- ನಾ. ಕಾರಂತ ಪೆರಾಜೆ, ಲೇಖಕ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ಜೀವನ ಸರಳತೆಯ ಪಾಠ’ವು ದೇಶಾದ್ಯಂತ ಮತಿಗೆ, ಮಾತಿಗೆ ತೆರೆದುಕೊಂಡಿದೆ. ಇಂತಹ ಪಾಠ ಯಾ ಸೂತ್ರಗಳನ್ನು ಮನೆಯ ಹಿರಿಯರು ಕಿರಿಯರಿಗೆ ಬೋಧಿಸುತ್ತಿದ್ದರು. ಈಗ ದೇಶದ ಪ್ರಧಾನಿಯೆನ್ನುವ ‘ಹಿರಿಯ’ ತನ್ನ ದೇಶವಾಸಿಗಳಿಗೆ ಮಾಡಿದ ಪಾಠದ ನಮೂನೆಯು ಬದುಕಿನ ದಿಕ್ಕನ್ನು ಅಲ್ಲ, ದೇಶದ ಆರ್ಥಿಕತೆಯ ದಿಕ್ಕನ್ನು ಬದಲಾಯಿಸುವಷ್ಟು ಸಬಲತೆ ಹೊಂದಿದೆ.
ಪಾಠದ ತಲೆಬರೆಹಗಳತ್ತ ಕತ್ತು ತಿರುಗಿಸೋಣ. “ಪ್ರವಾಸಗಳಿಗೆ ಕಡಿವಾಣವಿರಲಿ, ಅವಶ್ಯಕತೆಯಿಲ್ಲದೆ ವಾಹನವನ್ನು ಚಲಾಯಿಸಬೇಡಿ, ವರ್ಕ್ ಫ್ರಂ ಹೋಮ್ ಮಾಡಿ, ವರ್ಚ್ಯುವಲ್ ಮೀಟಿಂಗ್ ಮಾಡಿ, ಚಿನ್ನವನ್ನು ಖರೀದಿಸಬೇಡಿ, ಅಡುಗೆ ಎಣ್ಣೆಯನ್ನು ಮಿತವಾಗಿ ಬಳಸಿ, ಸಹಜ ಕೃಷಿಯನ್ನು ಅಳವಡಿಸಿಕೊಳ್ಳಿ, ಸ್ವದೇಶಿ ವಸ್ತುಗಳನ್ನು ಬಳಸಿ, ವಿದೇಶ ಪ್ರವಾಸ ಮುಂದೂಡಿ… ಇತ್ಯಾದಿ ಇತ್ಯಾದಿ. ನಮ್ಮ ಹಿರಿಯರಲ್ಲಿ ಯೋಚನೆಗಳು ಏನಿದ್ದವೋ, ಅದರ ಪರಿಷ್ಕೃತ ರೂಪವಾಗಿ ಇವೆಲ್ಲಾ ಕಣ್ಣಿಗೆ ಕಟ್ಟುತ್ತದೆ. ಇದರಲ್ಲಿ ಬದುಕಿನ ಭವಿಷ್ಯ ಅಡಗಿದೆ. ಪ್ರಧಾನಿಯವರ ಪಾಠದಲ್ಲಿ ರಾಷ್ಟ್ರೀಯ ಅಭಿವೃದ್ಧಿಯ ನೋಟವಿದೆ. ಹೈದರಾಬಾದಿನಲ್ಲಿ ಮೋದಿಯವರ ಭಾಷಣದಲ್ಲಿ ಹೊಕ್ಕ ವಿಚಾರಗಳ ಕುರಿತಂತೆ ಎಷ್ಟೊಂದು ರಾಜಕೀಯ ಕೊಳಕುಗಳ ಸೇಚನ! ಒಂದು ಪತ್ರಿಕೆಯಂತೂ ಬರೆಯಿತು, ‘ಕಳವಳ ಮೂಡಿಸಿದ ಪ್ರಧಾನಿ’! ಇಲ್ಲಿ ಕಳವಳ ಏನಿದೆ? ಮತ್ತೊಂದು ಕಡೆ, ‘ಇದು ಸರ್ಕಾರದ ವೈಫಲ್ಯ’! ಈ ಚಿಂತನೆಯಲ್ಲಿ ವೈಫಲ್ಯದ ಮಾತೆಲ್ಲಿ ಬಂತು? ಕೇಂದ್ರ ಸರ್ಕಾರ ಹೇಳಿದ, ಮಾಡಿದ ಎಲ್ಲವನ್ನೂ ವಿರೋಧಿಸುವ ಅಪಸವ್ಯ ಮನಸ್ಸುಗಳು ದೇಶದ ಸುವ್ಯವಸ್ಥೆಯನ್ನು ಕದಡಿಸಲು ಹೊಂಚುಹಾಕುತ್ತಿವೆ.
