ಪ್ರಖ್ಯಾತ ಗಾಯಕಿ ಎಸ್. ಜಾನಕಿ ಅವರು ಗಾನ ಸರಸ್ವತಿಯಲ್ಲಿ ಲೀನರಾದ ಹಿನ್ನೆಲೆಯಲ್ಲಿ ಅವರು ಹಾಡಿರುವ ಗೀತೆಗಳ ಮೊದಲ ಸಾಲುಗಳನ್ನೇ ಪೋಣಿಸಿ ಕಮಲಾಕರ ಕೆ.ಆರ್ ತಲವಾಟ ಅವರು ಸುಂದರವಾದ ಗೀತ ನಮನ ಗುಚ್ಛವನ್ನು ವಿಕ್ರಮ ಓದುಗರಿಗಾಗಿ ಕಳುಹಿಸಿಕೊಟ್ಟಿದ್ದಾರೆ. ಗಾನ ಕೋಗಿಲೆಗೆ ಈ ಮೂಲಕ ನಮ್ಮದೊಂದು ಶ್ರದ್ಧಾಂಜಲಿ.
ಗೋವಿಂದ ಪೈ ಅವರ ಕುಲವಧು ಚಿತ್ರದ ‘ತಾಯೆ ಬಾರ ಮೊಗವ ತೋರ…’ ಎಂಬ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಹಾಡು ಹಾಡಿ ‘ಕನ್ನಡಿಗರ ಮಾತೆ’ಯಾದಿರಿ!
ದ ರಾ ಬೆಂದ್ರೆಯವರ ‘ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ” ಎಂದು ಯುಗಾದಿಯಂದು ಮತ್ತೆ ಮತ್ತೆ ನಿಮ್ಮ ಕಂಚಿನ ಕಂಠ ನೆನಪಾಗುವ ಹಾಗೆ ಮಾಡಿದಿರಿ!
ವಿಜಯ ನರಸಿಂಹ ಅವರ “ಗಜಮುಖನೆ ಗಣಪತಿಯೆ ನಿನಗೆ ವಂದನೆ ..” ಎನ್ನುತ್ತಾ ವಿನಾಯಕನನ್ನು ಭಜಿಸಿ ಪ್ರತೀ ಗಣೇಶನ ಹಬ್ಬದಲ್ಲೂ ಈ ಹಾಡು ಕನ್ನಡದ ನೆಲದುದ್ದಕ್ಕೂ ರಾರಾಜಿಸುವಂತೆ ಮಾಡಿದಿರಿ!
ಆರ್ ಎನ್ ಜಯಗೋಪಾಲರ ಬರೆದ “ ಇವಳೇ ವೀಣಾ ಪಾಣಿ.. ತುಂಗಾ ತೀರ ವಿಹಾರಿಣಿ …” ಎಂದು ಭಕ್ತಿಯಿಂದ ಭಾವಪರವಶವಾಗಿ ಶೃಂಗೇರಿಯ ಜ್ಞಾನದೇವತೆ ಸರಸ್ವತಿಯನ್ನು ನಿಮ್ಮ ಕಂಠಸಿರಿಯಲ್ಲಿ ಆರಾಧಿಸಿದಿರಿ!
ಉದಯಶಂಕರವರ “ಪೂಜಿಸಲೆಂದೇ ಹೂಗಳ ತಂದೆ.. ತೆರೆಯೊ ಬಾಗಿಲನು..” ಎಂದು ರಾಮನನ್ನು ಎಷ್ಟು ಭಕ್ತಿಭಾವದಿಂದ ಸುಮಧುರವಾಗಿ ಬೇಡಿಕೊಂಡಿರಿ!
ಉಪಾಸನೆಯಲ್ಲಿ “ಭಾರತ ಭೂಶಿರ ಮಂದಿರ ಸುಂದರಿ…” ಎಂದು ದೇಶದ ತುದಿಯ ಮಂದಿರದಲ್ಲಿ ನೆಲೆಸಿರುವ ಕನ್ಯಾಕುಮಾರಿ ದೇವಿಯನ್ನು ಸ್ತುತಿಸಿದಿರಿ!
ಉದಯಶಂಕರ್ ಅವರ “ಬಾನಲ್ಲು ನೀನೆ ಭುವಿಯಲ್ಲು ನೀನೆ ಎಲ್ಲೆಲ್ಲು ನೀನೆ…”ಎನ್ನುತ್ತಾ ಕನ್ನಡ ಚಿತ್ರರಂಗದ ಪ್ರೇಮಿಗಳ ಮನದಲ್ಲೂ ನೀವೇ ವಿರಾಜಿಸಿದಿರಿ!
