹಬ್ಬವು ನಿಜವಾಗಿ ಆನಂದದಾಯಕವಾಗಿರುವುದಲ್ಲವೆ?

ಕರ್ಣಾಟಕ ರಾಜ್ಯ ರಮಾರಮಣರೆಂದು ವಿಖ್ಯಾತರಾಗಿದ್ದ ಕೃಷ್ಣದೇವರಾಯನೇ ಮುಂತಾದ ವಿಜಯನಗರದ ಸಾರ್ವಭೌಮರ ಕಾಲದಲ್ಲಿ ಈ ಹಬ್ಬವು ಬಹು ವಿಜೃಂಭಣೆಯಿಂದ  ನಡೆಯುತ್ತಿದ್ದು ಆ ಸಂಪ್ರದಾಯವೇ ನಮ್ಮ ಮೈಸೂರು ರಾಜಮನೆತನದವರಿಂದಲೂ ಅನುಸರಿಸಲ್ಪಟ್ಟು ಇಂದಿನವರೆಗೂ ಆಚರಣೆಯಲ್ಲಿದೆ. ಇಂದಿಗೂ ಹಾಳಹಂಪೆಯಲ್ಲಿ ಆ ಕಾಲದಲ್ಲಿ ಮಹಾನವಮೀ ವಿಜಯದಶಮಿಗಳಲ್ಲಿ ಚತುರಂಗ ಸೈನ್ಯಗಳ ಪ್ರದರ್ಶನ ನಡೆದು ಮಹಾರಾಜರು ದರ್ಬಾರು ನಡೆಯುತ್ತಿದ್ದ ಸ್ಥಳಗಳನ್ನು ನೋಡಬಹುದಾಗಿದೆ.  ವಿಜಯದಶಮೀ ದಿನ  ರಾಜರು ಶತ್ರುಗಳ ಮೇಲೆ ಯುದ್ಧ ಯಾತ್ರೆಗಾಗಿ ಹೊರಡುತ್ತಿದ್ದರಂತೆ!