ಈ ವಿಚಾರಗಳನ್ನು ವೈಜ್ಞಾನಿಕ ತಳಹದಿಯಲ್ಲಿ, ದಾಖಲೆಗಳ ಆಧಾರದಲ್ಲಿ, ಸೋದಾಹರಣೆಗಳ ಉಲ್ಲೇಖದಲ್ಲಿ ವಿಶ್ಲೇಷಿಸುತ್ತಿಲ್ಲ. ಅದೆಲ್ಲಾ ಗೂಗಲ್ ಯೂನಿವರ್ಸಿಟಿಯಲ್ಲಿ ಯಥೇಷ್ಟ ಲಭ್ಯ. ಸಾಮಾನ್ಯ ನಾಗರಿಕನಾಗಿ ಹೇಗೆ ಅರ್ಥಮಾಡಿಕೊಳ್ಳಬಹುದು ಎನ್ನುವ ಚಿತ್ರಣ ಇಲ್ಲಿದೆ. ಮೋದಿಯವರ ಮಾತನ್ನು ಕೇವಲ ಶಬ್ದಾರ್ಥಗಳ ಚಷ್ಮಾದಲ್ಲಿ ಪೋಸ್ಟ್ ಮಾರ್ಟಂ ಮಾಡಕೂಡದು. ಹಾಗೆ ಮಾಡಿದರೆ ಯೋಚನೆ ಮಂಕಾಗುತ್ತದೆ.
ಪ್ರವಾಸ ಪ್ರಯಾಸವಾಗದಿರಲಿ
ಬಹುತೇಕರಿಗೆ ದೂರದೂರಿಗೆ ಪ್ರವಾಸ ಹೋಗುವುದು ಹವ್ಯಾಸದ ಒಂದು ಪುಟ. ಮಕ್ಕಳ ರಜಾ ಸಮಯದಲ್ಲಿ ವರುಷಕ್ಕೊಮ್ಮೆಯೋ, ಎರಡು ಬಾರಿಯೋ ಪ್ರವಾಸ ಮಾಡುತ್ತಾರೆ. ಇದು ಹೆತ್ತವರಿಗೂ ಬದುಕಿನ ಜಂಜಾಟವನ್ನು ಮರೆಯಲಿರುವ ಟೂಲ್ಸ್. ಪ್ರವಾಸ ಗೀಳಾದರೆ ಪ್ರಯಾಸವಾಗುತ್ತದೆ. ಇಂದು ಪ್ರತಿಯೊಬ್ಬರಲ್ಲೂ ಕಾಂಚಾಣ ಸದ್ದು ಮಾಡುತ್ತಿದೆ. ಹಾಗಾಗಿ ‘ನಮ್ಮ ಹಣ, ನಮ್ಮ ನಿರ್ಧಾರ’ ಎನ್ನುವ ಅಡ್ಡಮಾತುಗಳು ಬರುತ್ತವೆ. ಪ್ರವಾಸ ಮಾಡುವ ಉದ್ದೇಶ ಏನು? ಹೊಸ ಪ್ರದೇಶಗಳ ಪರಿಚಯ, ತನ್ಮೂಲಕ ಜ್ಞಾನವೃದ್ಧಿ. ಕೆಲವು ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳ ಜ್ಞಾನವೃದ್ಧಿಗೆ ಪ್ರವಾಸಗಳನ್ನು ಹಮ್ಮಿಕೊಳ್ಳುತ್ತವೆ. ಅಧ್ಯಾಪಕರು ಜತೆಗಿದ್ದು ಮಕ್ಕಳಿಗೆ ಹೊಸ ವಿಚಾರಗಳನ್ನು ಬೋಧಿಸಲು ಸಹಕಾರಿ. ಎಷ್ಟು ವಿದ್ಯಾರ್ಥಿಗಳಲ್ಲಿ ಕಲಿಕೆಯ ಮನೋಧರ್ಮವಿದೆ ಎನ್ನುವುದು ಬೇರೆ ಮಾತು. ಸಮಯ ಕಳೆಯುವ ಗಮ್ಮತ್ತಿನ ಪ್ರವಾಸಗಳು ಬರೇ ತಿಂಡಿ, ತೀರ್ಥ, ಮೋಜುಗಳಲ್ಲೇ ಕಳೆದುಹೋಗುತ್ತದೆ. ಇದರಿಂದ ಬ್ಯಾಂಕಿನ ಪಾಸ್ಬುಕ್ ಕ್ಷೀಣವಾಗುತ್ತದೆ! ಯೋಚಿಸಿ: ವಾಹನಕ್ಕೆ ಡೀಸಿಲ್ ಯಾ ಪೆಟ್ರೋಲ್, ಸಮಯ, ಹಣ ಉಳಿತಾಯ. ಆರೋಗ್ಯ ಕೆಟ್ಟರೆ ಆಸ್ಪತ್ರೆ ವಾಸ ಬೇರೆ. ಪ್ರವಾಸ ಬೇಡವೇ ಬೇಡ ಅಂತಲ್ಲ, ಮಿತವಾಗಿರಲಿ. ಸಂತೋಷಕ್ಕಾಗಿ ಮಾಡಿದ ಪ್ರವಾಸವು ವಿಷಾದದಲ್ಲಿ ಕೊನೆಯಾಗದಂತಿರಬೇಕಲ್ಲವೇ?. ಪ್ರವಾಸ, ಮೋಜುಗಳೇ ಬದುಕಾದರೆ ಯಾವ, ಯಾರ ಉಪದೇಶವೂ ಬೇಕಾಗದು.