ಕುವೆಂಪುರವರ ‘ಯಾವಜನ್ಮದ ಮೈತ್ರಿ ಈ ಜನ್ಮದಲ್ಲಿ ಬಂದು ..” ಎಂದು ಕನ್ನಡಿಗರನ್ನು ನಿಮ್ಮ ಪ್ರೀತಿಯ ಬಂಧನದಲ್ಲಿ ಬಂಧಿಸಿಬಿಟ್ಟಿರಿ!
ಗೆಜ್ಜೆಪೂಜೆ ಚಿತ್ರದಲ್ಲಿ “ಗಗನವು ಎಲ್ಲೋ ಭೂಮಿಯು ಎಲ್ಲೋ ಒಂದೂ ಅರಿಯೇನಾ ..” ಎಂದು ಕಲ್ಪನಾ ಅವರು ಜೀವನದಲ್ಲಿ ಮೊದಲ ಬಾರಿಗೆ ಪ್ರೀತಿಯ ಸವಿಯನ್ನು ಸವಿಯುತ್ತಾ ಪ್ರೇಮಿಗಳಿಗೆ ಆಕಾಶ ಮತ್ತು ಭೂಮಿ ಎಲ್ಲವೂ ಒಂದೇ ಎನ್ನುವ ಅವರ ಅದ್ಭುತ ಅಭಿನಯಕ್ಕೆ ಅಷ್ಟೇ ಮಧುರವಾದ ಧ್ವನಿ ನೀಡಿ ಆ ಹಾಡು ಎಂದೆಂದಿಗೂ ಚಿರಸ್ಥಾಯಿಯಾಗುವಂತೆ ಮಾಡಿ ಬಿಟ್ಟಿರಿ!.
ಬೇಂದ್ರೆಯವರ “ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೊಯ್ದ …” ಎಂದು ಎಷ್ಟೊಂದು ಸುಂದರವಾಗಿ ಸೂರ್ಯೋದಯದ ಚೆಲುವನ್ನು ವರ್ಣಿಸಿದಿರಿ. ಕತ್ತಲಾದ ಮೇಲೂ ಈ ಹಾಡು ಕೇಳಿದರೆ ಕೇಳುಗರ ಕಣ್ಮುಂದೆ ಉದಯರವಿಯನ್ನು ತಂದು ನಿಲ್ಲಿಸಿಬಿಟ್ಟಿರಲ್ಲಾ!
ಕನ್ಯಾರತ್ನದಲ್ಲಿ “ಸುವ್ವಿ ಸುವ್ವಿ ಸುವಾಲೆ ಕಣ್ಣೆ ಕರೆಯೋಲೆ” ಎಂದು ತುಂಬಾ ಇಂಪಾಗಿ ಹಾಡಿ ನಟಿಯ ಕಣ್ಣಿನ ನೋಟಕ್ಕೆ ಮೆರಗು ನೀಡಿದಿರಿ!
ಹುಲಿಯ ಹಾಲಿ ಮೇವಿನಲ್ಲಿ “ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ ಕಣ್ಣಲ್ಲಿ ತುಂಬಿರಲು ಮನದಲ್ಲಿ…” ಎಂದು ಹಾಡುತ್ತಾ ಮುಂದೆ “ಸ್ವಾತಿ ಮುತ್ತಿನ ಮಳೆಹನಿ” ಯೂ ಆಗಿ ಧರೆಗಿಳಿದು ಎಲ್ಲರ ಮನೆ, ಮನದಲ್ಲಿ ಬತ್ತದ ಒರತೆಯಾಗಿಬಿಟ್ಟಿರಲ್ಲ!
ಸೀತಾ ಚಿತ್ರದಲ್ಲಿ ಆರ್ ಎನ್ ಜಯಗೋಪಾಲ್ ವಿರಚಿತ
“ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲ್ಲಿ ಬಂದು ನಿಂತೆ ಹೇಗೊ ಏನೊ ನನ್ನ ಮನದ ಗುಡಿಯಲಿ…” ಎಂದು ಪಿಬಿಎಸ್ ಜೊತೆಯಲ್ಲಿ ಹಾಡುತ್ತಾ ಪಾಡುತ್ತಾ ಕನ್ನಡ ಚಿತ್ರಪ್ರೇಮಿಗಳ ಹೃದಯದ ಗುಡಿಗಳಲ್ಲಿ ಸ್ಥಿರವಾಗಿ ನಿಮ್ಮ ಹೆಸರು ಅಜರಾಮರವಾಗುವಂತೆ ಮಾಡಿ ಬಿಟ್ಟಿರಿ!
