ವಿಶ್ವ ಹಿಂದೂ ಪರಿಷತ್‌ಗೆ ಸ್ವರ್ಣ ಜಯಂತಿಯ ಸಡಗರ

ವಿಶ್ವ ಹಿಂದೂ ಪರಿಷತ್ - 0 Comment
Issue Date : 11.08.2014

ಹಿಂದುಗಳ ಜಾಗತಿಕ ಸಂಘಟನೆಯಾಗಿರುವ ವಿಶ್ವ ಹಿಂದೂ ಪರಿಷತ್‌ಗೆ ಈಗ ಸ್ವರ್ಣಜಯಂತಿಯ ಸಡಗರ, ಸಂಭ್ರಮ. ವಿಶ್ವ ಹಿಂದು ಪರಿಷತ್ ಪ್ರಾರಂಭವಾಗಿದ್ದು 1964ರ ಶ್ರೀಕೃಷ್ಣ ಜನ್ಮಾಷ್ಟಮಿಯಂದು, ಮುಂಬೈಯ ಸಾಂದೀಪನಿ ಆಶ್ರಮದಲ್ಲಿ . ಹಿಂದು ಸಮಾಜದ ಸಂಘಟನೆ, ಧರ್ಮ, ಸಂಸ್ಕೃತಿ ಹಾಗೂ ಜೀವನಾದರ್ಶಗಳ ಸಂರಕ್ಷಣೆ ಸಂವರ್ಧನೆಗಾಗಿ ಸಂಕಲ್ಪತೊಟ್ಟು ವಿಹಿಂಪ ಕಳೆದ 50 ವರ್ಷಗಳಲ್ಲಿ ವಟವೃಕ್ಷದಂತೆ ಬೆಳೆದು ನಿಂತಿದೆ. ಹಿಂದುಗಳ ಆಶಾಕಿರಣವಾಗಿ ಗೋಚರಿಸಿದೆ.

ವಿಹಿಂಪ ಹಲವಾರು ಹೋರಾಟಗಳಿಗೆ ಚಾಲನೆ ನೀಡಿದೆ. ಹಿಂದುಗಳಲ್ಲಿ ಸ್ವಾಭಿಮಾನ ಮೂಡಿಸುವಲ್ಲಿ ಅಹರ್ನಿಶಿ ಶ್ರಮಿಸಿದೆ. ಹಿಂದು ಅಸ್ಮಿತೆಗೆ ಅಧಿಕೃತ ಮುದ್ರೆ ಒತ್ತುವಲ್ಲಿ ಸಾಹಸದ ಯಾತ್ರೆ ಮಾಡಿದೆ. ಕೇವಲ ಭಾರತದಲ್ಲಷ್ಟೇ ಅಲ್ಲ , ಜಗತ್ತಿನ ಹಲವಾರು ದೇಶಗಳಲ್ಲಿ ಅದು ತನ್ನ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಸ್ವರ್ಣ ಜಯಂತಿಯ ಹೊಸ್ತಿಲಲ್ಲಿ ಬಂದು ನಿಂತಿದೆ.

