ಮೈಸೂರಿನಲ್ಲಿ ಕೊನೆಯುಸಿರೆಳೆದ ಗಾನ ಸರಸ್ವತಿ
ಮೈಸೂರು: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅಪ್ರತಿಮ ಧ್ವನಿಯಾಗಿ, ಕೋಟ್ಯಂತರ ಸಂಗೀತ ಪ್ರೇಮಿಗಳ ಹೃದಯ ಆಳಿದ್ದ “ದಕ್ಷಿಣ ಭಾರತದ ಗಾನಕೋಗಿಲೆ” ಎಸ್. ಜಾನಕಿ (88) ಅವರು ಶನಿವಾರ ರಾತ್ರಿ ಹಠಾತ್ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.
ಕೆಲ ದಿನಗಳಿಂದ ಕಾಲಿನ ನೋವಿನಿಂದ ಬಳಲುತ್ತಿದ್ದ ಅವರನ್ನು ಶನಿವಾರ ಮಧ್ಯಾಹ್ನ ನಗರದ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅವರ ಆಪ್ತ ಕಿಶನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಗನ ಅಗಲಿಕೆಯ ನಂತರ ತೀವ್ರ ನೊಂದಿದ್ದ ಜಾನಕಿ ಅಮ್ಮ, ಮೈಸೂರಿನ ಬೋಗಾದಿ ಪ್ರದೇಶದಲ್ಲಿರುವ ಆಪ್ತರ ಮನೆಯಲ್ಲಿ ಸಾರ್ವಜನಿಕ ಸಂಪರ್ಕದಿಂದ ದೂರ ಉಳಿದು ವಿಶ್ರಾಂತ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಕಾಲು ಜಾರಿ ಬಿದ್ದಿದ್ದರಿಂದ ಅವರು ವೀಲ್ಚೇರ್ ಆಶ್ರಯಿಸಿದ್ದರು.
ಆರು ದಶಕಗಳ ಅದ್ಭುತ ಸ್ವರ ಸವಾರಿ
1938 ಏಪ್ರಿಲ್ 23 ರಂದು ಆಂಧ್ರಪ್ರದೇಶದಲ್ಲಿ ಜನಿಸಿದ ಸಿಸ್ತ್ಲಾ ಶ್ರೀರಾಮಮೂರ್ತಿ ಜಾನಕಿ ಅವರು ತಮ್ಮ 19ನೇ ವಯಸ್ಸಿನಲ್ಲೇ (1957) ತಮಿಳು ಚಿತ್ರದ ಮೂಲಕ ಹಿನ್ನೆಲೆ ಗಾಯಕಿಯಾಗಿ ವೃತ್ತಿಜೀವನ ಆರಂಭಿಸಿದರು. ಅಲ್ಲಿಂದ ಮುಂದೆ ಸತತ 60 ವರ್ಷಗಳ ಕಾಲ ಇವರ ಕಂಠಸಿರಿ ಭಾರತೀಯ ಚಿತ್ರರಂಗವನ್ನು ಆಳಿತು. ಚಿತ್ರಗಳು, ಆಲ್ಬಮ್ಗಳು ಸೇರಿದಂತೆ ಬರೋಬ್ಬರಿ 48,000ಕ್ಕೂ ಹೆಚ್ಚು ಗೀತೆಗಳಿಗೆ ಅವರು ಧ್ವನಿಯಾಗಿದ್ದಾರೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಭಾರತದ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಮಾತ್ರವಲ್ಲದೆ ಇಂಗ್ಲಿಷ್, ಜಪಾನೀಸ್, ಜರ್ಮನ್ ಮತ್ತು ಸಿಂಹಳದಂತಹ ವಿದೇಶಿ ಭಾಷೆಗಳಲ್ಲೂ ಹಾಡಿ ಸೈ ಎನಿಸಿಕೊಂಡಿದ್ದ ಬಹುಮುಖ ಪ್ರತಿಭೆ ಇವರಾಗಿದ್ದರು. 2016 ರಲ್ಲಿ ಗಾಯನಕ್ಕೆ ಅಧಿಕೃತ ನಿವೃತ್ತಿ ಘೋಷಿಸಿದ್ದರೂ, ಅಭಿಮಾನಿಗಳ ಅಪಾರ ಒತ್ತಾಯಕ್ಕೆ ಮಣಿದು 2018 ರ ತಮಿಳಿನ ‘ಪನ್ನಾಡಿ’ ಚಿತ್ರಕ್ಕಾಗಿ ಕೊನೆಯ ಬಾರಿಗೆ ಧ್ವನಿ ನೀಡಿದ್ದರು.