‘ವಿದೇಶ ಪ್ರವಾಸ’ವು ಹೆಚ್ಚು ಆರ್ಥಿಕ ಶಕ್ತಿಯನ್ನು ಬೇಡುತ್ತದೆ. ಅನ್ಯಾನ್ಯ ಕಾರಣಗಳಿಂದ ವಿದೇಶದಲ್ಲಿ ನೆಲೆಸಿದ ಭಾರತೀಯರಿದ್ದಾರೆ. ಅವರೊಂದಿಗೆ ಕಳೆಯಲು ಭಾರತದಲ್ಲಿದ್ದ ಹೆತ್ತವರು, ಬಂಧುಗಳು ತಿಂಗಳುಗಟ್ಟಲೆ ವಿದೇಶದಲ್ಲಿ ನೆಲೆಸುತ್ತಾರೆ. ವಿದೇಶಕ್ಕೆ ಮದುವೆ ಮಾಡಿಕೊಟ್ಟ ಹೆಣ್ಮಕ್ಕಳು ಗರ್ಭಿಣಿಯರಾದಾಗ ಅಪ್ಪ-ಅಮ್ಮನನ್ನು ಕರೆಸಿಕೊಳ್ಳುತ್ತಾರೆ! ಅಧ್ಯಯನ ದೃಷ್ಟಿಯಿಂದ ಹಲವಾರು ದೇಶಗಳಿಗೆ ಪ್ರವಾಸ ಹೋಗುವವರು ಇದ್ದಾರೆ. ಇಲ್ಲಿ ಉದ್ದೇಶ ಸ್ಪಷ್ಟವಿದೆ. ಒಟ್ಟಾರೆಯಾಗಿ ಮಿತವೆಚ್ಚಕ್ಕಾಗಿ ಮೋದಿಯವರ ಮಾತು ನಮಗೆ ಪಥ್ಯವಾಗಬೇಕು. ಅವರು ವಿದೇಶ ಪ್ರವಾಸ ಮಾಡಬೇಡಿ ಎಂದಿಲ್ಲ. ಮುಂದೂಡಿ ಎಂದಿದ್ದಾರಷ್ಟೇ.
ಮನೆಗೊಂಡು ವಾಹನ ಸಾಕು
‘ಅನಗತ್ಯವಾಗಿ ವಾಹನ ಚಲಾಯಿಸಬೇಡಿ. ಇಲೆಕ್ಟ್ರಾನಿಕ್ ವಾಹನ ಬಳಸಿ’. ಮನೆಯ ಒಬ್ಬೊಬ್ಬ ಸದಸ್ಯನಿಗೆ ದ್ವಿಚಕ್ರ, ಚತುಶ್ಚಕ್ರ ವಾಹನಗಳಿವೆ! ಮದುವೆ ಸಮಾರಂಭಗಳ ಸೀಸನ್ನಲ್ಲಿ ಸಭಾಮಂದಿರದ ಹೊರಗಡೆ ಪಾರ್ಕಿಂಗ್ ಮಾಡಿದ ವಾಹನಗಳ ಅಂದವನ್ನು ನೋಡಿಯೇ ಸವಿಯಬೇಕು. ಲಕ್ಷಗಟ್ಟಲೆ ರೂಪಾಯಿಯ ವೈವಿಧ್ಯಮಯ ಕಾರುಗಳು! ಸಮಾರಂಭಕ್ಕೆ ಕುಟುಂಬ ಸಹಿತವಾಗಿ ಒಂದೇ ವಾಹನದಲ್ಲಿ ಪ್ರಯಾಣಿಸಿದರೆ ಓಕೆ. ಒಂದೊಂದು ವಾಹನದಲ್ಲಿ ಒಬ್ಬೊಬ್ಬ ಪ್ರಯಾಣಿಕ, ಚಾಲಕ! ಸಮಾರಂಭಗಳಿಗೆ ಹೋಗುವಾಗ ಪರಸ್ಪರ ಮಾತನಾಡಿಕೊಂಡು ಗುಂಪಾಗಿ ಪ್ರಯಾಣಿಸಿ. ಇದರಿಂದ ಮಿತವ್ಯಯ ಹಾಗೂ ಇಂಧನ ಉಳಿತಾಯ ಸಾಧ್ಯ. ಇಲೆಕ್ಟ್ರಿಕಲ್ ಶಕ್ತಿಯಿಂದ ನಡೆಯುವ ವಾಹನಗಳು ರಸ್ತೆಗಿಳಿದಿವೆ. ಜನರ ಒಲವು ಗಳಿಸಿವೆ. ಆದರೆ ಪೆಟ್ರೋಲ್ ಬಂಕ್ಗಳಂತೆ ವಾಹನಕ್ಕೆ ‘ಪವರ್’ ತುಂಬಿಸುವ ವ್ಯವಸ್ಥೆಗಳು ವ್ಯಾಪಕವಾಗಬೇಕು. ಮನೆಗೊಂದು ವಾಹನ ಸಾಕು ಎಂಬ ಭಾವ ಮೂಡಬೇಕಿದೆ.
