ಅಂಕಣ – ಕೃಷಿಯಿಂದ ಬದುಕು
- ಸುಧಾ ಸಂದೀಪ್, ಎಂ.ಎಸ್ಸಿ. ಕೃಷಿ, ಹುಣಸೂರು
ನಮ್ಮಲ್ಲಿ ಹಲವರು ಹತ್ತಾರು ಎಕರೆ ನೀರಾವರಿ ಜಮೀನು ಇದ್ದರೂ ಏಕ ಬೆಳೆ ಪದ್ಧತಿ ಅನುಸರಿಸಿ ಒಂದೇ ಬೆಳೆ ಬೆಳೆಯುತ್ತಾರೆ. ಅನೇಕ ಸಲ ಮನೆಗೆ ಬೇಕಾದ ಒಂದು ಕರಿಬೇವಿನ ಸೊಪ್ಪನ್ನೂ ಮಾರುಕಟ್ಟೆಗೆ ಹೋಗಿ ತರುವ ಸಂದರ್ಭ ಬರುತ್ತದೆ. ಇದೆಲ್ಲದರ ಮಧ್ಯೆ ಹಾವೇರಿ ಜಿಲ್ಲೆಯ ಶಿಗ್ಗಾವಿ ಸಮೀಪದ ಮುಗಳಿ ಗ್ರಾಮದ ನಾಗರಾಜು ಶಿವಾನಂದ್ ಹುಲಗೂರು ಅವರು ಬೋರ್ವೆಲ್ ಅಥವಾ ಯಾವುದೇ ನೀರಾವರಿ ವ್ಯವಸ್ಥೆ ಇಲ್ಲದೇ ಅದ್ಭುತವಾದ ತೋಟ ಕಟ್ಟಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. 1.10 ಎಕರೆಯಲ್ಲಿ ನೂರಾರು ಬಗೆಯ ಬೆಳೆ ಬೆಳೆಯುವುದರೊಂದಿಗೆ ಮನೆಯ ಹಿಂದಿರುವ ಎರಡು ಗುಂಟೆ ಹಿತ್ತಲಿನಲ್ಲಿ ಲೆಕ್ಕವಿಲ್ಲದಷ್ಟು ಪ್ರಭೇದಗಳನ್ನು ಸಂರಕ್ಷಿಸಿ ಹಲವು ಬಿರುದು, ಸನ್ಮಾನಗಳಿಗೆ ಪಾತ್ರರಾಗಿದ್ದಾರೆ.
ಮೂಲತಃ ಕೃಷಿ ಕುಟುಂಬದಲ್ಲಿ ಜನಿಸಿದ ನಾಗರಾಜು ಅವರು ಬಾಲ್ಯದಲ್ಲಿ ಸಾಕಷ್ಟು ಕಷ್ಟವಿದ್ದ ಕಾರಣ ದ್ವಿತೀಯ ಪಿಯುಸಿಗೆ ಓದುವುದನ್ನು ಸ್ಥಗಿತಗೊಳಿಸಿ ಬೆಂಗಳೂರಿನಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದರು. ಮೊದಲಿಂದಲೂ ಕೃಷಿಯ ಕಡೆ ಒಲವಿದ್ದ ಕಾರಣ 2009ರಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ಸೇರಿ ಹಳ್ಳಿ ಹಳ್ಳಿಗಳಲ್ಲಿ ಸಾವಯವ ಕೃಷಿ, ಪರಿಸರ ಸಂರಕ್ಷಣೆ ಕುರಿತು ಸಾಕಷ್ಟು ಕೆಲಸ ಮಾಡಲಾರಂಭಿಸಿದರು. 2012ರಲ್ಲಿ ಆ ಕೆಲಸ ಬಿಟ್ಟು ದೇಶಪಾಂಡೆ ಫೌಂಡೇಶನ್ ನಡೆಸುವ 4 ತಿಂಗಳ ಸಾವಯವ ಕೃಷಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡರು. ಶಿಬಿರದಲ್ಲಿ ಸಾವಯವ ಕೃಷಿ ಏಕೆ ಮಾಡಬೇಕು? ರಾಸಾಯನಿಕ ಕೃಷಿಯ ದುಷ್ಪರಿಣಾಮಗಳೇನು, ತೋಟ ಹೇಗೆ ಕಟ್ಟಬೇಕು? ಹೀಗೆ ಹತ್ತು ಹಲವು ವಿಷಯಗಳ ಕುರಿತು ಮಾಹಿತಿ ದೊರೆಯಿತು. ಶಿಬಿರದ ನಂತರ ಬೈಫ್ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಸಿರಿ ಸಮೃದ್ಧಿ ಯೋಜನೆಯಲ್ಲಿ ಕಾರ್ಯನಿರ್ವಹಿಸಿದ್ದರು. ಒಂದು ದಿನ ರೈತರಿಗೆ ಉಚಿತವಾಗಿ ಹಣ್ಣಿನ ಗಿಡ ಹಂಚುವ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಅಲ್ಲಿ ಇತರ ರೈತರಿಗೆ ಹಣ್ಣಿನ ಗಿಡ ನೀಡುವಾಗ ತಮ್ಮ ಹೊಲದಲ್ಲೂ ಏಕೆ ನೆಡಬಾರದು ಎಂದು ಮೇಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಸುಮಾರು 50 ಮಾವಿನ ಸಸಿಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟರು. ಇದೇ ಸಮಯದಲ್ಲಿ ಸಾವಯವ ಕೃಷಿ ಭಾಗ್ಯ ಯೋಜನೆಯನ್ನು ಮುಗಳಿ ಗ್ರಾಮದಲ್ಲಿ ಅನುಷ್ಠಾನ ಮಾಡಲು ಸರ್ಕಾರ ನಿರ್ಧರಿಸಿತ್ತು. ನಾಗರಾಜು ಅವರನ್ನೇ ಯೋಜನೆಯ ಸಂಪನ್ಮೂಲ ವ್ಯಕ್ತಿಯಾಗಿ ಆಯ್ಕೆ ಮಾಡಿದರು. ಇದರಿಂದ ಹಲವು ಪ್ರಗತಿಪರ ಸಾವಯವ ಕೃಷಿಕರ ತೋಟ ನೋಡುವ, ಹೊಸ ವಿಚಾರ ಕಲಿಯುವ ಅವಕಾಶವಾಯಿತು. ಸಾಕಷ್ಟು ಅನುಭವವಿದ್ದ ನಾಗರಾಜು ಅವರು ತಂದೆಯ ಜೊತೆ ಚರ್ಚಿಸಿ ಕೆಲಸ ಬಿಟ್ಟು ಪೂರ್ಣ ಪ್ರಮಾಣದ ಸಾವಯವ ಕೃಷಿಕರಾದರು.
ನೀರಾವರಿ ಇಲ್ಲದೆ ಸಾವಯವ ತೋಟ ನಿರ್ಮಾಣ
1.10 ಎಕರೆಯಲ್ಲಿ ಇಂದು ಕೃಷಿ ಬ್ರಹ್ಮಾಂಡವೇ ಇದೆ. ಆದರೆ ಪ್ರಾರಂಭದ ದಿನಗಳು ಮುಳ್ಳಿನ ಹಾಸಿಗೆಯ ಮೇಲಿನ ನಡಿಗೆಯಾಗಿತ್ತು. ಮಾವಿನ ಗಿಡ ನೆಟ್ಟಾದ ಮೇಲೆ ಬೇಸಿಗೆಯಲ್ಲಿ ಹೇಗೆ ನೀರು ಪೂರೈಸುವುದು ಎನ್ನುವುದೇ ಚಿಂತೆ. ಊರಿಂದ ಸೈಕಲ್ ಮೇಲೆ ಬಿಂದಿಗೆಯಲ್ಲಿ ನೀರು ಹೊತ್ತು, ಗಿಡಗಳ ಬುಡಗಳಲ್ಲಿ ಪ್ಲಾಸ್ಟಿಕ್ ಬಾಟಲನ್ನು ಇಟ್ಟು, ಆ ಬಾಟಲ್ ತುಂಬಿಸಿ ಒಂದು ಸಣ್ಣ ರಂಧ್ರ ಮಾಡಿ ಮಂದಗತಿಯಲ್ಲಿ ನೀರು ಹೊರ ಹೋಗುವಂತೆ ಮಾಡಿದರು. ಅಂತೂ ಎಲ್ಲಾ ಗಿಡಗಳು ಬದುಕುಳಿದವು.