ಆದರೆ ಅದ್ಯಾಕೊ ಕೆ ವಿ ಪುಟ್ಟಪ್ಪನವರ “ದೋಣಿ ಸಾಗಲಿ ಮುಂದೆ ಹೋಗಲಿ ..” ಎಂದು ಹಾಡುತ್ತಾ ನಮಗೆ ಕಾಣದ ಯಾವುದೊ ದೂರ ತೀರವ ಸೇರಲು ಹೊರಟು ಬಿಟ್ಟಿರಿ!
ಪುರಂದರ ದಾಸರ “ಪೋಗದಿರಲೊ ರಂಗ ಬಾಗಿಲಿಂದಾಚೆಗೆ..” ಎಂದು ನೀವೆ ಹಾಡಿ ಈ ಭವ ಬಂಧನವ ದಾಟಿ ಬಹುದೂರ ಸಾಗಿ ಬಿಟ್ಟಿರಲ್ಲ!!
ರಾಜಕುಮಾರ್ -ಕಲ್ಪನಾ ಜೋಡಿಯ ಗಂಧದಗುಡಿಯಲ್ಲಿ ಚಿ. ಉದಯಶಂಕರ್ ಬರೆದ “ ಎಲ್ಲೂ ಹೋಗಲ್ಲ.. ಮಾಮ ಎಲ್ಲೂ ಹೋಗಲ್ಲ… ಎಂದಿಗು ನಾನು ನಿನ್ನನು ಬಿಟ್ಟು ದೂರ ಹೋಗೋಲ್ಲ…” ಎಂದು ಪಿ ಬಿ ಶ್ರೀನಿವಾಸ ಜೊತೆಗೂಡಿ ಬಾಲಫ್ರತಿಭೆ ಪ್ರೇಮಕುಮಾರಿಗೆ ಕಂಠಸಿರಿ ನೀಡಿ ಈಗ ಬಹುದೂರ ಸಾಗಿದಿರಲ್ಲ!
“ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು.. ಎಂದು ಹಾಡಿ, ಹೇಳಲಾಗದ ದು:ಖವನು ಸಾಹಿತ್ಯ ಪ್ರಿಯರಿಗೆ ಕೊಟ್ಟು ದೂರದ ಗಗನದಲ್ಲಿ ಮಿನುಗುವ ನಕ್ಷತ್ರವಾಗಿಬಿಟ್ಟಿರಲ್ಲ!
ನೀವೇ ಹಾಡಿದಂತೆ
ಕಂಗಳು ವಂದನೆ ಹೇಳಿದೆ
ಹೃದಯವು ತುಂಬಿ ಹಾಡಿದೆ
ಹಾಡದೆ ಉಳಿದಿಹ ಮಾತು ನೂರಿದೆ.
ಆದರೆ ಇದೇ ನಮ್ಮ ಇಚ್ಛೆ ಜಾನಕಮ್ಮ “ನೀ ನಡೆವ ಹಾದಿಯಲಿ ನಗೆ ಹೂವು ಬಾಡದಿರಲಿ…” .
2016ರಲ್ಲಿ, ನಿಮ್ಮ 78ನೇ ವಯಸ್ಸಿನಲ್ಲಿ ಹಾಡುವುದನ್ನ ನಿಲ್ಲಿಸಿದಿರಿ. ಆದರೆ ಈಗ ನಿಮ್ಮ ದನಿಗೆ ಪೂರ್ಣವಿರಾಮ ಹಾಕಿ ಬಿಟ್ಟಿರಲ್ಲ!
ಬಹುಶಃ ಇವರ ಧ್ವನಿಯ ಜೊತೆ ಅಷ್ಟೇ ಸೊಗಸಾಗಿ ಸಾಹಿತ್ಯ ರಚಿಸಿದವರಿಗೆ, ಸಂಗೀತ ನೀಡಿದವರಿಗೆ, ಇವರು ಹಾಡಿದ ಚಿತ್ರದಲ್ಲಿ ನಾಯಕ ನಾಯಕಿಯಾಗಿ ನಟಿಸಿದವರೆಲ್ಲರನ್ನೂ ನೆನಪಿಸಿಕೊಳ್ಳಬೇಕಾದುದು ನಮ್ಮ ಆದ್ಯ ಕರ್ತವ್ಯ.
ಹೋಗಿಬನ್ನಿ ಜಾನಕಮ್ಮ
ಸಾಧ್ಯವಾದರೆ
ಮತ್ತೆ ಬನ್ನಿ
ಕನ್ನಡದ ತೇರನೆಳೆಯಲು
ಮತ್ತೊಮ್ಮೆ ಮಗದೊಮ್ಮೆ!
ಕಮಲಾಕರ ಕೆ ಆರ್, ತಲವಾಟ
