ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಮೊದಲ ತಲೆಮಾರಿನ ಹಿರಿಯ ಸಂಘ ಕಾರ್ಯಕರ್ತ ಹಾಗೂ ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕ ಶ್ರೀ ಅನಂತರಾಜ್ ಜೈನ್ (ಅನಂತರಾಜ ಮಾಸ್ಟರ್) (93) ಅವರು ಶಿವಮೊಗ್ಗದ ಗೋಪಾಳದಲ್ಲಿರುವ ತಮ್ಮ ಹಿರಿಯ ಪುತ್ರಿಯ ನಿವಾಸದಲ್ಲಿ ಗುರುವಾರ (ಜುಲೈ 16) ನಿಧನರಾದರು.
ಕೆಲವು ವರ್ಷಗಳ ಹಿಂದೆ ಪತ್ನಿ ನಿಧನರಾದ ಬಳಿಕ, ಅವರು ತಮ್ಮ ಹಿರಿಯ ಪುತ್ರಿ ಶೋಭಾ ಅವರ ಮನೆಯಲ್ಲಿ ನೆಲೆಸಿದ್ದರು. ಮೃತರು ಅಪಾರ ಬಂಧು-ಮಿತ್ರರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.
ಐದು ದಶಕಗಳ ಸಂಘ ಪಯಣ:
ಮೂಲತಃ ಹೊಸನಗರ ತಾಲ್ಲೂಕಿನ ಹುಂಚದವರಾದ ಅನಂತರಾಜ್ ಜೈನ್ ಅವರು, 1950ರ ದಶಕದ ಆರಂಭದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸಂಪರ್ಕಕ್ಕೆ ಬಂದಿದ್ದರು. ವೃತ್ತಿಯ ನಿಮಿತ್ತ ತೀರ್ಥಹಳ್ಳಿ ತಾಲ್ಲೂಕಿನ ವಿವಿಧೆಡೆ ಸೇವೆ ಸಲ್ಲಿಸುತ್ತಾ, ಸಂಘ ಕಾರ್ಯದ ಬೆಳವಣಿಗೆಗೆ ಶ್ರಮಿಸಿದ್ದರು. ತೀರ್ಥಹಳ್ಳಿಯ ಬೊಮ್ಮರಸಯ್ಯನ ಅಗ್ರಹಾರದಲ್ಲಿ ಸುದೀರ್ಘ ಕಾಲ ನೆಲೆಸಿದ್ದ ಅವರು, ತಾಲ್ಲೂಕಿನಲ್ಲಿ ಸಂಘದ ತಳಪಾಯ ಗಟ್ಟಿಗೊಳಿಸಿದ ಪ್ರಮುಖರಲ್ಲಿ ಕೊನೆಯ ಕೊಂಡಿಯಾಗಿದ್ದರು.
ನುಡಿನಮನ: ಸರಳತೆ ಮತ್ತು ನಿಷ್ಠೆಯ ಅಪೂರ್ವ ಚೇತನ
ತೀರ್ಥಹಳ್ಳಿಯಲ್ಲಿ ಸಂಘದ ಸಿದ್ಧಾಂತ ಮತ್ತು ರಾಷ್ಟ್ರೀಯ ಚಿಂತನೆಗೆ ಭದ್ರ ಬುನಾದಿ ಹಾಕಿದ ಪುರುಷೋತ್ತಮರಾಯರು, ಚಕ್ಕೋಡಬೈಲು ಬೆನಕ ಭಟ್ಟರು, ತಾರಗೊಳ್ಳಿ ನಾಗರಾಜ ರಾಯರು, ನಂಜುಂಡಯ್ಯ ಹಾಗೂ ಬಾಳಿಗರಂತಹ ಮಹನೀಯರ ಸಾಲಿಗೆ ಸೇರಿದವರು ಅನಂತರಾಜರು. 93 ವರ್ಷಗಳ ತುಂಬು ಜೀವನ ನಡೆಸಿದ ಅವರು ಸ್ವಯಂಸೇವಕನ ಬದುಕು ಹೇಗಿರಬೇಕು ಎಂಬುದಕ್ಕೆ ಜೀವಂತ ಉದಾಹರಣೆಯಾಗಿದ್ದರು.
ಅನಂತರಾಜರಿಗೆ ಐವರು ಮಕ್ಕಳು. ನಾಲ್ಕು ಹೆಣ್ಣು, ಕೊನೆಯವನು ಮಗ. ಅವರಲ್ಲಿ ಒಬ್ಬ ಮಗಳಿಗೆ ಬುದ್ಧಿ ಮಾಂದ್ಯತೆ ಇತ್ತು. ನಿರಂತರ ನೋವುಂಡ ಅನಂತರಾಜರು ಅದನ್ನು ತಮ್ಮಲ್ಲೇ ನುಂಗಿ ನಲಿವನ್ನಷ್ಟೇ ಹಂಚಿದವರು. ತಮ್ಮ ಸಹ ಧರ್ಮಿಣಿಯ ನಿಧನದ ನಂತರ ಅನಿವಾರ್ಯತೆಯಿಂದ ತೀರ್ಥಹಳ್ಳಿಯ ತಮ್ಮ ಮನೆಯನ್ನು ಮಾರಿ ಹಿರಿಯ ಮಗಳ ಶಿವಮೊಗ್ಗದ ಮನೆಯಲ್ಲಿ ಜೀವನ ಸಂಧ್ಯೆಯನ್ನು ಕಳೆದವರು.
