ಸವಾಲುಗಳ ನಡುವೆಯೂ ಸಂಘಟಿತರಾಗಲು ಶ್ರೀ ವಿಶ್ವಪ್ರಸನ್ನ ತೀರ್ಥರ ಕರೆ
ನವದೆಹಲಿ: ಎಷ್ಟೇ ಸವಾಲುಗಳು ಎದುರಾದರೂ ಧರ್ಮ ಹಾಗೂ ಸಮಾಜದ ಹಿತಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಸಂಘಟಿತರಾಗಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕರೆ ನೀಡಿದರು.
ತಮ್ಮ 39ನೇ ಚಾತುರ್ಮಾಸ್ಯ ವ್ರತದ ಅಂಗವಾಗಿ ವಿಶ್ವ ಹಿಂದೂ ಪರಿಷತ್ (ವಿಹಿಂಪ) ಹಾಗೂ ಸೇವಾ ಭಾರತಿಯ ಸಹಯೋಗದೊಂದಿಗೆ ಭಾನುವಾರ ರೋಹಿಣಿ ಕ್ಷೇತ್ರದ ಸೆಕ್ಟರ್ 4 ರಲ್ಲಿರುವ ದಲಿತರ ಬಡಾವಣೆಗೆ ಭೇಟಿ ನೀಡಿ, ಮನೆ-ಮನೆಗೆ ತೆರಳಿ ಸೌಹಾರ್ದ ಸಂಚಾರ ನಡೆಸಿದರು. ಮೂನ್ನೂರಕ್ಕೂ ಅಧಿಕ ವಾಸಿಗಳನ್ನು ಹೊಂದಿರುವ ಈ ಬಡಾವಣೆಗೆ ಶ್ರೀಗಳು ಆಗಮಿಸುತ್ತಿದ್ದಂತೆ, ಸ್ಥಳೀಯರು ರಸ್ತೆಗಳಲ್ಲಿ ರಂಗೋಲಿ ಬಿಡಿಸಿ, ಹೂವಿನ ಮಳೆಗರೆದು ಅತ್ಯಂತ ಭಕ್ತಿಯಿಂದ ಸ್ವಾಗತಿಸಿದರು.
ಮನೆ-ಮನೆ ಭೇಟಿ, ಮಂತ್ರೋಪದೇಶ
ಆರಂಭದಲ್ಲಿ ಶ್ರೀಗಳು ಬಡಾವಣೆಯ ಐದು ಮನೆಗಳಿಗೆ ತೆರಳಿ ಮಠದ ವತಿಯಿಂದ ನೀಡಲಾದ ಶ್ರೀರಾಮ ಹಾಗೂ ಉಡುಪಿ ಕೃಷ್ಣನ ಭಾವಚಿತ್ರಗಳನ್ನು ಸ್ಥಾಪಿಸಿ ದೀಪ ಬೆಳಗಿಸಿದರು. ನಿವಾಸಿಗಳ ಕ್ಷೇಮಸಮಾಚಾರ, ಉದ್ಯೋಗ ಹಾಗೂ ಶಿಕ್ಷಣದ ಕುರಿತು ವಿಚಾರಿಸಿದ ಶ್ರೀಗಳು, ಎಲ್ಲರಿಗೂ ಶ್ರೀರಾಮ ತಾರಕ ಮಂತ್ರದ ಉಪದೇಶ ನೀಡಿದರು. ಮನೆಮಂದಿ ನಿತ್ಯವೂ ರಾಮ-ಕೃಷ್ಣರ ಜಪ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಶ್ರೀರಾಮರಾಜ್ಯದ ಕಲ್ಪನೆ
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, “ಸನಾತನ ಧರ್ಮಕ್ಕೆ ಆಂತರಿಕ ಹಾಗೂ ಬಹಿರಂಗವಾಗಿ ಅನೇಕ ಸವಾಲುಗಳು ಎದುರಾಗುತ್ತಿವೆ. ಆದರೆ ನಮ್ಮ ಒಗ್ಗಟ್ಟನ್ನು ಎಂದಿಗೂ ಬಿಡಬಾರದು. ಮನೆ, ಮನಸ್ಸು, ಬುದ್ಧಿ ಹಾಗೂ ನಾವು ವಾಸಿಸುವ ಬಡಾವಣೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಸಹ ರಾಮರಾಜ್ಯದ ಕಲ್ಪನೆಯ ಪ್ರಮುಖ ಭಾಗವಾಗಿದೆ. ಮಕ್ಕಳು ಉತ್ತಮ ಶಿಕ್ಷಣ ಪಡೆದು ರಾಷ್ಟ್ರದ ಶ್ರೇಷ್ಠ ನಾಗರಿಕರಾಗಬೇಕು” ಎಂದರು.
ವೇದಿಕೆಯಲ್ಲಿದ್ದ ಸ್ಥಳೀಯ ಶಾಸಕ ಕುಲವಂತ ರಾಣಾ ಅವರಲ್ಲಿ, ಬಡಾವಣೆಯ ಸ್ವಚ್ಛತೆ, ಮೂಲಭೂತ ಸೌಕರ್ಯಗಳ ನವೀಕರಣ ಹಾಗೂ ಹಳೆಯ ಮನೆಗಳನ್ನು ಕಾರ್ಪೊರೇಟ್ ಕಂಪನಿಗಳ (CSR) ನೆರವು ಪಡೆದಾದರೂ ದುರಸ್ತಿ ಮಾಡಿಕೊಡುವಂತೆ ಶ್ರೀಗಳು ಸೂಚಿಸಿದರು. ಇದೇ ವೇಳೆ ಮಠದ ವತಿಯಿಂದ ಪ್ರಸಾದ ಹಾಗೂ ಭಾವಚಿತ್ರಗಳ ಕಿಟ್ಗಳನ್ನು ವಿತರಿಸಲಾಯಿತು. ಈ ಸಂಚಾರ ಅಭಿಯಾನವು ಮುಂಬರುವ ಮೂರು ಭಾನುವಾರಗಳ ಕಾಲ ಮುಂದುವರಿಯಲಿದೆ.
ಸಮಾಜಕ್ಕೆ ಸರಿಯಾದ ದಿಕ್ಸೂಚಿ: ಜಸ್ಟಿಸ್ ದೇವದಾಸ್
“ಶ್ರೀಗಳಂತಹ ಧಾರ್ಮಿಕ ಮುಖ್ಯಸ್ಥರು ಇಂತಹ ದಿಟ್ಟ ಹೆಜ್ಜೆ ಇಟ್ಟಿರುವುದು ಅತ್ಯಂತ ಸಂತೋಷದ ವಿಷಯ. ಇದು ನಮ್ಮ ಇಡೀ ಸಮಾಜಕ್ಕೆ ಸರಿಯಾದ ದಿಕ್ಸೂಚಿಯಾಗಿದೆ.”
– ಜಸ್ಟಿಸ್ ದೇವದಾಸ್, ನ್ಯಾಯಮೂರ್ತಿಗಳು, ಕರ್ನಾಟಕ ಹೈಕೋರ್ಟ್
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
