- ಚಂದ್ರಶೇಖರ ಕುಳಮರ್ವ, ಸಂಪಾದಕರು
ಭಾರತ ಇಂದು ಕೇವಲ ಭೌಗೋಳಿಕ ಗಡಿಗಳನ್ನು ಕಾಯುವ ಬಾಹ್ಯ ಸವಾಲನ್ನು ಮಾತ್ರ ಎದುರಿಸುತ್ತಿಲ್ಲ; ಬದಲಿಗೆ ದೇಶದ ಒಳಗಿನಿಂದಲೇ ವ್ಯವಸ್ಥಿತವಾಗಿ ನಡೆಯುತ್ತಿರುವ ‘ಜನಸಂಖ್ಯಾ ಆಕ್ರಮಣ’ (Demographic Aggression) ಹಾಗೂ ಅಕ್ರಮ ವಲಸೆಯ ಕಠಿಣ ವಾಸ್ತವಕ್ಕೆ ಮುಖಾಮುಖಿಯಾಗಿದೆ. ದಶಕಗಳ ಕಾಲ ನಡೆದ ತುಷ್ಟೀಕರಣ ರಾಜಕಾರಣ ಮತ್ತು ವೋಟ್ ಬ್ಯಾಂಕ್ ಆಸೆಗಾಗಿ ಗಡಿಭಾಗದ ಭದ್ರತೆಯನ್ನು ಬಲಿಗೊಟ್ಟ ಇತಿಹಾಸವು ಇಂದು ದೇಶದ ಆಂತರಿಕ ಭದ್ರತೆ, ಸಾರ್ವಭೌಮತೆ ಹಾಗೂ ಸಾಮಾಜಿಕ ಸ್ಥಿರತೆಗೆ ಅತ್ಯಂತ ದೊಡ್ಡ ಗಂಡಾಂತರವಾಗಿ ಪರಿಣಮಿಸಿದೆ.
ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ (EAC-PM) ವರದಿಯ ಪ್ರಕಾರ, 1950ರಿಂದ 2015ರ ನಡುವಿನ ಅವಧಿಯಲ್ಲಿ ಭಾರತದ ಪ್ರಮುಖ ಧಾರ್ಮಿಕ ಜನಸಂಖ್ಯೆಯಲ್ಲಿನ ಬದಲಾವಣೆಗಳು ಹಿಂದೂ ಸಮಾಜಕ್ಕೆ ಎಚ್ಚರಿಕೆಯ ಗಂಟೆಯಾಗಿವೆ. ಈ ಅವಧಿಯಲ್ಲಿ ಹಿಂದೂಗಳ ಜನಸಂಖ್ಯೆಯು ಶೇ. 7.82ರಷ್ಟು ಕುಸಿದಿದ್ದರೆ, ಮುಸ್ಲಿಂ ಸಮುದಾಯದ ಜನಸಂಖ್ಯೆಯು ಶೇ. 9.84ರಿಂದ ಶೇ. 14.09ಕ್ಕೆ (ಶೇ.4.25ರಷ್ಟು) ಏರಿಕೆಯಾಗಿದೆ. ಈ ಅಸ್ವಾಭಾವಿಕ ಬದಲಾವಣೆಗಳ ಸಮಗ್ರ ಪರಾಮರ್ಶೆಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಪ್ರಕಾಶ್ ಪ್ರಭಾಕರ್ ನಾವ್ಲೇಕರ್ ನೇತೃತ್ವದಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿರುವುದು ಕಾಲೋಚಿತ ಹಾಗೂ ಸ್ವಾಗತಾರ್ಹ ಹೆಜ್ಜೆ.
ಈ ಕಳವಳಕಾರಿ ವಿದ್ಯಮಾನವು ಕೇವಲ ಅಸ್ಸಾಂ ಅಥವಾ ಪಶ್ಚಿಮ ಬಂಗಾಳದಂತಹ ಗಡಿರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ; ದಕ್ಷಿಣದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳೂ ಅಕ್ರಮ ವಲಸಿಗರ ಗುಪ್ತ ಅಡಗುತಾಣಗಳಾಗಿ ಬದಲಾಗುತ್ತಿವೆ. ಇತ್ತೀಚಿನ ಕರ್ನಾಟಕದ ಜಾತಿಗಣತಿ ವರದಿಯ ಪ್ರಕಾರ, ಮುಸ್ಲಿಂ ಸಮುದಾಯವು 80.14 ಲಕ್ಷ (ಶೇ. 14) ಜನಸಂಖ್ಯೆಯೊಂದಿಗೆ ಪ್ರಥಮ ಸ್ಥಾನಕ್ಕೇರಿದ್ದರೆ, ಸಾಂಪ್ರದಾಯಿಕ ಪ್ರಮುಖ ಸಮುದಾಯಗಳಾದ ಲಿಂಗಾಯತರು ಮತ್ತು ಒಕ್ಕಲಿಗರು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಸ್ಥಳೀಯ ಸಮುದಾಯಗಳ ಜನನ ದರ ಸ್ಥಿರವಾಗಿರುವಾಗ, ಈ ಮಟ್ಟದ ಬದಲಾವಣೆಯು ಸಹಜವಾಗಿ ಅಕ್ರಮ ನುಸುಳುವಿಕೆ ಮತ್ತು ಸ್ಥಳೀಯ ದಲ್ಲಾಳಿಗಳ ನೆರವಿನಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮತದಾರರ ಪಟ್ಟಿಗೆ ಸೇರಿರುವ ಸಂಚನ್ನು ಸಾಬೀತುಪಡಿಸುತ್ತದೆ.