ಹಸು ಇಲ್ಲದೆ ಸಾವಯವ ಕೃಷಿ
ಈ ಹಿಂದೆ ಪಡೆದ ಸಾವಯವ ಕೃಷಿ ಜ್ಞಾನ ಸ್ವಂತ ಜಮೀನಿನ ವ್ಯವಸಾಯಕ್ಕೆ ಉಪಯೋಗವಾಗುತ್ತದೆ. ಪೂರ್ಣಪ್ರಮಾಣದ ಕೃಷಿ ಪ್ರಾರಂಭಿಸಿದಾಗ ಇವರ ಬಳಿ ನಾಟಿ ಹಸು ಇರಲಿಲ್ಲ. ಹಾಗೆಂದು ಖರೀದಿಸುವ ಚೈತನ್ಯವೂ ಇರಲಿಲ್ಲ. ಇದಕ್ಕೆ ಪರಿಹಾರವಾಗಿ ರಸ್ತೆಯಲ್ಲಿ ಬಿದ್ದ ಸಗಣಿಯನ್ನು ನಿತ್ಯ ಮಂಕರಿಯಲ್ಲಿ ಹೊತ್ತು ತಂದು, ತೋಟದಲ್ಲಿ ಒಂದು ಕಡೆ ಹಾಕಿ ಎರೆಹುಳು ಗೊಬ್ಬರ ತಯಾರಿಕೆಯಲ್ಲಿ ಬಳಸುವುದು ಪ್ರಾರಂಭವಾಯಿತು. ಗಂಜಲವನ್ನು ಪರಿಚಯಸ್ಥ ರೈತರ ಬಳಿ ತಂದು ಜೀವಾಮೃತ ಸಿದ್ಧಪಡಿಸಲಾಯಿತು. ಕಳೆಗಳಿಂದ ಸಸ್ಯಾಮೃತ ತಯಾರಿ, ಕೀಟ ನಿವಾರಣೆಗೆ ದಶಪರ್ಣಿ, ಎರೆಹುಳು ಗೊಬ್ಬರ ಮತ್ತು ಎರೆಜಲ ಇತ್ಯಾದಿ ಜೈವಿಕ ಗೊಬ್ಬರಗಳ ಬಳಕೆ ಪ್ರಾರಂಭವಾಯಿತು. ಸುಮಾರು ಎರಡು ವರ್ಷಗಳ ನಂತರ ನಾಗರಾಜು ಅವರು ಸ್ವಂತವಾಗಿ ಜವಾರಿ ಹಸು ಖರೀದಿಸಿ ಅದರ ಸಗಣಿ ಗಂಜಲ ಬಳಕೆಯನ್ನು ಪ್ರಾರಂಭಿಸಿದರು.
ಮಿಶ್ರ ಬೇಸಾಯ ಮತ್ತು ಅರಣ್ಯ ಕೃಷಿ
ಮಾವಿನ ಮರಗಳ ಮಧ್ಯೆ ಗೇರು, ಕರಿಬೇವು, ದೇಶ ವಿದೇಶದ ಹಣ್ಣಿನ ಗಿಡಗಳನ್ನು ನೆಡಲಾಯಿತು. ಎರಡು ಮಾವಿನ ಮರದ ಸಾಲಿನ ಮಧ್ಯೆ ಇರುವ ಜಾಗದಲ್ಲಿ ಮನೆಗೆ ಬೇಕಾದ ಸೊಪ್ಪು, ತರಕಾರಿ, ಶೇಂಗಾ, ಹೆಸರು, ಅಲಸಂದೆ, ಚೆಂಡು ಹೂವು, ಹಸುಗಳಿಗೆ ಮೇವು ಹೀಗೆ ವಿವಿಧ ರೀತಿಯ ಬೆಳೆಗಳನ್ನು ಸಂಯೋಜಿಸುವುದರೊಂದಿಗೆ ಬೇಲಿಯ ಸುತ್ತ ಸುಮಾರು 400 ಅರಣ್ಯ ಪ್ರಭೇದದ ಸಸಿಗಳನ್ನೂ ನೆಡಲಾಯಿತು.
