ಖಾಮ್ಗಾಂವ್ (ವಿದರ್ಭ): ದೇಶಾದ್ಯಂತ ಅಲೆಮಾರಿ ಮತ್ತು ವಿಮುಕ್ತ ಸಮುದಾಯಗಳೆಂದು ಕರೆಯಲ್ಪಡುವ ಸಮಾಜವು ಒಂದಾನೊಂದು ಕಾಲದಲ್ಲಿ ಜ್ಞಾನದಾನ ಮಾಡುತ್ತಿದ್ದ ಸಮಾಜವಾಗಿತ್ತು. ಸಮಾಜಕ್ಕೆ ನಿಸ್ವಾರ್ಥವಾಗಿ ಜ್ಞಾನವನ್ನು ಪಸರಿಸಲು ಈ ಸಮುದಾಯವು ದೇಶಾದ್ಯಂತ ಸಂಚರಿಸುತ್ತಿತ್ತು. ಆದರೆ, ಕಾಲಕ್ರಮೇಣ ಈ ಸಮುದಾಯವು ಉಪೇಕ್ಷೆಗೆ ಒಳಗಾಯಿತು. ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಕಾರಣಕ್ಕಾಗಿ ಇಡೀ ಪಾರಧಿ-ಆದಿವಾಸಿ ಸಮುದಾಯಕ್ಕೆ ‘ಅಪರಾಧಿ ಬುಡಕಟ್ಟು’ ಎಂಬ ಮುದ್ರೆ ಒತ್ತಲಾಯಿತು. ಇದರಿಂದಾಗಿ ಅವರ ವಿಕಾಸಕ್ಕೆ ದೊಡ್ಡ ಮಟ್ಟದ ಹಿನ್ನಡೆಯಾಯಿತು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಹೇಳಿದರು.
ಖಾಮ್ಗಾಂವ್ನಲ್ಲಿರುವ ಶ್ರೀ ಸದ್ಗುರು ಧಾರ್ಮಿಕ ಮತ್ತು ಪಾರಮಾರ್ಥಿಕ ಟ್ರಸ್ಟ್ನ ಪಾರಧಿ-ಆದಿವಾಸಿ ಆಶ್ರಮಶಾಲೆಯಲ್ಲಿ ಪುಣೆಯ ‘ಅಮನೋರಾ ಯೆಸ್ ಫೌಂಡೇಶನ್’ ವತಿಯಿಂದ ನಿರ್ಮಿಸಲಾಗಿರುವ ಮೂರು ಅತ್ಯಾಧುನಿಕ ಕ್ರೀಡಾ ಸಂಕೀರ್ಣಗಳು ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಶುಕ್ರವಾರ (ಆಗಸ್ಟ್ 8) ಸರಸಂಘಚಾಲಕ ಮೋಹನ್ ಭಾಗವತ್ ಅವರು ಉದ್ಘಾಟಿಸಿ ಮಾತನಾಡಿದರು.