ಶ್ರೀಕೃಷ್ಣ ಜನ್ಮಾಷ್ಟಮಿಯಂದು ದೇಶದ ಎಲ್ಲ ಪ್ರಮುಖ ಪಂಥ ಹಾಗೂ ಸಂಪ್ರದಾಯಗಳ ಪ್ರಮುಖ ಸಂತರು ಒಟ್ಟಿಗೆ ಸೇರಿ ವಿಶ್ವಹಿಂದೂ ಪರಿಷತ್ತಿನ ಸ್ಥಾಪನೆ ಮಾಡಿದ್ದರು. ಸ್ಥಾಪನೆಯ ಸಂದರ್ಭದಲ್ಲೇ ಅವರು ಪರಿಷತ್ತಿನ ಧ್ಯೇಯ ಹಾಗೂ ಕಾರ್ಯವನ್ನು ನಿರ್ಧರಿಸಿದ್ದರು. ಗೋಹತ್ಯೆ, ಮತಾಂತರ, ಪ್ರತ್ಯೇಕತಾವಾದ, ಸಂತರು ಹಾಗೂ ದೇವಿ – ದೇವತೆಗಳ ಅಪಮಾನ ಇತ್ಯಾದಿಗಳನ್ನು ತೊಡೆದು ಹಾಕಿ, ಹಿಂದು ಸಮಾಜಕ್ಕೆ ಅಂಟಿರುವ ಜಾತೀಯತೆ, ಅಸ್ಪೃಶ್ಯತೆ ಹಾಗೂ ಮೇಲು-ಕೀಳು ಭಾವನೆಗಳ ಕಳಂಕವನ್ನು ಕೊನೆಗೊಳಿಸಿ, ಸಶಕ್ತ, ಸಂಘಟಿತ, ಸಾಮರಸ್ಯದ ಹಿಂದು ಸಮಾಜವನ್ನು ನಿರ್ಮಿಸುವ ಗುರಿ ವಿಶ್ವಹಿಂದೂ ಪರಿಷತ್ತಿನದಾಗಿತ್ತು.

ಆದರೆ ಪರಿಷತ್ತಿನ ಮುಂದಿದ್ದ ಈ ಗುರಿಯನ್ನು ಈಡೇರಿಸುವುದು ಸುಲಭವೇನೂ ಆಗಿರಲಿಲ್ಲ. ಪರಿಸ್ಥಿತಿ ಕೂಡ ಪ್ರತಿಕೂಲವಾಗಿಯೇ ಇತ್ತು. ದೇಶವಿರೋಧಿಹಾಗೂ ಹಿಂದು ವಿರೋಧಿಶಕ್ತಿಗಳು ಭಾರತ ಹಾಗೂ ಹಿಂದು ಸಮಾಜದ ಗೌರವವನ್ನು ಮಣ್ಣುಗೂಡಿಸಲು ಹೊಂಚುಹಾಕಿದ್ದವು. ಕೆಲವು ವಿದೇಶಿ ಶಕ್ತಿಗಳು ಇಂತಹ ಷಡ್ಯಂತ್ರಗಳಿಗೆ ಹಣಬಲ ಮತ್ತು ಮಿಕ್ಕ ಸವಲತ್ತುಗಳನ್ನು ನೀಡುತ್ತಿದ್ದರು. ಆದರೆ ವಿಹಿಂಪ ಕಳೆದ 50 ವರ್ಷಗಳಲ್ಲಿ ಈ ಎಲ್ಲ ಷಡ್ಯಂತ್ರಗಳಿಗೆ ಕಡಿವಾಣ ಹಾಕಿರುವುದಲ್ಲದೆ ಅವುಗಳನ್ನು ಸಂಪೂರ್ಣವಾಗಿ ಸಮಾಪ್ತಿಗೊಳಿಸುವ ವಿಶ್ವಾಸವನ್ನು ಮೂಡಿಸಿದೆ. ಇದಕ್ಕೆ ಪೂಜ್ಯ ಸಂತರ ಆಶೀರ್ವಾದ, ಹಿಂದು ಸಮಾಜದ ಬೆಂಬಲವೇ ಕಾರಣ.