ಶಕ್ತಿಯ ಆರಾಧನೆ

ಹಿಂದೂಗಳು ಆಚರಿಸುವ  ಒಂದೊಂದು  ಹಬ್ಬವೂ ಒಂದೊಂದು ದೇವತೆಯ ಆರಾಧನೆಗೆ ಮೀಸಲಾಗಿರುವಂತೆಯೇ ಈ ನವರಾತ್ರಿಯೂ ಶಕ್ತಿದೇವತಾರಾಧನೆಗೆ ಮೀಸಲಾಗಿದೆ. ವರ್ಷದ ಪ್ರಾರಂಭದ ದಿನವಾದ ಚೈತ್ರಶುದ್ಧ ಪಾಡ್ಯಮಿಯಲ್ಲಿ  ಮಾಡಿದ ಪ್ರತಿಜ್ಞೆಯು, ಮಾನವಪ್ರಾಣಿಯ ಲೌಕಿಕ  ಜೀವಿತದಲ್ಲಿ ಆ ಒಂದು ವರ್ಷದಲ್ಲಿ  ಹೇಗೆ ಅಭಿವೃದ್ಧಿಗೊಂಡು ಫಲಪ್ರದವಾಗುವಂತೆ  ಏರ್ಪಟ್ಟಿರುವುದೆಂಬುದನ್ನು  ಕುರಿತು ಯೋಚಿಸಿದರೆ, ನಮ್ಮ ಹಿರಿಯರು ಎಂತಹ ಪ್ರಾಜ್ಞರು, ಎಂತಹ ನಿಯಮಬದ್ಧ ಜೀವನವನ್ನು  ಮೆಚ್ಚುತ್ತಿದ್ದ ಪ್ರಬುದ್ಧರು  ಎಂಬುದನ್ನು ತಿಳಿಯಬಹುದಾಗಿದೆ. ‘ಯುಗಾದಿ’ಯ ದಿನ  ಮಾನವ  ಜೀವಿತಕ್ಕೆ ಸಹಜವಾದ     ಕಷ್ಟ-ಸುಖ, ಲಾಭ-ನಷ್ಟ, ಶತ್ರು-ಮಿತ್ರ, ಸಾವು-ಬಾಳು, ಶೀತ-ಉಷ್ಣ ಮುಂತಾದ ದ್ವಂದ್ವಗಳನ್ನು  ಸಮದೃಷ್ಟಿಯಿಂದ ಕಂಡು ಲೋಕಯಾತ್ರೆಯಲ್ಲಿ  ಧೀರನಾಗಿ  ಮುಂದಡಿಯಿಡುತ್ತೇನೆಂದು  ಹೊರಟ ವ್ಯಕ್ತಿಯು, ಭಾದ್ರಪದ ಮಾಸದಲ್ಲಿ  ಸಕಲ ವಿಘ್ನ ಪರಿಹಾರಕನಾದ ವಿಘ್ನೇಶ್ವರನನ್ನು  ಆರಾಧಿಸಿ ತರುವಾಯ ಅನಂತಕಲ್ಯಾಣ ಗುಣಪರಿಪೂರ್ಣನಾದ ಅನಂತಪದ್ಮನಾಭ ಸ್ವಾಮಿಯನ್ನು  ಆರಾಧಿಸಿ ದೀಕ್ಷಾಬದ್ಧನಾಗಿ ಈ ಶರನ್ನವರಾತ್ರಿಯಲ್ಲಿ ಶಕ್ತಿ ದೇವತಾರಾಧನೆ ಮಾಡಿ ಬಲ ದೃಢಚಿತ್ತತೆಗಳನ್ನು ಗಳಿಸಿಕೊಂಡು ಚೈತ್ರಯಾತ್ರೆಗೆಂದು  ಹೊರಡುತ್ತಾನೆ. ಅಶ್ವಯುಜ ಶುದ್ಧ ಪಾಡ್ಯಮಿಯಿಂದ ದಶಮಿಯವರೆಗೆ ಅಖಂಡ ಹತ್ತು ದಿನಗಳು ನಡೆವ  ಈ ದೊಡ್ಡ ಹಬ್ಬದಲ್ಲಿ  ಅನೇಕ ಬಗೆಯ ಪೂಜೆ ಪುರಸ್ಕಾರಗಳು ನಡೆಯುವುವು. ಆಸ್ತಿಕ ಗೃಹಸ್ಥರು  ಶ್ರೀ ವೆಂಕಟೇಶ ಮಹಾತ್ಮ್ಯೆಯೇ ಮುಂತಾದ ಸದ್ಗ್ರಂಥಗಳ  ಪಾರಾಯಣ  ಪುರಾಣಾದಿಗಳನ್ನು ನಡೆಯಿಸುವವರು ಮನೆಯ ಬಂಧು ಬಾಂಧವರೆಲ್ಲರೂ ಅನೇಕ ಬಗೆಯ  ಭಕ್ಷ್ಯಭೋಜ್ಯಾದಿಗಳನ್ನುಂಡು ಗಂಧ ಪುಷ್ಪ ತಾಂಬೂಲಾದಿಗಳನ್ನು  ಪಡೆದು ಆನಂದಿಸುವರು. ವಿದ್ಯಾರ್ಥಿಗಳು ಶಾರದಾಂಬೆಯನ್ನೂ, ಕಾರ್ಮಿಕರು ತಮ್ಮ ಹಲವು ಬಗೆಯ ಆಯುಧಾದಿಗಳನ್ನು , ಕ್ಷತ್ರಿಯರು ತಮ್ಮ ಧನುರ್ಬಾಣಗಳು ಇತರ ಆಯುಧಗಳು ಮತ್ತು ಆನೆ, ಕುದುರೆ ಮುಂತಾದ ವಾಹನಾದಿಗಳು ಇವುಗಳೊಳಗೆ ಅಂತರ್ಯಾಮಿಯಾಗಿರುವ  ಶಕ್ತಿದೇವತೆಯನ್ನು  ಆರಾಧಿಸಿ ತಮಗೆ ಜಯವನ್ನು ಕರುಣಿಸುವಂತೆ  ಪ್ರಾರ್ಥಿಸುವರು.  ನಮ್ಮ ಪ್ರಾಚೀನ ಸಂಪ್ರದಾಯ ಸಂಸ್ಕೃತಿಗಳು  ಹೀಗೆ  ಪ್ರತಿಯೊಂದು ಕಾರ್ಯವನ್ನೂ ತದಂತರ್ಯಾಮಿಯಾದ ಒಂದು ಅಧಿದೇವತಾ ದೃಷ್ಟಿಯಿಂದ ಸಾಧಿಸುವ  ಧ್ಯೇಯವನ್ನುಂಟಾಗಿದ್ದು ಪ್ರತಿಯೊಬ್ಬನೂ ಲೌಕಿಕ ಜೀವನವನ್ನು  ಪಾರಮಾರ್ಥಿ ಸಾಧನಕ್ಕಾಗಿ ನಡೆಸುವಂತಹ ತಳಹದಿಯನ್ನು ಹೊಂದಿದ್ದಿತು.