ಸಹಜ ಸಮೃದ್ಧ ಸಂಸ್ಥೆಯ ಸಹಕಾರದಿಂದ ‘ದೇಸಿ ಬೀಜ ಬ್ಯಾಂಕ್’ ಸ್ಥಾಪನೆ
ಸಾವಯವ ಕೃಷಿಗೆ ಹೈಬ್ರಿಡ್ ಬೀಜ ಬಳಸಿದರೆ ಇಳುವರಿ ಬರುವುದಿಲ್ಲ ಎಂದು ತಿಳಿದು ದೇಸಿ ತಳಿಗಳ ಹುಡುಕಾಟದಲ್ಲಿದ್ದಾಗ ಸಹಜ ಸಮೃದ್ಧ ಸಂಸ್ಥೆಯ ಪರಿಚಯವಾಯಿತು. ಇದರಿಂದ ಹಲವಾರು ನಾಟಿಸೊಪ್ಪು- ತರಕಾರಿ ಪ್ರಭೇದಗಳು, ಸಿರಿಧಾನ್ಯಗಳ ಕುರಿತು ತಿಳಿಯಿತು. ಸಂಸ್ಥೆಯ ವತಿಯಿಂದ ನಡೆಯುವ ಬೀಜೋತ್ಪಾದನೆ ಶಿಬಿರದಲ್ಲಿ ಭಾಗವಹಿಸಿ ದೇಸಿಬೀಜಗಳ ಸಂರಕ್ಷಣೆ ಮತ್ತು ಅಭಿವೃದ್ದಿ ಕಾರ್ಯದಲ್ಲಿ ನಾಗರಾಜು ತೊಡಗಿಕೊಂಡರು. ಸಹಜ ಸಮೃದ್ದದ ಪ್ರಮುಖರಾದ ಕೃಷ್ಣ ಪ್ರಸಾದ್ ಅವರು ನೀಡಿದ ಕೆಲವೇ ಕೆಲವು ಅಪರೂಪದ ಬೀಜಗಳನ್ನು ಜತನದಿಂದ ಕಾಪಾಡಿಕೊಂಡು ಅಭಿವೃದ್ಧಿಪಡಿಸಿ ಶ್ರೇಷ್ಠ ಬೀಜ ಸಂರಕ್ಷಕ ಪ್ರಶಸ್ತಿಯನ್ನೂ ಪಡೆದರು. ಸದ್ಯ ನಾಗರಾಜು ಅವರ ಬಳಿ 150ಕ್ಕೂ ಹೆಚ್ಚು ವಿವಿಧ ದೇಸಿ ತಳಿಗಳ ತರಕಾರಿ ಬೀಜ ಲಭ್ಯವಿದೆ. ಇವೆಲ್ಲವನ್ನೂ ಸಾವಯವ ಮೇಳಗಳಲ್ಲಿ ಮಾರಾಟ ಮಾಡುತ್ತಾರೆ.
ಕಳೆ ಬೀಜಗಳ ಸಂಗ್ರಹ
ವಿಪರೀತವಾಗಿ ಕಳೆನಾಶಕ ಬಳಸುತ್ತಿರುವ ಈ ಸಮಯದಲ್ಲಿ ನಾಗರಾಜು ಅವರು ಕಳೆಗಳ ಬೀಜಗಳನ್ನು ಸಂಗ್ರಹ ಮಾಡಿ ಮಾರಾಟ ಮಾಡುತ್ತಿದ್ದಾರೆ. ಹೊಲಬೇಲಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮುಟ್ಟಿದರೆ ಮುನಿ, ಅಗ್ನಿ ಬಳ್ಳಿ, ಶಂಖಪುಷ್ಪ, ಕಾಡುಸೋರೆ, ಗುಲಗಂಜಿ, ಅಣ್ಣೆಸೊಪ್ಪು ಹೀಗೆ ಹಲವಾರು ಕಳೆ ಸಸ್ಯಗಳ ಬೀಜ ಸಂಗ್ರಹಿಸಿ ಆಸಕ್ತರಿಗೆ ನೀಡುತ್ತಾರೆ. ಇವೆಲ್ಲದರಲ್ಲೂ ಔಷಧೀಯ ಗುಣಗಳಿದ್ದು ಆಹಾರದಲ್ಲೂ ಬಳಸಬಹುದಾಗಿದೆ.