ಇಂದು ದೇಶದ 50 ಸಹಸ್ರ ಗ್ರಾಮಗಳಲ್ಲಿ ಸುಮಾರು 3 ಲಕ್ಷ ಸಮರ್ಪಿತ ಕಾರ್ಯಕರ್ತರ ನಿರಂತರ ಸಾಧನೆಯ ಕಾರಣದಿಂದಾಗಿ ವಿಹಿಂಪ ದೇಶಸೇವೆಯ ಕಾರ್ಯದಲ್ಲಿ ಕೀರ್ತಿಪ್ರದ ಸಾಧನೆಗಳನ್ನು ಮಾಡಿದೆ. 550 ಗೋಶಾಲೆಗಳಲ್ಲಿ ಗುಣಪಡಿಸಲಾಗದ ಕೆಲವು ಭೀಕರ ರೋಗಗಳನ್ನು ಪಂಚಗವ್ಯದಿಂದ ಉಪಚರಿಸಬಹುದಾದ ಔಷಧವನ್ನು ತಯಾರಿಸಲಾಗುತ್ತಿದೆ. ಸುಮಾರು 60 ಸಾವಿರ ಸೇವಾ ಕಾರ್ಯಗಳ ಮೂಲಕ ಪರಿಷತ್ತು ಸಮಾಜದಲ್ಲಿ ಆರೋಗ್ಯ, ಶಿಕ್ಷಣ, ಸ್ವಾವಲಂಬನೆ, ಗ್ರಾಮ ವಿಕಾಸ ಹಾಗೂ ಸಾಮಾಜಿಕ ಸುರಕ್ಷತೆಯ ಕಾರ್ಯಗಳಲ್ಲಿ ನಿರತವಾಗಿದೆ. 51,000 ಗ್ರಾಮ ಶಿಕ್ಷಾಮಂದಿರಗಳ ಮೂಲಕ 20 ಲಕ್ಷಕ್ಕೂ ಹೆಚ್ಚು ಗ್ರಾಮವಾಸಿ, ವನವಾಸಿ ವಿದ್ಯಾರ್ಥಿಗಳಿಗೆ ಅನೌಪಚಾರಿಕ ಶಿಕ್ಷಣ ನೀಡಲಾಗುತ್ತಿದೆ. ಈವರೆಗೆ ದೇಶಾದ್ಯಂತ ಒಟ್ಟು 150 ವಿದ್ಯಾರ್ಥಿ ನಿಲಯಗಳ ಮೂಲಕ 50 ಸಹಸ್ರಕ್ಕೂ ಹೆಚ್ಚು ನಿರಾಶ್ರಿತ ಮಕ್ಕಳಿಗೆ ವಸತಿ, ಶಿಕ್ಷಣ, ಸಂಸ್ಕಾರದ ವ್ಯವಸ್ಥೆ ಮಾಡಲಾಗಿದೆ. ದೇಶದಲ್ಲಿ ಒಟ್ಟು 42 ಅನಾಥಾಲಯಗಳಲ್ಲಿ 2 ಸಾವಿರ ಮಕ್ಕಳಿಗೆ ಆಶ್ರಯ ನೀಡಲಾಗಿದೆ.

ಕರ್ನಾಟಕದಲ್ಲಿ

ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕು ಹಾಗೂ 1500 ಗ್ರಾಮಗಳಿಗೆ ಪಸರಿಸಿರುವ ವಿಹಿಂಪ ಸಮಾಜ ಸಂಘಟನೆ, ಸೇವೆ ಹಾಗೂ ಜಾಗೃತಿಯ ಕಾರ್ಯದಲ್ಲಿ ನಿರತವಾಗಿದೆ. ಗಾಣಗಾಪುರದಲ್ಲಿ ಕುಷ್ಠರೋಗಿಗಳ ನಿರೋಗಿ ಮಕ್ಕಳಿಗಾಗಿ ನಡೆಯುತ್ತಿರುವ ದತ್ತಬಾಲ ಸೇವಾಶ್ರಮದಲ್ಲಿ 60 ಮಕ್ಕಳು ಆಶ್ರಯ ಶಿಕ್ಷಣ ಪಡೆಯುತ್ತಿದ್ದಾರೆ. ಗುಲ್ಬರ್ಗದ ನಂದಗೋಕುಲ ಶಿಶು ಗೃಹ 20 ಮಕ್ಕಳನ್ನು ಪೋಷಿಸುತ್ತಿದೆ. ಬೆಳಗಾವಿಯ ಬಾಲ ಕಲ್ಯಾಣಕೇಂದ್ರದಲ್ಲಿ 80 ಮಕ್ಕಳನ್ನು ಸಲಹಲಾಗುತ್ತಿದೆ. ಚಾಮರಾಜನಗರದ ಪಾರ್ವತಿ ಬಾಲ ಸೇವಾಶ್ರಮದಲ್ಲಿ 40 ಹಾಗೂ ಮಂಗಳೂರಿನ ಕುತ್ತಾರ ಪದವು ಆಶ್ರಮದಲ್ಲಿ 80 ಮಕ್ಕಳು ಆಶ್ರಯ ಪಡೆದಿದ್ದಾರೆ.