ಇಷ್ಟೆಲ್ಲಾ ಹೇಳುವಾಗ ‘ಸಾರ್ವಜನಿಕ ವಾಹನ’ಗಳ ಬಳಕೆಯು ಹಳ್ಳಿ ಪ್ರದೇಶದಲ್ಲಿ ಈಗಲೂ ಚಾಲ್ತಿಯಲ್ಲಿವೆ. ಗಂಟೆಗಟ್ಟಲೆ ಕಾದು ಸರ್ಕಾರಿ ವಾಹನಗಳನ್ನು ನೆಚ್ಚಿಕೊಳ್ಳುವುದು ಬದುಕಿನಂಗವಾಗಿದೆ. ಅಷ್ಟೊಂದು ಹೊಂದಾಣಿಕೆ ಸಾಧ್ಯವಿಲ್ಲದಿದ್ದರೂ ನಗರದಲ್ಲಾದರೆ ಮೆಟ್ರೋ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು. ಬಹುತೇಕ ದೇಶವಾಸಿಗಳು ಸಾರ್ವಜನಿಕ ವಾಹನದಲ್ಲಿ ಪ್ರವಾಸ ಮಾಡಿಯೇ ಬದುಕನ್ನು ಕಟ್ಟಿಕೊಂಡವರು. ಇಂದು ಎಷ್ಟೋ ಕಡೆ ಸ್ವಂತದ್ದಾದ ವಾಹನಗಳ ಭರಾಟೆಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಶಿಥಿಲವಾಗುತ್ತಿದೆ. ಕೋವಿಡ್ ಕಾಲಘಟ್ಟದಲ್ಲಿ ಚಲಾವಣೆಗೊಂಡ ಹೊಸ ಪರಿಕಲ್ಪನೆ ‘ವರ್ಕ್ ಫ್ರಮ್ ಹೋಂ’. ಈಗಲೂ ಐಟಿ ಕಂಪೆನಿಗಳ ಉದ್ಯೋಗಿಗಳು ಈ ಮನಃಸ್ಥಿತಿಯಿಂದ ವಿಚಲಿತರಾಗಿಲ್ಲ. ಮನೆಯಿಂದಲೇ ಕೆಲಸ ಮಾಡುವ ಮಹಿಳೆಯರಿಗೆ ವರದಾನ. ಇಲ್ಲಿ ಪೇಟೆಯ ಸಂಪರ್ಕವಿಲ್ಲ, ಆರೋಗ್ಯ ಹಾಳಾಗುವ ಭಯವಿಲ್ಲ. ಬಂಧುಗಳು ದೂರದಲ್ಲಿದ್ದಾರೆ ಎನ್ನುವ ಚಿಂತೆಯಿಲ್ಲ. ಬೆಂಗಳೂರಿನಂತಹ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಅರ್ಥವಾಗಬೇಕಾದರೆ ಒಮ್ಮೆ ಟ್ರಾಫಿಕ್ ಮಧ್ಯೆ ಸಿಲುಕಿ ಒದ್ದಾಡಬೇಕು. ಮನೆಮಂದಿ ಹಳ್ಳಿಯಲ್ಲಿದ್ದು, ವ್ಯವಹಾರ ಕಚೇರಿ ನಗರದ ಮಧ್ಯೆ ಇದ್ದಾಗ ಪ್ರಯಾಣ, ಸಮಯ ಎಲ್ಲವೂ ದುಬಾರಿ. ಈಗ ಎಲ್ಲ ವ್ಯವಹಾರಗಳೂ ಮೊಬೈಲ್ನಲ್ಲಿ ನಡೆಯುತ್ತಿರುವಾಗ ಚಿಕ್ಕ ಚಿಕ್ಕ ವಿಚಾರಕ್ಕೂ ನಗರಕ್ಕೆ ಧಾಂಗುಡಿಯಿಡಬೇಕೆಂದಿಲ್ಲ. ಮನೆಯನ್ನೇ ಕಚೇರಿ ಮಾಡಿಕೊಂಡವರ ಸಂಖ್ಯೆ ದೊಡ್ಡದಿದೆ. ಈ ಪರಿಕಲ್ಪನೆಯನ್ನು ‘ನಗರದಲ್ಲಿ ಕೆಲಸ ಮಾಡಬೇಡಿ ಎಂದಿದ್ದಾರೆ’ ಎಂದು ಅರ್ಥೈಸುವ ಶಬ್ದಬ್ರಹ್ಮರ ಜ್ಞಾನಕ್ಕೆ ಸಲಾಂ!.