ಈ ಅಕ್ರಮ ವಲಸೆಯು ಭಾರತದ ಬಡ ಜನರಿಗಾಗಿ ಇರುವ ಉಚಿತ ಪಡಿತರ, ಆರೋಗ್ಯ ಸೌಲಭ್ಯ ಹಾಗೂ ಉದ್ಯೋಗಾವಕಾಶಗಳನ್ನು ಕಿತ್ತುಕೊಳ್ಳುವ ಮೂಲಕ ‘ಆರ್ಥಿಕ ದರೋಡೆ’ ಎಸಗುತ್ತಿದೆ. ಅಷ್ಟೇ ಅಲ್ಲದೆ, ನಕಲಿ ಆಧಾರ್ ಮತ್ತು ಮತದಾರರ ಗುರುತಿನ ಚೀಟಿಗಳ ಮೂಲಕ ದೇಶದ ಪ್ರಜಾಪ್ರಭುತ್ವದ ದಾರಿಯನ್ನೇ ತಪ್ಪಿಸಲಾಗುತ್ತಿದೆ. ರಾಷ್ಟ್ರೀಯ ಪೌರತ್ವ ನೋಂದಣಿ (NRC), ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಕೈಗೊಂಡಿರುವ ವಿಶೇಷ ಕಾರ್ಯಪಡೆ (STF) ಕಾರ್ಯಾಚರಣೆಗಳ ಮಾದರಿಯಲ್ಲಿಯೇ ದೇಶಾದ್ಯಂತ ಕಠಿಣ ಕ್ರಮಗಳು ಜರಗಬೇಕಿದೆ. ದಕ್ಷಿಣದ ರಾಜ್ಯಗಳ ಮೇಲೂ ವಿಶೇಷ ನಿಗಾ ಇರಿಸಿ, ಡಿಜಿಟಲ್ ಶುದ್ಧೀಕರಣದ ಮೂಲಕ ನಕಲಿ ದಾಖಲೆ ಹೊಂದಿರುವವರ ಮತದಾನದ ಹಕ್ಕನ್ನು ರದ್ದುಗೊಳಿಸಬೇಕು ಮತ್ತು ಕರಾವಳಿ ಭದ್ರತೆಯನ್ನು ಬಲಪಡಿಸಬೇಕು. ಇದರ ಬಗ್ಗೆ ಸವಿವರವಾಗಿ ಲೇಖಕಿ
ಸಹನಾ ಸುಳ್ಯ ಅವರು ಈ ವಾರದ ಮುಖಪುಟ ಲೇಖನವನ್ನು ಒದಗಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ 2.0-ಡಿ.ಕೆ ಶಕೆ
ರಾಜ್ಯ ರಾಜಕೀಯದಲ್ಲಿ ಹೊಸದೊಂದು ಅಧ್ಯಾಯ ಶುರುವಾಗಿದೆ. ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ನ ಹಿರಿಯ ನಾಯಕ ಡಿ.ಕೆ ಶಿವಕುಮಾರ್ ಬುಧವಾರವಷ್ಟೇ(ಮೇ 3ರಂದು) ಅಧಿಕಾರ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲೇ ಕಾಂಗ್ರೆಸ್ನ ಅಲ್ಪಸಂಖ್ಯಾತ ತುಷ್ಟೀಕರಣದ ರಾಜಕಾರಣವನ್ನು ಸ್ವಲ್ಪ ಮಟ್ಟಿಗೆ ಮರೆಮಾಚುವಂತೆ, ತಮ್ಮ ಹಿಂದೂ ಧಾರ್ಮಿಕ ಮತ್ತು ಸಂಸ್ಕೃತಿಯ ಮೇಲಿನ ಶ್ರದ್ಧೆಯನ್ನು ದೊಡ್ಡದಾಗಿಯೇ ಪ್ರದರ್ಶಿಸಿದ್ದಾರೆ. ಸಮತೋಲನದ ನಡೆಯನ್ನು ತೋರ್ಪಡಿಸಿಕೊಂಡಿದ್ದಾರೆ. ಅವರ ಮೂಲಕವಾಗಿ ಕಾಂಗ್ರೆಸ್ ತೋರಿಕೆಗಾದರೂ ʼಮೃದು ಹಿಂದುತ್ವʼ ಅನುಸರಿಸುವಂತೆ ಭಾಸವಾಗುತ್ತಿದೆ. ಪ್ರಮಾಣ ವಚನ ಸ್ವೀಕರಿಸಿದ ಬೆನ್ನಿಗೇ ಆಡಳಿತದಲ್ಲಿ ಬಿಗಿಯನ್ನೂ ಸಾಧಿಸುವ ಗಟ್ಟಿತನವನ್ನು ಮೆರೆದಿದ್ದಾರೆ. ಯುವಕರನ್ನು ಗುರಿಯಾಗಿರಿಸಿ ಕೆಲವೊಂದು ಯೋಜನೆಗಳನ್ನೂ ಪ್ರಕಟಿಸಿದ್ದಾರೆ. ಮುಖ್ಯಮಂತ್ರಿ ಹುದ್ದೆ ನನ್ನದಲ್ಲ, ಜನತೆಯದ್ದು ಎನ್ನುವ ವಿನಮ್ರತೆಯನ್ನೂ ವ್ಯಕ್ತಪಡಿಸಿದ್ದಾರೆ. ಜವಾಬ್ದಾರಿಯುತ ಹುದ್ದೆಯನ್ನು ಏರಿರುವ ಡಿ.ಕೆ ಶಿವಕುಮಾರ್ ನೇತೃತ್ವದ ಆಡಳಿತ ವ್ಯವಸ್ಥೆ ಹೇಗೆ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಏನೇ ಇರಲಿ, ಅವರಿಗೆ ಶುಭ ಹಾರೈಸೋಣ.
