ಅಂಕಣ – ಸ್ವಾಸ್ಥ್ಯ ಸಂಪದ
- ಡಾ. ಶ್ರೀವತ್ಸ ಭಾರದ್ವಾಜ, ದತ್ತಂ ಆಯುರ್ಧಾಮ, ಮಂಗಳೂರು
ಇತ್ತೀಚಿನ ದಿನಗಳಲ್ಲಿ ಕ್ಯಾಟರಾಕ್ಟ್ ಸಮಸ್ಯೆಗೆ ಅದೆಷ್ಟೋ ಮಂದಿ ಶಸ್ತ್ರಚಿಕಿತ್ಸೆ ಮಾಡಿಸಿರುವುದನ್ನು ನೋಡಿದ್ದೇವೆ. ಆದರೆ ಈ ಸಮಸ್ಯೆಗೆ ಶಸ್ತ್ರ ಚಿಕಿತ್ಸೆ ಇಲ್ಲದೆ ಪರಿಹಾರವಿದೆಯೇ? ಇದಕ್ಕೆ ಆಡು ಭಾಷೆಯಲ್ಲಿ ಕಣ್ಣುಗಳಲ್ಲಿ ಪೊರೆಕಟ್ಟುವಿಕೆ ಎಂದು ಕರೆಯುತ್ತಾರೆ. ಮೊದಲೆಲ್ಲಾ ವೃದ್ಧಾಪ್ಯದಲ್ಲಿ ಕಾಡುತ್ತಿದ್ದ ಈ ಕಾಯಿಲೆ ಇತ್ತೀಚಿಗೆ ಯುವಜನತೆಯನ್ನೂ ಕಾಡತೊಡಗಿರುವುದು ಶೋಚನೀಯ ಸಂಗತಿಯಾಗಿದೆ. ಈ ರೀತಿ ಪೊರೆ ಏಕೆ ಕಟ್ಟುತ್ತದೆ ಎಂದು ತಿಳಿಯೋಣ ಬನ್ನಿ. ಬಹಳಷ್ಟು ಔಷಧ ಸೇವನೆಯಿಂದ, ನಿದ್ರಾಹೀನತೆ, ರಾತ್ರಿಯ ವೇಳೆ ವಾಹನವನ್ನು ಚಲಾಯಿಸುವುದು, ಅತಿಯಾದ ಟಿ.ವಿ, ಮೊಬೈಲ್ ಮತ್ತು ಕಂಪ್ಯೂಟರ್ ಬಳಕೆ, ಅತಿಯಾದ ಒತ್ತಡ, ಬಿಸಿಲಿನಲ್ಲಿ ಅತಿಯಾಗಿ ವಿಹರಿಸುವುದು, ಪೋಷಕಾಂಶ ರಹಿತವಾದ ಆಹಾರ ಇವುಗಳೆಲ್ಲಾ ಕಣ್ಣಿನ ಪೊರೆಯನ್ನು ಹುಟ್ಟುಹಾಕುತ್ತವೆ. ಈಗ ಹೇಳಿ ನಮ್ಮಲ್ಲಿ ಎಷ್ಟು ಜನರಿಗೆ ಕಣ್ಣಿನ ಪೊರೆ ಬರಬಹುದು? ಮೇಲಿನ ಕಾರಣಗಳನ್ನು ನೋಡಿದರೆ ಎಲ್ಲರಿಗೂ ಪೊರೆ ಕಟ್ಟುವುದು ಖಂಡಿತ ಎಂದರೆ ತಪ್ಪಾಗದು. ನಮ್ಮ ದೇಹದಲ್ಲಿ ಕಣ್ಣುಗಳು ಅತ್ಯಂತ ಸೂಕ್ಷ್ಮವಾದ ಅಂಗ. ಆದರೆ ನಾವು ಅದನ್ನೇ ಅತ್ಯಂತ ನಿರ್ಲಕ್ಷದಿಂದ ನೋಡುತ್ತೇವೆ. ಕಣ್ಣುಗಳ ಆರೈಕೆಯನ್ನು ಕೇವಲ ಸಮಸ್ಯೆ ಬಂದಾಗ ಮಾತ್ರ ಮಾಡಿದರೆ ಸಾಲದು ಅವುಗಳಿಗೆ ದಿನನಿತ್ಯದ ಆರೈಕೆ ಅತ್ಯಗತ್ಯ. ದೇಹದ ಯಾವುದೇ ಅಂಗಕ್ಕೆ ನೋವಾದರೂ ಕಣ್ಣುಗಳಿಗೆ ಪ್ರಭಾವ ಬೀರುತ್ತದೆ. ಹಾಗಾಗಿ ಕಣ್ಣುಗಳು ಉಳಿದ ಅಂಗಗಳಿಗಿಂತ ಹೆಚ್ಚು ನೋವನ್ನು ದಿನನಿತ್ಯ ಅನುಭವಿಸಬೇಕಾಗುತ್ತದೆ.
ನಮ್ಮ ಕಣ್ಣಿನಲ್ಲಿ ಪೊರೆ ಕಟ್ಟಲು ಶುರುವಾಗಿದೆ ಎನ್ನಲು ಈ ಕೆಲವು ಲಕ್ಷಣಗಳಿಂದ ತಿಳಿದು ಬರುತ್ತದೆ.
● ಬೆಳಕನ್ನು ನೋಡಲು ಕಷ್ಟವಾಗುತ್ತದೆ.
● ವಸ್ತುಗಳು ಸ್ಪಷ್ಟವಾಗಿ ಕಾಣುವುದಿಲ್ಲ.
● ಓದಲು ತುಂಬಾ ಕಷ್ಟ ಪಡಬೇಕಾಗುತ್ತದೆ.