ವಿವಿಧ ಜಿಲ್ಲೆಗಳಲ್ಲಿ ನಡೆಯುವ ಶಿಕ್ಷಣ ಸಂಸ್ಥೆಗಳಲ್ಲಿ ಶಿಶು ವಿಹಾರದಿಂದ ಕಾಲೇಜು ಶಿಕ್ಷಣದವರೆಗೆ 15 ಶೈಕ್ಷಣಿಕ ಪ್ರಕಲ್ಪಗಳು ನಡೆಯುತ್ತಿವೆ. ಅಲ್ಲದೆ ಧಾರವಾಡದಲ್ಲಿ ಸಂಜೀವಿನ ಕಣ್ಣಿನ ಆಸ್ಪತ್ರೆ, ಮಡಿಕೇರಿಯಲ್ಲಿ ಅಶ್ವಿನಿ ಆಸ್ಪತ್ರೆಗಳು ವಿಹಿಂಪ ಅಡಿಯಲ್ಲಿ ಕಾರ್ಯನಿರತವಾಗಿದೆ. ಹಾವೇರಿ ಜಿಲ್ಲೆಯ ತಿಳುವಳ್ಳಿಯಲ್ಲಿ 80 ಹಸುಗಳ ಹಾಗೂ ಮಂಗಳೂರಿನ ಬೀಜಗುರಿಯಲ್ಲಿ 250 ಹಸುಗಳ ಗೋಶಾಲೆ ನಡೆಯುತ್ತಿದೆ. 8 ಜಿಲ್ಲೆಗಳಲ್ಲಿ 1100 ಗ್ರಾಮ ಶಿಕ್ಷಾ ಮಂದಿರಗಳ ಮೂಲಕ ವನವಾಸಿ ಹಾಗೂ ಗ್ರಾಮವಾಸಿ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣ ನೀಡಲಾಗುತ್ತಿದೆ. ಹುಬ್ಬಳ್ಳಿಯ ಜ್ಞಾನಗಂಗಾ ಪ್ರಕಲ್ಪವು 130 ಕೇಂದ್ರಗಳಲ್ಲಿ 3,500 ಬಡ ವಿದ್ಯಾರ್ಥಿಗಳಿಗೆ ಉಚಿತ ಮನೆ ಪಾಠ ಸಂಸ್ಕಾರ ಕೇಂದ್ರಗಳನ್ನು ನಡೆಸುತ್ತಿದೆ.