ಜೀವನದ ದಿಕ್ಕನ್ನೇ ಬದಲಿಸಿದ ಜೋಯ್ಡಾ ಗೆಡ್ಡೆ ಗೆಣಸು ಮೇಳ
2019ರಲ್ಲಿ ಮೊದಲ ಸಲ ಜೋಯ್ಡಾದ ಗೆಡ್ಡೆ ಗೆಣೆಸು ಮೇಳ ನೋಡುವ ಅವಕಾಶವಾಯಿತು. ಅಲ್ಲಿನ ಕುಣಬಿ ಜನಾಂಗದವರು ಕಾಪಾಡಿಕೊಂಡು ಬಂದಿರುವ ನೂರಾರು ಗೆಡ್ಡೆ ಗೆಣೆಸುಗಳನ್ನು ತಮ್ಮ ತೋಟದಲ್ಲೂ ಬೆಳೆಯಬೇಕೆಂದ ಬಿತ್ತನೆಗೆ ಖರೀದಿಸಿ ತೋಟದಲ್ಲಿ ಬೆಳೆಯುವ ಪ್ರಯೋಗವಾಯಿತು. ಗೆಡ್ಡೆ ಗೆಣಸಿನ ವಿಶೇಷ ಎಂದರೆ ಯಾವುದಕ್ಕೂ ನೀರಾವರಿ ಬೇಡ. ಮೊದಲ ಮಳೆಗೆ ಹುಟ್ಟಿ ಕೊನೆಯ ಮಳೆಗೆ ಕಟಾವಿಗೆ ಸಿದ್ಧವಾಗುತ್ತದೆ. ಹುತ್ತರಿ ಗೆಣಸು, ಬಳ್ಳಿ ಗೆಣಸು, ಕೆಸು, ಸುವರ್ಣ ಗಡ್ಡೆ, ಆರಾರೂಟ್, ಕಪ್ಪು ಅರಿಶಿನ, ಬಿಳಿ ಅರಿಶಿನ, ಮರ ಗೆಣಸು ಮತ್ತು ಪ್ರತಿಯೊಂದರಲ್ಲೂ ಬೇರೆ ಬೇರೆ ತಳಿಗಳನ್ನು ಸಂಗ್ರಹಿಸಲಾಗಿದೆ. ಕೃಷ್ಣ ಪ್ರಸಾದ್ ಅವರು ನೀಡಿದ ನೀಲಿ ಸಿಹಿ ಗೆಣಸಿನ ಒಂದು ಗಡ್ಡೆಯಿಂದ ಸುಮಾರು 200ಕೆಜಿ ಗೆಡ್ಡೆ ಬೆಳೆದು ಮೈಸೂರಿನ ಗೆಡ್ಡೆ ಗೆಣಸು ಮೇಳದಲ್ಲಿ ನಾಗರಾಜು ಪ್ರಶಸ್ತಿ ಪಡೆದರು. ಪ್ರಸ್ತುತ ನೂರಕ್ಕೂ ಹೆಚ್ಚು ಬಗೆಯ ಗೆಡ್ಡೆ ಗೆಣಸಿನ ಸಂಗ್ರಹವಿದ್ದು ವಿಶೇಷವಾಗಿ 10 ಬಣ್ಣಗಳ ಸಿಹಿ ಗೆಣಸು ಎಲ್ಲರನ್ನೂ ಅವರ ತೋಟದತ್ತ ಆಕರ್ಷಿಸಿದೆ.
ಕೃಷಿ ವಿಜ್ಞಾನಿಗಳೂ ನಾಚುವ ರೀತಿ 2 ಗುಂಟೆ ಹಿತ್ತಲಿನಲ್ಲಿ ಕೈತೋಟ
ಜಮೀನಿನಲ್ಲಿರುವ ಬಹುತೇಕ ಎಲ್ಲಾ ಪ್ರಭೇದಗಳು ಕೈ ತೋಟದಲ್ಲೂ ಇದ್ದೂ ಅಪರೂಪದ ಸಸ್ಯಗಳನ್ನು ನರ್ಸರಿ ಮಾಡಿ ಮಾರಾಟ ಮಾಡುತ್ತಾರೆ. ತೋಟ ಮತ್ತು ಕೈ ತೋಟ ನಿರ್ವಹಿಸಲು ತಂದೆ – ತಾಯಿ, ಪತ್ನಿ ಲಕ್ಷೀ ಸಹಕಾರ ನೀಡುತ್ತಾರೆ. ಲಕ್ಷ್ಮೀ ಅವರಿಗೆ ಹಿಂದೆ ಕೃಷಿ ಅನುಭವ ಇಲ್ಲದಿದ್ದರೂ ನಾಗರಾಜು ಅವರ ಪ್ರೇರಣೆಯಿಂದ ಪ್ರತಿಯೊಂದು ಕೆಲಸವನ್ನೂ ಕಲಿತು ಹೆಗಲಿಗೆ ಹೆಗಲು ನೀಡಿ ಕೆಲಸ ಮಾಡುತ್ತಾರೆ. ಅದೇ ರೀತಿ ಹತ್ತು ವರ್ಷದ ಮಗ ಶ್ರೀಯಸ್ ಶಾಲೆ ಬಿಡುವಿನ ಸಮಯದಲ್ಲಿ ತೋಟಕ್ಕೆ ನೀರು ಹಾಕುತ್ತಾನೆ.