ಕನ್ನಡವೇ ಜಾನಕಿ ಅಮ್ಮನ ಉಸಿರು!
ಆಂಧ್ರ ಮೂಲದವರಾಗಿದ್ದರೂ ಜಾನಕಿ ಅಮ್ಮನಿಗೆ ಕರ್ನಾಟಕ ಮತ್ತು ಕನ್ನಡ ಭಾಷೆಯ ಮೇಲೆ ಅಪಾರ ಪ್ರೀತಿ ಇತ್ತು. ತಮ್ಮ ವೃತ್ತಿಬದುಕಿನಲ್ಲಿ ಅವರು ಅತಿ ಹೆಚ್ಚು ಹಾಡುಗಳನ್ನು ಹಾಡಿದ್ದು ಕನ್ನಡದಲ್ಲೇ ಎಂಬುದು ವಿಶೇಷ. ವರನಟ ಡಾ.ರಾಜ್ಕುಮಾರ್, ಪಿ.ಬಿ. ಶ್ರೀನಿವಾಸ್, ಎಸ್ .ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಇಳಯರಾಜ ಅವರೊಂದಿಗೆ ಅತಿ ಆಪ್ತ ಒಡನಾಟ ಹೊಂದಿದ್ದರು. ರಾಜಕುಮಾರ್-ವಿಷ್ಣುವರ್ಧನ್ ಕಾಲದ ಸುವರ್ಣ ಯುಗದಿಂದ ಹಿಡಿದು ಇತ್ತೀಚಿನ ತಲೆಮಾರಿನ ನಾಯಕಿಯರವರೆಗೂ ಜಾನಕಿ ಅಮ್ಮನವರ ಧ್ವನಿ ಕನ್ನಡಿಗರ ಮನೆಮಾತಾಗಿತ್ತು.
ಸ್ವಾಭಿಮಾನದ ಸಾಕಾರ ಮೂರ್ತಿ
ಕಲೆಯ ಮೌಲ್ಯ ಮತ್ತು ದಕ್ಷಿಣ ಭಾರತದ ಕಲಾವಿದರ ಸ್ವಾಭಿಮಾನವನ್ನು ಎತ್ತಿಹಿಡಿದ ಅಪರೂಪದ ಚೇತನ ಜಾನಕಿ ಅಮ್ಮ. 2013 ರಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ ‘ಪದ್ಮಭೂಷಣ’ ಪ್ರಶಸ್ತಿಯನ್ನು ಅವರು ನಯವಾಗಿ ತಿರಸ್ಕರಿಸಿದ್ದರು. “ದಕ್ಷಿಣದ ಕಲಾವಿದರನ್ನು ಗುರುತಿಸುವಲ್ಲಿ ತಾರತಮ್ಯವಾಗುತ್ತಿದೆ. ನನ್ನ ಆರು ದಶಕಗಳ ಸೇವೆಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ಸಿಗಬೇಕೇ ಹೊರತು ಪದ್ಮ ಪ್ರಶಸ್ತಿಗಳಲ್ಲ” ಎಂದು ಸಾರಿದ ಅವರ ಧೀಮಂತಿಕೆ ಸದಾ ಸ್ಮರಣೀಯ.