ಆಂದೋಳನಗಳು

ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣ, ರಾಮೇಶ್ವರದಲ್ಲಿ ಶ್ರೀರಾಮ ಸೇತುವಿನ ರಕ್ಷಣೆ, ಅಮರನಾಥ ಕ್ಷೇತ್ರದ ಭೂಮಿಯ ರಕ್ಷಣೆ, ಸರ್ಕಾರದ ಕಪಿಮುಷ್ಟಿಯಿಂದ ತಿರುಪತಿ ಬೆಟ್ಟಗಳ ಸಂರಕ್ಷಣೆ. ದತ್ತಪೀಠದ ಪಾವಿತ್ರ್ಯತೆ ಹಾಗೂ ಪೂಜಾ ಹಕ್ಕಿಗಾಗಿ ಆಂದೋಳನ… ಇತ್ಯಾದಿ ಹಲವು ಆಂದೋಳನಗಳಿಗೆ ವಿಹಿಂಪ ಯಶಸ್ವೀ ಸಾರಥ್ಯ ವಹಿಸಿದೆ. ಜೊತೆಗೆ ಗೋಸಂರಕ್ಷಣೆ, ಮತಾಂತರ ತಡೆ, ಲವ್‌ಜಿಹಾದ್‌ಗಳಿಂದ ಹಿಂದು ಯುವತಿಯರ ರಕ್ಷಣೆ, ಸಂತರು ಹಾಗೂ ಮಠಮಂದಿರಗಳ ಗೌರವದ ರಕ್ಷಣೆ ಮುಂತಾದ ಆಂದೋಳನ ಹಾಗೂ ಸಂಘರ್ಷಗಳ ಮೂಲಕ ಜಾಗೃತ ಹಿಂದು ಶಕ್ತಿಯ ಪರಿಣಾಮವಾಗಿ ಇಂದು ಹಿಂದು ವಿರೋಧಿಶಕ್ತಿಗಳು ನಮ್ಮ ಶ್ರದ್ಧಾಕೇಂದ್ರಗಳು, ಸಾಧು-ಸಂತರು, ದೇವಿದೇವತೆಗಳ ಮೇಲೆ ಆಘಾತ ಮಾಡುವುದು ಅಷ್ಟು ಸುಲಭ ಸಾಧ್ಯವಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ.
ಹಿಂದು ಸಂಘಟನೆಯ ಬಲವರ್ಧನೆ
ಹೀಗಿದ್ದರೂ ಜಿಹಾದಿ ಹಾಗೂ ಚರ್ಚ್‌ಪ್ರೇರಿತ ಭಯೋತ್ಪಾದನೆ, ಮತಾಂತರ, ನಕ್ಸಲ್‌ವಾದ ಮುಂತಾದ ದೇಶ ವಿರೋಧಿಚಟುವಟಿಕೆಗಳು ಎಗ್ಗಿಲ್ಲದೆ ಮುಂದುವರಿದಿದೆ. ಹಿಂದು ಸಮಾಜದ ಒಳಗೇ ಇರುವ ಅಪಸವ್ಯಗಳನ್ನು, ಕುರೂಢಿಗಳನ್ನು ಕೊನೆಗೊಳಿಸಿ, ಸಮರಸದ, ಸಂಘಟಿತ, ಶಕ್ತಿಶಾಲಿ ಹಿಂದು ಸಮಾಜ ನಿರ್ಮಿಸುವ ಗುರಿ ಇನ್ನೂ ಈಡೇರಿಲ್ಲ. ಸ್ವರ್ಣ ಜಯಂತಿಯ ಈ ಸಂದರ್ಭದಲ್ಲಿ ದೇಶದ 1 ಲಕ್ಷ ಗ್ರಾಮಗಳಲ್ಲಿ 10 ಲಕ್ಷ ಕಾರ್ಯಕರ್ತರ ಮೂಲಕ ಹಿಂದು ವಿರೋಧಿಗಳ ಷಡ್ಯಂತ್ರಗಳನ್ನು ತಡೆದು ಸಶಕ್ತ, ಸ್ವಾಭಿಮಾನಿ, ಸಂಘಟಿತ ಹಿಂದು ಸಮಾಜ ನಿರ್ಮಿಸಬೇಕೆಂಬುದು ವಿಹಿಂಪ ದೃಢಸಂಕಲ್ಪ.