ವಿಜಯಯಾತ್ರೆ

ವಿಜಯದಶಮಿಯು ಬಹು ಮಹತ್ವದ ದಿನ.  ದ್ವಾಪರಾಂತ್ಯದಲ್ಲಿ ಆ ದಿನಕ್ಕೆ ಸರಿಯಾಗಿ  ಪಾಂಡುತನಯರು ಅನುಭವಿಸಿದ ವನವಾಸ ಅಜ್ಞಾತವಾಸಗಳ ಅವಧಿಯು ಮುಗಿದು, ಅದೇ ದಿನ ಪಾಂಡವರಲ್ಲಿssss ಶ್ರೇಷ್ಠ ವೀರನಾದ ಅರ್ಜುನನು ಬೃಹನ್ನಳ ವೇಷದಿಂದ ಉತ್ತರ ಕುಮಾರನಿಗೆ ಸಾರಥಿಯಾಗಿ ಹೊರಟು, ಉತ್ತರ ಗೋಗ್ರಹಣ ಸಂಗ್ರಾಮ ಸಂಬಂಧದಲ್ಲಿ , ದುರ್ಗಾದೇವಿಯ ಪರಮಾನುಗ್ರಹದಿಂದ ಸುರಕ್ಷಿತವಾಗಿ ಶಮೀ ವೃಕ್ಷದಲ್ಲಿದ್ದ, ಗಾಂಢೀವ ಧನುಸ್ಸೇ ಮುಂತಾದ ತನ್ನ ಆಯುಧಗಳನ್ನು  ಪಡೆದು, ಏಕಾಂಗಿಯಾಗಿ ಯುದ್ಧ ಮಾಡಿ  ಭೀಷ್ಮ ದ್ರೋಣ ಕರ್ಣಾದಿ ಮಹಾವೀರದಿಂದ ಕೂಡಿದ ಕೌರವ ಸೈನ್ಯವನ್ನು  ನೆಲಕ್ಕೊರಗಿಸಿ, ಜಯದುಂದುಭಿಯನ್ನು  ಮೊಳಗಿಸಿದನು. ಅಂದಿನಿಂದ, ಭಾರತ ದೇಶ ನಿವಾಸಿಗಳಾದ ರಾಜಾಧಿರಾಜರು ನೂತನ ವಸ್ತ್ರಾಭರಣಗಳಿಂದಲೂ, ಧನುರ್ಬಾಣಾದಿ ಶತ್ರುಮಾರಕಗಳಾದ ದಿವ್ಯಾಯುಧಗಳಿಂದಲೂ ವಿಭೂಷಿತರಾಗಿ ಶಮೀಪತ್ರವನ್ನು ಮುಡಿದು ಪರಮೋತ್ಸಾಹದಿಂದ ಶತ್ರುಗಳ ಮೇಲೆ  ವಿಜಯಯಾತ್ರೆಗೆಂದು ಹೊರಡುತ್ತಿದ್ದ ಪದ್ಧತಿ ನಡೆದುಬಂದಿತು.

