ಬೆಂಗಳೂರು: ರಾಜ್ಯ ಬಿಜೆಪಿಯ ಹಿರಿಯ ಮುಖಂಡ ಮತ್ತು ಮಾಜಿ ಸಚಿವ ರಾಮಚಂದ್ರ ಗೌಡ (88) ಅವರು ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಮಚಂದ್ರ ಗೌಡರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಬೆಳಗ್ಗೆ 6 ಗಂಟೆ ಅವರು ಕೊನೆಯುಸಿರೆಳೆದಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯಿಂದ ಬಂದಿದ್ದ ರಾಮಚಂದ್ರಗೌಡರು ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ತಳಮಟ್ಟದಿಂದ ಕಟ್ಟುವಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಕೆಲಸ ಮಾಡಿದ್ದರು. 1970ರಲ್ಲಿ ರಾಜಕೀಯಕ್ಕೆ ಬಂದಿದ್ದ ಅವರು ಸತತವಾಗಿ ಐದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.
ಬಿ.ಎಸ್. ಯಡಿಯೂರಪ್ಪ ಸಂತಾಪ
ರಾಮಚಂದ್ರ ಗೌಡರ ನಿಧನಕ್ಕೆ ಸಂತಾಪ ಸೂಚಿಸಿರುವ ಬಿ.ಎಸ್. ಯಡಿಯೂರಪ್ಪ ಅವರು “ಮತ್ತೋರ್ವ ಸೋದರನನ್ನು ನಾನು ಕಳೆದುಕೊಂಡಿದ್ದೇನೆ. ನನ್ನ ದಶಕಗಳ ಕಾಲದ ಆತ್ಮೀಯ ಒಡನಾಡಿ, ಹಿರಿಯ ನಾಯಕ ಹಾಗೂ ಮಾಜಿ ಸಚಿವ ಶ್ರೀ ರಾಮಚಂದ್ರ ಗೌಡರ ನಿಧನದ ಸುದ್ದಿ ಅತೀವ ದುಃಖವನ್ನು ತಂದಿದೆ. ಜನಸಂಘದ ದಿನಗಳಿಂದಲೂ ಹೆಗಲಿಗೆ ಹೆಗಲು ಕೊಟ್ಟು, ಹಗಲಿರುಳು ಶ್ರಮಿಸಿ, ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಜೊತೆಯಾಗಿ ಕಟ್ಟಿದ ಹೋರಾಟದ ದಿನಗಳು ಕಣ್ಣಮುಂದೆ ಸುಳಿಯುತ್ತಿವೆ. ನನ್ನ ಸಚಿವ ಸಂಪುಟದ ಸಹೋದ್ಯೋಗಿಯಾಗಿ ಅವರ ಆಡಳಿತಾತ್ಮಕ ದಕ್ಷತೆ ಹಾಗೂ ಬದ್ಧತೆಯನ್ನು ನಾನು ಅತ್ಯಂತ ಹತ್ತಿರದಿಂದ ಕಂಡಿದ್ದೇನೆ. ಅವರ ಅಗಲಿಕೆ ಪಕ್ಷಕ್ಕೆ, ಸಾರ್ವಜನಿಕ ಕ್ಷೇತ್ರಕ್ಕೆ ಮಾತ್ರವಲ್ಲ, ವೈಯಕ್ತಿಕವಾಗಿ ನನ್ನಲ್ಲಿಯೂ ದೊಡ್ಡ ನಿರ್ವಾತವನ್ನು ಸೃಷ್ಟಿಸಿದೆ. ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು ದಯಪಾಲಿಸಲಿ, ಅವರ ಕುಟುಂಬ ಸದಸ್ಯರಿಗೆ, ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.” ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂತಾಪ
“ಹಿರಿಯ ನಾಯಕರು, ಮಾಜಿ ಸಚಿವರಾದ ಶ್ರೀ ರಾಮಚಂದ್ರಗೌಡರ ನಿಧನದ ಸುದ್ದಿ ತೀವ್ರ ದುಃಖವನ್ನುಂಟು ಮಾಡಿದೆ. ರಾಜ್ಯದ ಅಭಿವೃದ್ಧಿಗೆ ಹಾಗೂ ಸಾರ್ವಜನಿಕರ ಹಿತಾಸಕ್ತಿಗೆ ಅವರು ನೀಡಿದ ಕೊಡುಗೆಗಳು ಅಪಾರ. ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಶ್ರೀ ರಾಮಚಂದ್ರಗೌಡರು ಸಲ್ಲಿಸಿದ ಸೇವೆಯೂ ಸದಾ ನೆನಪಿನಲ್ಲಿ ಉಳಿಯುವಂತದ್ದು. ಸರಳ, ಸಜ್ಜನ ರಾಜಕಾರಣಿಯಾಗಿದ್ದ ಶ್ರೀ ರಾಮಚಂದ್ರಗೌಡರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಅಗಲಿಕೆಯಿಂದ ಉಂಟಾಗಿರುವ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ, ಬಂಧುಬಳಗಕ್ಕೆ ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಂತಾಪ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ “ಭಾರತೀಯ ಜನತಾ ಪಕ್ಷದ ಹಿರಿಯ ಧುರೀಣರು, ಮಾಜಿ ಸಚಿವರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ರಾಮಚಂದ್ರ ಗೌಡ ಅವರ ಅಗಲಿಕೆಯ ಸುದ್ದಿ ತೀವ್ರ ಆಘಾತ ಮತ್ತು ನೋವುಂಟು ಮಾಡಿದೆ. ಅತ್ಯಂತ ಸರಳ ಸಜ್ಜನಿಕೆಯ ಮೂರ್ತಿಯಾಗಿದ್ದ ಅವರು, ಅಪಾರ ಸಂಘಟನಾ ಕೌಶಲ್ಯ ಹಾಗೂ ಪಕ್ಷದ ಕಾರ್ಯಕರ್ತರ ಮೇಲಿನ ಅಪಾರ ಪ್ರೀತಿ, ಕಾಳಜಿಯಿಂದ ಎಲ್ಲರ ಮನಗೆದ್ದ ನಾಯಕರಾಗಿದ್ದರು. ಪಕ್ಷದ ಸಂಘಟನೆಗೆ ಮತ್ತು ಸಾರ್ವಜನಿಕ ಸೇವೆಗೆ ಅವರು ಸಲ್ಲಿಸಿದ ಕೊಡುಗೆ ಸದಾ ಸ್ಮರಣೀಯ. ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಅವರ ಅಗಲಿಕೆಯ ತೀವ್ರ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಸ್ಥರಿಗೆ, ಬಂಧು-ಮಿತ್ರರಿಗೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.” ಎಂದು ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಂತಾಪ
“ಪಕ್ಷದ ಹಿರಿಯ ನಾಯಕರು, ಮಾರ್ಗದರ್ಶಕರು, ಮಾಜಿ ಸಚಿವರು, ಸುಮಾರು ಮೂರು ದಶಕಗಳ ಕಾಲ ಬೆಂಗಳೂರು ಪದವೀಧರರ ಕ್ಷೇತ್ರವನ್ನು ಸಮರ್ಥವಾಗಿ ಪ್ರತಿನಿಧಿಸಿ ಆದರ್ಶಪ್ರಾಯ ಶಾಸಕರಾಗಿದ್ದ ಧೀಮಂತ ನೇತಾರ ಶ್ರೀ ರಾಮಚಂದ್ರ ಗೌಡರು ವಿಧಿವಶರಾದ ಸುದ್ದಿ ಅತೀವ ಆಘಾತ ಹಾಗೂ ದುಃಖವನ್ನು ಉಂಟು ಮಾಡಿದೆ. ಸಂಘದ ಸ್ವಯಂಸೇವಕರಾಗಿ ಸಾರ್ವಜನಿಕ ಜೀವನ ಆರಂಭಿಸಿ, ಜನಸಂಘದ ದಿನಗಳಿಂದಲೂ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ದುಡಿದ ಶ್ರೀ ರಾಮಚಂದ್ರ ಗೌಡರ ನಿಧನದಿಂದ ಪಕ್ಷ ತನ್ನ ಹಿರಿಯ ನಾಯಕನನ್ನು ಕಳೆದುಕೊಂಡಿದ್ದು ಭರಿಸಲಾಗದ ನಷ್ಟವಾಗಿದೆ. ಬೆಂಗಳೂರು ಪಾಲಿಕೆ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿ ಜನಸಾಮಾನ್ಯರ ಧ್ವನಿಯಾಗಿ ಅವರು ಸಲ್ಲಿಸಿದ ಸುದೀರ್ಘ ಸೇವೆ ಆದರ್ಶಪ್ರಾಯವಾದದ್ದು. ಜೊತೆಗೆ ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ, ಬೆಳೆಸುವಲ್ಲಿ ಅವರು ವಹಿಸಿದ ಮಹತ್ತರ ಪಾತ್ರ ಮತ್ತು ನೀಡಿದ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪೂಜ್ಯ ತಂದೆ ಶ್ರೀ ಬಿ.ಎಸ್.ಯಡಿಯೂರಪ್ಪನವರ ಆಪ್ತ ಒಡನಾಡಿಯಾಗಿದ್ದ ಅವರನ್ನು ಹತ್ತಿರದಿಂದಲೂ ನಾನು ಕಂಡಿದ್ದೇನೆ. ಅವರ ಆಡಳಿತಾತ್ಮಕ ದಕ್ಷತೆ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿ ಸದಾ ಪ್ರೇರಣಾದಾಯಿ, ಅವರ ಆತ್ಮೀಯತೆ, ಮಾರ್ಗದರ್ಶನಗಳು ಅವಿಸ್ಮರಣೀಯ. ಒಬ್ಬ ಸಹೃದಯಿ ಮತ್ತು ಅಜಾತಶತ್ರು ನಾಯಕರಾಗಿದ್ದ ಅವರನ್ನು ಕಳೆದುಕೊಂಡಿರುವುದು ವೈಯಕ್ತಿಕವಾಗಿ ಕೂಡ ನನಗೆ ಅತ್ಯಂತ ನೋವನ್ನುಂಟು ಮಾಡಿದೆ. ಹಿರಿಯರಾದ ಶ್ರೀ ರಾಮಚಂದ್ರ ಗೌಡರ ನಿಧನದಿಂದ ರಾಜ್ಯ ರಾಜಕಾರಣದ ಅತ್ಯಂತ ಹಿರಿಯ ಮತ್ತು ಗೌರವಾನ್ವಿತ ಕೊಂಡಿಯೊಂದು ಕಳಚಿದಂತಾಗಿದೆ. ದೇವರು ಆ ಹಿರಿಯ ಚೇತನಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಅವರ ಪುತ್ರ ಶ್ರೀ ಸಪ್ತಗಿರಿ ಗೌಡ ಹಾಗೂ ಅವರ ಸಮಸ್ತ ಕುಟುಂಬ ವರ್ಗದವರಿಗೆ, ಅಪಾರ ಅಭಿಮಾನಿಗಳಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಹಿರಿಯರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಂತಾಪ ಸೂಚಿಸಿದ್ದಾರೆ.
