ಇತ್ತೀಚಿನ ವಿವಾದಗಳ ನಂತರ ಪರೀಕ್ಷಾ ಭದ್ರತೆ ಬಿಗಿಗೊಳಿಸಿದ ಕೇಂದ್ರ
ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗಳ ಭದ್ರತೆ ಮತ್ತು ಪವಿತ್ರತೆಯ ಕುರಿತು ಕಳವಳ ವ್ಯಕ್ತವಾದ ಇತ್ತೀಚಿನ ಘಟನೆಗಳ ಬೆನ್ನಲ್ಲೇ, ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಯಲ್ಲಿ ಭಾರಿ ಸುಧಾರಣೆಗಳನ್ನು ಮಾಡಲಾಗುತ್ತಿದೆ. 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸಲಾಗಿದ್ದು, ಪರೀಕ್ಷೆ ಹಾಗೂ ಗೌಪ್ಯ ಕಾರ್ಯಾಚರಣೆಗಳ ಪ್ರಕ್ರಿಯೆಯಲ್ಲಿ ವ್ಯಾಪಕ ಬದಲಾವಣೆಗಳಿಗೆ ಆದೇಶಿಸಲಾಗಿದೆ.
ಆಗಸ್ಟ್ 18 ರಂದು ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಅವರು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ, NTA ಡೈರೆಕ್ಟರ್ ಜನರಲ್ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು. ಈ ಸಭೆಯಲ್ಲಿ ಏಜೆನ್ಸಿಯು ಕೈಗೊಂಡ ಕ್ರಮಗಳ ಪರಿಶೀಲನೆ ನಡೆಸಲಾಯಿತು ಮತ್ತು ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಮೌಲ್ಯಮಾಪನ ಮಾಡಲಾಯಿತು.
ಸಭೆಯ ಸಂದರ್ಭದಲ್ಲಿ, ಪ್ರಸ್ತುತ ನಡೆಯುತ್ತಿರುವ ಸುಧಾರಣಾ ಪ್ರಕ್ರಿಯೆಯ ಭಾಗವಾಗಿ 50ಕ್ಕೂ ಹೆಚ್ಚು NTA ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ ಎಂದು ಸಚಿವರಿಗೆ ತಿಳಿಸಲಾಯಿತು.
ಏಜೆನ್ಸಿಯ ವೃತ್ತಿಪರ ನಾಯಕತ್ವವನ್ನು ಬಲಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. 10 ಹೊಸ ಹಿರಿಯ ಹುದ್ದೆಗಳಿಗೆ ಜಾಹೀರಾತು ನೀಡಲಾಗಿದ್ದು, ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಹುದ್ದೆಗಳಲ್ಲಿ ಮುಖ್ಯ ತಂತ್ರಜ್ಞಾನ ಅಧಿಕಾರಿ (Chief Technology Officer), ಮುಖ್ಯ ಹಣಕಾಸು ಅಧಿಕಾರಿ (Chief Finance Officer), ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ (Chief Information Security Officer), ಪರೀಕ್ಷಾ ಭದ್ರತೆಯ ಜನರಲ್ ಮ್ಯಾನೇಜರ್ (General Manager for Test Security) ಹಾಗೂ ಸಂಶೋಧನೆ, ಅಭಿವೃದ್ಧಿ ಮತ್ತು ಸೈಕೋಮೆಟ್ರಿಕ್ಸ್ ವಿಭಾಗದ ಹಿರಿಯ ಹುದ್ದೆಗಳು ಸೇರಿವೆ.
ಇದರೊಂದಿಗೆ, ಸೈಬರ್ ಸೆಕ್ಯೂರಿಟಿ, ಸೈಕೋಮೆಟ್ರಿಕ್ಸ್ ಮತ್ತು ಪ್ರಶ್ನೆ ಪತ್ರಿಕೆ ವಿನ್ಯಾಸ ಸೇರಿದಂತೆ ಪ್ರಮುಖ ಕ್ಷೇತ್ರಗಳನ್ನು ಬಲಪಡಿಸಲು ಖಾಸಗಿ ವಲಯದ ವಿಷಯ ತಜ್ಞರನ್ನು NTA ಸೇರ್ಪಡೆಗೊಳಿಸುತ್ತಿದೆ.