ಚಿನ್ನದಂತಹ ಬದುಕು ಬರಲಿ
‘ಅನಗತ್ಯವಾಗಿ ಒಂದು ವರುಷ ಚಿನ್ನ ಖರೀದಿಸಬೇಡಿ’ – ಈ ಮಾತಿನ ಹಿಂದಿನ ಮರ್ಮ ದೂರಗಾಮಿ. ಭಾರತವು ಚಿನ್ನದ ಆಮದಿಗೆ ಪರರಾಷ್ಟ್ರಗಳನ್ನು ಅವಲಂಬಿಸುತ್ತಿದೆ. ಬಹುತೇಕ ಹೂಡಿಕೆಗಳು ಚಿನ್ನದ ಮೇಲೆ ಕೇಂದ್ರೀಕರಿಸಿವೆ. ಇದರಿಂದಾಗಿ ವಿದೇಶಿ ವಿನಿಮಯ ವೆಚ್ಚ ಅಧಿಕವಾಗುತ್ತಿದೆ. ಇದನ್ನು ಸಮತೋಲನಗೊಳಿಸಲು ಮೋದಿಯವರು ಯೋಚಿಸಿರಬೇಕು. ಅದೇನೇ ಇರಲಿ.
ಇಂದು ಮಗಳನ್ನು ಮದುವೆ ಮಾಡಿ ಕೊಡುವಾಗ ಯಥಾಶಕ್ತಿ ಚಿನ್ನಾಭರಣಗಳೊಂದಿಗೆ ಕನ್ಯಾದಾನ ಮಾಡುತ್ತಾರೆ. ಕೆಲವೊಮ್ಮೆ ಚಿನ್ನದ ವಿಷಯದಲ್ಲಿ ರಂಪಾಟವಾಗಿ ಮದುವೆಗಳು ನಿಂತ ಉದಾಹರಣೆಗಳೂ ಇವೆ. ಬದುಕಿನ ಭದ್ರತೆಗಾಗಿ ಚಿನ್ನವನ್ನು ಸಂಗ್ರಹ ಮಾಡಬೇಕೆಂದು ಹಿರಿಯರೂ ಹೇಳುತ್ತಿದ್ದರು. ಆದರೆ ಎಷ್ಟು? ಹೇಗೆ? ಎನ್ನುವುದು ಮುಖ್ಯ. ಮಗಳ ಮದುವೆಗಾಗಿ ಕೂಡಿಟ್ಟ ಚಿನ್ನವಲ್ಲದೆ, ಸಾಲ ಮಾಡಿ ಖರೀದಿಸಿ; ವಿವಾಹದ ಬಳಿಕ ಮನೆ, ಆಸ್ತಿಯನ್ನೆಲ್ಲಾ ಮಾರಿ ಹೈರಾಣವಾದ ಕುಟುಂಬವನ್ನು ಹತ್ತಿರದಿಂದ ನೋಡಿರುತ್ತೇವೆ. ಒಂದು ವರುಷ ಚಿನ್ನ ಖರೀದಿಸಬೇಡಿ ಅಂದರೆ ಸಂಪಾದಿತ ಉಳಿತಾಯದ ಹಣವನ್ನೆಲ್ಲಾ ಚಿನ್ನಕ್ಕೆ ವ್ಯಯಿಸಬೇಡಿ ಎಂದರ್ಥವಷ್ಟೇ. ಭಾರತವು ಇತರ ದೇಶಗಳಿಂದ ಪ್ರಮುಖವಾಗಿ ಆಮದು ಮಾಡಿಕೊಳ್ಳುವ ಉತ್ಪನ್ನಗಳಲ್ಲಿ ಕಚ್ಚಾತೈಲಕ್ಕೆ ಮೊದಲ ಸ್ಥಾನ. ಎರಡನೆಯದು ಬಂಗಾರ. ‘ಅಡುಗೆ ಎಣ್ಣೆ’ಗೆ ಮೂರನೆಯ ಸ್ಥಾನ. ನಮ್ಮಲ್ಲಿ ಮುಖ್ಯವಾಗಿ ಪಾಮ್ ಆಯಿಲ್ ಬಳಕೆ ಸಾರ್ವತ್ರಿಕ. ದೇಶದ ಹಿತದೃಷ್ಟಿಯಿಂದ ಇದರ ಬಳಕೆ ಮಿತಗೊಳಿಸಬೇಕು. ಗಮನಿಸಿ, ಪ್ರಧಾನಿಯವರು ‘ಬಳಸಲೇಬೇಡಿ’ ಎನ್ನಲಿಲ್ಲ! ಅಡುಗೆಗೆ ಹೊಂದಬಹುದಾದ ಸ್ಥಳೀಯ ಎಣ್ಣೆಗಳನ್ನು ಬಳಸಬಾರದೇಕೆ? ಉದಾ: ತೆಂಗಿನೆಣ್ಣೆ. ಇದು ಆರೋಗ್ಯಕ್ಕೆ ಪೂರಕ. ಆರ್ಥಿಕವಾಗಿ ಭಾರವಾದರೂ ಸ್ವತಃ ತೆಂಗು ಬೆಳೆಯುವವರು ಬಳಸಬಹುದಲ್ಲಾ. ಎಲ್ಲದಕ್ಕೂ ಮಾರ್ಕೆಟಿಂಗ್ ಸ್ಪರ್ಶ ಬೇಕಾಗಿಲ್ಲ.