● ಕಣ್ಣಿನಲ್ಲಿ ವಸ್ತು ತೇಲಿದ ಅನುಭವ ಮತ್ತು ಕಣ್ಣು ಮಾಯ ಮಾಯ ಎನಿಸುತ್ತದೆ.
● ಕೆಲವೊಮ್ಮೆ ಎರಡು ಎರಡು ಕಂಡಂತೆ ಅನುಭವ.
● ಕನ್ನಡಕ ಹಾಕಿದರೂ ಓದಲು-ನೋಡಲು ಕಷ್ಟ.
ಕಣ್ಣುಗಳಿಗೆ ಪೊರೆ ಕಟ್ಟದಿರಲು ಮತ್ತು ಪೊರೆ ಬಂದರೆ ಅದು ಬೆಳೆಯದಿರಲು ಏನೆಲ್ಲಾ ಉಪಾಯಗಳಿವೆ ಎಂದು ತಿಳಿಯೋಣ ಬನ್ನಿ.
● ಮೊತ್ತ ಮೊದಲಿಗೆ ಆಗಾಗ ಕಣ್ಣುಗಳನ್ನು ತಣ್ಣೀರಿನಲ್ಲಿ ತೊಳೆಯಬೇಕು.
● ಬಿಸಿಲಿಗೆ ಹೋಗುವಾಗ ತಂಪು ಕನ್ನಡಕವನ್ನು ಧರಿಸಿರಿ.
● ಬಿಸಿಲಿನಿಂದ ಮನೆಗೆ ಬಂದ ಕೂಡಲೇ ತಂಪು ಪಾನೀಯ ಸೇವನೆಯನ್ನು ವರ್ಜಿಸಿರಿ.
● ದ್ರವಾಹಾರಗಳ ಸೇವನೆಯನ್ನು ಹೆಚ್ಚಿಸಿರಿ.
● ಕಂಪ್ಯೂಟರ್, ಮೊಬೈಲ್, ದೂರದರ್ಶನ ಇತ್ಯಾದಿಗಳನ್ನು ನೋಡುವಾಗ ಕಣ್ಣುಗಳನ್ನು ಮಿಟಿಕಿಸುತ್ತಾ ಇರುವುದು ಅತ್ಯಗತ್ಯ.
● ಗುಲಾಬಿದಳಗಳಿಂದ ತಯಾರಿಸಿದ ಅರ್ಕದಿಂದ ಕಣ್ಣುಗಳನ್ನು ತೊಳೆಯಲು ಬಳಸಿದರೆ ಪೊರೆ ಬೆಳವಣಿಗೆ ಆಗುವುದಿಲ್ಲ.
● ನುಗ್ಗೆ ಸೊಪ್ಪನ್ನು ಅರೆದು ಕಣ್ಣಿನ ರೆಪ್ಪೆ ಮೇಲೆ ಲೇಪಿಸಿದರೆ ಪ್ರಯೋಜನವಾಗುತ್ತದೆ.
● ಲೋಳೆಸರ, ಗುಲಾಬಿದಳಗಳನ್ನು ನೀರಿನಲ್ಲಿ ಕುದಿಸಿ ತಣ್ಣಗಾದಮೇಲೆ ಕಣ್ಣನ್ನು ತೊಳೆದರೆ ಪೊರೆಯನ್ನು ತಡೆಯಬಹುದು.
● ದಿನನಿತ್ಯ ದಾಸವಾಳ ಹೂವುಗಳಿಂದ ತಯಾರಿಸಿದ ಕಷಾಯವನ್ನು ಕುಡಿದರೆ ಕಣ್ಣಿನ ಲೆನ್ಸ್ ಗಳಿಗೆ ಬಲ ಸಿಗುತ್ತದೆ.
● ದಿನನಿತ್ಯ ಕಣ್ಣುಗಳಿಗೆ ಕಾಡಿಗೆ ಹಚ್ಚುವುದರಿಂದ ಪೊರೆ ಕಟ್ಟುವುದನ್ನು ತಡೆಯಬಹುದು. ಆದರೆ ಕಾಡಿಗೆ ಸಾಂಪ್ರದಾಯಿಕ ಕ್ರಮದಲ್ಲೇ ಮಾಡಿರಬೇಕು.
● ಸೋಂಪು ಕಾಳುಗಳನ್ನು ನೀರಿನಲ್ಲಿ ಕುದಿಸಿ ಕಣ್ಣುಗಳನ್ನು ತೊಳೆದರೆ ಪೊರೆ ಬಾರದಂತೆ ತಡೆಯುತ್ತದೆ.
● ಗರಿಕೆ ಹುಲ್ಲನ್ನು ಕುದಿಸಿ ಕಷಾಯ ಮಾಡಿ ಕಣ್ಣುಗಳನ್ನು ತೊಳೆದರೆ ಪೊರೆಯನ್ನು ನಿಯಂತ್ರಿಸುತ್ತದೆ.
● ಕಂಪ್ಯೂಟರ್ ಎದುರು ಕುಳಿತು ಕೆಲಸ ಮಾಡುವವರು ಮಲಗುವ ಮುನ್ನ ನೆತ್ತಿಗೆ ಐದು ಹನಿ ತುಪ್ಪವನ್ನು ಹಚ್ಚಿ ಮತ್ತು ಕಣ್ಣಿನ ರೆಪ್ಪೆಗಳಿಗೆ ಎರಡು ಹನಿ ತುಪ್ಪ ಸವರಿ ಮಲಗಿದರೆ ಪೊರೆ ಕಟ್ಟದಂತೆ ತಡೆಯಬಹುದು.