ದುಷ್ಟಶಕ್ತಿಗಳನ್ನು ಧ್ವಂಸಗೊಳಿಸಬೇಕು

 ಪ್ರಕೃತ ಭಾರತ ದೇಶಕ್ಕೆ ಸ್ವಾತಂತ್ರ್ಯ ಪ್ರಾಪ್ತವಾಗಿ, ಭಾರತೀಯರ ಬಹುದಿನಗಳ ಅಭಿಲಾಷೆ ಈಡೇರಿದೆ. ಈಗ ಅವರು ಯಾವ ಶತ್ರುವಿನ ಮೇಲೂ ಯುದ್ಧ ಯಾತ್ರೆಗಾಗಿ ಹೊರಡಲು  ಕಾರಣವಿಲ್ಲ. ಆದರೆ ಈಗಲೂ ಅವರಿಗೆ ಪ್ರಬಲ  ಶತ್ರುವಾಗಿ  ನಿಂತು  ಅವರ ಸತ್ವ ಹರಣ ಮಾಡುತ್ತಿರುವ  ಕೆಲವು  ದುಷ್ಟಶಕ್ತಿಗಳಿವೆ. ಅಂತಹ ದುಷ್ಟಶಕ್ತಿಗಳ ಹುಟ್ಟಡಗಿಸದಿದ್ದರೆ ಅವರು ಈಗ ಗಳಿಸಿರುವ  ಸ್ವಾತಂತ್ರ್ಯವೂ ಕೇವಲ ನಾಮ ಮಾತ್ರವಾಗಿರುವುದು ಮಾತ್ರವಲ್ಲ; ಶೀಘ್ರದಲ್ಲೇ ಇತರರ ಪಾಲಾದರೂ  ಆಗಬಹುದು. ಏಕೆಂದರೆ ಸ್ವಾತಂತ್ರ್ಯವು ಹೇಡಿಗಳ ಸ್ವತ್ತಲ್ಲ. ಅದನ್ನು ದೃಢಮುಷ್ಟಿಯಿಂದ ರಕ್ಷಿಸಿಕೊಳ್ಳಲಾರದ ಅಧಮನಲ್ಲಿ ಅದು ಉಳಿಯಲಾರದು. ಆದುದರಿಂದ ಈ ಸಂದರ್ಭದಲ್ಲಿ ಅಂತಹ ದುಷ್ಟ ಅಂತಃಶಕ್ತಿಗಳನ್ನು  ಕಂಡುಹಿಡಿದು ಧ್ವಂಸಗೊಳಿಸುವ  ಕಾರ್ಯವು ಪ್ರತಿಯೊಬ್ಬ ಭಾರತೀಯನಿಂದಲೂ ನಡೆಯಬೇಕಾಗಿದೆ. ಬ್ರಿಟಿಷರು ನಮ್ಮನ್ನು ಬಿಟ್ಟುಹೋದರಾದರೂ, ಅವರ ವೇಷಭಾಷೆ, ಭೂಷಣ, ತಿಂಡಿತೀರ್ಥಗಳು, ಅವರ ಸಂಪ್ರದಾಯ ಸಂಸ್ಕೃತಿಗಳು ಇವುಗಳನ್ನು ಅನುಕರಿಸುತ್ತಿರುವ  ದಾಸ್ಯ ಮನೋಭಾವ ನಮ್ಮಲ್ಲಿನ್ನೂ ರೂಢಮೂಲವಾಗಿದೆ. ಸಾಲದುದಕ್ಕೆ, ಜಾತಿದ್ವೇಷ, ಮತದ್ವೇಷಗಳು ಪರಸ್ಪರ ಅಸಹನೆ  ಅನೈಕಮತ್ಯಗಳು, ಸ್ವಯೂಧ ಕಲಹಗಳು ಮುಂತಾದ ಇವುಗಳ ದುಷ್ಟಬೀಜಗಳನ್ನೆಲ್ಲ ನಮ್ಮ ಹೃದಯ ಕ್ಷೇತ್ರದಿಂದ ತೊಲಗಿಸಲು ನಡೆಯಬೇಕಾದ ದೊಡ್ಡ ಜೈತ್ರಯಾತ್ರೆಗೆ ನಾವು ಇಂದು ಸಿದ್ಧವಾಗಬೇಕಾಗಿದೆ. ಎಲ್ಲಕ್ಕೂ ಹೆಚ್ಚಾಗಿ, ಸ್ವಾರ್ಥತೆ, ಸೋಮಾರಿತನ ಮುಂತಾದುವುಗಳ ಬೇರುಗಳನ್ನೂ ಹೃದಯ ಕ್ಷೇತ್ರದಿಂದ ಕಿತ್ತೊಗೆಯಲು ನಮ್ಮವರು ದೃಢಸಂಕಲ್ಪ ಮಾಡಬೇಕಾಗಿದೆ. ಇಂದು ವಿಜಯದಶಮಿಯಲ್ಲಿ, ವಿಜಯದ ಶಮೀಪತ್ರವನ್ನು ಮುಡಿದು ನಾವು ಈ ಅಂತಶ್ಶತ್ರುಗಳ ದಮನ ಕಾರ್ಯಕ್ಕಾಗಿ ಹೊರಡಲು ಕೃತಸಂಕಲ್ಪರಾಗಿ ತನ್ಮೂಲಕ ನಾವು  ಈವರೆಗೆ ಗಳಿಸಿರುವ  ಸ್ವಾತಂತ್ರ್ಯವನ್ನು  ಸಂರಕ್ಷಿಸಿಕೊಳ್ಳಬೇಕಾಗಿದೆ.

 –    ಬರೆದವರು: ಯಂ. ರಾಮರಾವ್

–    ಸಂಪಾದಕರು : ‘ಸುಬೋಧ’ ಬೆಂಗಳೂರು

   

Leave a Reply