ಹತ್ತಿರದ ಕೇರಳದಲ್ಲಿ ತೆಂಗಿನೆಣ್ಣೆಯ ಬಳಕೆ ವ್ಯಾಪಕವಾಗಿದೆ. ಅಭ್ಯಂಜನದಿಂದ ತೊಡಗಿ ಆಹಾರದ ತನಕ. ಅದೊಂದು ಸಾಂಪ್ರದಾಯಿಕ ಆಚಾರ. ಅನ್ಯಎಣ್ಣೆಗಳನ್ನು ಬಳಸಿ ಕರಿದ ಪದಾರ್ಥಗಳು ಆರೋಗ್ಯಕ್ಕೂ ಹಿತಕರವಲ್ಲ. ಈ ಮಾತಿಗೆ ವೈದ್ಯರೂ ದನಿಗೂಡಿಸುತ್ತಾರೆ. ಪೆಟ್ರೋಲಿಯಂ ಸಂಬಂಧಿ ಎಣ್ಣೆಗಳು ‘ರೆಡಿ ಟು ಈಟ್’ ಉತ್ಪನ್ನಗಳ ರೂಪದಲ್ಲಿ ಉದರಕ್ಕಿಳಿಯುತ್ತವೆ. ಪುತ್ತೂರಿನ ಸಾವಯವ ಕೃಷಿಕ, ಯುವ ಉದ್ಯಮಿ ಸುಹಾಸ್ ಮರಿಕೆಯವರಿಗೆ ಸಾವಯವ ಅಂಗಡಿ ಇದೆ. ಅವರ ಅನುಭವ ಗಮನಿಸಿ. “ಜನರಲ್ಲಿ ಆರೋಗ್ಯದ ಕಾಳಜಿ ಜಾಗೃತವಾಗಿದೆ. ಸಾವಯವ ವಸ್ತುಗಳನ್ನು ಹುಡುಕುವ ಅಭ್ಯಾಸ ಶುರುವಾಗಿದೆ. ತೆಂಗಿನೆಣ್ಣೆಯಲ್ಲಿ ಕರಿದ ತಿಂಡಿಗಳನ್ನಷ್ಟೇ ಅಪೇಕ್ಷೆ ಪಡುವವರ ಸಂಖ್ಯೆ ದೊಡ್ಡದು. ನನ್ನ ಅಂಗಡಿಯಲ್ಲಿ ತೆಂಗಿನೆಣ್ಣೆಯಲ್ಲಿ ಕರಿದ ತಿಂಡಿಗಳಿಗೆ ಆದ್ಯತೆ. ಇತರ ಎಣ್ಣೆಯಲ್ಲಿ ಕರಿದ ತಿಂಡಿಗಳು ನಮ್ಮಲ್ಲಿಲ್ಲ” ಎನ್ನುತ್ತಾರೆ.