ಶ್ರೀ ಸದ್ಗುರು ಧಾರ್ಮಿಕ ಮತ್ತು ಪಾರಮಾರ್ಥಿಕ ಟ್ರಸ್ಟ್ ಹಾಗೂ ಅಮನೋರಾ ಯೆಸ್ ಫೌಂಡೇಶನ್ನ ಈ ಜಂಟಿ ಉಪಕ್ರಮದಿಂದ ಪಾರಧಿ ಮಕ್ಕಳಿಗಾಗಿ ಅತ್ಯಾಧುನಿಕ ಶಾಲೆಯನ್ನು ನಡೆಸಲಾಗುತ್ತಿರುವುದು ಅತ್ಯಂತ ಸಂತಸದ ವಿಷಯವಾಗಿದೆ. ದೇಶವನ್ನು ನಿಜವಾದ ಅರ್ಥದಲ್ಲಿ ‘ವಿಶ್ವಗುರು’ವನ್ನಾಗಿ ಮಾಡಬೇಕಾದರೆ, ಸಮಾಜದ ಉಪೇಕ್ಷಿತ ಹಾಗೂ ವಂಚಿತ ವರ್ಗಗಳನ್ನು ಮುಖ್ಯವಾಹಿನಿಗೆ ತರುವುದು ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ:
ಕಾರ್ಯಕ್ರಮದ ಆರಂಭದಲ್ಲಿ ಸರಸಂಘಚಾಲಕರು ಅಮನೋರಾ ಯೆಸ್ ಫೌಂಡೇಶನ್ ಸಹಯೋಗದೊಂದಿಗೆ ಆಶ್ರಮಶಾಲೆಯಲ್ಲಿ ಕೈಗೊಳ್ಳಲಾದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದರು. ಶಾಲೆಯ ಅತ್ಯಾಧುನಿಕ ಕ್ರೀಡಾಂಗಣಗಳು, ವಿದ್ಯಾರ್ಥಿಗಳ ಅಡುಗೆ ಮನೆ (ಭೋಜನಶಾಲೆ), ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ತರಕಾರಿ ತೋಟ (ಪರಸಬಾಗ್) ಹಾಗೂ ವಸತಿ ನಿಲಯಗಳನ್ನು ಅವರು ವೀಕ್ಷಿಸಿ ಪರಿಶೀಲಿಸಿದರು.
ಒಂದಾನೊಂದು ಕಾಲದಲ್ಲಿ ಭಾರತೀಯ ಸಮಾಜವು ಸಂಪೂರ್ಣವಾಗಿ ಸಂಘಟಿತವಾಗಿತ್ತು. ವಿದೇಶಿ ಆಕ್ರಮಣಗಳಿಂದಾಗಿ ದೇಶವು ಗುಲಾಮಗಿರಿಯತ್ತ ಸಾಗಿ, ಕಾಲಕ್ರಮೇಣ ಸಮಾಜವು ವಿಘಟನೆಯಾಯಿತು. ಇದರಿಂದಾಗಿ ಸಮಾಜದಲ್ಲಿ ಉಪೇಕ್ಷಿತ ವರ್ಗಗಳ ಸಂಖ್ಯೆ ಹೆಚ್ಚಾಯಿತು. ಹೀಗಿದ್ದರೂ, ಈ ಉಪೇಕ್ಷಿತ ವರ್ಗದವರು ಎಂದಿಗೂ ಪರಕೀಯರ ದಾಸ್ಯವನ್ನು ಒಪ್ಪಿಕೊಳ್ಳಲಿಲ್ಲ. ಅವರು ಸ್ವಾತಂತ್ರ್ಯಕ್ಕಾಗಿ ನಿರಂತರವಾಗಿ ಹೋರಾಡಿದರು. ಪಾರಧಿ ಸಮುದಾಯದ ಪ್ರಗತಿಗಾಗಿ ಆರೆಸ್ಸೆಸ್ ಹಲವು ವರ್ಷಗಳಿಂದ ಶ್ರಮಿಸುತ್ತಿದೆ. ಈ ಶಾಲೆಗೆ ನೂತನ ರೂಪ ನೀಡಿ ಇಲ್ಲಿನ ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಅಮನೋರಾ ಯೆಸ್ ಫೌಂಡೇಶನ್ನ ಕಾರ್ಯ ಶ್ಲಾಘನೀಯ ಎಂದು ಡಾ. ಭಾಗವತ್ ಶ್ಲಾಘಿಸಿದರು.