ಅನಂತರಾಜರದು 1952 ರಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಕಿರಣಕೆರೆಯಲ್ಲಿ ಪ್ರಾಥಮಿಕ ಶಾಲಾ ಅಧ್ಯಾಪಕರಾಗಿ ಶಿಕ್ಷಕ ವೃತ್ತಿಜೀವನ ಆರಂಭ. ಆರಂಭದ ದಿನಗಳಲ್ಲಿಯೇ ಮನೆಯಲ್ಲಿ ದೊರೆತ ಸಹಜ ಸಂಸ್ಕಾರದಿಂದ “ಸತ್ಯಂ ವದ ಧರ್ಮಂ ಚರ” ಎಂಬ ಸ್ಮೃತಿ ವಾಕ್ಯವು ಜೀವನಕ್ರಮವಾಗಿತ್ತು. ಹಾಗಾಗಿ ಶಾಲೆಯ ಮಾಸ್ಟರ್ ಆಗಿದ್ದಾಗ ಆಚರಿಸಿದದನ್ನೇ ಹೇಳುವ ಶ್ರೀ ರಾಮಕೃಷ್ಣರ ಜೀವನವನ್ನೇ ಆದರ್ಶವಾಗಿ ಸ್ವೀಕರಿಸಿದವರು ಅನಂತರಾಜುರು. ಶಾಲಾ ಪಠ್ಯಕ್ರಮದಲ್ಲಿ ಕಾಫಿಯ ಬಗ್ಗೆ ಆರೋಗ್ಯಕ್ಕೆ ಹಾನಿಕರ ಮತ್ತು ವಿಷಕಾರಿ ಎಂಬ ವಾಕ್ಯ ಆ ದಿನಗಳಲ್ಲಿತ್ತು. ಅಲ್ಲಿಯವರೆಗೆ ಪ್ರತಿನಿತ್ಯ ಕಾಫಿ ಕುಡಿಯುತ್ತಿದ್ದವರು ಪಾಠ ಮಾಡಲು ಸಿದ್ದರಾಗುವ ಮೊದಲು ತಮ್ಮ ಜೀವನದಲ್ಲಿ ಮತ್ತೆಂದು ಕಾಫಿ ಕುಡಿಯುವುದಿಲ್ಲವೆಂಬ ಸಂಕಲ್ಪದೊಂದಿಗೆ ಪಾಠ ಮಾಡಿ ಅದರಂತೆ ನಡೆದುಕೊಂಡ ಮಹಾನುಭಾವರು.
ಸರಳತೆಯ ಸಾಕಾರ ಮೂರ್ತಿ: ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಅವರ ನಡೆ-ನುಡಿಯಲ್ಲಿ ಕಿಂಚಿತ್ತೂ ವ್ಯತ್ಯಾಸವಿರಲಿಲ್ಲ. “ಆಡಿಯೂ ಮಾಡುವನು ರೂಢಿಯೊಳಗುತ್ತಮನು” ಎಂಬ ಉಕ್ತಿಗೆ ಅವರ ಬದುಕೇ ಸಾಕ್ಷಿಯಾಗಿತ್ತು.
ಪ್ರಸಿದ್ಧಿಯಿಂದ ದೂರ: ಯಾವುದೇ ಸಭೆ-ಬೌದ್ಧಿಕಗಳಲ್ಲಿ ಮುಂಚೂಣಿಯಲ್ಲಿ ನಿಲ್ಲದಿದ್ದರೂ, ಸದ್ದಿಲ್ಲದೆ ರಾಷ್ಟ್ರಹಿತಕ್ಕಾಗಿ ದುಡಿಯುವ ಅಪರೂಪದ ಗುಣ ಅವರದಾಗಿತ್ತು. ನಿಷ್ಕಲ್ಮಶ, ನಿಸ್ಪೃಹ ಮತ್ತು ನಿರಹಂಕಾರದ ಮೇರು ವ್ಯಕ್ತಿತ್ವ ಅವರದಾಗಿತ್ತು.
ಸಾಹಿತ್ಯ ಪರಿಚಾರಿಕೆ: ತಮ್ಮ 80ನೇ ವಯಸ್ಸಿನವರೆಗೂ ಕಾಲ್ನಡಿಗೆ ಅಥವಾ ಸೈಕಲ್ ಮೂಲಕವೇ ಸಂಚರಿಸುತ್ತಿದ್ದ ಅವರು, ರಾಷ್ಟ್ರೀಯ ಸಾಹಿತ್ಯದ ಪುಸ್ತಕದ ಕಟ್ಟುಗಳನ್ನು ಹಾಗೂ ದಿನಪತ್ರಿಕೆಗಳನ್ನು ಹೊತ್ತು ಮಾರುತ್ತ್ತಾ ಜ್ಞಾನದಾಸೋಹ ನಡೆಸಿದ್ದರು. ಹೊರನೋಟಕ್ಕೆ ಕಠೋರ ಎನಿಸಿದರೂ, ಅಂತರಂಗದಲ್ಲಿ ಅಪಾರ ಕಾರುಣ್ಯ ಹೊಂದಿದ್ದರು.
“ಶುದ್ಧ ಸಾತ್ವಿಕ ಪ್ರೇಮವೇ ಕಾರ್ಯಕ್ಕೆ ಆಧಾರ” ಎಂಬ ಸಂಘದ ಧ್ಯೇಯವಾಕ್ಯಕ್ಕೆ ಅವರ ಬದುಕು ಕೈಗನ್ನಡಿಯಾಗಿತ್ತು. ಅವರ ನಿಧನದಿಂದ ಸಮಾಜವು ಒಬ್ಬ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ. ಅವರ ಪವಿತ್ರ ಸ್ಮೃತಿಗೆ ಆದರದ ನಮನಗಳು.
- ರಾಮಚಂದ್ರ ಹೊರಣೇಬೈಲು