ತಮ್ಮ ಜೀವಿತಾವಧಿಯಲ್ಲಿ 4 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ವಿವಿಧ ರಾಜ್ಯಗಳಿಂದ 33 ಚಲನಚಿತ್ರ ಪ್ರಶಸ್ತಿಗಳು, ಮೈಸೂರು ವಿವಿಯ ಗೌರವ ಡಾಕ್ಟರೇಟ್ ಹಾಗೂ ಕರ್ನಾಟಕ ಸರ್ಕಾರದ ‘ರಾಜ್ಯೋತ್ಸವ ಪ್ರಶಸ್ತಿ’ಗೆ ಅವರು ಭಾಜನರಾಗಿದ್ದರು.
ಗಣ್ಯರ ಕಂಬನಿ: ಶಾಸಕ ಜಿ.ಟಿ. ದೇವೇಗೌಡ ಭೇಟಿ
ವಿಷಯ ತಿಳಿಯುತ್ತಿದ್ದಂತೆ ಅಪೋಲೊ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಜಿ.ಟಿ. ದೇವೇಗೌಡ ಅವರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. “ಎಸ್.ಪಿ.ಬಿ ಹಾಗೂ ಜಾನಕಿ ಅವರ ಜುಗಲ್ಬಂದಿ ಹಾಡುಗಳೆಂದರೆ ನಮಗೆ ಪಂಚಪ್ರಾಣ. ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಇವರ ಗಾಯನ ನಮ್ಮ ಹೃದಯದಲ್ಲಿ ಎಂದಿಗೂ ಅಮರ. ಅವರ ನಿಧನ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ” ಎಂದು ಶೋಕ ವ್ಯಕ್ತಪಡಿಸಿದ್ದಾರೆ.
ಜಾನಕಿ ಅಮ್ಮನವರ ಭೌತಿಕ ಕಾಯ ಕಣ್ಮರೆಯಾಗಿದ್ದರೂ, ಅವರು ಬಿಟ್ಟುಹೋಗಿರುವ 48 ಸಾವಿರಕ್ಕೂ ಹೆಚ್ಚು ಮಧುರ ಗೀತೆಗಳು ಜಗತ್ತಿರುವವರೆಗೂ ಪ್ರತಿಯೊಬ್ಬ ಸಂಗೀತ ಪ್ರೇಮಿಯ ಎದೆಯಲ್ಲಿ ಮೊಳಗುತ್ತಲೇ ಇರುತ್ತವೆ.
ಎಸ್ ಜಾನಕಿ ಅವರ ನಿಧನಕ್ಕೆ ಪೇಜಾವರ ಶ್ರೀ ಸಂತಾಪ
ತಮ್ಮ ಅಪೂರ್ವ ಕಂಠಸಿರಿಯಿಂದ ಸಂಗೀತ ಕ್ಷೇತ್ರಕ್ಕೆ ಅನುಪಮ ಕೊಡುಗೆ ಸಲ್ಲಿಸಿದ ಶ್ರೇಷ್ಠ ಕಲಾವಿದೆಯ ಅಗಲುವಿಕೆ ಕಲಾಕ್ಷೇತ್ರಕ್ಕೆ ದೊಡ್ಡ ನಷ್ಟ. ತಮ್ಮ ಸುಶ್ರಾವ್ಯ ಸಹಸ್ರ ಸಹಸ್ರ ಹಾಡುಗಳ ಮೂಲಕ ಅವರು ಕೋಟ್ಯಂತರ ಜನರ ಮನೆ ಮನಸ್ಸುಗಳಲ್ಲಿ ಬಹುಕಾಲ ಸ್ಮರಣೆಯಲ್ಲಿರುತ್ತಾರೆ. ಅವರಿಗೆ ಗಾನ ನಾಟ್ಯಲೋಲನಾದ ಶ್ರೀಕೃಷ್ಣನು ಸದ್ಗತಿಯನ್ನು ಕರುಣಿಸಲಿ.
- ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಶ್ರೀ ಪೇಜಾವರ ಮಠ