ಪ್ರಮುಖ ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯದ ಬುಡಕಟ್ಟು ಅಭಿವೃದ್ಧಿ ಸಚಿವ ಡಾ. ಅಶೋಕ್ ಉಯಿಕೆ, ಕಾರ್ಮಿಕ ಸಚಿವ ಆಕಾಶ್ ಫುಂಡ್ಕರ್, ಇಂದೋರ್ನ ಶ್ರೀ ಸದ್ಗುರು ಧಾರ್ಮಿಕ ಮತ್ತು ಪಾರಮಾರ್ಥಿಕ ಟ್ರಸ್ಟ್ನ ಟ್ರಸ್ಟಿ ಡಾ. ಆಯುಷಿ ದೇಶಮುಖ್ ಹಾಗೂ ಸಿಟಿ ಕಾರ್ಪೊರೇಷನ್ನ ವ್ಯವಸ್ಥಾಪಕ ನಿರ್ದೇಶಕ ಅನಿರುದ್ಧ ದೇಶಪಾಂಡೆ ಉಪಸ್ಥಿತರಿದ್ದರು.
ಪ್ರಸ್ತಾವಿಕವಾಗಿ ಮಾತನಾಡಿದ ಸಿಟಿ ಕಾರ್ಪೊರೇಷನ್ನ ವ್ಯವಸ್ಥಾಪಕ ನಿರ್ದೇಶಕ ಅನಿರುದ್ಧ ದೇಶಪಾಂಡೆ, ಡಾ. ಮೋಹನ್ ಭಾಗವತ್ ಅವರ ಮಾರ್ಗದರ್ಶನದಂತೆ ಅಮನೋರಾ ಯೆಸ್ ಫೌಂಡೇಶನ್ ಈ ಶಾಲೆಯ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿತು. ಇಂದು ಪಾರಧಿ-ಆದಿವಾಸಿ ಸಮುದಾಯದ ಮಕ್ಕಳು ಪ್ರಗತಿ ಮತ್ತು ಸ್ವಾವಲಂಬನೆಯತ್ತ ಉನ್ನತ ಪ್ರಯತ್ನಗಳನ್ನು ನಡೆಸುತ್ತಿರುವುದು ನಮಗೆ ಅತ್ಯಂತ ಕೃತಜ್ಞತೆಯ ಕ್ಷಣವಾಗಿದೆ ಎಂದರು.
ಆದಿವಾಸಿ ಅಭಿವೃದ್ಧಿ ಸಚಿವ ಡಾ. ಅಶೋಕ್ ಉಯಿಕೆ ಮಾತನಾಡಿ, ಪಾರಧಿ ಮತ್ತು ಆದಿವಾಸಿ ಸಮಾಜದ ಏಳಿಗೆಗಾಗಿ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದ್ದು, ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದರು. ಕಾರ್ಮಿಕ ಸಚಿವ ಆಕಾಶ್ ಫುಂಡ್ಕರ್ ಮಾತನಾಡಿ, ಈ ಆಶ್ರಮ ಶಾಲೆಯು ಖಾಮ್ಗಾಂವ್ನ ಹೆಮ್ಮೆಯಾಗಿದ್ದು, ವಂಚಿತ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಇಲ್ಲಿ ನಡೆಯುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಚೆಕ್ ವಿತರಣೆ ಮತ್ತು ಸನ್ಮಾನ:
ಈ ಸಂದರ್ಭದಲ್ಲಿ ಡಾ. ಮೋಹನ್ ಭಾಗವತ್ ಅವರು 16 ಪಾರಧಿ-ಆದಿವಾಸಿ ಹೆಣ್ಣುಮಕ್ಕಳಿಗೆ ತಲಾ 10,000 ರೂಪಾಯಿಗಳ ಚೆಕ್ ವಿತರಿಸಿದರು. ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಆಶ್ರಮಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ವಿವೇಕ್ ಕುಲಕರ್ಣಿ ನೆರವೇರಿಸಿದರೆ, ಆಶ್ರಮ ಶಾಲೆಯ ಪ್ರಾಚಾರ್ಯ ರಾಥೋಡ್ ಧನ್ಯವಾದ ಅರ್ಪಿಸಿದರು.
