ಬೆಂಗಳೂರು: ದೇಶದ ಹೆಮ್ಮೆಯ ಮೇರು ಗಾಯಕಿ, ಆರು ದಶಕಗಳ ಕಾಲ ಸಂಗೀತ ಸಾಮ್ರಾಜ್ಯವನ್ನು ಆಳಿದ ಗಾನಕೋಗಿಲೆ ಶ್ರೀಮತಿ ಎಸ್. ಜಾನಕಿ (88) ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್.) ತೀವ್ರ ಸಂತಾಪ ವ್ಯಕ್ತಪಡಿಸಿದೆ. ಶನಿವಾರ (ಜುಲೈ 11) ವಿಧಿವಶರಾದ ಜಾನಕಿ ಅವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಸಂಘ ಹೇಳಿದೆ.
ಈ ಕುರಿತು ಆರ್.ಎಸ್.ಎಸ್. ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಮತ್ತು ಕ್ಷೇತ್ರೀಯ ಸಂಘಚಾಲಕರಾದ ಡಾ. ಪಿ. ವಾಮನ್ ಶೆಣೈ ಅವರು ಜಂಟಿ ಶ್ರದ್ಧಾಂಜಲಿ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ.
ಅಪೂರ್ವ ಪ್ರತಿಭೆ, ಯುವಜನತೆಗೆ ಮಾದರಿ
“ದೇಶ ಕಂಡ ಶ್ರೇಷ್ಠ ಜನ್ಮಜಾತ ಹಾಡುಗಾರ್ತಿ ಎಸ್. ಜಾನಕಿ ಅವರು ಎಳವೆಯಲ್ಲೇ ಸಂಗೀತದ ಸ್ವರಗಳನ್ನು ಅದ್ಭುತವಾಗಿ ಒಲಿಸಿಕೊಂಡಿದ್ದರು. ಸುಮಾರು 20ಕ್ಕೂ ಹೆಚ್ಚು ಭಾಷೆಗಳಲ್ಲಿ 48,000ಕ್ಕೂ ಅಧಿಕ ಹಾಡುಗಳಿಗೆ ಧ್ವನಿಯಾಗುವ ಮೂಲಕ ಇಡೀ ಭಾರತೀಯರ ಹೃದಯ ಗೆದ್ದಿದ್ದಾರೆ. ವಿವಿಧ ಭಾಷೆಗಳ ಮೇಲಿನ ಹಿಡಿತ, ನಿಖರವಾದ ಉಚ್ಚಾರಣೆ ಹಾಗೂ ಶಾರೀರದಲ್ಲಿದ್ದ ವೈವಿಧ್ಯಮಯ ಪ್ರಯೋಗಗಳು ಅವರನ್ನು ಅಸಾಮಾನ್ಯ ಗಾಯಕಿಯನ್ನಾಗಿ ರೂಪಿಸಿದ್ದವು” ಎಂದು ನಾಯಕರು ಸ್ಮರಿಸಿದ್ದಾರೆ.
ಸರಳತೆಯ ಸಾಕಾರ ಮೂರ್ತಿ
“ತಾವು ಹಾಡಿದ ಭಕ್ತಿಗೀತೆಗಳ ಮೂಲಕ ಕೋಟ್ಯಂತರ ಆಸ್ತಿಕ ಬಂಧುಗಳ ಹೃದಯದಲ್ಲಿ ಭಕ್ತಿಭಾವ ಮೂಡಿಸಿದ ಜಾನಕಿ ಅವರ ನಿರಂತರ ಅಭ್ಯಾಸ, ಕಲಿಯುವಿಕೆಯ ನಿಷ್ಠೆ, ಸರಳತೆ, ಕ್ರಿಯಾಶೀಲ ಜೀವನಶೈಲಿ ಮತ್ತು ದೈವಭಕ್ತಿ ಇಂದಿನ ಯುವಜನತೆಗೆ ಸದಾ ಮಾದರಿಯಾಗಿದೆ” ಎಂದು ಸಂದೇಶದಲ್ಲಿ ಶ್ಲಾಘಿಸಲಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರವಾಗಿ ಮೃತರ ಆತ್ಮಕ್ಕೆ ಸದ್ಗತಿ ಕೋರಿರುವ ನಾಯಕರು, ಅವರ ಕುಟುಂಬಸ್ಥರಿಗೆ, ಬಂಧುಮಿತ್ರರಿಗೆ ಹಾಗೂ ದೇಶಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಪರಮಾತ್ಮನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