ಸ್ವರ್ಣ ಜಯಂತಿ

ಪರಿಷತ್ತಿನ ಸ್ವರ್ಣ ಜಯಂತಿ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

  • ಮೊಟ್ಟಮೊದಲ ಕಾರ್ಯಕ್ರಮವಾಗಿ ದೇಶದ ಎಲ್ಲ ಪ್ರಖಂಡ (ತಾಲೂಕು)ಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಶೋಭಾಯಾತ್ರೆಗಳಿಗೆ ಚಾಲನೆ. ಕರ್ನಾಟಕ ದಕ್ಷಿಣ ಪ್ರಾಂತದ 162 ಸ್ಥಾನಗಳಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆ. 
  • 2014ರ ನವೆಂಬರ್ 11 ಮತ್ತು 12ರಂದು ಸಿದ್ದಗಂಗೆಯಲ್ಲಿ ಪೂಜ್ಯ ಡಾ. ಶಿವಕುಮಾರ ಸ್ವಾಮೀಜಿಯವರ ಹಿರಿತನದಲ್ಲಿ ಆಹ್ವಾನಿತ ಧರ್ಮಾಚಾರ್ಯರೊಂದಿಗೆ ರಾಜ್ಯದ ಎಲ್ಲ ಹಿರಿಯ ಸ್ವಾಮಿಗಳ ಹಾಗೂ ಮಠಾಧೀಶರ ಸಮ್ಮೇಳನ. 
  • 2014 ನವೆಂಬರ್ 21, 22, 23ರಂದು ದೆಹಲಿಯಲ್ಲಿ ವರ್ಲ್ಡ್ ಹಿಂದು ಕಾಂಗ್ರೆಸ್ ವೇದಿಕೆ ಅಡಿಯಲ್ಲಿ ವಿಶ್ವದ ಪ್ರಮುಖ ಹಿಂದು ಉದ್ಯಮಿಗಳು, ಶಿಕ್ಷಣ ತಜ್ಞರು, ಅರ್ಥಶಾಸ್ತ್ರಜ್ಞರು, ಮಹಿಳಾ, ಯುವ ಮುಖಂಡರ ಸಮ್ಮೇಳನ. 
  • 2014ರ ನವೆಂಬರ್‌ನಿಂದ 2015ರ ಫೆಬ್ರವರಿ ಅವಧಿಯಲ್ಲಿ ಪ್ರಾಂತದ ಪ್ರತಿ ಜಿಲ್ಲೆಗಳಲ್ಲಿ ಹಿಂದು ಸಮ್ಮೇಳನಗಳು. 
  • 2015 ಫೆಬ್ರವರಿ 8ರಂದು ದೇಶದ 5 ಮಹಾನಗರಗಳಲ್ಲಿ ನಡೆಯುವ ಸಮ್ಮೇಳನಗಳ ಭಾಗವಾಗಿ ಬೆಂಗಳೂರಿನಲ್ಲಿ ಬೃಹತ್ ಹಿಂದು ಸಮ್ಮೇಳನ. 
  • ದೇಶದಲ್ಲಿ 50 ಸಾವಿರ ಬಜರಂಗಿಗಳಿಂದ ರಕ್ತದಾನದ ಗುರಿ.

ವಿಹಿಂಪ ಸ್ವರ್ಣಜಯಂತಿ ವರ್ಷದ ಕಾರ್ಯಕ್ರಮಗಳ ಉದ್ಘಾಟನೆಯು ಇದೇ ಆಗಸ್ಟ್ 17ರಂದು ಮುಂಬೈನ ಸಾಂದೀಪನಿ ಆಶ್ರಮದಲ್ಲಿ ನಡೆಯಲಿದೆ. ಪರಿಷತ್ತಿನ ಈ ಎಲ್ಲ ಕಾರ್ಯಕ್ರಮಗಳ ಯಶಸ್ಸು ಹಿಂದು ಸಮಾಜದ ಬಂಧು ಭಗಿನಿಯರ ಸಹಕಾರ, ಬೆಂಬಲವನ್ನು ಅವಲಂಬಿಸಿದೆ. ಹಿಂದು ಸಮಾಜದ ಸಂಘಟನೆಗಾಗಿ ಕೈಜೋಡಿಸಲು ಮುಂದಾಗಿ. ಪ್ರತೀ ಹಿಂದುವಿನ ಸಕ್ರಿಯತೆಯಿಂದಲೇ ಸಶಕ್ತ, ಸ್ವಾಭಿಮಾನಿ ಹಿಂದು ಸಮಾಜ ನಿರ್ಮಾಣ ಸಾಧ್ಯ ಎಂಬುದನ್ನು ಮರೆಯದಿರೋಣ.

  • ಸ್ವಾಭಿಮಾನಿ ಹಿಂದು
   

Leave a Reply