ಆರೋಗ್ಯ ಭಾಗ್ಯವಾಗಲಿ
‘ಸಹಜ ಕೃಷಿ’ಯು ಹೊಸ ಕೃಷಿ ಪದ್ಧತಿಯಲ್ಲ. ನಮ್ಮ ಹಿರಿಯರು ಶ್ರಮಜೀವಿಗಳು. ಅವರು ಅನುಸರಿಸಿಕೊಂಡು ಬಂದ ಕೃಷಿ ಕ್ರಮ. ಅಕ್ಷರಗಳನ್ನು ತಲೆಯಲ್ಲಿ ತುಂಬಿಸಿಕೊಂಡ ನಾವು ಅದಕ್ಕೆ ‘ಪದ್ಧತಿ’ ಎಂದು ಹೆಸರಿಟ್ಟೆವು! ಅದರಲ್ಲೂ ಸಹಜ, ನೈಸರ್ಗಿಕ, ಸಾವಯವ, ರಾಸಾಯನಿಕ ಎಂದು ವಿಭಾಗಿಸಿದೆವು. ಅಧಿಕ ಇಳುವರಿ ಪಡೆಯುವ ತಳಿಗಳು ಹೊಲಕ್ಕೆ ನುಗ್ಗಿದವು. ಜತೆಜತೆಯಲ್ಲಿ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳೂ ಪ್ರವೇಶಿಸಿದುವು. ಇಲಾಖೆಗಳು ಶಿಫಾರಸು ಮಾಡಿದುವು. ಪರಿಣಾಮ, ಇಳುವರಿಯಲ್ಲಿ ಹೆಚ್ಚುವರಿ ಕಂಡರೂ ಮಣ್ಣು, ಗಾಳಿ, ನೀರು ಕಲುಷಿತವಾಯಿತು. ನಂತರದ ದಿವಸಗಳಲ್ಲಿ ಯಾವ ಇಲಾಖೆಯ ಅಧಿಕಾರಿಗಳು ‘ಬಳಸಿ’ ಎಂದು ಶಿಫಾರಸು ಮಾಡಿದರೋ, ಅದೇ ಅಧಿಕಾರಿಗಳು ‘ಬೇಡ’ ಅಂದರು. ‘ರಾಸಾಯನಿಕ ಗೊಬ್ಬರಗಳ ಬದಲಿಗೆ ಸಾವಯವ ಗೊಬ್ಬರಗಳನ್ನು ಬಳಸಿ’ ಎಂದು ಘೋಷಣೆ ಮಾಡಿದರು. ಕೃಷಿಕ ತಬ್ಬಿಬ್ಬಾದ. ಯಾವಾಗ ಸಾವಯವ ಪದ್ಧತಿಯ ಪರಿಕಲ್ಪನೆಯ ತಂಗಾಳಿ ದೇಶದೆಲ್ಲೆಡೆ ಬೀಸಲು ಶುರುವಾಯಿತೋ, ಅಲ್ಲಿಂದ ಆರೋಗ್ಯ ಕಾಳಜಿಯೂ ಮೇಲ್ಮೆ ಪಡೆಯಿತು. ಚಿಕ್ಕ ಚಿಕ್ಕ ಗುಂಪುಗಳಲ್ಲಿ ಸಾವಯವ ಕೃಷಿಕರು ರೂಪುಗೊಂಡರು. ಸಾವಯವ ಉತ್ಪನ್ನಗಳು ತಯಾರಾದುವು. ಗ್ರಾಹಕರ ಒಲವು ಪಡೆಯಿತು. ರಾಸಾಯನಿಕ, ಸಾವಯವದ ಹೊರತಾದ ‘ಸಹಜ ಕೃಷಿ’ಯನ್ನು ಮಾಡಿ ಯಶಸ್ಸಾದ ಕೃಷಿಕರೂ ಇದ್ದಾರೆ. ಯಾವುದೇ ಕೃತಕ ಒಳಸುರಿಯನ್ನು ಬಳಸದೆ ಮಾಡುವ ಕೃಷಿಯು ‘ಸಹಜ ಕೃಷಿ.’ ಅಷ್ಟು ಹಿಂದೆ ನಮಗೆ ಹೋಗಲಾಗದಿದ್ದರೂ ಸಾವಯವ ಕೃಷಿಯನ್ನು ಒಪ್ಪಿಕೊಳ್ಳಬಹುದಲ್ಲವೇ.
‘ವಿದೇಶ ಪ್ರವಾಸ ಮಾಡಬೇಡಿ’ ಎಂದು ಮೋದಿಯವರು ಹೇಳಬಾರದಿತ್ತು – ಒಂದಿಬ್ಬರು ಆಪ್ತರು ಕಿವಿಯಲ್ಲಿ ಹೇಳಿದರು. ಪ್ರವಾಸ, ವಾಹನ ಚಾಲನೆ ಇವೆಲ್ಲದರ ಹಿಂದೆ ಇರುವುದು ಕಚ್ಚಾತೈಲ. ಈಗಿನ ಪರಿಸ್ಥಿತಿ ಎಲ್ಲರಿಗೂ ಗೊತ್ತು. ಇರಾನ್, ಇಸ್ರೆಲ್, ಅಮೆರಿಕ ಮೊದಲಾದ ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾದ ಯುದ್ಧದ ಪರಿಣಾಮವನ್ನು ನೇರವಾಗಿ ಅನುಭವಿಸುತ್ತಿದ್ದೇವೆ. ಜನರಲ್ಲಿ ಮಿತಬಳಕೆ ಬಂದಾಗ ಸಹಜವಾಗಿ ಅದರ ಅವಲಂಬನೆಯೂ ಮಿತವಾಗುತ್ತದೆ ಎನ್ನುವ ದೂರದೃಷ್ಟಿ.