ಪರೀಕ್ಷೆಗಳನ್ನು ನಡೆಸುವುದು ಮತ್ತು ಅವುಗಳ ಭದ್ರತೆಯಲ್ಲಿ ಯಾವುದೇ ಲೋಪದೋಷ ಉಂಟಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದ ಜೋಶಿ ಅವರು, ನಿಗದಿಪಡಿಸಿದ ಪರೀಕ್ಷಾ ನಿಯಮಗಳನ್ನು ತಪ್ಪದೇ ಪಾಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಏಜೆನ್ಸಿಯ ಗೌಪ್ಯ ಕಾರ್ಯಾಚರಣೆಗಳ (CONOPS) ರಚನೆಯನ್ನು ಯುದ್ಧೋಪಾದಿಯಲ್ಲಿ ಸುಧಾರಿಸಲು ಆದೇಶಿಸಲಾಗಿದೆ. ಸೂಕ್ಷ್ಮ ಪರೀಕ್ಷಾ ಪ್ರಕ್ರಿಯೆಗಳನ್ನು ಸುರಕ್ಷಿತವಾಗಿಡಲು ಮತ್ತು ಅನಧಿಕೃತ ಪ್ರವೇಶವನ್ನು ತಡೆಯಲು ಪ್ರತ್ಯೇಕ ಕೊಠಡಿಗಳನ್ನು ಬಲಪಡಿಸುವುದು, ಏರ್-ಗ್ಯಾಪ್ಡ್ ಸಿಸ್ಟಮ್ಗಳನ್ನು (ಅಂತರ್ಜಾಲ ಸಂಪರ್ಕವಿಲ್ಲದ ಕಂಪ್ಯೂಟರ್ ವ್ಯವಸ್ಥೆ) ನಿಯೋಜಿಸುವುದು ಮತ್ತು ಕಟ್ಟುನಿಟ್ಟಿನ ಸಾಧನ-ಠೇವಣಿ (device-deposit) ನಿಯಮಗಳನ್ನು ಜಾರಿಗೊಳಿಸುವುದು ಈ ಕ್ರಮಗಳಲ್ಲಿ ಸೇರಿವೆ.
ಎಲ್ಲಾ ಪರೀಕ್ಷಾ ಪ್ರಕ್ರಿಯೆಗಳ ಸಂಪೂರ್ಣ ಆಡಿಟ್ ನಡೆಸಿ, ಕೈಗೊಂಡ ತಿದ್ದುಪಡಿ ಕ್ರಮಗಳ ವಿವರವಾದ ವರದಿಯನ್ನು ಸಲ್ಲಿಸುವಂತೆ ಸಚಿವರು NTA ಗೆ ನಿರ್ದೇಶನ ನೀಡಿದ್ದಾರೆ.
ಪ್ರಮುಖ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳ ನಿರ್ವಹಣೆ, ಭದ್ರತೆ ಮತ್ತು ನಂಬಿಕೆಗೆ ಸಂಬಂಧಿಸಿದಂತೆ NTA ತೀವ್ರ ಪರಿಶೀಲನೆಗೆ ಒಳಪಟ್ಟಿರುವ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿವೆ. ಸರ್ಕಾರದ ಈ ಇತ್ತೀಚಿನ ಕ್ರಮಗಳು ಏಜೆನ್ಸಿಯ ಸಂಸ್ಥಾಗತ ಜವಾಬ್ದಾರಿ, ತಾಂತ್ರಿಕ ಮೂಲಸೌಕರ್ಯ ಮತ್ತು ಕಾರ್ಯಾಚರಣೆಯ ಸುರಕ್ಷತಾ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶವನ್ನು ತೋರಿಸುತ್ತವೆ.
ಸಮಗ್ರ ವ್ಯವಸ್ಥೆಯನ್ನು ಸುಧಾರಿಸುವ ವಿಷಯದ ಮೇಲೆ ಈ ಸಭೆಯು ಪ್ರಮುಖವಾಗಿ ಗಮನಹರಿಸಿತ್ತು ಮತ್ತು ತಿದ್ದುಪಡಿ ಕ್ರಮಗಳನ್ನು ಶೀಘ್ರವಾಗಿ ತೆಗೆದುಕೊಳ್ಳುವಂತೆ NTA ಗೆ ನಿರ್ದೇಶಿಸಲಾಗಿದೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.