ಬೇಸಿಗೆಯಲ್ಲಿ ಮಳೆ ನೀರೇ ಆಧಾರ
ಕೈತೋಟ ಮತ್ತು ತೋಟದಲ್ಲಿ ಮಳೆನೀರು ಕೊಯ್ಲು ಮಾಡಿ ಬೇಸಿಗೆಯಲ್ಲಿ ಅಗತ್ಯವಿರುವ ಗಿಡಗಳಿಗೆ ನೀರು ಪೂರೈಸುತ್ತಾರೆ. ಭೂಮಿಯಲ್ಲಿ ಸಾವಯವ ಅಂಶ ಹೆಚ್ಚಾಗಿ ಮತ್ತು ಎಲ್ಲಾ ಗಿಡಗಳಿಗೂ ತರಗೆಲೆಗಳ ಹೊದಿಕೆ ಇರುವ ಕಾರಣ ನೀರು ಹೆಚ್ಚು ಬೇಡುವುದಿಲ್ಲ.
ಸಾವಯವ ಬಿಟ್ಟು ನೈಸರ್ಗಿಕ ಕೃಷಿಯತ್ತ ಪಯಣ
ದಶಕದಿಂದ ಯಾವುದೇ ರಾಸಾಯನಿಕ ಬಳಸಿಲ್ಲವಾದರೂ ಕೀಟ ನಿವಾರಣೆಗೆ ವಿವಿಧ ಕಷಾಯ ಸಿಂಪಡಿಸುತ್ತಿದ್ದರು ನಾಗರಾಜು. ಆದರೆ 2022ರಿಂದ ಕಾಡಿನ ಪರಿಕಲ್ಪನೆಯಲ್ಲಿ ಕೇವಲ ಬೀಜ ಬಿತ್ತುವುದು, ಕಳೆ ತೆಗೆಯುವುದಷ್ಟನ್ನೇ ಮಾಡುತ್ತಿದ್ದಾರೆ. ಜೀವ ವೈವಿಧ್ಯತೆ ಹೆಚ್ಚಾದಂತೆ ಕೀಟ ನಿರ್ವಹಣೆ, ಪೋಷಕಾಂಶಗಳ ನಿರ್ವಹಣೆ ತನ್ನಿಂದ ತಾನೇ ಆಗುತ್ತಿದೆ. ಬೇವಿನ ಕಷಾಯ ಸಿಂಪಡಿಸಿದರೆ ಮಿತ್ರಕೀಟಕ್ಕೆ ಅಪಾಯವಿಲ್ಲ ಎಂದು ಏನು ಗ್ಯಾರಂಟಿ? ಆಹಾರ ಸರಪಳಿ ಗಮನಿಸಿದರೆ ಪ್ರತಿಯೊಂದು ಕೀಟದ ನಿವಾರಣೆಗೆ ನಿಸರ್ಗ ಯೋಜನೆ ರೂಪಿಸಿದೆ. ನಾವು ಅದಕ್ಕೆ ಸಹಕಾರ ನೀಡಬೇಕಷ್ಟೇ. ಇದೇ ವಿಚಾರವಾಗಿ ಒಂದು ಪುಸ್ತಕವನ್ನೂ ಬರೆಯುತ್ತಿರುವುದಾಗಿ ತಿಳಿಸಿದ ನಾಗರಾಜು ಅವರು ನಮಗೆಲ್ಲಾ ಮಾದರಿಯಾಗಿದ್ದಾರೆ.
ನಿಮಗೂ ದೇಸಿ ಬಿತ್ತನೆ ಬೀಜಗಳು, ಗೆಡ್ಡೆ ಗೆಣಸುಗಳು ಬೇಕಿದ್ದರೆ ಸಂಪರ್ಕಿಸಿ 7619340607.