‘ಬೇಡ’ ಪದ ಋಣಾತ್ಮಕವಲ್ಲ
ಸ್ವದೇಶಿ ವಸ್ತುಗಳ ಬಳಕೆಯ ಕಲ್ಪನೆ ಹೊಸತಲ್ಲ. ಒಂದು ಕಾಲಘಟ್ಟದಲ್ಲಿ ಹತ್ತಿಯ ವಸ್ತ್ರಕ್ಕೆ ಬೇಡಿಕೆಯಿತ್ತು. ಅದು ದೇಶದಲ್ಲೇ ತಯಾರಾಗುವ ಉತ್ಪನ್ನ. ಕೇಂದ್ರ ಸರ್ಕಾರದ ‘ಅತ್ಮನಿರ್ಭರ’ ಪರಿಕಲ್ಪನೆಯ ಯೋಚನೆಯೂ ‘ಸ್ವದೇಶಿ’ಯೇ! ತಯಾರಾದ ಉತ್ಪನ್ನಗಳಿಗೆ ಸ್ಥಳೀಯ ಮಾರುಕಟ್ಟೆ ಕಾಣುವಂತಾಗಬೇಕು. ಅದರ ಲಾಭವು ದೇಶಕ್ಕೆ ಸಮರ್ಪಿತವಾಗಬೇಕು. ಈ ಯೋಚನೆಯ ಹಿನ್ನೆಲೆಯಲ್ಲಿ ಕೋವಿಡ್ ಕಾಲಘಟ್ಟದಲ್ಲಿ ಘೋಷಣೆಯಾದ ‘ಆತ್ಮನಿರ್ಭರ’ವು ಮಿಳಿತಗೊಂಡಿದೆ. ಸ್ಥಳೀಯ ಉದ್ಯಮಗಳಿಗೆ ಪ್ರೋತ್ಸಾಹ ನೀಡಿ, ಸ್ವಾವಲಂಬಿ ಬದುಕಿಗೆ ಬೆರಳು ತೋರಿದರು. ಇಂದು ಸರ್ಕಾರದ ಪ್ರೊತ್ಸಾಹದಿಂದಾಗಿ ಅಸಂಖ್ಯಾತ ರೈತೋತ್ಪಾದಕ ಸಂಘಗಳು ಕಾರ್ಯವೆಸಗುತ್ತಿವೆ. ಸ್ಥಳೀಯ ಉತ್ಪನ್ನಗಳಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ ಸೃಷ್ಟಿಯಾಗುತ್ತಿದೆ.
ನರೇಂದ್ರ ಮೋದಿಯವರು ‘ಮಾಡಬೇಡಿ, ಖರೀದಿಸಬೇಡಿ, ಕಡಿಮೆ ಮಾಡಿ’ ಎಂದರು. ಈ ‘ಬೇಡ’ಗಳ ಹಿಂದೆ ರಾಷ್ಟ್ರದ ಹಿತದೃಷ್ಟಿಯಿದೆ. ಮಧ್ಯಪ್ರಾಚ್ಯದೇಶಗಳ ಯುದ್ಧ ಪರಿಣಾಮಗಳಿಂದ ಡೀಸಿಲ್, ಪೆಟ್ರೋಲ್, ಗ್ಯಾಸ್ಗಳ ಕ್ಷೀಣ ಲಭ್ಯತೆಗಳು ದೇಶವಾಸಿಗಳ ಬದುಕನ್ನು ಅಲ್ಲಾಡಿಸಕೂಡದು. ಈ ಹಿನ್ನೆಲೆಯಲ್ಲಿ ತಮ್ಮ ಬದುಕಿಗೆ ತಾವೇ ನಿಯಂತ್ರಣಗಳನ್ನು ಹೇರಿಕೊಳ್ಳಬೇಕು ಎನ್ನುವ ಒಳಾರ್ಥ ಬರುವಂತೆ ಪ್ರಧಾನಿ ಸರಳ ಪಾಠಗಳನ್ನು ಹೆಣೆದಿದ್ದಾರೆ. ದೇಶದ ಕುರಿತಾದ ಕಾಳಜಿ ಇದ್ದವರು ಖಂಡಿತಾ ಸ್ವೀಕರಿಸುತ್ತಾರೆ. ಮೋದಿಯವರ ಸರಳ ಜೀವನದ ಪಾಠವು ರಾಷ್ಟ್ರೀಯ ಶಿಸ್ತಿನ ಅಡಿಪಾಯವಾಗಿದೆ.
